ಈ ಕತೆ ಕಾಲ್ಪನಿಕವಲ್ಲ, ಸವಿತಾ ಅವರ ಜೀವನದಲ್ಲಿ ನಡೆದ ದುರಂತದ ಕತೆ. ಸಾಮಾನ್ಯರಂತೆ ಹುಟ್ಟಿ, ಬೆಳೆದು, ಕೊನೆಗೊಂದು ದಿನ ವೀಲ್ ಚೇರ್ ನಲ್ಲಿ ನೋವನ್ನು ನುಂಗಿ ಬದುಕನ್ನು ಕಟ್ಟಿಕೊಂಡ ಛಲಗಾರ್ತಿ ಹೆಣ್ಣುಮಗಳ ಕತೆ. ಆಕೃತಿ ಕನ್ನಡದಲ್ಲಿ ತಪ್ಪದೆ ಓದಿ…
ಆಕೆ ರೈತರ ಕುಟುಂಬದಲ್ಲಿ ಜನಿಸಿದ ಸಾಂಪ್ರದಾಯಿಕ ಕುಟುಂಬಸ್ಥರ ಹೆಣ್ಣುಮಗಳು. ತಾನು ಫ್ಯಾಷನ್ ಡಿಸೈನರ್ ಆಗಬೇಕು ಎನ್ನುವ ನೂರಾರು ಕನಸ್ಸನ್ನು ಕಟ್ಟಿಕೊಂಡಂತಹ ಸಾಮಾನ್ಯ ಹುಡುಗಿ. ಆದರೆ ಅಪ್ಪ ಅಮ್ಮನಿಗೆ ಮನೆ ಹೆಣ್ಮಗಳು ಹೊರಗೆ ಹೋಗಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. #ಹೆಣ್ಣು, ಮನೆಗೆ ಕಣ್ಣಾಗಿರಬೇಕು, ಹೆಚ್ಚು ಓದಿದರೆ ಆಕೆಯ ಸಮಕ್ಕೆ ಗಂಡು ನೋಡುವುದು ಕಷ್ಟ ಎನ್ನುವ ಮನೋಭಾವ ಅವರ ಮನೆಯವರದಾಗಿತ್ತು. ಆ ಕಾರಣಕ್ಕಾಗಿ ಆಕೆ ಡಿಗ್ರಿ ಮುಗಿಯುತ್ತಿದ್ದಂತೆ ಓದಿಗೆ ಪೂರ್ಣವಿರಾಮ ಹಾಕಿ ಮನೆಯಲ್ಲಿ ಕೂತಳು.
ಇದರ ಮಧ್ಯೆ ತಾಯಿಗೆ ಕಾಡಿದ ಅನಾರೋಗ್ಯದ ಸಮಸ್ಯೆ ಮಾನಸಿಕವಾಗಿ ಕುಗ್ಗಿಸಿದರೂ, ಈ ಸಮಾಜದಲ್ಲಿ ತನ್ನದೆಯಾದ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹಠತೊಟ್ಟು ಟೇಲರಿಂಗ್ ಕಲ್ತು, ಬಣ್ಣ ಬಣ್ಣದ ಬಟ್ಟೆಗಳಿಗೆ ತನ್ನ ಕ್ರಿಯಾಶೀಲತೆಯಿಂದ ಆಕಾರ ನೀಡಿ ತನ್ನ ಆಸೆಗಳಿಗೆ ರೆಕ್ಕೆ ನೀಡಿ ಸಂತೋಷವಾಗಿದ್ದಳು ಆಕೆ. ಅವಳ ಆ ಸಂತೋಷ ಜಾಸ್ತಿ ದಿನ ಉಳಿಯಲಿಲ್ಲ. ಏಕೆಂದರೆ ಅಮ್ಮನ ಆಯಸ್ಸು ಗಟ್ಟಿಯಿರಲಿಲ್ಲ, ಒಂದು ದಿನ ಅಮ್ಮ ಈ ಬದುಕಿಗೆ ವಿದಾಯ ಹೇಳಿ ಹೋದಳು. ಮುಂದೆ ತಾಯಿ ಇಲ್ಲದ ಈಕೆಗೆ ಅಪ್ಪ, ಅಣ್ಣ, ತಮ್ಮ ಒಂದು ಗಂಡು ನೋಡಿ ಮದುವೆ ಮಾಡಿದರು. ಮದುವೆಯ ಮೂರೂ ಗಂಟಿನಿಂದ ಶುರುವಾದ ಸಂಸಾರದ ಜವಾಬ್ದಾರಿ ಮುಂದೆ ಬಾಳ ಬಂಡಿ ಎಳೆಯುತ್ತಾ ಎಳೆಯುತ್ತಾ ಒಂದು ಮುದ್ದಾದ ಗಂಡು ಮಗುವೂ ಕೂಡಾ ಜನಿಸಿತು. ಮಗುವಿನ ಲಾಲನೆ – ಪಾಲನೆಯ ಜೊತೆಗೆ ಕ್ರಿಯಾಶೀಲ ವ್ಯಕ್ತಿತ್ವ ಇದ್ದ ಈಕೆ ನಿರುಪಯುಕ್ತ ವಸ್ತುಗಳಿಂದ ಹೊಸದೊಂದು ವಸ್ತುವನ್ನಾಗಿ ಮಾಡಿ ಸಂಭ್ರಮಿಸುತ್ತಿದ್ದಳು.
ಸವಿತಾ ಮದುವೆಯಲ್ಲಿ ಅಪ್ಪನೊಂದಿಗೆ ತಗೆಸಿಕೊಂಡ ಫೋಟೋ
ಇದರ ಮಧ್ಯೆ ನೋಡು ನೋಡುತ್ತಿದ್ದಂತೆ ಮಗುವಿಗೆ ನಾಲ್ಕು ವರ್ಷ ತುಂಬಿತು. ಗಂಡ, ಹೆಂಡ್ತಿ, ಮುದ್ದಿನ ಮಗು ಪುಟ್ಟದಾದ ಸುಂದರ ಕುಟುಂಬದಲ್ಲಿ ಒಂದು ದಿನ ದೊಡ್ಡ ಬಿರುಗಾಳಿಯೇ ಎದ್ದಿತು. ಅದುವೇ ಆಕೆಗೆ ಆದ ರಸ್ತೆ ಅಪಘಾತ. ತಾಯಿ ಮತ್ತು ಮಗ ದ್ವಿಚಕ್ರ ವಾಹನದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರ್ ವೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆಯಿತು, ಹೊಡೆತದ ರಭಸಕ್ಕೆ ಈ ತಾಯಿ ನಾಲ್ಕು ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಉರಳಿದಳು, ಗಾಡಿಯ ಮುಂದೆ ನಿಂತಿದ್ದ ಮಗು ಮಾತ್ರ ಯಾವುದೇ ಪ್ರಾಣಾಪಾಯವಿಲ್ಲದೆ ಬದುಕುಳಿಯಿತು.
ಆದರೆ ಈ ಭಯಂಕರ ಅಪಘಾತವನ್ನು ಕಣ್ಣಾರೆ ನೋಡಿದ ಸ್ಥಳಿಯಯರು ಕ್ಷಣಾರ್ಧದಲ್ಲಿ ಗುಂಪು ಗೂಡಿತು. ಆಕೆ ರಕ್ತದ ಮಡುವಿನಲ್ಲಿ ಒದ್ದಾಡಿ ನರಳುತ್ತಿದ್ದರೆ ವಿಡಿಯೋ ಮಾಡುವ ಚಟವಿದ್ದವರು ನಮ್ಮಲ್ಲೇ ಮೊದಲು ಎನ್ನುವಂತೆ ತಾ ಮುಂದು ನಾ ಮುಂದು ಎಂದು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆಕೆಯ ರಕ್ತ ರಸ್ತೆಯ ತುಂಬೆಲ್ಲ ಹೊಳೆಯಂತೆ ಹರಿಯಿತು, ಮುಂದೆ ಎಲ್ಲವು ಕತ್ತಲಾಯಿತು.
ಆ ಮೇಲೆ ಆಸ್ಪತ್ರೆಯಲ್ಲಿ ನರಳಾಟ, ಒಂದಾದ ಮೇಲೊಂದರಂತೆ ಮೈತುಂಬ ಸರ್ಜರಿಗಳು, ಫ್ಯಾಷನ್ ಡಿಸೈನರ್ ಆಗಬೇಕು ಎಂದುಕೊಂಡವಳ ಮೈಮೇಲೆ ಹೊಲಿಗೆಯ ನಾನಾ ಆಕಾರಗಳು. ಅರೆ ಪ್ರಜ್ಞೆಯಲ್ಲಿ ತಿಂಗಳಾನುಗಂಟಲೇ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ದೇಹವೆಲ್ಲ ಆಕೆಯದು ಬೆಂಡಾಗಿ ಹೋಯಿತು. ನೋವು, ನರಳಾಟ, ಚಿರಾಟದ ನಡುವೆ ಸುತ್ತಲಿನ ಜಗತ್ತು ಕತ್ತಲಾಗಿ ಹೋಗಿತ್ತು. ಕೊನೆಗೆ ಒಂದು ದಿನ ದೇಹವೆಲ್ಲ ತನ್ನ ಹಿಡಿತಕ್ಕೆ ಬಂದಿತು ಎಂದುಕೊಳ್ಳುವಷ್ಟರಲ್ಲಿ ಆಕೆಗೆ ಕಾದಿದ್ದು ಮತ್ತೊಂದು ದೊಡ್ಡದೊಂದು ಆಘಾತ, ಅದುವೇ ದೇಹದ ಅರ್ಧಭಾಗ ಸ್ವಾಧೀನ ಕಳೆದುಕೊಂಡಿತ್ತು. ಅಂದರೆ ಅಪಘಾತದಲ್ಲಿ ಸ್ಪೈನಲ್ ಕಾರ್ಡ್ ಗೆ ಬಿದ್ದ ಹೊಡೆತದಿಂದಾಗಿ ಕಾಲುಗಳಲ್ಲಿ ಶಕ್ತಿಯೇ ಇಲ್ಲವಾಗಿತ್ತು. ಎಷ್ಟೇ ಆಪರೇಷನ್ ಗಳಾದರೂ ಯಥಾಸ್ಥಿತಿಗೆ ಬಾರದ ಜೀವನ ಅವಳದಾಯಿತು.
ಆಸ್ಪತ್ರೆಯ ನಾಲ್ಕು ಗೋಡೆಯಿಂದ ಹೊರಗೆ ಬಂದರೆ ಹೋಗುವುದಾದರೂ ಎಲ್ಲಿಗೆ?, ಮತ್ತೆ ಅದೇ ಮನೆಯ ನಾಲ್ಕು ಗೋಡೆಯ ಮಧ್ಯ. ಆದರೆ ಆ ಕಹಿ ಸತ್ಯವನ್ನು ಒಪ್ಪಿಕೊಳ್ಳದೆ ಬೇರೆದಾರಿಯಿಲ್ಲ, ಒಪ್ಪಿಕೊಂಡಳು.
ಒಂದು ದಿನ ಆಸ್ಪತ್ರೆಯಿಂದ ಆಕೆ ಡಿಸ್ಟಾರ್ಚ್ ಆದಳು. ಮನೆಗೆ ಹೊರಡುವಾಗ ಈಗ ಅವಳ ಕಣ್ಮುಂದೆ ಇದ್ದದ್ದು ಎರಡು ಗಾಲಿಯ ವೀಲ್ ಚೇರ್. ಹೊಲಿಗೆ ಯಂತ್ರದ ಪೆಡಲ್ ತುಳಿಯುತ್ತಿದ್ದ ಕಾಲುಗಳಿಗ ಜೋತು ಬಿದ್ದಿತ್ತು, ಅದನ್ನು ನೋಡಿ ತನ್ನ ಕಾಲನ್ನು ಒಮ್ಮೆ ಕತ್ತರಿಸಿ ಬಿಸಾಕಬೇಕು ಎನ್ನುವಷ್ಟು ಕೋಪ, ಆವೇಶ,ನೋವು,ದುಃಖ ಒಮ್ಮಲೇ ಒಕ್ಕರಿಸಿ ಬಂತು. ಆದರೆ ವಿಧಿಯಿಲ್ಲ ಬದುಕಬೇಕು, ಅದು ನನ್ನ ಮಗನಿಗಾಗಿ ಎಂದು ಕಣ್ಣೀರು ಒರೆಸುತ್ತಾ ತನ್ನ ನೋವನ್ನು ಆದಮಿಟ್ಟುಕೊಂಡಳು ಆಕೆ. ನರ್ಸ್ ಸಹಾಯದಿಂದ ವೀಲ್ ಚೇರ್ ನಲ್ಲಿ ಮೊದಲು ಕೂತಾಗ ಮುಂದಿನ ಭವಿಷ್ಯ ಯಕ್ಷ ಪ್ರಶ್ನೆ ಕಾಡಲು ಶುರುವಾಯಿತು. ಕಾಲಿನ ಹೆಜ್ಜೆಗಳು ನಿಂತವು, ಕೈಗಳಿಗೆ ಈಗ ಹೆಜ್ಜೆ ಹಾಕಲು ಶಕ್ತಿ ತುಂಬಬೇಕು, ಅದು ಹೇಗೆ? ಗೊತ್ತಿಲ್ಲ. ವೀಲ್ ಚೇರ್ ನಲ್ಲಿ ಬದುಕು ಹೇಗೆ ಸವೆಸಬೇಕು ಗೊತ್ತಿಲ್ಲ, ಎಲ್ಲವು ಉತ್ತರ ಸಿಗದ ಬದುಕು ಆಕೆಯದಾಯಿತು.
ಮಗನೊಂದಿಗೆ ಸವಿತಾ
ಪ್ರತಿ ಪ್ರೀತಿಯ ಬೆಲೆ ಗೊತ್ತಾಗುವುದು ಮನುಷ್ಯ ಸೋತಾಗ ಮಾತ್ರ. ಆ ಸಮಯದಲ್ಲಿ ಯಾರು ಕೈ ಹಿಡಿದು ಎಬ್ಬಿಸುತ್ತಾರೋ ಅದೇ ನಿಜವಾದ #ಪ್ರೀತಿ ಅದು ಅರ್ಥವಾಗುವುದು ಆಕೆಗೆ ತಡವಾಗಲಿಲ್ಲ. ಗಂಡ, ಮಗ, ಅಪ್ಪ,ಅಣ್ಣ, ತಮ್ಮ ತುಂಬಿದ ಮನೆಯಲ್ಲಿ ಪ್ರೀತಿಯ ಹುಡುಕಾಟವು ಕೂಡಾ ಶುರುವಾಯಿತು.ಎಲ್ಲರಿಂದಲೂ ಪ್ರೀತಿ ಸಿಕ್ಕರೂ ಸಹ ಹೆಣ್ಣಿಗೆ ತಾಯಿಯಿಲ್ಲದ ಮನೆ ತವರಮನೆಯೇ ಅಲ್ಲ ಎನ್ನುವುದು ದಿನ ಹೋದಂತೆ ಅರ್ಥವಾಯಿತು. ನಜ್ಜುಗುಜ್ಜಾದ ದೇಹದ ಜೊತೆಗೆ ಮಾನಸಿಕ ಹಿಂಸೆ, ತಾನು ಎಷ್ಟೇ ಛಲಗಾರ್ತಿ ಎಂದು ತನ್ನನ್ನು ತಾನು ಸಾಬೀತು ಪಡಿಸಲು ಮುಂದಾದಾಗಲೆಲ್ಲ ಸೋಲು ಆಕೆಯನ್ನು ಬೆನ್ನಟ್ಟುತ್ತಿತ್ತು. ಮನೆಯ ನಾಲ್ಕು ಗೋಡೆಗಳು ಆಕೆಗೆ ಉಸಿರುಗಟ್ಟಿಸುತ್ತಿತ್ತು, ಅವಳ ಕಪ್ಪು ನೆರಳು ತಿನ್ನುವಂತೆ ಕಾಡುತ್ತಿತ್ತು. ಒಟ್ಟಾರೆಯಾಗಿ ಅವಳಿಗೆ ಜೀವನದ ಮೇಲೆ ಜಿಗುಪ್ಸೆ ಶುರುವಾಗಿ ಹೋಗಿತ್ತು. ಈ ರೀತಿ ಮಾನಸಿಕವಾಗಿ ಕ್ಷಣ ಕ್ಷಣಕ್ಕೂ ಸಾಯುವ ಬದಲು ಒಮ್ಮೆ ವಿಷ ಕುಡಿದು ಈ ಕೆಟ್ಟ ಬದುಕಿಗೊಂದು ವಿಧಾಯ ಹೇಳೋಣ ಎಂದು ನಿರ್ಧಾರ ಮಾಡಿ ತನ್ನನ್ನು ತಾನು ಎರಡು ಬಾರಿ ಕೊಲ್ಲುವ ಪ್ರಯತ್ನ ಮಾಡಿಕೊಂಡಳು, ಆದರೆ ಆಕೆ ಅಂದುಕೊಂಡಂತೆ ವಿಧಿಯಾಟ ನಡೆಯಬೇಕಲ್ಲ, ಎರಡು ಬಾರಿಯೂ ಆಕೆ ಬದುಕುಳಿದಳು.
ದೇವರ ನಿಯಮದ ಮುಂದೆ ನನ್ನ ಆಟ ಏನು ನಡೆಯುವುದಿಲ್ಲ ಎಂದು ಅರಿತ ಆಕೆ ನಾನು ಬದುಕಬೇಕು, ತನ್ನ ಮಗನಿಗಾಗಿ ಬದುಕು ಕಟ್ಟಿಕೊಳ್ಳಬೇಕು, ಮಗನನ್ನು ನೋಡಿಕೊಳ್ಳಬೇಕು ಎಂದು ಅಂದು ನಿರ್ಧಾರ ಮಾಡಿದಳು. ಕ್ಷಣ ಕ್ಷಣಕ್ಕೂ ಸವಾಲುಗಳನ್ನು ಎದುರಿಸತೊಡಗಿದಳು ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಬಿದ್ದಳು, ತೆವಳುತ್ತಾ ಗೋಡೆಯ ಆಸರೆ ಹಿಡಿದು ನಿಲ್ಲಲು ಪ್ರಯತ್ನಿಸಿದಳು, ಹೀಗೆ ಸಾಕಷ್ಟು ಬಾರಿ ಬಿದ್ದಿ ಎದ್ದಳು. ಒಂದು ಲೋಟ ನೀರಿಗಾಗಿ ಬೇರೊಬ್ಬರ ಸಹಾಯ ಪಡೆದುಕೊಳ್ಳಬೇಕಾದಾಗ ದುಃಖಿಸಿದಳು, ದೇವರನ್ನು ಶಪಿಸಿದಳು. ಹೀಗೆ ಹೆಜ್ಜೆ ಹೆಜ್ಜೆಗೂ ನೋವು ಅನುಭವಿಸುತ್ತಾ ಹೋದಳು.
ಆ ಸಂದರ್ಭದಲ್ಲಿ ಅವಳ ಆತ್ಮವಿಶ್ವಾಸವನ್ನು ತುಂಬಲು ಮುಂದಾಗಿದ್ದು, ಅಸೋಸಿಯೇಷನ್ ಆಫ್ ಪೀಪಲ್ ಆಫ್ ಡಿಸಎಬಿಲಿಟಿ ಸಂಸ್ಥೆ. ಈ ಸಂಸ್ಥೆಗೆ ಸೇರಿಕೊಂಡಾಗ ಅವಳಂತೆ ವೀಲ್ ಚೇರ್ ನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಹತ್ತಾರು ಸ್ನೇಹಿತರನ್ನು ನೋಡಿ ಧೈರ್ಯ ತುಂಬಿಕೊಂಡಳು. ಈ ಸಂಸ್ಥೆ ಸಾಕಷ್ಟು ಜನರ ಆತ್ಮವಿಶ್ವಾಸವನ್ನು ತುಂಬಿದೆ. ವಿಲ್ ಚೇರ್ ಹೇಗೆ ಬಳಸಬೇಕು, ತಮ್ಮ ದಿನನಿತ್ಯದ ಕೆಲಸಗಳನ್ನೂ ಯಾರ ಹಂಗು ಇಲ್ಲದೆ ಹೇಗೆ ಸ್ವತಂತ್ರವಾಗಿ ತಾವೇ ಮಾಡಿಕೊಳ್ಳಬೇಕು ಎನ್ನುವುದು ಇಲ್ಲಿ ಕಲಿಸಿಕೊಡುತ್ತದೆ. ಇಲ್ಲಿ ಆಕೆಯ ದುಃಖ ಮರೆಯಿತು, ಬದುಕಬೇಕು ಎನ್ನುವ ಆಸೆ ಹುಟ್ಟಿಸಿತು.
ಅವಳ ಬಾಳಲ್ಲಿ ಒಂದು ಹೊಸ ಆಶಾಕಿರಣವನ್ನು ಈ ಸಂಸ್ಥೆ ಹುಟ್ಟು ಹಾಕಿತು. ಹಾಸಿಗೆಯಲ್ಲೇ ಬದುಕು ಕೊನೆಯಾಗುತ್ತೆ ಎಂದುಕೊಂಡವಳಿಗೆ ಈ ಸಂಸ್ಥೆ ಧೈರ್ಯ ತುಂಬಿತು. ಮುಂದೆ ಈಕೆ ತನ್ನ ಕ್ರಿಯಾಶೀಲತೆಯಿಂದ ಪೇಪರ್ ಬ್ಯಾಗ್, ಗ್ರೀಟಿಂಗ್ ಕಾರ್ಡ್, ವೇಸ್ಟ್ ಐಟಂ ನಿಂದ ಉಪಯುಕ್ತ ವಸ್ತುಗಳಿಗೆ ಚಂದದ ಆಕಾರಕೊಟ್ಟು ಮಾರಾಟ ಮಾಡಲು ಶುರು ಮಾಡಿದಳು. ಅದರಿಂದ ದೊಡ್ಡ ಪ್ರಮಾಣದ ಆದಾಯ ಬಾರದಿದ್ದರೂ ಅವಳಲ್ಲಿ ಒಂದು ರೀತಿಯ ಆತ್ಮವಿಶ್ವಾಸ ತುಂಬಿತು. ಮುಂದೆ ತನ್ನದೆಯಾದ ಯೌಟ್ಯೂಬ್ ಚಾನೆಲ್ ಶುರು ಮಾಡಿದಾಗ ಜನ ಮೆಚ್ಚಿದರು, ಅವರ ಬದುಕು ಸಾಕಷ್ಟು ಸೋತ ಮನಸ್ಸಿಗೆ ಸ್ಪೂರ್ತಿಯಾಯಿತು.
ಆದರೆ ಈ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಫ್ಯಾನ್ಸ್ ಗಳ ಜೊತೆ ಕೆಟ್ಟ ಮನಸ್ಥಿತಿ ಇರುವ ಜನರು ಕೂಡಾ ಅವಳಿಗೆ ಪರಿಚಯವಾದರು. ಬೆಂದ ದೇಹವನ್ನು ಕೂಡಾ ಹರಿದು ತಿನ್ನುವ ಗಂಡಸರ ಮಧ್ಯೆ ಒಂಟಿ ಹೆಣ್ಣು ಬದುಕುವುದು ಕಷ್ಟ ಎಂದು ಅರಿತರು ಕೂಡಾ ನಾನು ಮತ್ತೆ ಸೋಲಬಾರದು ಎಂದು ಹಠಕ್ಕೆ ನಿಂತಳು ಆಕೆ, ಆಕೆಯ ಹೆಸರೇ ಸವಿತಾ.
ಬಿಡದಿ ಸಮೀಪದ ಬನ್ನಿಕುಪ್ಪೆ ಗ್ರಾಮದಲ್ಲಿ ಜನಿಸಿದ, ಬಜ್ಜಯ್ಯ ಹಾಗು ವಜ್ರಮ್ಮ ದಂಪತಿಯ ಏಕೈಕ ಪುತ್ರಿ ಸವಿತಾ. ಅಪ್ಪ ಅಮ್ಮ ಮಕ್ಕಳಿಗೆ ಬಡತನದ ಬಿಸಿ ಮುಟ್ಟಿಸಿರಲಿಲ್ಲ, ಅಷ್ಟು ಪ್ರೀತಿಯಿಂದ ಮಕ್ಕಳನ್ನು ಈ ದಂಪತಿ ಸಾಕಿ ಸಲುಹಿದ್ದರು. ಆದರೆ ಮುಂದೆ ನಡೆದದ್ದೆಲ್ಲ ನೋವಿನ ಬರೆಗಳು. ಅದನ್ನೆಲ್ಲ ಮೆಟ್ಟಿನಿಂತ ಛಲಗಾರ್ತಿ ಸವಿತಾ. ಅವಳ ಜೀವನ ಸಾಕಷ್ಟು ಜನರಿಗೆ ಪ್ರೋತ್ಸಾಹ ತುಂಬಿದೆ. ಇದು ಬರೀ ನೋವಿನ ಕತೆಯಲ್ಲ ಸ್ಪೂರ್ತಿಯ ಕತೆ. ಅವರ ಜೀವನಕ್ಕೆ ನೀವು ಬೆಂಬಲಕೊಡಬೇಕು ಎನ್ನುವುದಾದರೆ ಅವರ ಯೌಟ್ಯೂಬ್ ಚಾನೆಲ್ ನ್ನು ತಪ್ಪದೆ ಸಬ್ಸ್ಕ್ರೈಬ್ ಮಾಡಿ.
ಫೇಸ್ಬುಕ್ ಐಡಿ :
ಸಬ್ಸ್ಕ್ರೈಬ್ ಮಾಡಿ, ಫಾಲೋ ಮಾಡಿ ಎನ್ನುತ್ತಾ ಸವಿತಾ ಅವರ ಬದುಕು ಬಂಗಾರವಾಗಿರಲಿ ಎಂದು ಆಕೃತಿ ಕನ್ನಡ ಶುಭ ಕೋರುತ್ತದೆ.
ಸಂಸ್ಥೆಯ ವಿಳಾಸ :
Association Of People With Disablity Horticulture Training Centre
Lic Colony, Hal, 9th B Main Road, Hal 3rd Stage, Jeevan Bima Nagar, Bengaluru, Karnataka 560075
080 2528 8672
https://maps.app.goo.gl/cg8FjBxNw5mc9AGZ6
(ಸ್ಪೈನಲ್ ಕಾರ್ಡ್ ನಿರಾಶ್ರಿತರಿಗೆ ಈ ಸಂಸ್ಥೆ ತರಬೇತಿಯನ್ನ ಕೊಟ್ಟು ಸಾಕಷ್ಟು ಜನರ ಬಾಳಿಗೆ ದಾರಿ ದೀಪವಾಗಿದೆ. ಯಾರಾದ್ರೂ ಈ ಸಂಸ್ಥೆಯ ಬಗ್ಗೆ ಹಾಗು ಸವಿತಾವರಿಗೆ ನೇರವಾಗಿ ಸಹಾಯ ಮಾಡಲು ಇಚ್ಛಿಸುವ ಮನಸ್ಥಿತಿ ಇರುವವರು ಮಾತ್ರ ಅವರ ದೂರವಾಣಿ ಸಂಖ್ಯೆಗೆ ಕರೆಮಾಡಬಹುದು, ಅವರ ದೂರವಾಣಿ ಸಂಖ್ಯೆ : 9731830154 .)
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.