ನಾನಾ ದೇಶ-ಭಾಷೆಗಳ ಪುಸ್ತಕಗಳನ್ನು ನಮ್ಮ ಭಾಷೆಯಲ್ಲಿ ಓದುವಾಗ ಅಚ್ಚರಿ, ಸಂತೋಷವಾಗುತ್ತದೆ, ಮೂಲ ಬರಹಗಾರರು ಹಚ್ಚಿದ ಹಣತೆಗೆ ಎಣ್ಣೆಯನ್ನು ಹಾಕುವ, ಬತ್ತಿಯ ಕುಡಿಯನ್ನು ತೀಡಿ ಚುರುಕಾಗಿಸಿ ಬೆಳಕನ್ನು ಹಿಗ್ಗಿಸುವ, ಪಣತಿಯನ್ನು ಬೊಗಸೆಯಲಿ ಹಿಡಿದು ಆರಿ ಹೋಗದಂತೆ ಬೇರೆಡೆಯೂ ಬೆಳಕು ಚೆಲ್ಲಿಸುವಂಥ ಅವಕಾಶವನ್ನು ಅನುವಾದಕರು ಮಾಡುತ್ತಿದ್ದಾರೆ, ಅವರಿಗೆ ಒಂದು ನಮನ. ಮುಂದೆ ಓದಿ…
ಓದುತ್ತಿರುವ ಪುಸ್ತಕಗಳು ಮನಸ್ಸನ್ನು ಬಡಿದೆಬ್ಬಿಸಿ ನಮ್ಮನ್ನು ಎಚ್ಚರಿಸದಿದ್ದರೆ ಅವನ್ನು ಏಕಾದರೂ ಓದಬೇಕು?
* ಫ್ರಾನ್ಸ್ ಕಾಫ್ಕ
ಯಾವುದೇ ಭಾಷೆಯ ಅಭಿಜಾತ ಇಲ್ಲವೆ ಕ್ಲಾಸಿಕ್ ಎಂದು ಗುರುತಿಸಲಾಗುವ ಕೃತಿಯನ್ನು ನಾವೇಕೆ ಓದಬೇಕು?
ನಮನಮಗೆ ಅನ್ನಿಸಿದ್ದನ್ನು ಓದಿಕೊಂಡು, ನಾವು ಓದಿರುವ ಲೇಖಕರ ಕೃತಿಗಳು ಮಾತ್ರ ಶ್ರೇಷ್ಠ ಸಾಹಿತ್ಯ ಕೃತಿಗಳು ಎಂದು ಭಾವಿಸುವುದರಲ್ಲಿ ತಪ್ಪೇನಿದೆ?
ಮೇಲಿನ ಎರಡೂ ಪ್ರಶ್ನೆಗಳು ಭಿನ್ನ ಧಾಟಿಯವು. ಮೊದಲಿನ ಪ್ರಶ್ನೆಯಲ್ಲಿ ಕುತೂಹಲ ಮತ್ತು ಅಪಾರವಾದ ತಿಳಿಯುವಾಸೆ ಅಡಗಿದೆ.
ಎರಡನೆಯ ಪ್ರಶ್ನೆಯನ್ನು ಕೇಳುವ #ಸಾಹಿತ್ಯ ಓದುಗರು ಎಂದು ಗುರುತಿಸಿಕೊಳ್ಳುವವರನ್ನು ನಾವು ಆಗೀಗ ಭೇಟಿಯಾಗುತ್ತಲೇ ಇರುತ್ತೇವೆ. ಶ್ರೇಷ್ಠತೆಯ ವ್ಯಸನಿಗಳಾದ ಇಂಥವರು, ಕಥೆ, ಕಾವ್ಯ, ಕಾದಂಬರಿ ಯಾವುದೇ ಪ್ರಕಾರವಿರಲಿ ತಾವೇ ನಿರ್ಧರಿಸಿದ ಶ್ರೇಷ್ಠ ಲೇಖಕರ ಉದ್ದುದ್ದ ಪಟ್ಟಿಯಲ್ಲಿನ ಹೆಸರುಗಳನ್ನು ಒಪ್ಪಿಸಲಾರಂಭಿಸುತ್ತಾರೆ. ಮೊದಲ ಪ್ರಶ್ನೆಗೆ ವಿವರವಾದ ಉತ್ತರವನ್ನು ಕಂಡುಕೊಳ್ಳುವ ಮುಂಚೆ ಒಂದು ಪುರಾತನ ರೂಪಕವನ್ನು ಗಮನಿಸಿ ಮುಂದುವರೆಯೋಣ. ಮನೆಯ ಹಿತ್ತಲಿನಲ್ಲಿರುವ ಕಿರು ಬಾವಿಯ ನೀರಿನ ರುಚಿ ಮತ್ತು ಆಳಗಲ ನೋಡಿರುವ ಕಪ್ಪೆಯೊಂದು ಸಮುದ್ರ ಹುಡುಕಿ ಹೋಗಿ, ಅಲ್ಲಿನ ಉಪ್ಪು ನೀರು, ಆ ಸಮುದ್ರವನ್ನು ಸೇರುವ ನೂರಾರು ನದಿಗಳು, ಬಿಸಿಲು-ಗಾಳಿ, ತರಹೇವಾರಿ ಜೀವರಾಶಿ, ಸಸ್ಯಸಂಕುಲ, ರಾತ್ರಿಯಲ್ಲಿ ಹೆಳೆವ ಆಕಾಶ, ನಕ್ಷತ್ರಗಳನ್ನು ಅವಿಷ್ಕಾರ ಮಾಡಲು ನಿರ್ಧರಿಸಿದರೆ ಹೇಗಿರುತ್ತದೆ? ಹಾಗೆ ಮಾಡಿದಾಗ ಕಪ್ಪೆಗೆ ತನ್ನ ಮನೆಯ ಹಿತ್ತಲಿನ ಬಾವಿಯ ನೀರಷ್ಟೇ ಎಳೆನೀರಿನಷ್ಟು ಸಿಹಿಯಾಗಿಲ್ಲ, ಎಂಬ ಸಾಕ್ಷಾತ್ಕಾರವಂತೂ ಖಂಡಿತ ಪ್ರಾಪ್ತವಾಗುತ್ತದೆ.

ಫೋಟೋ ಕೃಪೆ :liminalpages
ರೂಪಕದ ಮಾತು ಹೇಗೂ ಇರಲಿ, ನಾವೇಕೆ ವಿಶ್ವಸಾಹಿತ್ಯದ ಅತ್ತ್ಯುತ್ತಮ ಕೃತಿಗಳನ್ನು ಓದಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು? ಎಂಬ ಪ್ರಶ್ನೆಗೆ ಹಲವಾರು ಸಮಾಧಾನಗಳಿರಲು ಸಾಧ್ಯ. ಅಭಿಜಾತ ಕೃತಿಗಳನ್ನು ಓದುವ ಮೂಲಕ ಇಂದು ಬಹು ಚರ್ಚೆಯಲ್ಲಿರುವ ಎರಡು ಶಬ್ದಗಳಾದ ಬಹುತ್ವ ಮತ್ತು ವಿವಿಧತೆಗಳು ತಾನೇ ತಾನಾಗಿ ಅಂತರ್ಗತವಾಗಬಲ್ಲವು ಎಂಬುದು ಒಂದು ನಿಶ್ಚಿತ ಉತ್ತರವಾಗಿರಬಹುದು. ಅಭಿಜಾತ ಕೃತಿಗಳ ಓದುವಿಕೆಯಿಂದ ವಿವಿಧ ಜನಾಂಗ, ಭಾಷೆ, ಸಂಸ್ಕೃತಿ, ಜನಜೀವನ, ನಂಬಿಕೆ, ಪರಿಸರ, ಋತುಮಾನ ಇತ್ಯಾದಿಗಳು ಕೃಪೆಯಂತೆ ನಮಗೆ ಒದಗಿಬರಬಹುದು. ಇಂಥ ಕೃತಿಗಳಿಗೆ ಪ್ರತಿ ಯುಗಧರ್ಮಕ್ಕೂ ತಾವು ಹೇಳುವುದು ಇದ್ದೇ ಇರುತ್ತದೆ, ಎಂಬ ಅರ್ಥದ ಮಾತನ್ನು ಇತಾಲೊ ಕಲ್ವಿನೊ ಹೇಳುತ್ತಾನೆ. ಉತ್ತಮ ಕೃತಿಯೊಂದರ ಓದು ಅಪರಿಮಿತ ಆನಂದವನ್ನು ನೀಡಬಲ್ಲುದು. ಇಂಥ ಓದು ತರುಣರಿಗೆ ಸಹನಶೀಲತೆ ಕಲಿಸುತ್ತ, ಚಂಚಲತೆಯನ್ನು ಕಡಿಮೆ ಮಾಡಿ, ನಿರ್ದಿಷ್ಟ ಬದುಕಿನ ಗುರಿಗಳತ್ತ ಕರೆದೊಯ್ಯಬಲ್ಲುದು. ಕಣ್ಣೆದುರು ಕವಲುದಾರಿಗಳನ್ನು ಮೂಡಿಸಿ, ಹೋಲಿಕೆ, ತರತಮಗಳನ್ನು ಅರಿತುಕೊಳ್ಳುವ ವಿಧಾನ, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಬಗೆ, ಸೌಂದರ್ಯಪ್ರಜ್ಞೆಯನ್ನು ಗ್ರಹಿಸುವ ರೀತಿ, ಯಾವ ವಿಚಾರವನ್ನು, ಯಾವ ನಿಕಷಕ್ಕೊಡಿದರೆ ಸಮರ್ಪಕ ಉತ್ತರ ದೊರಕಬಲ್ಲುದು ಎಂಬ ವಿವೇಚನೆಗಳನ್ನು ನೀಡಬಲ್ಲುದು. ಪುಸ್ತಕಗಳು ಒದಗಿಸುವ ಅನುಭವದ ಮೂಲಕ ನಾವು ಪಡೆಯುತ್ತಿರುವ ಅರಿವು ನಮ್ಮನ್ನು ಸ್ವತಂತ್ರ ವಿಚಾರಶಕ್ತಿಯ ಮುನುಷ್ಯರಾಗಲು ಸಾಧ್ಯ ಎಂಬುದನ್ನು ತಿಳಿಸಿಕೊಡಬಲ್ಲುದು. ಆಗ ಎರಡನೆಯ ಪ್ರಶ್ನೆಯ ಧಾಟಿ ಬದಲಾಗಬಲ್ಲುದು.
ಇಂಥ ಕೃತಿಗಳ ಓದು ಗತಕಾಲದ ಯುಗಧರ್ಮ ಅತ್ಯಂತ ಸಂಕೀರ್ಣವಾಗಿತ್ತು ಎನ್ನುವುದನ್ನು ತಿಳಿಸಿಕೊಡಬಲ್ಲದು. ನಮ್ಮ ಕುಟುಂಬದ ಹಿರಿಯರು, ಅವರು ಬಾಳಿ-ಬದುಕಿದ ವಿಧಾನ, ಕಂಡ ಕಾಣ್ಕೆ ಮತ್ತು ಪಡೆದ ಸಾರ್ಥಕತೆಯನ್ನು ತಿಳಿದುಕೊಳ್ಳದಿದ್ದರೆ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆ? ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಿದರೆ, ಅಭಿಜಾತ ಕೃತಿಗಳ ಅಧ್ಯಯನದಿಂದ ನಮ್ಮ ಸ್ಥಳೀಯ ಮತ್ತು ವಿಶ್ವ ಸಾಹಿತ್ಯ ಪರಂಪರೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಪರಂಪರೆಯ ಅರಿವು ಬೇಕಿಲ್ಲವೆಂಬ ಹಮ್ಮಿನ ಮಾತು ಎಲ್ಲ ಕಾಲಕ್ಕೂ ಇದ್ದುದೆ. ಅಂಥ ನಿಲುವು ಸೃಷ್ಟಿಸುವ ಅಪಾರ್ಥಗಳನ್ನು ಸರಿಪಡಿಸಲು ಹಲವೊಮ್ಮೆ ಇಡೀ ನಾಗರಿಕತೆಗಳು ಬೆಲೆ ತೆತ್ತುದನ್ನು ಅರಿಯಲು ಕೂಡ ಇಂಥ ಅಭಿಜಾತ ಕೃತಿಗಳು ಆಸರೆಯಾಗಬಲ್ಲುವು.
ಹಿಂದಿನ ಪುಸ್ತಕಗಳು ತೆರೆದಿಡುವ ಪಾಠಗಳಲ್ಲಿ ಇಂದಿನ ಕಲಿಕೆಗೂ ಅವಕಾಶವಿದ್ದೇ ಇದೆ. ವರ್ಗ, ವರ್ಣ, ನಗರ-ಗ್ರಾಮ, ಸಿರಿವಂತ-ಬಡವ, ಬಂಗಲೆ, ಗುಡಿಸಲು, ನಿರಕ್ಷರಿ-ಅಕ್ಷರಸ್ಥ, ಪುರುಷ-ಮಹಿಳೆ ಇಂಥ ವಿಚಾರಗಳು ಸೃಷ್ಟಿಸಿದ ಸ್ಥಿತಿಯಿಂದ ಪರಿಣಾಮವೇನಾಯಿತು? ಇವುಗಳಿಂದಾಗಿ ಅಂದು ಇತ್ಯರ್ಥಗೊಳ್ಳದ ಎಷ್ಟೋ ವಿಷಯಗಳು ಇಂದು ಸರಿಪಡಿಸಲು ನಾವೇನು ಮಾಡಬೇಕು? ಎಂಬುದರ ಸುಳಿವನ್ನು ಅಭಿಜಾತ ಅಧ್ಯಯನ ಒದಗಿಸಬಲ್ಲುದು. ಈ ಕೃತಿಗಳು ನಮ್ಮನ್ನು ನಾವು ಕೊಂಚಮಟ್ಟಿಗೆ ಚೆನ್ನಾಗಿ ಅರಿಯಲು ಅವಕಾಶ ಒದಗಿಸುವುದರಿಂದ ನಾವು ಹೆಚ್ಚು ಮಾನವೀಯವಾಗಲು, ಸ್ವಾನುಭೂತಿಗಳಾಗಲು, ಮೃದುವಾಗಿರಲು, ಉದಾತ್ತವಾಗಿರಲು ಅನುವು ಮಾಡಿಕೊಡಬಲ್ಲವು. ಲೋಕದೃಷ್ಟಿಯ ವಿಧಾನವನ್ನೇ ಬದಲಿಸಿಬಿಡಬಲ್ಲವು.

ಫೋಟೋ ಕೃಪೆ :Reader’s digest
ಮನುಷ್ಯನ ಮನಸ್ಸು ಎಷ್ಟು ಮೂಢತನದ್ದು! ಹೂವಿನ ಪರಿಮಳ, ಸುಗಂಧದ್ರವ್ಯದ ಸುವಾಸನೆ ಕ್ಷಣಿಕವೆಂದು ನಾವು ಬಲ್ಲೆವು. ಅದನ್ನು ಬಳಸಿದರೂ ನಮ್ಮ ಮೈ ಬೆವರಿನ ವಾಸನೆಯಿಂದ ಮುಕ್ತವಾಗಬಲ್ಲುದೆ? ನಿಮ್ಮ ವಯಸ್ಸು ಬದಲಾದಂತೆಲ್ಲ ಬದಲಿಸುವ ಹೊಸ ಬಟ್ಟೆಗಳು ಹರಿದು ನೆಲ ಒರೆಸುವ ಚಿಂದಿಯಾಗಿ ಬದಲಾಗುವವು. ವಯಸ್ಸಾದಂತೆ ದೇಹ ಸವಿದು, ಮನುಷ್ಯ ರೋಗರುಜಿನಗಳ ಮೂಟೆಯಾಗಿ ಬಟ್ಟೆಯ ಗಂಟಿನಂತೆ ಮೂಲೆಯಲ್ಲಿ ಕೂತಿರಬೇಕಾಗಬಹುದು. ‘ಚಿಂತಿಸದಿರು ಗೆಳೆಯ, ನೀನು ತರುಣನಾಗಿದ್ದಾಗ ಕಲಿತ ಒಂದು ಹಾಡು, ಓದಿದ ಒಂದು ಪುಸ್ತಕ ಅದು ಸರಿಯಾದುದೇ ಆಗಿದ್ದರೆ, ಆ ಮಧುರ ನೆನಪು ಮುಕ್ಕಾಗದೆ, ದೇಹ ಜರ್ಜರಿತಗೊಂಡಿದ್ದರೂ, ಎಂಥ ವಯಸ್ಸಲ್ಲೂ ನಿನ್ನ ನೆನಪಿನಲ್ಲಿರುತ್ತದೆ’, ಎಂದು ಚೀನಿ ಬುದ್ಧ ಕವಿಯೊಬ್ಬ ಹೇಳುತ್ತಾನೆ. ಆತನ ಮಾತು ನಿಜವೇ ಇರಬೇಕು.
ನಾವು ಎಲ್ಲ ಬಗೆಯ ಪೂರ್ವಗ್ರಹ, ದ್ವೇಷಾಸೂಯೆ, ಸೇಡು, ಆಕ್ರೋಶ, ಅಸಹನೆ, ಸಂಕುಚಿತ ಮನೋಭಾವದಿಂದ ಹುಟ್ಟುವ ಇನ್ನೊಬ್ಬರನ್ನು ನಾಶಗೊಳಿಸುವ ಉನ್ಮಾದಗಳಿಂದ ಮುಕ್ತರಾಗಬಯಸಿದರೆ ಪುಸ್ತಕಗಳು ಅಂಥ ಅವಕಾಶವನ್ನು ನಮಗೆ ಒದಗಿಸಬಲ್ಲವು. ಹಳೆಯ ಕೃತಿಗಳನ್ನು ಮೊದಲೊಮ್ಮೆ ಓದಿದಾಗ ದೊರಕುವ ಅಪರಿಮಿತ ಆನಂದ, ಇನ್ನೊಮ್ಮೆ ಓದಿದಾಗ ಒಳನೋಟವಾಗಿ ಬದಲಾಗಬಹುದು. ನಿನ್ನೆ ಕಿಟಕಿಯಿಂದ ಕಂಡ ಸೂರ್ಯ, ಇಂದು ನಡುಮನೆಯಲ್ಲಿ ನಿಂತು ನೋಡಿದಾಗ ಕಿಟಕಿಯ ಮೂಲಕ ಬೆಳಕು ನೀಡುತ್ತಿರುವವನು ಆತನೇ ಎಂಬ ಅರಿವನ್ನು ಮೂಡಿಸಬಲ್ಲುದು. ಆಗ, ಮನೆಯ ಎಲ್ಲ ಕಿಟಕಿ, ಬಾಗಿಲು, ಬೆಳಕಿಂಡಿಗಳನ್ನು ತೆರೆದಿಟ್ಟು ಬೆಳಕು ಎಲ್ಲೆಡೆಯಿಂದ ಬರಲಿ ಮತ್ತು ಬಂದಷ್ಟೂ ಬರಲಿ ಎಂದು ಅದೇ ಬೆಳಕಿನಲ್ಲಿ ನಿರಾಳವಾಗಿ ಇನ್ನೊಂದು ಪುಸ್ತಕವನ್ನು ಓದುತ್ತ ಲೋಕದರ್ಶನವನ್ನು ಪಡೆಯಬಹುದು.
ಒಂದು ರೂಪಕದ ಮೂಲಕ #ಅನುವಾದಿತ_ಪುಸ್ತಕಗಳ ಓದನ್ನು ಹೇಳಬಹುದಾದರೆ, ಊರಿನ ದೊಡ್ಡಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಬಯಸುವವರೆ. ಅಲ್ಲಿ ಎಳೆಯುವ ಬೃಹತ್ ತೇರಿನ ಹಗ್ಗಕ್ಕೆ ಪ್ರತಿಯೊಬ್ಬರೂ ಕೈಯನ್ನು ಹಚ್ಚ ಬಯಸುವವರೆ. ವಾಸ್ತವದಲ್ಲಿ ಅದು ಅಸಾಧ್ಯವೆಂದು ಹಾಗೆ ಬಯಸುವವರಿಗೆ ಗೊತ್ತು. ಹಾಗಾಗಿ, ನಾವು ಬಹುದೂರದಲ್ಲಿದ್ದರೂ ತೇರಿನ ಕಳಸ ಗೋಚರಿಸಿದ್ದೇ ಹೂವುಹಣ್ಣು ಎಸೆದು, ಭಾವೋದ್ವೇಗದಲ್ಲಿ ಕಣ್ಣನಲ್ಲಿ ನೀರು ತುಂಬಿಸಿಕೊಂಡು ತೃಪ್ತಿಪಡುತ್ತೇವೆ. ದೈವಕೃಪೆಯಂತೆ ದೊರಕಿದ ಆ ಆಯತ ಗಳಿಗೆಯ ಆ ಭಾವಕ್ಕೆ ಧನ್ಯತೆಯ ಲೇಪವಿರುತ್ತದೆ. ನಾವೇ ತೇರಿನ ಹಗ್ಗ ಎಳೆಯದಿದ್ದರೇನಾಯಿತು? ಜನರ ಗೌಜುಗದ್ದಲ, ನೂರೆಂಟು ಬಗೆಯ ದನಿಗಳು, ಗಲಗಲ, ಬೆವರಿನ ವಾಸನೆಯನ್ನಂತೂ ಪಡೆಯುತ್ತ ಮುಡಿಪನ್ನು ಎಸೆದೆವಲ್ಲ ಅಷ್ಟು ಸಾಕು, ಎನ್ನುವವರು ಇಲ್ಲಿ ಅರ್ಥವನ್ನು ಕಂಡುಕೊಳ್ಳಬಲ್ಲರು.

ಫೋಟೋ ಕೃಪೆ : vocal
ನಾನಾ ದೇಶ-ಭಾಷೆಗಳ ಪುಸ್ತಕಗಳನ್ನು ನಮ್ಮ ಭಾಷೆಯಲ್ಲಿ ಓದುವಾಗಲೂ ಅಷ್ಟೇ. ಅಚ್ಚರಿ, ಸಂತೋಷ, ನೋವು, ವಿಷಾದ, ಅಮಿತಾನಂದ ಇತ್ಯಾದಿ ಏಕಕಾಲಕ್ಕೆ ಆಗಬಲ್ಲುವು. ಮೂಲದಲ್ಲಿ ಬರೆದವರ, ಅದನ್ನು ನಮ್ಮ ಭಾಷೆಗೆ ತರುತ್ತಿರುವವರ ಕುರಿತು ಮನಸ್ಸು ಕೃತಜ್ಞತೆಯಿಂದ ತುಳುಕಬಹುದು. ಮನುಷ್ಯನ ಮನಸ್ಸನ್ನು ಹಗುರಭಾರವಾಗಿಸುವ ಅಂತಹ ಕೃತಜ್ಞತೆ ನಮ್ಮಿಂದ ಒಳ್ಳೆಯ ಕೆಲಸವನ್ನು ಮಾಡಿಸಬಲ್ಲುದು. ಅವರು ಹಚ್ಚಿದ ಹಣತೆಗೆ ಎಣ್ಣೆಯನ್ನು ಹಾಕುವ, ಬತ್ತಿಯ ಕುಡಿಯನ್ನು ತೀಡಿ ಚುರುಕಾಗಿಸಿ ಬೆಳಕನ್ನು ಹಿಗ್ಗಿಸುವ, ಪಣತಿಯನು ಬೊಗಸೆಯಲಿ ಹಿಡಿದು ಆರಿ ಹೋಗದಂತೆ ಬೇರೆಡೆಯೂ ಬೆಳಕು ಚೆಲ್ಲಿಸುವಂಥ ಅವಕಾಶವನ್ನು ಒದಗಿಸಬಹುದು.
ವಿಶ್ವದ ವಿವಿಧ ಸಂವೇದನೆಗಳನ್ನು ಕನ್ನಡಕ್ಕೆ ತರುವ ಮೂಲಕ ನಾನು ಅಂಥ ಅವಕಾಶವನ್ನು ಪಡೆದಿದ್ದೇನೆ. ಸಾರ್ಥಕ ಗಳಿಗೆಗಳನ್ನು ಅನುಭವಿಸಿದ್ದೇನೆ.
- ಕೇಶವ ಮಲಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು), ಬೆಂಗಳೂರು
