ಕಾಳೀ ಕಣಿವೆಯ ಕತೆಗಳು – ಭಾಗ 1

ಕಾಳೀ ನದಿ ಅಂದರೆ ಸಾಕು. ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಪ್ಪು ನದಿ ಕಾಳಿ ಮತ್ತು ಆ ನದಿಯ ಉದ್ದಕ್ಕೂ ಹರಡಿರುವ ದಟ್ಟ ಕಾಡು ಮತ್ತು ಅಲ್ಲಿರುವ ವನ್ಯ ಜೀವಿಗಳು. ಖಾನಾಪುರ ತಾಲೂಕಿನ ಡಿಗ್ಗಿ ಎಂಬಲ್ಲಿ ಹುಟ್ಟಿ ಅಲ್ಲಿಂದ ಪೂರ್ವಕ್ಕೆ ಹರಿದು ಮುಂದೆ ಬಮ್ಮನಹಳ್ಳಿ ಕಾಡಿನಲ್ಲಿ ಪಶ್ಚಿಮಕ್ಕೆ ತಿರುಗಿ, ಗುಡ್ಡ-ಮುಂದೆ ಕದ್ರಾ ಬಳಿ ಹರಿದು ಮುಂದೆ ಸದಾಶಿವಗಡ ಮತ್ತು ಕಾರವಾರ ನಡುವೆ ಅರಬೀಸಮುದ್ರ ಸೇರುವ ಕಾಳಿ ಒಂದು ನೂರಾ ಇಪ್ಪತ್ತು ಕಿ.ಮೀ. ಉದ್ದಕ್ಕೂ ಹರಿಯುತ್ತದೆ. ಕಾಳೀ ನದಿಯ ಎರಡೂ ದಡಕ್ಕೆ ಹೊಂದಿ ದಟ್ಟ ಕಾಡಿದೆ. ಗುಡ್ಡ ಬೆಟ್ಟಗಳ ದಟ್ಟ ಗೊಂಡಾರಣ್ಯವಿದೆ.

amma

ಫೋಟೋ ಕೃಪೆ : TripAdvisor

ಇದು ಸೂಪಾ ತಾಲೂಕಿನ [ಸೂಪಾ ಈಗ ಆಣೆಕಟ್ಟಿನಲ್ಲಿ ಮುಳುಗಿದೆ. ಅದೀಗ ಜೊಯಡಾ ತಾಲೂಕು ಆಗಿದೆ] ಕುಂಬಾರವಾಡಾ, ಉಳುವಿ, ಗುಂದ ಪ್ರದೇಶ, ಜಗಲಬೇಟ್, ಕ್ಯಾಸ್ಟಲ್‌ ರಾಕ್‌, ಪನಸೋಲಿ, ಅವೇಡಾ, ಬರ್ಚಿ, ಹಳಿಯಾಳ ತಾಲೂಕಿನ ಬಮ್ಮನಹಳ್ಳಿ, ಗುತ್ತಿ, ಅಮಗಾ-ಜಮಗಾ [ಈಗ ಅಂಬಿಕಾನಗರ], ಸೈಕ್ಸಪಾಯಿಂಟ್, ಕುಳಗಿ, ಬಡಾಕಾನಶಿಡಾ, ಭಾಗವತಿ, ತಟ್ಟಿಹಳ್ಳ, ಯಲ್ಲಾಪುರ ತಾಲೂಕಿನಲ್ಲಿರುವ ಹಲವು ಭಾಗಗಳು, ಕಾರವಾರ ತಾಲೂಕಿನ ಅಣಶಿ ಘಟ್ಟ, ಕದ್ರಾ ಪ್ರದೇಶಗಳು ಥಟ್ಟನೆ ನೆನಪಾಗುತ್ತವೆ.

ಕಾಳೀ ನದಿ ವಿದ್ಯುತ್‌ ಯೋಜನೆಯಿಂದಾಗಿ ರಾಜ್ಯದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಈ ಕಣಿವೆ ಪ್ರದೇಶ ಇಂದು ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ. ಕಾಳೀ ನದಿಗೆ ಉಪನದಿಗಳಾಗಿ ಪಾಂಡ್ರಿ, ತಟ್ಟೀಹಳ್ಳ, ಕಾನೇರಿ, ಮೌಳಂಗಿ, ಬರ್ಚಿಗಳಲ್ಲದೆ ದಟ್ಟ ಕಾಡಿನ ಮಧ್ಯೆದಿಂದ ಹರಿದು ಬರುವ ಅನೇಕ ಝರಿಗಳು ಕೊಳ್ಳಗಳೂ ಸಾಕಷ್ಟಿವೆ. ನೀರು, ಕಾಡು, ನಿರ್ಮಲ ವಾತಾವರಣಗಳು ಇಲ್ಲಿಯ ಸೃಷ್ಟಿಯ ಕೊಡುಗೆಯಾಗಿದ್ದು ಕಣಿವೆ ಕಾಡಿನಲ್ಲಿ ಅನೇಕ ವನ್ಯ ಮೃಗಗಳೂ ಅಪರೂಪದ ಪಕ್ಷಿ ಸಂಕುಲವೂ ಇಲ್ಲಿದೆ. ನಾನಾ ಜಾತಿಯ ಸರ್ಪಗಳು, ವಿಷ ಜಂತುಗಳೂ ಇಲ್ಲಿವೆ.

amma

ಫೋಟೋ ಕೃಪೆ : NativePlanet

ನನ್ನ ಜೀವನದ ಮಹತ್ವದ ಘಟ್ಟ

ಕಾಳೀ ಕಣಿವೆಯ ಕಾಡಿನಲ್ಲಿ ನಾನು ಮೂವತ್ತು ವರ್ಷಗಳ ಕಾಲ ರಾತ್ರಿ-ಹಗಲು ವಾಸ ಮಾಡಿದ್ದೇನೆ. ಹಗಲು ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿದು, ಗಿಡ ಬಳ್ಳಿಗಳ ಮಧ್ಯ ಮಣ್ಣು ಕೊರಕಲು ದಾರಿಯಲ್ಲಿ ನಡೆದಾಡಿದ್ದೇನೆ. ಕಾಡಿನಲ್ಲಿ ಹರಿಯುವ ಝರಿ, ಹಳ್ಳಗಳ ನೀರು ಕುಡಿದಿದ್ದೇನೆ. ಬಿದಿರಿನ ಗುಡಿಸಲು ಕಟ್ಟಿಕೊಂಡು ಅದರಲ್ಲಿಯೂ ವಾಸ ಮಾಡಿದ್ದೇನೆ. ಕಾಡು ಹಂದಿ, ಕರಡಿಗಳ ಹೊಡೆತದಿಂದ ಹಲವು ಬಾರಿ ಪಾರಾಗಿದ್ದೇನೆ. ಮರದ ಮೇಲಿದ್ದ ಹೆಬ್ಬಾವನ್ನು ಗಮನಿಸದೆ ಅದರ ಬುಡದಲ್ಲಿ ಸಾಗಿ ಹೋಗಿದ್ದೇನೆ. ಕಾಳೀ ನದಿಯ ಹೊಂಡದಲ್ಲಿ ಈಜುವ ಮೊಸಳೆಗಳನ್ನು ಕಂಡು ದೂರ ಎತ್ತರದ ಬಂಡೆಯ ಮೇಲೆ ಕೂತು ಗಮನಿಸಿದ್ದೇನೆ. ಕಾಡಾನೆಗಳ ಸನಿಹದಲ್ಲಿ ನಿಂತು ಅವುಗಳ ಸೂಕ್ಷ್ಮತೆಯನ್ನು ಅರಿವಿಗೆ ತಂದುಕೊಂಡಿದ್ದೇನೆ. ಐವತ್ತು ವರ್ಷಗಳ ಹಿಂದೆ ನಡೆದದ್ದು, ಅನುಭವಿಸಿದ್ದು ಈಗ ಎಲ್ಲವೂ ಕನಸು… ಬರೀ ಕನಸು.

amma

ಫೋಟೋ ಕೃಪೆ : Trawell.in

೧೯೭೦ ರಿಂದ ಮೂರು ವರ್ಷಗಳ ಕಾಲ ಸರಕಾರದ ಅನ್ವೇಷಣಾ ಇಲಾಖೆ, ಮತ್ತು ಸರ್ವೇ ಆಫ್‌ ಇಂಡಿಯಾದಲ್ಲಿ ಇಡೀ ಕಾಳೀ ಕಣಿವೆಯನ್ನು ಹೊಕ್ಕು ಸುತ್ತಾಡಿದ್ದು ಮತ್ತು ಕಾಡಿನ ಮಧ್ಯೆದಲ್ಲಿಯೇ ವಾಸ ಮಾಡಿದ್ದು ನನ್ನ ಜೀವನದ ಮಹತ್ವದ ಘಟ್ಟವೇ ಸರಿ.

ಇಂದು ಕಟ್ಟಲ್ಪಟ್ಟಿರುವ ಸೂಪಾ ಆಣೆಕಟ್ಟನ್ನು ನಿರ್ಮಿಸುವ ಎಂಟು ವರ್ಷದ ಪೂರ್ವದಲ್ಲಿ ಆಣೆಕಟ್ಟಿನಲ್ಲಿ ಮುಳುಗಡೆಯಾಗ ಬಹುದಾದ ಕಾಡು ಮತ್ತು ನಿಲ್ಲಬಹುದಾದ ನೀರಿನ ಮಟ್ಟ ಗುರುತಿಸಲು ನೇಮಕವಾಗಿದ್ದ ಸರ್ವೇ ತಂಡದಲ್ಲಿ ನಾನಿದ್ದೆ ಎಂಬುದೇ ನನಗೆ ಹೆಮ್ಮೆಯ ವಿಷಯ. ದಿಗೂಲಿಗಳಾಗಿದ್ದ ಸಿವಿಲ್‌ ಇಂಜನಿಯರ್‌ ಕಾರವಾರದ ಶಿರೋಡ್ಕರ, ದಾವಣಗೆರೆಯ ಲಿಂಗಪ್ಪ, ತಂಡದ ಉಸ್ತುವಾರಿಯಾಗಿ ನಾನು, ಒಬ್ಬ ಅಡಿಗೆಯವ, ಇಬ್ಬರು ಮಚ್ಚಿನವರು, [ರಕ್ಷಣೆಯ ಕಾರಣಕ್ಕೆ ನಮಗೆಲ್ಲರಿಗೂ ಒಂದೊಂದು ಮಚ್ಚು ಕೊಟ್ಟಿದ್ದರು ಅನ್ನಿ] ಸರ್ವೇ ಲೆವೆಲ್‌ ಬಾಕ್ಸ ಹೊರುವವನೊಬ್ಬ, ಟೆಂಟು ಕಾಯುವವನೊಬ್ಬ ಇಷ್ಟು ಜನ ನಮ್ಮ ತಂಡದಲ್ಲಿದ್ದರು. ಎಲ್ಲರೂ ದಿನಗೂಲಿಯವರು. [ಮುಂದೆ ಸರಕಾರ ಎಲ್ಲರನ್ನೂ ಖಾಯಂ ನೌಕರರೆಂದು ಆದೇಶಿಸಿ ತಿಂಗಳ ಪಗಾರದ ಸ್ಕೇಲು ಕೊಟ್ಟಿತು] ವಾರಕ್ಕೊಮ್ಮೆ ಧಾರವಾಡದ ಸಬ್‌ಡಿವಿಜನ್‌ ನಿಂದ ಒಂದು ಜೀಪು ಜಗಲಬೇಟ್‌ ಮೂಲಕ ಕಾಡಿನೊಳಗೆ ಬಂದು ನಮಗೆ ರೇಶನ್ನು ಕೊಟ್ಟು ಹೋಗುತ್ತಿತ್ತು. ಕಾಡಿನಲ್ಲಿದ್ದಷ್ಟೂ ದಿನ ಚಹಕ್ಕೆ ಹಾಲು ಇರುತ್ತಿರಲಿಲ್ಲ. ಕಪ್ಪು ಚಹವೇ ನಮಗೆಲ್ಲ ಅಭ್ಯಾಸವಾಗಿತ್ತು.

aa1

ಫೋಟೋ ಕೃಪೆ : YouTube

ಕುಂಬಾರ ವಾಡಾ, ಉಳವಿ, ಕ್ಯಾಸ್ಟಲ್‌ರಾಕ್‌ ನಂಥ ದಟ್ಟ ಕಾಡಿನಲ್ಲಿ ಟೆಂಟು ಹಾಕಿಕೊಂಡು ಸಹೋದ್ಯೋಗಿಗಳೊಂದಿಗೆ ಕಂದೀಲಿನ ಬೆಳಕಿನಲ್ಲಿ ಕಳೆದ ರಾತ್ರಿಗಳು ಅದೆಷ್ಟೊ.

ಮಲಗಿದ ಟೆಂಟಿನೊಳಗೆ ಹರಿದು ಬರುವ ವಿವಿಧ ಜಾತಿಯ ಸರ್ಪಗಳು, ಹೆಬ್ಬಾವುಗಳು, ಸನಿಹದಲ್ಲೇ ಗುಡುಗುವ ಹುಲಿಗಳ ಗರ್ಜನೆಯ ಸದ್ದು, ರಾತ್ರಿಯ ನೀರವತೆಯನ್ನು ಭೇದಿಸಿಕೊಂಡು ಬರುವ ಊಳಿಡುವ ನರಿಗಳು, ಶೀಳು ನಾಯಿಗಳ ಕೂಗು, ರಾತ್ರಿಯ ಹೊತ್ತು ಭಯ ಹುಟ್ಟಿಸುತ್ತಿದ್ದ ಜೀರುಂಡೆಗಳ ಸದ್ದು, ಕತ್ತಲಿನಲ್ಲಿ ಇದ್ದಕ್ಕಿದ್ದಂತೆ ದರ್ಶನ ಕೊಡುತ್ತಿದ್ದ ಕೆಂಪು ಕೆಂಡದಂಥ ಕಣ್ಣಿನ ಕಾಡುಕೋಣಗಳು, ಕರಡಿಗಳು, ಜಿಂಕೆಗಳ ಹಿಂಡು, ಮೊಲಗಳ ಗುಂಪು, ನವಿಲು, ಕಾಡು ಕೋಳಿಗಳ ದಂಡುಗಳನ್ನು ನೋಡುತ್ತ ಕಳೆದ ಆ ದಿನಗಳು ಈಗೆಲ್ಲೋ!.

ಆನೆ, ಹುಲಿ, ಕರಡಿ ಹತ್ತಿರ ಬಾರದಿರಲು ಟೆಂಟ್‌ ಮುಂದೆ ಸದಾ ಉರಿಯುತ್ತಿದ್ದ ಬೆಂಕಿ !

ಟೆಂಟಿನ ಬಳಿ ಬರಬಾರದೆಂದು ರಾತ್ರಿಯಿಡೀ ದಟ್ಟ ಬೆಂಕಿಯನ್ನು ಹಾಕಿ ಮಲಗಿದ ದಿಗಳಿಗೂ ಲೆಕ್ಕವಿಲ್ಲ. ಸರ್ವೇ ಕೆಲಸಕ್ಕಾಗಿ ಆರಾರು ತಿಂಗಳು ಹೊರಗಿನ ಜಗತ್ತನ್ನೇ ನೋಡದೆ ದಟ್ಟಡವಿಯಲ್ಲೇ ಸರಕಾರ ನೀಡಿದ ಬಟ್ಟೆಯ ಟೆಂಟು ಹಾಕಿಕೊಂಡು ಸಹೋದ್ಯೋಗಿಗಳೊಂದಿಗೆ ಜಗಲಬೇಟ್‌, ಕ್ಯಾಸಲ್‌ ರಾಕ್‌, ಕುಂಬಾರವಾಡ, ಪಾಂಡ್ರಿ ನದೀ ತಟದ ದಟ್ಟ ಕಾಡಿನಲ್ಲಿ ಅದೆಷ್ಟು ಹೆಜ್ಜೆಗಳು ಮೂಡಿದವೋ. ಚಳಿಗಾಲದಲ್ಲಿ ಹಂಟರ್‌ ಶೂ, ಮಳೆಗಾಲದಲ್ಲಿಗಂಬೂಟ್ ಶೂ, ಬೇಸಿಗೆಯಲ್ಲಿ ಲೆದರ್‌ ಶೂಗಳನ್ನು ಸರಕಾರವೇ ನಮಗೆ ನೀಡುತ್ತಿತ್ತು.

ಕಾಡಿನಲ್ಲಿ ತಿರುಗಾಡುವಾಗ ನಮಗೆ ಗೊತ್ತಿಲ್ಲದಂತೆ ಕಾಲಿನ ಶೂ ಹತ್ತಿ ಮೊಣಕಾಲು, ತೊಡೆಗಳನ್ನು ಕಚ್ಚಿ ರಕ್ತ ಹೀರಿ ಸಾಕು ಅನ್ನಿಸಿದ ನಂತರ ಕೆಳಗೆ ನೆಲಕ್ಕೆ ಬಲೂನಿನಂತೆ ಉದುರಿ ಬೀಳುವ ಉಂಬಳಗಳು ಈ ಅರಣ್ಯದಲ್ಲಿ ಎಲ್ಲಿ ಹೋದರೂ ಸಿಗುತ್ತವೆ. ಉಂಬಳಗಳಿಗೆ ತಂಬಾಕಿನ ಘಾಟು ಅಂದರೆ ಆಗುವುದಿಲ್ಲ. ಅವು ನಮ್ಮ ಚರ್ಮವನ್ನು ಎಷ್ಟೇ ಗಟ್ಟಿಯಾಗಿ ಕಚ್ಚಿ ಹಿಡಿದಿದ್ದರೂ ಅವುಗಳ ಮೇಲೆ ತಂಬಾಕಿನ ಪುಡಿ ಉದುರಿಸಿದರೆ ಹಾಗೇ ಉರುಳಿ ಬೀಳುತ್ತಿದ್ದವು. ಅವು ಉದುರಿದ್ದೇ ತಡ. ಕಚ್ಚಿದ ಜಾಗದಿಂದ ಧಾರಾಕಾರ ರಕ್ತ ಸುರಿಯುತ್ತಿತ್ತು. ನಮಗೆ ನಿತ್ಯವೂ ಇದು ಮಾಮೂಲು ಆಗಿತ್ತು. ಕಾಡಿನೊಳಗೆ ಹೋಗುವಾಗ ಎಲ್ಲರೂ ತಂಬಾಕಿನ ಪೊಟ್ಟಣಗಳನ್ನು ಜೇಬಿನಲ್ಲಿ ಇಟ್ಟುಕೊಂಡೇ ಹೋಗುತ್ತಿದ್ದೆವು.

ಸರ್ವೇ ಕೆಲಸ ನಿಲ್ಲುವಂತಿರಲಿಲ್ಲ. ಕಾಡಿನಲ್ಲಿ ಓಡಾಡಲೇಬೇಕಾಗಿತ್ತು. ಕಾಳೀ ಕಣಿವೆಯ ಇಂಥ ಕಾಡಿನಲ್ಲಿ ಓಡಾಡಿದ ಈ ಜೀವ ಪಡೆದ ಪುಣ್ಯ ಅಗಾಧವಾದದ್ದು. ಋಣಾತೀತವಾದದ್ದು.

ಇಂದು ದಾಂಡೇಲಿ ಶತಮಾನಗಳಿಂದ ನಿಸರ್ಗದತ್ತ ಸಹಜ ದಟ್ಟು ಕಾಡಿನಿಂದ ಮತ್ತು ಈ ಕಾಡಿನಲ್ಲಿ ವಾಸವಾಗಿರುವ ವನ್ಯ ಜೀವಿಗಳಿಂದ, ಗುಡ್ಡ ಬೆಟ್ಟಗಳು, ನದಿ ಝರಿಗಳಿಂದ ಸದಾ ಜಿನಿಗುಡುವ ಸದಾ ಹಚ್ಚ ಹಸುರಿನ ಕಾಡಿನ ಪರಿಸಿರದಿಂದ ಪ್ರಸಿದ್ಧವಾಗಿದೆ. ಈ ದಟ್ಟಡವಿಯಲ್ಲಿ ಗಗನ ಚುಂಬಿಸುವ ತೇಗು, ಬೀಟೆ, ನಂದಿ, ನಾನಾ ಜಾತಿಯ ಮಾವು, ಹಲಸು, ದಾಲಚಿನ್ನಿ, ಅಲ್ಲದೆ ವಿವಧ ಜಾತಿಯ ಕಾಡು ಮರಗಳು, ಬಳ್ಳಿಗಳು, ಕಂಟಿಗಳು ಲೆಕ್ಕವಿಲ್ಲದಷ್ಟು ಬೆಳೆದಿವೆ. ಗುಡ್ಡದ ಮೇಲಿನಿಂದ ಹರಿಯುವ ಭೂಗರ್ಭದಿದಂದಲೇ ಒಸರುವ ನೀರಿನ ಝರಿಗಳಿಗೂ ಲೆಕ್ಕವಿಲ್ಲ. ಚೆರ್ನೋಬಿಲ್‌ ….

thumbnail_Adobe_Post_20200605_1000390.06575114102127899_2

ಕಾಡಿನ ತುಂಬ ಆನೆಗಳು

ಮನುಷ್ಯರು ಸಂಚರಿಸಲೂ ಅಸಾಧ್ಯವಾದ ದಟ್ಟ ಕಾನನ ಇಲ್ಲಿದೆ. ಇಲ್ಲಿ ಬಿದಿರು ಹುಲುಸಾಗಿ ಬೆಳೆಯುವುದರಿಂದ ಆನೆಗಳ ಹಿಂಡು ಸಾಕಷ್ಟಿದೆ. ಇಲ್ಲಿ ಬೆಳೆಯುವ ಬಿದಿರು ಮೆಳೆ, ಹುಲ್ಲು ಬಯಲು ಆನೆಗಳಿಗೆ ಪ್ರಿಯವಾದ ಆಹಾರ. ಕೆಲವು ಕಡೆಗೆ ಇಲ್ಲಿಯ ಹುಲ್ಲುಗಾವಲಿನಲ್ಲಿ ಆನೆಯೂ ಕಾಣದಷ್ಟು ಎತ್ತರಕ್ಕೆ ಹುಲ್ಲು ಪೊಗದಸ್ತಾಗಿ ಬೆಳೆದಿರುತ್ತದೆ. ಇಲ್ಲೆಲ್ಲ ಆನೆಗಳು ಹಿಂಡು ಕಟ್ಟಿಕೊಂಡು ತಿರುಗುತ್ತವೆ.ಮುದಿ ಆನೆಗಳು, ನಡು ವಯಸ್ಸಿನ ಆನೆಗಳು, ವಯಸ್ಸಿಗೆ ಬಂದ ಆನೆಗಳು, ಕೊಂಬು ಇರುವ ಆನೆಗಳು, ಮರಿಯಾನೆಗಳು ಈ ಗುಂಪಿನಲ್ಲಿರುತ್ತವೆ. ಮರಿ ಆನೆ ಇದ್ದರೆ ಉಳಿದ ಆನೆಗಳು

ಸುತ್ತ ನಿಂತು ಅದಕ್ಕೆ ರಕ್ಷಣೆ ಕೊಡುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಕಾಡಿನಲ್ಲಿ ಸಾಕಷ್ಟು ಜನ ಆನೆಯ ಕಾಲ್ತುಳಿತಕ್ಕೆ ಮತ್ತು ಸೊಂಡಲಿಗೆ ಸಿಕ್ಕು ದಾರುಣ ಮರಣ ಹೊಂದಿದ್ದಾರೆ. ಆನೆಗಳು ಹೆಚ್ಚಾಗಿ ಕಾಳೀ ನದಿಯ ತಟದಲ್ಲಿ ಬೆಳೆದ ಕಾಡಿನಲ್ಲಿ ಇರುತ್ತವೆ. ಸೂಪಾ, ಜೊಯಡಾ, ದಾಂಡೇಲಿ, ಕುಳಗಿ, ಪ್ರಧಾನಿ-ಪನಸೋಲಿ, ಗುಂದ, ಕುಂಬಾರವಾಡಾ, ಅಂಬಿಕಾನಗರ, ಬೊಮ್ಮನಹಳ್ಳಿ, ಭಾಗವತಿ ಕಾಡಿನಲ್ಲಿ ಸಾಕಷ್ಟಿವೆ.

ಹುರಿಕಟ್ಟು ಮೈಯ ದಷ್ಟಪುಷ್ಟ ಕಾಡುಕೋಣಗಳು

ಇವುಗಳ ಮಧ್ಯೆದಲ್ಲಿಯೇ ಕಾಡುಕೋಣ- ಕಾಡೆಮ್ಮೆಗಳ ಸಂಖ್ಯೆಯೂ ಕಾಳೀ ಕಣಿವೆಯ ಗೊಂಡಾರಣ್ಯದಲ್ಲಿ ಸಾಕಷ್ಟಿದೆ. ದಷ್ಟಪುಷ್ಟವಾದ ಬಲಿಷ್ಠ ದೇಹ ರಚನೆ, ನೆತ್ತಿಯ ಮೇಲೆ ಡೊಂಕಾದ ಎರಡು ಉಕ್ಕಿನ ಅಲುಗಿನಂಥ ಕೋಡುಗಳು. ಕೆಂಪು ಕಾಜಿನಂಥ ಇರಿವ ಕಣ್ಣುಗಳು. ಹಣೆಯ ಮೇಲೆ ಮತ್ತು ಮೊಣಕಾಲಿನ ಕೆಳಗೆ ಬಿಳೀ ಬಣ್ಣದ ಕೂದಲನ್ನು ಹೊಂದಿರುವ ಈ ಕಾಡು ಕೋಣಗಳು ನೋಡಲು ಭಯಾನಕವಾಗಿರುತ್ತವೆ. ಒಂದು ಸಲಕ್ಕೆ ಅವು ಇಪ್ಪತ್ತು ಅಡಿಗಿಂತ ದೂರಕ್ಕೆ ಅವು ನೆಗೆಯುತ್ತವೆ. ಅವುಗಳ ನಾಲಿಗೆಯ ಮೇಲೆ ಮುಳ್ಳುಗಳಿರುವುದರಂದ ಇವು ಮನುಷ್ಯನನ್ನು ಒಮ್ಮೆ ಸುಮ್ಮನೆ ನೆಕ್ಕಿದರೆ ಸಾಕು. ಮೈಯ ಚರ್ಮ ಕಿತ್ತು ಬರುತ್ತದೆ. ಕಾಡುಕೋಣಗಳು ಬಲಿಷ್ಠ ಪ್ರಾಣಿಗಳಾದದ್ದರಿಂದ ಅವುಗಳ ಹತ್ತಿರ ಸುಳಿಯುವುದೂ ಅಪಾಯ. ಗುಡ್ಡ-ಕಂದಕಗಳನ್ನು ಸಲೀಸಾಗಿ ಇವು ಹತ್ತಿ ನೆಗೆಯುತ್ತವೆ. ಇವು ಸಸ್ಯಾಹಾರಿಗಳಾದ್ದರಿಂದ ಕಾಡಿನ ಹುಲ್ಲು, ತೊಪ್ಪಲು ಯಾವುದಿದ್ದರೂ ಬಿಡುವುದಿಲ್ಲ. ಗುಂಪು ಕಟ್ಟಿಕೊಂಡು ತಿರುಗಾಡಿ ಮೇಯುತ್ತವೆ. ಕಾಡಿನ ನೀರಿನ ಝರಿಗಳು, ಹೊಂಡಗಳು ಇದ್ದಕಡೆ ಇವು ಹೆಚ್ಚಾಗಿ ಇರುತ್ತವೆ. ಕಾಡುಕೋಣಗಳು ಹೆಚ್ಚಾಗಿ ಸೂಪಾ, ಜೋಯಡಾ, ಕುಳಗಿ, ಅಂಬಿಕಾನಗರ, ದಾಂಡೇಲಿಯ ಸುತ್ತಮುತ್ತಲಿನ ಕಾಡು, ಉಳುವಿ, ಜಗಲಬೇಟ ಕಾಡಿನಲ್ಲಿ ವಾಸಿಸುತ್ತವೆ.

ani2

ಸೂಚನೆ ಕೊಡದೇ ನುಗ್ಗಿ ಬರುವ ಕರಡಿಗಳು

ಕಾಳೀ ಕಣಿವೆಯ ಕಾಡಿನಲ್ಲಿ ಕರಡಿಗಳಿಗೇನು ಕೊರತೆಯಿಲ್ಲ. ಗಿಡಗಂಟಿಗಳು ಸೊಂಪಾಗಿರುವ ಗುಡ್ಡದ ಚಿಕ್ಕ ಗುಹೆಗಳಲ್ಲಿ, ಕಲ್ಲು-ಪೊಟರುಗಳಲ್ಲಿ ಕರಡಿಗಳು ವಾಸಿಸುತ್ತವೆ. ಒಮ್ಮೊಮ್ಮೆ ದೊಡ್ಡ ಮರಗಳ ಟೊಂಗೆಯ ಮೇಲೂ ಕರಡಿಗಳು ಜೇನು ಹುಡುಕಿಕೊಂಡು ಹೋಗುತ್ತವೆ. ಇವೂ ಕೂಡ ಗುಂಪಿನಲ್ಲಿಯೇ ತಿರುಗಾಡುವ ಪ್ರಾಣಿಗಳು. ದೊಡ್ಡ ದೊಡ್ಡ ಕಲ್ಲಿನ ಸಂದಿನಲ್ಲಿ ಸಿಗುವ ಜೇನು ಅಂದರೆ ಕರಡಿಗಳಿಗೆ ಪಂಚಪ್ರಾಣ. ಇದರ ಜೊತೆಗೆ ಕಾಡಿನಲ್ಲಿ ಬೆಳೆದ ಹಲಸಿನ ಹಣ್ಣು ಕಂಡರಂತೂ ಓಡಿ ಬರುತ್ತವೆ. ಹಲಸಿನ ವಾಸನೆ ಸಿಕ್ಕರೆ ಇವು ಧಾವಿಸಿ ಬರುತ್ತವೆ. ಅಂಥ ಸಮಯದಲ್ಲಿ ಜೇನು ಸಂಗ್ರಹಿಸುವವರು, ಕಾಡಿನಲ್ಲಿ ಗದ್ದೆ ಮಾಡಿಕೊಂಡು ಓಡಾವವರು ಎದುರಿಗೆ ಬಂದರೆ ಬಿಡುವುದಿಲ್ಲ. ಅಮರಿಕೊಂಡೇ ಬಿಡುತ್ತವೆ. ಮೈಯನ್ನು ಪರಚಿ ಕಚ್ಚುತ್ತವೆ. ಎಷ್ಟೋ ಜನ ಕರಡಿಗಳ ಕೈಗೆ ಸಿಕ್ಕು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಕರಡಿಗಳು ಹೆಚ್ಚಾಗಿ ಕುಂಬಾರವಾಡಾ, ಜೊಯಡಾ, ಕ್ಯಾಸರಲಾಕ, ಬೊಮ್ಮನಹಳ್ಳಿ, ಪನಸೋಳಿ, ಗುಂದ, ಭಾಗವತಿ, ತಟ್ಟಿಹಳ್ಳ ಕಾಡಿನಲ್ಲಿ ಇವೆ.

ಕಾಡಿನಲ್ಲಿ ಚಿಗುರು ಹುಲ್ಲಿನ ಪ್ರದೇಶಗಳಿಗೂ ಕೊರತೆಯಿಲ್ಲ. ಹುಲ್ಲು ತಿಂದೇ ಬದುಕುವ ಚಿಗರೆ-ಸಾರಂಗ, ಮೊಲಗಳು ಹೇರಳವಾಗಿವೆ. ಚಿಗರೆಯ ಒಂದು ಗುಂಪಿನಲ್ಲಿ ಏನಿಲ್ಲೆಂದರೂ ನೂರಕ್ಕೂ ಹೆಚ್ಚು ಚಿಗರೆ-ಸಾರಂಗಗಳಿರುತ್ತವೆ. ಹತ್ತಿಪ್ಪತ್ತು ಮೊಲಗಳ ಹಿಂಡು ಪುಟಿಯುತ್ತ ಹೋಗುವ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇವು ಸಾಧು ಪ್ರಾಣಿಗಳು. ದೇವರು ಇಂಥ ಪ್ರಾಣಿಗಳನ್ನುತಿಂದು ಬದುಕಲೆಂದೇ ಕೆಲವು ಮಾಂಸಾಹಾರಿ ಪ್ರಾಣಿಗಳನ್ನೂ ಈ ಕಾಡಿನಲ್ಲಿ ಸೃಷ್ಟಿಸಿ ಇಟ್ಟಿದ್ದಾನೆ. ಹುಲಿಗಳು, ಚಿರತೆಗಳು, ನರಿ-ತೋಳಗಳು, ಶೀಳುನಾಯಿಗಳು, ಹೆಬ್ಬಾವುಗಳು, ಮೊಸಳೆಗಳು, ಮಾಂಸಾಹಾರಿ ಪಕ್ಷಿಗಳು ಇಲ್ಲಿ ಹೇರಳವಾಗಿವೆ. ಜಿಂಕೆ, ಮೊಲ, ಕಾಡುಮೇಕೆ, ಸುಲಭವಾಗಿ ಅವುಗಳಿಗೆ ಸಿಗುವ ಬಲಿ ಪ್ರಾಣಿಗಳು. ಒಮ್ಮೊಮ್ಮೆ ಕಾಡುಕೋಣಗಳೂ ಹುಲಿ-ಚಿರತೆಗೆ ಬಲಿಯಾಗುವುದುಂಟು.

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಕತೆ : ಹೂಲಿಶೇಖರ್ (ಖ್ಯಾತ ನಾಟಕಕಾರ ಮತ್ತು ಚಿತ್ರಸಂಭಾಷಣೆಕಾರ )

bf2fb3_58479f997cba4852bd3d7a65d4c785a4~mv2.png

ಹೂಲಿಶೇಖರ್ ಅವರ ಹಿಂದಿನ ಬರಹಗಳು : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW