ಸಫಾರಿ ವಾಹನದಲ್ಲಿ ಮಹಿಳೆಯರು ಚಿಕ್ಕ ಮಕ್ಕಳಿದ್ದರು. ಆನೆಯ ದಿಂಡು ನಮ್ಮ ವಾಹನದತ್ತ ಕಣ್ಣಾಡಿಸಿದಾಗ ಸಫಾರಿ ವಾಹನದಲ್ಲಿ ಕೂತ ನಾವೆಲ್ಲ ತಣ್ಣಗೆ ಆಗಿ ಹೋಗಿದ್ದೆವು.ಲೇಖಕ ಮಾಲತೇಶ ಅಂಗೂರ ಅವರು ಬಂಡೀಪುರದ ಕಾಡಿನಲ್ಲಿ ಸಪಾರಿ ಮಾಡಿದ ಅನುಭವ ಮತ್ತು ಸುಂದರ ಛಾಯಾಚಿತ್ರವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
“ಅಂಡು ತೋರಿಸಿ ಓಡಿದ ಕಾಡಾನೆ, ಕಣ್ಣಿನಲ್ಲಿಯೇ ಹೆದರಿಸಿದ ಹದ್ದು, ಕಣ್ಮನ ಸೆಳೆವ ಮಾಯಾಮೃಗ”!
ಓದುಗಮಹಾಪ್ರಭು,
ಕಾರ್ಯನಿಮಿತ್ಯ ಮೈಸೂರಿಗೆ ಗೆಳೆಯ ಬಾಪು ನಂದಿಹಳ್ಳಿ ಅವರೊಂದಿಗೆ ಡಿ.೨-೨೦೨೨ರಂದು ಭೇಟಿ ನೀಡಿದ್ದೆ. ಸಮಯಾವಕಾಶ ಇದ್ದ ಕಾರಣಕ್ಕೆ ಡಿ.೩ರಂದು ಶನಿವಾರ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ ಭೇಟಿ ನೀಡುವುದೆಂದು ನಿರ್ಧರಿಸಿ ಹಿಂದಿನ ದಿನರಾತ್ರಿ ಅಂದರೆ, ಶುಕ್ರವಾರ ಮೈಸೂರಿನಿಂದ ಗುಂಡ್ಲುಪೇಟೆಗೆ ಆಗಮಿಸಿದ್ದೆವು. ಗುಂಡ್ಲುಪೇಟೆಯ ವರದಿಗಾರ ಮಿತ್ರರಿಗೆ ಮೊದಲೇ ನಾವು ಬರುವ ವಿಷಯ ತಿಳಿಸಿದ್ದ ಕಾರಣಕ್ಕೆ, ಅವರು ನಮಗೆ ವಸತಿ ವ್ಯವಸ್ಥೆ ಮಾಡಿದ್ದರು. ಬೆಳಿಗ್ಗೆ ೫ಕ್ಕೆ ಎದ್ದು ನಮ್ಮಿಬ್ಬರ ಸವಾರಿ ಗುಂಡ್ಲುಪೇಟೆಯಿಂದ ಬಂಡೀಪುರದತ್ತ ಸಾಗಿತು.
ಬೆಳಿಗ್ಗೆ ೬ಕ್ಕೆ ಬಂಡೀಪುರದಲ್ಲಿ ಸಪಾರಿ ಆರಂಭವಾಗುವ ಕಾರಣಕ್ಕೆ ನಾವು ಬೆಳಿಗ್ಗೆ ೫ಕ್ಕೆ ಎದ್ದು ಬಸ್ ನಿಲ್ದಾಣಕ್ಕೆ ಬಂದರೂ ಬಂಡೀಪುರಕ್ಕೆ ಬಸ್‌ಗಳು ಆರಂಭವಾಗಿರಲಿಲ್ಲ. ಕಾರಣ, ಕಾಡು ಪ್ರಾಣಿಗಳು ವಾಹನಗಳಿಗೆ ಡಿಕ್ಕಿ ಹೊಡೆಯುವುದರಿಂದ ಉಂಟಾಗುವ ಕಾಡು ಪ್ರಾಣಿಗಳ ಸಾವನ್ನು ತಡೆಗಟ್ಟಲು ರಾತ್ರಿ ೯ ರಿಂದ ಬೆಳಿಗ್ಗೆ ೬ ರವರೆಗೆ ಬಂಡೀಪುರ ಕಾಡಿನ ಮೂಲಕ ವಾಹನಗಳಿಗೆ ಪ್ರವೇಶವನ್ನು ನಿಷೇಧಿಸಾಗಿದೆ. ಒಂದು ಕಡೆಗೆ ಯಾವ ವಾಹನಗಳು ಬರುತ್ತಿಲ್ಲ. ಸಮಯ ಮೀರುತ್ತಿದೆ ಎನು ಮಾಡುವುದು? ಎನ್ನುತ್ತಲೇ ಎರಡುಬಾರಿ ಕಾಫಿಯನ್ನು ಹೀರಿದ್ದೆವು.
ಕ್ಯಾಮೆರಾ ಹಿಂದಿನ ಕಣ್ಣು ಮಾಲತೇಶ ಅಂಗೂರ
ಅಷ್ಟರಲ್ಲಿ ತಮಿಳುನಾಡಿಗೆ ಹೋಗುವ ಬಸ್ ನಾವು ನಿಂತಿದ್ದ ಸ್ಥಳದಲ್ಲಿ ಬಂದಿತು. ಆ ಬಸ್‌ನ ಚಾಲಕನಿಗೆ ಕನ್ನಡ ಬರುವುದಿಲ್ಲ!, ನಮಗೆ ತಮಿಳು ಬಾರದು. ಕಡೆಗೆ ನಿರ್ವಾಹಕನಿಗೆ ಬಂಡೀಪುರ ಟೈಗರ್ ಸಫಾರಿ ಸ್ಥಳಕ್ಕೆ ನಮ್ಮನ್ನು ಬಿಡುವಂತೆ ಮನವಿ ಮಾಡಿದಾಗ, ಆತ ನಮ್ಮನ್ನು ಬಸ್‌ಗೆ ಹತ್ತಿಸಿಕೊಂಡು. ಟೈಗರ್ ಸಫಾರಿಯ ಬಳಿ ನಮ್ಮನ್ನು ಇಳಿಸಿದಾಗ ಸಮಯ ೬-೧೫ ಆಗಿತ್ತು. ಅದಾಗಲೇ ಹತ್ತಾರು ಕಾರು, ಜೀಪುಗಳು ಹಲವಾರು ಸಫಾರಿಗೆ ಬಂದಿರುವ ಜನರು ಅಲ್ಲಿದ್ದರು. ಟಿಕೆಟ್ ಕೌಂಟರ್ ಬಳಿ ಸಫಾರಿಯ ದುಬಾರಿ ಶುಲ್ಕ್ ಹಾಗೂ ಕ್ಯಾಮರಾದ ಇನ್ನು ದುಬಾರಿಯ ಶುಲ್ಕ್ ತೆತ್ತು ರಸೀದಿ ಪಡೆದು ಸಫಾರಿ ವಾಹನವನ್ನು ಇತರೇ ಹತ್ತಾರು ಜನರೊಂದಿಗೆ ಏರಿದೆವು.
ಅರಣ್ಯ ಇಲಾಖೆಯ ಗೈಡ್ ವಾಹನದಲ್ಲಿದ್ದವರಿಗೆ “ಗದ್ದಲ ಮಾಡಬೇಡಿ, ಕಾಡು ಪ್ರಾಣಿಗಳು ನಿಮ್ಮ ಕಣ್ಣಿಗೆ ಬಿಳಬಹದು, ಬಿಳದೇ ಇರಬಹುದು. ಯಾವುದಕ್ಕೂ ಅದೃಷ್ಟ ಇದ್ದರೆ ಕಾಡು ಪ್ರಾಣಿಗಳು ಕಾಣಿಸುತ್ತವೆ” ಎಂದ. ನಿಧಾನವಾಗಿ ನಾವಿದ್ದ ಸಫಾರಿ ವಾಹನವು ಕಾಡಿನಲ್ಲಿ ಪ್ರವೇಶಿಸುತ್ತಿದ್ದಂತೆ ಚುಕ್ಕೆಜಿಂಕೆಗಳು ಕಾಣಿಸಿದವು. ನಂತರ ಧೈತ್ಯಾಕಾರದ ಕಾಡಾನೆಗಳ ಹಿಂಡು, ಒಂಟಿ ಆನೆ, ಕೆಂದಳಿಲು, ನವಿಲು, ಹದ್ದು ಕಾಣಿಸಿದವು. ಕಾಡಿನವಾತಾವರಣದಲ್ಲಿ ಆದೀಗ ತಾನೆ ಸೂರ್ಯ ರಷ್ಮಿ ಕಿರಣಗಳು ಬಿಳುತ್ತಿದ್ದ ಕಾರಣಕ್ಕೆ ಕ್ಯಾಮರಾಕ್ಕೆ ಬೆಳಕು ಸ್ಪಂದಿಸುತ್ತಿರಲಿಲ್ಲ. ಮೇಲಾಗಿ ನಾವಿದ್ದ ವಾಹನಕ್ಕೆ ಸೂರ್ಯನ ಬೆಳಕು ಬಿಳುತ್ತಿದ್ದ ಕಾರಣಕ್ಕೆ ಬೆಳಕು ಕ್ಯಾಮರಾಕ್ಕೆ ಸ್ಪಂದಿಸದ ಕಾರಣಕ್ಕೆ ಕೆಲವು ಪ್ರಾಣಿಗಳು ಪೋಟೋಗಳು ಸರಿಯಾಗಿ ಸೆರೆಯಾಗಲಿಲ್ಲ!.
“ಅರಣ್ಯ ಇಲಾಖೆಯ ಸಫಾರಿ ವಾಹನ ಚಾಲಕ ಅವಸರದಲ್ಲಿದ್ದಂತೆ ಕಾಣುತ್ತಿತ್ತು. ಕಾಡಿನಲ್ಲಿ ಪ್ರಾಣಿಗಳಿದ್ದರೂ ಸಹ ಸರಿಯಾಗಿ ಅವುಗಳನ್ನು ತೋರಿಸದೇ ಅವಸವಸರವಾಗಿ ವಾಹನ ಓಡಿಸಿದ”. “ವಾಹನ ಚಲಿಸುವಾಗ ಫೋಟೋ ತಗೆಯುವುದು ಕಷ್ಟದ ಕೆಲಸ!. ಸ್ವಲ್ಪ ಕೈತಪ್ಪಿದರು ಕ್ಯಾಮಾರಕ್ಕೆ ಪೆಟ್ಟಾಗುವು ಸಾಧ್ಯತೆಗಳಿದ್ದ ಕಾರಣಕ್ಕೆ ನಾನು ಅಡ್ಡಾದಿಡ್ಡಿಯಾಗಿ ಚಲಿಸುವು ವಾಹನದಲ್ಲಿದ್ದ ಕಾರಣಕ್ಕೆ ಪ್ರಾಣಿಗಳ ಪೋಟೋ ತಗೆಯುವು ದುಸ್ಸಾ ಕೈಹಾಕಲಿಲ್ಲ!”.

ಕಾಡಿನ ಸಪಾರಿಯ ವೇಳೆ ಒಂದು ಸ್ಥಳದಲ್ಲಿ “ನಾಲ್ಕಾರು ಆನೆಗಳು ತಮ್ಮ ಮಧ್ಯದಲ್ಲಿ ಮರಿಯಾನೆಯನ್ನು ಬಚ್ಚಿಟ್ಟುಕೊಂಡು ನಿಂತಿದ್ದವು. ಆನೆಗಳ ಹಿಂಡಿನ ಸಮೀಪ ಹುಲಿಯೊಂದು ಇರುವ ಕಾರಣಕ್ಕೆ, ಆನೆಗಳು ಜಾಗೃತವಾಗಿದ್ದವು. ಸಂಭವನೀಯ ದಾಳಿಯನ್ನು ತಡೆಯುವ ಕಾರಣಕ್ಕೆ ಮರಿ ಆನೆಯನ್ನು ಸುತ್ತುವರೆದು ಅದರ ರಕ್ಷಣೆಗೆ ಸನ್ನದ್ದವಾಗಿದ್ದವು”.
ಕಾಡಿನಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಅಲ್ಲಿ ನಡೆದ ಘಟನೆಯನ್ನು ಇಲ್ಲಿ ಹೇಳುಬಯಸುವೆ. “ನಾವಿದ್ದ ಸಫಾರಿ ವಾಹನದಲ್ಲಿ ಮಹಿಳೆಯರು, ಚಿಕ್ಕ ಮಕ್ಕಳು ಇದ್ದರು. ಆನೆಗಳು ಹಿಂಡು ಎದುರಾದ ಕಾರಣಕ್ಕೆ ಮಕ್ಕಳು ಮೌನಕ್ಕೆ ಶರಣರಾಗಿದ್ದರು. ಹಿಂಡಿನಲ್ಲಿದ್ದ ಆನೆಯೊಂದು ಸಫಾರಿವಾಹನದ ಕಡೆಗೆ ದುರಗುಟ್ಟಿ ನೋಡುತ್ತಾ ನಿಂತಿತು. ಇನ್ನೇನು ಆನೆ ನಾವಿದ್ದ ವಾಹನದ ಕಡೆಗೆ ನುಗ್ಗಬೇಕು ಎನ್ನುವಷ್ಟರಲ್ಲಿಯೇ ಹಿಂಡಿನಲ್ಲಿದ್ದ ಮರಿ ಆನೆ ಕೊಂಚ ದೂರಕ್ಕೆ ಓಡಿತು. ಇದನ್ನು ಗಮನಿಸಿ ದೊಡ್ಡಾನೆ ಸಫಾರಿ ವಾಹನದತ್ತ ನುಗ್ಗುವ ತನ್ನ ಗುರಿಯನ್ನು ಬದಲಾಯಿಸಿಕೊಂಡು ಸಫಾರಿವಾಹನದಲ್ಲಿದ್ದವರಿಗೆ ತನ್ನ ದೊಡ್ಡ ಅಂಡುತೋರಿಸಿ ಮರಿಯಾನೆ ಓಡಿದ ಸ್ಥಳದತ್ತ ದೌಡಾಯಿಸಿತು”.
“ಅಪಾಯದ ಮುನ್ಸುಚನೆ ಅರಿತಿದ್ದ ಚಾಲಕ ವಾಹನವನ್ನು ಅದಾಗಲೇ ಹಿಮ್ಮುಖವಾಗಿ ಚಲಾಯಿಸಿಕೊಂಡು ವಾಹನವನ್ನು ಆನೆಗಳ ಹಿಂಡಿನಿಂದ ದೂರಕ್ಕೆ ತಂದು ಓಡಿಸಿದ. ಆಷ್ಟರಲ್ಲಿ ಅಲ್ಲಿಗೆ ಸಫಾರಿಗರನ್ನು ಕರೆತಂದಿದ್ದ ಜೀಪ್ಸಿವಾಹನ ಚಾಲಕನಿಗೆ ಆನೆಗಳ ಹಿಂಡು ಮತ್ತು ಹುಲಿಯ ಬಗ್ಗೆ ಮಾಹಿತಿ ನೀಡಿ ವಾರ್ನಿಂಗ್ ಕಾಲ್ ಎಂದು ಏನೇನೋ ಹೇಳಿ ಬೇರೆಹಾದಿಯಲ್ಲಿ ವಾಹನ ಚಲಾಯಿಸಿದ”. ಈ ಘಟನೆ ನಡೆಯುತ್ತಿದ್ದಾಗ ಉಸಿರು ಬಿಗಿಹಿಡಿದುಕೊಂಡು ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ನನಗೆ ಈ ಘಟನೆ ಹೋಸದೇನಾಗಿರಲಿಲ್ಲ. ಈ ರೀತಿಯ ಹಲವಾರು ಘಟನೆಗಳನ್ನು ನಾನು ಕಾಡು-ಮೇಡಿನ ಸುತ್ತಾಟದ ವೇಳೆ ಕಂಡಿರುವೆ. ಆದರೆ ವಾಹನದಲ್ಲಿದ್ದವರು ಭಯಪಟ್ಟಿದ್ದರು.
ಕಾಡುದಾರಿಯಲ್ಲಿ ನಿದಾನವಾಗಿ ಸಫಾರಿ ವಾಹನವು ಚಲಿಸುತ್ತಿದ್ದ ವೇಳೆ ಕಣ್ಣಿನಲ್ಲಿಯೇ ಮರದಲ್ಲಿದ್ದ ಹದ್ದು ಹೆದರಿಸಲು ನೋಡಿತು. ಕಣ್ಮನ ಸೆಳೆವ ಮಾಯಾಜಿಂಕೆಗಳು!, ನವಿಲು ಸೇರಿದಂತೆ ತರೇವಾರಿ ಪಕ್ಷಿಗಳು ಕಾಣಿಸಿದವು. ಹುಲಿಗಳು, ಕಾಡು ನಾಯಿಗಳು, ಕಾಡುಹಂದಿ, ಕರಡಿಗಳು, ಚಿರತೆ, ಜಿಂಕೆ, ಕಡವೆಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆ , ಕಾಡು ಕೋತಿ ಇತ್ಯಾದಿಗಳು ಇವೆ, ಅದೃಷ್ಟ ಇದ್ದವರಿಗೆ ಕಾಣಿಸುತ್ತವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ ಭಾರತದ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವು೯೧೨.೦೪ ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ವಯನಾಡ್ (ವನ್ಯಜೀವಿ ಅಭಯಾರಣ್ಯ), ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಬಂಡೀಪುರ ದಕ್ಷಿಣ ಭಾರತದ ಅತಿದೊಡ್ಡ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಏಷ್ಯಾದ ಕಾಡು ಆನೆಗಳ ಅತಿದೊಡ್ಡ ವಾಸಸ್ಥಾನವಾಗಿದೆ. ಬಂಡೀಪುರವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. ಬಂಡೀಪುರ ಅರಣ್ಯ ಸಫಾರಿ: ಅರಣ್ಯ ಇಲಾಖೆಯಿಂದ ಅರಣ್ಯ ಸಫಾರಿ ಪ್ರತಿದಿನ ಎರಡು ಬಾರಿ ನಡೆಸಲಾಗುತ್ತದೆ. ದೊಡ್ಡ ಗುಂಪುಗಳಲ್ಲಿನ ಸಂದರ್ಶಕರು ಅಗ್ಗದ ಮತ್ತು ಕಡಿಮೆ ಸಮಯದ (೪೫-೬೦ ನಿಮಿಷಗಳು) ಬಸ್ ಸಫಾರಿ ಆಯ್ದುಕೊಳ್ಳಬಹುದು, ಆದರೆ ಜೀಪ್ ಸಫಾರಿಗಳು ಸಣ್ಣ ಗುಂಪುಗಳಿಗೆ ಹೆಚ್ಚು ಸೂಕ್ತವಾಗಿವೆ ಮತ್ತು ದೀರ್ಘವಾದ (೨ ಗಂಟೆಗಳು), ಹೆಚ್ಚು ವಿಶಿಷ್ಟ ಅನುಭವಕ್ಕಾಗಿ ಹೆಸರುವಾಸಿಯಾಗಿದೆ. ಎರಡೂ ಸಫಾರಿಗಳು ಬೆಳಗ್ಗೆ ೬ ರಿಂದ ೯ ಮತ್ತು ಮಧ್ಯಾಹ್ನ ೩ ರಿಂದ ೬ ಗಂಟೆ ನಡುವೆ ಕಾರ್ಯನಿರ್ವಹಿಸುತ್ತವೆ. ಕ್ಯಾಮೆರಾಗಳಿಗೆ ಹೆಚ್ಚುವರಿ ಶುಲ್ಕವಿರುತ್ತದೆ.
ಜೀಪ್ಸಿಯಲ್ಲಿ ಸಫಾರಿ ಮಾಡಬೇಕಾದರೆ ಆನ್‌ಲೈನ್‌ಲ್ಲಿ ನೊಂದಾಯಿಸಿಕೊಳ್ಳಬೇಕು, ಸಫಾರಿ ಆರಂಭವಾಗುವು ಅರ್ಧ ಗಂಟೆಗೂ ಮುನ್ನ ಅಲ್ಲಿರಬೇಕು. ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯ / ಸೀಸನ್: ವರ್ಷದುದ್ದಕ್ಕೂ ಭೇಟಿ ಕೊಡಬಹುದಾದರೂ ಮುಂಗಾರು ನಂತರದ ಅಕ್ಟೋಬರ್-ಫೆಬ್ರವರಿ ಬಂಡೀಪುರಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಪ್ರೀಯ ಓದುಗ ಮಹಾಪ್ರಭುಗಳೆ ನೀವು ಮೈಸೂರು ಭಾಗಕ್ಕೆ ಭೇಟಿ ನೀಡಿದರೆ ಬಿಡುವು ಮಾಡಿಕೊಂಡು ಬಂಡೀಪುರ ಟೈಗರ್ ಸಫಾರಿ ಕೈಗೊಳ್ಳಿ. ಹಾಗೇನೆ ಬಂಡೀಪುರದ ಪಕ್ಕದಲ್ಲಿ ಹಿಮಚ್ಚಾದಿತ ಗೋಪಾಲಸ್ವಾಮಿ ಬೆಟ್ಟವಿದ್ದು, ಈಪ್ರದೇಶ ಹಿಮದಿಂದ ಆವೃತವಾಗಿರುತ್ತದೆ. ಪ್ರಕೃತಿ ಆರಾಧಕಕರು ಹಿಮ, ಹಚ್ಚಹಸಿರಿನಿಂದ ಕಂಗೊಳಿಸುವ ಬೆಟ್ಟ-ಗುಡ್ಡಗಳ ಸೌಂದರ್ಯವನ್ನು ಕಣ್ಣತುಂಬಿಕೊಳ್ಳಬಹುದಾಗಿದೆ.
- ಕ್ಯಾಮೆರಾ ಹಿಂದಿನ ಕಣ್ಣು/ ಲೇಖನ : ಮಾಲತೇಶ ಅಂಗೂರ – ವನ್ಯಜೀವಿ ಛಾಯಾಗ್ರಾಹಕ, ಲೇಖಕ.
