ಅಂದಿನ ದೀಪಾವಳಿಯಂದು ಹೆಚ್ಚು ಪಟಾಕಿ ಸುಡುವವ ಊರಿಗೆ ದೊಡ್ಡ ಜನ ಎಂದು ಲೆಕ್ಕವಿತ್ತು. ಮನೆ ಅಂಗಳದಲ್ಲಿ ಪಟಾಕಿ ಸುಟ್ಟ ಕಸ ನೋಡಿ ಇವರ ಮನೆಯಲ್ಲಿ ದೀಪಾವಳಿ ಗ್ರ್ಯಾಂಡ್ ಆಗಿ ಆಚರಿಸಿದ ಲಕ್ಷಣ ಊಹೆ ಮಾಡುತ್ತಿದ್ದೆವು. ದೀಪಾವಳಿ ನೆನಪುಗಳನ್ನು ಹೊತ್ತು ತಂದ ಲೇಖನ, ತಪ್ಪದೆ ಮುಂದೆ ಓದಿ…
ನಾವು ಸಣ್ಣವರಿದ್ದಾಗ ದೀಪಾವಳಿಗೆ ತಿಂಗಳಿರುವಾಗಲೇ ಅಲ್ಲಲ್ಲಿ ಟಪ್ ಟಿಪ್ ಎಂಬಂತೆ ಶುರುವಾಗುವ ಪಟಾಕಿ ಸದ್ದು ದೀಪಾವಳಿಯಂದು ತಾರಕಕ್ಕೇರಿ, ದೀಪಾವಳಿ ಮುಗಿದು ಒಂದು ವಾರವಾದರೂ ನಿಲ್ಲುತ್ತಿರಲಿಲ್ಲ. ದೊಡ್ಡ ಹಸಿರು ಬಾಂಬ್, ಲಕ್ಷ್ಮೀ ಪಟಾಕಿ, ಮಾಲೆ ಪಟಾಕಿ ಇವನ್ನೆಲ್ಲಾ ದೀಪಾವಳಿಗಿಟ್ಟು ನೀಲಿ ಬಿಳಿ ಪಟ್ಟೆಗಳಿರುವ ಕೋಲು ಪಟಾಕಿ , ಕೆಂಪನೆಯ ಮೆಣ್ಸು ಪಟಾಕಿ (ಮುಂಚಿ ಪಟಕಿ) ಎಲ್ಲಾ ಮಿಕ್ಕ ದಿನಗಳಲ್ಲಿ ಸುಡೋದು…
ಫೋಟೋ ಕೃಪೆ : google
ನಮಗೋ ಆಗ ಕಿತ್ತು ತಿನ್ನುವ ಬಡತನ, ಮೂಲಭೂತ ಅವಶ್ಯಕತೆಗಳನ್ನೇ ಪೂರೈಸಲು ಹೆಣಗಾಡುತ್ತಿರುವವರು ನೂರಾರು ರೂಪಾಯಿಯ ಪಟಾಕಿಯೆಲ್ಲಿಂದ ಭರಿಸೋದು.. ಹತ್ತು ರೂಪಾಯಿಯ ಒಂದು ಪಿಸ್ತೂಲು ಮತ್ತೊಂದು ಕಟ್ಟು ಕೇಪ್, ಮತ್ತೊಂದು ಒಂದೋ ಎರಡೋ ರೂಪಾಯಿಯ ಸುಟ್ಟರೆ ಹಾವಾಗುವ ಕಪ್ಪನೆಯ ಮಾತ್ರೆ ತಂದರೆ ಅದೇ ಹೆಚ್ಚು.. ಆವಾಗ್ಲೋ ಇವಾಗ್ಲೋ ದುಡ್ಡಿದ್ದರೆ ನೆಲಚಕ್ರ , ಹೂ ಕುಂಡ, ಸುರು ಸುರು ಬತ್ತಿ ಇವುಗಳಲ್ಲಿ ಯಾವುದಾದರೊಂದು ನಮ್ಮ ಪಟ್ಟಿ ಸೇರಿಕೊಳ್ಳುತ್ತಿತ್ತು.. ಅದರಲ್ಲೂ ರಾಕೆಟ್ ಕೊಂಡಿದ್ದು ಹೈಸ್ಕೂಲಲ್ಲೇ.. ಅಲ್ಲಿಯವರೆಗೆ ಯಾರೋ ಹಾರಿಸಿದ್ದನ್ನು ಹೆಕ್ಕಿ ತಂದಿದ್ದು ಮಾತ್ರ.. ! ಆವಾಗ ಶಿವಕಾಸಿಯಲ್ಲಿ ತಯಾರಾದ “ಸೋನಿ ಬಿಜಿಲಿ ಪಟಾಕಿ” ಎಂಬ ಹೆಸರಿನ ಪಟಾಕಿಯೊಂದು ಬರುತ್ತಿತ್ತು. ಬೆಲೆ ಪ್ಯಾಕೇಟಿಗೆ ಎಂಟರಿಂದ ಹತ್ತು ರೂ… ಅದರ ಸದ್ದು ಮತ್ತು ಕ್ವಾಂಟಿಟಿಯಿಂದಾಗಿ ಫೇಮಸ್, ಸುಮಾರು ನೂರರವರೆಗೆ ಪಟಾಕಿಗಳಿರುತ್ತಿದ್ದು, ಜೋರು ಸದ್ದಿನೊಂದಿಗೆ ಸಿಡಿಯುತ್ತಿದ್ದವು.. ಕೆಂಪನೆಯ ಪ್ಯಾಕಿನಲ್ಲಿ ಸ್ಪೈಡರ್‌ಮ್ಯಾನ್ ಚಿತ್ರದ ಜತೆ ಬರುತ್ತಿದ್ದ ಅದೇ ಫೇಮಸ್ಸು ಆವಾಗ.. ಚಿಲ್ಲರೆ ಪಟಾಕಿಯಾದರೆ ಒಂದು ರೂಪಾಯಿಗೆ ನಾಲ್ಕು ಪಟಾಕಿ ದೊರೆಯುತ್ತಿತ್ತು.. ಈಗಿನ ಮಕ್ಕಳಿಗೆ ಹತ್ತು ರೂಪಾಯಿ ಕಾಲ ಕಸಕ್ಕೆ ಸಮ.. ನಾನು ಹೊಟ್ಟೆಬಟ್ಟೆ ಕಟ್ಟಿ ಎರಡು ರೂಪಾಯಿ ಮೂರು ರೂಪಾಯಿಯ ಚಿಲ್ಲರೆ ಬಿಜಿಲಿ ಪಟಾಕಿ ಕೊಂಡಿದ್ದೇ ಹೆಚ್ಚು…
ಆಗ ದೀಪಾವಳಿಯಂದು ಹೆಚ್ಚು ಪಟಾಕಿ ಸುಡುವವ ಊರಿಗೆ ದೊಡ್ಡ ಜನ ಎಂದು ಲೆಕ್ಕ, ಪಟಾಕಿಯ ಶಬ್ದ ಕೇಳದಿದ್ದರೂ ಕೊನೇ ಪಕ್ಷ ಮಾರನೇಯ ದಿನ ಮನೆ ಬಾಗಿಲಿಗೆ ಬಂದವರಿಗೆ ಅಂಗಳದಲ್ಲಿ ಪಟಾಕಿ ಸುಟ್ಟ ಕಸವಾದರೂ ಕಾಣಬೇಕು.. ಆಗಲೇ ಮನೆಯಲ್ಲಿ ದೀಪಾವಳಿಯನ್ನು ಗ್ರ್ಯಾಂಡ್ ಆಗಿ ಆಚರಿಸಿದ ಲಕ್ಷಣ ಗೋಚರಿಸುವುದು.
ಫೋಟೋ ಕೃಪೆ : google
ನಮ್ಮ ನೆರೆಮನೆಯಲ್ಲೊಬ್ಬರು ದೀಪಾವಳಿಗೆ ತುಂಬಾ ಪಟಾಕಿ ಕೊಂಡು ತರುತ್ತಿದ್ದರು.. ಆವಾಗ ಹಸಿರು ಬಣ್ಣದ ಬಾಂಬುಗಳು ಸಿಡಿಯಿತ್ತಿದ್ದುದು ಅವರ ಮನೆಯಿಂದ ಮಾತ್ರ.. ದೀಪಾವಳಿ ಕಳೆದ ನಂತರದ ದಿನಗಳಲ್ಲಿ ಅವರ ಮನೆಯನ್ನು ಹಾದು ಹೋಗುವಾಗ ಅವರ ಮನೆಯಂಗಳಲ್ಲಿ ಪಟಾಕಿಯ ಅವಶೇಷಗಳನ್ನು ಕಂಡು “ಅಯ್ಯೋ ಇವರೆಷ್ಟು ಅದೃಷ್ಟವಂತರು, ಇವರ ಅರ್ಧದಷ್ಟು ಅದೃಷ್ಟವಾದರೂ ನಮಗಿರಬಾರದೇ ” ಎಂದು ಹಲುಬುತ್ತಿದ್ದೆ. ಆ ಒಂದು ದೀಪಾವಳಿಯಲ್ಲಿ ನಾನು ನಾಲ್ಕನೆಯೋ ಐದನೆಯ ತರಗತಿಯಲ್ಲಿಯೋ ಇದ್ದೆ ಅನಿಸುತ್ತೆ.. ನೆರಮನೆಯಲ್ಲಿ ಸಂಬಂಧಿಕರೆಯಲ್ಲಾ ಸೇರಿದ್ದರು.. ಆ ದೀಪಾವಳಿಯಲ್ಲವರು ಮನೆಯ ಅಂಗಳದಲ್ಲಿ ಪಟಾಕಿ ಸುಡುವ ಬದಲು ಪಕ್ಕದ ಬಂಡೆಯಲ್ಲಿ ಸುಟ್ಟರು, ಆ್ಯಟಮ್ ಬಾಂಬುಗಳು, ಹೂಕುಂಡ , ಬೀಡಿ ಪಟಾಕಿ, ಮಾಲೆ ಪಟಾಕಿಯ ಸದ್ದು ಕಿವಿ ಡ್ರಿಲ್ ಮಾಡುವಂತೆ ತಡ ರಾತ್ರಿಯವರೆಗೂ ಕೇಳಿಸುತ್ತಿತ್ತು..
ಮಾರನೇಯ ದಿನ ನಾನು ಹತ್ತಿರವಿದ್ದ ಆ ಬಂಡೆಗೆ ಹೋಗಿ ನೋಡಿದಾಗ ಪಟಾಕಿ ಸುಟ್ಟ ಅವಶೇಷಗಳು ಚಪ್ಪಟೆಯಾದ ಬಂಡೆಗಲ್ಲಿನ ಮೇಲೆ ವಿಸ್ತಾರವಾಗಿ ಹರಡಿಕೊಂಡಿದ್ದವು.. ಸುಡದೆ ಉಳಿದ ಪಟಾಕಿಯೇನಾದರೂ ಇದೆಯಾ ಎಂದು ಹುಡುಕಿದೆ.. ಹತ್ತಿಪ್ಪತ್ತು ಸುಡದೇ ಉಳಿದ ಬತ್ತಿಯಿರುವ ಪಟಾಕಿಗಳು ಸಿಕ್ಕಿದವು ಅವೂ ಇಬ್ಬನಿಗೆ ಒದ್ದೆಯಾಗಿದ್ದವು. ಅವನ್ನೆಲ್ಲಾ ಒಂದು ಕಲ್ಲಿನ ಮೇಲೆ ಒಣಗಲು ಹರಡಿದೆ.. ಬತ್ತಿ ಸುಟ್ಟು ಸಿಡಿಯದೆ ಉಳಿದ ಪಟಾಕಿಯ ಮಸಿಯನ್ನಾದರೂ “ಬೂಂ” ಮಾಡಬಹುದು ಎಂದು ಸಂಗ್ರಹಿಸಿದೆ. ಇನ್ನುಳಿದ ಪಟಾಕಿಯ ಸಿಪ್ಪೆಯನ್ನೆಲ್ಲಾ ಒಂದು ಮರದ ರೆಂಬೆಯಿಂದ ಒಟ್ಟು ಮಾಡಿ, ಅದು ಇರಬೇಕಾದ ಜಾಗ ಇದಲ್ಲವೆಂದು ಆಯ್ದು ತಂದು ನಮ್ಮ ಮನೆಯ ಅಂಗಳವಿಡೀ ಸುರಿದೆ..!
ಇವತ್ತು ಕಾಲ ಬದಲಾಗಿದೆ, ತುಂಬಾ ಬದಲಾಗಿದೆ.. ಪಟಾಕಿ ಸದ್ದು ಕೇವಲ ಮೊಬೈಲಿಗೆ ಸೀಮಿತವಾಗಿದೆ..
ನಾನು ನೋಡಿದಂತೆ ಇವತ್ತು ಯಾರಿಗೂ ಅಂತಹ ಕಷ್ಟವಿಲ್ಲ, ಪಟಾಕಿ ರೇಟು ಕೂಡಾ ಚಿನ್ನದಂತಿದೆ….ಅಲ್ಲೋ ಇಲ್ಲೋ ಒಂದಿಬ್ಬರು ಬಿಟ್ಟರೆ ಮಿಕ್ಕ ಮಕ್ಳೆಲ್ಲಾ ಮೊಬೈಲಲ್ಲಿ ಬ್ಯುಸಿಯಿದಾರೆ… ದೀಪಾವಳಿಗೆ ಹಿಂದಿನ ಕಳೆಯಿಲ್ಲ.
- ರಾಜೇಶ್ ಕುಮಾರ್ ಕಲ್ಯಾ