ಚಿರು ಎಂಬ ವಾಯುಪುತ್ರನಿಗೆ ವಿದಾಯ

ಚಿರಂಜೀವಿ ಸರ್ಜಾ ವಿಧಿವಶವಾಗಿದ್ದು, ನಾಡಿಗೆ ದೊಡ್ಡ ಆಘಾತವೇ ಆಗಿದೆ. ಅವರ ಬಗ್ಗೆ ವಿ.ನಾಗೇಂದ್ರ ಪ್ರಸಾದ್ ಅವರು ಬರಹದ ರೂಪದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

chi

ವಾಯುಪುತ್ರ ಚಿತ್ರದ ಗೀತರಚನೆಗೆ ನನ್ನನ್ನು ಅರ್ಜುನ್ ಸರ್ಜಾ ಚೆನ್ನೈ ಗೆ ಕರೆಸಿದ್ದರು. ಅರ್ಜುನ್ ಸರ್ಜಾ ಸಹೋದರಿಯ ಮಗ ಹೀರೋ ಆಗುತ್ತಾನಂತೆ ಅನ್ನುವ ಸುದ್ದಿ ಅಷ್ಟು ಹೊತ್ತಿಗೆ ಎಲ್ಲರಿಗೂ ಗೊತ್ತಿತ್ತು. ಶಕ್ತಿ ಪ್ರಸಾದ್ ಅವರ ಮೊಮ್ಮಗ, ಅರ್ಜುನ್ ಸರ್ಜಾ ಅವರ ಗರಡಿಯಲ್ಲಿ ಅಕ್ಷರಶಃ ಪಳಗಿದ ಹುಡುಗ ನೋಡಲು ಹೇಗಿರುತ್ತಾನೆ? ಅನ್ನುವ ಕುತೂಹಲ ನನಗೂ ಇತ್ತು.

ಚೆನ್ನೈ ನ ಅರ್ಜುನ್ ಸರ್ಜಾ ಅವರ ಕಚೇರಿಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗಿ ಕುಳಿತೆ. ಅದೊಂದು ಕಛೇರಿ ಕಂ ಗೆಸ್ಟ್ ಹೌಸ್ ಎನ್ನಬಹುದು.ಅರ್ಜುನ್ ಅವರು ಬರುವುದಕ್ಕೆ ಇನ್ನೂ ಸಮಯವಿತ್ತು.ಅವರ ಮ್ಯಾನೇಜರ್ ರಾಮಕೃಷ್ಣ ನನ್ನನ್ನು ಉಪಚರಿಸಿದರು.ಒಂದು ಬಾಗಿಲಿನಿಂದ ಬಂದ ಒಬ್ಬ ಹುಡುಗ ನನ್ನತ್ತ ಬಂದು ನಮಸ್ಕಾರ ಹೇಳಿದ. ಚೆನ್ನೈ ನಲ್ಲಿ ಕನ್ನಡ ಕೇಳುವ ಖುಷಿಯೇ ಬೇರೆ.ಪ್ರತಿ ನಮಸ್ಕಾರ ಹೇಳಿದೆ. ಆ ಹುಡುಗ ಬಂದವನೇ ನನ್ನ ಪಕ್ಕದಲ್ಲಿ ಕುಳಿತ. ಅವನನ್ನೇ ದಿಟ್ಟಿಸಿ ನೋಡಿದೆ.”ನಾನು ಚಿರಂಜೀವಿ ಸರ್. ನಿಮ್ಮ ಹಾಡುಗಳ ಫ್ಯಾನ್” ಅಂದ.ಸಂತೋಷದಿಂದ ಥ್ಯಾಂಕ್ಸ್ ಹೇಳಿದೆ. ಅಷ್ಟು ಹೊತ್ತಿಗೆ ಈ ಹುಡುಗನೇ ಆ ಹೊಸ ಹೀರೋ ಎಂದು ಅರ್ಥವಾಯಿತು.ಜಿಮ್ ನಲ್ಲಿ ಸಾಮು ಮಾಡಿದ ದೇಹ, ಆರೋಗ್ಯಪೂರ್ಣ ಮಂದಹಾಸ, ಕಣ್ಣುಗಳಲ್ಲಿ ಮಿಂಚು.ತನ್ನ ಆಸಕ್ತಿ ಮತ್ತು ಅಭಿರುಚಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ ಹೋದ. ಅವನಮಾತುಗಳಲ್ಲಿ ಏನನ್ನೋ ಸಾಧಿಸುವ ಹುಮ್ಮಸ್ಸು. ತನ್ನ ಅಪೀಯರೆನ್ಸ್ ಬಗ್ಗೆ, ನೃತ್ಯದ ಬಗ್ಗೆ, ತನ್ನ ಆಕ್ಷನ್‌ ಹಾಗೂ ಆ ಸಿನಿಮಾದಲ್ಲಿ ತಾನು ಕಾಣಬಯಸುವುದರ ಬಗ್ಗೆ ಹೇಳಿದ.ಚಿರಂಜೀವಿಯ ಮುಗ್ಧತೆ, ಪ್ರಾಮಾಣಿಕತೆ ನನ್ನನ್ನು ಸೆಳೆದವು.

ನಾನು ಶಕ್ತಿ ಪ್ರಸಾದ್ ಅವರ ಹಿಂದಿನ ತಲೆಮಾರಿನವರಾದರೂ ಅವರ ಅಭಿನಯ ಹಾಗೂ ವ್ಯಕ್ತಿತ್ವದ ಬಗ್ಗೆ ಅಪಾರ ಅಭಿಮಾನ. ಅರ್ಜುನ್ ಸರ್ಜಾ ಅವರು ತಮಿಳು ನಾಡಿನಲ್ಲಿ ಸಾಧಕರಾಗಿ ಹೆಜ್ಜೆ ಊರಿರುವ ಬಗ್ಗೆ ವಿಶೇಷ ಪ್ರೀತಿ. ಕಿಶೋರ್ ಸರ್ಜಾ ಅವರ ಸ್ನೇಹಪರತೆ, ವೃತ್ತಿಪರತೆಯ ಮೇಲೆ ನನಗಿರುವ ಆಪ್ಯಾಯತೆ. ಇವೆಲ್ಲವೂ ಚಿರಂಜೀವಿ ಸರ್ಜಾ ನನ್ನು ಹೆಚ್ಚು ಪ್ರೀತಿಸಲು ಅನುವು ಮಾಡಿಕೊಟ್ಟವು. ಒಂದೇ ಭೇಟಿಯಲ್ಲಿ ತೀರಾ ಹತ್ತಿರಾಗಿಬಿಟ್ಟ ಹುಡುಗ. ಅವನಿಗೆ ಕಿಶೋರ್ ಸರ್ಜಾ ಅಂದರೆ ಅಪರಿಮಿತ ಪ್ರೇಮ. ಅನನ್ಯ ಭಕ್ತಿ.

chi

ಚಿರಂಜೀವಿಯ ಉತ್ಸಾಹ ನೋಡಿದ ಮೇಲೆ ಒಂದಷ್ಟು ಹಿತನುಡಿ ಹೇಳುವ ಮನಸಾಯಿತು.

“ಚಿರು ನಿನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಿಮ್ಮ ಮಾವ ನಿನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಒಳ್ಳೆಯ ಹೆಸರು ಮಾಡುವ ಅವಕಾಶವಿದೆ. ಯಶಸ್ವಿ ಹೀರೋ ಆಗುವ ಲಕ್ಷಣಗಳಿವೆ. ಡೈರೆಕ್ಟರ್ ಗೆ ಹಾಗೂ ಪ್ರೊಡ್ಯೂಸರ್ ಗೆ ಗೌರವ ಕೊಡುವುದನ್ನು ಮಾತ್ರ ಯಾವತ್ತೂ ಮರೆಯಬೇಡ. ಅದೇ ನಿನ್ನನ್ನು ಕಾಯುವುದು. ನಿಮ್ಮ ಮಾವಾನೇ ಅದಕ್ಕೆ ಉದಾಹರಣೆ” ಎಂದು ಒಂದಷ್ಟು ಉದ್ದದ ಭಾಷಣವೇ ಬಿಗಿದು ಬಿಟ್ಟೆ. ಇವತ್ತಿನ ಅನೇಕ ಹೀರೋಗಳನ್ನು, ಸ್ಟಾರ್ ಗಳನ್ನು ಮೊದಲ ಸಿನಿಮಾದಿಂದ ತೀರಾ ಹತ್ತಿರದಿಂದ ಬಲ್ಲೆನಾದ್ದರಿಂದ ಅವರಿಗೆ ಕೊಟ್ಟಿದ್ದ ಉಪದೇಶಗಳನ್ನೇ ಚಿರುವಿಗೂ ನೀಡಿದೆ. ಕೈ ಕಟ್ಟಿಕೊಂಡು ಎಲ್ಲವನ್ನೂ ಆಲಿಸಿದ ಚಿರು ” ಹೂಂ ಸರ್. ನೀವು ಹೇಳಿದ್ದೆಲ್ಲ ನಮ್ಮ ಮಾವಾನೂ ಹೇಳಿದ್ದಾರೆ. ಅವರು ಹಾಕಿದ ಗೆರೆ ದಾಟೊಲ್ಲ ಅವರ ಹಾಗೆ ಒಳ್ಳೆ ಹೆಸರು ತೊಗೋತೀನಿ.” ಅಂದ.

ತಮ್ಮ ಧೃವನ ಬಗ್ಗೆ, ಅಮ್ಮ , ಅಜ್ಜಿ , ಮಾವಂದಿರ ಬಗ್ಗೆ ಬಲು ಪ್ರೀತಿಯಿಂದ ಹೇಳಿಕೊಂಡ. ಸುಮಾರು ತಾಸು ಮಾತಾಡಿದೆವು. ಅರ್ಜುನ್ ಸರ್ಜಾ ಅವರ ಆಗಮನವಾಯಿತು.

chi

ಫೋಟೋ ಕೃಪೆ : photo art inc

ಬಂದವರೇ ಚಿರುವನ್ನು ಗದರಿಸ ತೊಡಗಿದರು. “ಎಕ್ಸ ಸೈಜ್ ಮಾಡಿಲ್ಲವಂತೆ..ಮೊನ್ನೆ ಎಲ್ಲೋ ಹೋಗಿದ್ಯಂತೆ…”ಇತ್ಯಾದಿ ಇತ್ಯಾದಿ ದೂರುಗಳನ್ನು ಹೇಳಿ ಗದರಿಸಿದರು. “ಇಲ್ಲಾ ಮಾಮಾ..ಮಾಡಿದೆ…..ಮೊನ್ನೆ ಎಲ್ಲೂ ಹೋಗಿಲ್ಲ..”ಎಂದು ಏನೋ ಸಮಜಾಯಿಶಿ ಕೊಡುತ್ತಾ ಮಾವನನ್ನು ಮುದ್ದು ಮಾಡಿದ. ಅವರು ನಗುತ್ತಾ ಒಂದಷ್ಟು ಸಲಹೆ ನೀಡಿದರು.

ನಂತರ ಹಾಡಿನ ಚರ್ಚೆ ಆರಂಭವಾಯಿತು… ವಾಯುಪುತ್ರ ಚಿತ್ರ ಬಿಡುಗಡೆಯೂ ಆಯಿತು. ಇದಾದ ನಂತರ.. ವರದ.. ಅಮ್ಮ ಐ ಲವ್ ಯೂ…ಸಿಂಗ ಮುಂತಾದ ಚಿತ್ರಗಳ ಸಂದರ್ಭಗಳಲ್ಲಿ ನನ್ನ ಮತ್ತು ಚಿರುವಿನ ಭೇಟಿಯಾಗುತ್ತಿತ್ತು. ನನ್ನನ್ನು ನೋಡಿದಾಗಲೆಲ್ಲಾ ಅದೇ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತಿದ್ದ ಕಿರಿಯ ಮಿತ್ರ ಚಿರು.

ಹಲವಾರು ಭೇಟಿ ಮತ್ತು ನೆನಪುಗಳನ್ನು ನನ್ನಲ್ಲಿ ಬಿಟ್ಟು ಹೋಗಿದ್ದಾನೆ.ಯಾವಾಗಲೂ ಮಳೆಯ ಸಂಜೆಗಳಲ್ಲಿ ನೆನಪಾಗುತ್ತಿದ್ದ. ಇನ್ನು ಮುಂದೆ ಹೆಚ್ಚು ನೆನಪಾಗುತ್ತಾನೆ.ವಿನಾಕಾರಣದ ಪ್ರೀತಿಗೆ ಒಳಗು ಮಾಡಿದವನು. ಅಕಾಲಿಕವಾಗಿ ಹೋಗಿಬಿಟ್ಟ. ಅಪಾರ ದುಖಃವನ್ನು ಉಳಿಸಿಹೋದ ಚಿರುವಿನ ಅಂದಿನ ಮಂದಹಾಸ ಎಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ.ಹೋಗಿ ಬಾ ಮಿತ್ರ.

ಚಿರು ಐ ಲವ್ ಯೂ

ವಿ.ನಾಗೇಂದ್ರ ಪ್ರಸಾದ್

chi

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಇತರೆ ಲೇಖನಗಳು :

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW