ವೃದ್ದಾಶ್ರಮದ ಕತೆಗಳು ಭಾಗ ೧ – ಲತಿಕಾ ಭಟ್



ಸುಯೋಗಾಶ್ರಯ ಒಂದು ವೃದ್ದಾಶ್ರಮ. ಇಲ್ಲಿ ಬರುವ ವೃದ್ಧರ ಕತೆ ಒಂದೊಂದು. ಅದೇ ನೈಜ್ಯಕತೆಯನ್ನು ಎಳೆಎಳೆಯಾಗಿ ಓದುಗರ ಮುಂದೆ ಕತೆಯ ರೂಪಕೊಟ್ಟು ಬರೆಯುತ್ತಿರುವ ಕೈ ಮತ್ಯಾರದು ಅಲ್ಲ, ಅದೇ ಆಶ್ರಮದ ಸಾರಥಿ ಲತಿಕಾ ಭಟ್ ಅವರದು. ಓದಿ , ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಅಂದು #ಗಣಪಜ್ಜನಿಗೆ ಹುಷಾರಿರಲಿಲ್ಲ. ಹಾಸಿಗೆ ಬಿಟ್ಟು ಹೊರಗಡೆ ಬಂದು ಕಟ್ಟೆಯ ಮೇಲೆ ನೆಲಕ್ಕೆ ಮಲಗಿದರು. ನನ್ನ ಜೀವ ಇಲ್ಲಿಯೇ ಹೋಗುವ ತನಕ ತನ್ನನ್ನು ಮುಟ್ಟಬೇಡಿರೆಂದು ಗದರಿಸಿ ಹೇಳಿದರು. ಆರಾಮಾಗಿದ್ದವರು. ದಿನಾಲೂ ಮೂರು ಲೋಟಾ ಹಸುವಿನ ಹಾಲು ಬಿಟ್ಟು ಬೇರೆ ಆಹಾರ , ಅಷ್ಟೇ ಏಕೆ ನೀರು ಸಹ ಅವರಿಗೆ ವರ್ಜ್ಯ. ಶ್ರೀ ಶ್ರೀಧರ ಸ್ವಾಮಿಗಳ ಸೇವೆ ಮಾಡುತ್ತಾ ಅವರೊಂದಿಗೆ ಅರವತ್ತು ವರ್ಷ ಕಳೆದ ಪರಮ ಸಾತ್ವಿಕರು. ವರದಳ್ಳಿಯಿಂದ ಅವರನ್ನು ನೋಡಲು ಮೊದಲು ಬಹಳ ಜನ ಬರುತ್ತಿದ್ದರು. ಹೇಗೆ ನೋಡಿಕೊಳ್ಳುತ್ತಾರೆ ಎಂದು ಅವರು ಕೇಳಿದರೆ ” ಈಕೆ ನನ್ನ ತಾಯಿಯ ಪುನರ್ಜನ್ಮ. ಹತ್ತು ವರ್ಷಕ್ಕೆ ಮನೆಬಿಟ್ಟ ನನ್ನ ಋಣ ಬಹುಶಃ ಮುಗಿದಿರಲಿಲ್ಲ. ಮಗನಂತೆ ನೋಡುತ್ತಾರೆ ” ಎಂದು ಹೆಮ್ಮೆಯಿಂದ ಹೇಳೋರು 95 ವರ್ಷದ ಗಣಪಜ್ಜ. ಬಂದಾಗಿನಿಂದ ಎಂದೂ ಅವರಿಗೆ ಹುಷಾರು ತಪ್ಪಿದ್ದನ್ನು ನೋಡಿರಲಿಲ್ಲ. ಅಂದು ಡಿಸೆಂಟ್ರಿ ಶುರುವಾಗಿತ್ತು…ನೀರಿನ ಥರ ಹರಿದೇ ಹರಿಯುತ್ತಿತ್ತು. ಎರಡು ಗಂಟೆಯಲ್ಲಿ ಸುಮಾರು ಇಪ್ಪತ್ತು ಸಲ. ಸ್ವಚ್ಛ ಮಾಡಿ ಮಾಡಿ ಸೊಂಟ ಬಿದ್ದಿತ್ತು. ಒಳಗೆ ಹೋಗಿ ಮನೆ ಮದ್ದು ಮಾಡಿ ತಂದು ಕೊಟ್ಟರೆ, ಮಾತ್ರೆ ಕೊಟ್ಟರೆ ಮುಖ ಸಿಂಡರಿಸಿ ‘ತನಗೆ ಬೇಡಾ’ ಎಂದು ಬೈದು ಬಿಟ್ಟರು.ಎಂದೂ ಸಣ್ಣ ಕೋಪವನ್ನು ಕೂಡಾ ಯಾರ ಮೇಲೂ ಮಾಡದ ಗಣಪಜ್ಜ ಅದೇಕೆ ಅಂದು ಹಾಗೆ ಮಾಡುತ್ತಿದ್ದಾರೆಂದು ನನಗೆ ಆತಂಕ. ಬಹುಶಃ ವೀಕ್ನೆಸ್ನಿಂದ ಇರಬಹುದೆಂದು ಅವರಿಗೆ ಔಷಧ ಕುಡಿಸುವ ವಿಫಲ ಯತ್ನ ಮುಂದುವರಿಸಿದೆ.
ಅಂದು ಅಕಸ್ಮಾತ್ ಆಶ್ರಮಕ್ಕೆ ಬಂದಿದ್ದ ಹರೀಶ್ ಧೂಳಳ್ಳಿ ಸಹ ಅವರಿಗೆ ಔಷಧ ಕುಡಿಯಲು ವಿನಂತಿಸಿದರು. ಆದರೆ ಅಜ್ಜನಿಂದ ಪ್ರತಿಕ್ರಿಯೆ ಇಲ್ಲ.

ಫೋಟೋ ಕೃಪೆ : bestshowerchairs

ನಂತರ ಅಂತೂ ಒಮ್ಮೆ ದೊಡ್ಡದಾಗಿ ಗದರಿಸಿ ಆರಾರೂಟ್ ಪುಡಿಮಾಡಿ ಮಜ್ಜಿಗೆಯಲ್ಲಿ ಹಾಕಿ ಕುಡಿಸಿದೆ. ಕುಡಿದವರೇ ಮತ್ತೆ ಮತ್ತೆ ಒದರಾಡಿದರು. “ನನ್ನ ಮೃತ್ಯು ಬಂದಿದೆ. ನನ್ನನ್ನು ಹೋಗಲುಬಿಡು. ನಿನ್ನ ಪ್ರೀತಿಯಿಂದ ಮತ್ತೆ ಕಟ್ಹಾಕ್ಬೇಡ.” ಗಾಬರಿಯಾದೆ. ಗಣಪಜ್ಜ ಸಾಯಲು ತಯಾರಾಗಿ ಮಲಗಿದ್ದರು.

“ಅದ್ಯಾವ ಮೃತ್ಯು ನಿಮ್ಮನ್ನು ಎಳ್ಕೊಂಡ್ಹೋಗತ್ತೋ ನೋಡ್ತೀನಿವತ್ತು.”

ಬಲವಂತವಾಗಿ ಒಂದು ಮಾತ್ರೆ ತಿನ್ನಿಸಿದೆ. ಗಣಪಜ್ಜ ಅಂದು ಮನೆ ಒಳಗೆ ಬರಲೇ ಇಲ್ಲ. ಹೊರಗಿನ ಕಟ್ಟೆಯ ಮೇಲೇ ರಾತ್ರಿ ಕಳೆದರು. ಆಹಾರ ತ್ಯಜಿಸಿದರು. ಅವರನ್ನು ಕಾಪಾಡುವಂತೆ ಶ್ರೀ ಶ್ರೀಧರರನ್ನು ಪ್ರಾರ್ಥಿಸಿದೆ. ಕಣ್ಣೀರಿನಲ್ಲೇ ರಾತ್ರಿಯೆಲ್ಲಾ ಕಳೆಯಿತು. ಬೆಳಿಗ್ಗೆ ಎದ್ದು ನೋಡಿದರೆ ಗಣಪಜ್ಜ ನಿತ್ಯದಂತೆ ಸ್ನಾನಕ್ಕೆ ತಯಾರಾಗಿ ಕುಳಿತಿದ್ದರು. ದಿನದಂತೆ ನನ್ನ ಕೈ ಹಿಡಿದು ಕಣ್ಣಿಗೊತ್ತಿಕೊಂಡು ನಮಸ್ಕರಿಸಿದರು.

ಫೋಟೋ ಕೃಪೆ : youtube

ಆ ದಿನ ರಾತ್ರಿ ನಮ್ಮ ಆಶ್ರಮದ ನಾಯಿ ಶ್ಯಾಮನನ್ನು ಕಿರುಬ ಹೊತ್ತೊಯ್ದಿತ್ತು.

ಅಲ್ಲಿ ಮೃತ್ಯು ಬಂದಿದ್ದು ನಿಜವಾಗಿತ್ತು.


  • ಲತಿಕಾ ಭಟ್ (ಲೇಖಕರು, ಸಮಾಜದ ಹಿತ ಚಿಂತಕರು, ಸುಯೋಗಾಶ್ರಯ ಆಶ್ರಮದ ಸಂಸ್ಥಾಪಕರು) ಶಿರಸಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading