ಅಂತಃಕರಣ ಕಲಕಿದ ಅಪ್ಪು ನಿರ್ಗಮನಮಹಾನ್ ತಂದೆಯ ಮಗನಾಗಿ ಪುನೀತ್ ರಾಜ್ ಕುಮಾರ್ ತಂದೆಯ ಸಜ್ಜನಿಕೆ- ಸಂಸ್ಕಾರಗಳಿಗೆ ಸದಾ ಸುಗಂಧವನ್ನು ಲೇಪಿಸುತ್ತಾ ಸಾಗುತಿದ್ದರು.ನಟನೆಯೊಂದಿಗೆ ಇವರ ಸರಳತೆ, ಸದ್ವರ್ತನೆ, ಸಂಸ್ಕಾರ, ಸಮಾಜಸೇವೆಗಳು ಉಳಿದವರಿಗಿಂತ ಇವರನ್ನು ಭಿನ್ನವಾಗಿ ಇರಿಸಿತ್ತು.ಮುಸ್ತಾಕ ಹೆನ್ನಾಬೈಲ್ ಅವರಿಂದ ಅಪ್ಪುವಿಗೊಂದು ನುಡಿ ನಮನ…

ಕನ್ನಡದ ಮನ-ಮನೆಗಳಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಶವ ಪೆಟ್ಟಿಗೆಯ ಪಕ್ಕದಲ್ಲಿ ಇಟ್ಟಿರುವ ಪುನೀತರ ನಗುಮುಖದ ಆ ಫೋಟೋ, ನೋಡುಗರ ಮನಸ್ಸಿನಲ್ಲಿ ಈ ಸಾವು ಸುಳ್ಳು, ಸುಮ್ಮನೆ ಎಲ್ಲ ಸೇರಿ ಕಥೆ ಕಟ್ಟುತ್ತಿದ್ದಾರೆ ಅಥವ ಯಾವುದೋ ಚಿತ್ರಕ್ಕೆ ಬೇಕಾಗಿ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವಷ್ಟು ಅವರ ಅಕಾಲಿಕ ಅಗಲುವಿಕೆಯನ್ನು ಅಲ್ಲವಾಗಿಸುತ್ತಿದೆ. ಪುನೀತ್ ಇನ್ನಿಲ್ಲ ಎನ್ನುವುದು ಯಾರ ಮನಸ್ಸೂ ಒಪ್ಪಿಕೊಳ್ಳುತ್ತಿಲ್ಲ. ದಶಕದ ಹಿಂದೆ #ಡಾ_ರಾಜ್_ಕುಮಾರ್ ತೀರಿಕೊಂಡಾಗ ಒಲ್ಲದ ಮನಸ್ಸು ವಯಸ್ಸಾಯಿತು ಎಂಬ ಸಾವಿನ ಸಬೂಬನ್ನು ಒಪ್ಪಿಕೊಂಡು ಮೌನವಾಗಿತ್ತು. ಆದರೆ ಪುನೀತ್ ಸಾವಿಗೆ ಸಕಾರಣ ಸುಲಭಕ್ಕೆ ನಿಲುಕುತ್ತಿಲ್ಲ. ಅವರ ಮುಖದ ಮೇಲಿನ ಸದಾಕಾಲದ ನಿಷ್ಕಲ್ಮಶ ನಗು ಮುಗ್ಧತೆಯ ಪರಮ ಪ್ರತಿರೂಪದಂತಿರುವಂತದ್ದು. ಚಲನಚಿತ್ರಗಳ ಪೋಸ್ಟರ್ ಹೊರತುಪಡಿಸಿ ನಗುವಿಲ್ಲದ ಪುನೀತ್ ರಾಜ್ ಕುಮಾರ್ ನಿಜಜೀವನದ ಮುಖ ಬಹುಶಃ ಯಾರೂ ನೋಡಿರಲಿಕ್ಕಿಲ್ಲ. ಬದುಕಿನುದ್ದಕ್ಕೂ ಬಹುರೂಪಿಯಾದ ಉನ್ನತ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ಈ ಮಟ್ಟಿಗೆ ಸರಳವಾಗಿರೋದು ಸಾಧ್ಯವೇ? ಎಂದು ಆಶ್ಚರ್ಯಪಡುವಂತೆ ಪುನೀತ್ ಬದುಕಿದ್ದರು. ರಾಜ್ಯದಲ್ಲಿದ್ದು ಕನ್ನಡದ ಮೂಲಕ ಪುನೀತರೊಂದಿಗೆ ಭಾಷಾ ಮತ್ತು ಭಾವ ಬಂಧನವನ್ನು ಹೊಂದಿದ್ದ ನಾವು ಅವರು ಕನ್ನಡಕ್ಕೆ ಸೀಮಿತರಾದ ನಟ- ವ್ಯಕ್ತಿತ್ವ ಎಂದೇ ಭಾವಿಸಿದ್ದೆವು.

ಫೋಟೋ ಕೃಪೆ : The indian Express

ಆದರೆ ಸಾವಿನ ನಂತರದ ಸಾಗರ- ಸರಹದ್ದುಗಳಾಚೆಗಿನ ಸುದ್ದಿಗಳು, ನಮ್ಮ ಮನಸ್ಸು ಮಾತ್ರ ಸೀಮೆಯ ಒಳಗಿತ್ತು ಬಿಟ್ಟರೆ, ಪುನೀತ್ ವ್ಯಕ್ತಿತ್ವ ಎನ್ನುವುದು ಸಮಸ್ತ ಜಾತಿ, ಧರ್ಮ, ಭಾಷೆ, ದೇಶಗಳ ಗಡಿಗಳನ್ನು ಮೀರಿ ಪಸರಿಸಿತ್ತು ಎನ್ನುವುದನ್ನು ನಿಜಗೊಳಿಸಿದೆ. ಜಗತ್ತಿನ ಮುಂಚೂಣಿಯ ಸುದ್ದಿಸಂಸ್ಥೆ ಬಿಬಿಸಿ ಕೂಡ ಪುನೀತ್ ಸಾವಿನ ವಿಚಾರವನ್ನು ಅತ್ಯಂತ ವಿಷಾದದಿಂದ ಲೋಕದ ವೀಕ್ಷಕರಿಗೆ ತಲುಪಿಸಿದೆ. ಶತ್ರು ರಾಷ್ಟ್ರ ಚೀನಾದ ಟಿವಿಗಳಲ್ಲಿ ನಿಧನದ ಸುದ್ದಿಗಳು ಬಿತ್ತರವಾಗಿದೆ. ಪುನೀತರ ಪಾಕಿಸ್ತಾನಿ ಅಭಿಮಾನಿಯೊಬ್ಬ ಲಾಹೋರಿನಿಂದ ಅವರ ಚಲನಚಿತ್ರದ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಸ್ಪಷ್ಟೋಚ್ಚಾರದಲ್ಲಿ ಹಾಡಿ ಅವರ ಮೇಲೆ ಅಭಿಮಾನ ವ್ಯಕ್ತಪಡಿಸಿದ್ದಾನೆ. ಪುನೀತ್ ಸಾವಿಗೆ ಕಂಬನಿ ಮಿಡಿದವರಲ್ಲಿ ಚಲನಚಿತ್ರ ಅಭಿಮಾನಿಗಳು ಎಷ್ಟು ಜನರಿದ್ದರೋ, ಅದಕ್ಕಿಂತ ಹೆಚ್ಚು ಜನ ಚಲನಚಿತ್ರ ನೋಡದವರೂ ಕೂಡ ಇದ್ದಾರೆ ಎನ್ನುವುದು ಗಮನಾರ್ಹ. ಶ್ರೇಷ್ಠ ನಟನೆ ಮತ್ತು ಉನ್ನತ ವ್ಯಕ್ತಿತ್ವ ಎರಡೂ ಒಂದೇ ವ್ಯಕ್ತಿಯಲ್ಲಿ ಕಾಣಸಿಗುವುದು ಎಂದಿಗೂ ಅಪರೂಪ. ಆದರೆ ಪುನೀತರ ವಿಧೇಯ, ವಿನೀತ ಮತ್ತು ವಿನಮ್ರ ಭಾವಗಳು ನಟನೆಯಿಂದಾಚೆಗೂ ಈ ನಟನನ್ನು ಎತ್ತರಕ್ಕೆ ಬೆಳೆಸಿತು.ಪುನೀತ್ ಬದುಕಿಡೀ ಬದುಕಿದ್ದರೆ ಜಾಗತಿಕವಾದ ಚಿತ್ರರಂಗದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಚಾಲ್ತಿಯಲ್ಲಿದ್ದು ಎಂದಿಗೂ ಜನಪ್ರಿಯತೆ ಕಡಿಮೆಯಾಗದ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರೋ ಏನೋ? ..ತೊಟ್ಟಿಲ ಮಗುವಾಗಿದ್ದ ಬದುಕಿನ ಮೊದಲ ಬೆರಳೆಣಿಕೆಯ ವರ್ಷಗಳನ್ನು ಹೊರತುಪಡಿಸಿ, ಬಹುಶಃ ಜೀವಮಾನವಿಡೀ ಚಿತ್ರರಂಗದಲ್ಲಿ ಕಳೆದ ಅಪರೂಪದ ನಟ ಇವರು. ಗತ ಬದುಕಿನ ನಲವತ್ತಾರು ವರ್ಷಗಳಲ್ಲಿ ಹೆಚ್ಚು ಕಡಿಮೆ ನಲವತ್ತು ವರ್ಷಗಳನ್ನು ಚಿತ್ರರಂಗದಲ್ಲಿ ಸರಾಗವಾಗಿ ಮತ್ತು ಯಶಸ್ವಿಯಾಗಿ ಪೂರ್ತಿಗೊಳಿಸಿದ ಮತ್ತೊಬ್ಬ ಯಶಸ್ವಿ ನಟ ಕಾಣಸಿಗಲಾರ..
ತಂದೆ ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಪಕ್ಕದ ತಮಿಳುನಾಡಿನ ಎಂ ಜಿ ರಾಮಚಂದ್ರನ್ ಮತ್ತು ತೆಲುಗಿನ ಎನ್ ಟಿ ರಾಮರಾವ್ ರ ಸಮಕಾಲೀನರು. ಚಿತ್ರರಂಗದ ಜನಪ್ರಿಯತೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಅವರುಗಳು ಅವರವರ ರಾಜ್ಯಗಳ ಮುಖ್ಯಮಂತ್ರಿಗಳಾದರು. ಅದೇ ಧಾಟಿಯಲ್ಲಿ ರಾಜಕೀಯಕ್ಕಿಳಿದು ಮುಖ್ಯಮಂತ್ರಿಯಾಗಬಹುದಾದ ಎಲ್ಲ ಆಯ್ಕೆ ಅವಕಾಶಗಳಿದ್ದರೂ, ಪಕ್ಷಾಪಾತಿಯಾಗಿ ರಾಜಕೀಯವನ್ನು ಸೇರುವುದರ ಮೂಲಕ ಸರ್ವ ಸೀಮೆಗಳನ್ನು ಮೀರಿ ಪ್ರೀತಿಸಿದ ಯಾವುದೇ ಕನ್ನಡದ ಮನಸ್ಸನ್ನು ಘಾಸಿಗೊಳಿಸುವುದು ಹೇಯ ಎಂದು ಬಗೆದು, ಡಾ.ರಾಜ್ ರಾಜಕೀಯದಿಂದ ಬದುಕಿನ ಕೊನೆಯವರೆಗೆ ದೂರವೇ ಉಳಿದರು. ರಾಜ್ ರಾಜಕೀಯದಿಂದ ಅದೆಷ್ಟು ದೂರವೆಂದರೆ, ತಮ್ಮನ್ನು ಕಾಣಲು ಬಂದ ಒಂದು ಕಾಲದ ಮುಖ್ಯಮಂತ್ರಿಯನ್ನೇ ‘ಅಂದ ಹಾಗೆ, ನೀವು ಯಾವ ಪಕ್ಷದವರು?’ ಅಂತ ಕೇಳುವವರೆಗೆ. ಕನ್ನಡಿಗರ ಪ್ರೀತಿಯ ಮುಂದೆ ಎಂ ಜಿ ಆರ್ ಮತ್ತು ಎನ್ ಟಿ ಆರ್ ಅಪ್ಪಿಕೊಂಡಂತಹ ಆಡಂಬರದ ಪೀಠಗಳನ್ನು ಒದ್ದು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಯೂರಿದರು. ಅಂತಹ ಬದ್ದತೆಯ ವ್ಯಕ್ತಿತ್ವ ದೇಶದ ಯಾವುದೇ ಕ್ಷೇತ್ರದಲ್ಲೂ ಕಾಣಸಿಗದು. ಪದವಿ- ಪೀಠ-ಪಕ್ಷ ಪರಿತ್ಯಾಗಿಯಾದ ಅಂತಹ ಮಹಾನ್ ತಂದೆಯ ಮಗನಾಗಿ ಪುನೀತ್ ರಾಜ್ ಕುಮಾರ್ ತಂದೆಯ ಸಜ್ಜನಿಕೆ- ಸಂಸ್ಕಾರಗಳಿಗೆ ಸದಾ ಸುಗಂಧವನ್ನು ಲೇಪಿಸುತ್ತಾ ಸಾಗುತಿದ್ದರು. ನಾಡಿನ ಡಾ.ರಾಜ್ ಪೀಳಿಗೆಯ ಜನರೂ ಪುನೀತರಲ್ಲಿ ರಾಜ್ ಕುಮಾರ್ ಪಡಿಯಚ್ಚನ್ನು ಕಂಡು ಸಂತಸಪಡುತ್ತಿದ್ದರು.

ಫೋಟೋ ಕೃಪೆ : nettv4u

ನಾಡಿನ ಯುವಮನಸ್ಸುಗಳು ಈ “#ಅಪ್ಪು“ವನ್ನು ಬಹುವಾಗಿ ಅಪ್ಪಿಕೊಂಡಿದ್ದರು. ನಟನೆಯೊಂದಿಗೆ ಇವರ ಸರಳತೆ, ಸದ್ವರ್ತನೆ, ಸಂಸ್ಕಾರ, ಸಮಾಜಸೇವೆಗಳು ಉಳಿದವರಿಗಿಂತ ಇವರನ್ನು ಭಿನ್ನವಾಗಿ ಇರಿಸಿತ್ತು. ದೊಡ್ಡ ಕುಟುಂಬದ ಹಿನ್ನಲೆ, ಡಾ. ರಾಜ್ ಕುಮಾರ್ ರವರ ಪುತ್ರ, ಸೂಪರ್ ಸ್ಟಾರ್ ನಟ ಎಂಬ ಯಾವ ಹಮ್ಮುಬಿಮ್ಮುಗಳು ಯಾವ ಕಾಲಕ್ಕೂ ಯಾರಿಂದಲೂ ಇವರಲ್ಲಿ ಕಾಣಲಾಗಲೇ ಇಲ್ಲ. ಇಂತಹ ಪುನೀತ್ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಇನ್ನೆಷ್ಟು ದಿನ ಬೇಕೋ?

ಕಂಗಳ ಕಂಬನಿ ಬತ್ತಿದ ಮೇಲೆ ಮನದೊಳಗೆ ಹೊತ್ತಿದ ಬೆಂಕಿಯ ಸುಡುವ ಜ್ವಾಲೆಗಳ ಶಮನ ಮಾಡುವವರಾರು? ಆ ದೇಹದಿಂದ ದೂರವಾದೆ ಏಕೆ ಆತ್ಮನೆ? ಪುನೀತ್ ಸಾವು ನ್ಯಾಯವೇ? ಪ್ರತಿಯೊಂದು ಆದಿಗೂ ಅಂತ್ಯವಿರುವ ಹಾಗೆ ಪ್ರತಿಯೊಂದು ಹುಟ್ಟಿಗೂ ಒಂದು ಸಾವು ಇದ್ದೇ ಇದೆ. ಇದು ಕಲ್ಪಿತವಲ್ಲದ ಕಾಲಾತೀತವಾದ ಮತ್ತು ಜೀವಾತೀತವಾದ ಸತ್ಯ ಮತ್ತು ನಿಯಮ. ಇದೆಲ್ಲದರ ಅರಿವಿನ ಹೊರತಾಗಿಯೂ ಅಪ್ಪುಇನ್ನಿಲ್ಲ ಎನ್ನುವುದು ನಮ್ಮನ್ನೆಲ್ಲ ಇಷ್ಟೇಕೆ ಕಾಡುತ್ತಿದೆ? ದುಃಖವು ಅರಿಯಲಾರದಷ್ಟು ಆಳದಿಂದ ಒತ್ತರಿಸಿ ಬರುತ್ತಿರುವುದೇಕೆ? ಬಹುಶಃ ಅಪ್ಪು ಅವರಿಸಿಕೊಂಡ ಆಳ ಅಷ್ಟು ಸುಲಭದಲ್ಲಿ ಅರಿಯಲಾಗದೇನೋ?

ಅಗಲಿದ ಆತ್ಮವು ಚಿರಶಾಂತಿಯನ್ನು ಕಾಣಲಿ..ಸರ್ವರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ…


  • ಮುಸ್ತಾಕ ಹೆನ್ನಾಬೈಲ್  (ಚಿಂತನಕಾರರು, ಲೇಖಕರು )ಕುಂದಾಪುರ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW