ಪಶುವೈದ್ಯ ಮಿತ್ರರಾದ ಡಾ.ಗವಿಸ್ವಾಮಿ ಅವರ ” ಚಕ್ರ” ಸಣ್ಣ ಕಥೆಗಳ ಸಂಕಲನವನ್ನು ಓದಿದೆ. ಸಾಹಿತ್ಯಸುಧೆ ಪ್ರಕಾಶನದ “ಚಕ್ರ” 111 ಕಥೆಗಳನ್ನು ಒಳಗೊಂಡಿದ್ದು, ಪ್ರತಿ ಕಥೆಯಲ್ಲೂ ಓದುಗರ ಕುತೂಹಲವನ್ನು ಕೊನೆಯವರೆಗೂ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಡಾ ಯುವರಾಜ್ ಹೆಗಡೆ ಅವರು ಈ ಪುಸ್ತಕವನ್ನು ಓದುಗರಿಗೆ ಪರಿಚಯಿಸಿದ್ದಾರೆ, ಪುಸ್ತಕವನ್ನು ತಪ್ಪದೆ ಓದಿ…
ಪ್ರಸ್ತುತ #ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪಶುಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಪಶುವೈದ್ಯಕೀಯ ವೃತ್ತಿಯಲ್ಲಿ ಅತಿಯಾದ ಕೆಲಸದ ಒತ್ತಡದ ನಡುವೆಯೂ ಸಾಹಿತ್ಯಾಸಕ್ತಿ ಇರುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಗುರುತಿಸಿಕೊಂಡು “ಚಕ್ರ” ಪುಸ್ತಕವನ್ನು ಹೊರತರುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ವೃತ್ತಿಯಲ್ಲಿ ಪಶುವೈದ್ಯರು ಹಾಗೂ ಕೃಷಿಕರೂ ಆಗಿರುವ ಕಾರಣ ಗ್ರಾಮೀಣ ಬದುಕಿನ ಅನುಭವಗಳನ್ನು ಮೈಗೂಡಿಸಿಕೊಂಡಿರುವ ಇವರ ಸಂಕಲನದಲ್ಲಿ ಹಳೆ ಮೈಸೂರು ಪ್ರಾಂತ್ಯದ ಗ್ರಾಮೀಣ ಸೊಗಡು, ಜೀವನ ಶೈಲಿ ಹಾಸುಹೊಕ್ಕಾಗಿ ಅಡಕವಾಗಿದೆ. ಸುದೀರ್ಘ ಐದು ವರ್ಷಗಳ ಬರವಣಿಗೆಯಲ್ಲಿ ತಮ್ಮ ದೈನಂದಿನ ಆಗುಹೋಗುಗಳನ್ನು ಗಮನಿಸಿ ಅವುಗಳನ್ನೇ ಕಥಾವಸ್ತುಗಳನ್ನಾಗಿ ಬಳಸಿಕೊಂಡು ಕಥಾಸಂಕಲನವನ್ನು ರಚಿಸಿರುವ ಪರಿ ಅದ್ಭುತವಾಗಿದೆ. ಡಾ.ಗವಿಸ್ವಾಮಿ ಅವರ ಮುಖಬೇಟಿ ಇದೂವರೆಗೂ ಸಾದ್ಯವಾಗದಿದ್ದರೂ ಅವರ ಕಥಾಸಂಕಲನವನ್ನು ಓದುವುದರೊಂದಿಗೆ ಹೃದಯಕ್ಕೆ ಹೆಚ್ಚು ಹತ್ತಿರವಾಗಿದ್ದಾರೆ ಎನ್ನುವ ಅನುಭವ ಉಂಟು ಮಾಡಿತು.

ಚಕ್ರದಲ್ಲಿ ಬರುವ ” #ಶಿಕಾರಿ” ಕಥೆ ಮನೋಜ್ಞವಾಗಿದೆ . ಚಾಮರಾಜನಗರದ ಗಡಿ ಭಾಗದಲ್ಲಿ ಘಟಿಸಿದ ಈ ನೈಜ ಘಟನೆಯ ವರ್ಣನೆ ನನ್ನನ್ನು ಮತ್ತೆ ಮತ್ತೆ ಓದುವಂತೆ ಮಾಡಿತು. ರುದ್ರಾಪುರ ಗ್ರಾಮದ ಬೀದಿ ಗೂಳಿ, ಶಿಕಾರಿ ಪ್ರವೀಣನೆಂದು ಕುಖ್ಯಾತಿ ಪಡೆದಿದ್ದ “ಈರಣ್ಣ” ಹುಲಿ ಶಿಕಾರಿ ಮಾಡಲು ಬಂದಿದ್ದ ಅಂದಿನ ಮದ್ರಾಸಿನ ಬ್ರಿಟಿಷ್ ಗವರ್ನರ್ ಸಾಹೇಬನ ಸಹಾಯಕ್ಕೆ ನಿಲ್ಲುತ್ತಾನೆ. ಅರಣ್ಯದ ಉಕ್ಕಿನ ಸೇತುವೆಯ ಬಳಿ ಹುಲಿಯ ಬೇಟೆಯಾಡಿದ ಪರಿ ರೋಮಾಂಚನ ನೀಡುತ್ತದೆ. ಹುಲಿ ಬೇಟೆಯಾಡಿದ ಈರಣ್ಣನನ್ನು ನೋಡಿ ಗವರ್ನರ್ ನ ಹೆಂಡತಿ ಆತನನ್ನು ಮೋಹಿಸುತ್ತಾಳೆ.ಗವರ್ನರ್ ನ ಭಯಕ್ಕೆ ಅದನ್ನು ನಿರಾಕರಿಸಿದ ಈರಣ್ಣ, ನಂತರ ಆಕೆಯ ಪ್ರೇಮ ಪಾಶಕ್ಕೆ ಬಿದ್ದು ಆಕೆಯನ್ನು ಸೇರಬೇಕೆಂದು , ಎಲ್ಲೆಂದರಲ್ಲಿ ಹುಡುಕಿ ಮದ್ರಾಸಿನ ಬೀದಿಬೀದಿಗಳಲ್ಲಿ ಅಲೆದಾಡುತ್ತಾ ಹುಚ್ಚನಾಗುತ್ತಾನೆ. ಕೊನೆಗೂ ಆಕೆ ದೊರಕದೆ ಮಾನಸಿಕ ರೋಗಿಯಾಗಿ ಹಾಸಿಗೆ ಹಿಡಿದು ಮರಣಹೊಂದುವ ಸತ್ಯ ಕಥೆ, ಅದನ್ನು ಬರೆದಿರುವ ಶೈಲಿ ಮೈ ನವಿರೇಳಿಸುವಂತೆ ಮಾಡಿತು.
“ಮಾದೇವನ ಮಾಟ” ಕಥೆಯಲ್ಲಿ ಶ್ರೀಮಂತ ಕುಟುಂಬದ ಅಜ್ಜಿಯೊಬ್ಬರು ಸತ್ತಾಗ ಮೂಗುಬೊಟ್ಟಿನ ತಿರುಪು ಬಿಗಿಗೊಂಡ ಕಾರಣ ಮೂಗನ್ನೇ ಕತ್ತರಿಸಿ ತೆಗೆದ ದ್ದನ್ನು ಉಲ್ಲೇಖಿಸುತ್ತಾ ನಾವು ಜೀವಿತಾವದಿಯಲ್ಲಿ ಹೇಗೆ ಬದುಕಿ ಬಾಳುತ್ತೇವೆಂಬುದಷ್ಟೇ ಮುಖ್ಯವಾಗಿ , ಸತ್ತಾಗ ಏನನ್ನೂ ಕೊಂಡೊಯ್ಯಲು ಸಾದ್ಯವಿಲ್ಲ ಎಂಬ ಸಂದೇಶ ನೀಡುತ್ತದೆ.
” ವಸ್ತುವೊಂದು ಸಿಕ್ಕಿದೆ” ಎಂದೊಡನೆ ನನ್ನದೆಂದು ಪೋಲಿಸ್ ಠಾಣೆಗೆ ದೌಡಾಯಿಸವ ಜನರು ಸಿಕ್ಕ ವಸ್ತು ಅನಾಥ ಮಗುವೆಂದು ತಿಳಿದಾಗ ನಿಧಾನವಾಗಿ ಕಾಲ್ಕಿತ್ತರೆ, ಹಣ್ಣು ಮುದುಕಿಯೊಬ್ಬಳು ‘ಮಾನವೀಯತೆ’ ತೋರಿ ಮಗುವನ್ನು ಖುಷಿಯಿಂದ ಸ್ವೀಕರಿಸುತ್ತಾಳೆ.
ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಜರುಗಿದ “ಸನ್ಮಾನ” ಕಾರ್ಯಕ್ರಮವೊಂದರಲ್ಲಿ ವಿವಿಧ ದಾನಿಗಳನ್ನು ಗುರುತಿಸಿ ಸನ್ಮಾನಿಸಲ್ಪಟ್ಟವರ ನಡುವೆ ಶಾಲಾ ಆವರಣದ ತುಂಬೆಲ್ಲಾ ಗಿಡ ನೆಟ್ಟು ಪೋಷಿಸಿ ಮಕ್ಕಳಿಗೆ ನೆರಳು ,ಫಲ ನೀಡುವಂತೆ ಮಾಡಿದ ಸಾಧಕ ವೃದ್ದ ಶಿವಣ್ಣನನ್ನು ಯಾರೂ ಗುರುತಿಸದ ವಿಷಾದ ಕಥೆಯಲ್ಲಿದೆ.
ಸಂಕಲನದ ಹೆಸರಿನಲ್ಲಿರುವ “#ಚಕ್ರ” ಕಥೆಯಲ್ಲಿ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿನ ಕುರಿತು ಇಬ್ಬರು ಸ್ನೇಹಿತರ ನಡುವೆ ವಿತ್ತಂಡವಾದ ಏರ್ಪಟ್ಟಾಗ, ಆರ್ಥಿಕವಾಗಿ ಸಭಲನಾದರೂ ಅದೇ ಸ್ನೇಹಿತ ಮನೆಗೆ ಬಂದಾಗ ನಡೆದ ಘಟನೆ ಅಸ್ಪೃಶ್ಯತೆಯೆಂಬ ಪಿಡುಗು ಕಾಲಚಕ್ರ ಬದಲಾಗಿಯೂ ಕೂಡ ಸಮಾಜದಲ್ಲಿ ಅದೆಷ್ಟು ಆಳವಾಗಿ ಬೇರೂರಿದೆ ಎಂಬುದರ ಅರಿವಾಗುವಂತೆ ಮಾಡುತ್ತದೆ. ಕಥೆಯಲ್ಲಿ ಬರುವ ನಿಂಗಿಯ ಪಾತ್ರ ಕರುಳು ಚುರ್ರೆನಿಸುವಂತೆ ಮಾಡುತ್ತದೆ.
“ಮಂತ್ರಿ ಎಗೆನೆಸ್ಟ್ ಮಾದ” ಎಂಬ ಕಥೆಯಲ್ಲಿ ಮಂತ್ರಿ ಮತ್ತು ಮಾದನ ನಡುವಿನ ಜಿದ್ದು, ನಂತರ ಮುನಿಸಿದ ಪತ್ನಿ ತವರು ಸೇರಿದಾಗ ಹೊಲದಲ್ಲಿ ಸತ್ತವನಂತೆ ನಟನೆ ಮಾಡುವ ಮಂತ್ರಿಯನ್ನು ನೋಡಲು ಬಂದ ಪತ್ನಿ ಮತ್ತು ಅತ್ತೆ ಬೊಬ್ಬೆಯಿಡುತ್ತಾರೆ. ಕೂಡಲೆ ಎದ್ದು ಕುಳಿತ ಮಂತ್ರಿ ನಡೀರಿ ಹಬ್ಬ ಮಾಡೋಣ ಎನ್ನುವ ,”ತಿರುಗುಬಾಣ”ದಲ್ಲಿ ತನಗೆ ಬೆನ್ನಟ್ಟುತ್ತಿದ್ದ ನಾಯಿಯನ್ನು ನಸುಕಿನಲ್ಲಿ ಆಟೋ ಹತ್ತಿಸಿ 40 ಕಿ.ಮೀ ದೂರ ಬಿಟ್ಟು ಮದ್ಯಾಹ್ನ ಮನೆ ಸೇರಿದಾಗ ನಾಯಿ ಎದುರಾಳಿಯ ಮನೆಯ ಮೆಟ್ಟಿಲ ಮೇಲೆ ವಿರಾಜಮಾನವಾದಂತಹ ಅನೇಕ ಹಾಸ್ಯ ಪ್ರಸಂಗಗಳನ್ನೂ ನೋಡಬಹುದು.
ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಇಷ್ಟ ಪಟ್ಟು ಓದಬಹುದಾದ “ಚಕ್ರ” ಕಥಾ ಸಂಕಲನಕ್ಕೆ ಈಗಾಗಲೆ ಟಿ.ಎಂ.ಆರ್ ಪಬ್ಲಿಕೇಷನ್ಸ್, ಹೂವಿನಹಡಗಲಿ ವತಿಯಿಂದ “ಸುಲೋಚನ ಸಾಹಿತ್ಯ” ಪ್ರಶಸ್ತಿ ಹಾಗೂ ಗುರುಕುಲ ಕಲಾ ಪ್ರತಿಷ್ಠಾನ, ರಾಜ್ಯಘಟಕ ತುಮಕೂರು ವತಿಯಿಂದ “ಗುರುಕುಲ ಸಾಹಿತ್ಯ ಶರಭ ” ಪ್ರಶಸ್ತಿ ಲಭಿಸಿವೆ. ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆ ” ಕನ್ನಡ ಪ್ರಭ”ದಲ್ಲಿ “ಚಕ್ರ”ದ ಕುರಿತಾಗಿ ಮೆಚ್ಚಿ ಲೇಖನ ಪ್ರಕಟವಾಗಿದೆ. ಅನೇಕ ಪ್ರತಿಷ್ಠಿತ ಸಮಾರಂಭಗಳಲ್ಲಿ ಚಕ್ರ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿರುವುದು ಸಂಕಲನಕ್ಕೆ ಸಿಕ್ಕ ಗೌರವವಾಗಿರುತ್ತದೆ. ಈಗಾಗಲೆ ಮೊದಲ ಮುದ್ರಣದ ಪ್ರತಿಗಳು ಮುಗಿದು ಎರಡನೆಯ ಮುದ್ರಣ ಚಾಲ್ತಿಯಲ್ಲಿದ್ದು ಡಾ.ಗವಿಸ್ವಾಮಿಯವರ ಸಂಕಲನಕ್ಕೆ ಇನ್ನೂ ಹೆಚ್ಚಿನ ಯಶಸ್ಸು ದೊರಕಲಿ ಎಂದು ಸಮಸ್ತ ಪಶುವೈದ್ಯ ಬಳಗವು ಹಾರೈಸುತ್ತದೆ .
- ಡಾ. ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ
