ಶಾಂತಲಾ ಭಂಡಿ ಅವರ ‘ಚಂದಮಾಮ ಮಲಗಿದ್ದಾನೆ’ ಪುಸ್ತಕ ಪರಿಚಯವನ್ನು ಪತ್ರಕರ್ತರಾದ ಮಾಕೋನಹಳ್ಳಿ ವಿನಯ್ ಮಾಧವ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಚಂದಮಾಮ ಮಲಗಿದ್ದಾನೆ
ಲೇಖಕರು : ಶಾಂತಲಾ ಭಂಡಿ
ಪ್ರಕಾಶಕರು : ಸಪ್ನ ಬುಕ್ ಹೌಸ್ ಪ್ರೈ.ಲಿ
ಬೆಲೆ : 115.00
ಮೂಕ ಹಕ್ಕಿಯು ಹಾಡುತ್ತಿದೆ… ಬಂಡಿ ಪೂರ್ತಿ ಸಂವೇದನೆ ಹೊತ್ತ ʻಭಂಡಿʼ ಕಥೆಗಳು
ʻರಿ ಜೋಗಿ… ಈ ಶಾಂತಲಾ ಭಂಡಿ ಯಾರು?ʼ
ʻಅಮೆರಿಕಾದಲ್ಲಿ ಇದ್ದಾರೆ. ಏಕೆ?ʼ
ʻಅವರು ಹೇಗೆ?ʼ
ʻಏ ಒಳ್ಳೆಯವರು ಕಣ್ರಿ. ಏಕೆ? ಏನಾಯ್ತು?ʼ
ʻಥೋ… ನಾನು ಕೇಳಿದ್ದು ಅದಲ್ಲ ಕಣ್ರಿ. ಜೀವನದಲ್ಲಿ ಹೇಗೆ? ಕಷ್ಟದಲ್ಲಿ ಇದ್ದಾರಾ? ನೋವು ಅನುಭವಿಸಿದ್ದಾರಾ?ʼ
ʻಹಾಗೇನಿಲ್ಲಪ್ಪ…. ಖುಷಿಯಾಗೇ ಓಡಾಡಿಕೊಂಡಿದ್ದಾರೆ. ಯಾವಾಗಲೂ ಸಂತೋಷವಾಗಿರುತ್ತಾರೆ. ಈ ಪ್ರಶ್ನೆ ನಿಮಗೇಕೆ ಬಂತು?ʼ
ಸುಮ್ಮನೆ ತಲೆ ಕೊಡವಿದೆ… ಹೇಳಲೋ ಬೇಡವೋ ಎನ್ನುವಂತೆ, ʻಅವರ ಪುಸ್ತಕ ಚಂದಮಾಮ ಮಲಗಿದ್ದಾನೆ ಓದಿದೆ. ಯಾಕೋ ಗೊತ್ತಿಲ್ಲ, ಸ್ವಲ್ಪ ಡಿಸ್ಟರ್ಬ್ ಆದೆ,ʼ ಎಂದು ಹೇಳಿದೆ.
ʻಯಾಕೆ?ʼ ಎಂದು ಜೋಗಿ ಕೇಳಿದಾಗ, ನಾನು ಉತ್ತರಿಸಲಿಲ್ಲ.
ಈ ಡಿಸ್ಟರ್ಬ್ ಅನ್ನೋದು ಅನುಭವವೋ ಅಥವಾ ಭಾವನೆಯೋ ಎನ್ನುವ ಜಿಜ್ಞಾಸೆ ನನಗೆ ಬಹಳ ಸಮಯದಿಂದ ಕಾಡಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರದ ಹಾಡೊಂದಿದೆ: ಮೂಕ ಹಕ್ಕಿಯು ಹಾಡುತ್ತಿದೆ… ನನಗೆ ಬಹಳ ತಳಮಳ ಅಥವಾ ಡಿಸ್ಟರ್ಬ್ ಆದಾಗ, ಆ ಹಾಡಿನ ನೆನಪಾಗುತ್ತದೆ.
ಚಿಕ್ಕಂದಿನಿಂದ ನನಗೆ ಆಗಾಗ ಒಂದು ಅವ್ಯಕ್ತ ಕಳವಳದ ಅನುಭವವಾಗುತ್ತಿತ್ತು. ಅದು ಒಬ್ಬನೇ ಇದ್ದ ಸಮಯಗಳಲ್ಲಿ ಹೆಚ್ಚು. ಅದೊಂದು ಅವ್ಯಕ್ತ ಕಳವಳದ ಭಾವನೆ. ಅನಾಥ ಪ್ರಜ್ಞೆ ಕಾಡಲು ಆರಂಭವಾಗಿ, ಅಸಹಾಯಕರಾಗಿ ನಿಂತು ಬಿಡುತ್ತೇವೆ. ಅದಕ್ಕೇ ʻಡಿಸ್ಟರ್ಬ್ʼ ಎನ್ನುತ್ತಾರೋ ಅಥವಾ ಈ ಭಾವನೆ, ಯೋಚನೆಗೆ ಬೇರೆ ಪದ ಇದೆಯೋ ಎನ್ನುವುದು ನನಗೆ ಇನ್ನೂ ಜಿಜ್ಞಾಸೆ.
ಕೆಲವು ಸಾಹಿತ್ಯಗಳೂ ನನ್ನಲ್ಲಿ ಈ ಭಾವನೆ ಹುಟ್ಟಿಸಿವೆ. ನಾವು ಎಂಟನೇ ತರಗತಿಯಲ್ಲಿದ್ದಾಗ, ನಮ್ಮ ಇಂಗ್ಲಿಷ್ ಪ್ರಾಧ್ಯಾಪಕರಾದ ಎಂ ರಾಮ ರಾವ್, ರವೀಂದ್ರನಾಥ್ ಟ್ಯಾಗೋರರ ಕಾಬೂಲಿವಾಲ ಪಾಠ ಮಾಡುತ್ತಿದ್ದರು. ಕಥೆಯ ಕೊನೆಯಲ್ಲಿ ಕಾಬೂಲಿವಾಲ ಒಂದು ಕಾಗದ ತುಂಡಿನ ಮೇಲೆ ಸಣ್ಣ ಹುಡುಗಿಯ ಕೈ ಅಚ್ಚನ್ನು ನೋಡುತ್ತಾ, ತಾನು ಹದಿನೈದು ವರ್ಷದ ಹಿಂದೆ ನೋಡಿದ್ದ ತನ್ನ ಮಗಳನ್ನು ನೆನಪಿಸಿಕೊಳ್ಳುವ ದೃಶ್ಯವನ್ನು ಹೇಗೆ ವರ್ಣಿಸಿದರೆಂದರೆ, ತರಗತಿಯಲ್ಲಿದ್ದ ಮೂವತ್ತ ನಾಲ್ಕು ಹುಡುಗರ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು.
ಮುಂದೆ ಖುಷ್ವಂತ್ ಸಿಂಘ್ ಅವರು ಬರೆದ ಅನೇಕ ಸಣ್ಣ ಕಥೆಗಳಲ್ಲಿ, ʻA love story in Londonʼ ಕಥೆ ಓದಿದಾಗಲೂ ವಿಚಲಿತನಾಗಿದ್ದೆ. ಜೆಫ್ರಿ ಆರ್ಚರ್ ಅವರ ʻA twist in the taleʼ ಕಥೆಗಳಂತೂ ನನಗೆ ಬಹಳ ಇಷ್ಟ. ಅದರಲ್ಲೂ, ಕ್ರಿಸ್ತೀನಾ ರೋಸಾಂತಿಲ್ ಕಥೆ ಓದಿ ಮುಗಿಸುವಾಗ ಬೆಳಗಿನ ಜಾವ ಮೂರು ಘಂಟೆಯಾಗಿತ್ತು. ನನ್ನ ಕಣ್ಣಲ್ಲಿ ಧಾರಾಕಾರವಾಗಿ ನೀರು ಇಳಿಯುತ್ತಿತ್ತು. ಆ ಕಥೆಯ ಗುಂಗಿನಿಂದ ಹೊರ ಬರಲು ಬಹಳಷ್ಟು ದಿನ ಚಡಪಡಿಸಿದ್ದೆ.
ಹತ್ತು ಕಥೆಗಳ ʻಚಂದಮಾಮ ಮಲಗಿದ್ದಾನೆʼ ಓದಿದಾಗ ಓ ಹೆನ್ರಿ ಕಥೆಗಳನ್ನು ಓದಿದಷ್ಟೇ ತಳಮಳವಾಯಿತು. ಹಾಗಾಗಿ ಅಂತ ಕಾಣುತ್ತೆ, ಜೋಗಿಯ ಹತ್ತಿರ ಶಾಂತಲಾ ಭಂಡಿಯವರ ಬಗ್ಗೆ ವಿಚಾರಿಸುವಾಗ, ಅವರು ಜೀವನದಲ್ಲಿ ಕಷ್ಟ ಅನುಭವಿಸಿದ್ದಾರೆಯೇ? ಎಂದು ಕೇಳಿದ್ದು. ಆ ಪ್ರಶ್ನೆ ಕೇಳುವ ಹೊತ್ತಿನಲ್ಲಿ, ಟ್ಯಾಗೋರ್, ಖುಷ್ವಂತ್ ಸಿಂಘ್ ಅಥವಾ ಜೆಫ್ರಿ ಆರ್ಚರ್ ದುರಂತದ ಹಿನ್ನೆಲೆಯಲ್ಲಿ ಬೆಳೆದವರಲ್ಲ ಎಂದು ನೆನಪಾಯಿತು. ಹಾಗಾಗಿ, ಜೋಗಿಯ ಕೊನೆಯ
ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ.
ಈ ಕಥಾ ಸಂಕಲನದ ಒಂಬತ್ತು ಕಥೆಗಳೂ ನನಗೆ ಇಷ್ಟವಾದವು. ಹತ್ತನೇ ಕಥೆಯಾದ ʻಸೀತಿʼಯನ್ನು ನಾನು ಓದಲು ಹೋಗಲಿಲ್ಲ. ಒಂಬತ್ತು ಕಥೆಗಳ ಸಂವೇದನೆಯನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯ ಎನ್ನಿಸಿತು. ಆ ಕಥೆಯ ಹೆಸರನ್ನು ನೋಡಿಯೇ, ಅದು ಬಹಳ ಕಾಡಬಹುದು ಎನ್ನುವ ಗುಮಾನಿ ಮೂಡಿತು. ಈ ಪುಸ್ತಕದ ಬಗ್ಗೆ ಏನೂ ಬರೆಯಬಾರದು ಎಂದೂ ತೀರ್ಮಾನಿಸಿದ್ದೆ. ಆ ಪುಸ್ತಕ ಓದಿದಾಗ ಉಕ್ಕಿದ ಭಾವನೆಗಳನ್ನು ನಾನೇ ಅನುಭವಿಸಬೇಕು ಅಂತ. ಆದರೆ, ಕುಂಟಿನಿಯವರ ʻಪುರುಷಾವತಾರʼ ಪುಸ್ತಕದ ಬಗ್ಗೆ ಬರೆಯುವಾಗ, ನಾನು ಈ ಘಟನೆಯನ್ನೂ ಬರೆದಿದ್ದೆ.
- ಮಾಕೋನಹಳ್ಳಿ ವಿನಯ್ ಮಾಧವ