ನಮ್ಮ ಆಯುಧ ಪೂಜೆ ! – ಕೇಶವ ರೆಡ್ಡಿ ಹಂದ್ರಾಳ



ಆಯುಧ ಪೂಜೆ ಅಂದಿನಂತೆ ಇಂದು ಕೂಡಾ ನಡೆಯುತ್ತಿದೆ, ಆದರೆ ಅಂದು ಹಳ್ಳಿಗಾಡಿನಲ್ಲಿ ಕುಶಲೋಪರಿ ಮಾತುಗಳು ಈಗ ಮರೆಯಾಗಿವೆ. ಈಗೇನಿದ್ದರೂ ಫಾರ್ಮಲ್ relations ಉಸಿರಾಡುತ್ತಿವೆ ಎಂದು ತಮ್ಮ ಹಳೆಯ ನೆನಪನ್ನು ಓದುಗರ ಮುಂದೆ ಲೇಖಕ,ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರು ಹಂಚಿಕೊಂಡಿದ್ದಾರೆ. ಮುಂದೆ ಓದಿ…

ನಮ್ಮ ಬಯಲು ಸೀಮೆಯ ಹಳ್ಳಿಗಾಡಿನಲ್ಲಿ ದಸರಾ ಎಂಬ ಪದಕ್ಕೆ ಈಗಲೂ ಅಂಥ ಕಿಮ್ಮತ್ತೇನೂ ಇಲ್ಲ. ಕಿಮ್ಮತ್ತಿರುವುದೇ ಆಯುಧ ಪೂಜೆಗೆ. ನಾವು ಪ್ರೈಮರಿ ಹಾಗೂ ಮಿಡ್ಲಿಸ್ಕೂಲುಗಳಲ್ಲಿ ಓದುತ್ತಿದ್ದಾಗ ದಸರಾ ಎಂಬ ಪದದ ಜೊತೆಗೆ ರಜ ಎಂಬ ಪದವೂ ತೆಕ್ಕೆಯಾಕಿಕೊಂಡಿರುತ್ತಿದ್ದುದ್ದರಿಂದ ದಸರಾ ಎಂಬ ಪದ ಬೆಲ್ಲದಂಥ ಅಕ್ಕರೆಯ ಸಿಹಿಯನ್ನೇ ಸೂಸುತ್ತಿತ್ತು.

ಫೋಟೋ ಕೃಪೆ : edexlive

ಹದಿನೈದು ದಿನಗಳ ಕಾಲ ಬರುತ್ತಿದ್ದ ದಸರಾ ರಜ ಹದಿನೈದು ಗಂಟೆಗಳಂತೆ ಅದ್ಯಾವ ಗಳಿಗೆಯಲ್ಲಿ ಕಳೆದುಹೋಗಿ ಬಿಡುತ್ತಿತ್ತೋ ಗೊತ್ತೇ ಆಗುತ್ತಿರಲಿಲ್ಲ. ಇಂಥ ದಸರಾ ರಜೆಯಲ್ಲಿ ಬರುತ್ತಿದ್ದ ಆಯುಧಪೂಜೆಯನ್ನು ನಮ್ಮಪ್ಪ ಘನವಾಗೇ ಆಚರಿಸುತ್ತಿದ್ದ. ಪೂಜೆಗೆ ಕೃಷಿ ಪರಿಕರಗಳಾದ ನೇಗಿಲು, ಸನಿಕೆ, ನೊಗ, ಗುದ್ದಲಿ, ಕೊಡಲಿ, ಉಳ್ಳಾರಿ, ಕುರ್ಜಿಗೆ ಇತ್ಯಾದಿಗಳನ್ನು ಇಡುತ್ತಿದ್ದನಲ್ಲದೆ ಮುಖ್ಯವಾಗಿ ಎತ್ತಿನ ಗಾಡಿಯನ್ನು ಅಲಂಕರಿಸಿ ಎತ್ತುಗಳ ಜೊತೆ ಪೂಜೆ ಮಾಡಿ ಮಕ್ಕಳನ್ನು ಕೂರಿಸಿಕೊಂಡು ಊರಲ್ಲಿ ಎರಡು ಮೂರು ಸುತ್ತು ಬರುತ್ತಿದ್ದ. ಇಪ್ಪತ್ತು, ಮುವತ್ತು ಸೇರು ಬರುಗಿಗೆ (ಕಡ್ಲೆ ಪುರಿ) ಎರಡು ಕೆಜಿ ಖಾರಾಬೂಂದಿ ಮಿಕ್ಸ್ ಮಾಡಿ, ಏಳೆಂಟು ತೆಂಗಿನಕಾಯಿ ಒಡೆದು, ತೆಂಗಿನಕಾಯಿ ಚೂರುಗಳನ್ನು ಪುರಿಯಲ್ಲಿ ಬೆರೆಸಿ ಬಂದವರಿಗೆಲ್ಲ ಮಸ್ತಾಗಿ ಸರ್ಪು ಹಂಚುತ್ತಿದ್ದ. ಆ ನಂತರ ಕರೆಂಟ್ ರೂಮಿನ ಹತ್ತಿರ ಹೋಗಿ ಪಂಪು, ಮೋಟಾರ್, ಸ್ಟಾರ್ಟರ್ ಗಳಿಗೂ ಪೂಜೆಮಾಡಿಕೊಂಡು ಬರುತ್ತಿದ್ದ.

ಫೋಟೋ ಕೃಪೆ : edexlive

ನಾನು ಏಳನೆಯ ಕ್ಲಾಸಿನಲ್ಲಿದ್ದ ವರ್ಷ ಕೂಡಾ #ಆಯುಧ_ಪೂಜೆಯನ್ನು ಚನ್ನಾಗಿಯೇ ಮಾಡಿ ಸರ್ಪು ಹಂಚಿದ್ದ. ಅವೊತ್ತು ಮಾದಿಗರ ಬಸ್ತೆಮ್ಮ, ಸಂಜೀವಮ್ಮ, ಹೊಲೆಯರ ಸಿನ್ಗಂಗಮ್ಮ ಕೂಡಾ ಸರ್ಪಿನ ಟೈಮಿಗೆ ಬಂದಿದ್ದರು. ಈ ಮೂವರು ಹೆಂಗಸರೂ ಊರಿನ ಎಂಥ ಘನವಾದ ಕುಳದ ಜೊತೆಗೆ ಆಗಲಿ ಎಗ್ಗಿಲ್ಲದೆ ನೇರಾನೇರ ತಮಾಷೆಯಾಗಿ ಮಾತನಾಡುತ್ತಿದ್ದರು. ನಮ್ಮಪ್ಪ ಸುಮಾರಾಗಿಯೇ ಅವರ ಸೆರಗುಗಳಿಗೆ ಕಡ್ಲೆಪುರಿ ಸುರಿದಿದ್ದ. ಬಸ್ತೆಮ್ಮ ಪುರಿಯನ್ನು ಬಾಯಿಗೆ ಸುರಿದುಕೊಂಡು ನಮಲುತ್ತಾ ” ಎಲ್ಲಾ ಆಯುಧಗಳ ಪೂಜೇನೂ ಚನ್ನಾಗಿ ಮಾಡ್ದೇನಪ್ಪ ಸಂಜೀವಣ್ಣಯ್ಯ” ಎಂದು ಕೇಳಿದ್ದಳು.



ನಮ್ಮಪ್ಪನೂ ಬುರುಗನ್ನು ಮುಕ್ಕುತ್ತಾ ” ನೀನೆ ನೋಡು ಬಸ್ತೆಮ್ಮ ” ಎಂದು ಸಿಂಗರಿಸಿದ್ದ ಎತ್ತು, ಗಾಡಿಗಳ ಕಡೆ ನೋಡಿದ್ದ. ” ನಿಕ್ಕರ್ನಾಗಿರೋ ಆಯುಧಕ್ಕೆ ಪೂಜೆ ಮಾಡ್ದೇನಪ್ಪ, ಅದೇ ಬೋ ಮುಖ್ಯವಾದ್ದು ” ಎಂದಿದ್ದಳು. ಅಲ್ಲೇ ಬುರುಗು ಮೆಲ್ಲುತ್ತಾ ಕೂತಿದ್ದ ಮಾದಿಗರ ಮುದ್ದಯ್ಯ ” ಬಸ್ತೆಮ್ಮಕ್ಕಯ್ಯ ನೀನಿದ್ದೀಯಲ್ಲ..” ಎಂದು ಮಾತು ತೆಗೆದಿದ್ದ. ಬಸ್ತೆಮ್ಮ ” ನಾನೇನು ಅಪದ್ದ ನುಡಿದ್ನೇನೋ ಮುದ್ದಯ್ಯ, ಜಗತ್ತಿನಾಗೆ ಅದಕ್ಕಿಂತ ಮ್ಯಾಮ್ಮೇರಿ ಆಯುಧ ಯಾವುದೈತೆ ಹೇಳು ಮತ್ತೆ”ಎಂದಿದ್ದಳು. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಸಿನ್ಗಂಗಮ್ಮ ” ಸಂಜೀವಣ್ಣಯ್ಯನ ಆಯುಧಕ್ಕೇನು ಗುಲುಗಾಗಿಲ್ಲ ಹೇಳು, ಘನವಾಗೇ ಐತೆ. ಅಷ್ಟಿಲ್ದೆ ಏಳು ಮಕ್ಕಳ ತಂದೆ ಆದ್ನ” ಎಂದು ಗುಲಗುಲ ನಕ್ಕಿದ್ದಳು. ನಮ್ಮಪ್ಪ ” ನೀವಿದ್ದೀರಲ್ಲ..” ಎಂದು ನಾಚಿಕೆಯಿಂದ ಅವರ ಕೈತುಂಬಾ ಎಲೆಅಡಿಕೆ ಇಟ್ಟು ಬಣವೆಯ ಕಡೆ ಹೋಗಿದ್ದ. ಕಾಳ್ರಂಗಮ್ಮಜ್ಜಿಯ ಮಗ ಗೂನ್ ತಿಮ್ಮಪ್ಪನಂತೂ ಗೊಟ್ಟ, ಗೂಟ, ಬಾರುಗೋಲುಗಳನ್ನೂ ಆಯುಧಪೂಜೆಗೆ ಇಡುತ್ತಿದ್ದ. ಸರ್ಪು ಮಾತ್ರ ಹಂಚುತ್ತಿರಲಿಲ್ಲ. ಪೂಜೆಗೆ ಒಡೆದ ತೆಂಗಿನಕಾಯಿಯ ಚೂರುಗಳನ್ನೇ ಹಂಚುತ್ತಿದ್ದ. ತಳವಾರ ಓಬಮ್ಮ ” ತಿಮ್ಮಪ್ಪ ಯಾಸಟ್ಟೆ ನಿನ್ ಗೂಟುಕ್ಕೂ ಅರಶಿನ, ಕುಂಕುಮ ಇಟ್ಕೊಂಡು ಪೂಜೆ ಮಾಡು ” ಎಂದು ತಮಾಷೆಯಾಗಿ ಮಾತನಾಡುತ್ತಿದ್ದದ್ದು #ಮದುವೆಯಾದ ನಂತರವೂ ನಾನು ಕೇಳಿಸಿಕೊಂಡಿದ್ದೇನೆ ! ಬದುಕಿಗೆ ನೆರವಾಗುವ ಆಯುಧಗಳನ್ನು ಪೂಜಿಸುವುದರಲ್ಲಿ ತಪ್ಪೇನೂ ಇಲ್ಲ. ಹಳ್ಳಿಗಾಡಿನ ಅಂಥ ಕುಶಾಲು ಮಾತುಗಳು ಈಗ ಮರೆಯಾಗಿವೆ. ಈಗೇನಿದ್ದರೂ ಫಾರ್ಮಲ್ relations ಉಸಿರಾಡುತ್ತಿವೆ.


  • ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW