ಕಿರಣ್ ಸ್ವಾತಿಯನ್ನು ಕುಡಿದು ಬಂದು ಹೊಡೆಯುತ್ತಿದ್ದ, ಪ್ರೀತಿಸಿ ಮದುವೆಯಾಗಿ ಗಿಡುಗನ ಕೈಯಲ್ಲಿ ಒದ್ದಾಡಿ ಹೋಗಿದ್ದಳು ಸ್ವಾತಿ, ಮುಂದೇನಾಯಿತು ತಪ್ಪದೆ ಓದಿ ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಅಂಕಣ…
ಕಿರಣ್ ಕಳುಹಿಸಿದ ಕಾಗದವನ್ನು ತೆರೆದು ನೋಡಿ ಸುಶೀಲರಿಗೆ ಹೃದಯವೆ ನಿಂತಂತೆ ಆಯ್ತು ..ಗಂಡನ ಬಳಿ ಹೇಳಲು ಹೋದರೆ ಸದರ ಕೊಟ್ಟು ಮುದ್ದು ಮಾಡಿ ಸಾಕಿ ಮಗಳು ಓಡಿಹೋಗುವಂತೆ ಮಾಡಿದ್ದೆ, ನೀನು ಎಂಬ ಮೂದಲಿಕೆಯ ಮಾತುಗಳನ್ನು ಈಗಾಗಲೇ ಅವರಿಂದ ಕೇಳಿ ಹೈರಾಣವಾಗಿದ್ದಳು.ಈಗ ಆಸ್ತಿಯಲ್ಲಿ ಪಾಲು ಕೇಳುತ್ತಿರುವುದು ತಿಳಿದರೆ ಕಪಾಳ ಮೋಕ್ಷ ಆಗೋದು ನಿಶ್ಚಿತ ಎಂದರಿತ ಸುಶೀಲಾ ಒಂದೆರಡು ದಿನ ಮೌನವಾಗಿದ್ದು, ಧೈರ್ಯ ಮಾಡಿ ಮಗಳಿಗೆ ಕರೆ ಮಾಡಿ ಮಾತಾಡಿದರು. ನೋಡು… ನಿನ್ನ ಅಪ್ಪ- ಅಮ್ಮ ಬಿಟ್ಟು ಹೋಗಿರುವ ಒಂದೂವರೆ ಎಕರೆ ಜಾಗ ಚಿಕ್ಕಮಗಳೂರಿನಲ್ಲಿದೆ ಅದು ನಿನ್ನಜ್ಜಿಯ ಹೆಸರಿನಲ್ಲಿ ಅವರು ಕೊಟ್ಟರೆ ತಗೊಳ್ಳಿ, ಉಳಿದ ಆಸ್ತಿ ಮಾರಿ ನಿಮ್ಮ ಅಪ್ಪ- ಅಮ್ಮ ಮಾಡಿದ ಒಂದಷ್ಟು ಸಾಲ ತೀರಿಸಿದ್ದೇವೆ. ಅದು ಬಿಟ್ಟರೆ ಉಳಿದಂತೆ ನನ್ನ ಗಂಡನ ಸಂಪಾದನೆಯದು ಅವರ ಪಿತ್ರಾರ್ಜಿತ ಆಸ್ತಿ ಇರೋದು… ಅದು ನಾವು ಹೆತ್ತ ಮಕ್ಕಳಿಗೆ ಕೊಡಬೇಕು, ನಿನಗಲ್ಲ… ಎಂದು ಖಾರವಾಗಿ ನಿಷ್ಠೂರವಾಗಿ ಹೇಳಿದ್ರು, ಇದನ್ನು ಕೇಳಿಸಿಕೊಂಡ ಕಿರಣ್ ತಾನು ಕುಳಿತಲ್ಲೇ ಶ್ರಿಮಂತನಾಗುವ ಕನಸು ಭಗ್ನವಾಗುವುದನ್ನು ಸಹಿಸಲು ಆಗದೆ ಅವುಡುಗಚ್ಚಿ ಸ್ವಾತಿಯ ಕೆನ್ನೆಯ ಮೇಲೆ ಛಟೀರ್ ಎಂದು ಎರಡು ಹೊಡೆದಿದ್ದ. ಆ ದಿನವೆಲ್ಲಾ ಊಟ ಇಲ್ಲದೆ ಅತ್ತು ಕೊರಗಿ ಮಲಗಿದ್ದ ಸ್ವಾತಿಯನ್ನು ಬೆಳಗ್ಗೆ ಪುಸಲಾಯಿಸಿ ಮತ್ತೆ ತನ್ನ ತೋಳ್ತೆಕ್ಕೆಗೆ ಎಳೆದಕೊಂಡವ ಸೀದಾ ಸ್ವಾತಿಯನ್ನು ಕರ್ಕೊಂಡು ಅವಳ ಅಜ್ಜಿಯ ಮನೆಗೆ ನಡೆದ.
ಹೊಸದಾಗಿ ಮದುವೆಯಾಗಿ ಬಂದ ಮೊಮ್ಮಗಳನ್ನು ಆದರದಿಂದಲೇ ಬರಮಾಡಿಕೊಂಡರು ಸುನಂದಮ್ಮ , ಕಿರಣ್ ತುಂಬಾ ಚೂಟೀ, ಸುರದ್ರೂಫಿ.. ಒಳ್ಳೆಯ ಮಾತಿನ ಮೋಡಿಗಾರ ಆಗಿದ್ದರಿಂದ ಅಜ್ಜಿ ಮಾತ್ರವಲ್ಲ ಸ್ವಾತಿಯ ಸೋದರ ಮಾವ, ಸೋದರತ್ತೆ ಎಲ್ಲರನ್ನು ಮರಳು ಮಾಡಿದ್ದ. ಈ ಕಾರಣದಿಂದ ಇಪ್ಪತ್ತು ದಿನಗಳಷ್ಟು ಅಲ್ಲಿಯೇ ಇಬ್ಬರು ತಂಗಿದ್ದರು. ಒಂದು ದಿನ ಸಮಯ ನೋಡಿ ಸುನಂದಮ್ಮಳ ಬಳಿ ಸ್ವಾತಿಯ ಅಪ್ಪ ಅಮ್ಮ ಬಿಟ್ಟು ಹೋಗಿರುವ ಆಸ್ತಿಪಾಸ್ತಿಗಳ ಬಗ್ಗೆ ವಿಚಾರಿಸಿದ.
ಎಷ್ಟಾದರೂ ಮಾಗಿದ ಜೀವ, ಜೀವನಾನುಭವ ದೊಡ್ಡದು ಕಿರಣ್ ಅಂದುಕೊಂಡಷ್ಟು ಸುಲಭವಾಗಿ ಒಪ್ಪುವ ಮೆದು ಸ್ವಭಾವದ ಹೆಂಗಸಲ್ಲಾ.. ಗಟ್ಟಿಗಿತ್ತಿ..ಸುನಂದಮ್ಮ ಖಡಾಖಂಡಿತಾವಾಗಿ ಕಡ್ಡಿ ತುಂಡರಿಸಿದಂತೆ ಒಂದೇ ಮಾತಿನಲ್ಲಿ ನೋಡಪ್ಪಾ… ಅವಳ ಅಪ್ಪ ಅಮ್ಮ ಲಕ್ಷಗಟ್ಟಲೆ ಸಾಲ ಮಾಡಿ ನಂತರ ಗಂಡ ಹೆಂಡತಿಯಲ್ಲಿ ಆ ವಿಚಾರವಾಗಿ ಜಗಳ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಸತ್ತರೆಂದ್ದು ಸಾಲಗಾರರು ಸುಮ್ಮನಾಗುತ್ತಾರಾ..?? ಹಾಗಾಗಿ ಅವರ ಆಸ್ತಿಯನ್ನು ಮಾರಿ ಸಾಲ ತೀರಿಸಿದ್ದೀವಿ.. ಈಗ ಒಂದೂವರೆ ಎಕರೆಯಷ್ಟು ಆಸ್ತಿ ಇದೆ. ಆದರಲ್ಲಿ ಅಡಿಕೆ ಹಾಕಿ ಚಂದವಾಗಿ ತೋಟವನ್ನು ರೂಢಿಸಿದ ಫಲವಾಗಿ ಒಂದಷ್ಟು ಅಡಿಕೆ ಫಸಲು ಚನ್ನಾಗಿ ಬರ್ತಿದೆ. ಆದರೆ ಅದನ್ನು ಸ್ವಾತಿ ತಮ್ಮನಿಗೆ ಕೊಡ್ಬೇಕು ಎಂದು ತೀರ್ಮಾನಿಸಿದ್ದಿವೀ ಅಂದಾಗ ಕಿರಣ್ ಕೊಪ್ಪರಿಗೆ ಸಿಗದೆ ಇದ್ದರು. ಕಿಲುಬಷ್ಟಾದ್ರು ಸಿಗುತ್ತೆಲ್ಲಾ ಎಂದು ಯೋಜನೆ ರೂಪಿಸಿ ಅಜ್ಜಿ ಮನೆಗೆ ಬಂದಿದ್ದು. ಈಗ ಅದು ದಕ್ಕಲ್ಲಾ ಅಂದಾಗ ಅವಳ ಆಸ್ತಿಯ ಮೇಲೆ ಕೇಸ್ ಹಾಕ್ತೀನಿ ಎಂದು ಅಜ್ಜಿಗೆ ದಮಕಿ ಹಾಕಿದ ಕಿರಣ್ಗೆ.. ಸ್ವಾತಿಯ ಸೋದರ ಮಾವ ಹಾಕೋ…ಹೋಗು ಹಾಗೆ ಈಗ ನಿನ್ನ ಹೆಂಡತಿಯನ್ನು ಕರ್ಕೊಂಡು ಮರ್ಯಾದೆಯಿಂದ ಹೊರಟು ಹೋಗು ಎಂದು ಗದರಿಸಿದಾಗ ಅಲ್ಲಿಂದ ಹೆಂಡತಿ ಜೊತೆಗೆ ಕಾಲುಕಿತ್ತಿದ್ದ.
ವಾಪಸ್ಸು ಕೊಣನೂರಿಗೆ ಬಂದ ಮೇಲೆ ಅವನ ನಿಜಸ್ವರೂಪದ ದರ್ಶನ ಪ್ರತಿದಿನ ಆಗುತ್ತಿತ್ತು ಸ್ವಾತಿಗೆ, ಕುಡಿದು ಸ್ವಾತಿಯನ್ನು ಹಿಂಸಿಸತೊಡಗಿದ, ರೇಷನ್ ತರಲು ಹಣಬೇಕು ಎಂದು ಅವಳ ಕತ್ತಿನಲ್ಲಿದ್ದ ಬಂಗಾರದ ಸರ ,ಕೈಯಲ್ಲಿ ಇದ್ದ ಬ್ರೆಸ್ಲೇಟ್ ಮಾರ್ವಡಿ ಅಂಗಡಿಯ ಪಾಲಾದವು. ಬಂದ ಹಣ ಕಿರಣನ ಶೋಕಿ ಜೀವನಕ್ಕೆ ಸಾಲದಾಯ್ತು. ಇದನ್ನು ಪ್ರಶ್ನಿಸುತ್ತಿದ್ದ ಸ್ವಾತಿಗೆ ಆಗಾಗ ಹೊಡೆಯುತ್ತಿದನು ಕೊನೆಗೆ ಅವಳಿಗೆ ನಿತ್ಯ ಅವಶ್ಯಕವಾಗಿ ತಪ್ಪದೆ ಕೊಡಬೇಕಾಗಿದ್ದ ಮಾತ್ರೆಗಳನ್ನು ನಿಲ್ಲಿಸಿ ಆಕೆ ಸಂಪೂರ್ಣ ಖಿನ್ನತೆಗೆ ಹೋಗುವಂತೆ ಮಾಡಿದ್ದ. ಇದರಿಂದ ಬೇಸತ್ತ ಆಕೆ ಅವನೊಂದಿಗೆ ಜಗಳಕ್ಕೆ ನಿಂತಾಗ ಆಕೆಯ ಕತ್ತು ಹಿಸುಕಿ ಸಾಯಿಸುವ ಪ್ರಯತ್ನದಲ್ಲಿ ಅವಳ ದುಪ್ಪಟ್ಟ ಬಳಸಿ ಕತ್ತನ್ನು ಸೇದುವ ಯತ್ನ ಮಾಡಿದ್ದಾನೆ. ಇದರಿಂದ ಹೇಗೋ
ಕಿರುಚಾಡಿ ಕೂಗಾಡಿ ಅಕ್ಕಪಕ್ಕದವರ ಸಹಾಯದಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾಳೆ, ದೇಹದಲ್ಲಿ ಕಸುವಿಲ್ಲದೆ ನಿತ್ರಾಣಗೊಂಡಿದ ಸ್ವಾತಿಯನ್ನು ಕಂಡು ಪಕ್ಕದ ಮನೆಯವರು ರಕ್ಷಿಸಿ ಊಟ ಉಪಚಾರ ಮಾಡಿ ಅವಳನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ..ನಂತರ ಅವರ ಸಹಾಯ ಪಡೆದು ಸುಶೀಲರಿಗೆ ಕರೆಮಾಡಿದಾಗ ಸುಶೀಲ ಮತ್ತವರ ಗಂಡ ಮಗಳನ್ನು ಕರ್ಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೇ.ಆಕೆಯ ಕತ್ತಿನಲ್ಲಿದ್ದ ಗಾಯದ ಗುರುತು, ಮೈ ಕೈಯಲ್ಲಿ ಬಿದ್ದ ಏಟುಗಳಿಂದ ಕಂದು ಹೋಗಿದ್ದ ಕಲೆಯ ಗುರುತು ಎಲ್ಲಾ ನೋಡಿ ಪೋಲಿಸ್ ಕಂಪ್ಲೇಂಟ್ ಮಾಡಲು ವೈದ್ಯರು ಪೋಲೀಸರಿಗೆ ಕರೆ ಮಾಡಿದ್ದಾರೆ.. ಆದರೆ ಈ ಸುಶೀಲಾ ಮತ್ತವಳ ಗಂಡ ದೂರು ಪಡೆಯಲು ಬಂದ ಪೋಲಿಸರು ಬಳಿಯೇ ಮನೆಯ ಮರ್ಯಾದೆ ಹೋಗುತ್ತೆ,ಮಗಳು ಇನ್ನೆಂದಿಗೂ ಅವನೊಂದಿಗೆ ಹೋಗುವುದಿಲ್ಲ ಅಂತಾಳೇ.. ಹಾಗಾಗಿ ನ್ಯಾಯಾಲಯದಲ್ಲಿ ವಿಚ್ಛೇದನ ಕೊಡಿಸಿ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡ್ತೀವಿ.. ದಯವಿಟ್ಟು ಪೋಲಿಸ್ ಕಂಪ್ಲೇಂಟ್ ಎಲ್ಲಾ ಬೇಡ ಎಂದಾಗ ಮಾನವೀಯತೆಯ ದೃಷ್ಟಿಯಿಂದ ದೂರು ದಾಖಲಿಸದೆ ಪೋಲಿಸ್ರು ವಾಪಸ್ಸು ಹೋದರು.
ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಸ್ವಾತಿಯನ್ನು ಮನೆಗೆ ಕರ್ಕೊಂಡು ಬಂದ್ರು.. ಅವಳು ಮನೆ ಬಿಟ್ಟು ಓಡಿ ಹೋಗಿದ್ದ ದಿನದಿಂದ ಮತ್ತೆ ಮರಳಿ ಗೂಡಿಗೆ ಸೇರುವಷ್ಟುರಲ್ಲಿ ಮೂರು ತಿಂಗಳಷ್ಟು ಸಮಯವಾಗಿತ್ತು. ಹದಿನೈದು ದಿನದಲ್ಲಿ ಪ್ರೀತಿ, ಪ್ರೀತಿ ಮಾಡಿ ತಿಂಗಳಿಗೆ ಮದುವೆ.. ಮದುವೆ ಆಗಿ ಎರಡು ತಿಂಗಳಿಗೆ ಮರಳಿ ಮನೆಗೆ!!
ಚಂದದ ಬದುಕನ್ನು ಕೇವಲ ಮೂರು ತಿಂಗಳಲ್ಲಿ ಹಾಳು ಮಾಡಿಕೊಂಡು ಬಂದ ಮಗಳನ್ನು ನೋಡಿ ಕಣ್ಣೀರು ಹಾಕುವ ಸುಶೀಲ ಕಂಗೆಟ್ಟು ಕುಳಿತ್ತಿದ್ದರು, ಅವರದೆ ಬಾಡಿಗೆ ಮನೆಯಲ್ಲಿ ಒಬ್ಬರು ವಕೀಲರ ಸಂಸಾರ ವಾಸವಿದ್ದರು. ಮತ್ತು ಅವರ ಕಾಂಪ್ಲೆಕ್ಸ್ನಲ್ಲೂ ಒಂದ್ದಿಬ್ಬರು ವಕೀಲರ ಕಛೇರಿಗಳು ಇದ್ದವು.. ಹೀಗಾಗಿ ಸುಶೀಲ ಹತ್ತಿರದಲ್ಲಿ ಅಂದ್ರೆ ಅವರ ಮನೆಯ ಬಾಡಿಗೆಗೆ ಇದ್ದ ವಕೀಲರನ್ನು ಸಂಪರ್ಕಿಸಿದ್ದಾರೆ. ಆ ವಕೀಲರು ಅವರು ನಾನು ಈ ಕೇಸನ್ನು ನಡೆಸಲ್ಲಾ ,ನಿಮ್ಮ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇವರೇ ಸರಿ….ಅವರ ಬಳಿ ಹೋಗಿ ಎಂದು ನನ್ನ ಹೆಸರನ್ನು ಸೂಚಿಸಿದ್ದಾರೆ ಇದರ ಮೇರೆಗೆ ಒಂದು ದಿನ ನನ್ನ ಕಛೇರಿಗೆ ಬಂದಿದ್ರು. ಅವರನ್ನು ನೋಡಿ ನನಗೆ ಶಾಕ್ ಆಗಿತ್ತು. ಅವರ ಮನೆಯಲ್ಲೆ ವಕೀಲರು ಇದ್ದರೂ, ಅವರ ಬಾಡಿಗೆ ಮನೆಯಲ್ಲೂ ವಕೀಲರಿದ್ರೂ ನನ್ನನ್ನು ಹುಡುಕಿ ಬಂದಿದ್ದರಿಂದ ಒಂದು ರೀತಿಯ ಆಶ್ಚರ್ಯ ಮತ್ತು ಆತಂಕ ಎರಡು ಆಗಿತ್ತು.
ಹಾಗೆ ಬಂದ ಸುಶೀಲ ನನ್ನನ್ನು ಕೇಳಿದ್ರು ವಿಚ್ಛೇದನ ಕೊಡಿಸಲು ಸಾಧ್ಯವಾ ಅಂತಾ..? ಮಾಡೋಣ ಅದಕ್ಕಿನ್ನು ಸಮಯವಿದೆ, ಇನ್ನೂ ನಾಲ್ಕು ತಿಂಗಳ ನಂತರ ಬನ್ನಿ ಎಂದು ಹೇಳಿ ಕಳುಹಿಸಿದ್ದೆ, ಅಷ್ಟರಲ್ಲಿ ಆಕೆಗೆ ಆಗಿರುವ ಮಾನಸಿಕ ಆಘಾತದಿಂದ ಹೊರಬರಲಿ ಅವಳಲ್ಲಿ ಎಂದಿಗೂ ಜೀವನೋತ್ಸಾಹ ಸೆಲೆ ಬತ್ತದಂತೆ ನೋಡಿಕೊಳ್ಳಿ, ಕೊಂಕು ಮಾತಾಡುವುದು, ಹಿಯಾಳಿಸುವುದು ಮಾಡಬೇಡಿ…ಅವಳು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂಬ ಸಲಹೆಯನ್ನು ನೀಡಿದ್ದೆ. ಇದಾದ ನಂತರ ಅವರಿಗೆ ಏನಾಯ್ತೋ ಗೊತ್ತಿಲ್ಲ ನನ್ನ ಬಳಿ ಬರಲಿಲ್ಲ.. ಒಂದೆರಡು ತಿಂಗಳು ಬಿಟ್ಟು ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ ಮಾತಾಡುತ್ತಾ..ಹೇಳಿದ್ರು..
ಕೇಸನ್ನು ಹಿರಿಯ ವಕೀಲರಿಗೆ (ನನಗಿಂತಲೂ ವೃತ್ತಿ ಆನುಭವದಲ್ಲಿ ತುಂಬಾ ಹಿರಿಯರು ನಲವತ್ತು ವರ್ಷಗಳ ಅನುಭವ) ಕೊಟ್ಟಿರುವೆ ಎಂದ್ರು.. ಓಹ್! ಹೌದಾ ಒಳ್ಳೆಯದಾಗಲಿ ಎಂದಷ್ಟೇ ಹೇಳಿದೆ. ಮತ್ತೆ ಮುಂದುವರಿದು ಅವರೇ ಹೇಳಿದ್ರು..ನಮ್ಮ ಭಾವ ಮತ್ತು ಅವರ ಹೆಂಡತಿ ಹೇಳಿದ್ದು ಈ ಹಿರಿಯ ವಕೀಲರಿಗೆ ಕೇಸ್ ಕೊಡಲು ಅಂದಾಗ ಯಾಕೇ ನಿಮ್ಮ ಭಾವನೇ ವಕೀಲರಲ್ವಾ..
ಅವ್ರೇ ನಡೆಸಬಹುದಿತ್ತಲ್ಲಾ…??
ಇಲ್ಲ… ಬೇಡಾ… ಮನೆಯವರ ಕೇಸ್ ನಾನು ಮಾಡುವುದಿಲ್ಲ. ಇವರಿಗೆ ಕೊಡಿ ಅನುಭವ ಇರುವ ವಕೀಲರು ಬೇಗನೆ ಮುಗಿಸಿ ಕೊಡುತ್ತಾರೆ ಎಂದ್ರು…ಓಹ್ ಹೌದಾ ಹಿರಿಯ ವಕೀಲರಿಗೆ ಒಂದು ತರಹ ಕಿರಿಯ ವಕೀಲರಿಗೆ ಒಂದು ತರಹ ಮೊಕದ್ದಮ್ಮೆಗಳ ವಿಚಾರಣೆ ಮಾಡುತ್ತಾ ನ್ಯಾಯಾಲಯ!! ಹೋಗಲಿ ನಿಮಗೆ ಸಮಾಧಾನ ಆಗಿದೆ ಅಲ್ವಾ ಅವರು ಕೇಸ್ ನಡೆಸುವುದರಿಂದ ಮತ್ತೇನು ನೆಮ್ಮದಿ ಆಗಿರಿ ಎಂದಷ್ಟು ಹೇಳಿದಾಗ ಅವರ ಮುಖದಲ್ಲಿ ಏನೋ ತಪ್ಪಿಸ್ಥ ಭಾವನೆ ಇತ್ತು. ನಾನು ಬಲವಂತ ಮಾಡಲು ಹೋಗಲಿಲ್ಲ.. ಏಕೆಂದರೆ ಸುಶೀಲರ ಗಂಡನ ಅಣ್ಣ ತುಂಬಾ ಹಿರಿಯ ವಕೀಲರಾಗಿದ್ದರೂ ಅವರ ಮಗ ಹೈಕೋರ್ಟ್ ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ನನಗೂ ತುಂಬಾ ಆತ್ಮೀಯರೆ ಆಗಿದ್ದರು. ಕೆಲವೊಮ್ಮೆ ನಾನು ಸಿವಿಲ್ ಪ್ರಕರಣಗಳಲ್ಲಿ ಅವರ ಸಲಹೆ ಸೂಚನೆ ಪಡೆಯುವುದುಂಟು ಹಾಗಾಗಿ ಅವರ ಆಯ್ಕೆ ವಕೀಲರಲ್ವಾ.
ಇರಲಿ ಎಂದು ಭಾವಿಸಿ ಈ ವಿಚಾರವನ್ನು ಅಲ್ಲಿಯೇ ಮರೆತು ಬಿಟ್ಟೆ. ಇದಾದ ಸ್ವಲ್ಪ ಸಮಯಕ್ಕೆ ಕೋವಿಡ್ ಪ್ಯಾಂಡಮಿಕ್ ಸಮಯ ಬಂದಿತ್ತು. ಕೋರ್ಟ್ ವಿಚಾರಣೆಗಳಲ್ಲೂ ಬದಲಾವಣೆ ಆಗಿತ್ತು. ಪ್ಯಾಂಡಮಿಕ್ ಸಮಯ ಕಳೆದು ಕೋರ್ಟ್ ಓಪನ್ ಆದಾಗ ಇವರ ಕೇಸ್ ಡಿಸ್ಮಿಸ್ ಆಗಿತ್ತು.
ಈ ಮದುವೆಯನ್ನು ರದ್ದುಪಡಿಸಲು ಯಾವುದೇ ಸರಿಯಾದ ಕಾರಣಗಳು ಇಲ್ಲದ್ದರಿಂದ ವಿಚ್ಛೇದನ ನೀಡಲು ಬರುವುದಿಲ್ಲ ಎಂಬ ಕಾರಣ ನೀಡಿ ವಿಚ್ಛೇದನಕ್ಕೆ ಹಾಕಿದ್ದ ಅರ್ಜಿಯನ್ನು ವಜಾಗೊಳಿಸಿತ್ತು ನ್ಯಾಯಾಲಯ!!.
ಸುಶೀಲಾವರಿಗೆ ಈಗ ಅಕ್ಷರಶಃ ದಿಕ್ಕು ತೋಚದ ಸ್ಥಿತಿಗೆ ತಲುಪಿದರು. ಮಗಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಅಂತ ನೂರಾರು ಕನಸುಗಳನ್ನು ಕಟ್ಟಿದ್ದೆ ಯಾವನೋ ಪೋರ್ಕಿ ಹಿಂದೆ ಓಡಿ ಹೋಗಿ ಹೀಗಾದ್ಲು..ಇದರಿಂದ ಮುಕ್ತಿ ಕೊಡಿಸಿ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡೋಣ ಅಂದ್ರೆ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈಗೇನು ಮಾಡೋದು ಅಂತ ಅವರ ಹೈಕೋರ್ಟ್ನಲ್ಲಿ ವೃತ್ತಿ ನಡೆಸುತ್ತಿದ್ದ ಭಾವನ ಮಗನಿಗೆ ಕರೆ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿದ್ದಾರೆ.. ಹಾಗೆ ನನ್ನ ಆಫೀಸ್ಗೆ ಬಂದಿದ್ದು..ನಾನು ಅವರೊಡನೆ ಏನೆಲ್ಲಾ ಹೇಳಿದ್ದೆ ಎಲ್ಲವನ್ನೂ ಹೇಳಿದ್ದಾರೆ. ಆಗ ಅವರು ಸರಿಯಾಗಿ ಸುಶೀಲರನ್ನು ತರಾಟೆಗೆ ತೆಗೆದುಕೊಂಡು ಮೇಡಂ ಬಿಟ್ಟು ನಿಮ್ಮನ್ನು ಬೇರೆ ಕಡೆ ಯಾರು ಕೇಸ್ ಕೊಡಲು ಹೇಳಿದ್ದು. ಹೋಗಿ ಮೇಡಂ ಬಳಿಯೇ..ಅವರೊಂದಿಗೆ ನಾನು ಕರೆ ಮಾಡಿ ಮಾತಾಡುವೆ ಅಂದಾಗ ಸುಶೀಲರಿಗೆ ಒಂದಷ್ಟು ಸಮಾಧಾನ ಆಯ್ತು.
(ಮುಂದುವರೆಯುವುದು)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೧)
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು