‘ಡೇರ್‌ ಡೆವಿಲ್ಸ್ ಮುಸ್ತಾಫಾ’ – ಮಾಕೋನಹಳ್ಳಿ ವಿನಯ್‌ ಮಾಧವ

ಪೂರ್ಣಚಂದ್ರ ತೇಜಸ್ವಿಯವರ ‘ಡೇರ್‌ ಡೆವಿಲ್‌ ಮುಸ್ತಾಫಾ’ ಕಥೆಯನ್ನು ಸಿನೆಮಾ ಮಾಡಲಾಗಿದ್ದು,ಎಲ್ಲ ಚಿತ್ರಮಂದಿರದಲ್ಲಿ ನೋಡಬಹುದು. ಆ ಸಿನಿಮಾ ಕುರಿತು ಪತ್ರಕರ್ತರಾದ ಮಾಕೋನಹಳ್ಳಿ ವಿನಯ್‌ ಮಾಧವ ಅವರು ಏನು ಹೇಳುತ್ತಾರೆ ಅನ್ನೋದನ್ನ ತಪ್ಪದೆ ಓದಿ ….

ತೇಜಸ್ವಿಯ ಬರಹಗಳು ಇಂದಿಗೂ ಒಂದು ಸಮೂಹ ಸನ್ನಿ. ತರಾಸು, ಮಾಸ್ತಿ, ಒಂದು ಹಂತಕ್ಕೆ ಕುವೆಂಪು ಮತ್ತು ಕಾರಂತರು ನೇಪಥ್ಯಕ್ಕೆ ಸರಿಯುತ್ತಿರುವ ಕಾಲದಲ್ಲೂ, ಅವರ ಸಮಕಾಲೀನರಾದ ಅನಂತಮೂರ್ತಿ, ಲಂಕೇಶ್‌ ಅವರಿಗಿಂತ ಮುಂಚೂಣಿಯಲ್ಲಿ ಇರುವುದಂತೂ ಸುಳ್ಳಲ್ಲ.

ಇನ್ನು ನಮ್ಮ ಮೂಡಿಗೆರೆಗೆ ಬಂದರೆ, ಅಲ್ಲಿ ಸಾಹಿತ್ಯಾಸಕ್ತಿ ಹುಟ್ಟಿದ್ದೇ ತೇಜಸ್ವಿಯವರ ಬರವಣಿಗೆಯಿಂದ ಎಂದರೂ ತಪ್ಪಾಗಲಾರದು. ನಾವು ಚಿಕ್ಕವರಿದ್ದಾಗ ಮೂಡಿಗೆರೆ ಎಂಬ ಸಾಹಿತ್ಯದ ಮರುಭೂಮಿಗೆ, ತೀರ್ಥಹಳ್ಳಿಯಿಂದ ಬಂದ ಓಯಸಿಸ್‌ ತೇಜಸ್ವಿ ಎನ್ನಬಹುದು. ಮೂಡಿಗೆರೆಯಲ್ಲಿ ಕೆಲವರು ಬರೆಯಲು ಪ್ರಯತ್ನಿಸಿದರೂ, ಸಾಹಿತ್ಯದ ದೃಷ್ಟಿಯಲ್ಲಿ ಅವೇನೂ ಗಮನ ಸೆಳೆದಿರಲಿಲ್ಲ. ಈಗಂತೂ, ತೇಜಸ್ವಿ ಸಾಹಿತ್ಯವನ್ನು ಅರೆದು, ಕುಡಿದಿರುವ ಮತ್ತು ಅವರ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ, ಒಂದು ಯುವ ಪೀಳಿಗೆಯೇ ಮೂಡಿಗೆರೆಯಲ್ಲಿ ಇದ್ದಂತೆ ಕಾಣುತ್ತದೆ.

ತೇಜಸ್ವಿಯವರ ಬರವಣಿಗೆಯ ಮೋಡಿಯೇ ಅಂತಹದು. ಪ್ರಕೃತಿಯನ್ನೇ ಸರ್ವಸ್ವ ಎಂದು ನಂಬಿದ್ದ ತೇಜಸ್ವಿಯವರಿಗೆ, ಮನುಷ್ಯರ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಶ್ವರತೆ ಎದ್ದು ಕಾಣುತ್ತಿತ್ತು. ಏಕತಾನವನ್ನೇ ಹೊದ್ದು ಮಲಗಿದ್ದ ಮೂಡಿಗೆರೆಯಲ್ಲಿ, ಪ್ರಕೃತಿದತ್ತವಾದ ವೈವಿಧ್ಯತೆಯನ್ನು ಹೆಕ್ಕಿ ತೆಗೆದು, ಅವುಗಳನ್ನು ಅಕ್ಷರ ರೂಪಕ್ಕೆ ಇಳಿಸುತ್ತಿದ್ದರು. ಅವರ ಸಾಹಿತ್ಯದಲ್ಲಿ ಮನುಷ್ಯ ಜೀವನದ ನಶ್ವರತೆ ಎಷ್ಟರ ಮಟ್ಟಿಗೆ ಆವರಿಸಿಕೊಂಡಿರುತ್ತದೆ ಎಂದರೆ, ಭಾವುಕತೆಯು ಸಹ ನಮ್ಮ ಯೋಚನಾ ಲಹರಿಯಷ್ಟೇ ಕ್ಷಣಿಕವಾಗಿರುತ್ತದೆ. ನೀರವತೆಯಲ್ಲೂ ನವಿರಾದ ಹಾಸ್ಯ ಮತ್ತು ಜೀವನೋತ್ಸಾಹ ಎದ್ದು ಕಾಣುತ್ತದೆಯೇ ಹೊರತು, ಭಾವುಕತೆ ಕಾಡುವುದಿಲ್ಲ.

ತೇಜಸ್ವಿಯ ಬರವಣಿಗೆಗಳು ನಮ್ಮನ್ನು ಆವರಿಸಿಕೊಳ್ಳುವುದೇನೋ ಸರಿ. ಅದನ್ನು ತೆರೆಯ ಮೇಲೆ ತಂದರೆ ಹೇಗೆ? ಎನ್ನುವ ಪ್ರಯತ್ನಗಳೂ ನಡೆದಿವೆ. ತಬರನ ಕಥೆ, ಕುಬಿ ಮತ್ತು ಇಯಾಲ, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು ಮುಂತಾದವು ಚಲನಚಿತ್ರಗಳಾದರೆ, ಜುಗಾರಿ ಕ್ರಾಸ್‌ ಮತ್ತು ಕೃಷ್ಣೇಗೌಡರ ಆನೆ ಕಥೆಗಳನ್ನು ಕೆಲವು ಯತ್ನಗಳು ನಡೆದವು.

ಅಬಚೂರಿನ ಪೋಸ್ಟಾಫೀಸು ಚಿತ್ರವನ್ನು ನಾನು ನೋಡಲಿಲ್ಲ. ತಬರನ ಕಥೆ ಮತ್ತು ಕುಬಿ ಮತ್ತು ಇಯಾಲ ಚಿತ್ರಗಳು ಪ್ರಶಸ್ತಿ ವಿಜೇತ ಚಿತ್ರಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾದರೂ, ವ್ಯಾಪಾರ ದೃಷ್ಟಿಯಿಂದ ಅಂತಹಾ ಯಶಸ್ಸು ಕಾಣಲಿಲ್ಲ. ಕಿರಗೂರಿನ ಗೈಯ್ಯಾಳಿಗಳು ನನ್ನನ್ನು ತೇಜಸ್ವಿಯವರ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಾವುದೇ ಯಶಸ್ಸನ್ನು ಕಾಣಲಿಲ್ಲ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ವಿಯವರ ʻಡೇರ್‌ ಡೆವಿಲ್‌ ಮುಸ್ತಾಫಾʼ ಕಥೆಯನ್ನು ಸಿನೆಮಾ ಮಾಡುತ್ತಿದ್ದಾರೆ ಎಂದು ಕೇಳಿದಾಗ ಬಹಳ ಆಶ್ಚರ್ಯವಾಯಿತು. ನಾಲ್ಕೈದು ಪುಟಗಳಿಗಿಂತ ಹೆಚ್ಚಿಲ್ಲದ, ಈ ಪುಟ್ಟ ಕಥೆಯನ್ನು ಹೇಗೆ ತೆರೆಗೆ ತರುತ್ತಾರೆ? ಎನ್ನುವುದಂತೂ ನನಗೆ ಕುತೂಹಲಕಾರಿಯಾಗಿತ್ತು. ಹಾಗಾಗಿ, ಬುಧವಾರದ ಪ್ರೀಮಿಯಂ ಶೋಗೆ ಜೋಗಿಯ ಜೊತೆ ಹೋಗಿಯೇ ಬಿಟ್ಟೆ. ಬರುತ್ತಾ, ಅವರು ಕೊಟ್ಟ ಒಂದು ಮುದ್ದಾದ
ಬ್ಯಾಡ್ಜ್‌ ಹಿಡಿದುಕೊಂಡು ಬಂದೆ.

ತೇಜಸ್ವಿಯವರ ಕಥೆ ಓದಿದ್ದಾಗ, ಅದನ್ನು ಯಾವುದೋ ಅವಸರದಲ್ಲಿ ಬರೆದು ಮುಗಿಸಿದ್ದರು ಅಂತ ಅನ್ನಿಸಿತ್ತು. ಈ ಚಿತ್ರವನ್ನು ನೋಡಿದಾಗ, ಕಥೆಗೊಂದಿಷ್ಟು ರೆಕ್ಕೆ-ಪುಕ್ಕಗಳು ಸೇರಿದ್ದು, ಅಲ್ಲೊಂದು ನವಿರಾದ ಪ್ರೇಮ ಪ್ರಸಂಗ, ದಶಕಗಳ ಕೆಳಗೆ ಮಲೆನಾಡಿನ ಕೆಲವು ಊರುಗಳಲ್ಲಿ ಇದ್ದ ಹಿಂದೂ-ಮುಸ್ಲಿಂ ಕೋಳಿ ಜಗಳ, ಕ್ರಿಕೆಟ್‌ ಮ್ಯಾಚ್‌ ಸೇರಿಕೊಂಡಿದೆ. ಆದರೆ, ಮೂಲ ಕಥೆಗೆ ಧಕ್ಕೆಯಾದಂತೆ ಅನ್ನಿಸಲಿಲ್ಲ.

ಇಡೀ ಚಿತ್ರ ಲವಲವಿಕೆಯಿಂದ ಕೂಡಿದೆ ಮತ್ತು ಪಾತ್ರಧಾರಿಗಳು ಸಹಜವೆನ್ನಿಸುವಂತೆ ನಟಿಸಿದ್ದಾರೆ. ಕಾಲೇಜು ಹುಡುಗರ ಸನ್ನಿವೇಶಗಳಲ್ಲಿ, ತೇಜಸ್ವಿಯವರ ನವಿರಾದ ಹಾಸ್ಯಪ್ರಜ್ಙೆಯನ್ನು ಹಾಗೆಯೇ ಉಳಿಸಿ, ಎಲ್ಲೂ ಅತಿರೇಕಕ್ಕೆ ಹೋಗದಂತೆ ಕಾಯ್ದುಕೊಳ್ಳುವುದರಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಎಲ್ಲೂ ಬೋರಾಗದಂತೆ, ಈ ಚಿತ್ರವನ್ನು ʻcrowd fundinǵ ಮೂಲಕ ತಯಾರಿಸಿದರು ಎನ್ನುವುದನ್ನು ಟೈಟಲ್‌ ಕಾರ್ಡಿನಲ್ಲಿ ಓದಿದಂತೆ ಆನ್ನಿಸಿತು. ಅದನ್ನು ಗೂಗಲ್‌ ನಲ್ಲಿ ನೋಡಿ ಖಾತರಿಪಡಿಸಿಕೊಂಡಾಗ, ಇದೊಂದು ʻಡೇರ್‌ ಡೆವಿಲ್ಸ್‌ʼ ತಂಡ ಎನ್ನಿಸಿತು. ಚಿತ್ರಮಂದಿರಗಳು ಮುಚ್ಚುತ್ತಾ, ಎಲ್ಲವೋ OTT ಕಡೆಗೆ ಹೋಗುವ ಸಂದರ್ಭದಲ್ಲಿ, ಯಾವುದೇ ದೊಡ್ಡ ಬ್ಯಾನರ್ ಗಳ ಸಹಾಯವಿಲ್ಲದೆ, ಚಿತ್ರಮಂದಿರಗಳಲ್ಲೇ ತೆರೆ ಕಂಡಿರುವುದು ನಿಜವಾಗಿಯೂ ಬೆರಗಾಗಿಸುವ ವಿಷಯ.

ಲವಲವಿಕೆಯಿಂದ ಸಾಗುವ, ಯಾವುದೇ ಅತಿರೇಕಗಳಿಲ್ಲದ, ಇಂಪಾದ ಹಾಡುಗಳಿರುವ ಈ ಚಿತ್ರ ವ್ಯಾಪಾರ ದೃಷ್ಟಿಯಿಂದ ಯಶಸ್ಸು ಕಾಣಬೇಕು ಮತ್ತು ಕಾಣುತ್ತದೆ ಎನ್ನುವುದು ನನ್ನ ಅನಿಸಿಕೆ. ಕನ್ನಡದ ಮತ್ತು ತೇಜಸ್ವಿಯವರ ಅಭಿಮಾನಿಗಳು ಎಂದು ಪುಟಗಟ್ಟಲೆ ಸ್ಟೇಟಸ್‌ ಹಾಕುವವರು ಹೋಗಿ ನೋಡಿದರೂ ಸಾಕು, ಈ ಚಿತ್ರ ಯಶಸ್ವಿಯಾಗುತ್ತದೆ. ಹಾಗಾಗದಿದ್ದರೆ, ಆ ಸನ್ನಿವೇಶವನ್ನು ತೇಜಸ್ವಿಯವರ ʻಕುಬಿ ಮತ್ತು ಇಯಾಲʼ ಕಥೆಯ ಕೊನೆಯ ವಾಕ್ಯವೇ ಸಮರ್ಪಕವಾಗಿ ಉತ್ತರಿಸುತ್ತದೆ….

ʻಅದೊಂದು ಇತಿಹಾಸದ ವ್ಯಂಗ್ಯ ಮತ್ತು ಕಾಲಪುರುಷನ ಅಪಹಾಸ್ಯ.ʼ


  • ಮಾಕೋನಹಳ್ಳಿ ವಿನಯ್‌ ಮಾಧವ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW