‘ಬಾತ್ ರೂಂ ಈಸ್ ಎ ರೂಂ ಟೂ’ – ಎನ್.ವಿ.ರಘುರಾಂಮೊದಲು ಬಹಿರ್ದೆಸೆಗೆ ಹೋಗಬೇಕಾದರೆ ಕೈಯಲ್ಲಿ ಚಂಬು ಹಿಡಿದು ಮನೆಯಿಂದ ಗುಡ್ಡಗಾಡು ಹತ್ತಿ ಹೋಗುತ್ತಿದ್ದ ದಿನ, ಕಾಲ ಕ್ರಮೇಣ ಮನೆಗೆ ಒಂದು ಕಕ್ಕಸು ಕೋಣೆ ಬಂತು, ಆಮೇಲೆ ಕಕ್ಕಸು ಹಾಗು ಸ್ನಾನದ ಕೋಣೆ ಒಂದೇ ಆಯಿತು. ಮುಂದೆ ಮನೆಯಲ್ಲಿ ಅಟ್ಟ್ಯಾಕ್ ಬಾತ್ ರೂಂ ಬಂತು, ‘ಕಕ್ಕಸಿನ ಮನೆ’, ‘ರೆಸ್ಟ್ ರೂಂ’ ಆಗಿರುವ ಕಥೆ ರೋಚಕವಲ್ಲದಿದ್ದರೂ, ಕುತೂಹಲಕಾರಿ. …ಇದರ ಕುರಿತು ಲೇಖಕ ಎನ್.ವಿ.ರಘುರಾಂ ಅವರು ಬರೆದ ಲೇಖನವಿದು,ತಪ್ಪದೆ ಓದಿ…

ಬೆಂಗಳೂರಿನ ಆಕರ್ಷಣೆ ಯಾರಿಗೆ ಇಲ್ಲ ಹೇಳಿ? ನಾನೂ ಸಹ ಅದಕ್ಕೆ ಹೊರತಾಗಿಲ್ಲ. ಕೆಲಸಕ್ಕೋಸ್ಕರ ನಗರಕ್ಕೆ ಬಂದ ಮೇಲೆ ಮತ್ತೆ ಹಿಂತಿರುಗಿ ಹಳ್ಳಿಗೆ ಹೋಗಿ ವಾಸಮಾಡುವುದು ದೂರವೇ ಉಳಿಯಿತು. ಇಲ್ಲಿಯ ಬಹುಮಹಡಿ ಕಟ್ಟಡದ ಫ್ಲಾಟ್ ನಲ್ಲಿ ಇರುವ ಅನುಕೂಲ ಇನ್ನೆಲ್ಲಿ ಸಿಗುತ್ತದೆ ಹೇಳಿ ನೊಡೋಣ? ನೀರು, ಕರೆಂಟ್, ಲಿಫ್ಟ್ … ಎಲ್ಲವೂ ಇದೆ. ಆದರೆ ಬಹಳ ಮುಖ್ಯವಾಗಿ ಆಗಿರುವ ಬದಲಾವಣೆ ಎಂದರೆ ಮನೆಯಲ್ಲಿ ಇರುವ ಮೂರು ಜನರಿಗೆ ಎರಡು “ರೆಸ್ಟ್ ರೂಮ್”. ಆದರೂ ಅಪರೂಪಕ್ಕೆ ಬೆಳಿಗ್ಗೆ “ರೆಸ್ಟ್ ರೂಮ್” ಗೆ ಹೋಗಲು ಐದು ನಿಮಿಷ ಕಾಯುವ ಸಂದರ್ಭ ಬಂದರೆ ನೆನಪಾಗುವುದೇ ಬಾಲ್ಯದಲ್ಲಿ ಹತ್ತು ಜನರಿಗೂ ಅಧಿಕ ಜನರಿಂದ ತುಂಬಿ ತುಳುಕುತ್ತಿದ್ದ ಹಳ್ಳಿ ಮನೆಯಲ್ಲಿ ಇದ್ದ ಒಂದೇ ಟಾಯ್ಲಿಟ್ ಗೆ ಕ್ಯೂ ನಿಲ್ಲುವುದು. ಟಾಯ್ಲಿಟ್ ಪದ ಕೂಡ ಆಗ ಗೊತ್ತಿರಲಿಲ್ಲ ಬಿಡಿ! ಅಗ ಅದು “ಕಕ್ಕಸ್ಸುಮನೆ!”. ಆ ಪದ ಕೂಡ ಈಗಿನವರಿಗೆ ಗೊತ್ತಿಲ್ಲದಿದ್ದರೆ ಅದೇನೂ ಆಶ್ಚರ್ಯವಿಲ್ಲ ಬಿಡಿ. ಆಗಿನವರಿಗೂ ಕೂಡ ಈ ಪದ ಈಗ “ಜಂಗ್ಲೀ” ಅನಿಸಬಹುದು.

ಆ ಟಾಯ್ಲಿಟ್ ಕೂಡ ಮನೆಯಿಂದ ಹೊರಗೆ ಸ್ವಲ್ಪ ದೂರದಲ್ಲಿ ಇದ್ದ ಒಂದು ಸಣ್ಣ ಕೊಠಡಿ ಅಷ್ಟೇ. ಅದೆಲ್ಲಾ ಆಗ ಸಾಮಾನ್ಯ. ಆದರೆ ಈ ಟಾಯ್ಲಿಟ್ ಬಂದಾಂಗಿನಿಂದ ಅಮ್ಮ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಿದೆ. “ಅಯ್ಯೋ ಆ ಕಥೆ ಯಾಕೆ ಕೇಳುತ್ತೀಯಾ, ನಾನು ಮದುವೆ ಮಾಡಿಕೊಂಡು ಮನೆಗೆ ಬಂದಾಗ ಪಕ್ಕದ ಗುಡ್ಡಕ್ಕೆ ತಂಬಿಗೆ ಹಿಡಿದುಕೊಂಡು ಹೋಗಬೇಕಾಗಿತ್ತು. ರಾತ್ರಿ ಹೊತ್ತು ಹೋಗಬೇಕಾಗಿ ಬಂದರೆ, ಅದರ ಅವಸ್ಥೆ ಯಾರಿಗೂ ಬೇಡ” ಎಂದು ಹೇಳುತ್ತಾ, ಮನೆಯ ಹತ್ತಿರ ಬಂದ ಮೊದಲ ಟಾಯ್ಲಿಟ್ ನ ರೂಪ ವಿಶೇಷ ಹೇಳಿದ ನೆನಪಿದೆ. “ಮೊದಲು ಇದ್ದಿದ್ದು ಚಪ್ಪಡಿ ಹಾಸಿನ ನೆಲ ಕಣೋ. ಮಧ್ಯದಲ್ಲೊಂದು ಗುಂಡಿ, ಗೋಡೆಗಳು ಕೂಡ ಚಪ್ಪಡಿ ಕಲ್ಲುಗಳು. ಅದಕ್ಕೊಂದು ಸಣ್ಣ ಬಾಗಿಲು. ಅದು ಹೆಸರಿಗೆ ಬಾಗಿಲಷ್ಟೆ! ಮೇಲುಗಡೆ ಗೋಡೆಯಿಂದ ಒಂದು ಅಡಿ, ಕೆಳಗಡೆ ಅರ್ಧ ಅಡಿ ಬಿಟ್ಟಿರುವ ಒಂದು ತಗಡಿನ ಷೀಟ್ ಗೆ ಒಂದು ಹುಕ್ ಹಾಕಿ ತಂತಿ ಸಿಕ್ಕಿದರೆ ಮುಗಿಯಿತು. ಅದೇ ಬಾಗಿಲು, ಆದರೂ ಗುಡ್ಡದ ಹತ್ತಿರ ಹೋಗುವುದು ತಪ್ಪಿತಲ್ಲ ಎಂದು ಸಮಾಧಾನ” ಎಂದು ನಿಟ್ಟುಸಿರು ಬಿಟ್ಟಿದ್ದರು.

ಫೋಟೋ ಕೃಪೆ : pinterest

ನಮ್ಮ ಕಾಲಕ್ಕೆ ಅಲ್ಲಿ ಗಾರೆ ಹಾಕಿದ ಕೆಂಪು ಹಾಸಿನ ನೆಲಬಂತು. ನೆಲದಲ್ಲಿ ದೊಡ್ಡ ಬಾವಿ ಮಾಡಿ ಆ ಬಾವಿಗೆ ಇದರ ಗುಂಡಿ ಜೋಡಿಸಿದರು! ಏನು ಆದರೇ ಏನು? ಎಷ್ಟು ಜನರು ಇದ್ದರೆ ಏನು? ಮನೆಗೆಲ್ಲಾ ಒಂದೇ ‘ಕಕ್ಕಸ್ಸು ಮನೆ’. ಅಲ್ಲಾ.. ಸಾರಿss… ಟಾಯ್ಲಿಟ್. ಆದರೆ ನೋಡಿ ‘ಇರುವುದೊಂದೇ ಟಾಯ್ಲಿಟ್’ ಎಂದು ಯಾರೂ ಗೊಣಗಿಕೊಂಡಿದ್ದು ನಾನು ಯಾವತ್ತೂ ಕೇಳಿರಲಿಲ್ಲ. ಬೆಳಿಗ್ಗೆ ಕ್ಯೂ ಜಾಸ್ತಿ ಇದ್ದರೆ ಪಕ್ಕದ ದನದ ಕೊಟ್ಟಿಗೆಗೆ ಹೋಗಿ ಕರು ಜೊತೆ ಆಟವಾಡುತ್ತಲೋ ಅಥವ ಅಂಗಳದಲ್ಲಿ ಬಿದ್ದ ಪಾರಿಜಾತ ಹೂ ತೊಟ್ಟು ಮೇಲೆ ಆಗಿ ಹೇಗೆ ಬೀಳುತ್ತದೆ ಎಂದು ಯೋಚಿಸುತ್ತಾ ಹೊಟ್ಟೆಯ ತಳಮಳ ಮರೆಸಲು ಪ್ರಯತ್ನ ಪಟ್ಟಿದ್ದಿದೆ. ಯಾರಾದ್ರು ಬಹಳ ತಡವಾಗಿ ಬಂದರೆ ‘ಎನು ರಾಯರು ಲಂಡನ್ಗೆ ಹೋಗಿದ್ದರೋ’ ಎಂದು ರೇಗಿಸಿ, ಇನ್ಯಾರಾದರು ಹೋಗಿ ಬಾಗಿಲು ಹಾಕಿಕೊಳ್ಳವ ಮುಂಚೆ ನುಗ್ಗಿ ಟಾಯ್ಲಿಟ್ ಬಾಗಿಲು ಹಾಕಿಕೊಳ್ಳುತ್ತಿದ್ದ ನೆನಪಿದೆ. ನಮಗೆ ಆಗ ಗೊತ್ತಿದ್ದ ಅತಿ ದೂರದ ಊರು ಎಂದರೆ ಲಂಡನ್ ಮಾತ್ರ. ಎಲ್ಲರು ಮಾತನಾಡುತ್ತಾ ಕುಳಿತಿದ್ದಾಗ ನಾನು ಎದ್ದರೆ ನಮ್ಮ ಮಾವ ‘ಎನೋ ಲಂಡನ್ಗೆ ಹೊರಟೆಯಾ’ ಎಂದು ರೇಗಿಸುತ್ತಿದ್ದರು. ಹಾಗಂತ ಬೇಗ ಬಂದವರಿಗೂ ಸುಮ್ಮನೆ ಬಿಡುತ್ತಿರಲಿಲ್ಲ. ‘ಎನ್ ಜಿಲಾಬ್ ಆss’ ಎಂದು ಕಿರುನಗೆ ಬೀರುತ್ತಿದ್ದರು. ಅದರಲ್ಲೂ ಹಲಸಿನ ಹಣ್ಣಿನ ಕಾಲದಲ್ಲಿ ಹಿಂದಿನ ದಿನ ಸ್ವಲ್ಪ ಜಾಸ್ತಿನೇ ಹಣ್ಣು ತಿಂದಿದ್ದರೆ ಮಾರನೇಯ ದಿವಸ ಒಂದೇ ಉಸಿರಿಗೆ ಹೊರಗಡೆ ಹೋಗುತ್ತಿತ್ತು! ಇದಕ್ಕೆ ನಮ್ಮ ಮಾವ ಇಟ್ಟ ಇನ್ನೊಂದು ಹೆಸರೇ ‘ಜಿಲಾಬ್’! ಮನೆ ಮಂದಿಯೆಲ್ಲ ಸಾಲಾಗಿ ಹಾಲಿನಲ್ಲಿ ಮಲಗಿ ಬೆಳಿಗ್ಗೆ ಒಬ್ಬರಾದ ಮೇಲೆ ಒಬ್ಬರು ಎದ್ದರೂ ಕೂಡ ಟಾಯ್ಲಿಟ್ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತಿರಲಿಲ್ಲ. ಆದರೂ ನೋಡಿ ಯಾರ ಮೇಲೂ ಯಾರು ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಎಲ್ಲರೂ ತಮಾಷೆ ಮಾಡಿಕೊಂಡು ಹೊಟ್ಟೆ ಭಾರ ಇಳಿಸಿಕೊಳ್ಳುವುದರಿಂದ ಮನಸ್ಸಿನಲ್ಲೂ ಏನೂ ಭಾರವುಳುತ್ತಿರಲಿಲ್ಲ.

ಕಾಲೇಜ್ ನಲ್ಲಿ ಓದಲು ಊರು ಬಿಡಲೇ ಬೇಕಾಯಿತು. ಪ್ರತಿಷ್ಠಿತ ಕಾಲೇಜಿನ ಹಾಸ್ಟಲ್ ನಲ್ಲಿ ವಾಸ. ಪ್ರತಿ ಅಂತಸ್ಥಿನಲ್ಲಿ ಹತ್ತು ಟಾಯ್ಲಿಟ್ ಇದ್ದರೂ ಮೂರು ಅಂತಸ್ಥಿನ ಹಾಸ್ಟಲ್ ನಲ್ಲಿ ಸುಮಾರು ಇನ್ನೂರ ಐವತ್ತು ಹುಡುಗರು ಇದ್ದಿದ್ದರಿಂದ ಬೆಳಿಗ್ಗೆ ಟಾಯ್ಲಿಟ್ ಗೆ ಕ್ಯೂ ನಿಲ್ಲುವುದು ತಪ್ಪಲಿಲ್ಲ. ಹೊಟ್ಟೆಯಲ್ಲಿ ತಳಮಳ ಜಾಸ್ತಿಯಾದರೆ ‘ಅರೇ ಸಾಲೇ, ಜಲ್ದಿ ಆವೋನಾ ‘ ಎಂದು ಸ್ನೇಹಿತರಿಗೆ ಬೈಯುತ್ತಾ, ಕಾರಿಡಾರಿನಲ್ಲಿ ಓಡಾಡುತ್ತಾ, ಕೊನೆಯ ರೂಮಿನಲ್ಲಿ ಹಾಕಿದ್ದ ‘ಡ್ರೀಂಮ್ ಗರ್ಲ’ನ ಹೊಸ ಫೋಟೋವನ್ನು ವೆಂಟಿಲೇಟರ್ ನ ಕಿಂಡಿಗಳಿಂದ ಹಣಕಿ ನೋಡುತ್ತಾ ಕಾಯುತ್ತಿದ್ದುದು ನೆನಪಿದೆ. ಸ್ನೇಹಿತರ ರೇಗಿಸಿ ಕೊಳ್ಳುತ್ತಾ ಹೊಟ್ಟೆಯ ಭಾರ ಇಳಿಸಿಕೊಂಡಾಗ ಮನಸ್ಸಿನಲ್ಲಿ ಯಾವುದೇ ಭಾರವೂ ಉಳಿದಿರುತ್ತಿರಲಿಲ್ಲ.

ಫೋಟೋ ಕೃಪೆ : google

ಬೆಂಗಳೂರಿಗೆ ಬಂದು ಬಾಡಿಗೆ ಮನೆ ಹುಡುಕಿದಾಗ ಮೊದಲಿಗೆ ಕಂಡಿದ್ದೇ “ಟೂ-ಇನ್-ಸ್ನಾನದ ಮನೆ!” ಹೌದು ಬೆಂಗಳೂರಿನಲ್ಲಿ ಹೊರಗಡೆ ಟಾಯ್ಲಿಟ್ ಇರಲು ಸಾಧ್ಯವೇ? ಅಷ್ಟು ದೊಡ್ಡ ಸೈಟ್ ಎಲ್ಲಿರುತ್ತೆ? ಹಾಗಾಗಿ ಆ ಟಾಯ್ಲಿಟ್ ‘ಗೃಹ ಪ್ರವೇಶ’ ಮಾಡಿ ಸ್ನಾನದ ಕೊಠಡಿಯ ಒಂದು ಮೂಲೆಯಲ್ಲಿ ಕುಳಿತುಕೊಂಡು “ಟೂ-ಇನ್-ಒನ್ ಬಾತ್ ರೂಂ” ಆಗಿತ್ತು. ಆದರೂ ಇಲ್ಲೂ ಅದಕ್ಕೊಂದು ಹಳ್ಳಿಯ ಮನೆ ತರಹದ ತಗಡಿನ ಬಾಗಿಲು ಇತ್ತು. ಆದರೆ ಇಲ್ಲಿ ಇನ್ನೊಂದು ವಿಶೇಷವಿತ್ತು. ಈ ಬಾಗಿಲಿಗೆ ಎರಡೂ ಕಡೆ ಚಿಲಕವಿತ್ತು. ಬೆಂಗಳೂರಿನಲ್ಲಿದ್ದರೂ ಐದಾರು ಜನವಿರುವ ಮನೆಗೂ ಒಂದೇ ಟಾಯ್ಲಿಟ್ ಇದ್ದ ಕಾಲ! ಕಛೇರಿಗೆ ಸರಿಯಾದ ಸಮಯಕ್ಕೆ ಹೋಗಬೇಕಲ್ಲ. ಹಾಗಾಗಿ ಕೆಲವೊಮ್ಮೆ ಟಾಯ್ಲಿಟ್ಗೆ ಯಾರದ್ರು ಹೋದಾಗ, ‘ ಏ ಟೈಮ್ ಆಯಿತು, ಸ್ವಲ್ಪ ತಡಿ’ ಎನ್ನುತ್ತಾ ಹೊರಗಡೆಯಿಂದ ಚಿಲುಕ ಹಾಕಿಕೊಂಡು ಸ್ನಾನದ ಮನೆಯಲ್ಲಿ ಇನ್ನೊಬ್ಬರು ಸ್ನಾನ ಮಾಡುತ್ತಿದ್ದುದು ಇದೆ! ಇವರ ಸ್ನಾನ ಮುಗಿಯುವವರೆಗೆ ಅವರು ಟಾಯ್ಲಿಟ್ ನಲ್ಲಿ ಕುಳಿತಿರುವ ಶಿಕ್ಷೆ!

ಕಾಲ ಬದಲಾದ ಮೇಲೆ ಮನೆಗಳು ಬದಲಾಗಲೇ ಬೇಕಲ್ಲ! ಟಾಯ್ಲಿಟ್ ಕೂಡ ತನ್ನ ಸುತ್ತಲಿನ ಗೋಡೆ ಬಾಗಿಲುಗಳ ಪೊರೆ ಕಳಚಿ ಸ್ನಾನದ ಮನೆಯ ಒಂದು ಮೂಲೆಯಲ್ಲಿ ತನ್ನ ಜಾಗ ಭದ್ರ ಪಡಿಸಿಕೊಂಡಿತು. ಅದು “ಬಾತ್ ರೂಮ್” ನ ಒಂದು ಭಾಗವೇ ಆಯಿತು.

ಈ ಸಮಯದಲ್ಲಿ ಬಂದ ಹೊಸ ಜಾಹಿರಾತು “ಯುವರ್ ಬಾತ್ ರೂಂ ಈಸ್ ಎ ರೂಂ ಟೂ”. ಚಪ್ಪಡಿಯಿಂದ ಗಾರೆಗೆ ಬಡ್ತಿ ಪಡೆದಿದ್ದ ನೆಲ ಈಗ ಟೈಲ್ಸ್ ಹಾಕಿಸಿಕೊಂಡು ನಯ ನಾಜೂಕು ಗಳಿಸಿತು! ನೋಟ ಬದಲಾದ ಮೇಲೆ ಹೆಸರು ಬದಲಾಗಲೇ ಬೇಕಲ್ಲ. “ಬಾತ್ ರೂಂ” ಹೋಗಿ “ವಾಷ್ ರೂಂ” ಆಯಿತು. ಸ್ನಾನ ಕೂಡ ಇಂಗ್ಲೀಷ್ ನಲ್ಲಿ ಒಂದು ತರಹ “ವಾಷ್” ತಾನೇ? ಬರೀ ಟೈಲ್ಸ್ ಹಾಕಿಕೊಂಡರೆ ರೂಂ ಆಗುತ್ತದೆಯೆ?. ಇಲ್ಲ! ಅದು ಮಲಗುವ ರೂಂ ಜೊತೆ ಸೇರಿಕೊಂಡು ‘ಆಟ್ಯಾಚ್ಡ್ ಬಾತ್ ರೂಂ’ ಆಯಿತು.

‘ಬದಲಾವಣೆ ನಿರಂತರ’ ಎಂದು ಮೊದಲು ಹೇಳಿದವರು ಯಾರು? ನನಗೆ ಗೊತ್ತಿಲ್ಲ. ವಾಷ್ ರೂಂನ ಒಂದು ಮೂಲೆಯಲ್ಲಿ ಇದ್ದ ಟಾಯ್ಲಿಟ್ ಈಗ ರೂಂನ ಬಾಗಿಲ ಬಳಿಗೇ ಬಂದಿದೆ. ಸ್ನಾನದ ಜಾಗವನ್ನು ಅದು ಒಂದು ಮೂಲೆಗೆ ತಳ್ಳಿ ಅದಕ್ಕೊಂದು ಗ್ಲಾಸಿನ ಆವರಣ ಕೂಡ ಹಾಕಿಸಿದೆ, ಏಕೆಂದರೆ ಎಲ್ಲಾ ಕಡೆ ನೀರಾಗುತ್ತದೆಯೆಂದು. ಟಾಯ್ಲಿಟ್ಗೆ ಈಗ ನೀರಿನ ಹಂಗಿಲ್ಲ! ಪೇಪರ್ ರೋಲ್ಸ್ ಡ್ರೈ! ಕಳೆದ ವರ್ಷ ಲಾಕ್ ಡೌನ್ ಆದಾಗ ದೊಡ್ಡ ದೊಡ್ಡ ಮಾಲ್ಗಳಲ್ಲಿ ಮೊದಲು ಖರ್ಚಾಗಿದ್ದು ಪೇಪರ್ ರೋಲ್ಸ್! ಇಷ್ಟೆಲ್ಲಾ ಆದಮೇಲೆ ಪುನರ್ ನಾಮಕರಣ ಮಾಡ ಬೇಡವೇ? ಈಗ ಅದು “ರೆಷ್ಟ್ ರೂಂ!” ಹೆಸರಿಗೂ ಮಾಡುವ ಕೆಲಸಕ್ಕೂ ಏನಾದರೂ ಸಂಬಂಧ ಯಾವಾಗಲೂ ಏಕಿರಬೇಕು?.

ಮನೆಯಿಂದ ಹೊರಗಡೆ ಒಂದು ಮೂಲೆಯಲ್ಲಿ ಇದ್ದ ‘ಕಕ್ಕಸಿನ ಮನೆ’, ‘ರೆಸ್ಟ್ ರೂಂ’ ಆಗಿರುವ ಕಥೆ ರೋಚಕವಲ್ಲದಿದ್ದರೂ, ಕುತೂಹಲಕಾರಿ. ಆಗ ಸಲೀಸಾಗಿ ಟಾಯ್ಲಿಟ್ ನಲ್ಲಿ ಆಗುತ್ತಿದ್ದ ಕೆಲಸಕ್ಕೆ ಈಗ ರಾತ್ರಿ ‘ಫೇಟ್ ಸಫಾಯಿ ‘ ತಿನ್ನಬೇಕಾಗಿರುವುದು ಮಾತ್ರ ವ್ಯತ್ಯಾಸವಷ್ಟೇ!

#ಟಾಯ್ಲಿಟ್‘ ಎಂದಾದರೂ ಕರೆಯಲಿ, ‘ರೆಸ್ಟ್ ರೂಂ’ ಎಂದಾದರೂ ಕರೆಯಲಿ ಹೆಸರಿನಲ್ಲಿ ಏನಿದೆ? ಹೋಗಿ ‘ಟಾಯ್ಲಿಟ್’ ಸೀಟ್ ಮೇಲೆ ಕೂತ ಮೇಲೆ ಮುಂದಿನ ಐದು, ಹತ್ತು ನಿಮಿಷ ಅಲ್ಲಿ ಬೇರೊಂದು ಲೋಕವೇ ಸೃಷ್ಟಿಯಾಗುತ್ತದೆ. ಸಣ್ಣವನಿದ್ದಾಗ ‘ಈ ದಿನ ಯಾವ ಆಟ ಆಡೋದು, ಕಣ್ಣ ಮುಚ್ಚಾಲೇ ಅಟದಲ್ಲಿ ಮುಚ್ಚಿಟ್ಟು ಕೊಳ್ಳುವುದಕ್ಕೆ ಹೊಸ ಜಾಗ ಯಾವುದು?,………’ ಈ ಯೋಚನೆಗಳು ತಲೆಯಲ್ಲಿ ಕುಣಿಯುತ್ತಿತ್ತು. ಕಾಲೇಜಿಗೆ ಸೇರಿದಾಗ ಬೈ ಹಾರ್ಟ ಮಾಡಿದ ‘ಶ್ರೋಡಿಂಗರ್’ ಸಮೀಕರಣವನ್ನು ನೆನಪು ಮಾಡಿಕೊಳ್ಳುವಾಗ ಅರ್ಧದಲ್ಲೇ ಗಗಕ್ಕನೆ ‘ಡೆಬೋನಿಯರ್’ ಪತ್ರಿಕೆಯನ್ನು ‘ಸ್ಟಾರ್ ಡಷ್ಟ್’ ಪತ್ರಿಕೆ ಮಧ್ಯದಲ್ಲಿಟ್ಟುಕೊಂಡು ನೋಡುತ್ತಿದ್ದ ಪಕ್ಕದ ರೂಂನ ಸ್ನೇಹಿತನ ನೆನಪಾಗಿ ನಗು ಬರುತ್ತಿತ್ತು. ಅದೂ ಸಂಭಾವಿತ ಎಂದು ತಿಳಿದ ಸ್ನೇಹಿತ ಬೇರೆ! ಸಮಯದ ಹಿಂದೆ ಓಡುವ ಕೆಲಸಕ್ಕೆ ಸೇರಿದ ಮೇಲೆ ಟಾಯ್ಲಟ್ ನಲ್ಲಿ ಕುಳಿತು ಕನಸು ಕಂಡಿದ್ದು ಬಹಳವೇ ಕಡಿಮೆ. ನಿವೃತ್ತಿಯ ನಂತರ ಟಾಯ್ಲಿಟ್ ನಲ್ಲಿ ಜಾಸ್ತಿ ಹೊತ್ತು ಕುಳಿತರೆ ‘ಯಾಕೋ ಬರಲಿಲ್ಲ ಇನ್ನೂ’ ಎಂದು ಯೋಚಿಸುತ್ತಾರೆ ಮನೆಯವರು. ‘ಅಷ್ಟು ಹೊತ್ತು ಹೋಗಿ ಕೂತು ಕೊಂಡರೆ ನಾವು ಏನಂದುಕೊಳ್ಳಬೇಕು’ ಎನ್ನುವ ಮಾತು ಕೇಳಬೇಕಾಗುತ್ತದೆ. ಆ ಮಾತಿನಲ್ಲಿ ಆಕ್ಷೇಪಣೆಗಿಂತ ಕಾಳಜಿಯೇ ಜಾಸ್ತಿ.ಆದರೂ ನೋಡಿ ಮೊನ್ನೆ ಟಾಯ್ಲಿಟ್ ನಲ್ಲಿ ಇದ್ದಾಗ ಹಿಂದಿನ ದಿನ ಹೋಗಿದ್ದ ಸ್ನೇಹಿತನ ಮಗನ ಮದುವೆಯಲ್ಲಿ ತಿಂದ ರೋಟಿ, ಪಲಾವ್, ಗೋಬಿ ಮಂಚೂರಿ, ಪನ್ನೀರ್ ಟಿಕ್ಕಾ, ಐಸ್ ಕ್ರೀಂ, ಜಾಮಾನ್, ಚಂಪಾಕಲಿ…ಎಲ್ಲಾ ನೆನಪಾಗಬೇಕೆ? ಹೊಟ್ಟೆ ನೋಡಿ ಅದರಲ್ಲಿರುವ ಒಳ್ಳೆಯದನ್ನು ಮಾತ್ರ ಇಟ್ಟುಕೊಂಡು ಬೆಳಿಗ್ಗೆ ಉಳಿದಿರುವ ಚಟರವನ್ನು ಹೇಗೆ ಹೊರಗೆ ಕಳುಹಿಸುತ್ತದೆ! ಆಗ ಗಕ್ಕನೆ ನಮ್ಮ ಮನೆಯಲ್ಲಿ ಕೆಲಸಮಾಡುತ್ತಿದ್ದ ಲಕ್ಷ್ಮೀ ಆಗಾಗ ಹೇಳುತ್ತಿದ್ದ ‘ತೆಪ್ಪಾಯ್ತು, ಹೊಟ್ಟೆಗೆ ಹಾಕ್ಕೊಳ್ಳಿ ಅಮ್ಮ’ ಮಾತು ನೆನಪಾಗಬೇಕೆ? ಸುಮಾರು ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನಕಾಲದಿಂದ ನಮ್ಮ ಹಳ್ಳಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ನಿಯತ್ತಿಗೆ ಇನ್ನೊಂದು ಹೆಸರೇ ಸರಿ. ಆದರೂ ಒಮ್ಮೊಮ್ಮೆ ಎಲ್ಲೋ ಒಂದು ಕಡೆ ಅಮ್ಮನ ಕಣ್ಣಿಗೆ ಕಸ ಕಂಡರೆ ಸಾಕು ಲಕ್ಷ್ಮೀಗೆ ಬೈಗುಳ ಖಂಡಿತ. ಆಗ ‘ತೆಪ್ಪಾಯ್ತು, ಹೊಟ್ಟೆಗೆ ಹಾಕ್ಕೊಳ್ಳಿ ಅಮ್ಮ’ ಎನ್ನುತ್ತಿದ್ದಳು. ಹೌದಲ್ಲ! ‘ಒಳ್ಳೆಯದು ಮಾತ್ರ ತೆಗೆದುಕೊಳ್ಳಿ, ಬೇಡದ್ದು ಬಿಟ್ಟು ಬಿಡಿ ಹೊಟ್ಟೆಯ ತರಹ’ ಎಂದು ಅವಳ ಮಾತಿಗೆ ವಿಶೇಷ ಅರ್ಥವಿತ್ತು ಎಂದು ನನಗೆ ಈಗ ಅರ್ಥವಾಯಿತು! ಹೌದಲ್ಲ! ಬೆಳಿಗ್ಗೆ ಎದ್ದು ಹೊಟ್ಟೆ ಭಾರ ಕಡಿಮೆ ಮಾಡಿಕೊಳ್ಳುವಾಗ ಮನಸ್ಸಿನ ಭಾರವೂ ಜಾರಿ ಹೋದರೆ ಹೊಟ್ಟೆಯ ತರಹ ಮನಸ್ಸು ಕೂಡ ನಿರಾಳವಾಗುತ್ತದೆಯಲ್ಲವೇ? ಹೆಬ್ಬೆಟ್ಟು ಹಾಕುತ್ತಿದ್ದ ಲಕ್ಷ್ಮೀ ಮಾತಿನ ಅರ್ಥ ಪದವಿ ಓದಿದ ನನಗೆ ತಿಳಿಯಲು ನಾಲ್ಕು ದಶಕಗಳೇ ಬೇಕಾಯಿತಲ್ಲ! ಹೋಗಲಿ, ಇನ್ನು ಮೇಲೆ ಹಾಗೆ ಮಾಡುತ್ತೇನೆ! ತಾವು?

ಅಂದ ಹಾಗೆ ಕನ್ನಡದ ಲೇಖನಕ್ಕೆ ಇಂಗ್ಲೀಷ್ ಶೀರ್ಷಿಕೆ ಬೇಕಿತ್ತೆ ಅನಿಸಿದರೆ ‘ತಪ್ಪಾಯಿತು, ದಯವಿಟ್ಟು ಈ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳಿ’.


  • ಎನ್.ವಿ.ರಘುರಾಂ (ಲೇಖಕರು, ನಿವೃತ್ತ ಅಧೀಕ್ಷಕ ಅಭಯಂತರ (ವಿದ್ಯುತ್) ಕ.ವಿ.ನಿ.ನಿ) ಬೆಂಗಳೂರು

5 2 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW