ಮಳೆಗಾಲ ಬಂದಾಗ ಎಲ್ಲೆಡೆಯಲ್ಲೂ ಕೊಡೆಗಳೇ ಕಾಣುತ್ತಿದ್ದವು. ಹಿಂದಿನ ಕಾಲದಲ್ಲಿ ಎಲ್ಲಾ ಮನೆಗಳಲ್ಲಿಯೂ ಕರಿಯ ಕೊಡೆಗಳೆ ಹೆಚ್ಚಾಗಿರುತ್ತಿದ್ದವು.ಕೊಡೆಯ ತಯಾರಿ ನಮಗೆ ಯಾವಾಗಲೂ ನಿಗೂಢವಾಗಿಯೆ ಉಳಿದಿತ್ತು.ಆಗ ಕೊಡೆ ಕೆಲವೆ ಮನೆಗಳಲ್ಲಿ ಇರುತ್ತಿತ್ತು. ಅದನ್ನು ಅಜ್ಜಂದಿರು ಊರುಗೋಲನ್ನಾಗಿ ಬಳಸುತ್ತಿದ್ದರು. ಕೊಡೆಯೊಂದಿಗಿನ ಹಳೆಯನೆನಪುಗಳ ಮಾಧುರ್ಯವನ್ನು ಮಾರುತಿ ಗೋಪಿಕುಂಟೆ ಅವರು ಲೇಖನದ ಮೂಲಕ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ….
ಪ್ರತಿ ಮಳೆಗಾಲಕ್ಕೂ ಕೊಡೆಯೊಂದನ್ನು ಅಪ್ಪ ರೆಡಿಮಾಡಿಡುತ್ತಿದ್ದ. ಮಳೆಗಾಲದಲ್ಲಿ ದಿನಸಿ ಅಂಗಡಿಗೆ ಹೋಗುವಾಗಲೊ ಅಣಬೆಗಾಗಿ ಹುಡುಕಾಟಕ್ಕೆ ಹೋಗುವಾಗ ಅದನ್ನು ಬಳಸುತ್ತಿದ್ದ. ನಮಗೆ ಅದನ್ನು ಹಿಡಿದು ಸುರಿದ ಮಳೆಯ ನೀರಲ್ಲಿ ನಡೆಯುವುದೆ ರೋಮಾಂಚನ.
ಮಳೆ ಬರುವಾಗ ನೆಪಕಷ್ಟೆ ಬಳಸುತ್ತಿದ್ದೆವು. ಕೊಡೆ ಹಿಡಿದು ಮಳೆಗೆ ರಕ್ಷಣೆ ಪಡೆಯುವುದಕ್ಕಿಂತ ಹೆಚ್ಚು ಮಳೆಯಲ್ಲಿ ನೆನೆಯುವುದು ಅದೊಂತರ ಜೀವ ಚೈತನ್ಯ. ಹದಿನೈದು ದಿನಗಳ ಕಾಲ ರಚ್ಚೆ ಹಿಡಿದು ಮಳೆ ಸುರಿಸಿದ್ದುಂಟು. ಮಳೆ ಅತಿಯಾದಾಗ ಶಾಲೆಗೆ ರಜೆ ಬಿಟ್ಟ ದಿನಗಳು ಇವೆ. ಹಾಗೆಲ್ಲ ಮನೆಯಲ್ಲಿ ಕುಳಿತು ಮಾಡುವುದಾದರೂ ಏನು ಅಟ್ಗುಣಿ ಆಟವನ್ನೊ ಚೌಕಬಾರ ಆಟವನ್ನೊ ಆಡುತ್ತಲೆ ಮಳೆ ನಿಂತ ತಕ್ಷಣ ಹರಿವ ನೀರಿನಲ್ಲಿ ನಡೆಯುವುದೆಂದರೆ ಖುಷಿ ಎಷ್ಟೊ ಬಾರಿ ನೆನದ ಕಾಲುಗಳಲ್ಲಿ ಚರ್ಮದ ಮಡಿಕೆ ಬರುವವರೆಗೂ ಕುಣಿದು ಕುಪ್ಪಳಿಸಿ ಮನೆಗೆ ಬರುತ್ತಿದ್ದೆವು. ವದ್ದೆ ತಲೆಗೂದಲು ನೋಡಿ ನೀವು ಕೊಡೆ ತೆಗೆದುಕೊಂಡು ಹೋಗಿದ್ದು ಸುಮ್ಮನೆ. ಹಿಂಗೆಲ್ಲ ನೆನೆದು ಬಂದಿದ್ದೀರಲ್ಲ ಎಂದು ಬೈಗುಳದ ಮಾತುಗಳು ಕಿವಿಯನ್ನು ತಾಕುತ್ತಿದ್ದವು. ಕೆಲವೊಮ್ಮೆ ನೀರು ತಂದು ಬಿಟ್ಟ ಮರಳಿನಲ್ಲಿ ಆಡುವುದೆಂದರೆ ಎಲ್ಲಿಲ್ಲದ ಖುಷಿ ಮಳೆ ನೀಡುತ್ತಿದ್ದ ಸಂತಸದ ಸಂಗತಿಗಳಿವು. ಮಳೆ ಹೇಗೆ ಬರುತ್ತದೆ ಎಂಬ ಯಾವ ವಿಜ್ಞಾನದ ವಿಷಯಗಳು ತಿಳಿಯದಿದ್ದ ನಾವು ದೇವರು ಅತ್ತಾಗ ಮಳೆಯ ರೂಪದಲ್ಲಿ ಇಳೆಗೆ ಸುರಿಯುತ್ತದೆ ಎಂದೆ ನಂಬಿದ್ದೆವು. ಇದು ಬಯಲು ಸೀಮೆಯ ಕತೆಯಾಯಿತು ಬಯಲು ಸೀಮೆಯಲ್ಲಿಯೂ ಮಳೆಯ ಕೊರತೆ ಎದುರಿಸಿದ ದಿನಗಳು ನಮ್ಮ ಬಾಲ್ಯದಲ್ಲಿ ನೆನಪಿಲ್ಲ. ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಅವಾಗೆಲ್ಲಾ ಕರಿಕೊಡೆಗಳು ತಲೆ ಎತ್ತುತ್ತಿದ್ದವು. ಅವುಗಳನ್ನು ಹೇಗೆ ಮಾಡುತ್ತಾರೆಂಬ ಕುತೂಹಲ ನಮ್ಮಲ್ಲಿ ಪದೆ ಪದೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದ್ದವು. ಅದಕ್ಕೆ ಉತ್ತರಿಸುವವರು ಯಾರು ಇರಲಿಲ್ಲ. ಕೊಡೆಯ ತಯಾರಿ ನಮಗೆ ಯಾವಾಗಲೂ ನಿಗೂಢವಾಗಿಯೆ ಉಳಿದಿತ್ತು.
ಫೋಟೋ ಕೃಪೆ : google
ಮಳೆಗಾಲಕ್ಕಷ್ಟೆ ಕೊಡೆಯ ರಿಪೇರಿ ಮಾಡುವವರು ಊರಿನಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಆಗಷ್ಟೆ ಎಲ್ಲಿಯೊ ಮೂಲೆಯಲ್ಲಿಟ್ಟ ಅಥವಾ ಹಟ್ಟದಲ್ಲಿಟ್ಟ ಕೊಡೆಗಳನ್ನು ರಿಪೇರಿಗೆಂದು ಎತ್ತಿಕೊಳ್ಳುವವರೆ ಹೆಚ್ಚು. ಸೈಕಲ್ಲಿನ ಪೋಸ್ಕಡ್ಡಿಯಂತಿದ್ದ ಕೊಡೆಯ ಕಡ್ಡಿಗಳನ್ನು ನೋಡಿ ಪರಿಶೀಲಿಸಿ ಈಗಾಗಲೇ ಮುರಿದು ಹೋಗಿದ್ದ ಕಡ್ಡಿಗಳನ್ನು ಬದಲಾಯಿಸಿ ಅದು ಸರಾಗವಾಗಿ ಮಡಿಚಲು ತೆರೆಯಲು ಬರುವಂತೆ ಮಾಡಿ ಕೊಟ್ಟು ಅದರ ಕೂಲಿ ಪಡೆದು ಹೋಗುತ್ತಿದ್ದರು. ಅವತ್ತಿನ ಕಾಲಕ್ಕೆ ಎಲ್ಲಾ ಮನೆಗಳಲ್ಲಿಯೂ ಕರಿಕೊಡೆಗಳೆ ಹೆಚ್ಚಾಗಿರುತ್ತಿದ್ದವು. ಅದು ಅಲ್ಲಲ್ಲಿ ಹರಿದರೂ ಅದಕ್ಕೆ ತೇಪೆಹಾಕಿ ಬಳಸುತ್ತಿದ್ದರು. ಅದು ಅಷ್ಟು ದುಬಾರಿಯದು ಎಂದು ಕೊಂಡಿದ್ದೆವು. ಅದನ್ನು ಹೊರಗಡೆಗೆ ತೆಗೆದು ಕೊಂಡು ಹೋಗುವಾಗಲೆಲ್ಲಾ ‘ಹುಷಾರು ಮಗ’ ಎನ್ನುತ್ತಿದ್ದರು. ಅದರಿಂದ ನಮಗೇನಾಗಬಹುದು ಎಂಬ ಉಢಾಪೆ ನಮ್ಮಲ್ಲಿತ್ತು. ಆದರೆ ಮಳೆಗಾಲದ ಒಂದು ದಿನ ಸುರಿದ ಬಾರಿ ಮಳೆಗೆ ಊರಿಗೆ ಹತ್ತಿರವಿದ್ದ ದೊಡ್ಡ ಬೇವಿನಮರವೊಂದು ಧರೆಗುರುಳಿದ್ದು ಅದನ್ನು ನೋಡಲು ಊರಿಗೆ ಊರೆ ಹೋಗಿತ್ತು. ಮಳೆ ಇನ್ನು ಜಿನುಗುತ್ತಿತ್ತು. ಮನೆಯಲ್ಲಿದ್ದ ಬಡಕಲು ಕೊಡೆಯನ್ನೆ ಎತ್ತಿಕೊಂಡು ಓಡಿದೆವು. ಓಡಿದ ರಭಸಕ್ಕೆ ಕೊಡೆ ತಿರುಗಿ ಬೀಸಿದ ಗಾಳಿಯ ಜೊತೆ ನಾನು ಅಷ್ಟುದೂರ ಹೋಗಿದ್ದೆ. ಕೊನೆಗೆ ಕೊಡೆಯನ್ನು ಕೈಯಿಂದ ಬಿಡಲಾಯಿತು. ಅದು ಅಷ್ಟು ದೂರ ಹೋಗಿ ಬಿದ್ದ ಮೇಲೆ ಬಹಳ ಪ್ರಯಾಸದಿಂದ ಅದನ್ನು ಮತ್ತೆ ಹಿಡಿದು ಗಾಳಿಗೆದುರಾಗಿ ಹಿಡಿದು ಅದನ್ನು ಯಥಾಸ್ಥಿತಿಗೆ ಬರುವಂತೆ ಮಾಡಿದಾಗ ನಾನು ನಿಟ್ಟುಸಿರು ಬಿಟ್ಟಿದ್ದೆನು.
ಕೊಡೆ ಕೆಲವೆ ಮನೆಗಳಲ್ಲಿ ಇರುತ್ತಿತ್ತು. ಅದನ್ನು ಅಜ್ಜಂದಿರು ಊರುಗೋಲನ್ನಾಗಿ ಬಳಸುತ್ತಿದ್ದರು. ನಾವು ಪದೆ ಪದೆ ನೋಡುತ್ತಿದ್ದದ್ದು. ನಮ್ಮೂರಿಗೆ ದೇವರ ಕಾರ್ಯಕ್ಕೆ ಬರುತ್ತಿದ್ದ ಎಳವರ ತಿಮ್ಮಣ್ಣನ ಕೈಯಲ್ಲಿ ಯಾವಾಗಲೂ ಕೊಡೆ ಇರುತ್ತಿತ್ತು. ಅದು ಅಲ್ಲಲ್ಲಿ ತೇಪೆ ಹಾಕಿರುತ್ತಿತ್ತು. ಅದನ್ನೆ ಆತ ಯಾವಾಗಲೂ ಬಳಸುತ್ತಿದ್ದ. ಊರೂರು ಅಲೆಯುತ್ತಿದ್ದ ಆತನಿಗೆ ಇದು ರಕ್ಷಣೆಯಂತಿತ್ತು ಅನ್ನೋದು ನಂತರ ತಿಳಿಯಿತು. ನಮ್ಮ ಮನೆಗೆ ಕೊಡೆ ಯಾವಾಗ ಬಂತೋ ಗೊತ್ತಿಲ್ಲ. ಅಪ್ಪ ಬೇರೆ ಬೇರೆ ವ್ಯಾಪಾರಕ್ಕೆ ಊರೂರು ತಿರುಗುವಾಗ ಕೊಂಡಿದ್ದಿರಬೇಕು. ಅದನ್ನು ನಾವು ಬಹಳ ವರ್ಷಗಳು ಬಳಸಿದೆವು. ಬಹುಶಃ ನಾವು ಮಳೆಯಿಲ್ಲದ ದಿನಗಳನ್ನು ನೋಡಿದ್ದು ಕಡಿಮೆ. ಮಲೆನಾಡುಗಳಲ್ಲಿ ನಿರಂತರ ಮಳೆ ಬರುತ್ತಿದ್ದಾರಿಂದ ಅಲ್ಲಿ ಗೋಣಿಕೊಪ್ಪೆಗಳನ್ನು, ಅಥವಾ ಕಂಬಳಿಗಳನ್ನು ಮಳೆಯ ರಕ್ಷಣೆಗೆ ಬಳಸುತ್ತಾರೆ ಎಂದು ಅಪ್ಪ ಹೇಳುತ್ತಿದ್ದ. ಊರಿಂದೂರಿಗೆ ಹೋಗಬೇಕಾದರೆ ಕೊಡೆ ಕೈಯಲ್ಲಿ ಸಾಮಾನ್ಯವಾಗಿರುತಿತ್ತು. ಅದೊಂದು ಗೌರವದ ಸಂಕೇತವು ಆಗಿತ್ತು ಎಂದು ಕೇಳಿದ್ದೆವು.
ಫೋಟೋ ಕೃಪೆ : google
ಇಂದಾದರೆ ತರಾವರಿ ಕೊಡೆಗಳು ಬಂದಿವೆ. ಬಣ್ಣ ಬಣ್ಣದ ಕೊಡೆಗಳು ಬಿಸಿಲಿಗು ಅದನ್ನೆ ಬಳಸುವುದು ವಾಡಿಕೆ. ಚಿಕ್ಕ ಕೊಡೆಗಳು ಎಲ್ಲವನ್ನು ಸುತ್ತಿ ಚಿಕ್ಕ ಬ್ಯಾಗಿನ ಪಾಕೆಟ್ಟಲ್ಲಿ ಮಡಿಸಿಡಬಹುದು. ಒಂದೊಂದು ಒಂದು ತೆರನಾಗಿವೆ. ಡಿಸೈನ್ ಕೊಡೆಗಳು ಹೆಚ್ಚಾಗಿವೆ. ಮಳೆಗಾಲದಲ್ಲಿ ಶಾಲಾಮಕ್ಕಳು ಕಡ್ಡಾಯವಾಗಿ ತಮ್ಮ ಬಳಿಯಲ್ಲಿಯೆ ಇಟ್ಟುಕೊಳ್ಳುತ್ತಾರೆ. ಮಳೆ ಬರದಿದ್ದರೇನು ಬಿರುಬಿಸಿಲಿಗೆ ಕೊಡೆ ಒಡ್ಡುವ ನಾಜೂಕಿನ ಜೀವನ ನಮ್ಮನ್ನಾವರಿಸಿದೆ. ನಮಗೆ ಇಂತದೆ ಕೊಡೆ ಬೇಕೆನ್ನುವ ಮಕ್ಕಳೆ ಅಧಿಕವಾಗಿದ್ದಾರೆ. ಹಿಂದೆ ಇದ್ದ ಉದ್ದನೆಯ ಕರಿಬಣ್ಣದ ಕೊಡೆಗಳನ್ನು ಕಾಣುವುದು ಅಪರೂಪ. ಅವು ಗೌರವದ ಸಂಕೇತವಾಗಿ ಉಳಿಯದೆ ಬಹಳ ದಿನಗಳೆ ಆಗಿವೆ. ಅವುಗಳ ಜಾಗವನ್ನು ಬಣ್ಣದ ಕೊಡೆಗಳು ಆಕ್ರಮಿಸಿವೆ. ಹಿಂದೆ ಹಿರಿಯರು ನಡೆಯುವಾಗ ಬಳಸುತ್ತಿದ್ದ ಕೊಡೆಗಳ ಬದಲಾಗಿ ಪ್ರತ್ಯೇಕವಾಗಿ ವಾಕಿಂಗ್ ಸ್ಟಿಕ್ ಬಳಸಲಾಗುತ್ತಿದೆ. ಬಣ್ಣದ ಕೊಡೆಗಳಿದ್ದರೂ ಮಳೆಯ ಹನಿಗೆ ಹಿಡಿಯುವ ಭಾಗ್ಯವಿಲ್ಲ. ಮಳೆ ಎಂಬ ಹೊಳೆ ಬಲು ಅಪರೂಪವಾಗಿದೆ. ಬಯಲು ಸೀಮೆಯ ಇಳೆ ಬಳೆಯ ಬರುವಿಕೆಗಾಗಿ ಕಾದು ಕುಳಿತಿದೆ. ಅಪ್ಪ ಎತ್ತಿಡುತ್ತಿದ್ದ ಕೊಡೆ ಧೂಳು ತುಂಬಿ ಅನಾಥವಾಗಿದೆ. ಮಳೆ ಬಂದರೂ ಉಪಯೋಗಕ್ಕೆ ಬಾರದ ಸ್ಥಿತಿ ಅದರದು. ಮಳೆಗಾಗಿ ಕಾದು ಕುಳಿತ ಸ್ಥಿತಿ ನಮ್ಮದು. ಅಂತೂ ಅಪ್ಪನ ಕೊಡೆ ಈಗ ಅನಾಥವಾಗಿದೆ.
- ಮಾರುತಿ ಗೋಪಿಕುಂಟೆ