ಚುಕ್ಕಿಸಾರು ಅಥವಾ ಹುಣಸೆಗೊಜ್ಜು ಎಂಬ ದಿವ್ಯಾಮೃತ

ಜಿಟಿಜಿಟಿ ಮಳೆ ಮಧ್ಯೆ ಊಟಕ್ಕೆ ಸ್ಟ್ರಾಂಗ್ ಗೊಜ್ಜು ಇದ್ರೆ ಊಟದ ಗಮ್ಮತ್ತೇ ಬೇರೆ. ಕೆ.ರಾಜಕುಮಾರ್ ಅವರು ಹುಣಸೆಹಣ್ಣಿನ ಗೊಜ್ಜನ್ನು ಮಾಡುವ ವಿಧಾನ ಮತ್ತು ಅದರ ರುಚಿಯ ಗಮ್ಮತ್ತಿನ ಕುರಿತು ಆಹಾರ ಪ್ರಿಯರಿಗೆ ತಿಳಿಸಿಕೊಟ್ಟಿದ್ದಾರೆ, ತಪ್ಪದೆ ನೀವು ಮಾಡಿ ರುಚಿ ನೋಡಿ…

ಬಾಯಿ ಕೆಟ್ಟಿದೆಯೆ? ಊಟ ಸೇರುತ್ತಿಲ್ಲವೆ? ಮೃಷ್ಟಾನ್ನ ತಿಂದು ಬೇಸರವೆ? ತರಕಾರಿ ಇಲ್ಲವೆ? ಜಿಟಿಜಿಟಿ ಮಳೆಯೆ? ಹಾಗಾಗಿ ನಾಲಿಗೆ ಚುರ್ ಎನಿಸುವ ದೇಸಿ ಸಾರು ಬೇಕು ಎನಿಸುತ್ತಿದೆಯೆ? ಸಾರು ಕಡಿಮೆ ಇದೆಯೆಂಬ ಕಾರಣಕ್ಕೆ ದಿಢೀರೆಂದು, ಸರಳವಾಗಿ ಯಾವುದಾದರೂ ರುಚಿಕಟ್ಟಾದ ಸಾರನ್ನು ಮಾಡಬೇಕೆ? ಚಿಂತೆ ಬಿಡಿ. ಇಲ್ಲಿದೆ ಪರಿಹಾರ: ಅದುವೇ ಹುಣಸೆ ಗೊಜ್ಜು ಅಥವಾ ಚುಕ್ಕಿಸಾರು ಎಂಬ ದಿವ್ಯಾಮೃತ; ದಿಢೀರ್ ಅಮೃತ!

ಹುಣಸೆಹಣ್ಣನ್ನು ಮೃದುವಾಗಿ ತೊಳೆಯಿರಿ; ಅದರಲ್ಲಿರುವ ಧೂಳು ಕಸಕಡ್ಡಿ ಹೋಗುವಂತೆ. ನೀರಿನಲ್ಲಿ ಚೆನ್ನಾಗಿ ನೆನೆಯಲು ಬಿಡಿ. ಬಿಸಿನೀರಿನಲ್ಲಿ ಸಹ ನೆನೆಸಬಹುದು. ಅನಂತರ ಚೆನ್ನಾಗಿ ಕಿವುಚಿ. ಇದಕ್ಕೆ ನೀರು ಹಾಕಿ. ಕಲ್ಲುಪ್ಪು ಹಾಕಿ. ಅದು ಲಭ್ಯವಿಲ್ಲದಿದ್ದರೆ ಪುಡಿ ಉಪ್ಪನ್ನು ಹಾಕಿ. ಎಷ್ಟು ಎಂದಿರಾ? ರುಚಿಗೆ ತಕ್ಕಷ್ಟು ಅಥವಾ ಆರೋಗ್ಯ ಅನುಮತಿಸಿದಷ್ಟು! ಆಯ್ಕೆ ನಿಮ್ಮದೇ. ಖಾರವಿರುವ, ತೆಳುಹೊಟ್ಟಿನ ಹಸಿ ಮೆಣಸಿನಕಾಯಿಯ ತೊಟ್ಟು ತೆಗೆದು ತೊಳೆಯಿರಿ. ಅದನ್ನು ಹುಣಸೆ ನೀರಿಗೆ ಹಾಕಿ ಪಸಂದಾಗಿ ಕಿವುಚಿ. ಕಿವುಚಿ ಎಂದಾಗ ಮುಖ ಕಿವುಚಿದವರು ಕುಟ್ಟಿ, ಅರೆದು ಅಥವಾ ಹೋಳುಗಳಾಗಿ ಹಚ್ಚಿ ಹಾಕಬಹುದು.

ಸಣ್ಣ ಈರುಳ್ಳಿ ಅಥವಾ ಅದು ಲಭ್ಯವಿಲ್ಲದಿದ್ದರೆ ಗುಲಾಬಿ ಬಣ್ಣದ ಈರುಳ್ಳಿಯನ್ನು ಹೆಚ್ಚಿಡಿ. ನಾಟಿ ಕೊತ್ತಂಬರಿ ಸೊಪ್ಪನ್ನು ಹಿತವಾಗಿ ತೊಳೆತೊಳೆದು ಹೆಚ್ಚಿಕೊಳ್ಳಿ.‌ ಲಭ್ಯವಿದ್ದರೆ ಉಳ್ಳಿಹೂವನ್ನು (ಹೂವು ತೆಗೆದು) ಹಾಕಬಹುದು. ಉಳ್ಳಿಹೂವೆಂದರೆ ಮೊದಲಿನಿಂದಲೂ ಬರುತ್ತಿದೆಯಲ್ಲ. ಅಂತಹದ್ದು. ಈಗ ಬರುತ್ತಿರುವ ಕೆಳಗಡೆ ಈರುಳ್ಳಿ, ಮೇಲೆ ಅದರ ಎಲೆ ಇರುವಂತಹುದು ಅಲ್ಲ.

ಇವನ್ನು ಹುಣಸೆ ನೀರಿಗೆ ಹಾಕಿ. ಅದಕ್ಕೂ ಮೊದಲು ಕಿವುಚಿ ಉಳಿದಿರುವ ಹುಣಸೆ ಜೊಂಡನ್ನು ತೆಗೆದುಬಿಡಿ. ರಾಸಾಯನಿಕಗಳನ್ನು ಬಳಸದ ಬೆಲ್ಲವನ್ನು ಬೆರೆಸಿ. ಗೊಜ್ಜಿನ ರುಚಿ ನೋಡಿ ಸರಿಪಡಿಸಿ. ಬಡಿಸಲು ರುಚಿಯುಕ್ತ ಗೊಜ್ಜು ಸಿದ್ಧವಾದಂತೆ.‌ ತಿಳಿಸಾರಿನ ಪುಡಿಯನ್ನು ಸ್ವಲ್ಪ ಸೇರಿಸಿದರೆ ಅದು ರುಚಿವರ್ಧಕದಂತೆ ಕಾರ್ಯವೆಸಗುತ್ತದೆ. ಹದಗೊಳ್ಳಲು ಒಂದರ್ಧ ಗಂಟೆ ಬಿಡಬಹುದು.‌

ಒಗ್ಗರಣೆ ಹಾಕುವ ವಿಧಾನ:

ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿ. ಶೇಂಗ (ಕಳ್ಳೇಕಾಯಿ) ಎಣ್ಣೆಯನ್ನು ಬಳಸಿದರೆ ರುಚಿ ಹೆಚ್ಚು. ಅದರಲ್ಲಿ ಸಾಸಿವೆಯನ್ನು ಚಟಪಟ ಎನ್ನುವಂತೆ ಸಿಡಿಸಬೇಕು. ಉರಿ ಆರಿಸಿದ ಅನಂತರ ಸ್ವಚ್ಛಗೊಳಿಸಿದ ಹಸಿ ಕರಿಬೇವಿನ ಎಲೆ ಹಾಕಿ. ಅನಂತರ ಅದಕ್ಕೆ SSP ಇಂಗುವನ್ನು ಅರೆದು ಪುಡಿಮಾಡಿ ಹಾಕಿ. ಮತ್ತೆ ಒಂದೆರಡು ಕ್ಷಣಮಾತ್ರ ಸಣ್ಣ ಉರಿಯಲ್ಲಿ ಇಂಗುವನ್ನು ಚಮಚದಿಂದ ಕಲೆಸಿ. ಇಂಗು, ಕರಿಬೇವು ಕಾದು ಕರಕಲಾಗಬಾರದು.‌ ಬೆಳ್ಳುಳ್ಳಿ ಬಳಸಲು ಬಯಸುವವರು, ಸಿಪ್ಪೆ ಸುಲಿದು ಮೂರ್ನಾಲ್ಕು ಎಸಳನ್ನು ಒಗ್ಗರಣೆಯೊಂದಿಗೆ ತಾಳಿಸಿಕೊಳ್ಳಬೇಕು. ಈಗ ಹುಣಸೆ ಗೊಜ್ಜಿಗೆ ಒಗ್ಗರಣೆ ಸಿದ್ಧ. ಕಾಯಿತುರಿ ಹಾಕುವ ಉತ್ಸಾಹ, ಉಮೇದು ನಿಮ್ಮದಾಗಿದ್ದರೆ, ಗೊಜ್ಜಿನ ಮೇಲೆ ಚಿಮುಕಿಸಿ.

ಚುಕ್ಕಿಸಾರು ಎಂಬ ಹೆಸರೇಕೆ?

ಹಸಿಮೆಣಸಿನ ಕಾಯಿ ಕಿವುಚಿ-ಕಿವುಚಿ ಹಾಕಿದರೆ ಮೇಲೆ ತೇಲುವ ಅದರ ಬೀಜಗಳು ಕಣ್ಣಿಗೆ ಹಬ್ಬ. ಈ ಕಾರಣಕ್ಕೆ ಇದನ್ನು ಚುಕ್ಕಿ ಸಾರು ಅಂತಲೂ ಹೇಳುತ್ತಾರೆ. ಆಂಧ್ರದಲ್ಲಿದ್ದ ನಮ್ಮ ಮುತ್ತಜ್ಜಿ ತೆಲುಗಿನಲ್ಲಿ ಇದನ್ನು ‘ಚುಕ್ಕಲ ಚಾರು’ ಎಂದು ಕರೆಯುತ್ತಿದ್ದರು. ಉಪ್ಪು, ಹುಳಿ, ಖಾರ ಈ ಮೂರೂ ರುಚಿಗಳು ಪರಸ್ಪರ ಕಾದಾಡದೆ, ತಮ್ಮ, ತಮ್ಮದೇ ಆದ ಪ್ರತ್ಯೇಕ ಅಧಿಪತ್ಯ ಸ್ಥಾಪಿಸಿಕೊಳ್ಳದೇ ಅವು ಒಟ್ಟಾಗಿ ಸೇರಿ ಒಂದು ಹದಕ್ಕೆ ಬರಬೇಕೆಂದರೆ ಮೂಗುದಾರ ಹಾಕಬೇಕು. ಇದಕ್ಕಾಗಿ ಒಳ್ಳೆಯ ಬೆಲ್ಲವನ್ನು ಪುಡಿಮಾಡಿ ಹಾಕಬೇಕು. ಬೆಲ್ಲ ಹುಳಿಯಾಗಿರಬಾರದು. ನೀರು ಒಸರುತ್ತಿರಬಾರದು.‌ ರುಚಿಯನ್ನು ಬೆಲ್ಲವೇ ನುಂಗಿ ಗೊಜ್ಜು ಪಾಯಸ ಆಗದಂತೆಯೂ ಎಚ್ಚರವಹಿಸಬೇಕು!

ಗೊಜ್ಜು ನೀರಾಗಬಾರದು. ನದಿಯಂತಿದರ ವಿಹಾರ ಎಂದೂ ಆಗಬಾರದು. ಅನ್ನ ಮತ್ತು ಗೊಜ್ಜಿನ ಜೊತೆಗೆ ಹುರುಳಿಕಾಳಿನ ಪುಡಿ ಕಲಸಿಕೊಂಡರೆ ಅದೊಂದು ಭಿನ್ನ ರುಚಿ. ಜೊತೆಗೆ ಪುಡಿ ಬೆರೆತಾಗ ಗೊಜ್ಜು ಸ್ವಲ್ಪ ಗಟ್ಟಿಯಾಗುತ್ತದೆ. ಹುರುಳಿಕಾಳನ್ನು ಬಾಂಡಲಿಯಲ್ಲಿ ಹಾಕಿ ಹದವಾಗಿ ಹುರಿದು, ಮಿಕ್ಸಿಯಲ್ಲಿ ಹಾಕಬೇಕು. ಜೊತೆಗೆ ತುಸು ಮಾತ್ರ ಉಪ್ಪು ಸೇರಿಸಿ ಅರೆದು ಪುಡಿ ಮಾಡಬೇಕು. ಇದನ್ನು ಸ್ವಲ್ಪ ಗೊಜ್ಜನ್ನದ ಜೊತೆ ಕಲಸಿಕೊಂಡರೆ ಅದೊಂದು ಪ್ರತ್ಯೇಕ ರುಚಿ. ಆಯ್ಕೆ ಉಣ್ಣುವವರಿಗೆ ಬಿಟ್ಟಿದ್ದು. ನಂಜಿಕೊಳ್ಳಲು ಬಾಳಕ (ಮಜ್ಜಿಗೆ ಮೆಣಸಿನಕಾಯಿ) ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಅದಕ್ಕೆ ಹಪ್ಪಳ ಅಥವಾ ಸಂಡಿಗೆ ಜೊತೆಯಾದರೆ ಭಗವಂತನೇ ಭೂಮಿಗೆ ಇಳಿದುಬಂದು ಕೈತುತ್ತು ನೀಡೆಂದು ಬೇಡುತ್ತಾನೆ. ಬಾಯಲ್ಲಿ ಬಗೆಬಗೆಯ ಕಾರಂಜಿ! ನಾಲಿಗೆಯ ಮೂರು ಭಾಗಗಳಿಗೆ ಭರಪೂರ ಕಾರ್ಯ. ಉಪ್ಪು, ಹುಳಿ, ಖಾರ ಮತ್ತು ಸಿಹಿಯನ್ನು ಗ್ರಹಿಸುವಿಕೆಯೇ ಅದರ ಪೂರ್ಣಾವಧಿ ಕೆಲಸವಾಗಿಬಿಡುತ್ತದೆ. ಮಾತಿನ ಮಂಟಪ ಕಟ್ಟಲು ಸಮಯವೆಲ್ಲಿ ಅದಕ್ಕೆ? ಸುಖದ ಸ್ವರ್ಗ ಎಲ್ಲಿದೆ ಎಂದಿರಾ? ಅದು ಇಲ್ಲೇ, ಇಲ್ಲೇ; ನಮ್ಮ ಕೈಗೆಟುಕುವ ಸನಿಹದಲ್ಲಿ.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)

ಒಗರು, ಕಹಿಯ ಹೊರತಾಗಿ ಉಳಿದೆಲ್ಲ ರುಚಿಗಳ ಮಹಾಸಂಗಮ ಹುಣಸೆ ಹಣ್ಣಿನ ಹಸಿಗೊಜ್ಜು! ಬಳಸುವ ಹಸಿಮೆಣಸಿನಕಾಯಿ ದಪ್ಪ ಹೊಟ್ಟಿನದ್ದಾಗಿದ್ದರೆ ಗೊಜ್ಜು ಒಗರಾಗಿಬಿಡುತ್ತದೆ. ನಾಲಿಗೆಗೆ ಮತ್ತೊಂದು ಕೆಲಸದ ಅಧಿಭಾರ: ಬೆರಳು ನೆಕ್ಕುವಿಕೆ. ನಾಸಿಕವೂ ಗೊಜ್ಜಿನ ಘಮಕ್ಕೆ ಕೈಯನ್ನು ಮೂಸಲು ತೊಡಗುತ್ತದೆ. ರುಚಿಯ ಮತ್ತಿನಲಿ ಕಣ್ಣಿನ ಎರಡೂ ರೆಪ್ಪೆ ಪರಸ್ಪರ ಬೆಸೆದು ಒಂದರೆಕ್ಷಣ ಮೌನದಲೇ ಸಂಭಾಷಿಸಿ ಧನ್ಯತೆಯಿಂದ ತೊಟ್ಟಿಕ್ಕುತ್ತವೆ. ಅದು ಕಂಬನಿಯ ಮಡುವಲ್ಲ. ಎರಡು ಭಾವಗಳ ಸಂಗಮ. ಒಂದು ರುಚಿಗಾಗಿ ಹನಿದ ಆನಂದಭಾಷ್ಪ. ಇನ್ನೊಂದು ಮೆಣಸಿನಕಾಯಿಯ ಪ್ರಭಾವ. ಕಣ್ಣಲ್ಲೇ ಮೇಘಸ್ಫೋಟ ಆಗಿದೆಯೇನೋ ಎಂಬಂತಹ ಸ್ಥಿತಿ. ತುಂಗೆ, ಭದ್ರೆಯರ ಮಹಾಸಂಗಮದಂತೆ. ಜೊತೆಗೆ ನಾಸಿಕವು ನಾನೂ ಇದ್ದೇನೆ ಎಂದು ಜೊತೆಗೂಡಿ ತನ್ನ ಅಸ್ತಿತ್ವವನ್ನು ಸಾರುತ್ತದೆ. ಈ ಸ್ಥಿತಿ ಹಸಿದವರ ಪಾಲಿನ ಆನಂದ, ಪರಮಾನಂದ. ಬಹೂಪಯೋಗಿ ಕರವಸ್ತ್ರವೊಂದು ಜೊತೆಗಿರಲೇಬೇಕು. ಬಿಕ್ಕಳಿಕೆ ಶುರುವಾಯಿತೆ? ಯಾರೋ ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಯಾ(ಏ)ಮಾರದಿರಿ. ಇದು ಗೊಜ್ಜಿನ ಪ್ರಭಾವ. ಸಾವಧಾನವಾಗಿ ನೀರನ್ನು ಕುಡಿಯಿರಿ. ಗಟಗಟನೆ ಕುಡಿದರೆ ನೆತ್ತಿಗೆ ಹತ್ತುತ್ತದೆ. ಜೋಪಾನ.

ಹುಣಸೆ ಗೊಜ್ಜು ಸಿರಿವಂತರ ಮಹಲುಗಳಲ್ಲಿ ಅಥವಾ ತಾರಾಂಕಿತ ಹೋಟೆಲುಗಳಲ್ಲಿ ಹುಟ್ಟಿದ ಫಿಜ್ಜಾ, ಬರ್ಗರ್ ಅಲ್ಲ. ಅದಕ್ಕೆ ಪಶ್ಚಿಮದ ಗಾಳಿ ಸೋಕಿಲ್ಲ. ಅದು ಈ ನೆಲದ ಪೂರ್ವಸೂರಿಗಳ ಶೋಧ. ಅದನ್ನು ಉಣ್ಣಲು ಚಮಚೆ ಬೇಕಿಲ್ಲ. ಅದು ಬಡವರ ಹಟ್ಟಿಗಳಲ್ಲಿ ಹಾಗೂ ಶ್ರಮ ಏವ ಜಯತೆಯೆಂದು ನಡುಬಿಗಿದು ದುಡಿದವರ ಜೋಪಡಿಗಳಲ್ಲಿ ಆವಿರ್ಭವಿಸಿದ ಕಟುಸತ್ಯ. ಹಸಿಗೊಜ್ಜು ಎಂಬ ಈ ರಸಪೂರ ಜನ್ಯೆ ಈಗ ಅನ್ಯೆಯಲ್ಲ. ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲೆಡೆಗೂ; ತನ್ನ ಮಾಯೆಯನ್ನೂ, ಛಾಯೆಯನ್ನೂ ಹರಡಿದ್ದಾಳೆ. ಗುಣಕ್ಕೆ ಮತ್ಸರವುಂಟೆ? ರುಚಿಗೆ ಅಡಿತಡೆಯುಂಟೆ? ರುಚಿಯೆಂಬುದು ಸೀಮಾತೀತವಾದುದು. ಅದು ಅನಿರ್ಬಂಧಿತ. ಅದು ವರ್ಗಭೇದವರಿಯದು. ರಾಗಿ ರಾಮಧಾನ್ಯ ಅಲ್ಲವೆ? ಈ ಚುಕ್ಕಿಸಾರು ಸಹ ಅಂತೆಯೇ. ಬಡವರ ಅಸ್ಮಿತೆಯ, ಆತ್ಮವಿಶ್ವಾಸದ ಸಂಕೇತ. ಅದು ಸಮತೆಯನ್ನು ಸಾರುವಂತಹ ಸಾಟಿಯಿಲ್ಲದ ಮೇರು ಸಾರು!

ಸತ್ಯವೇನು ಗೊತ್ತೆ? ಹುಣಸೆ ಗೊಜ್ಜು ಗೊಜ್ಜಲ್ಲ. ಚುಕ್ಕಿ ಸಾರು ಸಾರಲ್ಲ. ಇದು ಗೊಜ್ಜಿಗೆ ಗೊಜ್ಜೂ ಅಲ್ಲ; ಸಾರಿಗೆ ಸಾರೂ ಅಲ್ಲ. ಅದರ ಸಾಂದ್ರತೆ ಗೊಜ್ಜು, ಸಾರು ಎಂಬ ಎರಡು ವ್ಯಾಖ್ಯೆಗಳ ನಡುವಿನದು. ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ ಎಂಬ ಜಿಜ್ಞಾಸೆ. “ಅದೇಂ ಮಾಯ ಚೇಸಾವೊ ಕಾನಿ, ಇಲಾ ಈ ಕ್ಷಣಂ ಆಗಿಪೋನಿ.‌” ಚುಕ್ಕಿಸಾರು; ಅದೇನು ಮಾಯೆ ಮಾಡಿದೆಯೊ ಕಾಣೆ. ಆದರೆ ಸಂತೃಪ್ತ ಭಾವದ ಈ ಕ್ಷಣ ಹೀಗೆಯೇ ಸ್ಥಿರವಾಗಿದ್ದು ಬಿಡಲಿ ಎಂಬುದೇ ಇದರ ಭಾವಾನುವಾದ. ಇದು ಧನ್ಯತೆಯ ಪರಾಕಾಷ್ಠೆ.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)

ಈ ಬಂಧ ಅನುಬಂಧ:

ಊಟದ ಅನಂತರ ಹದವಾಗಿ, ಹಿತವಾಗಿ ಹುಳಿಯಾದ ಮಜ್ಜಿಗೆಗೆ ಗೊಜ್ಜನ್ನು ಬೆರೆಸಿ ಕುಡಿಯಿರಿ. ನಾಲಿಗೆಗೆ ಅಮೃತಸಿಂಚನ ಆದೀತು. ಗೊಜ್ಜೆಂಬುದು ಬಡಬಾಗ್ನಿ. ಜಠರ, ಕರುಳು ಎಂಬ ಜೀರ್ಣಾಂಗಗಳು ಶಮನಗೊಳ್ಳಬೇಕು. ಹಾಗಾಗಿ ಮಜ್ಜಿಗೆ ಅದಕ್ಕೆ ಉಪಶಮನ ನೀಡುತ್ತದೆ. ಹಾಗಾದರೆ ಮಜ್ಜಿಗೆಗೆ ಗೊಜ್ಜು ಮತ್ತೇಕೆ ಎಂದಿರಾ? ಅಲ್ಲೇ ಇರುವುದು ಸ್ವಾರಸ್ಯ. ಇಷ್ಟಪಟ್ಟು ಕಂಡುಕೊಂಡ ಸ್ವಾದವನ್ನು ಜಿಹ್ವೆ ಬರಿಯ ಮಜ್ಜಿಗೆಯನ್ನು ಹೀರಿ ಕಳೆದುಕೊಳ್ಳಬಾರದೆಂಬ ಕಾರಣಕ್ಕೆ!

ಮುಂದೇನು?

ಉಂಡು ಸಂತೃಪ್ತಗೊಂಡ ಮೇಲೆ ಚಿಂತೆಗೆಲ್ಲಿದೆ ಆಸ್ಪದ? ಚಿಂತೆ ಇಲ್ಲದವನಿಗೆ ಸಂತೇಲಿ ನಿದ್ದೆ; ಅಲ್ಲವೆ? ತಣ್ಣಗೆ ಮಲಗಿಬಿಡಿ. ಒಂದು ಸಣ್ಣ ನಿದ್ರೆಯಾಗಲಿ. ಜಗದ ಗೊಂದಲ ಬೇಡ ನನಗೆ ಎಂಬ ಎದೆಯ ಹಾಡನ್ನು ಅತ್ತಿತ್ತ ನೋಡದೆ ಗುನುಗಿಕೊಳ್ಳಿ. ನಿದಿರಾದೇವಿ ತಾರೆಯಿಂದ ಭೂಮಿಗೆ ಮೆಲ್ಲನೆ, ಮೆಲ್ಲನೆ ಬಂದು ಆವರಿಸುತ್ತಾಳೆ. ಎದ್ದ ಮೇಲೆ ಒಂದು ಹಬೆಯಾಡುವ ಕಡು ಕಾಫಿಯನ್ನು ಗುಟುಕರಿಸಿ.

“ಕ್ಯಾ ಸೆ ಕ್ಯಾ ಹೋಗಯಾ ತೇರೆ ಸ್ವಾದ್‌ ಮೇ.” A lot can happen over coffee. ಹುಣಸೆ ಗೊಜ್ಜಿನಿಂದಲೂ ಏನೆಲ್ಲಾ ಆದೀತು; ಎಷ್ಟೆಲ್ಲಾ ಸಾಧ್ಯ. ಅಲ್ಲವೆ? ಉಂಡವರೇ ಬಲ್ಲರು ಅದರ ರುಚಿಯನು!

ಉಂಡೆದ್ದ ಮೇಲೆ ಖುಶಿಯಿಂದ ಹಾಡಿಕೊಳ್ಳಿ:
*ಇಂದು ಬಾನಿಗೆಲ್ಲ ಹಬ್ಬ. ಗಾಳಿಗಂಧಕೂ ಹಬ್ಬ.

ಇದೇನಿದು, ಇದೇನಿದು ಐಸಾ?
ಅನ್ನ, ಗೊಜ್ಜು ಪೂರ್ತಿ ಖಾಲಿ ಕೈಸಾ?

“ಏ ದಿಲ್ ಮಾಂಗೆ ಮೋರ್” ಎಂಬುದು ಹಕ್ಕೊತ್ತಾಯವಾಗಿ ಆವರಿಸಿಕೊಂಡಾಗ ಇನ್ನೇನಾದೀತು? ಪಾತ್ರೆ ಎಲ್ಲಾ ಖಾಲಿ ಖಾಲಿ. ಮನಸ್ಸು ಪೂರಾ ಭರ್ತಿ, ಭರ್ತಿ.


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಲೇಖಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW