ಅಸಲಿಗೆ ಪುಷ್ಪ ಚಿತ್ರದಲ್ಲಿ ಯಾವ ಸಂದೇಶವೂ ಇಲ್ಲ, ಯಾವ ಗಟ್ಟಿ ಕಥಾನಕವೂ ಇಲ್ಲ. ಆದರೂ ನಿರ್ದೇಶಕನ ನಿರೂಪಣಾ ಜಾಣ್ಮೆ, ಹೀರೋನ ಮ್ಯಾನರಿಸಂ, ವಿಶಿಷ್ಠವಾದ ಸಂಗೀತ, ಸ್ಟಾರ್ ಡಂ, ಮಾರ್ಕೆಟಿಂಗ್ ತಂತ್ರಗಳಿಂದಲೇ ಅಬ್ಬರಿಸಿ ದುಡ್ಡು ಮಾಡುವ ಅದೃಷ್ಟ ಈ ಚಿತ್ರಕ್ಕಿದೆ. ಮುಂದೆ ಓದಿ ಹಿರಿಯೂರು ಪ್ರಕಾಶ್ ಅವರ ಲೇಖನಿಯಲ್ಲಿ ಪುಷ್ಪ ಚಿತ್ರದ ನೋಟ…
ಎಪ್ಪತ್ತರ ದಶಕದಲ್ಲಿ ಬಂದಂತಹಾ ಕಳ್ಳ ಸಾಗಾಣಿಕೆಗಳ ಕುರಿತಾದ ಸಾಧಾರಣ ಕಥೆಗೆ ಜನಪ್ರಿಯ ನಾಯಕ ನಟನೊಬ್ಬನ ಹೀರೋಯಿಸಂ ನಲ್ಲಿ ವಿಚಿತ್ರ ಆಂಗಿಕ ಮ್ಯಾನರಿಸಂ ಗಳನ್ನು ಸೃಷ್ಟಿಸಿ, ತಾರಾಪಟ್ಟದ ನಟಿಯೊಬ್ಬಳನ್ನು ಐಟಂ ಸಾಂಗಿಗೆ ಬಳಸಿ ಅದಕ್ಕೊಂದು ಜನಪ್ರಿಯ ಟ್ಯೂನ್ ಕೊಟ್ಟು ಅದರೊಂದಿಗೆ ಸಕತ್ ಫ಼ೈಟು, ಸಂಗೀತದ ಘಾಟು, ಮತ್ತೇ ಮತ್ತೇ ಗುನುಗುನಿಸಬೇಕೆನ್ನುವ “ಸಾಮಿ ಸಾಮಿ” ಹಾಡಿನ ಸ್ವೀಟು ಮತ್ತು ಇಡೀ ಚಿತ್ರದುದ್ದಕ್ಕೂ ಕಣ್ಣುಗಳ ತಣಿಸುವ ರೋಮಾಂಚಕ ಕಾಡಿನ ಹಿನ್ನೆಲೆಯ ಸ್ಪಾಟು….ಇವಿಷ್ಟನ್ನೂ ಕಲಸಿ ಕೊರೋನಾ ಕಾಟದಿಂದ ದೊಡ್ಡ ಪರದೆಯ ಮೇಲೆ ಸ್ಟಾರ್ ನಟರ ಸಿನಿಮಾಗಳನ್ನು ನೋಡದೇ ಮನರಂಜನೆಯಿಂದ ಬರಗೆಟ್ಟ ಪ್ರೇಕ್ಷಕರ ಮುಂದೆ ಇಟ್ಟರೆ ಅದು ಒಂದು ವಿಚಿತ್ರ ಘಮಲಿನ ” ಪುಷ್ಪ ” ವಾಗಿ ಅರಳಬಲ್ಲದು !!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತೆಲುಗಿನ ಜನಪ್ರಿಯ ಸ್ಟಾರ್ ನಟ . ತ್ರಿವಿಕ್ರಮ್ ನಿರ್ದೇಶನದ ಅವರ ಈ ಹಿಂದಿನ “ಅಲಾ ವೈಕುಂಟಪುರಂ ಲೋ ” ಚಿತ್ರದ ಭಾರೀ ಯಶಸ್ಸು ಅವರ ಬೆನ್ನ ಹಿಂದೆ ಇತ್ತು. ಜೊತೆಗೆ “#ಪುಷ್ಪ” ದ ಕ್ಯಾಪ್ಟನ್ ಸುಕುಮಾರ್ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ! ಇವರ ಕಾಂಬಿನೇಷನ್ನು ಸಹಜವಾಗಿ ಪುಷ್ಪ ಎಲ್ಲರ ಕುತೂಹಲವನ್ನು ಕೆರಳಿಸಿತ್ತು . ನಾಯಕ ನಾಯಕಿಯ ಅಸಹಜ ಗೆಟಪ್ಪುಗಳೂ ಚಿತ್ರದ ಬಗೆಗೆ ನಿರೀಕ್ಷೆ ಹುಟ್ಟು ಹಾಕಿದ್ದವು. ಈಗ ಎಲ್ಲರ ನಿರೀಕ್ಷೆಯಂತೆ ಪುಷ್ಪ ಕಳೆದ ಡಿಸೆಂಬರ್ ಹದಿನೇಳರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಪಾನ್ ಇಂಡಿಯಾ ಲೆವೆಲ್ಲಿನಲ್ಲಿ ಬಾಕ್ಸ್ ಆಫ಼ೀಸ್ ಧೂಳಿಪಟ ಮಾಡುತ್ತಾ ಹೊಸ ದಾಖಲೆಯನ್ನೇ ಬರೆಯುತ್ತಾ ” ಪುಷ್ಪ ಅಂದ್ರೆ ಫ಼್ಲವರ್ ಅಲ್ಲ ಫ಼ೈರ್ ” ಅನ್ನೋದನ್ನು ಪ್ರೂವ್ ಮಾಡ್ತಾ ಸಾಗಿದೆ. Ofcourse….ದುಡ್ಡು ಗಳಿಕೆಯಲ್ಲಿ. !
ಹಾಗಾದ್ರೆ ಅಂಥಾದ್ದೇನಿದೆ ಈ ಸಿನಿಮಾದಲ್ಲಿ, ಅದೂ ಎರಡು ಪಾರ್ಟ್ ಗಳಲ್ಲಿ ಬರುವಂಥಾದ್ದು ??

ಚಿತ್ರಕಥೆ ಅತ್ಯಂತ ಸಾಧಾರಣ. ಹಾಗೆ ನೋಡಿದಲ್ಲಿ ನಮ್ಮ ಗಂಧದಗುಡಿಯ ಗಟ್ಟಿಕಥೆಯ ಹತ್ತಂಶವೂ ಈ ಚಿತ್ರದ ಕಥೆಗಿಲ್ಲ. ಇಡೀ ಚಿತ್ರ ನಿಂತಿರುವುದೇ ಅಲ್ಲು ಅರ್ಜುನ್ ಎಂಬ ಸ್ಟಾರ್ ನಟನ ಮೇಲೆ ಹಾಗೂ ನಿರ್ದೇಶಕನ ನಿರೂಪಣೆಯ ತಂತ್ರದ ಮೇಲೆ.
ಇಡೀ ಪ್ರಪಂಚದಲ್ಲಿಯೇ ಶೇಷಾಚಲಂ ಕಾಡಿನಲ್ಲಿ ಮಾತ್ರವೇ ಸಿಗುವ ರಕ್ತಚಂದನ ಮರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿರುವ ಕೂಲಿಕಾರನೊಬ್ಬ ಅದೇ ಗ್ಯಾಂಗಿನವರನ್ನು ತನ್ನ ಜಾಣತನದಿಂದ ಮಟ್ಟ ಹಾಕುತ್ತಾ ಹೇಗೆಲ್ಲಾ ಕೋಟಿ ಕೋಟಿ ಸಂಪಾದಿಸುತ್ತಾ ಎತ್ತರಕ್ಕೆ ಬೆಳೆಯುತ್ತಾನೆ ಎಂಬುದು ಚಿತ್ರದ ಟೋಟಲ್ ಹೂರಣ. ಈ ಮಧ್ಯೆ ಸೆಂಟಿಮೆಂಟಿಗೆ ಹೀರೋನ ಅಮ್ಮ, ಮತ್ತವಳ ‘ಇಂಟಿ ಪೇರು’ ಹಿನ್ನೆಲೆ, ಫ಼ೈಟಿಗಾಗಿ ಕನ್ನಡಿಗ ಧನಂಜಯ ಮತ್ತಿತರ ಎದುರಾಳಿಗಳು, ಲವ್ ಸೆಟ್ಟ್ಲ್ ಮೆಂಟಿಗೆ, ಸಾಮಿ ಸಾಮಿ ಸಾಂಗಿಗೆ ಶ್ರೀವಲ್ಲಿಯಾಗಿ ಕನ್ನಡತಿ #ರಶ್ಮಿಕಾ_ಮಂದಣ್ಣ, ಐಟಂ ಸಾಂಗಿಗೆ ಸಮಂತಾ ಹಾಗೂ ಚಿತ್ರದುದ್ದಕ್ಕೂ ಮುದ ನೀಡುವ ಚಿತ್ತೂರ್ ಶೈಲಿಯ ಡೈಲಾಗುಗಳು ! ಈ ಎಲ್ಲವನ್ನೂ ಹಿಡಿದಿಟ್ಟು ಹೆಚ್ಚು ಕಡಿಮೆ ಮೂರು ಘಂಟೆಯ ಸಿನಿಮಾವನ್ನು ಎಲ್ಲೂ ಅತಿಯಾಗಿ ಬೋರಾಗದೇ ಜಾಣ್ಮೆಯಿಂದ ನಿರೂಪಿಸಿರುವ ಸುಕುಮಾರ್ ರ ಜಾಣತನವೇ ಚಿತ್ರದ ಹೈಲೈಟು, ಸ್ಪಾಟ್ ಲೈಟು ಹಾಗೂ ಸೀಕ್ರೇಟೂ ಎಲ್ಲವೂ ! ಹುಚ್ಚು ಹಿಡಿಸುವ ಮೂರು ಸಾಂಗುಗಳೂ ಸಹಾ ಇದಕ್ಕೆ ಸಕತ್ತಾಗಿಯೇ ಸಾಥ್ ನೀಡಿವೆ.
ಸ್ಟೈಲಿಶ್ ಸ್ಟಾರ್ ಎಂಬ ಇಮೇಜಿನಿಂದ ಹೊರಬಂದು ಕೂಲಿಯವನಂಥಾ ಮೇಕಪ್ಪಿನಲ್ಲೂ ಕಿಕ್ ಕೊಡುವಂತೆ ತನ್ನ ಎಡ ಭುಜವನ್ನು ಸೆಟೆಸಿ ಮೇಲೆತ್ತಿ ನೆಡೆಯುತ್ತಾ, ಕಾಲ ಮೇಲೆ ಕಾಲೆತ್ತಿ ಕೂರುವ ಶೈಲಿಯಲ್ಲಿ ಅಲ್ಲು ಅರ್ಜುನ್ ಸಕತ್ತಾಗಿಯೇ ಮಿಂಚಿದ್ದಾರೆ. ಈ ಮ್ಯಾನರಿಸಂ ಗಳು ಹೆಂಗೆ ಅಂದ್ರೆ. ನಮ್ಮಲ್ಲಿ ಬಹುತೇಕ ಮಂದಿ ಮೋಟಾರ್ ಬೈಕ್ ಓಡಿಸುವಾಗ ಅಥವಾ ಟಾಯ್ಲೆಟ್ ನಲ್ಲಿ ಬಿಜ಼ಿಯಿದ್ದಾಗ, ಮೊಬೈಲ್ ನಲ್ಲಿ ಮಾತನಾಡುವ ಸಮಯದಲ್ಲಿ ಭುಜ ಮತ್ತು ಕಿವಿ ಮಧ್ಯೆ ಫೋನ್ ಇಟ್ಕೊಂಡು ತಲೆ ಸೊಟ್ಟ ಮಾಡಿಕೊಂಡು ಮಾತನಾಡಿದಾಗ ಕಾಣುವಂತಹಾ ಪೋಸು ಅದು !
ಇನ್ನು ನೆಡೆಯೋ ಸ್ಟೈಲು…. ಸಿಕ್ಕಾಪಟ್ಟೆ ಬೆನ್ನು ನೋವಿರೋರು ಬೆಳ್ಳಂ ಬೆಳಿಗ್ಗೆ ಏಳುವಾಗ ಒಂದು ಕೈಯನ್ನು ಸೊಂಟದ ಮೇಲೆ ಆಸರೆಗಾಗಿ ಹಿಡಿದುಕೊಂಡು ಹಾಗೂ ಕಾಲನ್ನು ನೆಲದ ಮೇಲೆ ಸವರಿಕೊಂಡು ಪೋಲಿಯೋ ಕಾಲಿನವರು ತೆವಳುವಂತೆ ನೆಡೆಯುವರಲ್ಲಾ….ಹಾಗಿದೆ ನಮ್ಮ ಪುಷ್ಫ ನೆಡೆಯುವ ಸ್ಟೈಲು. ಈ ಸ್ಟೈಲ್ ಅಲ್ಲು ಅರ್ಜುನ್ ಮಾತ್ರವೇ ಮಾಡಬಲ್ಲರೇನೋ ಎಂಬಂತಿದೆ . ಈಗ ಇದೇ ಟ್ರೆಂಡು, ಬ್ರಾಂಡು ಎಲ್ಲಾ.!

ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್ ಫೋಟೋ ಕೃಪೆ : Gulte
ಅದರಲ್ಲೂ ” ಚೂಪೆ ಬಂಗಾರಮಾಯನಾ ಶ್ರೀವಲ್ಲಿ ” ಹಾಡಿನಲ್ಲಿ ಅಡ್ಡಡ್ಡ ನೆಡೆಯುವ ಅಲ್ಲು ಸ್ಟೆಪ್ ಗಳೇ ಈಗ ಎಲ್ಲೆಡೆ ವೈರಲ್ಲು, ಮಾರಲ್ಲು ಹಾಗೂ ಹೈ ಲೆವೆಲ್ಲು…! ಕ್ರಿಕೆಟ್ ಸ್ಟಾರ್ ಗಳೂ ಸಹ ಮೈದಾನದಲ್ಲಿ ಈ ಹಾಡಿನಲ್ಲಿ ಅಲ್ಲು ಅರ್ಜುನ್ ಹಾಕುವ ಸೊಟ್ಟ ಸ್ಟೆಪ್ಸ್ ಅನ್ನೇ ಫ಼ಾಲೋ ಮಾಡುತ್ತಿದ್ದಾರೆಂದರೆ ಇದರ ಖದರ್ ಊಹಿಸಬಹುದು.
ಪುಷ್ಪ ನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿರುವ ಅಲ್ಲು ಅರ್ಜುನ್ ಇಡೀ ಚಿತ್ರವನ್ನು ಅನಾಮತ್ತಾಗಿ ಆವಾಹಿಸಿಕೊಂಡಿದ್ದಾರೆ. ಮೇಕಪ್ ಇಲ್ಲದೇ ಕಾಸ್ಟ್ಯೂಮ್ ಇಲ್ಲದೇ ಸಾಧಾರಣ ಲುಕ್ ನಲ್ಲೂ ಅಸಾಧಾರಣ ಇಂಪ್ರೆಸ್ ಮಾಡುವಲ್ಲಿ ಗೆದ್ದಿದ್ದಾರೆ. ಇನ್ನು “ಇಂಟರ್ ನ್ಯಾಶನಲ್ ಸ್ಟಾರ್ ” ಕನ್ನಡತಿ ರಶ್ಮಿಕಾ ಗೆ ಮೆತ್ತಿರುವ ಡಾರ್ಕ್ ಮೇಕಪ್ಪಿನಲ್ಲಿ ರಗಡ್ ಲುಕ್ಕಲ್ಲಿ ಕಾಣಿಸಿಕೊಂಡು ನಾಲ್ಕು ದೃಶ್ಯಗಳಲ್ಲಿ ಹಾಗೆ ಬಂದು ಹೀಗೆ ಹೋದರೂ ” ಸಾಮಿ ಸಾಮಿ ” ಹಾಡಿನ ಸ್ಟೆಪ್ ಗಳನ್ನು ಟ್ರೆಂಡ್ ಸೆಟ್ ಮಾಡಿ ಮಿಂಚಿದ್ದಾರೆ.

ಫೋಟೋ ಕೃಪೆ : bollywoodhungama
ಇಡೀ ಚಿತ್ರದಲ್ಲಿ ಅಲ್ಲು ಅರ್ಜುನ್ ಬಿಟ್ಟರೆ ಪಾತ್ರದ ಮೂಲಕ ಜೀವ ತುಂಬಿರುವುದು ಚಿತ್ರದ ಕೊನೆಯಲ್ಲಿ ಎಂಟ್ರಿ ಕೊಡುವ ಎಸ್.ಪಿ. ಬನ್ವಾರಿ ಸಿಂಘ್ ಷೇಕಾವತ್ ಪಾತ್ರದ ಫ಼ಹಾದ್ ಫ಼ಾಸಿಲ್ ! ಆಗಷ್ಟೇ ಅಲ್ಲು ಅರ್ಜುನ್ ಗೆ ಸಾಟಿಯಾದ ಜುಗಲ್ ಬಂದಿ ದಕ್ಕುವುದು. ಈ ಮಧ್ಯೆ ಬರುವ ಅನೇಕ ಕಳ್ಳ ಸಾಗಾಣಿಕೆ ದಾರರ ಪಾತ್ರಗಳು ನಮ್ಮ ವಜ್ರಮುನಿ, ತೂಗುದೀಪ, ಸುಧೀರ್ ರಂಥವರಿಗೆ ಕಂಪೇರ್ ಮಾಡಿದಲ್ಲಿ ಪೇಲವವೆನಿಸಿಬಿಡುತ್ತವೆ. ಅಚ್ಚರಿಯೆಂದರೆ ಹಾಸ್ಯ ನಟ ಸುನಿಲ್ ಇಲ್ಲಿ ವಿಲನಿಯಸ್ ಲುಕ್ಕಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿರುವುದು.
ತೆರೆಯ ಹಿಂದಿನ ತಂತ್ರಜ್ಞರಲ್ಲಿ ಮೀರೋಸ್ಲಾವ್ ಬ್ರೋಜೆಕ್ ರ ಕ್ಯಾಮೆರಾ ಚಿತ್ರದ ದೃಶ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿ ಚಿತ್ರದ ಹೈಲೈಟ್ ಆಗಿದೆ. ದೇವಿ ಶ್ರೀಪ್ರಸಾದ್ ರ ಸಂಗೀತದಲ್ಲಿನ ಎರಡು ಮೂರು ಹಾಡುಗಳು ಹಾಗೂ ಅಪರೂಪದ ಟ್ಯೂನ್ ಗಳು ಈಗಾಗಲೇ ವೈರಲ್ ಆಗಿ ಹುಚ್ಚೆಬ್ಬಿಸಿವೆ. ಸಮಂತಾರ ಐಟಂ ಸಾಂಗು ” ಊಂ ಅಂಟಾವಾ ಮಾವ ಊಹೂಂ ಅಂಟಾವಾ ” ಅಂತೂ ಕ್ರೇಜ಼್ ಎಬ್ಬಿಸಿದೆ.
ಒಟ್ಟಾರೆಯಾಗಿ ಅತ್ಯಂತ ಸಾಧಾರಣ ಕಥೆಗೆ ಉಪ್ಪು, ಖಾರ, ಮಸಾಲೆ, ಬಣ್ಣ -ಸುಣ್ಣ ಎಲ್ಲವನ್ನು ಹಚ್ಚಿ ಇಂದಿನ ಜ಼ಮಾನಾದವರ ಎದೆಗೆ ಧಸಕ್ಕನೇ ಡೈರೆಕ್ಟಾಗಿ ನಾಟುವಂತೆ ನಿರ್ದೇಶಕ ಸುಕುಮಾರ್ ಪುಷ್ಪ ಬಾಣವನ್ನು ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಬರೋಬ್ಬರಿ 365 ಕೋಟಿ ಬಾಚಿದ್ದಾರೆ.
ಬೇಜಾರ್ ಮೂಡಲ್ಲಿದ್ದರೆ ಒಮ್ಮೆ ಪುಷ್ಪರಾಜನನ್ನು ನೋಡಲಡ್ಡಿಯಿಲ್ಲ.
** ಮರೆಯುವ ಮುನ್ನ **
ಅಸಲಿಗೆ ಈ ಚಿತ್ರದಲ್ಲಿ ಯಾವ ಸಂದೇಶವೂ ಇಲ್ಲ, ಯಾವ ಗಟ್ಟಿ ಕಥಾನಕವೂ ಇಲ್ಲ. ಆದರೂ ನಿರ್ದೇಶಕನ ನಿರೂಪಣಾ ಜಾಣ್ಮೆ, ಹೀರೋನ ಮ್ಯಾನರಿಸಂ, ವಿಶಿಷ್ಠವಾದ ಸಂಗೀತ, ಸ್ಟಾರ್ ಡಂ, ಮಾರ್ಕೆಟಿಂಗ್ ತಂತ್ರಗಳಿಂದಲೇ ಅಬ್ಬರಿಸಿ ದುಡ್ಡು ಮಾಡುವ ಅದೃಷ್ಟ ಈ ಚಿತ್ರಕ್ಕಿದೆ. ಚಿತ್ರ ನಿರ್ಮಾಣದ ತಂತ್ರಗಾರಿಕೆಯೂ ಈಗ ಬದಲಾಗಿದೆ. ಹತ್ತು ನಿಮಿಷಗಳ ಹೂರಣ ಇರುವ ಕಥೆಯನ್ನು ನಿರೂಪಣಾ ತಂತ್ರಗಾರಿಕೆಯಿಂದ ಮೂರು ಘಂಟೆ ಹೇಳುವುದು ಹಾಗೂ ಅದರಲ್ಲಿಯೂ ಎರಡು ಭಾಗ ಮಾಡಿ ಮೊದಲ ಭಾಗವನ್ನು ಹೀರೋನನ್ನು ವೈಭವೀಕರಿಸುವ ಹಾಗೂ ಇನ್ನಿತರ ಅಗ್ಗದ ಮನರಂಜನೆಗಾಗಿ ಬಳಸಿ ಎರಡನೇ ಭಾಗವನ್ನು ಮೊದಲ ಭಾಗದ ಸಿನಿಮಾದ ಜನಪ್ರಿಯತೆ, ಬಾಕ್ಸಾಫ಼ೀಸ್ ಕಲೆಕ್ಷನ್ ನೋಡಿಕೊಂಡು ಇದ್ದ ಅಲ್ಪ ಸ್ವಲ್ಪ ಕಥೆಯನ್ನು ಪೂರ್ತಿಯಾಗಿ ತುರುಕಿ ಕೊನೆಗೆ ಮೆಗಾ ಎಂಡ್ ಮಾಡುವುದು ಹೊಸ ಕಸುಬುದಾರಿಕೆ. ಈ ತಂತ್ರಗಾರಿಕೆ ತನ್ನ ಜನಪ್ರಿಯತೆಯ ಶಿಖರ ಮುಟ್ಟಿದ್ದು ಬಾಹುಬಲಿ ,ಕೆ ಜಿ ಎಫ಼್ , ದಬಾಂಗ್, ಸಿಂಗಂ ಮುಂತಾದ ಚಿತ್ರಗಳ ಯಶಸ್ಸಿನಿಂದ . ಆದರೆ ನಮ್ಮ ಕನ್ನಡದಲ್ಲಿ ಮಾತ್ರ ಪಾನ್ ಇಂಡಿಯಾ ಅಲ್ಲದ ಈ ಎರಡು ಚಾಪ್ಟರ್ ಗಳ ಚಿತ್ರಗಳ ಯಶಸ್ಸು ಅಷ್ಟಕ್ಕಷ್ಟೇ !

ಫೋಟೋ ಕೃಪೆ : koimoi
ಮೊದಲೆಲ್ಲಾ ಒಂದು ಸಿನಿಮಾ ಯಶಸ್ಸಾಗಲು ಗಟ್ಟಿಯಾದ ಕಥೆ, ಚಿತ್ರ ಕಥೆ, ಸಂಭಾಷಣೆ, ಸಾಹಿತ್ಯ, ನಾಯಕ ,ನಾಯಕಿ, ಹಾಸ್ಯ , ಸಂಗೀತ, ಸಾಹಿತ್ಯ, ಛಾಯಾಗ್ರಹಣ ಹಾಗೂ ನಿರ್ದೇಶನ ಎಲ್ಲವೂ ಸರಿ ಇರಬೇಕಿತ್ತು. ಆದರೆ ಇಂದು ಬೇಕಾಗಿರುವುದು ಪ್ರೇಕ್ಷಕರನ್ನು, ಜನರನ್ನು ಹೇಗೆ ಎಷ್ಟರಮಟ್ಟಿಗೆ ಬಕ್ರಾಗಳನ್ನಾಗಿ ಮಾಡಬಹುದೆಂಬ ಅದ್ಭುತ ಡಿಜಿಟಲ್ ಟೆಕ್ನಾಲಜಿ ಹಾಗೂ ಸೃಷ್ಟಿಸುವ ಫ಼್ಯಾಂಟಸಿ ಲೋಕ ! ಚಾಟಿಯಿಲ್ಲದಿದ್ದರೂ ಬುಗುರಿ ಆಡಿಸುವ ತಂತ್ರ! ಕಥೆಯಿಲ್ಲದಿದ್ದರೂ ಸಿನಿಮಾ ಗೆಲ್ಲಿಸುವ ಕುತಂತ್ರ ಅಷ್ಟೆ. ಸಧ್ಯಕ್ಕೆ ಪುಷ್ಪ ದಿ ರೈಸಿಂಗ್ ಬಗೆಗೂ ಇದನ್ನೇ ಹೇಳಬೇಕಾಗಿದೆ.
ಅಂದರೆ ಕಥೆಯನ್ನು ಪಕ್ಕಕ್ಕಿಟ್ಟು ತಮ್ಮವ್ಯಥೆಯನ್ನು ಮರೆಯಲಿಕ್ಕಾಗಿ ಎರಡು ಮುಕ್ಕಾಲು ತಾಸು ಭರ್ಜರಿ ಮನರಂಜನೆಗಾಗಿ ಜನ ಫ಼್ಲವರ್ರೂ ಅಲ್ಲದ, ಫ಼ೈರೂ ಇಲ್ಲದ ಪುಷ್ಫನನ್ನು ವಿಶೇಷವಾಗಿ ಒಪ್ಪಿದ್ದಾರೆ, ಅದ್ಭುತವಾಗಿ ಗೆಲ್ಲಿಸಿದ್ದಾರೆ.
ಇದು ಇಂದಿನ ಟೇಸ್ಟು , ಈ ಟೇಸ್ಟೇ ನಿರ್ಮಾಪಕರ ಪಾಲಿಗೆ ಬೂಸ್ಟು !
ಪ್ರೀತಿಯಿಂದ…
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
