ಸಾವು ಒಂದು ಬೆರಗಾಗಬಹುದೇ? – ಶಾಂತಾ ನಾಗರಾಜ್

ಮನೋವಿಜ್ಞಾನ ಹೇಳುವಂತೆ ಸಂಗಾತಿಯ ಸಾವಿನ ಒತ್ತಡ ಎಲ್ಲ ಒತ್ತಡಕ್ಕಿಂತಾ ಆಳವಾದುದು ಮತ್ತು ಕೊನೆಯಿಲ್ಲದ್ದು. ಗಂಡನಿಗಾಗಲೀ, ಹೆಂಡತಿಗಾಗಲೀ ಈ ನೋವು ಸಮಾನವಾದುದೇ. ಈ ಬಗ್ಗೆ ಖ್ಯಾತ ಮನಃಶಾಸ್ತ್ರಜ್ಞರಾದ ಶಾಂತಾ ನಾಗರಾಜ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಜೋಗಿಯವರು ಬರೆದ ಪುಸ್ತಕ ‘ ಸಾವು ‘ ಓದುವ ಮುನ್ನ , ನನಗೆ ಈ ಸಾವಿನ ವಿಚಾರದಲ್ಲಿ ಹುಟ್ಟಿರುವ ಬೆರಗಿನ ಬಗ್ಗೆ ಬರೆಯಲೇ ಬೇಕೆನಿಸಿತು.

ಜೋಗಿಯವರೇನೋ ಉಪಶೀರ್ಷಿಕೆಯಾಗಿ The art of dying ಎನ್ನುವ ಅಭಿಪ್ರಾಯ ನೀಡಿದ್ದಾರೆ. ಇರಬಹುದೇನೋ. ಆದರೆ ನನ್ನ ಚಿಂತನೆ ಬೇರೆಯದೇ ಪಾತಳಿಯಲ್ಲಿ ನಡೆಯುತ್ತದೆ. ನನ್ನ ಎಂಬತ್ತನೇ ಈ ವಯಸ್ಸಿನವರೆಗೆ ಬಹಳಷ್ಟು ಸಾವುಗಳನ್ನು ನೋಡಿದ್ದೇನೆ ಮತ್ತು ಕೇಳಿದ್ದೇನೆ. ಆದರೆ ನಾನು ಕಂಡ ಒಂದು ಸಾವು ಮತ್ತು ನೇರನೋಡಿದವರಿಂದ ಕೇಳಿದ ಎರಡು ಸಾವುಗಳು ನನಗೆ ಬಹಳ ಬೆರಗನ್ನು ತಂದಿತ್ತಿದೆ. ಈ ಮೂರೂ ಜನರೂ ಅತ್ಯಂತ ಸಾಮಾನ್ಯರು. ದಾನಧರ್ಮಗಳನ್ನು ಅತಿಯಾಗಿ ಮಾಡಿದವರಲ್ಲ. ಪೂಜೆ ಪುನಸ್ಕಾರಗಳೆಂದು ಸಮಯ ಕಳೆದವರಲ್ಲ. ಯಾತ್ರೆ ತೀರ್ಥಗಳೆಂದು ಊರೂರು ಸುತ್ತಿದವರೂ ಅಲ್ಲ. ತಿಂಗಳು ವರ್ಷಗಳ ಕಾಲ ಹಾಸಿಗೆ ಹಿಡಿದವರಲ್ಲ. ಯಾವ ಕರ್ತವ್ಯಗಳನ್ನೂ ಉಳಿಸಿದವರೂ ಅಲ್ಲ. ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಬದುಕನ್ನು ಸಹಜವಾಗಿ ಸ್ವೀಕರಿಸಿದವರು ಮತ್ತು ಸಾವನ್ನೂ ಅಷ್ಟೇ ಸಹಜವಾಗಿ ಸ್ವೀಕರಿಸುತ್ತಾ ನಡೆದುಬಿಟ್ಚವರು!


ಫೋಟೋ ಕೃಪೆ : google

ಮೊದಲನೆಯದು ನನ್ನ ಮುತ್ತಜ್ಜಿಯ ಸಾವನ್ನು ಕಣ್ಣಾರೆ ಕಂಡ ನನ್ನಮ್ಮ ಹೇಳುತ್ತಿದ್ದುದು. ತೊಂಬತ್ತೆಂಟು ವರ್ಷದ ಈ ಅಜ್ಜಿ, ಮಗ, ಸೊಸೆ ಎಲ್ಲರನ್ನೂ ಕಳೆದುಕೊಂಡು ಮೊಮ್ಮಗನ ಮನೆಯಲ್ಲಿರುತ್ತಿದ್ದರು. ಸಾಯುವ ದಿನ ಮಧ್ಯಾಹ್ನ ಮೂರು ಗಂಟೆಗೆ ತಾವೇ ಒಂದು ಚಾಪೆಯನ್ನು ವರಾಂಡಾದಲ್ಲಿ ಹಾಸಿಕೊಂಡು, ಮರಿಮಗನಿಗೆ “ ನಿನ್ನಪ್ಪನ ಆಫೀಸೀಗೆ ಹೋಗಿ ತಕ್ಷಣ ಬರಲು ಹೇಳು “ ಎಂದು ಸುರಿ, ಮನೆಯ ಸಮಸ್ತರನ್ನೂ ತನ್ನ ಸುತ್ತ ಕುಳಿತುಕೊಳ್ಳಲು ಹೇಳಿ, ಮೆಲ್ಲನೆಯ ಧನಿಯಲ್ಲಿ ಹೇಳಲು ಪಕ್ರಮಿಸಿದರಂತೆ “ ಈಗ ನನ್ನ ಪಾದಗಳ ಬೆರಳುಗಳಲ್ಲಿದ್ದ ಅಭಿಮಾನಿ ದೇವತೆಗಳು ಹೊರಟರು ಕೃಷ್ಣಾರ್ಪಣ. ಈಗ ಪಾದಗಳಲ್ಲಿದ್ದ ದೇವತೆಗಳು ಹೊರಟರು ಕೃಷ್ಣಾರ್ಪಣ“ ಹೀಗೇ ನಖದಿಂದ ಪ್ರಾರಂಭಿಸಿ ಶಿಖೆಯ ಕಡೆಗೆ ಬರುವಾಗ, ಹೃದಯದ ಹೆಸರು ಹೇಳುವ ಹೊತ್ತಿಗೆ ಆಫೀಸಿನಿಂದ ಮೊಮ್ಮಗ ( ಅವರ ಹೆಸರೂ ಕೃಷ್ಣ)ಬಂದರು. “ ಕೃಷ್ಣ ಬಂದ. ನನ್ನ ಜೀವ ಕೃಷ್ಣಾರ್ಪಣವಾಯ್ತು “ ಎಂದು ಹೇಳುತ್ತಿರುವಂತೆಯೇ ಅವರ ಜೀವ ಹೋಯಿತಂತೆ. ಇದನ್ನು ಹೇಳುತ್ತಾ ನಮ್ಮನೂ, ಕೇಳುತ್ತಾ ನಾನೂ ಬೆರಗಿನೊಳಗೆ ಮುಳುಗಿಯೇ ಹೋಗುತ್ತಿದ್ದೆವು.

ಎರಡನೆಯದು ನನ್ನ ಹತ್ತಿರದ ಬಂಧುವೊಬ್ಬರದು. ಆತನಿಗೂ ತೊಂಬತ್ತಾರು ವರ್ಷ. ಅಂದು ಬೆಳಿಗ್ಗೆ ಅವರ ಮಗನ ಮಗಳ ಲಗ್ನಪತ್ರಿಕೆ ಸಮಾರಂಭ.
ಮೊಮ್ಮಗಳ ಗಂಡನಾಗುವ ಹುಡುಗನ ಹತ್ತಿರ ಈ ತಾತ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ತಮ್ಮ ಮೊಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಹೇಳಿದ್ದಾರೆ. ಅಂದೇ ರಾತ್ರಿ ಮಲಗುವ ಹೊತ್ತಿಗೆ ಮಗಸೊಸೆಯನ್ನು ಹತ್ತಿರ ಕರೆದು ಸಮಾರಂಭದ ಕೊನೆಗೆ ವಂದನಾರ್ಪಣೆ ಹೇಳುವವರಂತೆ “ ಕಾಯಿಲೆ ಮಲಗಿದ ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡಿರಿ. ಅವಳು ಹೋದ ಮೇಲೆ ನನ್ನನ್ನೂ ತುಂಬಾ ಸುಖವಾಗಿ ನೋಡಿಕೊಂಡಿರಿ. ನಿಮ್ಮ ಮಗಳಿಗೆ ಒಳ್ಳೆಯ ವರ ಸಿಕ್ಕಿದ್ದಾನೆ. ನಿಮ್ಮೆಲ್ಲರಿಗೂ ದೇವರು ಒಳ್ಳೆಯದನ್ನೇ ಮಾಡುತ್ತಾನೆ “ ಎಂದು ಹೇಳಿ ಮಲಗಿ ತುಂಬಾ ಸುಖವಾಗಿ ಸಹಜವೆನಿಸುವಂತೆ ಪ್ರಾಣಬಿಟ್ಚರಂತೆ! ಮಗಸೊಸೆಗೆ ಇದನ್ನು ನಂಬುವುದಕ್ಕೇ ಕೆಲವು ಸಮಯ ಬೇಕಾಯಿತಂತೆ! ಆ ಸೊಸೆ ಹೀಗೆ ಹೇಳುತ್ತಿರುವಾಗ ನನಗಂತೂ ಮೈಮೇಲಿನ ರೋಮಗಳು ನಿಂತು ರೋಮಾಂಚನಗೊಂಡೆ! ಯಾರಿಗಾದರೂ ಹೀಗೆ ವಂದನಾರ್ಪಣೆ ಹೇಳಲು ಸಾಧ್ಯವೇ?.

ಫೋಟೋ ಕೃಪೆ : google

ಮೂರನೆಯದು ಮತ್ತು ನನ್ನನ್ನು ಹೆಚ್ಚು ಕಾಡುವ ಸಾವು ನನ್ನ ಜೀವನ ಸಂಗಾತಿಯದು. ಐವತ್ಮೂರು ವರ್ಷ ಒಟ್ಟಿಗೆ ಬದುಕಿದ್ದೆವು. ದುಃಖಕ್ಕಿಂತಾ ನನ್ನ ಮಟ್ಟಿಗೆ ಸುಖದ ಪಾಲೇ ಹೆಚ್ಚಾಗಿತ್ತು. ಅವರಿಗೆ ಎಪ್ಪತ್ತೆಂಟು ವರ್ಷವಾಯಿತು ನನಗೆ ಎಪ್ಪತ್ತನಾಲ್ಕು. ಆಗ ಮೆಲ್ಲನೆ ಅವರಿಗೆ ಸಾವಿನ ಕನವರಿಕೆ ಪ್ರಾರಂಭವಾಯಿತು. ಹಾಗೆಂದು ಅದನ್ನು ಎಂದೂ ಬಾಯಿಬಿಟ್ಟು ಹೇಳಲಿಲ್ಲ. ಆದರೆ ಈಗ ಅವರ ನಡವಳಿಕೆಗಳನ್ನು ನೆನೆಸಿಕೊಂಡರೆ, ಕನವರಿಕೆ ಇದ್ದಿರಬಹುದೇ ಎನ್ನುವ ಅನುಮಾನ ಬರುತ್ತದೆ. ೨೦೧೬ ನೇ ಇಸವಿ ಅಕ್ಟೋಬರ್ ತಿಂಗಳಲ್ಲಿ , ಮದುವೆಯಾದ ಐದು ವರ್ಷಗಳ ನಂತರ ಮೊಮ್ಮಗಳು ಗರ್ಭಿಣಿ ಎನ್ನುವ ವಿಚಾರ ತಿಳಿದು ನಾವು ದಂಪತಿಗಳು ತುಂಬಾ ಸಂಭ್ರಮಿಸಿದೆವು. ಮೂರನೇ ತಿಂಗಳಲ್ಲಿ ‘ ಮೊಗ್ಗುಮುಡಿಸುವ ‘ ಮನೆಮಟ್ಟಿಗೆ ಆಚರಿಸುವ ಸಮಾರಂಭವನ್ನೂ ಇವರು ಗ್ರಾಂಡ್ ಆಗಿಯೇ ನಮ್ಮ ಮನೆಯಲ್ಲಿಯೇ ಮಾಡಬೇಕೆಂದು ಆಗ್ರಹಿಸಿದರು. ಅದೂ ಆಯಿತು. “ ಸೀಮಂತಕ್ಕೆ ಸೀರೆ ಕೊಡಿಸುತ್ತೇನೆ ಬಾ “ ಎಂದು ಮೊಮ್ಮಗಳಿಗೆ ದುಂಬಾಲು ಬಿದ್ದರು. ಅದಕ್ಕಿನ್ನೂ ಸಮಯವಿದೆ ಇನ್ನೊಂದೆರಡು ತಿಂಗಳ ನಂತರ ಕೊಳ್ಳೋಣವೆಂದು ಮೊಮ್ಮಗಳು ಮತ್ತು ನಾವೆಲ್ಲರೂ ಎಷ್ಟೇ ಹೇಳಿದರೂ ಕೇಳದೇ ಹಠ ಹಿಡಿದು ಎಲ್ಲರನ್ನೂ ಅಂಗಡಿಗೆ ಹೊರಡಿಸಿದರು. ಅಂಗಡಿಯಲ್ಲಿ ನಾವು ಯಾರೂ ನಿರೀಕ್ಷಿಸದಷ್ಟು ದುಬಾರಿಯಾದ ಧಾರೆ ಸೀರೆಯಷ್ಟು ಗ್ರಾಂಡ್ ಆಗಿದ್ದ ಸೀರೆಯನ್ನು ಅವಳು ಬೇಡ ಬೇಡವೆಂದರೂ ಬಲವಂತ ಮಾಡಿ ಕೊಡಿಸಿದರು.

ಮನೆಯಲ್ಲಿ ನಾವಿಬ್ಬರೇ ಇರುವಾಗಲೂ ಹಾಸ್ಯ ಮಾಡಿಕೊಂಡು ಇರುತ್ತಿದ್ದ ಜೀವ ಅವರದು. ನಾನೆಷ್ಟೇ ಸಾಹಿತ್ಯ ಬರೆಯಲಿ, ಕೌನ್ಸಿಲಿಂಗ್ ಮಾಡಲಿ, ಭಾಷಣ ಮಾಡಲಿ, ನನಗೆ ಅವರಷ್ಟು ತಿಳುವಳಿಕೆ ಇಲ್ಲ. ಅವರು ನನಗಿಂತ ನಾಲ್ಕೂವರೆ ವರ್ಷವಷ್ಟೇ ದೊಡ್ಡವರಾದರೂ, ಅವರ ಕಣ್ಣಲ್ಲಿ ಅವರು ತುಂಬಾ ದೊಡ್ಡವರು ಮತ್ತು ಅನುಭವಿ. ನಾನು ಅನನುಭವಿ ಮತ್ತು ಏನೂ ತಿಳಿಯದ ಸಣ್ಣ ಮಗು! ಈ ಬಗ್ಗೆ ಎಷ್ಟೋ ವಾದ ವಿವಾದಗಳಾದರೂ , ಅವರ ‘ ಗಂಡು ‘ ಎನ್ನುವ ಅಹಂ ನನ್ನನ್ನು ಸದಾ ಪೆದ್ದು ಮಾಡುವುದಕ್ಕಾಗಿಯೇ ಹಂಬಲಿಸುತ್ತಿತ್ತು. ಅವರ ಕೆಲವು ಹಾಸ್ಯ ಬಾಲಿಶವೆನಿಸಿದರೂ, ಅವರಿಗೆ ಬೇಸರವಾಗಬಾರದೆಂದು ನಕ್ಕು ಸುಮ್ಮನಾಗುತ್ತಿದ್ದೆ. ಇತ್ತೀಚೆಗೆ ಅವರ ಹೊಸದೊಂದು ಆಟ ಶುರುವಾಯಿತು. ನಾನು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾಲಿನಲ್ಲಿ ಸೋಫಾದ ಮೇಲೆ ಕುಳಿತ ಇವರು , ನಾನು ಹೊರಬರುವ ವೇಳೆಗೆ ಕಣ್ಣುಮುಚ್ಚಿಕೊಂಡು, ತಲೆಯನ್ನು ಪಕ್ಕಕ್ಕೆ ವಾಲಿಸಿ, ನಾಲಿಗೆಯನ್ನು ಸ್ವಲ್ಪವೇ ಹೊರಚಾಚಿ ಸತ್ತಂತೆ ಕುಳಿತಿರುತ್ತಿದ್ದರು. ಮೊದಲ ಬಾರಿ ನೋಡಿದಾಗ ನಿಜಕ್ಕೂ ಭಯವಾಯಿತು. ಹತ್ತಿರ ಹೋಗಿ ಮುಟ್ಟಿದೆ. ಕಿಸಿಕಿಸಿ ನಗುತ್ತಾ “ ಹೆದರಿದೆಯಾ “ ಎಂದರು. ನನಗೆ ಕೋಪ ಬಂತು. ಮುಖ ಊದಿಸಿಕೊಂಡು ಸುಮ್ಮನಾದೆ. ಕೆಲವೊಮ್ಮೆ ಮೌನ ಕೂಡ ಒಂದು ಸಂದೇಶವನ್ನು ಕೊಡುತ್ತದೆಯಲ್ಲ. ಹಾಗಾಗಿ ಸ್ವಲ್ಪದಿನ ಈ ಹೆದರಿಸುವಿಕೆಗೆ ಬ್ರೇಕ್ ಬಿತ್ತು. ಆದರೂ ಆಗೊಮ್ಮೆ ಈಗೊಮ್ಮೆ ಪುನರಾವರ್ತನೆಯಾಗುತ್ತಿತ್ತು. ನಾನು ಪ್ರತಿಕ್ರಯಿಸುವುದನ್ನೇ ಬಿಟ್ಟೆ.


ಫೋಟೋ ಕೃಪೆ : google

ಅಂದು ಏಪ್ರಿಲ್ ೨೭ ನೇ ತಾರೀಖು ೨೦೧೭ ನೇ ಇಸವಿ. ರಾತ್ರಿ ಎಂಟೂವರೆ. ನಮ್ಮ ರಾತ್ರಿಯೂಟ ತುಂಬಾ ಮಿತಿಯಲ್ಲಿತ್ತು. ಮಧ್ಯಾಹ್ನದ ಊಟದ ನಂತರ ಉಳಿದುದನ್ನು ರಾತ್ರಿ ಕಲೆಸಿ ಇಬ್ಬರೂ ಸಣ್ಣ ಸಣ್ಣ ಬಟ್ಟಲುಗಳಲ್ಲಿ ಬಡಿಸಿಕೊಂಡು ತಿನ್ನುತ್ತಿದ್ದೆವು. ಇವರು ಟಿವಿ ನೋಡುತ್ತಾ ದಿವಾನದ ಮೇಲೆ ಕುಳಿತಿದ್ದರು. ನಾನು ಅನ್ನ ಕಲೆಸಿ ತರಲು ಒಳಹೋದೆ. ಕಲೆಸಿದನ್ನದ ಬಟ್ಟಲು ಹಿಡಿದು ಹೊರಬಂದರೆ ಮತ್ತೆ ಇವರದು ಯಥಾಪ್ರಕಾರ ಸಾಯುವ ಪೋಸ್! ನನಗೆ ರೇಗಿತು. “ ಸಾಕಪ್ಪ ನಿಮ್ಮ ತಮಾಷೆ. ಅದೆಷ್ಟು ಸಲ ಹೀಗೇ ಆಡ್ತೀರಿ “ ಎಂದೆ . ನಗುತ್ತಾ ಕುಳಿತು “ ನೀನು ಹೆದರೋದೇ ಇಲ್ವಲ್ಲೇ “ ಎಂದರು. ನನ್ನ ಕೋಪ ಇನ್ನೂ ಇಳಿದಿರಲಿಲ್ಲ. ಮೌನಕ್ಕೆ ಶರಣಾದೆ. ಅವತ್ತು ಸೊಪ್ಪಿನ ಬಸ್ಸಾರು ಮಾಡಿದ್ದೆ. ರಾತ್ರಿಯೂ ಇಷ್ಟಪಟ್ಟು ಒಂದು ಲೋಟ ಸಾರು ಕುಡಿದರು. “ ಯಾಕೋ ಎದೆಯುರಿಯುತ್ತಿದೆ ಅರ್ಧ ಲೋಟ ಹಾಲು ಕೊಡು “ ಎಂದರು. ಒಂದು ಲೋಟದ ತುಂಬಾ ಹಾಕಿ ಕೊಟ್ಟು “ ಸಾರು ಕುಡಿದದ್ದಕ್ಕೆ ಎದೆಯುರಿ ಬಂದಿರಬಹುದು. ಅರ್ಧ ಲೋಟವೇಕೆ? ಪೂರಾ ಲೋಟದ ಹಾಲು ಕುಡಿಯಿರಿ “ ಎಂದೆ. ನಕ್ಕು “ ಈಗರ್ಧ ಕುಡಿಯುತ್ತೇನೆ. ಮತ್ತು ಎದೆಯುರಿದರೆ ಉಳಿದದ್ದನ್ನು ಆಮೇಲೆ ಕುಡಿಯುತ್ತೇನೆ ಸರಿನಾ “? ಎಂದವರು “ ಮರೆಯದೇ ಅಡುಗೆಮನೆ ಲೈಟ್ ಆರಿಸಿ ಮಲಗಿಕೋ. ನಿನ್ನೆ ಮರೆತಿದ್ದಿ “ ಎಂದು ಎಚ್ಚರಿಸಿ ತಮ್ಮ ಕೋಣೆಗೆ ತೆರಳಿದರು.

ಏಪ್ರಿಲ್ ೨೮ ಶುಕ್ರವಾರ ಬೆಳಗಿನ  ಜಾವ ೩:೫೦ ಕ್ಕೆ ಎಚ್ಚರವಾಯಿತು. ಬಚ್ಚಲು ಮನೆಯಲ್ಲಿ ಕಮೋಡ್ ಟ್ಯಾಂಕಿನಿಂದ ನೀರು ಬಿಟ್ಟದ್ದು ಕೇಳಿಸಿತು. ‘ ಇವರು ಎದ್ದಿದ್ದಾರೆ. ಕಮೋಡ್ ಟ್ಯಾಂಕ್ ಖಾಲಿಯಾಗಿದೆ, ಅದು ತುಂಬಲಿ ‘ ಎಂದು ಮಲಗಿದೆ. ನಾಲ್ಕುಗಂಟೆಗೆ ಮತ್ತೆ ಎಚ್ಚರವಾಯಿತು. ಬಚ್ಚಲಮನೆಗೆ ಹೋಗಲು ಇವರ ರೂಮಿನ ಮುಂದೆ ಬಂದೆ. ರೂಮಿನಲ್ಲಿ ಲೈಟ್ ಉರಿಯುತ್ತಿತ್ತು. ಆ ಹೊತ್ತಿನಲ್ಲೂ ಕಾಲುಗಳನ್ನು ತೊಳೆದುಕೊಂಡದ್ದರಿಂದ ಅವರ ಪಾದಗಳಮೇಲೆ ನೀರಿನ ಹನಿಗಳಿದ್ದವು. ಕಾಲನ್ನು ಒರೆಸಿಕೊಳ್ಳಲು ಟವೆಲ್ ಹಿಡಿದ ಅವರ ಬಲಗೈಯನ್ನು ಮಂಚದ ಮೇಲೆ ಊರಿದ್ದರು. ಕುಳಿತಿದ್ದರೂ ಅರ್ಧ ಮಲಗಿದಂತೆ ತಲೆ ಬಲಕ್ಕೆ ವಾಲಿಕೊಂಡು ಮಂಚದ ಹಿಂದಿನ ಗೋಡೆಗೆ ಒರಗಿತ್ತು. ಕಣ್ಣುಗಳು ಮುಚ್ಚಿದ್ದವು. ಬಾಯಿ ಸಹ ಮುಚ್ಚಿತ್ತು. ಬಲಗೆನ್ನೆ ಸ್ವಲ್ಪ ಜೋತು ಬಿದ್ದಿತ್ತು. ತಕ್ಷಣ ನನಗೆ ಗೊತ್ತಾಗಿ ಹೋಯಿತು. ಓಡುತ್ತಾ ಹೋಗಿ ಮೂರು ನಾಲ್ಕು ಮನೆಯ ನಂತರ ಇದ್ದ ಡಾಕ್ಟರನ್ನು ಕರೆತಂದೆ. ಅವರು ಪ್ರಥಮ ಚಿಕಿತ್ಸೆಯಾಗಿ ಎದೆ ಗುದ್ದಿ, ಬಾಯಿಗೆ ಉಸಿರು ತುಂಬಲು ಯತ್ನಿಸಿ ಸೋತರು. “ ಇಲ್ಲಮ್ಮ ಇದು ಮ್ಯಾಸೀವ್ ಹಾರ್ಟ್ ಅಟ್ಯಾಕ್. ಅವರಿಗೇ ಗೊತ್ತಾಗಿಲ್ಲ . ಮೈ ಇನ್ನೂ ಬಿಸಿಯಿದೆ. ಪ್ರಾಣ ಹೋಗಿ ಹತ್ತು ನಿಮಿಷಗಳಾಗಿರಬಹುದು “ ಎಂದರು. ಮಂಚದ ಪಕ್ಕದ ಟೀಪಾಯಿಯ ಮೇಲಿದ್ದ ಲೋಟದಲ್ಲಿ ಉಳಿದಿದ್ದ ಹಾಲು ಅನಾಥವಾಗಿ ಕಾಣಿಸಿತು. ಮರುದಿನವೇ ಮೊಮ್ಮಗಳಿಗೆ ಶ್ರೀಮಂತದ ಕಾರ್ಯಕ್ರಮವಿತ್ತು.

ಫೋಟೋ ಕೃಪೆ : google

ನನಗೆ ಈ ಸಾವನ್ನು ಒಪ್ಪಿಕೊಳ್ಳುವುದಕ್ಕೇ ಬಹಳ ದಿನಗಳು ಬೇಕಾದವು. ಮನೋವಿಜ್ಞಾನ ಹೇಳುವಂತೆ ಸಂಗಾತಿಯ ಸಾವಿನ ಒತ್ತಡ ಎಲ್ಲ ಒತ್ತಡಕ್ಕಿಂತಾ ಆಳವಾದುದು ಮತ್ತು ಕೊನೆಯಿಲ್ಲದ್ದು. ಗಂಡನಿಗಾಗಲೀ ಹೆಂಡತಿಗಾಗಲೀ ಈ ನೋವು ಸಮಾನವಾದುದೇ. ಮಾತನಾಡದೇ ಮೌನವಾಗಿಯೇ ಸಹಿಸಿದರೂ ಇದರ ಆಳಅಗಲಗಳು ಸಹಿಸುವವರಿಗೆ ಮಾತ್ರ ಅರಿವಿಗೆ ಬರುವಂಥಾದ್ದು. ನನಗೆ ಈ ವಿಷಯ ಬರೆಯಲು ಆರುವರ್ಷಗಳು ಬೇಕಾದವು. ಇಂದು ಮತ್ತೆ ಏಪ್ರಿಲ್ ೨೮ ಶುಕ್ರವಾರ!

ಈ ಮೂರೂ ಸಾವುಗಳನ್ನು ಅಥವಾ ಇಂಥಾ ಅನೇಕ ಸಾವುಗಳನ್ನು ಸಮಾಜ ಪಾಪ ಪುಣ್ಯಗಳ ಲೆಕ್ಕದಲ್ಲಿ, ಅಥವಾ ಕರ್ಮಸಿದ್ಧಾಂತದಡಿಯಲ್ಲಿ ವಿಶ್ಲೇಷಿಸುತ್ತದೆ. ಆದರೆ ನನಗನಿಸುವುದು ನಾವು ಹೇಗೆ ಬದುಕನ್ನು ಸ್ವೀಕಾರಕ್ಕೆ ಒಳಪಡಿಸಿಕೊಳ್ಳುತ್ತೇವೊ ಹಾಗೇ ಸಾವು ಸಹ ಸ್ವೀಕಾರಕ್ಕೆ ಅರ್ಹವಾಗಿ ಬಿಡಬಹುದು. ಗೊತ್ತಿಲ್ಲ, ಇದರ ಅರ್ಥ ಹೀಗೇ ಎಂದು ಯಾರಿಂದಲೂ ವಾಸ್ತವದ ನೆಲೆಯಲ್ಲಿ ವಿವರಿಸಲಾಗಿಲ್ಲ. ಈ ಬಗ್ಗೆ ಜೋಗಿಯವರು ಏನು ಹೇಳಿದ್ದಾರೋ ಈಗ ಓದುತ್ತೇನೆ. ‘ ಸಾವು ‘ ನನ್ನ ಕೈಲಿದೆ.


  • ಶಾಂತಾ ನಾಗರಾಜ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW