ನಟ ಧನಂಜಯ್ ಯವರ ಮದುವೆಯನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಅದನ್ನು ಒಬ್ಬ ಜನಪ್ರಿಯ ನಟನ ಮದುವೆಯನ್ನಷ್ಟೇ ಆಗಿ ಹೀಗೆ ನೋಡಿ ಹಾಗೆ ಬಿಡಬೇಕೇ ವಿನಃ ಅದರ ಇಂಚಿಂಚನ್ನೂ ಕೆದಕುತ್ತಾ ಹೋದಲ್ಲಿ ಅದು ಜಸ್ಟ್ ತೌಡು ಕುಟ್ಟುವ ಕೆಲಸದಂತೆ ಅಥವಾ ಕಾಲದ ಕೊಲೆಯಂತೆ ಅನಿಸಬಹುದು. ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಅಂತೂ ಇಂತೂ ಚಿತ್ರನಟ ಡಾಲಿ ಧನಂಜಯ್ ರ ಮದುವೆ ಮುಗಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕಡಿಮೆ ಮಿನಿ ಕುಂಭಮೇಳದಷ್ಟೇ ಪ್ರಚಾರ ಗಿಟ್ಟಿಸಿಕೊಂಡಿದ್ದ “ಡಾಲಿ ಮದುವೆ” ಜಾಲಿಯಾಗಿಯೇ ಮುಗಿದು ಜನ ನಿಟ್ಟುಸಿರುಬಿಡುವಂತಾಗಿದೆ.
ಯಾಕಪ್ಪಾ ಹೀಗೆಲ್ಲಾ ಹೇಳ್ತಾ ಇದೀನಿ ಅಂತ ನಿಮಗೆ ಒಂದು ಮಟ್ಟಕ್ಕೆ ಊಹಿಸಿರಬಹುದು. ಈ ವ್ಯಕ್ತಿ ತನ್ನ ಪ್ರತಿಭೆಯಿಂದ ದೊರೆತ ಪಾತ್ರಗಳಿಂದ, ಯಾವುದೇ ಗಾಡ್ ಫ಼ಾದರ್ ಇಲ್ಲದೇ ಚಿತ್ರರಂಗದಲ್ಲಿ ಬೆಳೆದು ನಿಂತು ” ಬಡವರ ಮಕ್ಳು ಬೆಳೀಬೇಕು ” ಎನ್ನುವ ಟ್ಯಾಗ್ ಲೈನಿಗೆ ಓಂಕಾರ ಹಾಕಿಕೊಟ್ಟು ಸ್ವಲ್ಪ ಭಿನ್ನವಾಗಿ ಗುರುತಿಸಿಕೊಂಡಿದ್ದ . ಜೊತೆಗೆ ತನ್ನದೇ ಆದ ಕೆಲ ವೈಯಕ್ತಿಕ ಆದರ್ಶಗಳನ್ನು ಆಗಾಗ್ಗೆ ಮೀಡಿಯಾಗಳ ಮೂಲಕ ಹಂಚಿಕೊಳ್ಳುವ ಮೂಲಕ ಈ ಮನುಷ್ಯ ಸ್ವಲ್ಪ ಡಿಫ಼ರೆಂಟು ಎನ್ನುವಂತೆ ಇದ್ದವ.
ಇಂತಿಪ್ಪ ನಮ್ಮ ಧನಂಜಯ ತನ್ನ ಮದುವೆ ವಿಷಯದಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದು ಹೇಗಿತ್ತೆಂದರೆ ಒಂದು ಬಿಗ್‌ಬಜೆಟ್ ನ ಹೊಸ ಸಿನಿಮಾ ಪ್ರಮೋಷನ್‌ಗೂ ಈ ರೇಂಜಿನ ಪ್ರಚಾರ ಸಿಕ್ಕಿರಲಿಲ್ಲ. ಅಷ್ಟೇಕೆ..ಈ ಹಿಂದೆ ಬೇರೆ ಯಾವ ನಟರ ಮದುವೆಗೂ ಇಷ್ಟು ಅದ್ಭುತ ಪಬ್ಲಿಸಿಟಿ ಇರಲಿಲ್ಲ. ಈ ಪಬ್ಲಿಸಿಟಿ ಅನ್ನೋದು ಇವರು ಆಹ್ವಾನ ಪತ್ರಿಕೆ ಕೊಡುವುದರಿಂದ ಹಿಡಿದು ಮೊನ್ನೆ ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೂ ಮುಂದುವರೆದಿತ್ತು. ಥ್ಯಾಂಕ್ಸ್ ಟು ಸೋಷಿಯಲ್ ಮೀಡಿಯಾ !!

ಫೋಟೋ ಕೃಪೆ :google
ಆದರೆ ಧನಂಜಯ್ ರ ಮದುವೆ ಆಚರಣೆಗೆ ಸಾಕಷ್ಟು ಕಡೆಯಿಂದ ಮಿಶ್ರ ಪ್ರತಿಕ್ರಿಯೆಗಳು ಭೋರ್ಗರೆದು ಬರುತ್ತಲೇ ಇದ್ದವು. ಅದರಲ್ಲಿ ಮುಖ್ಯವಾಗಿ, ಕುವೆಂಪು, ಬಸವಣ್ಣನವರ ತತ್ವ , ಸರಳತೆ , ವೈಚಾರಿಕತೆ, ಬಡತನ….. ಅದೂ ಇದೂ ಅಂತ ಹೇಳಿಕೊಂಡೇ ಬಂದಿದ್ದ ಡಾಲಿ ಹೀಗೆ ಅದ್ದೂರಿಯಾಗಿ ಮದುವೆಯಾಗಿದ್ದು ಆಚಾರ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬಂತಾಯ್ತು ಎನ್ನುವ ಕಾಮೆಂಟು ಒಂದೆಡೆಯಾದರೆ, ಅವರು ಮದುವೆಯಲ್ಲಿ ಪಾಲಿಸಿದ ಕೆಲವು ಸನಾತನ ಆಚರಣೆಗಳು ಢಾಂಭಿಕ ಹಾಗೂ ಮೌಢ್ಯತನದಿಂದ ಇದ್ದವೆಂದು ಒಂದಷ್ಟು ಮಂದಿ ಟೀಕಿಸಿದ್ದರು. ಸರಳತೆ ಬಗ್ಗೆ ಪಾಠ ಮಾಡುವ ಜನ ಕೋಟಿಗಟ್ಟಲೆ ಖರ್ಚು ಮಾಡಿ ಮದುವೆ ಆಗಿದ್ದೇಕೆ ಎಂದು ಒಂದು ವರ್ಗ ಪ್ರಶ್ನಿಸಿದರೆ , ಹೀಗೆ ಅದ್ದೂರಿಯಾಗಿ ಮದುವೆಯಾಗಿದ್ದಕ್ಕೆ ನೂರಾರು ಕುಟುಂಬಗಳಿಗೆ ಉದ್ಯೋಗ ಸಿಕ್ಕಿತು ಎಂಬ ಸಮರ್ಥನೆ ಮತ್ತೇ ಹಲವರಿಂದ ಬಂದು ಇಡೀ ಸೋಷಿಯಲ್ ಮೀಡಿಯಾವೇ ಡಾಲಿಮಯವಾಗಿತ್ತು !
ಬಹುಶಃ ಜನರಲ್ಲಿ ಈ ಮಟ್ಟದ ಚರ್ಚೆಯ ಆಸಕ್ತಿ ರಾಜ್ಯದ ದೇಶದ ಜ್ವಲಂತ ಸಮಸ್ಯೆಗಳ ಬಗೆಗೆ ಚರ್ಚೆಯಾಗಿದ್ದಲ್ಲಿ ಸಾಮಾಜಿಕವಾಗಿ ಒಂದಷ್ಟು ವಿಚಾರವಂತಿಕೆ ಅಥವಾ ಪ್ರಜ್ಞಾವಂತಿಕೆಯಾದರೂ ಬೆಳೆಯುತ್ತಿತ್ತೇನೋ !
ಅದಿರಲಿ….ಈಗ ಧನಂಜಯ್ ಮದುವೆ ಬಗೆಗಿನ ಒಟ್ಟಾರೆ ಚರ್ಚೆ ಸಂವಾದ ಕಾಮೆಂಟುಗಳ ಕುರಿತಾಗಿ ಸ್ವಲ್ಪಮಟ್ಟಿಗೆ ಕಣ್ಣಾಡಿಸುವುದಾದರೆ. ಅಸಲಿಗೆ ಮದುವೆ ಎನ್ನುವುದು ಅವರವರ ವೈಯಕ್ತಿಕ ಆಚರಣೆ. ಪ್ರತಿಯೊಬ್ಬರಿಗೂ ಹೀಗೇನೇ ಮದುವೆಯಾಗಬೇಕೆಂಬ ಕನಸು ಇದ್ದೇ ಇರುತ್ತೆ. ಕೆಲವೊಮ್ಮೆ ಸಂಧರ್ಭಕ್ಕನುಸಾರವಾಗಿ ವೈಯಕ್ತಿಕ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೂ ಮದುವೆಯಾಗಬೇಕಾದ ಒತ್ತಡವೂ ಬರಬಹುದು. ಬಹುಶಃ ಧನಂಜಯ್ ತನ್ನ ಮದುವೆ ಬಗ್ಗೆ ಅಂದುಕೊಂಡಿದ್ದು ಒಂದಾದರೆ, ಆನಂತರದ ಬೆಳವಣಿಗೆಯಲ್ಲಿ ಆಗಿದ್ದು ಮತ್ತೊಂದು ಆಗಿದ್ದಿರಬಹುದು. ಹೀಗಾಗಿ ಆತ ಈ ಮೊದಲು ಹೇಳಿಕೊಂಡಿದ್ದಕ್ಕೂ ಆಚರಣೆಗೂ ವ್ಯತ್ಯಾಸವಿರಬಹುದು.
ಓಟು ಪಡೆಯುವಾಗ ಆಕಾಶವನ್ನೇ ಧರೆಗಿಳಿಸುತ್ತೇವೆಂದು, ಎಲ್ಲರಿಗೂ ಹಣ ಉದ್ಯೋಗ ಸೂರು ಕೊಡುತ್ತೇವೆಂದು ಸುಳ್ಳು ಭರವಸೆ ಕೊಟ್ಟು ಆನಂತರ ಅದರ ಬಗ್ಗೆ ಚಕಾರ ಎತ್ತದಿರುವ ನಿಯತ್ತಿಲ್ಲದ ರಾಜಕೀಯ ನಾಯಕರನ್ನೇ ಪ್ರಶ್ನಿಸದ ಜನ, ಒಬ್ಬ ಸಿನಿಮಾನಟನ ವೈಯಕ್ತಿಕ ಅಭಿಪ್ರಾಯಗಳನ್ನೇ ಹಿಡಿದು ಜಾಲಾಡುವುದರಲ್ಲಿ ಅರ್ಥವಿದೆಯೇ ? ಅಸಲು ಧನಂಜಯ್ ಗೆ ಈ ವಿಚಾರದಲ್ಲಿ ಯಾವುದಕ್ಕೆ ಮತ್ತು ಯಾರಿಗೆ ಉತ್ತರದಾಯಿತ್ವವಿರಲು ಸಾಧ್ಯ ಹೇಳಿ..? ಇಲ್ಲಿ ಆಚಾರ ಹೇಳಲು ಆತ ಸಂತ, ರಾಜಕೀಯ ನಾಯಕ, ಮಠಾಧೀಶ ಅಥವಾ ಸದ್ಗುರು ಅಲ್ಲ ಎಂದಮೇಲೆ ಆಚಾರ ಹೇಳಿ ಬದನೆಕಾಯಿ ತಿನ್ನುವ ಪ್ರಶ್ನೆ ಎಲ್ಲಿಂದ ಬಂತು ?

ಫೋಟೋ ಕೃಪೆ :google
ಇನ್ನು, ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎನ್ನುವ ವರ್ಗೀಕರಣವೇ ಹಾಸ್ಯಾಸ್ಪದ. ಸರಳವಾಗಿ ಮದುವೆಯಾದರೂ ಅದ್ದೂರಿಯಾಗಿ ಆದರೂ ಕೊನೆಗೆ ಮದುವೆಯಾದ ನಂತರ ಅವರನ್ನು ಕರೆಯುವುದು ಗಂಡ ಹೆಂಡತಿಯೆಂದೇ , ಹೂಡುವುದು ಅದೇ ಸಂಸಾರವೇ. ! ಅವರವರ ಲೆವೆಲ್ಲಿಗೆ ತಕ್ಕಂತೆ ಖರ್ಚು ವೆಚ್ಚ ಇರುತ್ತವೆ ಅಷ್ಟೇ.
ಡಾಲಿ ತಮ್ಮಸಂಪ್ರದಾಯ ನಂಬಿಕೆಗನುಗುಣವಾಗಿ ಅಥವಾ ಅವರ ಜಾತಿ ಧರ್ಮದ ( ಅವರು ಯಾವ ಸಮುದಾಯದವರೋ ನನಗೆ ಗೊತ್ತಿಲ್ಲ.! ) ರೀತಿ- ರಿವಾಜುಗಳಿಗೆ ಬದ್ದರಾಗಿ ಕೆಂಡ ತುಳಿಯುವುದೂ ಸೇರಿದಂತೆ ಕೆಲವೊಂದು ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ಮೌಢ್ಯವಿರುತ್ತೋ ಸನಾತನ ಧರ್ಮ ಸಂಪ್ರದಾಯವಿರುತ್ತೋ ಅದು ಅವರಿಗೆ ಬಿಟ್ಟಿದ್ದು. ಮತ್ತೊಬ್ಬರ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳನ್ನು ಗೌರವಿಸುವುದು ಇತರರ ಕರ್ತವ್ಯ ಮತ್ತು ಕಾಮನ್‌ಸೆನ್ಸು ! ಹೀಗಿದ್ದಾಗ ಅವರ ಮದುವೆ ಆಚರಣೆಯಲ್ಲಿ ತಪ್ಪೇನು ಬಂತು..?
ಕೆಲವು ಆದರ್ಶಗಳು, ತತ್ವಗಳು ಬಾಯಲ್ಲಿ ಹೇಳೋದಕ್ಕಷ್ಟೇ ಹಿತವಾಗಿರುತ್ತೆ ಆದರೆ ಅದನ್ನು ಸ್ವತಃ ಪಾಲಿಸಲಿಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಮಾತಿಗೆ ಹೇಳುವುದಾದರೆ ಆದರ್ಶ ಹೇಳಿದವರು ಪಾಲಿಸಲೇ ಬೇಕೆಂದು ಬಯಸುವುದೂ ಸಹಾ ಇಂದಿನ ಜ಼ಮಾನಾದಲ್ಲಿ ಅತಿಯಾಗುತ್ತೆ. ಒಬ್ಬರು ಹೇಳಿದ್ದು ನಮ್ಮ ಜೀವನಕ್ಕೆ ಸರಿ ಎನಿಸಿದರೆ ಪಾಲಿಸೋಣ, ಇಲ್ಲವಾದರೆ ಬೇಡ ….ಸಿಂಪಲ್.
ಧನಂಜಯ್ ರ ಮದುವೆಯನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಅದನ್ನು ಒಬ್ಬ ಜನಪ್ರಿಯ ನಟನ ಮದುವೆಯನ್ನಷ್ಟೇ ಆಗಿ ಹೀಗೆ ನೋಡಿ ಹಾಗೆ ಬಿಡಬೇಕೇ ವಿನಃ ಅದರ ಇಂಚಿಂಚನ್ನೂ ಕೆದಕುತ್ತಾ ಹೋದಲ್ಲಿ ಅದು ಜಸ್ಟ್ ತೌಡು ಕುಟ್ಟುವ ಕೆಲಸದಂತೆ ಅಥವಾ ಕಾಲದ ಕೊಲೆಯಂತೆ ಅನಿಸಬಹುದು. ಎನಿ ವೇ…ಡಾಲಿ ಧನಂಜಯ ದಂಪತಿಗಳಿಗೆ ವೈವಾಹಿಕ ಬದುಕಿನ ಶುಭಾಶಯಗಳು. ಚೆನ್ನಾಗಿರಿ.

ಫೋಟೋ ಕೃಪೆ :google
ಮರೆಯುವ ಮುನ್ನ
ಒಬ್ಬರ ಮದುವೆ, ಗೃಹಪ್ರವೇಶ ಅಥವಾ ಇನ್ನಾವುದೇ ಖಾಸಗೀ ಸಮಾರಂಭವನ್ನು ಕೇವಲ ಸಮಾರಂಭವನ್ನಾಗಿ ನೋಡುವ ಸರಳತೆ- ಸಹೃದಯತೆ ನಮ್ಮದಾಗಬೇಕಿದೆ. ಅದನ್ನು ಬಿಟ್ಟು ಅವರ ಆಚರಣೆ ಸಂಪ್ರದಾಯ ಆಚಾರ ವಿಚಾರಗಳ ಬಗೆಗೆ ಸಾರ್ವಜನಿಕವಾಗಿ ವಿಚಾರ ಸಂಕಿರಣವನ್ನೇರ್ಪಡಿಸಿ ಅದಕ್ಕೆ ಅಗತ್ಯಕ್ಕಿಂತಲೂ ಬಿಲ್ಡಪ್ ಕೊಡುವುದಿದೆಯಲ್ಲಾ ಅದೇ ಮೊದಲ ತಪ್ಪು.
ನಮ್ಮ ದೇಶದಲ್ಲಿ ಸಿನಿಮಾ, ಕ್ರಿಕೆಟ್ ರಾಜಕೀಯ ಕ್ಷೇತ್ರಗಳಲ್ಲಿರುವ ವ್ಯಕ್ತಿಗಳನ್ನು ಅವರ ವರ್ತನೆಗಳನ್ನು ಜನ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಅವರನ್ನು ಹಿಂಬಾಲಿಸಿ ಆರಾಧಿಸುವ ಮಟ್ಟಕ್ಕೂ ಹೋಗುತ್ತಾರೆ, ದೇವರೆಂದೂ ಪೂಜಿಸುತ್ತಾರೆ. ಹೀಗಾಗಿ ಒಮ್ಮೆ ಜನಪ್ರಿಯತೆಯ ಕಿಕ್ಕು ಏರಿಸಿಕೊಂಡಾದ ಮೇಲೆ ಅಂತಹ ಸೆಲೆಬ್ರಿಟಿಗಳ ಮಾತು- ಕತೆ, ವರಸೆಗಳೆಲ್ಲವನ್ನೂ ಅಳೆದು ತೂಗಿ ವಿಮರ್ಶಿಸುವ ಭಾವುಕತೆಗೆ ಜನ ಒಪ್ಪಿಸಿಕೊಳ್ಳುತ್ತಾರೆ.
ಧನಂಜಯ್ ಕೂಡಾ ಸಾರ್ವಜನಿಕ ಜೀವನದಲ್ಲಿರುವ ನಿಧಾನಕ್ಕೆ ಬೆಳೆಯುತ್ತಿರುವ ಜನಪ್ರಿಯ ಸಿನಿಮಾನಟ. ಹೀಗಾಗಿ ತನ್ನ ಯಾವುದೇ ಮಾತುಗಳು, ನಡವಳಿಕೆ- ವರ್ತನೆಗಳನ್ನು ಜನ ಗಮನಿಸುತ್ತಾರೆ ಎಂಬ ಸಾಮಾನ್ಯ ಕನಿಷ್ಠ ಅರಿವನ್ನು ಆತ ಬೆಳೆಸಿಕೊಂಡಲ್ಲಿ, ಮುಂದೆ ತಾನೇ ಸ್ವತಃ ಆಚರಿಸಲಾಗದ ಸರಳತೆ, ವೈಚಾರಿಕತೆ, ಮೌಢ್ಯ ವಿರೋಧಿ ಧೋರಣೆ…ಇತ್ಯಾದಿಗಳ ಒಣ ಬೋಧನೆಗಳು ಆವಾಯ್ಡ್ ಆಗಬಹುದು ಜೊತೆಗೆ ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಆಹಾರವಾಗುವುದನ್ನು ತಪ್ಪಿಸಬಹುದು.
ಲಾಸ್ಟ್ ಪಂಚ್
ಇನ್ನು ಮೇಲಾದರೂ ನಮ್ಮ ಡಿಜಿಟಲ್ ಮೀಡಿಯಾಗಳು ಡಾಲಿ ಧನಂಜಯ್ ರನ್ನು ಅವರ ಪಾಡಿಗೆ ಬಿಟ್ಟು, ಅವರ ಮಧುಚಂದ್ರದ ಬಗೆಗೆ ಭಯಂಕರವಾಗಿ ವರದಿ ಮಾಡದಿದ್ದರೆ ಕರ್ನಾಟಕದ ಜನ ….. ಧನ್ಯ ಧನ್ಯ ಧನ್ಯ !!
ಪ್ರೀತಿಯಿಂದ…..
- ಹಿರಿಯೂರು ಪ್ರಕಾಶ್
