ನೂರು ಮಂದಿ ಸಾವಿರ ಮಾತನಾಡಿಕೊಂಡರೂ, ಲಕ್ಷ ಮಂದಿ ಉರ್ಕೊಂಡು ಅರಚಿಕೊಂಡ್ರೂ… ಅವುಗಳಿಗೆಲ್ಲಾ ಕ್ಯಾರೇ ಎನ್ನದೇ ಜಸ್ಟ್ ಒಂದು ಮುಗುಳುನಗೆಯೊಂದಿಗೆ ಮುನ್ನಡೆಯಿರಿ. ಆಗ ಇಡೀ ಜಗತ್ತೇ ನಿಮ್ಮ ಜೊತೆಯಲ್ಲಿರುವ ಭಾವ ನಿಮ್ಮದಾಗುತ್ತದೆ, ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಬದುಕುವ ಕಲೆಯನ್ನು ಓದುಗರ ಮುಂದಿಟ್ಟಿದ್ದಾರೆ. ಮುಂದೆ ಓದಿ…
” ನೋಡ್ರೀ….ನಾವ್ಯಾರಿಗೂ ಕೆಟ್ಟದ್ದು ಮಾಡಿಲ್ಲ, ಮಾಡೋದಿರಲೀ, ಕೆಟ್ಟದ್ದನ್ನು ಕನಸಲ್ಲೂ ಬಯಸೋಲ್ಲ. ನಮ್ಮ ಪಾಡಿಗೆ ನಾವು ದುಡ್ಕೊಂಡು ತಿಂತಾ ಇದೀವಿ, ಯಾರ ಮುಂದೆಯೂ ಕೈಯೊಡ್ಡದೇ ನೇರವಾಗಿ ಸ್ವಾಭಿಮಾನದಿಂದ ಬಾಳ್ತಾ ಇದೀವಿ. ಸಮಾಜದಲ್ಲಿ ನಮಗೆ ಬೇರೆಯವರಿಂದ ಸಹಾಯ ಆಗದೇ ಇದ್ರೂ, ಅದನ್ನೆಲ್ಲಾ ತಲೆ ಕೆಡಿಸಿಕೊಳ್ಳದೇ ಇತರರಿಗೆ ಕೈಲಾದಮಟ್ಟಿಗೆ ಹೆಲ್ಪ್ ಮಾಡ್ತಾನೇ ಬಂದಿದ್ದೀವಿ. ಎಲ್ರಿಗೂ ಒಳ್ಳೇದಾಗ್ಲೀ ಅಂತಾನೇ ಅಂದ್ಕೋಳ್ತೀವಿ. ಆದ್ರೂ… ಕೆಲವರು ಯಾಕೆ ನಮ್ಮನ್ನು ಕಂಡ್ರೆ ಅಷ್ಟೆಲ್ಲಾ ಅಸೂಯೆ ಪಟ್ಕೊಳ್ತಾರೆ…? ನಮ್ಮನ್ ಕಂಡ್ರೆ ಯಾಕ್ರೀ ಉರ್ಕೊಳ್ತಾರೆ…. ಅಂಥಾದ್ದು ಏನ್ ಮಾಡಿದೀವಿ ನಾವು ಅವರಿಗೆ?
ನಾವು ನೋಡೋಕೆ ಸ್ವಲ್ಪ ಚೆನ್ನಾಗಿರೋದೇ ತಪ್ಪಾ…?
ನಾವು ಅನುಕೂಲವಾಗಿರೋದೇ ಅವ್ರಿಗೆ ಅಪಥ್ಯನಾ…?
ನಮ್ ಮಕ್ಕಳು ಚೆನ್ನಾಗಿ ಓದೋದೇ ಅಪರಾಧನಾ..?
ನಮ್ ಸಂಸಾರದಲ್ಲಿ ಯಾವ ಕಿರಿಕ್ ಇಲ್ಲದಿರೋದೇ- ಅವರಿಗೆ ಸಮಸ್ಯೆನಾ …?
ನಾವು ಇಂಥಾ ಜಾತಿಯಲ್ಲಿ ಹುಟ್ಟಿದ್ದೇ ಮಹಾಪರಾಧನಾ…….?
ಬಹುಶಃ ನಿಮ್ಮಲ್ಲಿ ಬಹಳಷ್ಟು ಮಂದಿಗೆ ಇಂಥಾದ್ದೊಂದು ಪ್ರಶ್ನೆ ಅಗಾಗ್ಗೆ ಕಾಡುತ್ತಿದ್ದಿರ ಬಹುದು…ಹಾಗೂ ಅದಕ್ಕೆ ಹಲವರು ಉತ್ತರಕ್ಕಾಗಿ ತಲೆ ಕೆಡಿಸಿಕೊಂಡ್ರೆ ಮತ್ತೇ ಕೆಲವರು ಅದನ್ನೆಲ್ಲಾ ನಿರಾಕರಿಸಿ ಸುಮ್ಮನಿರಲೂ ಬಹುದು. ಆದರೂ ನಿಮ್ಮ ನಿರಂತರ ಏಳಿಗೆಯನ್ನು ಸಹಿಸದೇ ಸಿಕ್ಕಾಪಟ್ಟೆ ಉರ್ಕೊಳ್ಳುವ ಕ್ಷುದ್ರ ಮನಸುಗಳು ನಿತ್ಯವೂ ನಿಮ್ಮ ಸುತ್ತಲೂ ಹೆಚ್ಚುತ್ತಲೇ ಹೋಗುತ್ತವೆ. ನೀವು ಜೀವನದ ಪ್ರತೀ ಹಂತದಲ್ಲಿ ಎತ್ತರಕ್ಕೇರಿದಷ್ಟೂ ಹಲವರಲ್ಲಿನ ಅಸೂಯೆಯೆಂಬ ವೃಕ್ಷಕ್ಕೆ ನಿಮ್ಮ ಏಳಿಗೆಯೆನ್ನುವುದು ಗೊಬ್ಬರ ವಾಗುತ್ತಲೇ ಹೋಗುತ್ತದೆ. ನಿಮ್ಮ ಬಗ್ಗೆ ಅಥವಾ ನಿಮ್ಮ ಕುಟುಂಬದ ಬಗೆಗೆ ಹೊಗಳಿಕೆ -ಪ್ರಶಂಸೆ ಹೆಚ್ಚಾದಷ್ಟೂ ಹಲವರ ಅಸೂಯೆಯೆಂಬ ಬಿ.ಪಿ. ಯೂ ಮಿತಿ ಮೀರಿ ಏರುತ್ತಲೇ ಇರುತ್ತದೆ. ನಿಮ್ಮ ಮನಸಿನ ಪ್ರಕಾರ ನೀವು ಸರಿ ಅನಿಸಿದರೂ, ಸರಿಯಾದ ಮಾರ್ಗದಲ್ಲೇ ನೆಡೆದರೂ ಅದರಲ್ಲಿ ನೂರೆಂಟು ಕೊಂಕು ಹುಡುಕಿ ಅದನ್ನು ತಪ್ಪು ಎನ್ನುವ ಖೂಳ ಮನಸುಗಳೇ ಎಲ್ಲೆಡೆ ವಿಜೃಂಭಿಸುತ್ತಿವೆ. ಅವರ ಹೊಟ್ಟೆಉರಿ, ಅಸೂಯೆ , ಈರ್ಷ್ಯೆ ಅಥವಾ ಸಲ್ಲದ ಅಪಪ್ರಚಾರ ಎನ್ನುವುದು ಪೆಟ್ರೋಲ್, ಗ್ಯಾಸ್ ಬೆಲೆಯಂತೆ ನಿತ್ಯವೂ ಏರುತ್ತಲೇ ಇರುತ್ತದೆ. ಅದಕ್ಕೆ ಅಡೆ ತಡೆ ಹಾಕಲಿಕ್ಕೆ ಸಾಧ್ಯವೇ…??

#ಮನುಷ್ಯನಲ್ಲಿರಬಹುದಾದ ಈ ಉರ್ಕೊಳ್ಳೋ ಬುದ್ದಿಗೆ ಒಂದು ಪರಂಪರೆಯೇ ಇದೆ. ಅದು ನಿನ್ನೆ ಮೊನ್ನೆಯದಲ್ಲ, ಅದು ಕಾಲಾತೀತ ! ಕೆಲವರಂತೂ ಜೀವನವಿಡೀ ಉರ್ಕೊಳ್ತಾನೇ ಪ್ರಾಣ ಬಿಟ್ಟಿರೋರೂ ಇದಾರೆ ಅಥವಾ ಡೆತ್ ಬೆಡ್ ಮೇಲಿದ್ದಾಗ್ಲೂ ಉರ್ಕೊಂಡೇ ಉಸಿರು ನಿಲ್ಲಿಸಿ ದವರಿದ್ದಾರೆ. ಇಂಥವರಿಗೆ ನೀವು ಆರ್ಥಿಕವಾಗಿ ಅನುಕೂಲವಾಗಿದ್ರೂ ಸಹಿಸೋಕೆ ಆಗೋಲ್ಲ, ನಿಮ್ಮ ಮಕ್ಕಳು ವಿದ್ಯೆ ಬುದ್ದಿಯಲ್ಲಿ ಅವರ ಮಕ್ಕಳಿಗಿಂತ ಸ್ವಲ್ಪ ಜಾಣರಾಗಿದ್ರೂ ಸಹಿಸೋಕೆ ಆಗೋಲ್ಲ ಅಥವಾ ನೀವು ನೋಡೋಕೆ ಸುಂದರವಾಗಿದ್ದು, ಲಕ್ಷಣವಾಗಿದ್ರೂ ಸಹಿಸೋಕೆ ಆಗೋಲ್ಲ. ಇವೆಲ್ಲವೂ ಅವರಲ್ಲಿ ಜ್ವಲಿಸುತ್ತಿರುವ ಅಸೂಯೆಯೆಂಬ ಬೆಂಕಿಗೆ ಸುರಿಯುವ ಪೆಟ್ರೋಲ್ ಇದ್ದಂತೆ. ಕೊನೆಗೆ ನಿಮ್ಮ ಚಂದದ ನಗು-ಮೊಗ ವೆನ್ನುವುದು ಸಹಾ ಕೆಲವರಲ್ಲಿ ಈರ್ಷೈ ಭಾವವನ್ನು ಹುಟ್ಟಿಸುತ್ತದೆಯೆಂದರೆ… ಇನ್ನೆಂಥಾ ಲೆವೆಲ್ ಗೆ ಅವ್ರು ಉರ್ಕೋಬಹುದು ಲೆಕ್ಕ ಹಾಕಿ !
ಈ ಉರ್ಕೊಳ್ಳೋರ ಬುದ್ದಿಯನ್ನು ಸರಿ ಮಾಡಲಿಕ್ಕೆ ಆಗುತ್ತಾ..? ಯಾಕೆ ಜನ ನಮ್ಮನ್ನು ನೋಡಿ ಉರ್ಕೋತಾರೆ ? ಅದರಿಂದ ಅವರಿಗೆ ಏನು ಲಾಭ….ಅವರೂ ನಮ್ಮಂತೆಯೇ ಚೆನ್ನಾಗಿರಲು ಯಾಕೆ ಪ್ರಯತ್ನಿಸಬಾರದು….ಎಂಬಿತ್ಯಾದಿ ಕೊಶ್ಚೆನ್ ಮಾರ್ಕ್ ಗಳು ನಿಮ್ಮಲ್ಲಿ ಮೂಡಲೂ ಬಹುದಲ್ಲವೇ…??
ಫ಼್ರೆಂಡ್ಸ್….. ಇದಕ್ಕೆಲ್ಲಾ ತುಂಬಾ ಸಿಂಪಲ್ ಆದ ಉತ್ತರ ಇದೆ. ಆದರೆ ಇದು ನೋಡಲು- ಕೇಳಲು ತುಂಬಾ ಸಿಂಪಲ್ ಆದ್ರೂ ಪಾಲಿಸೋದು ಅಷ್ಟೇ ಕಷ್ಟ. ಅದಕ್ಕೆನೀವು ಮೊದಲು ಮಾನಸಿಕವಾಗಿ ತಯಾರಾಗಬೇಕು ನಿಮ್ಮಲ್ಲೇ ಒಂದು ತೆರನಾದ ಮೆಚ್ಯೂರಿಟಿ ಡೆವಲಪ್ ಆಗಬೇಕು.
ಅದು ಏನಂತೀರಾ…!
ಜಸ್ಟ್….ಇಗ್ನೋರ್ ಮಾಡಿಬಿಡಿ ! ಅಂದರೆ ಉರ್ಕೊಳ್ಳೋರನ್ನು ಮತ್ತವರ ಮಾತುಗಳನ್ನು ಅನಾಮತ್ತಾಗಿ ಉದಾಸೀನ ಮಾಡಿ ಬಿಸಾಕಿ ಸುಮ್ಮನಾಗಿ !
ಕೆಲವರು ಯಾಕೆ ನಮ್ಮನ್ನು ನೋಡಿ ಉರ್ಕೋತಾರೆ ಅನ್ನೋದಕ್ಕೆ ಇಂತಹದ್ದೇ ಕಾರಣ ಬೇಕಾಗಿಲ್ಲ. ಯಾಕೆಂದ್ರೆ ಅವರಿಗಿರೋ ರೋಗಾನೇ ಉರ್ಕೋಳ್ಳೋದು ! ಅವರ ನೇಚರ್ರೇ ಅಸೂಯೆ ಪಡೋದು. ಅದರಲ್ಲೂ ಅವರು ನಿಮ್ಮ ಬಂಧುಗಳೋ ನೆಂಟರೋ, ಹತ್ತಿರದವರೋ ಆಗಿದ್ದರಂತೂ ಈ ಕಾಂಪ್ಲೆಕ್ಸ್ ತುಂಬಾ ಡಿಫ಼ರೆಂಟು. ಅವರಲ್ಲಿಲ್ಲದ ಅನೇಕ ಪಾಸಿಟಿವ್ ಅಂಶಗಳು ನಿಮ್ಮಲ್ಲಿವೆ ಎಂದಾಗ ಈ ಉರ್ಕೊಳ್ಳೋ ಬುದ್ದಿ ಸಹಜವಾಗಿ ಅವರಲ್ಲಿ ಶುರುವಾಗುತ್ತೆ. ಅದು ಹಣ, ಅಂತಸ್ತು, ಅಧಿಕಾರ, ವಿದ್ಯೆ, ಸಾಹಿತ್ಯ, ಪ್ರತಿಭೆ, ಕಲೆ, ಸಂಗೀತ, ಕ್ರೀಡೆ, ಹೆಣ್ಣು- ಹೊನ್ನು- ಮಣ್ಣು…ಹೀಗೆ ಏನೇ ಆಗಿರಬಹುದು . ಇವುಗಳನ್ನು ಗಳಿಸುವ ಯೋಗ್ಯತೆ ತನಗಿಲ್ಲವೆಂದಾಗ ಅಥವಾ ಇವು ಹೆಚ್ಚಾಗಿ ನಿಮಗೊಲಿದಿವೆಯೆಂದಾಗ ಸಹಜವಾಗಿ ನಿಮ್ಮತ್ತ ಉರ್ಕೊಳ್ಳೋ ಸ್ವಭಾವ ಕೆಲವರಲ್ಲಿ ಹುಟ್ಟಿಕೊಳ್ಳುತ್ತೆ. ಅದಕ್ಕೆ ನೀವು ಹೊಣೆಯಲ್ಲ. ಅದರಿಂದ ನಿಮಗೇನೂ ಆಗಬೇಕಿಲ್ಲ. ಹೀಗಾಗಿ ಅಂತಹ ಸ್ವಭಾವದವರ ಮಾತಿಗೆ ಕೃತಿಗೆ ಎಳ್ಳಷ್ಟೂ ಬೆಲೆ ಅಥವಾ ಗಮನ ಕೊಡದೇ ನಿಮ್ಮ ಹಾದಿಯಲ್ಲಿ ನೀವು ಸಾಗುವ ಮನೋಸ್ಥೈರ್ಯ ಬೆಳೆಸಿ ಕೊಳ್ಳಬೇಕು . ಕಿವಿಗೆ ಬಿದ್ದ ಕೆಲಸಕ್ಕೆ ಬಾರದ ಮಾತುಗಳು ಒಂಥರಾ ಗುಂಗಾರಿ ಹುಳುವಿನಂತೆ ತುಂಬಾ ಆಳಕ್ಕೆ ಇಳಿದು ಕೊರೆಯುತ್ತವೆ. ಹೀಗಾಗಿ ಅದನ್ನು ಆರಂಭದಲ್ಲೇ ತಡೆದು ನಿಲ್ಲಿಸುವ ತಾಕತ್ತು ನಿಮ್ಮ ಮನಸ್ಸಿಗೆ ನೀವೇ ತುಂಬಬೇಕು. ಅಂತಹ ಮಾತುಗಳಿಗೆ ಅನಗತ್ಯವಾಗಿ ತಲೆ ಕೆಡಿಸಿಕೊಂಡು ನಿಮ್ಮ ಸಮಯ ಮೀಸಲಾಗಿಟ್ಟಿರೋ…ಅಲ್ಲಿಗೆ ನಿಮ್ಮ ವಿನಾಶದ ಆರಂಭಕ್ಕೆ ನೀವೇ ಮುನ್ನುಡಿ ಬರೆದುಕೊಂಡಂತೆ ! ಹಾಗೆ ಮಾತನಾಡಿ ಉರ್ಕೋಳ್ಳುವವರ ಉದ್ದೇಶ ಈಡೇರಲು ನೀವೇ ಅನುವು ಮಾಡಿಕೊಟ್ಟಂತೆ, ನೆನಪಿರಲಿ.!
ಉರ್ಕೊಳ್ಳೋದು…ಹಲವರಿಗೆ ವಾಸಿಯಾಗದ ಖಾಯಿಲೆ. ನೀವು ಅದನ್ನು ಉದಾಸೀನ ಮಾಡದೇ, ಅದಕ್ಕೆ ವೈದ್ಯರಾಗಲು ಹೊರಟಲ್ಲಿ…. ನೀವೂ ಅವರೊಡನೆ ಸೇರಿ ಪೇಷೆಂಟ್ ಆದೀರಿ….ಜೋಕೆ !!!!
** ಮರೆಯುವ ಮುನ್ನ **
ಉರ್ಕೊಳ್ಳೋರಿಗಿಂತಲೂ ಒಂದು ಕೆಟ್ಟ ಅಭ್ಯಾಸ ಕೆಲವರಲ್ಲಿದೆ. ಅದೆಂದರೆ ಈ ರೀತಿ ಅಸೂಯೆ ಪಡೋ ಜನರ ಬಗ್ಗೆ …. ” ಯಾಕೆ ಹೀಗೆಲ್ಲಾ ಮಾಡುತ್ತಾರೆ..” ಎಂದು ಅಂಥವರ ಬಗ್ಗೆ ಅವರ ಮಾತುಗಳ ಬಗ್ಗೆ ಸದಾ ಯೋಚಿಸುತ್ತಾ ತಮ್ಮ ತಲೆಯನ್ನು ತಿಪ್ಪೆ ಗುಂಡಿಯನ್ನಾಗಿಸಿ ಕೊಳ್ಳುತ್ತಾ ಖಿನ್ನತೆಗೆ ಹೋಗುವುದು ! ಅಷ್ಟೇ ಅಲ್ಲ ಅಂತಹಾ ವಿಚಾರವನ್ನೇ ಪದೇ ಪದೇ ನೆನಪುಮಾಡಿಕೊಂಡು ಎಲ್ಲರಲ್ಲಿ ಹೇಳಿಕೊಳ್ಳುವುದು ! ಪಾಪ…ಇವರಿಗೆ ಅದನ್ನು ಕೇಳಿ ಸಹಿಸಿಕೊಳ್ಳುವುದು ಕಷ್ಟ ! ಅಷ್ಟರಮಟ್ಟಿಗೆ ಭರ್ಜಿಯಿಂದ ತಿವಿದಂತೆ ಕೆಲವರ ಈರ್ಷ್ಯೆಯಿಂದ ಇವರಿಗೆ ಮಾನಸಿಕ ಅಘಾತವಾಗಿರ ಬಹುದು. ಆದರೆ ಎಲ್ಲಿಯವರೆಗೆ ಅದನ್ನು ಮನಸಿಂದ ಕಿತ್ತು ಬಿಸಾಡಿ ನಿಮ್ಮ ಯಶಸ್ಸಿನ ಹಾದಿಯಲ್ಲಿ ನೀವು ಸುಗಮವಾಗಿ ಪಯಣಿಸುವುದಿಲ್ಲವೋ ಅಲ್ಲಿಯವರೆಗೆ ಬದುಕು ನಿಮಗೆ ಕುರೂಪವಾಗಿಯೇ ತೋರುತ್ತದೆ.
ನಿಮ್ಗೇನ್ ಸಾರ್… ಏನೋ ಹೇಳಿ ಬರೆದುಬಿಡ್ತೀರಾ ! ಆದ್ರೆ ಅಂಥವರ ಮಾತಿಗೆ ನಾವು ಸುಮ್ಮನಾದ್ರೆ ಅವರು ಇನ್ನೂ ಹೆಚ್ಚಿಕೊಳ್ಳುತ್ತಲೇ ಹೋಗ್ತಾರೆ. ಮೇಲಾಗಿ ನಮ್ಮ ಮೌನವನ್ನೇ ಅವರು ಅವರ ಆರೋಪಗಳಿಗೆ- ಗಾಸಿಪ್ ಗಳಿಗೆ ಸಮರ್ಥನೆಯನ್ನಾಗಿ ತೆಗೆದುಕೊಳ್ಳಲೂ ಬಹುದಲ್ಲವೇ…? ಎಂದು ಯೋಚಿಸುವ ಮನಸುಗಳಿಗೆ
ನನ್ನ ಉತ್ತರ…

ಫೋಟೋ ಕೃಪೆ : pinterest
” ಬೊಗಳುವ ನಾಯಿ ಎಂದಿಗೂ ಕಚ್ವೋಲ್ಲ” ಎಂಬ ಸಿಂಪಲ್ ಲಾಜಿಕ್ ನಿಮ್ಮ ತಲೆಯಲ್ಲಿದ್ದರೆ ಸಾಕು .. ಉರ್ಕೊಳ್ಳೋರು ಉರ್ಕೊಳ್ಳಿ…. ಅವ್ರು ಉರ್ಕೊಂಡಷ್ಟೂ ನೀವು ಎತ್ತರಕ್ಕೆ ಬೆಳೆಯುತ್ತೀರ ! ಅಂಥವರದು ಆಕಾಶಕ್ಕೆ ಉಗುಳುವ ಯತ್ನವಷ್ಟೇ ! ಹೈವೇ ದಾರಿಯಲ್ಲಿ ಪಯಣಿಸುವಾಗ ಅಲ್ಲಲ್ಲಿ ದೊಡ್ಡ ಹಂಪ್ ಗಳಿವೆಯೆಂದು ತಲುಪಬೇಕಾಗಿರುವ ಗಮ್ಯ ತಲುಪದೇ ಪ್ರಯಾಣವನ್ನೇ ನಿಲ್ಲಿಸುವುದು ಅವಿವೇಕತನವಾದೀತು..!
ಇಷ್ಟು ಸಾಕಲ್ಲವೇ ಅರ್ಥ ಮಾಡಿಕೊಳ್ಳಲು !
#ಲಾಸ್ಟ್_ಪಂಚ್
ನೀವು ಹಿಡಿದ ದಾರಿ, ಸವೆಸುತ್ತಿರುವ ಹಾದಿ, ಸೇರಬೇಕೆಂದಿರುವ ಗಮ್ಯದ ಹಿಂದೆ ಒಂದು ಸದುದ್ದೇಶ , #ಸಾಧನೆಯ ಆಶಯ ಹಾಗೂ ಸಕ್ರಮ ಮಾರ್ಗ ಇದ್ದಲ್ಲಿ…….. ಬಿಲೀವ್ ಮಿ ಫ಼್ರೆಂಡ್ಸ್…., ನೂರು ಮಂದಿ ಸಾವಿರ ಮಾತನಾಡಿಕೊಂಡರೂ , ಲಕ್ಷ ಮಂದಿ ಉರ್ಕೊಂಡು ಅರಚಿಕೊಂಡ್ರೂ….. ಅವುಗಳಿಗೆಲ್ಲಾ ಕ್ಯಾರೇ ಎನ್ನದೇ ಜಸ್ಟ್ ಒಂದು ಮುಗುಳುನಗೆಯೊಂದಿಗೆ ಮುನ್ನಡೆಯಿರಿ. ಆಗ ಇಡೀ ಜಗತ್ತೇ ನಿಮ್ಮ ಜೊತೆಯಲ್ಲಿರುವ ಭಾವ ನಿಮ್ಮದಾಗುತ್ತದೆ.
Ofcourse, ಹಾಗಾಗಲಿ.
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
