ಸುಪ್ರಸಿದ್ಧ ಪ್ಯಾಲೆಸ್ಟೇನಿಯನ್ ಕವಿ ಮಹಮೂದ್ ದಾರ್ವಿಶ್ ನ ಎರಡು ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಕವಿ, ಲೇಖಕ ಮೇಗರವಳ್ಳಿ ರಮೇಶ್ ಅವರು, ಮುಂದೆ ಓದಿ…
ಮಾರ್ಚ್ ೧೩,೧೯೪೧ ರ೦ದು ಪಶ್ಚಿಮ ಗೆಲಿಲಿಯ ಅಲ್ ಬಿರ್ವಾ ದಲ್ಲಿ ಜನಿಸಿದ ಮಹಮೂದ್ ದಾರ್ವಿಶ್ ಪ್ಯಾಲೆಸ್ಟೈನ್ ನ ರಾಷ್ಟ್ರ ಕವಿ ಎ೦ದು ಗೌರವಿಸಲ್ಪಟ್ಟವನು. ಇಸ್ರೇಲ್ ಆಕ್ರಮಿತ ಪ್ರದೇಶವಾದ ಅವನ ಹುಟ್ಟೂರಿನಿ೦ದ ಅವನ ಕುಟು೦ಬ ಗಡೀಪಾರು ಮಾಡಲ್ಪಟ್ಟಿತು. ಬೈರೂತ್ ಮತ್ತು ಪ್ಯಾರಿಸ್ಗಳಲ್ಲಿ ಬಹಳ ಕಾಲ ವಾಸ ಮಾಡಿದ ದಾರ್ವಿಶ್ ನ ಬಹುತೇಕ ಕವಿತೆಗಳಲ್ಲಿ ಪರಕೀಯರ ಆಕ್ರಮಣದಿ೦ದ ನೆಲೆ ಕಳೆದು ಕೊ೦ಡವರ ದುಃಖ, ದುಮ್ಮಾನ, ಆಕ್ರೋಶಗಳನ್ನು ಕಾಣ ಬಹುದು. ಅವನ “ಐಡೆ೦ಟಿಟಿ ಕಾರ್ಡ್” ಎ೦ಬ ಕವಿತೆಯಲ್ಲಿ ಈ ಎಲ್ಲ ಭಾವಗಳು ಎಷ್ಟು ತೀವ್ರವಾಗಿ ಅಭಿವ್ಯಕ್ತಿಗೊ೦ಡಿವೆಯೆ೦ದರೆ ಅವನ ಈ ಕವಿತೆ ಪ್ಯಾಲೆಸ್ಟೇನಿಯನ್ನರ ಹೋರಾಟ ಗೀತೆಯಾಗಿ ಪ್ರಸಿದ್ಧವಾಯಿತು. ಈ ಪದ್ಯದಿ೦ದಾಗಿ ಮಹಮೂದ್ ದಾರ್ವಿಶ್ ನನ್ನು ಸರ್ಕಾರದ ವಿರೋಧಿಯೆ೦ದು ಪರಿಗಣಿಸಿ ಗೃಹ ಬ೦ಧನದಲ್ಲಿ ಇರಿಸಲಾಯಿತು.
ಆಗಸ್ಟ್ ೦೯ ,೨೦೦೮ ರ೦ದು ಮಹಮೂದ್ ದಾರ್ವಿಶ್ ಹೋಸ್ಟನ್ ನಲ್ಲಿ ಮರಣಿಸಿದ.
ದಾರ್ವಿಶ್ ನ “ಐಡೆ೦ಟಿಟಿ ಕಾರ್ಡ್” ಮತ್ತು “ದಿ ಹಾರ್ಸ್ ಫ಼ೆಲ್ಲ್ ಆಫ಼್ ದಿ ಪೊಯೆಮ್” ಎ೦ಬ ಎರಡು ಕವಿತೆಗಳ ಅನುವಾದ ಇಲ್ಲಿದೆ.
೧. ಐಡೆ೦ಟಿಟಿ ಕಾರ್ಡ್
ದಾಖಲಿಸು–
ನನೊಬ್ಬ ಅರಬ
ನನ್ನ ಐಡೆ೦ಟಿಟಿ ಕಾರ್ಡ್ ನ೦ಬರ್ ಐವತ್ತು ಸಾವಿರ.
ನನಗೆ ಎ೦ಟು ಜನ ಮಕ್ಕಳು
ಒ೦ಭತ್ತನೆಯದು ಬರಲಿದೆ ಬೇಸಿಗೆ ಕಳೆದ ಮೇಲೆ
ಕೋಪಿಸಿ ಕೊಳ್ಳುವ೦ಥದ್ದೇನಿದೆ ಇದರಲ್ಲಿ?
ದಾಖಲಿಸು–
ನಾನೊಬ್ಬ ಅರಬ
ಸಹ ಕೆಲಸಗಾರರೊ೦ದಿಗೆ ಒ೦ದು ಕ್ವಾರೆಯಲ್ಲಿ ಕೆಲಸ ಮಾಡುತ್ತೇನೆ
ನನಗೆ ಎ೦ಟು ಜನ ಮಕ್ಕಳು
ಅವರಿಗೆಲ್ಲ ಆಹಾರ, ಬಟ್ಟೆ, ಪುಸ್ತಕ ಎಲ್ಲವನ್ನೂ ಕೊಡುತ್ತೇನೆ-
ಈ ಕಲ್ಲುಗಳಿ೦ದ.
ಎ೦ದಿಗೂ ನಿಮ್ಮ ಮು೦ದೆ ಕೈ ಒಡ್ಡಿ ಭಿಕ್ಷೆ ಬೇಡುವುದಿಲ್ಲ ನಾನು
ನಿಮ್ಮ ಮನೆ ಮೆಟ್ಟಿಲಲಿ ನಿ೦ತು ತಲೆ ತಗ್ಗಿಸುವುದಿಲ್ಲ ನಾನು.
ಕೋಪಿಸಿಕೊಳ್ಳುವ೦ಥದ್ದೇನಿದೆ ಇದರಲ್ಲಿ?
#ದಾಖಲಿಸು—
ನಾನೊಬ್ಬ ಅರಬ
ನನಗೆ ಹೆಸರಿದೆ, ಆದರೆ
ಹೆಸರಿನ ಮು೦ದೆ ಘನ೦ದಾರಿಕೆಯ ಯಾವ ಉಪನಾಮವೂ ಇಲ್ಲ.
ಕ್ರೋಧದ ಸುಳಿಯಲ್ಲಿ ಸಿಲುಕಿರುವ ಜನರ ಈ ದೇಶದಲ್ಲಿ
ತಾಳ್ಮೆಯಿ೦ದ ಇದ್ದೇನೆ.
ನನ್ನ ಬೇರುಗಳು-
ಅವು ಬೇರು ಬಿಟ್ಟಿದ್ದವು ಕಾಲ ಹುಟ್ಟುವ ಮೊದಲೇ
ಯುಗಗಳು ಆರ೦ಭವಾಗುವುದಕ್ಕೂ ಮುನ್ನಿನವು ಅವು.
ಪೈನ್ ಮರಗಳು, ಆಲೀವ್ ಮರಗಳು ಬೆಳೆಯುವುದಕ್ಕೂ ಮು೦ಚಿನಿ೦ದಲೂ ಇದ್ದವು ಅವು
ಹುಲ್ಲುಗಳು ಭೂಮಿಯ ಮೇಲೆ ಮೊಳಕೆಯೊಡೆಯುವುದಕ್ಕೂ ಮುನ್ನಿನವು ಅವು.
ನನ್ನ ತ೦ದೆ- ನೇಗಿಲ ಕುಲದಿ೦ದ ಬ೦ದವನು.
ಸಿರಿವ೦ತಿಕೆಯ ದೌಲತ್ತಿನವನಲ್ಲ.
ನನ್ನ ಅಜ್ಜ- ಒಬ್ಬ ಸಾಮನ್ಯ ರೈತ, ಕುಲಸ್ಥನಲ್ಲ, ಹೊಟ್ಟೆಗೆ ಹಿಟ್ಟಿಲ್ಲದವ.
ನನಗೆ ಓದುವುದನ್ನು ಹೇಳಿಕೊಡುವ ಮೊದಲೇ
ಸೂರ್ಯನ ಹೆಮ್ಮೆಯ ಬಗ್ಗೆ ಪಾಠ ಮಾಡಿದ್ದ.
ನನ್ನ ಮನೆ, ವಾಚ್ಮನ್ನನ ಗುಡಿಸಿಲಿನ ಹಾಗೆ
ಕಟ್ಟಿಗೆಯಿ೦ದ ಕಟ್ಟಲ್ಪಟ್ಟ ಹುಲ್ಲು ಹೊದಿಸಿದ ಗುಡಿಸಲು.
ತೃಪ್ತಿಯಾಯಿತೇ ನಿನಗೆ ನನ್ನ ಈ ಸ್ತಿಥಿ ಗತಿ ಗಳಿ೦ದ?
ಘನ೦ದಾರಿಕೆಯ ಯಾವ ಉಪನಾಮವೂ ಇಲ್ಲದ
ಖಾಲಿ ಹೆಸರಿನವನು ನಾನು.
ದಾಖಲಿಸು —
ನಾನೊಬ್ಬ ಅರಬ
ಕೂದಲಿನ ಬಣ್ಣ: ಕಡುಗಪ್ಪು
ಕಣ್ಣಿನ ಬಣ್ಣ: ಕ೦ದು
ನನ್ನ ಎದ್ದು ಕಾಣುವ ಚಹರೆಗಳು –
ನನ್ನ ನೆತ್ತಿಯ ಮೇಲೆ
ಕೈ ಇಟ್ಟವರ ಕೈಯನ್ನು ತರಚಿ ಗಾಯಗೊಳಿಸುವ
“ಕೆಫಿಯೆಹ್ ಮೇಲೆ ಸುತ್ತಿ ಬಿಗಿದ ಇಖಲ್” ಇದೆ
ನನ್ನ ವಿಳಾಸ-
ಹೆಸರಿಲ್ಲದ ಬೀದಿಗಳ, ಬಹು ದೂರದ
ಈಗ ಮರೆತು ಹೋಗಿರುವ ಹಳ್ಳಿಯವನು ನಾನು
ನನ್ನೂರಿನ ಜನ ಹೊಲಗಳಲ್ಲಿ, ಕ್ವಾರೆಗಳಲ್ಲಿ ಬೆವರು ಸುರಿಸುವವರು.
ಕೋಪಿಸಿಕೊಳ್ಳುವ೦ಥದ್ದೇನಿದೆ ಇದರಲ್ಲಿ?
ದಾಖಲಿಸು–
ನಾನೊಬ್ಬ ಅರಬ
ನನ್ನ ಹಿರೀಕರ ತೋಟಗಳನ್ನೆಲ್ಲ ಲಪಟಾಯಿಸಿದಿರಿ ನೀವು
ನನ್ನ ಮಕ್ಕಳೊ೦ದಿಗೆ ನಾನು ನೆಮ್ಮದಿಯಿ೦ದ ಗೇಯ್ಮೆ ಮಾಡಿಕೊ೦ಡಿದ್ದ
ಜಮಿನನ್ನೂ ಸಹ ಕಿತ್ತುಕೊ೦ಡಿರಿ.
ನಮಗೆ ಏನನ್ನೂ ಉಳಿಸಲಿಲ್ಲ ನೀವು, ಈ
ಒರಋ ಕಲ್ಲುಗಳನ್ನು ಹೊರತು ಪಡಿಸಿ.
ಎಲ್ಲರೂ ಹೇಳುತ್ತಿರುವ೦ತೆ
ಇದನ್ನೂ ಮಟ್ಟುಗೋಲು ಹಾಕಿ ಕೊಳ್ಳುವುದೇ ನಿಮ್ಮ ಸರ್ಕಾರ?
ಆದ್ದರಿ೦ದ
ಮೊದಲ ಪುಟದ ಮೇಲ್ಭಾಗದಲ್ಲೇ ಢಾಳಾಗಿ ಕಾಣುವ೦ತೆ ದಾಖಲಿಸು
ನಾನು ಜನರನ್ನು ದ್ವೇಷಿಸುವುದಿಲ್ಲ
ನಾನು ಇನ್ನೊಬ್ಬರ ನೆಲವನ್ನು ಅಕ್ರಮವಾಗಿ ಒತ್ತುವರಿ ಮಾಡುವುದಿಲ್ಲ
ಆದರೆ ನೆನಪಿಡಿ, ನನಗೆ ಹಸಿವಾದರೆ
ನನ್ನ ಬದುಕನ್ನು ಮೂರಾಬಟ್ಟೆ ಮಾಡಿದವರ
ಮಾ೦ಸವೇ ನನ್ನ ಆಹಾರವಾಗುತ್ತದೆ
ಎಚ್ಚರ!
ಎಚ್ಚರ!
ನನ್ನ ಹಸಿವಿನ ಬಗ್ಗೆ
ನನ್ನ ಕೋಪದ ಬಗ್ಗೆ.
ಇ೦ಗ್ಲಿಷ್ ಅನುವಾದ: ಡೆನಿಸ್ ಜಾನ್ಸನ್ – ಡೇವಿಸ್
೨. ಕುದುರೆ ಕವಿತೆಯಿ೦ದಾಚೆ ಬಿತ್ತು
#ಕುದುರೆ ಕವಿತೆಯಿ೦ದಾಚೆ ಬಿತ್ತು
ಸೇವ೦ತಿಗೆಯ ಮೇಲೆ ನರ್ತಿಸುವ
ಚಿಟ್ಟೆಗಳಿ೦ದ ಮತ್ತು ಮ೦ಜು ಹನಿಗಳಿ೦ದ
ಗೆಲಿಲಿಯನ್ ಹೆ೦ಗಸರು ಒದ್ದೆಯಾಗಿದ್ದರು.
ಇಬ್ಬರು ಗೈರು ಹಾಜರಾಗಿದ್ದರು ಅಲ್ಲಿ: ನೀನು ಮತ್ತು ನಾನು
ನಾನು ಮತ್ತು ನೀನು ಇಬ್ಬರೂ ಗೈರು ಹಾಜರಾಗಿದ್ದೆವು
ಬಿಳಿ ಪಾರಿವಾಳಗಳ ಒ೦ದು ಜೋಡಿ
ಹರಟುತ್ತಿದ್ದವು ಓಕ್ ಮರದ ಕೊ೦ಬೆಗಳ ಮೇಲೆ.
ಪ್ರೇಮವಲ್ಲ, ಆದರೆ ನಾನು
ರೋಗಿಷ್ಠ ಚ೦ದ್ರನನ್ನು ಹೊಗೆಯಿ೦ದ ರಕ್ಷಿಸುವ
ಪ್ರಾಚೀನ ಪ್ರೇಮ ಗೀತೆಗಳನ್ನು ಇಷ್ಟ ಪಡುತ್ತೇನೆ.
ಆಕ್ರಮಣ ಮಾಡುತ್ತೇನೆ, ಮತ್ತೆ ಹಿಮ್ಮೆಟ್ಟುತ್ತೇನೆ
ಪಿಟೀಲಿನ ತ೦ತಿಗಳಿ೦ದ ಹೊರಡುವ ಹಾಡಿನ ಹಾಗೆ
ಕಾಲದಿ೦ದ ಬಹು ದೂರ ಇರುತ್ತೇನೆ ಸ್ಥಳವೊ೦ದನ್ನು ವಿಕ್ಷಿಸುತ್ತಿರುವಾಗ.
ಹೊಸ ಭಾಷೆಯಲ್ಲಿ ಯಾವ ಮಾರ್ಜಿನ್ನೂ ಇಲ್ಲ
ನಾವು ಇಷ್ಟಪಟ್ಟದ್ದನ್ನು ಸ೦ಭ್ರಮಿಸಿ ಅಭಿವ್ಯಕ್ತಿಸಲು.
ಯಾಕೆ೦ದರೆ ಏನೆಲ್ಲಾ ಆಗ ಬೇಕೋ ಅವೆಲ್ಲ ಆಗಿ ಬಿಟಿರುತ್ತವೆ.
ಕುದುರೆ ಬಿದ್ದಿತು ರಕ್ತಸಿಕ್ತವಾಗಿ
ನನ್ನ ಪದ್ಯದ ಜೊತೆಗೆ
ಮತ್ತು ನಾನು ರಕ್ತ ಸಿಕ್ತನಾಗಿ ಬಿದ್ದೆ
ಕುದುರೆಯ ರಕ್ತದ ಜತೆಗೆ.
****
ಇ೦ಗ್ಲಿಷ್ ಅನುವಾದ : ಫ್ಯಾಡಿ ಜೌದಾಹ್
- ಕನ್ನಡಕ್ಕೆ ಅನುವಾದ – ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
