‘ಅವಿವಾಹಿತ ತಾಯಿ’ ಸಣ್ಣಕತೆ

ಅಪ್ಪ ಅಮ್ಮನ ಜವಾಬ್ದಾರಿಯಿಂದ ಆಕೆ ಮದುವೆಯಾಗದೆ ಕೂತಳು. ಅಮ್ಮ ಅಪ್ಪ ಕಾಲವಾದ ಮೇಲೆ ಆಕೆ ಒಂಟಿ ಅಂದುಕೊಳ್ಳಲಿಲ್ಲ. ಸಂತೋಷದಿಂದ ಜೀವನ ನಡೆಸ ತೊಡಗಿದಳು. ಹರಿಹರ ಬಿ ಆರ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ನಾ ಕಂಡ ಅವಿವಾಹಿತ ತಾಯಿ ಬಹಳ ಖುಷಿಯಿಂದಿರುವಳು. ವಾಸ್ತವದ ಜಗದಲ್ಲಿ ಅವಿವಾಹಿತ ತಾಯಿ ಎಂದರೆ ಕುಂತಿ ಮಹಾತಾಯಿ ಎಂದು ಮೂಗೆಳೆಯುವರು ಮತ್ತು ಕೊಂಕು ನುಡಿಯುವರು. ಆದರೆ ಇಲ್ಲೊಬ್ಬರಿಗೆ ಗೌರವ ಸಿಗುತ್ತಿದೆ. ಒಂದಲ್ಲ ಐದು ಮಕ್ಕಳ ತಾಯಿಯಾಗಿ ಅಕ್ಕರೆಯಿಂದ ನೋಡಿಕೊಳ್ಳುತ್ತಿರುವಳು. ಶಾಲೆಯ ಉಪಾಧ್ಯಾಯಿನಿಯಾಗಿದ್ದುದರಿದಲೂ ಮಕ್ಕಳಿಗೆ ಪಾಠೋಪಚಾರಗಳು ನಡೆಯುತ್ತಿವೆ ಜೊತೆಗೆ ಮಮತಾಮಯಿಯಾಗಿ ಮೆರೆಯುತ್ತಿರುವಳು. ಈ ಮಕ್ಕಳೆಲ್ಲ ಯಾರೆಂದರೆ ಆ ಮಹಾತಾಯಿಯ ಅಕ್ಕ ತಂಗಿಯರ ಮಕ್ಕಳು.

ಶಾಲೆಯ ಉಪಾಧ್ಯಾಯಿನಿಯಾಗಿ ಸೇರಿಕೊಂಡು ಪಾಠ ಮಾಡುತ್ತಿದ್ದಳು. ಅವಳ ತಂದೆ ತಾಯಿಯರಿಗೆ ಹುಟ್ಟಿದ್ದವರು ನಾಲ್ಕೂ ಹೆಣ್ಣು ಮಕ್ಕಳೇ. ಗಂಡು ಮಗನ ಆಸೆಯನ್ನು ಕೈ ಬಿಟ್ಟು, ಇನ್ನು ಮಕ್ಕಳು ಸಾಕೆಂದು ಇರುವ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಬೆಳೆಸಿದರು. ಎಲ್ಲ ಹೆಣ್ಣು ಮಕ್ಕಳು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದರು. ಮೊದಲನೆಯವಳಿಗೆ ಮದುವೆಯಾಯಿತು. ಎರಡು ವರ್ಷದ ನಂತರ ಗೌರಮ್ಮ ಗಣೇಶ ಆಗಿ ತವರಿಗೆ ಬಂದಿದ್ದಳು.

ಎರಡನೆಯವಳಿಗೆ ಹುಡುಕಲು ಶುರು ಮಾಡಿದರು. ಆದರೆ ಅಪ್ಪನಿಗೆ ಖಾಯಿಲೆ ಬಂದು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿತು. ಇತ್ತ ಬಸುರಿಯಾಗಿದ್ದ ಅಕ್ಕನನ್ನು ನೋಡಿಕೊಳ್ಳಬೇಕಿತ್ತು. ಎಲ್ಲರೂ ಉದ್ಯೋಗಕ್ಕೆ ಹೋಗುವವರೇ. ಆದರೆ ಆಗೆಲ್ಲ ಸಂಜೆ ಬೇಗನೆ ಮನೆ ಸೇರುವ ಅವಕಾಶವಿದ್ದಿತು. ಇತ್ತ ಆಸ್ಪತ್ರೆಯಲ್ಲಿದ್ದ ಅಪ್ಪನಿಗಾಗಿ ಮತ್ತು ಮೊದಲ ಮಗಳ ಆರೈಕೆಗಳಿಂದ ಪ್ರತಿಯೊಬ್ಬರಿಗೂ ಆಯಾಸವಾಗುತ್ತಿತ್ತು. ಆದಷ್ಟು ಬೇಗನೇ ಅಪ್ಪ ಹುಷಾರಾಗಿ ಮನೆಗೆ ಬಂದರು ಮತ್ತು ಅಕ್ಕಳಿಗೆ ಮಗುವಿನ ಜನನವೂ ಆಯಿತು. ಅವಳ ಬಾಣಂತನ ಆರೈಕೆಗೆ ಎರಡನೆಯ ಮಗಳು ಜವಾಬ್ದಾರಿ ವಹಿಸಿಕೊಳ್ಳಲು ತಾನೇ ಮುಂದಾದಳು. ಸ್ವಲ್ಪ ದಿನಗಳ ನಂತರ ಎರಡನೆಯವಳಿಗಾಗಿ ಮದುವೆಗಾಗಿ ಬಂದ ಗಂಡು ಮೂರನೇಯವಳನ್ನು ಮದುವೆಯಾಗಲು ಕೇಳಿಕೊಂಡಳು. ಇಬ್ಬರೂ ನೋಡಲು ಚೆನ್ನಾಗಿದ್ದರು. ಬಂದವರು ಮರುಮಾತಾಡದೆ ಒಪ್ಪಿಕೊಂಡರು. ಅವರುಗಳು ಹೋದ ಮೇಲೆ ಎರಡನೆಯ ಮಗಳ ಮೇಲೆ ಅವಳ ತಾಯ್ತಂದೆಯರು ಹರಿಹಾಯ್ದರು. ಅವಳು ಯಾರಿಗೂ ಉತ್ತರಿಸದೆ ಒಂದು ವಾರದ ನಂತರ ಎಲ್ಲ ಅಕ್ಕ ತಂಗಿಯರಿಗೂ ಬರಹೇಳಿ “ಅಪ್ಪ ಅಮ್ಮ ಸೋದರಿಯರೇ ಕೇಳಿ. ನಾವೆಲ್ಲ ಹೆಣ್ಣುಗಳಾಗಿ ಮದುವೆಯಾಗಿ ಹೊರಟು ಹೋಗುತ್ತೇವೆ ಅಪ್ಪ ಅಮ್ಮನನ್ನು ನಾನು ನೋಡಿಕೊಳ್ಳುತ್ತೇನೆ. ಇನ್ನು ಇದೇ ಮನೆಯಲ್ಲೇ ಇರುತ್ತೇನೆ. ಯಾರೂ ಬಲವಂತ ಮಾಡಬೇಡಿ. ನೀವೆಲ್ಲರೂ ಬಂದು ಹೋಗುತ್ತಿರಿ” ಎಂದಳು.

“ಅಯ್ಯೋ ನೀನು ವೀಣೆ ಹಿಡಿದು ನುಡಿಸಿದರೆ ಸಾಕ್ಷಾತ್ ಶಾರದಾದೇವಿ ಹಾಗೇ ಕಾಣ್ತೀಯ ಅಂತ ಸುಮ್ಮನೆ ಹೇಳಿದ್ದು ಈಗ ನಿಜವಾಗಲೂ ಹಾಗೇ ಆಗ್ತಿದೀಯಲ್ಲೇ” ಎಂದು ದುಃಖಿಸುತ್ತ ಹೇಳುತ್ತಿದ್ದರು. ಎಲ್ಲರಿಗೂ ಮದುವೆಗಳಾಯ್ತು. ಅಪ್ಪ ಅಮ್ಮನ ಕಾಲವಾಯ್ತು.

ಸೋದರಿಯರ ಐದು ಮಕ್ಕಳು ಬಂದು ಹೋಗುತ್ತಿದ್ದಾರೆ ಈಗ ಆಟಗಳು ಪಾಠಗಳು ನಡೆಯುತ್ತಿವೆ. ಸಮಾಜದಲ್ಲಿನ ಯಾರಿಂದಲೂ ಅವಳಿಗೆ ಕೊಂಕು ಮಾತುಗಳು ಕೇಳಿ ಬರುತ್ತಿಲ್ಲ. ಎಲ್ಲ ಸಂಭ್ರಮ ಸಮಾರಂಭಗಳಿಗೆ ಓಡಾಡಿಕೊಂಡಿದ್ದಾಳೆ. ತ್ಯಾಗದಿಂದ ಎಲ್ಲರಿಗೂ ಬೇಕಾದವಳಾಗಿ ಅವಿವಾಹಿತ ತಾಯಿಯಾಗಿ ಖುಷಿಯಾದ ಜೀವನ ಸಾಗಿಸುತ್ತಿರುವಳು.


  • ಹರಿಹರ ಬಿ ಆರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading