ರಂಗಸಂಘಟಕ, ನಿರ್ದೇಶಕರಾದ ಕಿರಣ್ ಭಟ್ ಹೊನ್ನಾವರ ಅವರ ಬಾಲ್ಯದ ದೀಪಾವಳಿ ಸಂಭ್ರಮವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಮ್ಮ ಚಿಕ್ಕಂದಿನಲ್ಲಿ ನಮ್ಮ ಕೈಗೆ ಮೊದಲು ಸಿಕ್ಕ ಪಟಾಕಿಗಳೆಂದರೆ ಕೇಪ್ ಗಳು. ಅಷ್ಟೇನೂ ಅಪಾಯಕಾರಿಯಲ್ಲದ, ಸೋವಿಯಾದ, ಸಣ್ಣಗೆ ಚಿಟಿಗುಡುವ ಕೇಪ್ ಗಳು ಪುಟಾಣಿ ಮಕ್ಕಳ ಕೈಗೂ ಸಿಗುತ್ತಿದ್ದವು. ನಮ್ಮ ಬಾಲ್ಯದಲ್ಲಿ ಮೊದಲು ಹೊಡೆಯಲು ಸಿಕ್ಕ ಕೇಪ್ ಗಳು ಚಿತ್ರದಲ್ಲಿ ತೋರಿಸಿರುವ ಕೇಪ್ ಗಳಿಗಿಂತ ಮುಂಚಿನವು. ಸಣ್ಣ ಸಣ್ಣ ಹಣೆಯ ಬಿಂದಿ ಯಂಥವುಗಳು. ಅವುಗಳ ಮಧ್ಯದಲ್ಲಿ ಸಿಡುಯುವ ಮದ್ದು. ಇಂಥ ಇಪ್ಪತ್ತು ಮೂವತ್ತು ಕೇಪ್ ಗಳು ಸಣ್ಣ ರಟ್ಟಿನ ಡಬ್ಬಿಯಲ್ಲಿರುತ್ತಿದ್ದವು.
ಅಲ್ಲಿಂದ ಮೊದಲುಗೊಂಡ ಕೇಪ್ ಹೊಡೆಯುವ ‘ ತಾಂತ್ರಿಕತೆ’ ಹಲವಾರು ಸ್ಥಿತ್ಯಂತರಗಳನ್ನ ಕಂಡಿದೆ. ಇದು ಶುರುವಾಗೋದು ನೆಲದ ಮೇಲೆ ಕೇಪ ನ್ನಿಟ್ಟು ಉರುಟು ಕಲ್ಲಿನಿಂದ ಅದನ್ನು ಕುಟ್ಟಿ ಚಟ್ಟೆನ್ನಿಸುವದರೊಂದಿಗೆ. ನಂತರ ಬಂದಿದ್ದೇ ನಟ್, ಬೋಲ್ಟ್ ತಾಂತ್ರಿಕತೆ. ಬೋಲ್ಟಿನ ನಡುವಿಗೆ ಸಿಕ್ಕಿಸಿದ ಎರಡು ದೊಡ್ಡ ಸೈಜಿನ ವಾಶರ್ ಗಳು. ಎರಡು ವಾಶರ್ ಗಳ ನಡುವೆ ಡಾಟ್ ಕೇಪ್. ಅವುಗಳನ್ನ ಟೈಟ್ ಮಾಡುವ ಒಂದು ನಟ್. ಈ ಸೆಟಿಂಗ್ ಮುಗಿಸಿ, ಸೆಟಪ್ ನ್ನು ಮೇಲಿಂದ ಎಸೆದರೆ ನೆಲಕ್ಕೆ ಬಿದ್ದೊಡನೆ ‘ ಚಟ್’ ದೀಪಾವಳಿ ಬಂತೆಂದರೆ ಊರ ತುಂಬ ಈ ಬೋಲ್ಟ್ ನಟ್ ಗಳ ಹಾರಾಟ. ಚಿಟ್, ಚಿಟ್ ಸದ್ದು.
ನಂತರ ಬಂದವು ಸ್ವಲ್ಪ ಸುಧಾರಿತ ಕೇಪ್ ಹೊಡೆವ ಯಂತ್ರಗಳು. ಓತೀಕಾತ ಆಕೃತಿಯ ಇವು ಲಿವರ್ ಆಪರೇಟೆಡ್. ಅವುಗಳ ಕಟ್ಟೆಯ ಮೇಲೆ ಕೇಪನ್ನಿಟ್ಟು ಲಿವರ್ ಎಳೆದು ಹೆಬ್ಬೆರಳಿಂದ ಒತ್ತಿದರೆ ಸ್ಪ್ರಿಂಗ್ ನಿಂದ ಬಿಡುಗಡೆಯಾದ ಮೇಲ್ಭಾಗ ಟಪ್ ಅಂತ ಕೇಪಿಗೆ ಬಡಿದು ಕೇಪು ‘ ಚಟ್’ ಅನ್ನೋದು.
ಮುಂದೆ ಕೇಪುಗಳ ಆಕಾರದಲ್ಲೂ ಬದಲಾವಣೆ ಬಂತು. ಡಾಟ್ ಕೇಪ್ ಗಳಿಂದ ಚಿತ್ರದಲ್ಲಿ ತೋರಿಸಿರುವ ರೋಲ್ ಗಳು ಬಂದವು. ಜೊತೆಗೇ ಅವುಗಳನ್ನು ಹೊಡೆಯುವ ಪಿಸ್ತೂಲುಗಳೂ ಕೂಡ. ಅವುಗಳಲ್ಲಿ ಈ ರೋಲ್ ಗಳನ್ನು ಸುತ್ತಬಲ್ಲ ಕಡ್ಡಿಯಿತ್ತು. ಕಡ್ಡಿಗೆ ರೋಲ್ ಸುತ್ತಿ ಸಿಡಿಯುವ ಜಾಗದ ಮಧ್ಯೆ ರೀಲನ್ನಿಟ್ಟು, ಟ್ರಿಗರ್ ಒತ್ತುತ್ತಿದ್ದ ಹಾಗೆ ಕೇಪಿನ ರೋಲ್ ಮುಂದೆ ಮುಂದೆ ರೋಲ್ ಆಗುತ್ತ ನಿರಂತರ ಕೇಪ್ ಗಳ ಸಿಡಿತ ಶುರು.
ಸಂಜೆ ಅಪಾರ್ಟಮೆಂಟ್ ಗೇಟಿನ ಹತ್ತಿರ ಪುಟಾಣಿಗಳು ಗನ್ ಹಿಡ್ಕೊಂಡು ಓಡಾಡ್ತಾ ಚಟ ಚಟ ಅನ್ನಿಸ್ತಿದ್ದುದನ್ನ ನೋಡಿ ಇವೆಲ್ಲ ನೆನಪಾಯ್ತು.
- ಕಿರಣ್ ಭಟ್ ಹೊನ್ನಾವರ