ಅಪ್ಪನೂ ದುಡಿಯುತ್ತಾನೆ ಎತ್ತು ಕತ್ತೆಗಳಂತೆ, ಹಗಲು ಇರುಳು ಎನ್ನದೆ…ಕವಿ ಡಾ. ಲಕ್ಷ್ಮಣ ಕೌಂಟೆ ಅವರು ಬರೆದ ಸುಂದರ ಸಾಲುಗಳು, ಮುಂದೆ ಓದಿ…
ಅವ್ವ..
ಹಗಲಿರುಳು ದುಡಿಯುತ್ತಾಳೆ
ಸಮಯಾಸಮಯ ನೋಡದೆ
ಮನೆಯವರೆಲ್ಲರಿಗಾಗಿ
ಜೊತೆಗೆ ದನ ಕರು ಹಸು
ನಾಯಿ ಬೆಕ್ಕುಗಳಿಗಾಗಿಯೂ
ಯಾವೊಂದು ಬಿಡಿಕಾಸಿನ ವಾಂಛೆಯೂ ಇಲ್ಲದೆ..
ವೇತನರಹಿತ ಪೂರ್ಣ ಕಾಲಿಕ ದುಡಿಮೆಗಾರ್ತಿ..!!
ಉಂಡು ಢೇಕರಿಕೆ ತಗೆದವರು
ಒಂದಲ್ಲ ಹಲವು ಬಾರಿ
ಅಡುಗೆಯ ಅರುಚಿ,
ತೊಳೆದ ಬಟ್ಟೆಯಲ್ಲುಳಿದ
ಕೊಳೆಯ ಕುರಿತು ತೆಗಳುತ್ತಾರೆ
ಆದರೂ
ಅವಳು ಕಾರ್ಮಿಕಳಲ್ಲ, ದುಡಿಮೆಗೆ ಫಲವಿಲ್ಲ..
ಅವಳಿಗಾವ ಶುಭ ಹಾರೈಕೆಗಳಿಲ್ಲ..!!
ಅಪ್ಪನೂ ದುಡಿಯುತ್ತಾನೆ ಎತ್ತು ಕತ್ತೆಗಳಂತೆ
ಹಗಲು ಇರುಳು ಎನ್ನದೆ
ಮನೆ ಮಂದಿ ಎಲ್ಲರ ಉದರ ತುಂಬಲು
ಮೈತುಂಬ ಬಟ್ಟೆ ಉಡಿಸಿ ಆಭರಣ ತೊಡಿಸಿ
ಮರ್ಯಾದೆ ಹೆಚ್ಚಿಸಲು..
ಗೊಣಗಿಸಿಕೊಳ್ಳುತ್ತಾನೆ
ಒಂದಲ್ಲ ಹಲವು ಬಾರಿ ತನ್ನವರಿಂದಲೇ..!!
‘ಅವರ ನೋಡು..
ಆ ಮಕ್ಕಳು ಅದೃಷ್ಟವಂತರು
ಬೇಡಿದ್ದೆಲ್ಲ ಆ ಕ್ಷಣವೇ ದೊರೆಯುತ್ತವೆ..
ನೀನೋ..!!…
ನಾವೇ ದುರ್ದೈವಿಗಳು..!!’
ಹೆತ್ತು ಹೊತ್ತಾತ ಕಾರ್ಮಿಕನಲ್ಲ
ಅವನಿಗಾವ ಶುಭ ಹರಕೆಗಳಿಲ್ಲ..
ಎದೆಯ ತುಂಬ ನೋವು
ಮೈತುಂಬ ಯಾತನೆ
ರೋಗ ರುಜಿನಗಳು.. ಕಳವಳಿಕೆಗಳೆ ಎಲ್ಲೆಲ್ಲೂ..!!
ಅವನಿಗೂ ಯಾವ ಹಾರೈಕೆಗಳಿಲ್ಲ
ಮಾಡಿದ್ದರೂ ಮಾಡಿಯಾನು
ಅವರಪ್ಪ ಅವನಿಗಾಗಿ ಏನೂ ಮಾಡಿಲ್ಲವೆ..!!
ಮೇಲೋಂದು
ಮಂದಿ-ಮಕ್ಕಳಿಂದ ಒಗ್ಗರಣೆ..!!
ಚಂದಿರ ಬರುತ್ತಾನೆ
ಕತ್ತಲೆಯ ಸೀಳಿಕೊಂಡು
ಆಗಸದಲ್ಲಿ ಅಡರಿ ಧರೆಯ ತುಂಬ
ಬೆಳಕು ಹರಡುತ್ತಾನೆ
ಬೆಳದಿಂಗಳೂಟ ಒಲಿದವರ ಕೂಟ ಸಂಭವಿಸುತ್ತವೆ..
ಸಮುದ್ರವೂ ಉಕೇರುತ್ತದೆ ಬೆಳ್ನೊರೆ ಚಲ್ಲುತ್ತ..
ಅವನೂ ಕಾರ್ಮಿಕನಲ್ಲ
ಅವನಿಗಾರೂ ಶುಭ ಕೋರುವುದಿಲ್ಲ..!!
ಸೂರ್ಯದೇವ
ಲೋಕಕ್ಕೆ ಕಣ್ಣಾಗಿ ಬರುತ್ತಾನೆ
ಏಳಿಸುತ್ತಾನೆ..
ಭೂದೇವಿ ಒಡಲಲ್ಲಿ ಮೊಳಕೆ ಒಡೆಸುತ್ತಾನೆ
ಮೇಘ ಹುಟ್ಟಿಸುತ್ತಾನೆ ಮಳೆ ಸುರಿಸುತ್ತಾನೆ
ಭೂದೇವಿ ಬಸುರಾಗುತ್ತಾಳೆ ಹಸಿರಾಗುತ್ತಾಳೆ
ಹೂ ಅರಳಿಸಿ ಮುಡಿಯುತ್ತಾಳೆ
ಫಲ ಬೆಳೆಸಿ ತೆರೆದ ಬಾಯಿಗಳಿಗೆ ಹಾಕುತ್ತಾಳೆ..
ಮರ ಗಿಡ ಜನ ಜಾನುವಾರು ಹುಳು ಹುಪ್ಪಡಿ
ಏನೇನೋ ಬೆಳೆಸುತ್ತಾಳೆ
ಹೀಗೆ
ಅವನು-ಅವನಿ
ಎಲ್ಲ ಎಲ್ಲ ಶ್ರಮಿಸುತ್ತವೆ ಕೂಲಿಯೊಲ್ಲದೆ
ಶುಭ ನೆನಕೆಗಳ ಬಯಸದೆ..!!
ಇವರಿಗೆಲ್ಲ ಶರಣು ಹೇಳುತ್ತೇನೆ
ನಿಮ್ಮ-ನಮ್ಮವರ ಪರವಾಗಿ
ಶರಣು ಶರಣಾರ್ಥಿಗಳು ನಮ್ಮೊಡೆಯರೇ..!
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು)