ಅರಣ್ಯಕಾಂಡ-2 – ವಿಂಗ್ ಕಮಾಂಡರ್ ಸುದರ್ಶನ



ಮಧ್ಯಾಹ್ನ ನಮ್ಮನ್ನು ಡೆಹ್ರಾಡೂನಿನ ಕಾಡಿನಿಂದ ಕಾಶ್ಮೀರದ ಹಿಮಚ್ಚಾಲದಿಂದ ಗುಲ್ಮರ್ಗಕ್ಕೆ ಸ್ಥಳಾಂತರಿಸಬೇಕಾಗಿತ್ತು. ಆದರೆ ಬೆಳ್ಳಂಬೆಳಗ್ಗೇಯಿಂದಲೇ ಬಿಡುವುವಿಲ್ಲದ ಮಳೆ. ಬೆಂಕಿ ಆರದ ಹಾಗೆ ಇದ್ದಬದ್ದ ಸೌದೆಗಳನ್ನು ಹಾಕಿ, ಅದರ ಮೇಲೆ ಪ್ಯಾರಾಚೂಟಿನ ಹೊದಿಕೆ ಹಿಡಿದುಕೊಂಡು ನಿಂತೆವು. ಮಳೆಯಲ್ಲಿ ನೆಂದುಹೋದ ಸೌದೆಗಳಿಂದ ದಟ್ಟವಾದ ಹೊಗೆಯೇ ಹಬ್ಬಿಕೊಂಡಿತು. ಅಷ್ಟುಹೊತ್ತಿಗೆ ಸರಿಯಾಗಿ ಹೆಲಿಕಾಪ್ಟರ್ ನಮ್ಮ ಡೇರೆಯ ಮೇಲೆ ಒಂದು ಸುತ್ತು ಹಾಕಿ ಮೆಲ್ಲಗೆ ಕೆಳಗಿಳಿಯತೊಡಗಿತು. ಮುಂದೆ ಓದಿ ವಿಂಗ್ ಕಮಾಂಡರ್ ಸುದರ್ಶನ ಅವರ ಅರಣ್ಯಕಾಂಡದ ಅನುಭವದ ಕುರಿತು ಬರೆದ ಲೇಖನ.

ಮರುದಿನ ಬೆಳಗ್ಗೆ ಎಚ್ಚರವಾದಾಗ ಇನ್ನೂ ಮುಸುಕು ಬೆಳಗು, ಹಕ್ಕಿಗಳ ಕಲರವ, ಜೀರುಂಡೆಗಳ ಸದ್ದು, ತರಗಲೆಗಳ ಮೇಲೆ ಪಕ್ಷಿಗಳ ನಡೆದಾಟ ಬಿಟ್ಟರೆ ಸಂಪೂರ್ಣ ನಿಶಬ್ದ. ಹೊದ್ದುಕೊಂಡಿದ್ದ ಪ್ಯಾರಾಚೂಟಿನ ಭಾಗ ಇಬ್ಬನಿ ಸುರಿದು ಒದ್ದೆಯಾಗಿತ್ತು. ನಿಧಾನವಾಗಿ ಅದನ್ನು ಪಕ್ಕಕ್ಕೆ ಸರಿಸಿ, ನೀರನ್ನು ಶೇಖರಿಸಿಟ್ಟೆ, ಕೈತೊಳೆಯಲು ಬರಬಹುದು.. ಯಾಕೆ ವೇಸ್ಟ್ ಮಾಡೋದು. ನನ್ನ ಸ್ನೇಹಿತರು ಒಬ್ಬಬ್ಬರಾಗಿ ಏಳುತ್ತಲೇ ನಮ್ಮ ಕಲರವವೂ ಕಾಡಿನ ಶಬ್ದಗಳ ಮಧ್ಯೆ ಸೇರಿಕೊಂಡಿತು. ಹೊಗೆಯಾಡುತ್ತಿದ್ದ ಬೆಂಕಿಗೆ ಇನ್ನಷ್ಟು ಕಟ್ಟಿಗೆಗಳನ್ನು ಮುರಿದು ಹಾಕಿ ಆರುತ್ತಿದ್ದ ಬೆಂಕಿಗೆ ಜೀವಕೊಟ್ಟು ಬೆಂಕಿಯ ಸುತ್ತಲೂ ಸ್ವಲ್ಪ ಹೊತ್ತು ನಿಂತಿದ್ದೆವು. ಚೀಲದಲ್ಲಿ ಚಹಾ ಮತ್ತು ಸಕ್ಕರೆಯ ಪೊಟ್ಟಣಗಳಿದ್ದವು ಆದರೆ ಸದ್ಯಕ್ಕೆ ಅವುಗಳನ್ನು ಉಳಿಸಿಕೊಂಡಿರೋಣ, ಒಂದು ರೌಂಡ್ ಕಾಡು ಸುತ್ತಿಕೊಂಡು ಬರೋಣ ಎಂದು ಮೂರು ಮೂರು ಜನರ ಬ್ಯಾಚಿನಲ್ಲಿ ಒಂದೊಂದು ದಿಕ್ಕಿಗೆ ಹೊರಟೆವು.

ಫೋಟೋ ಕೃಪೆ : Medindia

ನಮ್ಮ ಹಳ್ಳಿಯಲ್ಲಿ ಇರುವ ಹನ್ನೆರಡು ಎಕರೆ ಹೊಲದಲ್ಲಿ ನಡುವಿನ ಸುಮಾರು ಎರಡು ಎಕರೆ ಜಾಗದಲ್ಲಿ ನಮ್ಮ ಮುತ್ತಜ್ಜನ ಕಾಲದಿಂದಲೂ ಔಷಧಿಯ ಗಿಡಗಳನ್ನು ಬೆಳೆಸುತ್ತಿದ್ದರು ಮತ್ತು ಅದರ ಔಷಧಿಗಳನ್ನು ಮನೆಯಲ್ಲಿಯೇ ತಯಾರಿಸಿ ವಂಶಪಾರಂಪರ್ಯವಾದ ಗಿಡಮೂಲಿಕೆಗಳ ವೈದ್ಯಕೀಯ ನಮ್ಮ ತಂದೆಯವರ ಕಾಲದವರೆಗೂ ನಡೆಯಿತು. ಅದರಿಂದಾಗಿ ಅಶ್ವಗಂಧ, ಬ್ರಾಹ್ಮೀ, ನೆಲ್ಲಿಕಾಯಿ, ವಿವಿಧ ಬಗೆಯ ತುಳಸಿಗಳು, ಅಮೃತಬಳ್ಳಿ, ಕರಿಬೇವು ಇನ್ನೂ ಇತರೆ ಹಲವಾರು ಗಿಡ ಮೂಲಿಕೆಗಳ ಪರಿಚಯವಿತ್ತು. ಆಶ್ಚರ್ಯವೆಂದರೆ ಡೆಹರಾಡೂನಿನ ಕಾಡಿನಲ್ಲಿ ಅವೆಲ್ಲವೂ ಯಥೇಚ್ಚವಾಗಿದ್ದುದನ್ನು ಕಂಡು ಆನಂದ ಪುಳಕಿತನಾದೆ. ಇನ್ನು ಹಸಿವು ನನ್ನನ್ನು ಕಾಡಲಾರದು! ಕೆಲವನ್ನಂತೂ ಹಸಿ ಹಸಿಯಾಗಿ ತಿನ್ನತೊಡಗಿದೆ, ಇನ್ನು ಕೆಲವು ಎಲೆಗಳು, ಹೂಗಳನ್ನು ಬಿಡಿಸಿಕೊಂಡು ಚೀಲಕ್ಕೆ ತುಂಬಿಸಿಕೊಂಡೆ. ಕೆಲವು ಸಣ್ಣದಾಗಿ ಮತ್ತು ಬರಿಸುವ ಸಸ್ಯಗಳನ್ನೂ ನೊಡಿದೆ, ಮುಟ್ಟಲಿಲ್ಲ, ಮೊದಲೇ ಹೊಟ್ಟೆ ಖಾಲಿ!..ಅಪಾಯ. ಗಮನ ಹಲವಾರು ವಿಧದ ಹೂಗಳತ್ತ ಹರಿಯಿತು. ಕೆಂಪು ಹೂವಿನಲ್ಲೇ ಅದೆಷ್ಟು ವಿಧವಾದ ಕೆಂಪುಗಳು, ನಸುಗೆಂಪು, ಕಡುಗೆಂಪು, ಬಿಳಿಪುಮಿಶ್ರಿತ ಕೆಂಪು, ಹಳದಿ ಮಿಶ್ರಿತ ಕೆಂಪು‌, ಹಸಿರೆಲೆಗಳ ಮರೆಯಲ್ಲಿರುವ ಕೆಂಪು, ನಾನೇ ಇಲ್ಲಿಯ ರಾಣಿ ಎಂದು ಬಿಮ್ಮನೆ ಬೀಗುತ್ತಿರುವ ಕೆಂಪು. ವಾಹ್ ಎಂಥಹಾ ಸೌಂದರ್ಯ! ಗೆಣಸಿನಂತೆ ಕಾಣುವ ಕೆಲವು ಗಡ್ಡೆಗಳನ್ನು ಕಿತ್ತು ಕಲೆಹಾಕಿದೆವು. ಈಗ ಅದು ತಿನ್ನಲು ಅರ್ಹವೊ ಎನ್ನುವುದನ್ನು ಪರೀಕ್ಷಿಸಬೇಕು‌. ಮೊದಲಿಗೆ ನೀರನ್ನು ಚೆನ್ನಾಗಿ ಕುದಿಸಿ ಅಮೃತಬಳ್ಳಿ, ತುಳಸಿ ಮತ್ತು ಕರಿಬೇವಿನ ಸೂಪು ತಯಾರಾಯಿತು. ಅದಕ್ಕೆ ನಾನೇ ಪ್ರಯೋಗ ಪಶುವಾದೆ. ಸ್ವಲ್ಪವೇ ಕುಡಿದೆ, ರುಚಿ ಇದೆ ಎನಿಸಿತು. ನನ್ನ ಸ್ನೇಹಿತರು ಕುಡಿಯಲು ಸ್ವಲ್ಪ ಹಿಂಜರಿದರು. ಒಂದು ಗಂಟೆಯವರೆಗೂ ಕಾಯುತ್ತೇವೆ ನೀನು ಬದುಕಿ ಉಳಿದರೆ ನಾವು ಕುಡಿಯುತ್ತೇವೆ ಎಂದು ಹಾಸ್ಯ ಮಾಡಿದರು. ನನಗೆ ಈ ಔಷಧೀಯ ಸಸ್ಯಗಳ ಬಗ್ಗೆ ನಂಬಿಕೆ ಇತ್ತು.

ಫೋಟೋ ಕೃಪೆ : google

ಆ ದಿನದ task ಏನೆಂದರೆ, ಕೊಟ್ಟಿದ್ದ ನಕಾಶೆಯನ್ನು ಹಿಡಿದು ಸುಮಾರು ನಾಲ್ಕು ಕಿಲೋಮೀಟರ್ ದೂರದ ನಿರ್ದಿಷ್ಟ ಸ್ಥಳಕ್ಕೆ ಹೋಗಿ ಪುನಃ ಶಿಬಿರಕ್ಕೆ ವಾಪಸ್ ಬರುವುದು.
ಆ ನಿರ್ದಿಷ್ಟ ಸ್ಥಳದಲ್ಲಿ ನಿಮಗೊಂದು surprise ಇದೆ ಎನ್ನುವ ಆಮಿಷ ಬೇರೆ…ಏನಿರಬಹುದು, ಅಲ್ಲಿ ಯಾರಾದರೂ ಊಟ ಹಾಕ್ತಾರಾ ಎನ್ನುವುದು ಹಸಿದ ಹೊಟ್ಟೆಗಳ ಹಂಬಲ.
ಒಬ್ಬರ ಕೈಯಲ್ಲಿ ಮ್ಯಾಪು,ಇನ್ನೊಬ್ಬರ ಕೈಯಲ್ಲಿ ಕಂಪಾಸ್ಸು ಇವರ ಹಿಂದೆ ಇಬ್ಬರು ಕುಕ್ರಿಯನ್ನಿಡಿದು ನಾವು ಸಾಗುತ್ತಿದ್ದ ದಾರಿಯ ಇಕ್ಕೆಲಗಳಿಲ್ಲಿರುವ ಮರಗಳ ಮೇಲೆ ಗುರುತು ಮಾಡುತ್ತಾ ಸಾಗುತ್ತಿದ್ದರು, ಇದರಿಂದ ಮರಳಿ ಬರುವಾಗ ದಾರಿ ತಪ್ಪಬಾರದೆಂದು. ಬೆನ್ನಿಗೆ ಒಂದು ಚೀಲ ಕಟ್ಟಿಕೊಂಡು ನೀರಿನ ಬಾಟಲಿ ಸೊಂಟಕ್ಕೆ ಬಿಗಿದು ಕೊಂಡು ಕೈಯಲ್ಲಿ ಕುಕ್ರಿ ಹಿಡಿದುಕೊಂಡು ಎಲ್ಲರೂ ಸಾಲಾಗಿ ಹೊರಟೆವು.



ಇದು ದಿನವಿಡೀ ನಡೆಯುವ ಪ್ರಕ್ರಿಯೆ, ನನ್ನ ನೀರಿನ ಬಾಟಲಿಯಲ್ಲಿ ನೀರಿಗೆ ಬದಲು ಅಮೃತ ಬಳ್ಳಿಯ ಎಲೆಯನ್ನು ಬೇಯಿಸಿದ ಸೂಪನ್ನು ತುಂಬಿಕೊಂಡೆ. ಇಂತಹ ಸಮಯದಲ್ಲಿ ವ್ಯರ್ಥವಾಗಿ ಶಕ್ತಿವ್ಯಯವಾಗದಂತೆ ಗಮನವನ್ನು ಕೇಂದ್ರೀಕರಿಸಿಕೊಂಡು ಎಲ್ಲರ ಜೊತೆ ಸಾಲಿನಲ್ಲಿ ನಡೆಯತೊಡಗಿದೆ. ಒಂದು ಕಣ್ಣು ನಾವು ಸಾಗುತ್ತಿರುವ ಮಾರ್ಗದ ಕಡೆ ನೆಟ್ಟಿತ್ತು ಇನ್ನುಳಿದ ಇಂದ್ರಿಯಗಳು ಈ ಅದ್ಭುತ ಪ್ರಕೃತಿಯನ್ನಾವರಿಸಿಕೊಂಡುಬಿಟ್ಟಿದ್ದವು. ದೂರದಲ್ಲೆಲ್ಲೋ ಜುಳು ಜುಳು ನದಿಯನೀರು ಹರಿಯುತ್ತಿರುವ ಶಬ್ದ ಒಮ್ಮೆಲೇ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿಬಿಟ್ಟಿತು. ಮ್ಯಾಪಿನಲ್ಲಿ ಈ ನದಿ ಇರಲಿಲ್ಲವಲ್ಲಾ..ಹಾದಿ ತಪ್ಪಿದೆವಾ? ಇಲ್ಲ…ಇದು ತರಬೇತಿ ಸಿಬ್ಬಂದಿಯವರ ವತಿಯಿಂದ ಸ್ನಾನಮಾಡಲಿ ಎಂದು ಒಂದು ಪುಟ್ಟ surprise! ಶುಭ್ರವಾದ ಸಿಹಿ ನೀರು ಮೈಮೇಲೆ ಒಂದು ನೂಲೂ ಇಲ್ಲದ ಹಾಗೆ ಉಟ್ಟಿದ್ದ ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ನದಿಗೆ ಹಾರಿದೆವು. ನನ್ನ ಬೆಂಗಾಲಿ ಸ್ನೇಹಿತನಿಗೆ ಸ್ನಾನಕ್ಕಿಂತ ಮುಖ್ಯವಾಗಿ ಮೀನು ಹಿಡಿಯ ಬೇಕಾಗಿತ್ತು ಅಂತೂ ಕೆಲವು ಮೀನಗಳನ್ನು ಹಿಡಿದು ರಾತ್ರಿಯ ಊಟದ ಚಿಂತೆಯನ್ನು ಬಗೆಹರಿಸಿಕೊಂಡ.

ಮರಳಿ ಬರುವಷ್ಟೊತ್ತಿಗೆ ಸಾಯಂಕಾಲವಾಗಿತ್ತು. ಆದರೆ ತರಬೇತಿ ಸಿಬ್ಬಂದಿ ಇನ್ನೊಂದು task ಕೊಟ್ಟರು. ನಮ್ಮಲ್ಲಿ ಒಬ್ಬನು ಅನಾರೊಗ್ಯದಿಂದ ಮಲಗಿ ಬಿಟ್ಟಿದ್ದಾನೆ ಅವನನ್ನು ಹೊತ್ತುಕೊಂಡು ಕ್ಯಾಂಪಿಗೆ ಕರೆದೊಯ್ಯಬೇಕು. ಸರಿ ಅಲ್ಲಿನ ಮರಗಳ ಕೊಂಬೆಗಳನ್ನು ಕಡಿದು ಒಂದು stretcher ಕಟ್ಟಿ ಅವನನ್ನು ಹೊತ್ತುಕೊಂಡು ಬಂದೆವು. ಆದರೆ ಕಾಡಿನಿಂದ ಹೊರಗೆ ಬಂದು ಶ್ರೀನಗರ ತಲುಪಿದ ನಂತರ ಎಲ್ಲರಿಗೂ ಒಂದು ಒಳ್ಳೆಯ ಹೋಟಲಿನಲ್ಲಿ ಊಟ ಕೊಡಿಸುತ್ತೇನೆಂದು ಆಣೆ ಪ್ರಮಾಣ ಮಾಡಿದ ಮೇಲೇ ಅವನ ಚಟ್ಟ ಹೊತ್ತಿದ್ದು!

ಫೋಟೋ ಕೃಪೆ : google

ಅವತ್ತು ರಾತ್ರಿಯ campfire ನ ಮಂದ ಬೆಳಕಿನ ಮುಂದೆ ಕುಳಿತಾಗ ಮನಸ್ಸನ್ನಿಡೀ ಆವರಿಸಿದ್ದು ಅಶ್ವತ್ಥಾಮ. ಯಾಕೆ ಬಂತು ಈ ವಿಚಾರ? ನಾನು ಕುಳಿತು ಹೀಗೆ ಯೋಚಿಸುತ್ತಿದ್ದ ನೆಲ ದ್ರೋಣಾಚಾರ್ಯರ ಜನ್ಮಭೂಮಿ. ಡೆಹ್ರಾಡೂನಿಗೆ ಯಾಕೆ ಈ ಹೆಸರು ಬಂತು ಎನ್ನುವ ಹಲವಾರು ಪ್ರತೀತಿಗಳಲ್ಲಿ ದ್ರೋಣರ ಮತ್ತು ಕೃಪಿಯ (ಕೃಪಾಚಾರ್ಯರ ತಂಗಿ) ಪ್ರಣಯ ವೃತ್ತಾಂತಗಳಿವೆ. ಮೊದಲು ಈ ನಗರಕ್ಕೆ ದ್ರೋಣನಗರಿ ಎಂಬ ಹೆಸರಿತ್ತಂತೆ, ಬ್ರಿಟಿಷರ ಕಾಲದಲ್ಲಿ ಡೇರಾ ಡುನ್ ಎಂದು ಬದಲಾಯಿಸಿದರು.

ಅಶ್ವಥ್ಥಾಮ ಹುಟ್ಟಿ ಬೆಳೆದ ನಾಡು ಇದು. ಅವನು ಹುಟ್ಟಿದ ಕೂಡಲೇ ಕುದುರೆಯ ತರಹ ಕೆನೆಯಲು ಶುರು ಮಾಡಿದ್ದಕ್ಕೆ ಈ ತರದ ಅಡ್ಡ ಹೆಸರಿಟ್ಟರಂತೆ…ಅಶ್ವತ್ಥಾಮ ಎಂದು.
ಅಶ್ವಥ್ಥಾಮ ಚಿರಂಜೀವಿಯಲ್ಲವೇ ಹಾಗಾಗಿ ಅದರ ಬಗ್ಗೆಯೂ ತುಂಬ ವದಂತಿಗಳಿವೆ.



ಈ ಕಾಡಿನ ಹತ್ತಿರವೇ ತಪಕೇಶ್ವರ ದೇವಸ್ತಾನವಿದೆ. ಅದೊಂದು ನೈಸರ್ಗಿಕವಾಗಿ ಸೃಷ್ಟಿಗೊಂಡ ಗುಹೆ. ಅಲ್ಲಿಯ ಶಿವಲಿಂಗದ ಇತಿಹಾಸವೇನೆಂದರೆ, ದ್ವಾಪರಯುಗದಲ್ಲಿ ದ್ರೋಣಾಚಾರ್ಯರು ಈ ಗುಹೆಯೊಳಗೆ ಧೀರ್ಘಕಾಲ ತಪಸ್ಸುಮಾಡಿ ಶಿವನಿಂದ ಧನುರ್ವಿಧ್ಯೆಯನ್ನು ಪಡೆದುಕೊಂಡರೆಂಬ ದಟ್ಟವಾದ ಪ್ರತೀತಿ ಇದೆ. ದ್ರೋಣರ ಪುತ್ರ ಅಶ್ವಥ್ಥಾಮ ಚಿಕ್ಕಂದಿನಿಂದಲೂ ಈ ಗುಹೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದನಂತೆ. ಆಗ ಶಿವಲಿಂಗದ ಮೇಲೆ ಹನಿಹನಿಯಾಗಿ ಹಾಲು ಹನುಕುತ್ತಿತ್ತಂತೆ. ಅಶ್ವಥ್ಥಾಮ ಆ ಹಾಲನ್ನೇ ಸವಿಯತ್ತಾ ಬೆಳೆದನಂತೆ. ಅಲ್ಲಿಯ ಸ್ಥಳೀಯರ ನಂಬಿಕೆಯ ಪ್ರಕಾರ ಈಗಲೂ ಅಲ್ಲಿಗೆ ರಾತ್ರಿಸಮಯದಲ್ಲಿ ಅಶ್ವಥ್ಥಾಮ ಬಂದು ಪೂಜೆ ಸಲ್ಲಿಸುತ್ತಾರಂತೆ. ಇದೊಂದೇ ಶಿವಾಲಯವಲ್ಲ ಈ ಪ್ರಾಂತದ ಹಲವಾರು ಶಿವಾಲಯಗಳಲ್ಲಿ ಹೀಗೊಂದು ಅಶ್ವಥ್ಥಾಮನ ಆಗಮನದ ವಿಷಯವನ್ನು ಬಹಳ ಮಾಮೂಲಿ ವಿಷಯದಂತೆ ಮಾತನಾಡುತ್ತಾರೆ. ನಾನು ವಾಯುಸೇನೆಯ ಆಯ್ಕೆಗೆ ಡೆಹ್ರಾಡೂನಿಗೆ ಬಂದಾಗ ಈ ಶಿವಾಲಯವನ್ನು ನೋಡಿದ್ದೆ.

ಮೂರನೇ ದಿನದ ತರಬೇತಿಯ ಮುಖ್ಯ ಅಂಶವೆಂದರೆ, ದೊರೆತ ಮಾಹಿತಿಯ ಪ್ರಕಾರ ಮರುದಿನ ಬೆಳಗ್ಗೆ ನಮ್ಮನ್ನು ಹುಡುಕಲು ಹೆಲಿಕಾಪ್ಟರನ್ನು ಕಳುಹಿಸಲಿದ್ದಾರೆ ಆದರೆ ನಮ್ಮ ಲೊಕೇಶನ್ ಅವರಿಗೆ ಖಚಿತವಾಗಿ ಗೊತ್ತಿಲ್ಲ…ನೀವುಗಳೆಲ್ಲಾ ಸೇರಿ ಆ ಹೆಲಿಕಾಪ್ಟರ್ ನಿಮ್ಮನ್ನು ಸುಲಭವಾಗಿ ಕಂಡುಹಿಡಿಯುವಂತೆ ಮಾಡಿ..ಎಂದು ಹಿಂದಿನ ದಿನದ ಮ್ಯಾಪನ್ನೇ ಕೊಟ್ಟು ‘ಪ್ಲಾನ್ ಮಾಡಿ’ ಎಂದರು.
ಮೊದಲು ಈ ಕ್ಯಾಂಪನ್ನು ಸ್ಥಳಾಂತರಿಸಬೇಕು. ಹೆಲಿಕಾಪ್ಟರಿಗೆ ಕಾಣುವಹಾಗೆ ಒಂದು ಮೈದಾನ ಪ್ರದೇಶದಲ್ಲಿ ನಮ್ಮ ಹೊಸ ಕ್ಯಾಂಪ್ ಸ್ಥಾಪಿಸಬೇಕು. ಎರಡು ದಿನ ಅನ್ನವಿಲ್ಲದ ದೇಹಕ್ಕೆ ನಿತ್ರಾಣ ಒಂದು ಕಡೆಯಾದರೆ, ಈ ಮೂರು ದಿನಗಳಲ್ಲಿ ಇದೇ ಸುರಕ್ಷಿತ ಸ್ಥಳ ಎನಿಸಿದ್ದ ಈ ಸ್ಥಳವನ್ನು ಬಿಟ್ಟು ಹೋಗಬೇಕಲ್ಲಾ ಅಂತಾ, ನಿರ್ವಾಹವಿಲ್ಲದೆ ಪ್ಯಾರಾಚೂಟನ್ನು ಪ್ಯಾಕ್ ಮಾಡಲು ಶುರುಮಾಡಿದೆವು. ತಿನಿಸುಗಳೇನು ಉಳಿದಿರಲಿಲ್ಲ. ಸರಿಬಿಡು ನಾಳೆ ಹೇಗೂ ಹೆಲಿಕಾಪ್ಟರ್ ಬರುತ್ತೆ ಎನ್ನುವ ಸಮಾಧಾನ. ಕಾಡನ್ನು ಯಥಾವಥ ಬಿಡಬೇಕು, ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿ ಹೋಗಬೇಕು. ನಾನೇ ಮಾಡಿದ ಬೆಂಕಿಯೊಂದಿಗೆ ಒಂದು ಭಾವನಾತ್ಮಕ ಬೆಸುಗೆ ಬೆಳೆದು ಬಿಟ್ಟಿತ್ತು! ನಾಳೆ ಹೆಲಿಕಾಪ್ಟರಿಗೆ ಕಾಣುವಂತೆ ದಟ್ಟವಾದ ಹೊಗೆ ಮಾಡಬೇಕು. ಈ ಬೆಂಕಿಯನ್ನು ಆರಿಸುವ ಮೊದಲು ಒಂದು ಒಣ ರೆಂಬೆಗೆ ಬೆಂಕಿ ತಗಲಿಸಿ ಮುಂದಿನ ಕ್ಯಾಂಪಿನವರೆಗೂ ಅದನ್ನು ಹೊಗೆಯಾಡಿಸುತ್ತಲೇ ಹಿಡಿದುಕೊಂಡು ಹೋದೆ.

ಫೋಟೋ ಕೃಪೆ : getty image

ಸುಮಾರು ಮೂರು ಗಂಟೆಗಳ ಚಾರಣದ ನಂತರ ಒಂದು ಫುಟ್ಬಾಲಿನ ಮೈದಾನದಷ್ಟು ದೊಡ್ಡ ಸ್ಥಳಕಾಣಿಸಿತು. ನಮ್ಮ ಗುಂಪಿನಲ್ಲಿದ್ದ ಮೂವರು ಹೆಲಿಕಾಪ್ಟರ್ ಪೈಲಟ್ಗಳ ನಿರ್ದೇಶನದಲ್ಲಿ ಒಂದು ಹಂಗಾಮಿ ಹೆಲಿಪ್ಯಾಡನ್ನು ನಿರ್ಮಿಸಿದೆವು. ಮರದ ರೆಂಬೆಗಳನ್ನು ಕಡಿದು “H” ಎನ್ನುವ ಆಕಾರದಲ್ಲಿ ಜೋಡಿಸಿದೆವು. ಹತ್ತಿರದಲ್ಲೇ ಅಗ್ನಿಸ್ಥಾಪನೆಯೂ ಆಯಿತು. ಕತ್ತಲಾಗುವ ಮುನ್ನ ಹೊಗೆ ಹುಟ್ಟುಹಾಕಲು ಸಾಕಷ್ಟು ಪ್ರಮಾಣದಲ್ಲಿ ಸೌದೆಗಳನ್ನು ಶೇಖರಿಸಿಟ್ಟೆವು. ಎಲ್ಲರ ಮನಸ್ಸಿನಲ್ಲಿ ಒಂದೇ ಆತಂಕ, ಹೆಲಿಕಾಪ್ಟರ್ ನಮ್ಮನ್ನು ಮಿಸ್ ಮಾಡಬಾರದು. ರಾತ್ರಿ ಕನಸಿನಲ್ಲೂ ಹೆಲಿಕಾಪ್ಟರ್ ಸುತ್ತು ಹಾಕುತ್ತಿರುವ ಶಬ್ದ.



ಬೆಳ್ಳಂಬೆಳಗ್ಗೇ ಧೋ ಎಂದು ಮಳೆಶುರುವಾಯಿತು. ಇದ್ದಬದ್ದ ಸೌದೆಗಳನ್ನು ಬೆಂಕಿಯು ಆರದ ಹಾಗೆ ಹಾಕಿ ಅದರ ಮೇಲೆ ಪ್ಯಾರಾಚೂಟಿನ ಹೊದಿಕೆ ಹಿಡಿದು ಕೊಂಡು ನಿಂತೆವು. ಇವತ್ತು ಈ ನಂದಾದೀಪ ಆರಬಾರದು. ಈ ಮಳೆಯಲ್ಲಿ ಹೆಲಿಕಾಪ್ಟರ್ ಬರುವುದು ಅನುಮಾನ. ಆದರೆ ನಮ್ಮ ಹೆಲಿಕಾಪ್ಟರ್ ಮಿತ್ರರಿಗೆ ಭರವಸೆ ಇತ್ತು. ನನ್ನಲ್ಲಿದ್ದ ತುಳಸಿ ಮತ್ತು ಕರಿಬೇವಿನ ಬಿಸಿ ಬಿಸಿ ಕಷಾಯ ಮಾಡಿಕೊಟ್ಟೆ. ಎಲ್ಲರೂ ಸ್ವಲ್ಪ ಚೇತರಿಸಿಕೊಂಡೆವು. ಅಷ್ಟರಲ್ಲೇ ನಮ್ಮ ತರಬೇತಿ ತಂಡದವರು ಬಂದರು. ಅವರಾಗಲೇ ಹೆಲಿಕಾಪ್ಟರ್ ಪೈಲಟ್ಗಳ ಜೊತೆ ಫೋನಿನಲ್ಲಿ ಮಾತಾಡಿಕೊಂಡು ಬಂದರಂತೆ. ಇನ್ನೊಂದು ಘಂಟೆ ಬಿಟ್ಟುಕೊಂಡು ಪ್ರಯತ್ನಿಸುತ್ತೇವೆ ಎಂದರಂತೆ. ನಮಗಿಂತಲೂ ಅವರೇ ಚಿಂತಾಕ್ರಾಂತರಂತೆ ಕಂಡರು. ಅದಕ್ಕೆ ಕಾರಣವೂ ಇತ್ತು. ಇವತ್ತೇ ಮಧ್ಯಾಹ್ನ ನಮ್ಮನ್ನು ಡೆಹ್ರಾಡೂನಿನ ಕಾಡಿನಿಂದ ಕಾಶ್ಮೀರದ ಹಿಮಚ್ಚಾದಿತ ಗುಲ್ಮರ್ಗಕ್ಕೆ ಸ್ಥಳಾಂತರಿಸಬೇಕಾಗಿತ್ತು.

ಮಾರ್ಗಮಧ್ಯದ ಪಂಜಾಬಿ ಡಾಭಾದಲ್ಲಿ ಊಟ ಕೊಡಿಸುತ್ತೇವೆಂದು ಹೇಳಿದ್ದೇ ನಮ್ಮ ಗುಂಪಿನಲ್ಲಿ ಉಲ್ಲಾಸದ ಹೂಮಳೆಯೇ ಸುರಿಯಿತು. ನಿಧಾನವಾಗಿ ಮಳೆ ಕಡಿಮೆಯಾಗುತ್ತಾ ಬಂತು. ದೂರದಲ್ಲಿ ಹೆಲಿಕಾಪ್ಟರಿನ ಶಬ್ದ ಕೇಳಿದ್ದೇ ಸಾಕು….ಸೌದೆ ಹಾಕಿರಿ, ಹೊಗೆ ಮಾಡಿರಿ..ಎಂಬ ಉತ್ಸಾಹದ ಕೂಗೆದ್ದಿತು. ಮಳೆಯಲ್ಲಿ ನೆಂದುಹೋದ ಸೌದೆಗಳಿಂದ ದಟ್ಟವಾದ ಹೊಗೆಯೇ ಹಬ್ಬಿಕೊಂಡಿತು. ಅಷ್ಟುಹೊತ್ತಿಗೆ ಸರಿಯಾಗಿ ಹೆಲಿಕಾಪ್ಟರ್ ನಮ್ಮ ಡೇರೆಯ ಮೇಲೆ ಒಂದು ಸುತ್ತು ಹಾಕಿ ಮೆಲ್ಲಗೆ ಕೆಳಗಿಳಿಯತೊಡಗಿತು. ಭೂಸ್ಪರ್ಶ ಮಾಡಿದ ಹೆಲಿಕಾಪ್ಟರಿನ ರೋಟರುಗಳು ನಿಧಾನವಾಗಿ ತಿರುಗುತ್ತಿದ್ದವು. ಪೈಲಟ್ಟುಗಳು ತಲೆ ತಗ್ಗಿಸಿ ಬರುವಂತೆ ಸನ್ನೆ ಮಾಡಿದ ಮೇಲೆ ಹೆಲಿಕಾಪ್ಟರ್ ಹತ್ತಿದೆವು. ಅಲ್ಲಿಂದ ಸೀದಾ ಶ್ರೀನಗರದ ವಾಯುನೆಲೆಗೆ ಬಂದು ತಲುಪಿದೆವು. ಅಲ್ಲಾಗಲೇ ಟ್ರಕ್ಕುಗಳು ತಯಾರಾಗಿ ನಿಂತಿದ್ದವು…ನಮ್ಮನ್ನು ಹಿಮಚ್ಛಾದಿತ ಗುಲ್ಮರ್ಗಕ್ಕೆ ಕೊಂಡೊಯ್ಯಲು.

ಮುಂದೆ..ನದಿಯ ಮೇಲಿಂದ ಎದ್ದು ಬಂದವರು


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW