ಹಾವನ್ನು ಕಂಡರೆ ಭಯ, ಭಕ್ತಿ, ಗೌರವ – ಶಶಿಧರ ಹಾಲಾಡಿಅದ್ಯಾಕೋ ಗೊತ್ತಿಲ್ಲ, ಹಾವುಗಳೆಂದರೆ ಮನುಷ್ಯನಿಗೆ ಮೊದಲಿನಿಂದಲೂ ಭಯ, ಭಕ್ತಿ, ಗೌರವ. ಅದರಲ್ಲೂ ನಾಗರಹಾವು ಎಂದರೆ ವಿಶೇಷ ಗೌರವ, ಭಯ. ಹಾವಿನ ಕುರಿತು ಅಂಕಣಕಾರ ಶಶಿಧರ ಹಾಲಾಡಿ ಅವರು ಬರೆದಿರುವ ವಿಶೇಷ ಲೇಖನವಿದು,ಮುಂದೆ  ಓದಿ…

ಪುರಾತನ ಮಾನವನು ನಾಗರಹಾವಿನಲ್ಲಿದ್ದ ವಿಷವನ್ನು ಕಂಡೇ ಗೌರವಿಸಿದನೇ ಅಥವಾ ಅದರ ವರ್ತನೆಯಲ್ಲಿ ಅಂತರ್ಗತವಾಗಿರುವ ವಿಶಿಷ್ಟ ಗುಣಗಳನ್ನು ಕಂಡು ಅದಕ್ಕೆ ನಮಿಸಿದನೋ? ಹೆಚ್ಚು ಹಾವುಗಳಿರುವ ಪ್ರದೇಶದಲ್ಲಿ ಅವುಗಳ ಮೇಲೆ ಭಕ್ತಿ ಜಾಸ್ತಿಯೆ? ನಾಗರ ಹಾವಿಗೆ ಇದ್ದ ವಿಪರೀತ ನೆನಪಿನ ಶಕ್ತಿಯೋ, ಇನ್ಯಾವುದೋ ಶಕ್ತಿಯೋ ಮನುಷ್ಯನನ್ನು ಬೆದರಿಸಿತ್ತೆ? ಅಥವಾ ಪರಶಿವನು ಹಾವನ್ನು ಕೊರಳಿಗೆ ಸುತ್ತಿಕೊಂಡಿದ್ದರಿಂದ, ಗಣಪನು ಹಾವನ್ನು ತನ್ನ ಹೊಟ್ಟೆಗೆ ಕಟ್ಟಿಕೊಂಡದ್ದರಿಂದ ಅವುಗಳ ಮೇಲೆ ಪೂಜ್ಯ ಭಾವನೆ ಬೆಳೆಯಿತೆ? ನಾಗಲೋಕ, ನಾಗಕನ್ನಿಕೆ, ನಾಗ ದೇವರು ಮೊದಲಾದ ಪರಿಕಲ್ಪನೆಗಳು ನಮ್ಮ ನಾಡಿನಾದ್ಯಂತ ಬೆಳೆದಿರುವ, ನಮ್ಮ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಪರಿ ಮಾತ್ರ ವಿಸ್ಮಯ ಹುಟ್ಟಿಸುವಂತಹದ್ದು. ಭಾರತದಿಂದಾಚೆಗೂ ನಾಗನನ್ನು, ಇತರ ಹಾವುಗಳನ್ನು ಪೂಜಿಸುವ, ಗೌರವಿಸುವ ಸಂಪ್ರದಾಯವುಂಟು.

ಫೋಟೋ ಕೃಪೆ : The new indian express

ನಮ್ಮ ರಾಜ್ಯದ ವಿಷಯಕ್ಕೆ ಬಂದರೆ, ನಾಡಿನಾದ್ಯಂತ ನಾಗನ ಕಲ್ಲಗಳು, ಹುತ್ತಗಳು ವ್ಯಾಪಿಸಿವೆ. ವಿದುರಾಶ್ವತ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣಯ ಮೊದಲಾದ ಸ್ಥಳಗಳು ನಾಗನ ಪೂಜೆಗೆಂದೇ ರೂಪುಗೊಂಡು, ಪುರಾತನ ಐತಿಹ್ಯಗಳೊಂದಿಗೆ ತಳುಕುಹಾಕಿಕೊಂಡಿವೆ. ನಾಗನ ಕಲ್ಲನ್ನು ಸ್ಥಾಪಿಸುವಲ್ಲಿ, ಹುತ್ತಕ್ಕೆ ಹಾಲೆರೆಯುವಲ್ಲಿ, ವಿವಿಧ ರೀತಿಯ ಪೂಜೆಗಳನ್ನು ಮಾಡುವಲ್ಲಿ ಬೆಸೆದು ಹೋಗಿರುವ ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರವನ್ನು ಒತ್ತಟ್ಟಿಗಿಟ್ಟು, ಯೋಚಿಸಿದರೆ, ಹಾವುಗಳು ಮನುಷ್ಯನ ದಿನಚರಿಯಲ್ಲಿ, ಆಚರಣೆಯಲ್ಲಿ ಒಳಗೊಂಡಿರುವ ಪರಿ ಬಹು ಕುತೂಹಲಕಾರಿ. ಹನ್ನೆರಡನೆಯ ಶತಮಾನದಲ್ಲೇ `ಕಲ್ಲನಾಗರ ಕಂಡರೆ ಹಾಲೆರೆಯೆಂಬರು, ವಿಷದ ನಾಗರ ಕಂಡರೆ ಕೊಲ್ಲೆಂಬರಯ್ಯಾ’ ಎಂಬ ವಚನ ರೂಪುಗೊಂಡದ್ದು ಇಲ್ಲಿ ನೆನಪಾಗುತ್ತದೆ.
ಹಾವುಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಅವುಗಳ ಮೇಲಿ ಮನುಷ್ಯನ ಗೌರವ ಜಾಸ್ತಿಯಿರಬಹುದು ಎಂಬ ನನ್ನ ಯೋಚನೆಗೆ ತಳಹದಿ ಎಂದರೆ, ನಮ್ಮ ಕರಾವಳಿಯಲ್ಲಿ ಕಂಡುಬರುವ ನಾಗನ ಮೇಲಿನ ಭಕ್ತಿಯ ಪ್ರಮಾಣ. ಕರಾವಳಿ ಮತ್ತು ಮಲೆನಾಡಿನಲ್ಲಿ, ಅಲ್ಲಿನ ನೀರಿನಾಶ್ರಯ ಮತ್ತು ಕಾಡಿನ ವಾತಾವರಣದಿಂದಾಗಿ ಸಹಜವಾಗಿ ಹಾವುಗಳ ಸಂಖ್ಯೆ ಜಾಸ್ತಿ. ಆದರೂ ಅಲ್ಲಿನ ಜನ ನಾಗರಹಾವಿಗೆ ನೀಡುವ ಗೌರವ ಅಭೂತಪೂರ್ವ. ಕರ್ನಾಟಕದ ಬಯಲುಸೀಮೆಯವರಿಗೆ ಒಂದು ವಿಚಾರ ತಿಳಿದರೆ ಅಚ್ಚರಿ ಎನಿಸಬಹುದು – ಕರಾವಳಿಯ ಬಹುಪಾಲು ಜನರು ನಾಗರಹಾವನ್ನುಸಾಯಿಸುವುದಿಲ್ಲ, ಅವುಗಳಿಗೆ ಕೋಲಿನಿಂದ ಹೊಡೆಯುವುದೂ ಇಲ್ಲ! ಕರಾವಳಿಯಲ್ಲೇ ಬಾಲ್ಯ ಕಳೆದ ನನಗೆ, ಅರಸಿಕೆರೆ ಪ್ರದೇಶದಲ್ಲಿ ವಾಸಿಸುವ ಅವಕಾಶ ದೊರೆತಾಗ, ಆ ಬಯಲುಸೀಮೆಯ ಜನರು ಹಿಂದೆ ಮುಂದೆ ನೋಡದೇ ನಾಗರಹಾವನ್ನು ಬಡಿದು ಸಾಯಿಸುವುದನ್ನು ಕಂಡು ಬಹಳ ಅಚ್ಚರಿ ಎನಿಸಿತ್ತು. ನಾನಿದ್ದ ಬಾಡಿಗೆ ರೂಮಿನ ಕೆಳಭಾಗದಲ್ಲಿ ನಾಗರಹಾವೊಂದು ಬಂದಾಗ, ಮನೆ ಮಾಲಿಕರು ತಕ್ಷಣ ಜನರನ್ನು ಕರೆಯಿಸಿ, ಅದನ್ನು ಹೊಡೆಯಿಸಿಹಾಕಿದ್ದು ಕಂಡು ನಾನು ನಿಬ್ಬೆರಗಾಗಿ ಹೋಗಿದ್ದೆ! ಕರಾವಳಿಯ ಜನರಿಗೆ ನಾಗರ ಹಾವಿನ ಕುರಿತು ಅದಷ್ಟು ಭಕ್ತಿ-ಗೌರವ ಎಂದರೆ, ಅದು ಮನುಷ್ಯನಿಗೆ ಕಚ್ಚಿದಾಗ ಸಹ ಹೆಚ್ಚಿನವರು ಆ ನಾಗರಹಾವನ್ನು ಬಡಿದು ಸಾಯಿಸುವುದಿಲ್ಲ!

ಫೋಟೋ ಕೃಪೆ : http://ghatisubrahmanya.com/

ಹೆಜ್ಜೆ ಹೆಜ್ಜೆಗೂ ನಾಗನ ಕಲ್ಲುಗಳು :

ನಮ್ಮೂರಿನಲ್ಲಿ ಹೆಜ್ಜೆಹೆಜ್ಜೆಗೂ ನಾಗನನ್ನು ಪೂಜಿಸುವ ತಾಣಗಳಿವೆ. ಬಯಲು ಗದ್ದೆಯ ನಡುವೆ ನಮ್ಮ ಹಳ್ಳಿ ಮನೆ. ನಾಲ್ಕಾರು ಗದ್ದೆಯಾಚೆ, ನೀರು ಹರಿಯುವ ತೋಡನ್ನು ದಾಟಿದರೆ ಹಾಡಿ, ಹಕ್ಕಲಿನ ಜಾಗ. ನಮ್ಮ ಮನೆಯ ಎದುರಿನ ಹಾಡಿಯಲ್ಲಿ ಎರಡು ಕಡೆ ನಾಗನ ಪೂಜಿಸುವ ತಾಣಗಳಿವೆ. ಒಂದು ಕಡೆ ಆರೆಂಟು ಮರಗಳ ಕೆಳಗೆ ನಾಲ್ಕಾರು ನಾಗನ ಕಲ್ಲುಗಳು. ಅವಕ್ಕೆ ಆಶ್ರಯ ನೀಡಿರುವ ಮರಗಳು ಭಾರೀ ಗಾತ್ರಕ್ಕೆ ಬೆಳೆದು, ಅವುಗಳ ತುಂಬಾ ಬಳ್ಳಿಗಳು ಹಬ್ಬಿದ್ದವು. ಕೃಷಿಗೆ ಅಗತ್ಯೆನಿಸುವ ಸೊಪ್ಪನ್ನು ತರುವಾಗ, ಸುಡುಮಣ್ಣನ್ನು ತಯಾರಿಸುವಾಗ, ಯಾವ ಕಾರಣಕ್ಕೂ ಆ ಮರಗಳಿಂದ ಸೊಪ್ಪನ್ನು ತೆಗೆಯುತ್ತಿರಲಿಲ್ಲ. ಆದ್ದರಿಂದಲೇ ಅವು ಬೃಹದಾಕಾರಕ್ಕೆ ಬೆಳೆದು, ಹಕ್ಕಿಗಳಿಗೆ ಆಶ್ರಯ ನೀಡಿದ್ದವು. ನಾಗನ ಬನ ಎಂದೇ ಅದಕ್ಕೆ ಹೆಸರು. ಈ ತಾಣದಿಂದ ಸುಮಾರು 200 ಅಡಿ ಮುಂದೆ ಸಾಗಿದರೆ, ಕುರುಚಲು ಗಿಡಗಳು ಬೆಳೆದಿದ್ದ ಜಾಗದಲ್ಲಿ ಪುಟ್ಟ ಹುತ್ತದಂತಹ ಜಾಗ, ಅಲ್ಲೂ ಎರಡೋ ಮೂರೋ ನಾಗನ ಕಲ್ಲುಗಳಿದ್ದವು.

ನಮ್ಮ ಮನೆಯ ಹಿಂದೆ ಇದ್ದ ಸೇಡಿಮಣ್ಣಿನ ದರೆಯನ್ನು ಹತ್ತಿ ಹೋದರೆ, ಅಲ್ಲಿ ಬೆಳೆದಿದ್ದ ಬೃಹದಾಕಾರದ ಬೋಗಿ ಮರದ ಬುಡದಲ್ಲಿ ಒಂದೆರಡು ನಾಗನಕಲ್ಲುಗಳಿದ್ದವು. ಇವೆಲ್ಲವೂ ಸ್ಥಳೀಯರ ಪೂಜಾ ತಾಣಗಳು. ಅಂದರೆ, ಪ್ರತಿದಿನ ಅವುಗಳಿಗೆ ಪೂಜೆ ನಡೆಯುತ್ತಿತ್ತು ಎಂಬರ್ಥವಲ್ಲ. ನಾಗರ ಪಂಚಮಿ ದಿನ, ಕೆಲವು ಸೋಮವಾರಗಳಂದು ಆ ಕಲ್ಲುಗಳಿಗೆ ಪೂಜೆ. ಕೆಲವು ಬಾರಿ ಸುತ್ತಮುತ್ತಲಿನವರು ಯಾರಾದರೂ ಪೂಜೆ ಹೇಳಿಕೊಂಡಾಗ, ಬಾಳೆಗೊನೆಯೊಂದನ್ನು ಆ ಕಲ್ಲುಗಳ ಎದುರು ಇಟ್ಟು ಪೂಜೆ ಮಾಡುವುದು ಉಂಟು. ಹಣ್ಣಾದ ಬಾಲೆಗೊನೆಯನ್ನು ನಾಗನಿಗೆ ಸಮರ್ಪಿಸುವುದನ್ನು `ತನು ಎರೆಯುವುದು’ ಎನ್ನುತ್ತಾರೆ. ನಾಗರ ಹಾವಿಗೆ ಬಾಳೆ ಹಣ್ಣು ಎಂದರೆ ಇಷ್ಟ ಇರಬೇಕು!?

ನಮ್ಮ ಮನೆಯ ಸುತ್ತ ಈ ರೀತಿ ಮೂರು ಜಾಗಗಳಲ್ಲಿ ನಾಗನ ಕಲ್ಲುಗಳಿಗೆ ಪೂಜೆ ನಡೆಯುತ್ತಿರುವುದು ಒಂದೆಡೆಯಾದರೆ, ಮನೆ ಎದುರಿನ ಹಾಡಿಯಲ್ಲಿ, ಅರ್ಧ ಕಿಮೀ ಸಾಗಿದರೆ, ಅಲ್ಲಿ ಇನ್ನೊಂದು ಪೂಜಾತಾಣ. ಅಲ್ಲಿ ಪೂಜೆಗೊಳ್ಳುವ ಉರಗನಿಗೆ ` ಕಾಡ್ಯ’ ಎಂದು ಕರೆಯುತ್ತಾರೆ. ಕಾಡ್ಯ ಎಂದರೆ #ಕಾಳಿಂಗ_ಸರ್ಪ. ನಮ್ಮೂರಲ್ಲಿ ಕಾಳಿಂಗ ಸರ್ಪ ಅಥವಾ ಕಾಡ್ಯನನ್ನೇ ನಂಬಿರುವ ಜನಾಂಗವೊಂದಿದೆ! ಅವರು ಅಪರೂಪಕ್ಕೊಮ್ಮೆ ಬಂದು ಕಾಡ್ಯನ ಪೂಜೆ ಮಾಡುತ್ತಿದ್ದರು. ಹಿರಿಯ ವಿದ್ವಾಂಸರಾದ ಪ್ರೊ. ಎ.ವಿ.ನಾವಡ ಅವರು ಈ ಪೂಜೆಯನ್ನು ಅಧ್ಯಯನ ಮಾಡಿ, “ಕಾಡ್ಯನಾಟ” ಎಂಬ ಸಂಶೋಧನಾ ಗ್ರಂಥವನ್ನು ರಚಿಸಿದ್ದಾರೆ.

ಪ್ರೊ. ಎ.ವಿ.ನಾವಡ  ಫೋಟೋ ಕೃಪೆ : vishwavani

ಇದಲ್ಲದೇ, ನಮ್ಮೂರಿನ ತುಂಬಾ ಅಲ್ಲಲ್ಲಿ ನೂರಾರು ನಾಗನ ಕಲ್ಲುಗಳಿವೆ! ಪ್ರತಿ ಮನೆಗೆ ಒಂದು ನಾಗನ ಬನ ಇರುವ ಸಂದರ್ಭವೂ ಉಂಟು! ಬಯಲಿನ ಅಂಚಿನಲ್ಲಿ, ಕಾಡಿನ ಕಿಬ್ಬದಿಯಲ್ಲಿ ಇರುವ ಇಂತಹ ಕಲ್ಲುಗಳು ಇಂತಿಂಥವರ ಮನೆಗೆ ಸೇರಿದ್ದು ಎಂಬ ಗುರುತಿಸುವಿಕೆಯೂ ಇದೆ. ಆ ನಿರ್ದಿಷ್ಟ ಮನೆಗಳವರು ಆ ಕಲ್ಲುಗಳಿಗೆ ಕನಿಷ್ಟ ವರ್ಷಕ್ಕೆ ಒಮ್ಮೆಯಾದರೂ ಪೂಜೆ ಮಾಡಿ ಗೌರವ ಸೂಚಿಸುತ್ತಾರೆ. ಹಾಗೆ ಮಾಡದೇ ಇದ್ದರೆ “ನಾಗನ ಉಪದ್ರ” ಆರಂಭವಾಗಬಹುದು ಎಂಬ ಭಯ! ಮಾಮೂಲಿ ಸರಳ ಪೂಜೆಯ ಜತೆಯಲ್ಲೇ, ವಿಶೇಷ ಪೂಜೆಯಾಗಿ ಆಶ್ಲೇಷ ಬಲಿ, ನಾಗ ಮಂಡಲಗಳು ನಡೆಯುವುದು ಕರಾವಳಿಯಲ್ಲಿ, ಮಲೆನಾಡಿನಲ್ಲಿ ಮಾಮೂಲು. ನಾಗ ಮಂಡಲದಲ್ಲಿ ವಿವಿಧ ಬಗೆಗಳು -ಕಾಲು, ಅರ್ಧ, ಪೂರ್ತಿ ಎಂಬ ವಿಧ. ನಾಗಮಂಡಲಗಳು ನಡೆದಾಗ, ಒಂದೆರಡು ದಿನ ಅಲ್ಲಿ ಜನಜಾತ್ರೆ. ನಾಗ ಮಂಡಲದ ಪೂಜೆ ನಡೆಸಲು ಪ್ರತ್ಯೇಕ ಜನಾಂಗ, ಆ ಸಂದರ್ಭದಲ್ಲಿ ಢಕ್ಕೆ ಬಾರಿಸಿಕೊಂಡು ನೃತ್ಯ ಮಾಡುವ ವಿಶೇಷ ಪರಿಣಿತ ವ್ಯಕ್ತಿಗಳೇ ಕರಾವಳಿಯಲ್ಲಿದ್ದಾರೆ. ಇರಲಿ, ನಾಗಮಂಡಲ ಆಚರಣೆಯ ಕುರಿತು ಬರೆಯತೊಡಗಿದರೆ, ಅದಕ್ಕೇ ವಿಶೇಷ ಪುಟ ಬೇಕಾದೀತು.

ನೀರುಳ್ಳಿ ಹಾವು!

ಉರಗಗಳ ಕುರಿತ ನಮ್ಮೂರ ನಂಬಿಕೆಗಳು, ಐತಿಹ್ಯಗಳ ಕುರಿತು ಹೇಳುವುದಾದರೆ- ನಮ್ಮೂರಲ್ಲಿ ಒಳ್ಳೆ ಅಥವಾ ನೀರೊಳ್ಳೆ ಹಾವುಗಳು ಬಹುಸಾಮಾನ್ಯ. ಈ ನೀರೊಳ್ಳೆ ಯಾವುಗಳನ್ನು ಕೆಲವರು ನೀರುಳ್ಳಿ ಹಾವು ಎಂದೂ ಹಾಸ್ಯಕ್ಕೋ, ಅರಿಯದೆಯೋ ಹೇಳುವುದನ್ನು ಕೇಳಿದ್ದೇನೆ. ಒಳ್ಳೆ ಹಾವುಗಳನ್ನು ಯಾರೂ ಸಾಯಿಸುವುದಿಲ್ಲ. ನಿರಪಾಯಕಾರಿ, ವಿಷರಹಿತ ಈ ಹಾವುಗಳು ಗದ್ದೆ, ತೋಟ, ಬಾವಿಗಳಲ್ಲಿ ಓಡಾಡಿಕೊಂಡು, ಕಪ್ಪೆ ಹಿಡಿಯುತ್ತಾ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿರುತ್ತವೆ. ಇದಕ್ಕಿಂತ ತುಸು ದೊಡ್ಡ ಗಾತ್ರದ ಹೈಸಾರ ಹಾವುಗಳು (ಕೇರೆಹಾವು) ಸಹ ನಿರಪಾಯಕಾರಿ. ನಾಗರ ಹಾವಿನ ಗಾತ್ರಕ್ಕೆ ಬೆಳೆಯಬಲ್ಲ ಇವು ವೇಗವಾಗಿ ಸಂಚರಿಸುತ್ತಾ, ಕಪ್ಪೆ, ಇಲಿಗಳನ್ನು ಹಿಡಿದು ಜೀವನ ಮಾಡುತ್ತವೆ. ಈ ಹೈಸಾರ ಹಾವುಗಳು ಎಷ್ಟು ಸಾಮಾನ್ಯ ಎಂದರೆ, “ಹೈಸಾರ ಹಾವಿಗೆ ಬೆನ್ನು ತುರಿಸಿದರೆ, ಗಂಟಿ ಹಿಂಡು ಮೇಯಿಸುವ ಮಕ್ಕಳ ಹತ್ತಿರ ಹೋಗುತ್ತದೆ” ಎಂಬ ಗಾದೆಯೇ ಇದೆ! ಆಗ ಅದರ ಬೆನ್ನಿಗೆ ಒಂದೆರಡು ಏಟು ಹಾಕುವ ಮಕ್ಕಳು, ಅದರ ಬೆನ್ನು ತುರಿಕೆಯನ್ನು ಕಡಿಮೆ ಮಾಡುತ್ತಾರಂತೆ! ಹೈಸಾರ ಹಾವನ್ನು ಸಹ ಸ್ಥಳೀಯರು ಕೊಲ್ಲುವುದಿಲ್ಲ. ಹಿಂದೆ ಹಾವಿನ ಚರ್ಮಕ್ಕಾಗಿ ಬೇಟೆಯಾಡುವವರು ಇದನ್ನು ಹಿಡಿಯುತ್ತಿದ್ದರೂ, ಈಗ ಆ ಚಟುವಟಿಕೆ ನಿಷೇಧಗೊಂಡದೆ. “ಹೆಗಲ” ಎಂಬ ಇನ್ನೊಂದು ಪುಟಾಣಿ ಹಾವಿದೆ. ಕೈಬೆರಳಿನಷ್ಟು ದಪ್ಪ ಇರುವ ಇವು ಸಹ ನಿರುಪದ್ರವಿ. ಹಸಿರು ಹಾವು ಅಥವಾ “ಹಸಿ ಹಾವು” ಎಂಬ ಇನ್ನೊಂದು ರೀತಿಯ ಹಾವುಗಳು ಗಿಡಗಳ ಮೇಲೆ ಬಳುಕುತ್ತಾ ಓಡಾಡುತ್ತಿರುತ್ತವೆ. ಎಲೆ ಹಸಿರು ಬಣ್ಣದ ಈ ಹಾವುಗಳನ್ನು ಕಂಡರೆ, ಹಿಡಿದು ಮುದ್ದಾಡೋಣ ಎನ್ನಿಸಲೂಬಹುದು!

ಫೋಟೋ ಕೃಪೆ : schooloflivingdreams

ಕಿಸೆಯಲ್ಲಿ ಹಸಿ ಹಾವು!

ತಿಳಿ ಹಸಿರು ಬಣ್ಣದ, ವಿಷರಹಿತ ಹಸಿರುಹಾವುಗಳನ್ನು ಇಷ್ಟ ಪಡುವ ಒಂದು ಜನವರ್ಗ ನಮ್ಮೂರಿನಲ್ಲಿತ್ತು , ಈಗ ಕಾನೂನಿನ ಭಯದಿಂದ ಆ ಜನವರ್ಗದ ಸಂಖ್ಯೆ ಕಡಿಮೆಯಾಗಿದೆ! ಆ ಜನವರ್ಗ ರೂಪುಗೊಳ್ಳಲು ಜಾತಿ ಮತ ಭೇದಗಳಿಲ್ಲ! ಅವರೆಲ್ಲರ ಸಾಮಾನ್ಯ ಹವ್ಯಾಸವೆಂದರೆ, ಅವರೆಲ್ಲರೂ ಕೋಳಿ ಪಡೆ (ಕೋಳಿ ಅಂಕ) ಆಡುವ `ಕ್ರೀಡಾಳು’ಗಳು! ಪ್ರತಿ ಹುಣ್ಣಿಮೆ -ಅಮಾವಾಸ್ಯೆಗಳಂದು ಊರಿಂಚಿನಲ್ಲೋ, ಹಾಡಿಬದಿಯಲ್ಲೋ ನಡೆಯುತ್ತಿದ್ದ ಕೋಳಿಪಡೆಯಲ್ಲಿ, ತಮ್ಮ ಕೋಳಿಗಳನ್ನು ಹೋರಾಡಲು ಬಿಟ್ಟು, ಜೂಜು ಕಟ್ಟುವ ಸ್ಪರ್ಧಾಳುಗಳು ಇವರು! ಕೋಳಿಪಡೆ ಎಂಬ ಜಾನಪದ ಆಡವನ್ನು ಜೂಜು ಎಂದು ಈಗ ಸರಕಾರ ನಿಷೇಧಿಸಿದ್ದರಿಂದ, ಈಗ ನಮ್ಮೂರಿನ ಮನರಂಜನೆಯೆನಿಸಿದ್ದ ಕೋಳಿ ಪಡೆ ಕಡಿಮೆಯಾಗಿದೆ. ಕೋಳಿಪಡೆಯ ಹುರಿಯಾಳುಗಳಿಗೂ, ಹಸಿರು ಹಾವಿಗೂ ಇರುವ ಸಂಬಂಧ ಬಹು ಕುತೂಹಲಕಾರಿ. ಗಿಡ, ಮರಗಳಲ್ಲಿ ವಾಸಿಸುವ ಹಸಿರುಹಾವನ್ನು ಹಿಡಿದು, ಉಪಾಯವಾಗಿ ತಮ್ಮ ಕಿಸೆಯಲ್ಲಿಟ್ಟುಕೊಂಡು, ಕೋಳಿಪಡೆಗೆ ಹೋದರೆ, ಅವರ ಕೋಳಿಯು ಎದುರಾಳಿ ಕೋಳಿಯನ್ನು ಸುಲಭವಾಗಿ ಸೋಲಿಸುತ್ತದೆ ಎಂಬ ನಂಬಿಕೆ ಇತ್ತು!

ಹಸಿರು ಹಾವಿನ ರೀತಿಯಲ್ಲೇ, ಮರದ ಮೇಲೆ ವಾಸಿಸುವ ಇನ್ನೊಂದು ಹಾವೆಂದರೆ `ಮರ ಹಾವು’. ವಿಷಕಾರಿ ಎನಿಸಿರುವ ಇವು ಮರದ ಮೇಲೆಯೇ ಇದ್ದು, ಕೆಳಗೆ ಸಂಚರಿಸುವ ಮನುಷ್ಯರ ತಲೆಯಮೇಲೆ ಹಾರಿ, ಕುಕ್ಕುತ್ತವಂತೆ! ಅದಕ್ಕೆಂದೇ, ಅವುಗಳಿಂದ ರಕ್ಷಣೆ ಪಡೆಯಲು ಹಾಡಿ, ಹಕ್ಕಲುಗಳಲ್ಲಿ ಓಡಾಡುವ ಜನರು ಅಡಕೆ ಹಾಳೆಯಿಂದ ತಯಾರಿಸಿದ ಮಂಡ್ಹಾಳೆಯನ್ನು ಅವಶ್ಯ ಧರಿಸಿರುತ್ತಾರೆ. ಮರದಿಂದ ಹಾರಿ ಮನುಷ್ಯನನ್ನು ಕುಕ್ಕಲು ಯತ್ನಿಸುವ ಹಾವನ್ನು ನಾನೊಮ್ಮೆ ಕಂಡಿದ್ದುಂಟು – ಅದೃಷ್ಟವಶಾತ್, ನನ್ನ ಮುಂದೆ ನಡೆದುಹೋಗುತ್ತಿದ್ದ ಆ ವ್ಯಕ್ತಿಯ ಮೇಲೆ ಆ ಹಾವು ನೆಗೆದು ಹಾರಿದರೂ, ಗುರಿ ತಪ್ಪಿ ಅದು ನೆಲಕ್ಕೆ ಬಿದ್ದು, ಹರಿದು ಪೊದೆಯತ್ತ ಸಾಗಿತು.

ಮರ ಹಾವಿನ ರಿತಿ ಇನ್ನೂ ಕೆಲವು ವಿಷಕಾರಿ ಹಾವುಗಳು ನಮ್ಮ ಹಳ್ಳಿಯಲ್ಲಿವೆ. ಉರಗ ತಜ್ಞರ ಪ್ರಕಾರ ನಮ್ಮ ದೇಶದಲ್ಲಿರುವ ಸುಮಾರು 270 ಪ್ರಭೇದದ ಹಾವುಗಳ ಪೈಕಿ, 60 ಪ್ರಭೇದಗಳು ವಿಷಕಾರಿ ಎನಿಸಿದರೂ, ಸಾಮಾನ್ಯ ಎನಿಸಿರುವ ನಾಲ್ಕು ಪ್ರಮುಖ ಪ್ರಬೇಧದ ಹಾವುಗಳು ಹೆಚ್ಚು ಅಪಾಯಕಾರಿ. ಅವೆಂದರೆ ನಾಗರಹಾವು, ಕಾಳಿಂಗಸರ್ಪ, ಕಟ್ಟು ಹಾವು, ಕೊಳಕು ಮಂಡಲ. ನಮ್ಮ ಹಳ್ಳಿಯಲ್ಲಿ ಹೆಚ್ಚು ಕಾಣಸಿಗುವ ವಿಷಕಾರಿ ಹಾವುಗಳು ಸಹ ಈ ಪ್ರಭೇದದವು.

ತೌಡಪ್ಪಳಕ ಎಂಬ ಪುಟ್ಟ ವಿಷಕಾರಿ ಹಾವು ನಮ್ಮ ಹಳ್ಳಿಯ ಒಣ ಜಾಗಗಳಲ್ಲಿ, ಗದ್ದೆಗಳಲ್ಲಿ ಇರುತ್ತವೆ. ಅಲ್ಪಪ್ರಮಾಣದ ವಿಷಕಾರಿ. ಆದರೆ, ಕೊಳಕುಮಂಡಲ ಕಚ್ಚಿದರೆ ಬಹು ಅಪಾಯಕಾರಿ. ತೋಡು, ಕಾಡಂಚಿನ ದಾರಿಗಳಲ್ಲಿ ಓಡಾಡುವಾಗ ಕರಿದ ಎಣ್ಣೆ ತಿಂಡಿ ವಾಸನೆ ಬಂದರೆ, ಅಲ್ಲಿ ಕೊಳಕು ಮಂಡಲ ಇದೆ ಎಂದೇ ಅರ್ಥ. ಇದನ್ನು ಕಂದಡಿಯ ಅಥವಾ ಕನ್ನಡಿ ಹಾವು ಎನ್ನುವುದುಂಟು. ಮಧ್ಯಮ ಗಾತ್ರದ ಕಟ್ಟು ಹಾವುಗಳು (ಕಡಂಬಳಕ) ನಮ್ಮೂರಲ್ಲಿ ಸಾಮಾನ್ಯ ಎನಿಸಿದ್ದ ಕಾಲವಿತ್ತು; ಆದರೆ ಕಂಡಕಂಡಲ್ಲಿ ಅವುಗಳನ್ನು ಸಾಯಿಸಿದ್ದರಿಂದ ಈಗ ಅವುಗಳ ಸಂಖ್ಯೆ ಕಡಿಮೆ. ನಾಗರಹಾವನ್ನುಳಿದು, ಇತರ ವಿಷಕಾರಿ ಹಾವುಗಳನ್ನು ಸಾಯಿಸಲು ನಮ್ಮೂರಿನ ರೈತರು ಹಿಂದೆ ಮುಂದೆ ನೋಡುವುದಿಲ್ಲ.ಕಾಲ್ಪನಿಕ ಹಾವು?

ಹೆಬ್ಬಾವು ನಮ್ಮ ಹಳ್ಳಿಯಲ್ಲಿ ವಿರಳ ಎನಿಸಿದರೂ, ಆರೆಂಟು ಕಿಮೀ ದೂರದ ಅಮಾವಾಸ್ಯೆಬೈಲು ಸುತ್ತಲಿನ ಕಾಡಿನಲ್ಲಿ ಅವು ಇವೆ. ಹೆಬ್ಬಾವನ್ನು ಹೋಲುವ `ಕೂ’ ಎಂದು ಕೂಗು ಹಾಕಿ ಮನುಷ್ಯರನ್ನು ಹತ್ತಿರ ಕರೆದು ನುಂಗುತ್ತವೆ ಎನ್ನಲಾಗುವ ಕಾಲ್ಪನಿಕ ಹಾವೊಂದು ದಟ್ಟ ಕಾನನದಲ್ಲಿ ಇವೆ ಎಂಬ ನಂಬಿಕೆ ನಮ್ಮೂರಲ್ಲಿ ಇದೆ. ಅದರ ಭಯದಿಂದಾಗಿ, ಕಾಡಿನ ನಡುವೆ ಸಾಗುವಾಗ `ಕೂ’ ಎಂದು ಕೂಗಬಾರದು, ಹಾಗೆ ಕೂಗಿದರೆ ಆ `ಭಯಾನಕ ಹಾವು ಉಪಾಯದಿಂದ ಹತ್ತಿರ ಸಾರಿ ಬಂದು, ಮನುಷ್ಯನನ್ನು ನುಂಗುತ್ತದೆ ಎಂಬ ಈ ನಂಬಿಕೆ, ಕಾಲ್ಪನಿಕವಾಗಿದ್ದರೂ, ಕುತೂಹಲಕಾರಿ. ಬಹು ಹಿಂದೆ ನಮ್ಮ ಕಾಡುಗಳಲ್ಲಿದ್ದ, ಈಗ ನಶಿಸಿ ಹೋಗಿರಬಹುದಾದ ಜೀವಿಯೊಂದರ ನೆನಪೇ ಈ ನಂಬಿಕೆಯಾಗಿದ್ದರೂ ಇರಬಹುದು ಎಂದು ನಾನು ಆಗಾಗ ಯೋಚಿಸಿದ್ದುಂಟು.
ಉರಗಗಳ ಕುರಿತು ಇಷ್ಟೆಲ್ಲಾ ಹೇಳಿದ ನಂತರ, ನಾಗರಹಾವಿನಿಂದ ಅಪಾಯ ಇಲ್ಲವೇ ಎಂದು ನೀವು ಕೇಳಿದರೆ, `ಇಲ್ಲ’ ಎಂದು ಧೈರ್ಯದಿಂದ ಹೇಳುವಷ್ಟು ದಮ್ಮು ನನ್ನಲ್ಲಿಲ್ಲ. ನಾಗರ ಹಾವೇ ಆಗಿರಲಿ, ಯಾವುದೇ ವಿಷಕಾರಿ ಹಾವಾಗಿರಲಿ, ಅವು ಅಕಸ್ಮಾತ್ ಕಚ್ಚಿದರೆ ನಿಜಕ್ಕೂ ಅಪಾಯ. ತಕ್ಷಣ ಆ್ಯಂಟಿ ವೆನಮ್ ಇಂಜೆಕ್ಷನ್ ಪಡೆಯುವುದು ಅತಿ ಅಗತ್ಯ, ತುರ್ತು. ನಾಗರ ಹಾವು ಕಡಿತದ ಒಂದು ದುರ್ಘಟನೆ ನನ್ನ ನೆನಪಿನ ಮೂಲೆಯಲ್ಲಿದ್ದು, ಈಗಲೂ ಆಗಾಗ ಕಾಡುವುದುಂಟು.

ಫೋಟೋ ಕೃಪೆ : oneindia

ನಮ್ಮನ್ನಗಲಿದ ಸುಬ್ಬಣ್ಣ

ನಮ್ಮ ಮನೆ ಎದುರಿನ ಗದ್ದೆ ಬಯಲಿನಲ್ಲಿ ನಾವು ಆರೆಂಟು ಮಕ್ಕಳು ಆಟವಾಡುತ್ತಿದ್ದೆವು. ನಾನಾಗ ಎರಡನೆಯ ತರಗತಿಯಲ್ಲಿದ್ದೆ ಎಂಬ ನೆನಪು. ಸಂಜೆಗತ್ತಲೆಯ ಸಮಯ. ಬಟ್ಟೆಯ ಚೆಂಡನ್ನು ಒಬ್ಬರಿಗೊಬ್ಬರು ತೂರುತ್ತಾ, ಆಟ ಸಾಗಿತ್ತು. ಗದ್ದೆಯಾಚೆ ಒಂದು ತೋಡು; ಅದರಲ್ಲಿ ನೀರು ಒಣಗಿದ ಸಮಯ. ಅದರ ಅಂಚಿನಲ್ಲಿ ಮುಂಡುಕ, ನೆಕ್ಕರ್ಕ, ಲಕ್ಕಿಸೊಪ್ಪಿನ ಗಿಡಗಳು ಬೆಳೆದಿದ್ದವು. ಚೆಂಡು ತರಲು ಅಲ್ಲಿಗೆ ಹೋಗಿದ್ದ ಸುಬ್ಬಣ್ಣನು ಒಮ್ಮೆಗೇ `ನನಗೆ ಹಾವು ಕಚ್ಚಿತೋ’ ಎಂದು ಕೂಗುತ್ತಾ ಮನೆ ಕಡೆ ಓಡಿದ. ನನಗಿಂತ ನಾಲ್ಕು ವರ್ಷ ದೊಡ್ಡವನಾಗಿದ್ದ ಸುಬ್ಬಣ್ಣನು ನಮ್ಮ ಪಕ್ಕದ ಮನೆಯವ, ನನಗೆ ದಾಯಾದಿ ಕಸಿನ್.

ನಾವೆಲ್ಲರೂ ಅವನ ಕೂಗಿಗೆ ಬೆದರಿ, ಮನೆಯತ್ತ ಓಡಿದವು. ಹಿರಿಯರೊಬ್ಬರು ಬಂದು, ಹಾವನ್ನು ಗುರುತಿಸಿರಬೇಕು. ಸುಬ್ಬಣ್ಣನಿಗೆ ಹಾವು ಕಚ್ಚಿತು ಎಂಬ ಗುಲ್ಲು ಎದ್ದಿತು. ನಮ್ಮೂರಿನ ಹತ್ತಿಪ್ಪತ್ತು ಕಿಮೀ ಸುತ್ತ ಮುತ್ತ ಎಲ್ಲೂ ಆಸ್ಪತ್ರೆ ಇರಲಿಲ್ಲ. ಹಾವಿನ ವಿಷಕ್ಕೆ ಔಷಧ ನೀಡುವ ಪಂಡಿತರು ಬಂದರು. ಅವರು ಮರದ ಚಿಕ್ಕ ಒಳಲೆಯಲ್ಲಿ ಅದ್ಯಾವುದೋ ಬೇರಿನ ರಸವನ್ನು ತುಂಬಿ, ಒಂದು ಅಡಿ ತೆಂಗಿನ ಗರಿಯನ್ನು ಕತ್ತರಿಸಿ ಅದರ ಮೂಲಕ ಸುಬ್ಬಣ್ಣನ ಬಾಯಿಗೆ ಬಿಡುತ್ತಿದ್ದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಸುಬ್ಬಣ್ಣ ನಮ್ಮನ್ನು ಅಗಲಿದ. ನಾನು ಕಣ್ಣಾರೆ ಕಂಡ ಹಾವು ಕಡಿತದ ದುರ್ಘಟನೆ ಇದು. ಹಾವು ಕಡಿತದ ಇಂತಹ ಘಟನೆಗಳೇ, ಹಾವಿನ ಕುರಿತಾಗಿ ವಿಪರೀತ ಭಯ,ಭಕ್ತಿ, ಗೌರವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರಲೇಬೇಕು. ಆದರೆ, ಸುಬ್ಬಣ್ಣ ಸತ್ತ ನಂತರವೂ ನಮ್ಮ ಮನೆಯ ಸುತ್ತ ನಾಗರ ಹಾವು ಹಲವು ಬಾರಿ ಬಂದಿದೆ. ನಮ್ಮ ಮನೆಯೊಳಗೆ, ಮಾಡಿನ ಮೇಲೆ ಕನಿಷ್ಟ ಮೂರು ಬಾರಿ ನಾಗರ ಹಾವು ಬಂದಿದ್ದನ್ನು ನಾನು ಕಂಡಿದ್ದೇನೆ. ನಾವೆಲ್ಲಾ ಪರೀಕ್ಷೆಗೆಂದು ಓದುತ್ತಾ ಕುಳಿತಿರುವಾಗ, ನಾಗರ ಹಾವು ನಮ್ಮ ಮನೆಯ ಛಾವಣಿಯಲ್ಲಿ ನಿಧಾನವಾಗಿ ಸಂಚರಿಸುತ್ತಾ, ಇಲಿಗಳನ್ನು ಅರಸುತ್ತಿದ್ದುದು ಸಾಮಾನ್ಯ ದೃಶ್ಯ. ಆದರೆ ಅವುಗಳನ್ನು ಬೆದರಿಸಿ ಓಡಿಸಲಾಯಿತೇ ಹೊರತು, ಸಾಯಿಸುವ ಯೋಚನೆಯನ್ನು ನಮ್ಮಮನೆಯವರು ಮಾಡಲಿಲ್ಲ. ನಾಗರಹಾವನ್ನು `ದೇವರ ಹಾವು’ ಎಂದೇ ಕರೆಯುವ ಊರು ನಮ್ಮೂರು. ಆ ದಿನ ಸುಬ್ಬಣ್ಣ ಹಾವು ಕಡಿತದಿಂದ ಸತ್ತ ನಂತರವೂ, ಆ ಹಾವನ್ನು ಹುಡುಕುವ ಪ್ರಯತ್ನವನ್ನು ನಮ್ಮ ಮನೆಯವರು ಮಾಡಿಲ್ಲ ಎಂದರೆ, ಅದರ ಕುರಿತು ಇದ್ದ ಗೌರವಭಾವನೆಯನ್ನು ನೀವೇ ಲೆಕ್ಕಹಾಕಬಹುದು.

ಈ ರೀತಿಯ ಕಥನಗಳೆಷ್ಟೇ ಇರಲಿ, ಹಾವಿನ ಕುರಿತು, ಅದರಲ್ಲೂ ವಿಷಕಾರಿ ಹಾವಿನ ಕುರಿತು ನಾವೆಲ್ಲರೂ ಎಚ್ಚರದಿಂದ ಇರುವುದು ಅತಿ ಅವಶ್ಯಕ ಎಂಬುದು ಮಾತ್ರ ಒಂದು ಸರಳ ಸತ್ಯ.

ಘಾಟಿ ಸುಬ್ರಹ್ಮಣ್ಯದಲ್ಲಿರುವ ನೂರಾರು ನಾಗನ ಕಲ್ಲುಗಳು. 2. ಕೋಳಿಪಡೆಯಲ್ಲಿ ಅದೃಷ್ಟ ತರುತ್ತದೆ ಎಂದು ನಂಬಲಾಗಿರುವ ಹಸಿರು ಹಾವು)


  • ಶಶಿಧರ ಹಾಲಾಡಿ  (ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW