ಕಾಶ್ಮೀರದ ಹಾಳುಹಂಪೆ ನಾರಾನಾಗ್ -ಡಾ. ಗಜಾನನ ಶರ್ಮ



ಕಾಶ್ಮೀರದ ಅನುಭವ ಮತ್ತು  ನಾರಾನಾಗ್ ದೇಗುಲ ಸಮುಚ್ಛಯದ ಇತಿಹಾಸವನ್ನು ಖ್ಯಾತ ಲೇಖಕ ಗಜಾನನ ಶರ್ಮ ಅವರ ಲೇಖನಿಯಲ್ಲಿ, ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ…

“ಕಾಶ್ಮೀರದ ಹಾಳುಹಂಪೆ ನಾರಾನಾಗ್”
ವಿನಾಶದಂಚಿನಲ್ಲಿದೆ – ಪಾಂಡವರು
ನಿರ್ಮಿಸಿದ್ದೆನ್ನಲಾಗುವ ಬೃಹತ್
ಸನಾತನ ದೇಗುಲ ಸಮುಚ್ಛಯ..

ವಾಯುವ್ಯ ದಿಕ್ಕಿನಲ್ಲಿ ಶ್ರೀನಗರದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿದೆ ನಾರಾನಾಗ್ ಎಂಬ ಹಳ್ಳಿ. ಕಾಶ್ಮೀರ ರಾಜ್ಯದ ಗಂಡರ್ಬಾಲ್ ಜಿಲ್ಲೆಗೆ ಸೇರಿದ ವಾಂಗಟ್ ಕಣಿವೆಯ ಈ ಹಳ್ಳಿಗೆ ತಲುಪಲು ನಾವು ಶ್ರೀನಗರ – ಲೆಹ್ ಹೆದ್ದಾರಿಯಲ್ಲಿ ಸಿಂಧ್ ನದೀತೀರದ ಕಂಗನ್ ಪಟ್ಟಣದವರೆಗೂ ಸಾಗಿ, ಅಲ್ಲಿಂದ ಸುಮಾರು ಹದಿನಾರು ಕಿಲೋಮೀಟರ್ ದೂರ ದೇವಧಾರು, ಚೀನಾರ್, ಮುಂತಾದ ಸೂಚೀಪರ್ಣ ವೃಕ್ಷಗಳಿಂದ ನಿಬಿಡವಾದ ವಾಂಗಟ್ ಕಣಿವೆಯಲ್ಲಿ ಸಾಗಬೇಕು. ನಾರಾನಾಗ್ ಒಂದು ಪುಟ್ಟ ಹಳ್ಳಿ. ಭೂತೇಶರ್ ಬೆಟ್ಟಕ್ಕೆ ಆತುಕೊಂಡಂತಿರುವ ಈ ಹಳ್ಳಿಯನ್ನು ವಾಂಗತ್ ಎಂದೂ ಕರೆಯಲಾಗುತ್ತದೆ. ಕಾಶ್ಮೀರದ ಸನಾತನ ಶಿಲ್ಪಕಲೆ ಮತ್ತು ಗತ ಸಾಂಸ್ಕೃತಿಕ ವೈಭವಕ್ಕೆ ಬಹುದೊಡ್ಡ ಸಾಕ್ಷಿಯಾಗಿರುವ ಈ ತಾಣ ಇಂದು ವಿನಾಶದ ಅಂಚಿಗೆ ತಲುಪಿರುವುದು ನಮ್ಮ ಪರಂಪರೆಯ ದೌರ್ಭಾಗ್ಯ.

ಮೂಲತಃ ಪಾಂಡವರು ನಿರ್ಮಿಸಿದ್ದೆನ್ನುವ ಐತಿಹ್ಯ ಹೊಂದಿರುವ, ಆಯತಾಕಾರಕ್ಕೆ ಕತ್ತರಿಸಲ್ಪಟ್ಟ ಬೃಹತ್ ಗ್ರಾನೈಟ್ ಶಿಲೆಗಳಿಂದ ನಿರ್ಮಾಣಗೊಂಡಿರುವ ಈ ಬೃಹತ್ ದೇವಾಲಯ ಸಮುಚ್ಛಯ ಪ್ರಮುಖವಾಗಿ ಎರಡು ಗುಂಪು ದೇಗುಲ ಸಂಕೀರ್ಣಗಳಿಂದ ಗುರುತಿಸಲ್ಪಡುತ್ತದೆ. ಮೊದಲ ಗುಂಪಿನ ಏಳು ದೇಗುಲ ಸಮುಚ್ಛಯಗಳು #ಭೂತೇಶರ್ ( ಶಿವ ) ದೇವರಿಗೆ ಸಂಬಂಧಪಟ್ಟಿದ್ದು ಅದನ್ನು ಚಕ್ರವರ್ತಿ ಅಶೋಕನ ಮಗ ಜಲೋಕನ ಕಾಲಕ್ಕೆ ಅನ್ವಯಿಸಲಾಗಿದೆ. ಈ ಮೊದಲೇ ಹೇಳಿದಂತೆ ಇದನ್ನು ಆಯಾತಾಕಾರಕ್ಕೆ ಕತ್ತರಿಸಲ್ಪಟ್ಟ ಬೃಹತ್ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾಗಿದ್ದು, ಅದನ್ನು ತಕ್ಷಶಿಲೆಯ ಕಂಜೂರ್ ನಿರ್ಮಾಣಗಳ ರೀತಿಯಲ್ಲೇ ಸುಣ್ಣದ ಮಿಶ್ರಣದ ಒಣಗಾರೆಗಳಿಂದ ಪರಸ್ಪರ ಜೋಡಿಸಲಾಗಿದೆ. ಪ್ರಮುಖ ದೇಗುಲವು ಸುಮಾರು ಇಪ್ಪತ್ತೈದು ಅಡಿಗಳ ಚಚ್ಚೌಕಾರದಲ್ಲಿದ್ದು ಅದರ ಪಾಳುಬಿದ್ದ ಗೋಪುರವನ್ನು ಏಕಶಿಲೆಯಿಂದ ನಿರ್ಮಿಸಿದ್ದೆಂದು ಉಲ್ಲೇಖಗಳು ಸಾರುತ್ತಿದ್ದರೂ ಅದೀಗ ಶಿಥಿಲವಾಗಿರುವುದರಿಂದ ನಮಗೆ ಅದು ತಿಳಿಯುವುದಿಲ್ಲ. ಅದರ ಮೇಲ್ಛಾವಣಿಯನ್ನು ಕಂಜೂರ್ ಶಿಲೆಗಳಿಂದ ನಿರ್ಮಿಸಲಾಗಿದೆ ಮತ್ತು‌ ಅದರ ಕೇಂದ್ರವು ಕಮಲದ ಕೆತ್ತನೆ ಹೊಂದಿದೆ ಎಂಬ ಉಲ್ಲೇಖಗಳಿವೆ. ಇಡೀ ದೇಗುಲ ಸಮುಚ್ಛಯಯಗಳ ಪ್ರಾಂಗಣವನ್ನು ಭಾರೀ ಗ್ರಾನೈಟ್ ಶಿಲೆಗಳ ತುಂಡುಗಳಿಂದ ನಿರ್ಮಿಸಲಾಗಿದ್ದು ಈ ಪ್ರಾಕಾರವು ಇಡೀ ದೇಗುಲ ಸಮುಚ್ಛಯಕ್ಕೆ ರಕ್ಷಣೆಯಾಗಿತ್ತು ಎಂದು ಹೇಳಲಾಗಿದ್ದರೂ ಈಗ ನಮಗೆ ಹರಡಿಬಿದ್ದ ಬೃಹತ್ ಆಯಾತಾಕಾರದ ಶಿಲೆಗಳಷ್ಟೇ ಕಾಣುತ್ತವೆ. ಈ ನಿರ್ಮಾಣವನ್ನು ಕಾಶ್ಮೀರೀ ನಿರ್ಮಾಣಗಳ ಮೇಲೆ ಉಂಟಾದ ಗ್ರೀಕೋ ರೋಮನ್ ನಿರ್ಮಾಣದ ಪರಿಣಾಮ ಎಂಬುದು ನಿರ್ಮಾಣ ಶಾಸ್ತ್ರಜ್ಞರ ಅಭಿಪ್ರಾಯ. ಇಲ್ಲಿಂದ ಪಶ್ಚಿಮಕ್ಕೆ ಸುಮಾರು ನೂರು ಮೀಟರ್ ದೂರದಲ್ಲಿರುವ ಎರಡನೇ ದೇಗುಲ ಸಮುಚ್ಛಯದತ್ತ ಸಾಗಲು ಅಗಲ ಮತ್ತು ಭಾರೀ ಗ್ರಾನೈಟ್ ಶಿಲೆಗಳಿಂದ ನಿರ್ಮಾಣವಾದ ಮೆಟ್ಟಿಲುಗಳುಳ್ಳ ಅಗಲವಾದ ಸುಸ್ಥಿರ ಬೀದಿಯನ್ನು ನಿರ್ಮಿಸಲಾಗಿದೆ. ಈ ದೇಗುಲ ಸಮುಚ್ಛಯಕ್ಕೆ ಎರಡು ಪ್ರಾಂಗಣವುಳ್ಳ ದ್ವಾರಗಳಿವೆ. ಇವು ಪೂರ್ವದಲ್ಲಿ ನಾಲ್ಕು ಸ್ತಂಭಗಳ ಸ್ವಾಗತ ಕಮಾನುಗಳನ್ನು ಹೊಂದಿದ್ದ ಕುರುಹುಗಳು ಸ್ಪಷ್ಟವಾಗಿ ಕಾಣುತ್ತವೆ. ಇಲ್ಲಿ ಮೇಲ್ಛಾವಣಿಗಳಿಲ್ಲದ ಆರಕ್ಕೂ ಹೆಚ್ಚು ದೇವಾಲಯಗಳು ಅರೆಬರೆ ಸ್ಥಿತಿಯಲ್ಲಿ ಇತಿಹಾಸದ ಹಿಮಗರ್ಭದಲ್ಲಿ ಅಡಗಿದ ವೈಭವಕ್ಕೆ ಸಾಕ್ಷಿಗಳಾಗಿ ನಿಂತಿವೆ.



ಇಲ್ಲಿ ಕಂಡುಬರುವ ಮಹತ್ವದ ಮತ್ತು ಅಚ್ಚರಿಯ ನಿರ್ಮಾಣವೆಂದರೆ ಸುಮಾರು ನೂರು ಮೀಟರ್ ಉದ್ದ ಮತ್ತು ಅರವತ್ತೇಳು ಮೀಟರ್ ಅಗಲದ ಹನ್ನೆರಡು ಪಿಲ್ಲರ್ ಬೇಸ್ ಗಳನ್ನು ಹೊಂದಿದ ಕಟ್ಟಡದ ವೇದಿಕೆ ಮತ್ತು ಅದರ ತಳಪಾಯ. ಇದಲ್ಲದೆ ಇಲ್ಲಿ ಇನ್ನೂ ಆರು ಚಿಕ್ಕ ಚಿಕ್ಕ ಅರ್ಧಮರ್ಧ ದೇಗುಲಗಳು ಅರೆನಗ್ನ ಸ್ಥಿತಿಯಲ್ಲಿ ನಿಂತಿವೆ….

This slideshow requires JavaScript.

ಈ ತಾಣವು ಬಹಳ ಹಿಂದಿನ ಕಾಲದಿಂದಲೂ ಯಾತ್ರಾರ್ಥಿಗಳ ಮತ್ತು ಆಸ್ತಿಕರ ಶ್ರದ್ಧಾಕೇಂದ್ರವಾಗಿತ್ತೆಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಈ ಇಡೀ ದೇಗುಲ ಸಮುಚ್ಛಯವನ್ನು ಸೋದರತೀರ್ಥ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಈ ಎರಡೂ ದೇಗುಲ ಸಮುಚ್ಛಯಗಳಿಗೆ ಪವಿತ್ರ ಜಲವನ್ನೂಡಲು ಇವುಗಳ ಉತ್ತರ ದಿಕ್ಕಿನಲ್ಲಿ ಸೋದರತೀರ್ಥವೆಂಬ ಸ್ಪಟಿಕ ಶುದ್ಧ ಜಲ ಸನ್ನಿಧಾನವಿರುವ ಆಯತಾಕಾರದ ಪುಷ್ಕರಣಿಯೊಂದಿದೆ. ಈ ಪುಷ್ಕರಣಿಗೆ ನೀರು ಬರುವುದು ಭೂತೇಶರ್ ಪರ್ವತದ ಅಡಿಯಿಂದ. ಸ್ಥಳೀಯರ ಹೇಳಿಕೆಯ ಪ್ರಕಾರ ಪುಷ್ಕರಣಿಗೆ ನೀರು ಹರಿದು ಬರುತ್ತಿರುವುದು ಹರ್ಮುಖ ಪರ್ವತದ ಭುಜ ಪ್ರದೇಶದಲ್ಲಿರುವ ಪವಿತ್ರ ಗಂಗಬಾಳ್ ಸರೋವರದಿಂದ ಮತ್ತು ಅಲ್ಲಿಂದ ಪುಷ್ಕರಣಿಯವರೆಗೂ ಕಲ್ಲಿನ ಪೈಪುಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಅಳವಡಿಸಿದ್ದಾರೆ ಎಂಬುದು. ಅದು ಹೇಗೂ ಇರಲಿ, ಇಲ್ಲಿಂದ ಮಾತ್ರ ವಿವಿಧ ದೇಗುಲಗಳಿಗೆ ಶುದ್ಧ ಜಲ ಸಾಗುತ್ತಿದ್ದುದು ಕಲ್ಲುಕಂಬಗಳ ಮೇಲೆ ನಿರ್ಮಿಸಲ್ಪಟ್ಟ ಶಿಲೆಯ ಹರಿಣಿಗಳಿಂದ ಎಂಬುದು ನಿರ್ವಿವಾದ. ಯಾಕೆಂದರೆ ಅದರ ಕುರುಹುಗಳು,ಭಿನ್ನ ಹರಿಣಿಗಳು ಈಗಲೂ ಕಾಣಸಿಗುತ್ತದೆ ಮತ್ತು ದೇಗುಲಗಳ ಎದುರು ಆಯತಾಕಾರದ ದೊಡ್ಡದೊಡ್ಡ ಶಿಲೆಯ ಬಾನಿಗಳು ( ಟ್ಯಾಂಕ್ ) ಈಗಲೂ ಇವೆ. ಈ ಪುಷ್ಕರಣಿಯ ಹೆಚ್ಚುವರಿ ನೀರು ವಾಂಗತ್ ನದಿಗೆ ಹರಿದು ಹೋಗಲೂ ಶಿಲೆಯಿಂದ ನಿರ್ಮಿಸಲಾದ ಜಲ – ನಿರ್ಗಮನ ವ್ಯವಸ್ಥೆಯೂ ಇಂದಿಗೂ ಸುವ್ಯವಸ್ಥಿತವಾಗಿದೆ. ಈ ದೇಗುಲ ಸಮುಚ್ಛಯದ ಪಕ್ಕದಲ್ಲೇ ಕಣಿವೆಯ ಹಿಂದಿನ ಬಹುದೂರದ ಪರ್ವತಗಳ ನೀರ್ಗಲ್ಲುಗಳ ಕರಗಿ ಕಲ್ಲುಬಂಡೆಗಳ ಮೇಲೆ ಕುಣಿಕುಣಿದು ಹಾಲುಹಳ್ಳವಾಗಿ ಹರಿದು ಬರುತ್ತಿರುವ ವಾಂಗತ್ (ಕನಕನಿ) ನದಿ ಸದಾ ಕಲಕಲ ನಿನಾದದೊಂದಿಗೆ ದೇಗುಲದಲ್ಲಿ ಧ್ಯಾನ ನಿರತರಾಗುವರ ಆಸ್ತಕರ ಪಾಲಿಗೆ ದಿವ್ಯತೆಯ ಹಿನ್ನೆಲೆ ಒದಗಿಸುತ್ತದೆ. (ದುರದೃಷ್ಟವೆಂದರೆ ಇಲ್ಲಿಗೆ ಬರುವವರೂ ಅಪರೂಪ. ನಾವು ಇಲ್ಲಿರುವ ಏಕಮಾತ್ರ ಅವ್ಯವಸ್ಥೆಯ ಆಗರವಾದ ವಸತಿಗೃಹ ಎಟರ್ನಲ್ ಪೀಸ್ ನಲ್ಲಿ ಆ ರಾತ್ರಿ ಕಳೆದು ಮರುದಿನ ಹರ್ಮುಖ ಚಾರಣಕ್ಕೆ ಸಿದ್ದರಾದೆವು.)

ಫೋಟೋ ಕೃಪೆ : tourmyindia

#ನಾರಾನಾಗ್_ದೇಗುಲ ಸಮುಚ್ಛಯದ ಇತಿಹಾಸ:

ಬಹಳ ಹಿಂದಿನಿಂದಲೂ ಈ ದೇಗುಲ ಸಮುಚ್ಛಯಗಳು ಆಯಾಕಾಲಕ್ಕೆ ಕಾಶ್ಮೀರದ ಆಳರಸರಿಂದ ಬೆಂಬಲ ಮತ್ತು ಕೊಡುಗೆಗಳನ್ನು ಸ್ವೀಕರಿಸುತ್ತ ಬಂದಿದೆಯೆಂದು ಹೇಳಲಾಗಿದೆ.‌ ಕಲ್ಹಣನ ರಾಜತರಂಗಿಣಿಯ ಪ್ರಕಾರ ಚಕ್ರವರ್ತಿ ಅಶೋಕನ ಮಗ ಜಲೂಕನು ( ಕ್ರಿಸ್ತ ಪೂರ್ವ 137) ರ ಸುಮಾರಿಗೆ ಇಲ್ಲಿ ಶಿವ ಭೂತೇಶನ ಶಿಲಾಮಯ ದೇಗುಲವೊಂದನ್ನು ನಿರ್ಮಿಸಿ ಅದಕ್ಕೆ ಅಪಾರ ಸಂಪತ್ತನ್ನು ಕೊಡುಗೆಯಾಗಿ ನೀಡಿದ. ಅವನಿಗಿಂತ ಮೊದಲಿದ್ದ ಅರಸು ನರೇಂದ್ರಾದಿತ್ಯನೂ ( ಕ್ರಿಸ್ತಪೂರ್ವ253) ಇಲ್ಲಿ ಹಳೆಯ ದೇಗುಲವೊಂದನ್ನು ನಿರ್ಮಿಸಿದ್ದ. ಮುಂದಿನ ಆಳರಸರುಗಳೂ ಕಾಲಕಾಲಕ್ಕೆ, ಲಲಿತಾದಿತ್ಯ ( ಕ್ರಿಸ್ತಶಕ 713- 755) ಅವಂತಿವರ್ಮ (ಕ್ರಿಸ್ತಶಕ 855-883) ಮುಂದೆ ಜಯಸಿಂಹ, ಅಲ್ಲಿಂದ ಮುಂದೆ ಲಲಿತಾದಿತ್ಯ ಮುಕ್ತಾಪೀಡ ಹೀಗೆ ಹಲವರು ದೇಗುಲಕ್ಕೆ ಅಪಾರ ಕೊಡುಗೆ ನೀಡುತ್ತಲೇ ಬಂದಿದ್ದರು.

ಮುಂದೆ ಹನ್ನೆರಡನೇ ಶತಮಾನದಲ್ಲಿ ಉಚಾಲ (1101-11) ಎಂಬ ಕಾಶ್ಮೀರದ ದೊರೆಯ ಕಾಲದಲ್ಲಿ ಒಮ್ಮೆ ಈ ಇಡೀ ದೇಗುಲ ಸಮುಚ್ಛಯ ಆಕಸ್ಮಿಕ ಅಗ್ನಿಯ ಅನಾಹುತಕ್ಕೆ ಸಿಲುಕಿ ನಾಶವಾಗಿತ್ತು. ಆದರೆ ದೊರೆ ಉಚಾಲನು ಅದನ್ನು ಹಿಂದೆ ಇದ್ದುದಕ್ಕಿಂತ ಸುಭದ್ರವಾಗಿ ಪುನರ್ನಿರ್ಮಿಸಿದನೆಂಬುದು ರಾಜತರಂಗಿಣಿಯ ಉಲ್ಲೇಖ. ಈ ದೇವಾಲಯ ಆಗಾಗ ಹಲವು ದಾಳಿಗಳಿಗೆ ತುತ್ತಾಯಿತೆಂದು ಹೇಳಲಾಗುತ್ತದೆ.

ಸರ್ ಮಾರ್ಕ್ ಆರೆಲ್ ಆಸ್ಟಿನ್ ( 1862- 1943)
ಈ ದೇವಾಲಯ ಸಮುಚ್ಛಯದ ಮಹತ್ವದ ಕುರಿತು ಸರ್ ಮಾರ್ಕ್ ಆರೆಲ್ ಆಸ್ಟಿನ್ ಎಂಬ ಪುರಾತತ್ವ ತಜ್ಞ ವಿಶೇಷವಾಗಿ ಉಲ್ಲೇಖಿಸಿದ್ದಾನೆ. ಸರ್_ಆಸ್ಟಿನ್_ಹಂಗೇರಿಯಲ್ಲಿ ಹುಟ್ಟಿದ ಒಬ್ಬ ಬ್ರಿಟಿಷ್ ಪುರಾತತ್ವ ಶಾಸ್ತ್ರಜ್ಞ. ಆತ ಕೇಂದ್ರ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ನಡೆಸಿದ ಭೂಶೋಧನೆ ಮತ್ತು ಪುರಾತತ್ವ ಸಂಶೋಧನೆಗಳಿಗೆ ಪ್ರಸಿದ್ದನಾದವ. ಆತ ಈ ಪ್ರದೇಶಗಳ ಸನಾತನ ಗ್ರಂಥಗಳು ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಿದವ. ದನ್ಹಾಂಗ್ ಗುಹೆಗಳಲ್ಲಿ ಸಂಗ್ರಹಿಸಲ್ಪಟ್ಟ ಬೌದ್ಧ ಧರ್ಮ್ ಹಳೆಯ ಗ್ರಂಥ ಮತ್ತು ಹಸ್ತಪ್ರತಿಗಳನ್ನು ಬೆಳಕಿಗೆ ತಂದು ಖ್ಯಾತನಾದವ.

ವಿಶೇಷವಾಗಿ ಹರ್ಮುಖ ಪರ್ವತ, ಗಂಗಬಾಳ್, ನಂದಕೋಲ್ ಸರೋವರ ಮತ್ತು ನಾರಾನಾಗ್ ದೇಗುಲ ಸಮುಚ್ಛಯದ ಬಗ್ಗೆ ತನ್ನ ಸಂಶೋಧನಾ ಕೃತಿಗಳಲ್ಲಿ ವಿಶೇಷವಾಗಿ ಉಲ್ಲೇಖಿಸಿರುವ ಸರ್ ಆಸ್ಟಿನ್ ಸಿಂಧ್ ಉಪನದಿಯ ತೀರದಲ್ಲಿ ಟೆಂಟ್ ಹಾಕಿಕೊಂಡು ಬಹುಕಾಲ ಉಳಿದು ಕಲ್ಹಣನ ರಾಜತರಂಗಿಣಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಮಹಾನುಭಾವ. ಈ ಪ್ರದೇಶದಲ್ಲಿ ಸಂಚರಿಸುತ್ತ ಹಿಮಹುಣ್ಣಿಗೆ ತುತ್ತಾಗಿ ತನ್ನ ಬಲಗಾಲಿನ ಬೆರಳುಗಳನ್ನು ಕಳೆದುಕೊಂಡವ.ಇಂತಹ ವಿದೇಶಿ ತಜ್ಞರ ಉಲ್ಲೇಖಗಳಿರದಿದ್ದರೆ ಇಂದು ನಾರಾನಾಗ್ ಮುಂತಾದ ಪರಂಪರೆಯ ಮಹತ್ವದ ತಾಣಗಳು ಜಗತ್ತಿನ ಇತಿಹಾಸದಿಂದ ಕಣ್ಮರೆಯಾಗಿ ಹೋಗುತ್ತಿದ್ದವು ಎಂಬುದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ. ಈತನ ಪ್ರಕಾರ ನಾರಾನಾಗ್ ದೇಗುಲಗಳು ಕಾಲಕಾಲಕ್ಕೆ ಕಾಶ್ಮೀರದ ಪ್ರಾಚೀನ ಅರಸರುಗಳು ‘ಶಿವಭೂತೇಶ’ ಮತ್ತು ‘ಶಿವಜ್ಯೇಷ್ಠೇಶ’ರ ಅರಾಧನೆಗಾಗಿ ನಿರ್ಮಿಸಲ್ಪಟ್ಟವು. ಹಾಗೆಯೇ ಕಾಶ್ಮೀರದ ನೀಲಮತ ಪುರಾಣವೂ ಇಲ್ಲಿನ ಜ್ಯೇಷ್ಠಲಿಂಗವು ಮೊಟ್ಟಮೊದಲು ಋಷಿ ವಸಿಷ್ಟರಿಂದ ಪೂಜಿಸಲ್ಪಟ್ಟಿತ್ತು ಎಂದು ಉಲ್ಲೇಖಿಸುತ್ತದೆ.



ಇದೆಲ್ಲದರ ಹೊರತಾಗಿಯೂ ಇಂದು ನಾರಾನಾಗ್ ಭೂಗಳ್ಳರ ಅತಿಕ್ರಮಣ ಮತ್ತು ಪೋಲಿಪುಂಡರ ಅನಧಿಕೃತ ಚಟುವಟಿಕೆಗಳ ಪರಿಣಾಮವಾಗಿ ಸಂಪೂರ್ಣ ಪಾಳುಬಿದ್ದಿದೆ. ಪುರಾತತ್ವ ಇಲಾಖೆಯ ಸುಪರ್ಧಿಯಲ್ಲಿದ್ದರೂ ಇಲ್ಲಿನ ಮುಖ್ಯ ದೇಗುಲವು ಇಲಾಖೆಯ ಕಸಪೊರಕೆ ಮತ್ತು ಹಾರೆಗುದ್ದಲಿಗಳನ್ನಿಡುವ ಉಗ್ರಾಣವಾಗಿ ಬಳಕೆಯಾಗಿದೆ. ಕಂಡ ಕಂಡಲ್ಲಿ ಭಗ್ನಗೊಂಡ ಶಿವಲಿಂಗಗಳು, ಪಾಣಿಪೀಠಗಳು ಹರಡಿ ಬಿದ್ದು ಎಲ್ಲವೂ ಅನಾಥ ಸ್ಥಿತಿಯಲ್ಲಿ ಚೆಲ್ಲಾಡಿವೆ. ಇಲಾಖೆಯು ತನ್ನ ಕಟ್ಟಳೆಗಳ ಕುರಿತು ಎರಡು ಫಲಕಗಳನ್ನು ನೆಡುವುದರ ಮೂಲಕ ತನ್ನ ಜವಾಬ್ಧಾರಿಯಿಂದ ಕಳಚಿಕೊಂಡಿದೆ. ಸಮುಚ್ಛಯದ ಎರಡು ಗುಂಪು ದೇಗುಲಗಳನ್ನು ಸಂಪರ್ಕಿಸುವ ಮುಖ್ಯಪಥವೇ ಮುಂದಿನ ಹಳ್ಳಿಗಳಿಗೆ ಹೋಗುವ ಮಾರ್ಗ. ಪುಷ್ಕರಣಿಯ ನೀರೇ ಗ್ರಾಮಸ್ಥರಿಗೆ ಕುಡಿಯುವ ನೀರು. ದೇಗುಲ ಸಮುಚ್ಛಯ ಮಕ್ಕಳ ಆಟದ ಮೈದಾನ. ಇದು ಕೇವಲ ನನ್ನ ಅಭಿಪ್ರಾಯವಲ್ಲ.‌ಇಲ್ಲಿನ ಅವ್ಯವಸ್ಥೆಗಳ ಕುರಿತು ‘ಜಹೀದ್ ಮಕ್ಬೂಲ್’ ಎಂಬ ಕಾಶ್ಮೀರಿ ವ್ಯಕ್ತಿಯೇ ಬರೆದ ಲೇಖನವೊಂದನ್ನು ಇಲ್ಲಿ ಲಗತ್ತಿಸಿದ್ದೇನೆ, ಆಸಕ್ತರು ಗಮನಿಸಬಹುದು…


  • ಗಜಾನನ ಶರ್ಮ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW