‘ಭವಸಾರ’ ಪುಸ್ತಕ ಪರಿಚಯ – ರವೀಂದ್ರ ಆರ್ ಆರ್

ಕವಿ ರವೀಂದ್ರ ಆರ್ ಆರ್ ಅವರು ಕವಿ ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ ಅವರ ‘ಭವಸಾರ’ ಕವನಸಂಕಲನ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಪುಸ್ತಕ : ಭವಸಾರ ಕವನ ಸಂಕಲನ 
ಲೇಖಕರು : ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ.
ಪ್ರಕಾಶಕರು: ಗೋಮಿನಿ ಪ್ರಕಾಶನ, ತುಮಕೂರು
ಬೆಲೆ : 100/ 

ಮೊನ್ನೆ ಮೈಸೂರಿನಲ್ಲಿ ಭೇಟಿಯಾದ ಕವಿ ಮಿತ್ರ ರವೀಂದ್ರ ಆರ್.ಆರ್ ರ ಒಂದು ಪತ್ರ ಮುದಗೊಳಿಸಿತು. ನನ್ನ ಮೊದಲ ಸಂಕಲನದ ಬಗ್ಗೆ ಒಂದಿಷ್ಟು ಮಾತು.ಅವರ ಪ್ರೀತಿಗೆ ಶರಣು.ಅವರದೇ ಬರಹ ನಿಮ್ಮ ಮುಂದೆ….

” ನಿಜವಾಗಿಯೂ ತಮ್ಮ ಕೃತಿ ಓದಿ ಹೊಸ ವಿಚಾರಗಳು ಅನಾವರಣಗೊಂಡಂತಾಯಿತು ಸಾರ್, ತಾವು ವ್ಯಕ್ತಿಗತವಾಗಿ ಹಾಸ್ಯ ಬೆರೆತ ನಗೆಚಟಾಕಿ ಹಾರಿಸುತ್ತಾ ಮಾತಾಡಿದರೂ ತಮ್ಮ ಕವನಗಳು ಮಾತ್ರ ತುಂಬಾ ಗಂಭೀರ ಸಾರ್ , ಈ ವಿಚಾರವೇ ನನಗೆ ಬಹಳ ಅಚ್ಚರಿ ಮೂಡಿಸಿದ್ದು, ತಮ್ಮ ಜೊತೆ ಇದ್ದಷ್ಟು ಕ್ಷಣ ನಗುನಗುತ್ತಾ ಸಮಾಜದ ಅಂಕು ಡೊಂಕನ್ನು ವಿಡಂಬಿಸುತ್ತಾ ಕಾಲ ಕಳೆದು ಹೋದದ್ದೇ ನೆನಪಾಗಲಿಲ್ಲ, ಆದರೆ ತಮ್ಮ ಭವಸಾಗರ ಕೃತಿ ಹಾಗಲ್ಲ ಅದು ನಿಜವಾಗಿಯೂ “ಭವ”ಸಾಗರವೇ ಸರಿ. ಗಂಭೀರ, ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡ ಕವನಗಳು ಒಂದೆಡೆಯಾದರೆ, ನೇರಾ ನೇರ ಮಾತಿನಂತಿರುವ ತಮ್ಮ ಕವಿಯ ಮಾತು ತಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. “ಈ ಎಲ್ಲಾ ಕವಿತೆಗಳು ನನ್ನ ಪ್ರಾರಂಭದ ಕವಿತೆಗಳು, ಮುಂದೆ ಒಂದಿಷ್ಟು ಮಾಗಬಹುದು, ಇನ್ನಷ್ಟು ಓದುಗರಿಗೆ ಪ್ರಿಯವಾದದ್ದು, ಚಿಂತನೆಗೆ ಹಚ್ಚಬಹುದಾದ ಕವಿತೆಗಳು ನನ್ನಿಂದ ಬರಬಹುದು” ಈ ಸಾಲುಗಳನ್ನು ನಿಜಕ್ಕೂ ನಾನು ಅಳವಡಿಸಿಕೊಳ್ಳಬೇಕು ಎನಿಸಿತು ಸಾರ್. ನನಗೆ ಹೆಚ್ಚು ವಿಮರ್ಶೆ ಬರೆಯುವುದು ಬರುವುದಿಲ್ಲ, ಹಾಗಾಗಿ ಬರೆಯುವುದೂ ಇಲ್ಲ. ಆದರೂ ಭವಸಾಗರ ಶೀರ್ಷಿಕೆಗೆ ತಕ್ಕಂತೆ ಕವಿತೆಗಳು ಅದರಲ್ಲಿಯೂ

“ಹಣತೆ ಇಲ್ಲದೆ ಬಹುದೂರ ಸಾಗಿ ಬಂದಿದ್ದೇನೆ”
“ಯಾರೋ ತಮಗಾಗಿ ಹೆಚ್ಚಿದ್ದ ಹಣತೆಗೆ ಕೃತಜ್ಞನಾಗಿದ್ದೇನೆ”
ಎಂದು ಕೃತಜ್ಞತಾ ಭಾವ ತೋರುವುದು.
“ನಾಭಿಯಿಂದ ಹುಟ್ಟಿ
ನಾಸಿಕ ಮುಟ್ಟಿ,
ಸ್ವರ ಹೊಮ್ಮುವುದೋ
ಅದೇ ಓಂಕಾರ”
ಎಂಬ ಆಧ್ಯಾತ್ಮಿಕ ಸಾಲುಗಳು ಗಂಭೀರ ಚಿಂತನೆಗೆ ಹಚ್ಚುತ್ತವೆ.
ಯಾವುದೇ ಪ್ರಾಸಕ್ಕೆ ತ್ರಾಸಕೊಡದೆ ನಡೆಯುವ
“ಯಾವುದೋ ಹಕ್ಕಿ
ಹಾಕಿರುವ ಹಿಕ್ಕೆ
ಈಗ ಸಸಿಯಾಗಿದೆ”

ಎನ್ನುವ ಕವನ ಪ್ರಕೃತಿಯ ಜೊತೆ ಜೊತೆಗೆ ಸಮಾಜದ ಆಗು ಹೋಗುಗಳನ್ನು ಮೌನವಾಗಿ ನೋಡುತ್ತಾ ಹೋದಂತೆ ಭಾಸವಾದರೂ ಅಡಿಗರ ಸಾಹಿತ್ಯದಂತೆ ಕಾಣುತ್ತದೆ.
ಮುಕ್ತಿ ಕವನದಲ್ಲಿ ಸಮಾಜಮುಖಿ ಆಶಯವನ್ನು ಹೊಂದಿದ್ದರೆ, “ಹಸಿವು” ನಿಜವಾಗಿಯೂ ಎಷ್ಟೋಸಲ ನಮ್ಮನ್ನು ನಾವು ಪ್ರತಿಕೂಲವಾಗಿ ನಮ್ಮ ತಪ್ಪುಗಳನ್ನು ನಾವೇ ವಿಮರ್ಶಿಸಿಕೊಳ್ಳುವ ಸಂದರ್ಭಗಳು ಮೂಡುವ ಸನ್ನಿವೇಶವನ್ನು ಅನಾವರಣ ಮಾಡಿದ್ದೀರಿ, ನಿಜವಾಗಿಯೂ ಒಬ್ಬ ಅಂತಃಕರಣ ಇರುವ ವ್ಯಕ್ತಿಗೆ ಮಾತ್ರ ಪಶ್ಚಾತ್ತಾಪ ಮೂಡುತ್ತದೆ, ತಾವು ಈ ಕವನದ ಮೂಲಕ ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸಿದ್ದೀರಿ, ತಮ್ಮ ಪ್ರತಿಯೊಂದು ಕವನವು ಒಂದೊಂದು ದಿಕ್ಕಿನ ವಿಚಾರಗಳನ್ನು ವಿಶ್ಲೇಷಣೆ ಮಾಡಿದರೂ ಕಟ್ಟಕಡೆಗೆ ಅಂತಃಕರಣ ತುಂಬಿದ ಭವಸಾಗರವನ್ನು ಸೇರುವಂತೆ ಮಾಡಿದ್ದೀರಿ, ನಿಜವಾಗಿಯೂ ತಮ್ಮ ಪುಸ್ತಕ ಓದಿ ಖುಷಿಯಾಯಿತು, ಮತ್ತೆ ಓದಬೇಕೆನಿಸಿತು, ನಾನು ಕಲಿಯಬೇಕೆನಿಸಿತು, ನಾಲ್ಕು ಮಾತು ಬರೆಯಿಸಿತು, ಅದೇ ಖುಷಿ ಸಾರ್


  • ರವೀಂದ್ರ ಆರ್ ಆರ್ (ವೃತ್ತಿಯಲ್ಲಿ ವಕೀಲರು, ಕವಿಗಳು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading