ಹುಲಿ ಹೆಜ್ಜೆ ಸಣ್ಣಕತೆ – ಜಬೀವುಲ್ಲಾ ಎಂ. ಅಸದ್

ಹುಣ್ಣಿಮೆಯ ರಾತ್ರಿ ಎಲ್ಲಾ ಅಂದುಕೊಂಡಂತೆ ನೆರವೇರಿತು. ಕೆಲ ದಿನಗಳು ಕಳೆಯುತ್ತಿದ್ದಂತೆಯೇ ಹಟ್ಟಿಯಲ್ಲಿ ಮತ್ತೆ ಹುಲಿಯ ಹೆಜ್ಜೆ ಗುರುತುಗಳು ರಾಚನ ಕಣ್ಣಿಗೆ ಕಂಡು ಬಂದವು.ಮುಂದೇನಾಯಿತು ಎನ್ನುವುದನ್ನು ಜಬೀವುಲ್ಲಾ ಎಂ. ಅಸದ್ ಅವರ ಕತೆಯನ್ನು ತಪ್ಪದೆ ಓದಿ…

ಇರುಳ ಪೂರಾ ಇಳೆಗೆ ಮಳೆ ಸುರಿಸಿ ಮುಗಿಲು ಮುಂಜಾವಿಗೆ ಬೆಳಕಿನ ಬೆಚ್ಚನೆಯ ಚಾದರ ಹೊದ್ದು ಮಲಗಿತ್ತು. ಮನಸ್ಸಿಲ್ಲದ ಮನಸ್ಸಿನಿಂದೆದ್ದ ರಾಚನ ಮನದಲ್ಲಿ ಏನೋ ತಿಳಿಯದ ಚಡಪಡಿಕೆ, ಅಶಾಂತಿಯ ಗದ್ದಲ, ಭಯದ ಗಸ್ತು! ಒದ್ದೆ ತಾಟಿನಂತಾಗಿದ್ದ ಚಾಪೆಯ ಮೇಲೆಯೇ ಕಣ್ಮುಚ್ಚಿ ಕಾಣದ ದೇವರನ್ನು ಯಾರಿಗೂ ಕಾಣದ ಹಾಗೆ ನೆನೆದು ಅಂತರಾಳದಲ್ಲಿ ಹುದುಗಿದ್ದ ಧೈರ್ಯವನ್ನು ಹೆಗಲಿಗೇರಿಸಿಕೊಂಡು ಹಕ್ಕಿಯ ಗೂಡಿನಂತಿದ್ದ ತನ್ನ ಗುಡಿಸಲಿನಿಂದ ಹೊರ ಬಿದ್ದ.

ರಾತ್ರಿಯೆಲ್ಲಾ ಒಂದೇ ಸಮನೆ ಸುರಿದ ಮಳೆಗೆ ನೆನೆದು, ಗುಡುಗು ಸಿಡಿಲಿಗೆ ಬೆದರಿ ಬ್ಯಾ ಎಂದರಚಿ ಎಗರೆಗರಿ ಹಟ್ಟಿಯ ಬೇಲಿಯ ದಾಟಲಾಗದೆ ಬಂಧನದ ಜೀವದಂತೆ ಬಸವಳಿದು ಸುಸ್ತಾಗಿದ್ದ ಕುರಿಮಂದೆಯ ಹಟ್ಟಿಯ ತುಂಬ ನಿಶಾಂತ ಮೌನ.

ನಸುಕಿನ ಎಂದಿನ ಸಂಭ್ರಮದ ಕುರಿಮಂದೆಯ ಸದ್ದು ಅಡಗಿದ ದೃಶ್ಯ ಕಂಡು ಆತಂಕಗೊಂಡ ರಾಚ ಒಮ್ಮೆಗೆ ಜಿಗಿದ ರಭಸಕೆ ರಾಡಿಯ ನೆಲಕೆ ಹೆಜ್ಜೆ ಊರುತ್ತಲೆ ಜಾರಿ ಬಿದ್ದ. ಎದೆಗೆ ಬಿದ್ದ ಏಟಿಗೆ ತತ್ತರಿಸಿ ಹೋದ. “ಅಮ್ಮಲೇ… ದಮ್ಮಲೇ…” ಎಂದು ನರಳುತ್ತ, ಇರುವ ಊರ್ಜೆಯನ್ನೆಲ್ಲಾ ಬಳಸಿ ಸಾವಕಾಶವಾಗಿ ಎದ್ದು ನಿಲ್ಲಲು ಅಣಿಯಾಗುತ್ತಿರುವಂತೆಯೆ ಕಣ್ಣ ಮುಂದೆ ಹುಲಿಯ ಪಂಜಗಳ ಹೆಜ್ಜೆ ಗುರುತುಗಳ ಕಂಡು ಮತ್ತೆ ಕುಸಿದು ಹೋದ. ತೆವಳುತ್ತಾ ತನ್ನ ಅಂಗೈಯ ಮುಂಬೇರಳುಗಳ ಮಡಚಿ ಒಂದು ಹೆಜ್ಜೆಯ ಮೇಲಿಟ್ಟು ಅದರ ಗಾತ್ರ ನೆನೆದು ಚಕಿತಗೊಂಡ!

ತನ್ನ ತಮ್ಮ ಹುಟ್ಟಿದ ಎರಡೇ ದಿನಕ್ಕೆ ಹುಲಿಯೊಂದರ ಬಾಯಿಗೆ ಆಹಾರವಾಗಿದ್ದು, ಅದೇ ಕೊರಗಿನಲ್ಲಿ ಹಸಿ ಬಾಣಂತಿ ತಾಯಿ ನೀಲವ್ವ ಕೊರಗಿ ಕೊರಗಿ ಅನ್ನ ನೀರು ಬಿಟ್ಟು ಹಾಸಿಗೆ ಹಿಡಿದು ಸಾವನ್ನಪ್ಪಿದ್ದು, ಅದೇ ನೋವಿನಲಿ ತನ್ನ ಅಪ್ಪ ನುಂಕ ಕುಡಿತದ ಚಟ ಹತ್ತಿಸಿಕೊಂಡು ಹಾಳಾಗಿದ್ದು, ಬಂಧುಗಳೆಲ್ಲಾ ಸೇರಿ ತಮ್ಮ ಕುಲ ಗೋತ್ರದ ಉಸಾಬರಿಗೆ ಹೋಗದೆ, ಕಾಲೊಂದು ಸ್ವಲ್ಪ ಊನಾವಾಗಿದ್ದ ಲಚಮಿಗೆ “ಹೆಣ್ಣಿಲ್ಲದ ಮನೆ ಸುಡುಗಾಡಿಗೆ ಸಮ” ಎಂದು ನುಂಕನಿಗೆ ಬುದ್ಧಿವಾದ ಹೇಳಿ ಗಂಟ್ಹಾಕಿದ್ದರು.

ಭವಿಷ್ಯದ ಭರವಸೆಯ ಬೆಳಕು ಕಾಣದೆ ನರಳುತ್ತಿದ್ದ ಲಚಮಿಗೆ “ನುಂಕಪ್ಪ ದ್ಯಾವ್ರೇ ನುಂಕನ ರೂಪದಲ್ಲಿ ಗಂಡನಾಗಿ ಬಂದವ್ನೆ” ಎಂದು ನಂಬಿ ರಾಚನನ್ನು ಸಹ ತನ್ನ ಹೆತ್ತ ಮಗನೇನೋ ಎಂಬ ರೀತಿಯಲ್ಲಿ ಎಲ್ಲರೂ ದಿಗ್ಭ್ರಮೆಯಾಗುವಂತೆ ನೋಡಿಕೊಳ್ಳುತ್ತಿದ್ದಳು.

ಫೋಟೋ ಕೃಪೆ : google

ಕಾಡಿಗೆ ಹೊಂದಿಕೊಂಡೇ ಇರುವ ಗಿರಿಜನಹಟ್ಟಿಯ ಮಗ್ಗುಲಲ್ಲೇ ವೇದಾವತಿ ಹರಿಯುತ್ತಿತ್ತು. ಹಾಗಾಗಿ ರಾತ್ರಿ ಸಮಯ ಹೊಳೆಯ ನೀರು ಕುಡಿಯಲು ಬರುವ ಪ್ರಾಣಿಗಳು ಹಟ್ಟಿಯ ಸುತ್ತ ಮುತ್ತಲೂ ಓಡಾಡಿದ ಹೆಜ್ಜೆ ಗುರುತುಗಳು ಸರ್ವೇ ಸಾಮಾನ್ಯವಾಗಿದ್ದರೂ ಸಹ ರಾಚನ ತಮ್ಮನ ಬಲಿಯ ಹೊರತಾಗಿ ಹಟ್ಟಿಯ ಒಳಗೆ ನುಗ್ಗಿದ್ದು, ಹಸು ಕುರಿಗಳನ್ನು ಗಾಯಗೊಳಿಸಿದ್ದು ತುಂಬಾ ವಿರಳ. ಜೊತೆಗೆ ಮಳೆಗಾಲದಲ್ಲಿ ಹೊಳೆ ತುಂಬಿ ರೊಚ್ಚಿ ಹರಿಯುತ್ತಿದ್ದ ಕಾರಣ ನೆರೆಯ ಹಾವಳಿಯೂ ಇದ್ದದ್ದರಿಂದ ಸರ್ಕಾರದಿಂದ ಎಷ್ಟೇ ಒತ್ತಡ, ಆದೇಶ ಬಂದರೂ ಸಹ, ತಮ್ಮ ಪೂರ್ವಿಕರ ಪುಣ್ಯ ಭೂಮಿ ಹಾಗೂ ಎಲ್ಲಾ ರೀತಿಯಿಂದಲೂ ಸೌಕರ್ಯದಿಂದ ಕೂಡಿದ ಆ ಪ್ರದೇಶವನ್ನು ತ್ಯಜಿಸಲು ಇವರ್ಯಾರು ಸುತರಾಂ ಒಪ್ಪುತ್ತಿರಲಿಲ್ಲ.

ಹೀಗೆ, ಹುಲಿಯ ಹೆಜ್ಜೆ ಗುರುತುಗಳು ರಾಚನು ತನ್ನ ಗತವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದವು.

“ಅಪ್ಪಯ್ಯ… ಅಪ್ಪಯ್ಯ… ಇತ್ತಗ್ ನೋಡ್ ಬಾ.. ಬಿರುನೇ…” ಎಂದು ಒಂದೇ ಸಮನೇ ರಾಚ ಕೂಗಿದ ಆತಂಕದ ಧ್ವನಿಗೆ, ಅರೆ ನಿದ್ದೆಯಲ್ಲಿದ್ದ ನುಂಕಪ್ಪ ದೌಡಾಯಿಸಿ ಬಂದ. ಇನ್ನೂ ಹಾಗೇ ಬಿದ್ದುಕೊಂಡೆ ಇದ್ದ ರಾಚನನ್ನು ಕೈ ಹಿಡಿದು ಎತ್ತುತ್ತ “ಯಾಕ್ಲಾ ಮಗಾ, ಏನಾತು? ಯಾಕ್ ಇಂಗ್ ವದರಕತ್ತಿ?” ರಾಚ “ಇಲ್ನೋಡ್ ಅಪ್ಪಯ್ಯ ವಸಿ” ಎನ್ನುತ ಹುಲಿಯ ಹೆಜ್ಜೆ ಗುರುತುಗಳ ಕಡೆ ತನ್ನ ಬೆರಗುಗಣ್ಣುಗಳ ದೊಡ್ಡದಾಗಿ ಹಾಯಿಸುತ್ತಿದ್ದಂತೆಯೇ ನುಂಕಪ್ಪ ಬೆಚ್ಚಿಬಿದ್ದ. ತನಗೂ ಗತವೆಲ್ಲಾ ನೆನಪಾಗಿ ಈಗೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ ಪೂಜಾರಪ್ಪನ ಕೇಳೋದು ಒಳ್ಳೇದು ಎಂದು ಭಾವಿಸಿ ರಾಚನ ಕೈ ಹಿಡಿದು ಬೀರ ದೇವರ ಗುಡಿಯ ಕಡೆ ದರದರನೇ ಹೆಜ್ಜೆ ಹಾಕಿದ. ಗುಡಿಯ ಸ್ವಚ್ಛತೆಯಲ್ಲಿ ತೊಡಗಿದ್ದ ಪೂಜಾರಪ್ಪ ನುಂಕ ಮತ್ತು ರಾಚರ ಬಿರುಸಿನ ನಡೆಯನ್ನು ಕಂಡು “ಏನ್ ಅಪ್ಪ ಮಗ ಇತ್ತ ಕಡೆ?” ಎಂದು ಪ್ರಶ್ನಿಸಿದ. ನುಂಕ, ರಾಚನ ಸಮೇತ ಪೂಜರಪ್ಪನ ಕಾಲಿಗೆ ಬೀಳುತ್ತಾ “ಅಯ್ನೋರೆ ನೀವೆಯಾ ನಮ್ಗೆ ದಾರಿ ತೋರಿಸ್ಬೇಕು, ಕಾಪಾಡ್ಬೇಕು ಸಾಮಿ” ಎಂದು ಗೊಳಾಡುತ್ತಿದ್ದಂತೆಯೆ…. “ಅರೇ… ನಾನಿದಿನಿ, ಏನಾತು ಹೇಳು?” ಎಂದು ಇಬ್ಬರನ್ನೂ ಎಬ್ಬಿಸುತ್ತಿದ್ದಂತೆಯೆ ನುಂಕಪ್ಪ ಮತ್ತೆ ಕುಸಿದು ಬಿದ್ದು ನೆಲಕ್ಕೆ ಕಣ್ಣು ನಾಟುತ್ತ “ಹುಲಿ, ಹುಲಿ, ಹುಲಿ… ” ಎಂದು ಒಂದೇ ಸಮನೆ ಹೇಳುತ್ತಿದ್ದ. ಹಳೆಯದನ್ನು ನೆನೆದು, ರಾತ್ರಿ ಕೆಟ್ಟ ಕನಸು ಕಂಡು ಭಯಗ್ರಸ್ಥನಾಗಿದ್ದಾನೆ ನುಂಕ ಎಂದು ತಪ್ಪಾಗಿ ಗ್ರಹಿಸಿದ ಪೂಜಾರಪ್ಪ ಈ ಅವಕಾಶವನ್ನು ಬಳಸಿಕೊಳ್ಳಲು ತೀರ್ಮಾನಿಸಿ “ಅದೇನಾತು ಅಂತ ಬಿಡಿಸಿ ಹೇಳ್ಳೆ” ಎಂದು ಗದರಿದ. ಆಗ ರಾಚ ತಾನೇ ಮಾತಿಗೆ ಮುಂದಾಗಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ.

ಪೂಜಾರಪ್ಪ ದೀರ್ಘ ನಿಟ್ಟುಸಿರು ಬಿಡುತ್ತಾ, ನುಂಕನ ಕಡೆ ಬೆರಳು ತೋರಿಸುತ್ತಾ ” ನಾ ಅವತ್ತೇ ಹೇಳ್ದೆ ಈ ಅಡ್ಕಾಸಿಗೆ, ಗಾದ್ರಿ ಪಾಪನಾಯಕ ದ್ಯಾವ್ರ ಸಿಟ್ಟಿದೆ ನಿಮ್ ಮನೆ ಮ್ಯಾಗೆ, ಶಾಂತಿ ಮಾಡಿಸ್ಬೇಕು ಅಂತ, ಕಿವಿಗೆ ಹಾಕ್ಕೊಳ್ಳಿಲ್ಲ. ಈಗ ಅನುಭವ್ಸಿ” ಎನ್ನುತ ಗುಡಿಯ ಒಳ ಹೊಕ್ಕ. ಅಷ್ಟರಲ್ಲಿ ನುಂಕ “ಇಲ್ಲ ಹಾಗನ್ಬ್ಯಾಡಿ ಬುದ್ದಿ, ಏನೋ ತಪ್ಪಾತು ನಿಮ್ ಹೊಟ್ಟೆಗ್ ಹಾಕಂಡು ಕ್ಸಮಿಸಿ” ಎಂದು ಕೈ ಮುಗಿಯುತ ಗೋಗರೆಯುತ ನಿಂತ.

ಪೂಜಾರಪ್ಪಾ ಒಳಗೊಳಗೇ ನಗುತ್ತ, ಹೊರಗೆ ಕೋಪ ಬಂದವನಂತೆ ನಟಿಸುತ್ತಾ “ಅದಕ್ಕೆಲ್ಲಾ ತುಂಬಾ ರೊಕ್ಕ ಖರ್ಚಾಯ್ತದೆ, ಮನೆಯ ನಿಮ್ ಮೂರು ತಲೆಗಳ ಬದ್ಲಿಗೆ ಮೂರ್ ಕುರಿ ಬಲಿಯಾಗ್ಬೇಕು. ಜೊತೆಗೆ ನಂಗೂ ದಕ್ಷಿಣೆ ಕೊಡ್ಬೇಕು. ನಿನ್ ಕೈಲಿ ಆಟೆಲ್ಲಾ ಕೊಡಕ್ ಆಯ್ತಾದ?” ಎಂದು ಪ್ರಶ್ನೆ ಎಸೆದ. ವಿಧಿಯಿಲ್ಲದೆ ನುಂಕ ಆತು ಸಾಮಿ ಎಂದು ತಲೆ ಅಲ್ಲಾಡಿಸುತ್ತ ಸಮ್ಮತಿ ಸೂಚಿಸಿದ. ಇತ್ತ ಪೂಜರಪ್ಪ ಸಂಭ್ರಮದಿ ಮೀಸೆ ತಿರುವುತ್ತಾ “ಒಂದು ಇಚಾರ ಜಪ್ತಿ ಇರ್ಲಿ, ಈ ವಿಷ್ಯ ಯಾರ್ಗೂ ತಿಳಿಬಾರ್ದು, ಹುಣ್ಣಿವಿ ದಿನ ಕಾಡ್ನ್ಯಾಗ ಗುಟ್ಟಾಗಿ ಪೂಜೆ ಆಗ್ಬೇಕು. ಯಾರ್ಗಾನ ತಿಳಿದ್ರೆ ಅಷ್ಟೇ ಮತ್ತೆ…!” ಎನ್ನುತ್ತಾ ಸಂಜೆಗೆ ಇಷ್ಟ್ ರೊಕ್ಕ ತಕೊಂಡು ಬಾ, ಪೂಜೆಗೆ ಸಾಮಾನೆಲ್ಲಾ ಪ್ಯಾಟೆಗ್ ಹೋಗಿ ನಾಳೆನೆ ತರ್ತಿನ್, ನಾಡಿದ್ದೆ ಹುಣ್ಣಿಮೆ ಇನ್ನೂ ತಡ ಮಾಡೋದ್ ಬೇಡ” ಎಂದು ಹೇಳಿ ಕಳುಹಿಸಿದ.

“ಅಪ್ಪಯ್ಯ ಈ ಪೂಜರಪ್ಪ ಏನೇನೋ ಹೇಳ್ತಾವ್ನಲ್ಲ, ನಮ್ಮ್ಯಾಗ್ ಯಾಕ್ ದೇವ್ರಿಗೆ ಸಿಟ್ಟು? ಕಾಪಾಡೋ ದ್ಯಾವ್ರೇ ಕೊಲ್ತಾನ? ಹುಲಿ ಹೆಜ್ಜೆಗೂ ಅದಕ್ ಏನ್ ಸಂಬಂದ? ಹೇಳ್ ಅಪ್ಪಯ್ಯ ಎಂದು ತನ್ನ ಅನುಮಾನವನ್ನು ರಾಚ ವ್ಯಕ್ತಪಡಿಸಿದ. ” ನೀನು ಕೇಳಿದ್ ತುಂಬಾ ದೊಡ್ಡ ಪ್ರಸ್ನೆ ಐತೆ ಮಗಾ, ಅಷ್ಟೆಲ್ಲಾ ನಂಗೆ ತಿಲಿವಲ್ದು, ನಂಗೆ ನಮ್ಮಪ್ಪಯ್ಯ ಹೇಳಿದ್ನ ನಿಂಗೂ ಹೇಳ್ತೀನಿ ಕೇಳು….

” ನಮ್ ದ್ಯಾವ್ರು ಬಗ್ಗೆ ನಿಂಗೇನೂ ಗೊತ್ವಲ್ದು ನೋಡು, ಅದ್ಕೆ ಹಿಂಗ್ ಮಾತಾಡಕತ್ತಿ” ಎನ್ನುತ ತಮ್ಮ ಕುಲದೈವ ಹಾಗೂ ಸಾಂಸ್ಕೃತಿಕ ವೀರರಲ್ಲಿ ಒಬ್ಬನಾದ ಗಾದ್ರಿ ಪಾಲನಾಯಕನ ಕುರಿತಾದ ಕಥೆಯ ಪ್ರಾರಂಭಿಸಿದ…

“ನಮ್ ದ್ಯಾವ್ರು ಗಾದ್ರಿ ಪಾಲನಾಯಕ ಗೋಸಿಕೆರೆ ಬಳಿ ಹಟ್ಟಿ ಕಟ್ಟ್ಕೊಂಡು ರಾಸುಗಳ್ನ ಸಾಕ್ತಿದ್ದಾಗ, ಅಲ್ಲಿನ್ ಕೀಕಾರಣ್ಯದಾಗ ಶಾನೆ ಹುಲಿಗಳಿದ್ವಂತೆ ಮಗ. ಹುಲಿಗಳ ಉಪಟಳನೂ ಅಂಗೇ ಇತ್ತಂತೆ. ನಮ್ ದ್ಯಾವ್ರು ಮೊದಲೇ ‘ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ ‘ ಎಂಬಂತ್ತಿದ್ದವ್ನು, ಸಾಧು. ಅದ್ಕೆ ಅಲ್ಲಿನ್ ಹುಲಿಗಳ ತಾವ ಒಂದ್ ಒಪ್ಪಂದ ಮಾಡಿ ಕೊಂಡನಂತೆ. ಅದೇನಂದ್ರೆ ‘ ನೀವು ನನ್ನ ರಾಶಿಗೆ ಬರದಿದ್ರೆ ನಾನು ನಿಮ್ಮ ತಂಟೆಗೆ ಬರುದಿಲ್ಲ ಅಂತ! ‘ ಆ ಒಪ್ಪಂದ ಆದಾಗಿನಿಂದ ಹುಲಿಮರಿಗಳು ಹಸು – ಕರುಗಳೊಂದಿಗೆ ಚಿನ್ನಾಟವಾಡುತ್ತಿದ್ದವು, ಹುಲಿ ಮರಿಗಳು ಕರುಗಳ ಹಟ್ಟಿಯೊಳಗೆ ಇರ್ತಿದ್ದವಂತೆ!

ಫೋಟೋ ಕೃಪೆ : google

ಒಮ್ಮೆ ಗಾದ್ರಿ ದ್ಯಾವ್ರು ದನಗಳನ್ನ ಮೇಯಿಸ್ಕೊಂಡು ಹೊರ ಹೋಗಿದ್ದಾಗ ಆತನ ತಮ್ಮ ಚಿನ್ನ ಪಾಲನಾಯಕ ಹಟ್ಟಿಗೆ ಬಂದಾಗ ಅಲ್ಲಿದ್ ಹುಲಿ ಮರಿಗಳನ್ನ ನೋಡಿ ಗಾಬ್ರಿ ಆಗಿ ಕೊಡ್ಲಿ ತಕಂಡು ಕೊಚ್ಚಿ ಹಾಕಿದ್ನಂತೆ. ಸಂಜಿಗೆ ದ್ಯಾವ್ರು ಹಟ್ಟಿಗ್ ಬಂದಾಗ ನೋಡಿ ಮರುಕ ಪಟ್ಟು, ಛೇ… ಎಂಥಾ ಕೆಲ್ಸ ಆಯ್ತಲ್ಲ, ಹೀಗಾಗ ಬಾರ್ದಿತ್ತು. ಎತ್ಲಾಗೋ ಹೋಗಿದ್ದ ಹುಲಿಗಳು ಮತ್ ಬಂದು ಕೇಳಿದ್ರೆ ನಾ ಏನ್ ಮಾಡ್ಲಿ ಎಂದು ಚಿಂತೆ ಹಚ್ಕೊಂಡ. ಹುಲಿಗಳು ಬರೋದೊಳಗೆ ಹಟ್ಟಿ ಬಿಟ್ಟು ಹೋಗ್ಬೇಕು ಅಂತ ನಿರ್ಧರಿಸಿ ತುಂಬಿ ಹರಿತಿದ್ದ ವೇದಾವತಿ ಹೊಳೆಗೆ ಕೈ ಮುಗ್ದು ಬೆಡ್ಕೊಂಡಾಗ ಹೊಳೆ ಮಧ್ಯೆ ದಾರಿ ಬೀಚ್ಕೊಳ್ತಂತೆ, ದ್ಯಾವ್ರು ಹೊಳೆ ದಾಟಿದ ಮ್ಯಾಗೆ ಮತ್ತೆ ಹೊಳೆ ಕೂಡ್ಕೊಳ್ತಂತೆ. ಅತ್ತ ಹುಲಿಗಳಿಗೆ ಕೆಟ್ ಕನ್ಸು ಬಿದ್ದು ಅವು ವಾಪಸ್ ಬಂದಾಗ ಎಲ್ಲಾ ಗೊತ್ತಾಗಿ, ಒಪ್ಪಂದ ಮುರಿದ ದ್ಯಾವ್ರು ಮ್ಯಾಗೆ ಕೋಪ ಮಾಡ್ಕೊಂಡು ಸೇಡ್ ತಿರಿಸ್ಕೊಬೇಕ್ ಅಂತ ಹೊಳೆ ತಾವ ಬಂದು ಪಾಲನಾಯಕನ ಕೊಲ್ಲೋವರೆಗೂ ಒಂದು ಹನಿ ನೀರು ಕುಡಿಯೋಲ್ಲ ಅಂತ ಪ್ರತಿಜ್ಞೆ ಮಾಡಿ, ಅಲ್ಲೆ ಕಾದು, ನೀರು ಇಳಿದಾಗ ಹೊಳೆ ದಾಟಿ ಜಾಡು ಹಿಡಿದು, ದಿನಗಟ್ಲೆ ಉಪವಾಸ, ನೀರು ಇಲ್ಲ ಹಂಗೆ ಗಂಡು ಹುಲಿ ನನ್ನಿವಾಳದ ಬೆಟ್ಟತಾವ ಬಂದಾಗ ದಾಹ ತಡಿಕಳಕ್ಕಾಗ್ದೆ ಅಲ್ಲೆ ಬಂಡೆ ಮೇಲಿನ್ ನೀರ್ ಕುಡಿತಾ ಗಂಟಲು ಕಟ್ಟಿ ಸತ್ತೋಯ್ತಂತೆ. ಆದ್ರೆ ಹೆಣ್ ಹುಲಿ ಮಾತ್ರ ಮಿಂಚೇರಿ ದಾಟಿ ಗಂಜಿಗಟ್ಟೆ ಹತ್ರದ ಗಾದ್ರಿ ಗುಡ್ಡದ ತಾವ ದ್ಯಾವ್ರನ್ನು ಹುಡುಕ್ತಾ ಹೋತ್ತು. ಅಲ್ಲಿ ಮಿಂಚೇರಿ ಹಳ್ಳದಾಗ ದೊಡ್ ಹೊರಾಟನೆ ಆಗಿ ಇಬ್ರೂ ಅಲ್ಲೆ ಸತ್ತೊದ್ರಂತೆ ಮಗ. ಮೂರು ವರ್ಷದಾಗ್ ಒಂದ್ಸಲ ಅಲ್ಲಿ ಜಾತ್ರೆ ಆಗುತ್ತೆ, ಮುಂದಿನ್ ಸಲ ನಿಂಗೆ ಕರ್ಕೊಂಡು ಹೋಗ್ತೀನಿ ಬಿಡು.” ಎಂದು ಕಿವಿ ಮೇಲಿದ್ದ ಬೀಡಿಗೆ ಚಡ್ಡಿ ಜೇಬಿಗೆ ಕೈ ಹಾಕಿ ಬೀಡಿ ಪಟ್ನ ತೆಗೆದು ಬೆಂಕಿ ತಾಕಿಸಿ ತನ್ನ ಸಮಸ್ಯೆಗೆ ಪರಿಹಾರ ದೊರೆತ ಉಮೆದಿನಲ್ಲಿ ಹೊಗೆ ಬಿಡುತ್ತಾ, ಹಣ ಹೊಂಚಿಸುವ ಉಪಾಯ ಮಾಡುತ್ತ ತನ್ನ ಹಟ್ಟಿ ಕಡೆ ಹೆಜ್ಜೆ ಹಾಕಿದ… ರಾಚ ತನ್ನ ಅಪ್ಪ ಹೇಳಿದ ಕಥೆಯನ್ನು ಮೆಲುಕು ಹಾಕುತ್ತಾ ನೆರಳನ್ನು ಹಿಂಬಾಲಿಸಿದ.

ಫೋಟೋ ಕೃಪೆ : google

ಹುಣ್ಣಿಮೆಯ ರಾತ್ರಿ ಎಲ್ಲಾ ಅಂದುಕೊಂಡಂತೆ ನೆರವೇರಿತು. ಕೆಲ ದಿನಗಳು ಕಳೆಯುತ್ತಿದ್ದಂತೆಯೇ ಹಟ್ಟಿಯಲ್ಲಿ ಮತ್ತೆ ಹುಲಿಯ ಹೆಜ್ಜೆ ಗುರುತುಗಳು ರಾಚನ ಕಣ್ಣಿಗೆ ಕಂಡು ಬಂದವು. ತಮ್ಮ ನಾಯಕ ಹುಲಿಯೊಂದಿಗೆ ಹೋರಾಡಿ ವೀರನೆನಿಸಿಕೊಂಡ, ಕುಲಕೆ ದೈವವಾದ ಗಾದ್ರಿ ಪಾಲನಾಯಕನ ರೋಚಕ ಕಥೆ ಕೇಳಿ ರೋಮಾಂಚನಗೊಂಡಿದ್ದ ರಾಚ ಈ ಬಾರಿ ಹುಲಿ ಹೆಜ್ಜೆಯ ವಿಷಯವನ್ನು ನುಂಕಪ್ಪನಿಗೆ ತಿಳಿಸದೆ, ಅವುಗಳನ್ನು ಅಳಿಸಿ, ರಾತ್ರಿ ಪಾಳಿ ಕಾವಲು ಕಾಯುವುದಾಗಿ ನಿರ್ಧರಿಸಿದ. ಅದೊಂದು ರಾತ್ರಿ ಹಟ್ಟಿಯ ಬೇಲಿಯಲ್ಲಿ ಏನೋ ಸದ್ದಾದಂತೆ ಕೇಳಿ, ಕೊಡಲಿ ಹಿಡಿದು ಆಕಡೆ ಧಾವಿಸುತ್ತಿದ್ದಂತೆಯೇ ಹುಲಿ ಒಮ್ಮೆಲೇ ರಾಚನ ಮೇಲೆ ಹಾಯಿತು. ಅನಿರೀಕ್ಷಿತ ಧಾಳಿಯಿಂದ ಭಯಭೀತನಾದ ರಾಚ ತನ್ನ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ, ಗಾದ್ರಿ ಪಾಲನಾಯಕನನ್ನು ನೆನೆಸಿಕೊಂಡು ಕೈಯಿಂದ ಜಾರಿದ್ದ ಕೊಡಲಿ ಎತ್ತಿಕೊಂಡು ಬಲವಾಗಿ ಹುಲಿಯೆಡೆಗೆ ಬೀಸಿದನು. ಕೊಡಲಿಯ ಪೆಟ್ಟು ಹುಲಿಯ ಮೂಗನು ಚೀರಿ ರಕ್ತ ಸುರಿಯಲಾರಂಭಿಸಿತು. ನೋವಿಗೆ ಕುಸಿದ ಹುಲಿ ಮತ್ತೆ ಏಳುವಷ್ಟರಲ್ಲಿ ತಲೆಯ ಮೇಲೊಂದು ಬಲವಾಗಿ ಪೆಟ್ಟು ಕೊಟ್ಟನು, ಹುಲಿ ಮೂರ್ಛೆ ಹೋಯಿತು. ಏನು ಮಾಡಬೇಕೆಂದು ತೋಚದೆ ಹುಲಿಯನ್ನು ಬಲವಾಗಿ ಕಟ್ಟಿಹಾಕಿ ಹೋಗಿ ಮಲಗಿದನು. ಅತಿಯಾದ ರಕ್ತಸ್ರಾವವಾಗಿ ಮುಂಜಾನೆಗೆ ಹುಲಿ ಪ್ರಾಣ ಬಿಟ್ಟಿತ್ತು.

ಸೂರ್ಯೋದಯದೊಂದಿಗೆ ರಾಚ ಹುಲಿಯನ್ನು ಕೊಂದ ವಿಚಾರ ಎಲ್ಲೆಡೆಗೂ ಹಬ್ಬಿತು. ರಾಚನನ್ನು ಗಾದ್ರಿ ಪಾಪನಾಯಕನ ಅವತಾರ ಎಂದು ಎಲ್ಲರೂ ಕೊಂಡಾಡಿದರು. ವಿಷಯ ತಿಳಿಯುತ್ತಲೇ ಇನ್ನೂ ತನಗೆ ಉಳಿಗಾಲವಿಲ್ಲವೆಂದು ಅರಿತ ಪೂಜರಪ್ಪ ವೇಷ ಮರೆಸಿಕೊಂಡು ನಗರದತ್ತ ತನ್ನ ಉಜ್ವಲ ಭವಿಷ್ಯ ಅರಸುತ್ತಾ ಹೆಜ್ಜೆ ಹಾಕಿದನು.


  • ಜಬೀವುಲ್ಲಾ ಎಂ. ಅಸದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW