ಎಲ್ಲಾ ಬಂಧಗಳು ಸ್ವಾರ್ಥದಿಂದ ಕೂಡಿವೆ. ನಿಜವಾದ ಸಂಬಂಧವು ಆ ಪರಮಾತ್ಮನೊಂದಿಗೆ ಮಾತ್ರ ಎಂದನು ಆ ಯುವಕ. ಸಂಬಂಧಗಳ ಮಹತ್ವವನ್ನು ಸಂತ ತಿಳಿಸಿದ್ದು ಹೀಗೆ. ಸಂಪಿಗೆ ವಾಸು ಅವರ ಪುಟ್ಟಕತೆಯನ್ನು ತಪ್ಪದೆ ಓದಿ…
ಈ ಪ್ರಪಂಚದಲ್ಲಿ ಎಲ್ಲರೂ ಒಬ್ಬರೇ ಬರುತ್ತಾರೆ ಮತ್ತು ಒಂಟಿಯಾಗಿ ಹೋಗುತ್ತಾರೆ. ಆದಾಗ್ಯೂ, ಪೋಷಕರು ಮತ್ತು ಮಕ್ಕಳು, ಗಂಡ ಮತ್ತು ಹೆಂಡತಿ, ಸಂಬಂಧಿಕರು ಮತ್ತು ಸ್ನೇಹಿತರು ಎಲ್ಲರೂ ಪರಸ್ಪರ ಸಂವಹನ ನಡೆಸುತ್ತಾರೆ. ಎಲ್ಲಾ ಸಂಬಂಧಗಳು ಸುಳ್ಳು. ಸುಳ್ಳು… ನಂಬಲಾಗುತ್ತಿಲ್ಲವೇ??? ಹಾಗಾದರೆ ಈ ಪುಟ್ಟ ಕಥೆಯನ್ನು ಓದಿ.
ಒಬ್ಬ ಶ್ರೀಮಂತನಿಗೆ ಸಂಸ್ಕಾರವಂತನಾದ ಒಬ್ಬ ಮಗನಿದ್ದನು, ಅವನು ಯಾವಾಗಲೂ ಬೋಧನೆಗಳನ್ನು ಕೇಳಲು ಒಬ್ಬ ಸಂತನ ಬಳಿಗೆ ಹೋಗುತ್ತಿದ್ದನು. ಆದರೆ ಅವನು ಪ್ರವಚನಗಳನ್ನು ಪೂರ್ತಿಯಾಗಿ ಕೇಳದೆ ಕೊನೆಯಲ್ಲಿ ಎದ್ದು ಹೋಗಿಬಿಡುತ್ತಿದ್ದನು. ಒಂದು ದಿನ ಸಂತ, “ಮಗೂ..! ಯಾಕೆ ಹೀಗೆ ಮಾಡುತ್ತಿದ್ದೀಯಾ..?” ಎಂದು ಕೇಳಿದ. ಅದಕ್ಕೆ ಆ ಯುವಕ.
“ಸ್ವಾಮೀ..! ನನ್ನ ತಂದೆ ತಾಯಿಗೆ ನಾನೊಬ್ಬನೇ ಮಗ, ಮನೆಗೆ ಹಿಂತಿರುಗಲು ತಡವಾದರೆ ಅವರು ಗಾಬರಿಯಾಗುತ್ತಾರೆ, ಅವರು ನನ್ನನ್ನು ಹುಡುಕಲು ಹೊರಡುತ್ತಾರೆ, ನಾನು ಹೋಗುವವರೆಗೂ ನನ್ನ ಹೆಂಡತಿಯು ಚಡಪಡಿಸುತ್ತಿರುತ್ತಾಳೆ.
ಸಂಸಾರಿಕ ವ್ಯವಹಾರಗಳು ಸುಳ್ಳೆಂದು ನೀವು ಹೇಳುತ್ತೀರಿ, ಆದರೆ ನಿಮಗೆ ಆ ವಿಷಯದಲ್ಲಿ ಅನುಭವವಿಲ್ಲ, ನೀವು ಹೇಳುತ್ತಿರುವುದು ತಪ್ಪು ಎನಿಸುತ್ತಿದೆ ಸ್ವಾಮಿ..!” ಎಂದು ಉತ್ತರಿಸಿದರು.
“ಹಾಗಾದರೆ ನಿಮ್ಮ ಜನರು ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ಎನ್ನುವಿಯಾ.!”? ಸಂತ ಕೇಳಿದ.
“ಹೌದು ಸ್ವಾಮಿ..! ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಂತಿದೆ.” ಎಂದನು ಯುವಕ.
“ಇದು ನನಗೆ ನಂಬಿಕೆ ಇದೆಯಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆಯಲ್ಲ! ನಿನ್ನ ಮೇಲೆ ಅವರಿಗಿರುವ ಪ್ರೀತಿಯ ನಿನ್ನ ನಂಬಿಕೆಯ ಒಂದು ಚಿಕ್ಕ ಪರೀಕ್ಷೆಯನ್ನು ಮಾಡೋಣವೇ..!” ಸಾಧು ಸಲಹೆ ನೀಡಿದ.
“ಹೇಗೆ ಸ್ವಾಮಿ..?” ಕೇಳಿದ ಆ ಯುವಕ.
“ಇದೋ..!ಈ ಸೊಪ್ಪನ್ನು ತಿನ್ನು, ದೇಹ ಕ್ರಮೇಣ ಬೆಚ್ಚಗಾಗುತ್ತದೆ., ನಿನಗೇನು ಆಗುವುದಿಲ್ಲ ಆದರೆ ನಾನು ಹೇಳುವವರೆಗೆ ಸುಮ್ಮನೆ ಮಲಗಿರಬೇಕು.
ನಂತರ ಅಲ್ಲಿ ಏನು ನಡೆಯುತ್ತದೆ ಎಂದು ನೀನೇ ನೋಡುವೆಯಂತೆ” ಎಂದು ಸಂತ ಹೇಳಿದನು. ಆ ಯುವಕನು ಋಷಿಗಳ ಅಪ್ಪಣೆಯನ್ನು ಅನುಸರಿಸಿ ಗಿಡಮೂಲಿಕೆಯನ್ನು ತಿಂದು ಮನೆಗೆ ಹೋದನು. ಅವನ ದೇಹವು ಇದ್ದಕ್ಕಿದ್ದಂತೆ ಬಿಸಿಯಾಯಿತು, ಮತ್ತು ಅವನ ಪೋಷಕರು ವೈದ್ಯರನ್ನು ಕರೆಸಿದರು.ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಫಲವಾಗಲಿಲ್ಲ. ಅವನ ಪತ್ನಿ ಬಿಕ್ಕಿ ಬಿಕ್ಕಿಅಳಲು ಶುರು ಮಾಡಿದಳು.
ಅಷ್ಟರಲ್ಲಿ ಆ ಸಂತ ಅಲ್ಲಿಗೆ ಬಂದನು. ಆ ಯುವಕನಿಗೆ ಚಿಕಿತ್ಸೆ ಕೊಡಿಸುವಂತೆ ಎಲ್ಲರೂ ಸಂತನ ಮೊರೆಹೋದರು. ಆ ಸಾಧು ಪರೀಕ್ಷಿಸಿದಂತೆ ನಟಿಸಿ.. “ಯಾರೋ ಮಾಟ ಮಾಡಿಸಿದ್ದಾರೆ. ನಾನು ಅದನ್ನು ಉಪಸಂಹರಿಸಬಲ್ಲೆ” ಎಂದು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಬರಲು ಹೇಳಿದರು. ಯುವಕನ ತಲೆಯ ಸುತ್ತ ನೀರಿನ ಆ ಪಾತ್ರೆ ಸುತ್ತುತ್ತಾ, “ನಾನು ನನ್ನ
ತಪಃಶಕ್ತಿಯಿಂದ ಆ ದುಷ್ಟ ಗ್ರಹವನ್ನು ಈ ನೀರಿಗೆ ಆವಾಹಿಸಿದ್ದೇನೆ, ಈ ಯುವಕನನ್ನು ಉಳಿಸಲು, ನಿಮ್ಮಲ್ಲಿ ಯಾರಾದರೂ ಒಬ್ಬರು ಈ ನೀರನ್ನು ಕುಡಿಯಬೇಕು ಮತ್ತು ಈ ನೀರು ಕುಡಿದವರು ಸಾಯುತ್ತಾರೆ. ಆದರೆ ಈ ಯುವಕ ಬದುಕುತ್ತಾನೆ” ಎಂದು ಸಂತ ಹೇಳಿದಾಗ, ಯುವಕನ ತಾಯಿ, “ಸ್ವಾಮೀ..! ನಾನು ನನ್ನ ಪ್ರೀತಿಯ ಮಗನಿಗಾಗಿ ಈ ನೀರನ್ನು ಕುಡಿಯಬಲ್ಲೆ, ಆದರೆ ನಾನು ಸತ್ತರೆ ವಯಸ್ಸಾಗಿರುವ ನನ್ನ ಗಂಡನ ಸೇವೆ ಮಾಡುವವರು ಯಾರು..?” ಎಂದಳು.
ಆಗ ಯುವಕನ ತಂದೆ, “ನಾನು ಈ ನೀರನ್ನು ಕುಡಿಯುತ್ತೇನೆ, ಆದರೆ ನನ್ನ ಮರಣದ ನಂತರ ನನ್ನ ಹೆಂಡತಿಯ ಸ್ಥಿತಿ ಏನಾಗಬಹುದು ಎಂದು ನನಗೆ ಅನುಮಾನವಿದೆ, ನಾನಿಲ್ಲದಿದ್ದರೆ ಅವಳ ಬದುಕು ದುಸ್ತರವಾಗುತ್ತದೆ ಎನ್ನುತ್ತಾ ಅವನೂ ನೀರು ಕುಡಿಯಲು ನಿರಾಕರಿಸಿದನು.
ಹಾಗಾದರೆ ನೀವಿಬ್ಬರೂ ತಲಾ ಅರ್ಧದಷ್ಟು ನೀರನ್ನು ಕುಡಿಯಿರಿ , ಇಬ್ಬರ ಅಂತ್ಯಕ್ರಿಯೆಗಳನ್ನು ಒಂದೇ ಸಮಯದಲ್ಲಿ ಮಾಡಿಬಿಡಬಹುದು ಎಂದು ನಸುನಗುತ್ತಾ ಸಂತ ಹೇಳುವನು.
ಆ ಯುವಕನ ಹೆಂಡತಿಯನ್ನು ನೀರು ಕುಡಿಯುವಂತೆ ಕೇಳಲು “ನನ್ನ ವಯಸ್ಸಾದ ಅತ್ತೆ,ಮಾವ ಎಲ್ಲಾ ಲೌಕಿಕ ಸುಖಗಳನ್ನು ಅನುಭವಿಸಿದ್ದಾರೆ. ನಾನಾದರೋ ಇನ್ನೂ ಚಿಕ್ಕವಳು, ನನಗೆ ಇನ್ನೂ ಯೌವ್ವನವಿದೆ, ಜೀವನವನ್ನು ಪೂರ್ತಿಯಾಗಿ ಅನುಭವಿಸಿಲ್ಲ ಆದ್ದರಿಂದ ನಾನು ಕುಡಿಯಲಾರೆ,, ನಾನೇಕೆ ಸಾಯಬೇಕು?” ಎಂದಳು.
ಹೀಗೆ ಆ ಯುವಕನ ಇಡೀ ಕುಟುಂಬ ಆ ನೀರು ಕುಡಿಯಲು ನಿರಾಕರಿಸಿತು. ಅಲ್ಲದೆ, ಮಹಾತ್ಮಾ..!
ನಮ್ಮನ್ನು ಕರುಣಿಸಿ ಈ ನೀರನ್ನು ನೀವೇ ಕುಡಿದು ಪುಣ್ಯ ಕಟ್ಟಿಕೊಳ್ಳಿ, ನೀವು ಸತ್ತರೆ ನಿಮ್ಮ ಹಿಂದೆ ಅಳುವವರು ಯಾರೂ ಇಲ್ಲ..! ಪರೋಪಕಾರವೇ ಪರಮ ಪುಣ್ಯ ಎಂದು ನೀವೇ ಹಲವು ಬಾರಿ ಹೇಳುತ್ತೀರಿ, ಆದ್ದರಿಂದ ನೀವೇ ಈ ಉಪಕಾರ ಮಾಡಿರಿ” ಎಂದು ಹೇಳಿದರು.
ಆಗ ಸಂತನ ಸೂಚನೆಯಂತೆ ಮೇಲೆದ್ದ ಯುವಕ
“ಮಹಾತ್ಮಾ..! ನನ್ನ ಮೇಲೆ ನನ್ನವರ, ಪ್ರೀತಿ ಪ್ರೇಮದ ಬಗ್ಗೆ ತಿಳಿಯಿತು.ಎಲ್ಲಾ ಬಂಧಗಳು ಸ್ವಾರ್ಥದಿಂದ ಕೂಡಿರುವವೇ, ಮತ್ತು ನಿಜವಾದ ಸಂಬಂಧವು ಆ ಪರಮಾತ್ಮನೊಂದಿಗೆ ಮಾತ್ರ ಎಂದು ನಾನು ಅರಿತು ಕೊಂಡೆ” ಎಂದು ಮನೆಯನ್ನು ತೊರೆದು ಆ ಮಹಾತ್ಮನೊಂದಿಗೆ ಮನೆ ಬಿಟ್ಟು ಹೊರಟು ಹೋದನು.
ಇಂದು ನಾವು ನಮ್ಮವರು ಎಂಬ ಭ್ರಮೆಯಿಂದ ಬೆಳೆಸುವ ಬಂಧುಗಳು, ಬಂಧಗಳು, ಸಂಬಂಧಗಳು…ಇವೆಲ್ಲವೂ ನಶ್ವರವೆನಿಸುವುದಿಲ್ಲವೇ???????
- ಸಂಪಿಗೆ ವಾಸು – ಬಳ್ಳಾರಿ