ಹೆಣ್ಣು ಹೆಚ್ಚೇನೂ ಬಯಸುವುದಿಲ್ಲ. ಆಕೆ ಅಲ್ಪ ತೃಪ್ತಳು, ಅವಳೊಂದಿಗೆ ಪ್ರೀತಿಯ ನಾಲ್ಕು ಮಾತುಗಳು, ಅವಳ ನಿರ್ಧಾರಕ್ಕೆ ಗೌರವಿಸುವ ಗುಣ ಸಿಕ್ಕರೆ ಅಷ್ಟೇ ಸಾಕು ಸಂತೋಷದಿಂದ ಇರುತ್ತಾಳೆ. ಹೆಣ್ಣಿನ ಮನದಾಳ ಮಾತನ್ನು ಕವಿಯತ್ರಿ ಅಮೃತ ಎಂ ಡಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶತಮಾನ ಉರುಳಿದೆ,ಬದುಕು ಮಗ್ಗಲು ಬದಲಿಸಿ ನಡೆದಿದೆ, ಜೀವನ ಕಷ್ಟ ಸುಖ ಎಲ್ಲವನ್ನೂ ಒಡಲು ತುಂಬಿದೆ. ಮನುಷ್ಯ ಜಾಗತೀಕರಣಕ್ಕೆ ಒಳಗಾಗಿ ಒಂದಷ್ಟು ದೂರ ಹೆಜ್ಜೆ ಹಾಕಿ ಪ್ರಭುದ್ದ ಕೂಡ ಆಗಿದ್ದಾನೆ. ಆದರೂ ಮತ್ತೆಲ್ಲೋ ಒಂದು ನರಳುವಿಕೆ, ಇನ್ನೆಲ್ಲೋ ಒಂದು ಕೂಗುವಿಕೆ ಎದೆಯ ಕದ ತಟ್ಟಿಲ್ಲ , ಮನೆಯ ಮನವ ಮುಟ್ಟಿಲ್ಲ.
ಹೆಣ್ಣಿಗೆ ಧೈರ್ಯ ಇಲ್ಲ ಎಂದು ಹೇಳುವ ಪ್ರಸಂಗಗಳಲ್ಲಿ ನನಗೊಂದು ಅನುಮಾನ ಹುಟ್ಟುತ್ತದೆ, ಧೈರ್ಯ ಇಲ್ಲದೆ ಜೀವನ ಪಣಕ್ಕಿಟ್ಟು ಇನ್ನೊಂದು ಉಸಿರಿಗೆ ಜನ್ಮ ಕೊಟ್ಟಳ ಎಂದು. ಹೆಣ್ಣಿಗೆ ವ್ಯವಹಾರ ಜ್ಞಾನ ಇಲ್ಲ, ಮನೆಯ ಒಳಗೆ ಇದ್ದರೆ ಸಾಕೆಂದು ಹೇಳುವರರ ನೋಡಿದಾಗ ಮತ್ತೊಂದು ಗೊಂದಲ ಸೃಷ್ಟಿ ಆಗುತ್ತದೆ. ತನ್ನ ತುತ್ತನ್ನು ತನ್ನವರಿಗೆ ನೀಡಿ ಉಪವಾಸ ಮಲಗಿದ ದಿನ ಕಂಡಾಗ.
ಇದ್ದೆಲ್ಲವು ಹಳೆಯ ಕಥೆ ಇಂದು ಯಾಕೆ ಹೇಳುವಿರಿ ಎಂದರೆ, ಸ್ವರೂಪ ಬದಲಾಗಿದೆ ಅಷ್ಟೇ, ವಾಸ್ತವವಲ್ಲ. ಇಂದು ಹುಡುಗಿ ಓದಿರಬೇಕು, ಆದ್ರೆ ಕೆಲಸ ಮಾಡೋದು ಬೇಡ, ನಮ್ಮಲ್ಲಿ ಎಲ್ಲವೂ ಇದೆ ಎನ್ನುವ ಧೋರಣೆ ಹೆಣ್ಣನ್ನು ಸಬಲ ಮಾಡುತ್ತಿದೆಯಾ..? ದುರ್ಬಲ ಮಾಡುತ್ತಿದೆಯಾ? ಇಲ್ಲ ಮತ್ತದೇ ಕೂಪಕ್ಕೆ ನಯವಾಗಿ ದೂಡುತ್ತಿದೆಯ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟ.
ನಿನ್ನೆ ಮಹಿಳಾ ದಿನಾಚರಣೆ, ಅದರಲ್ಲೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವದ ಎಲ್ಲೆಡೆ ಬದುಕಿನ ಅವಿಭಾಜ್ಯ ಭಾಗವಾಗಿ ನಿಂತ ಹೆಣ್ಣಿಗೆ ಗೌರವ ಸೂಚಿಸುವ ದಿನ.
ನನ್ನ ಪ್ರಕಾರ ಹೆಣ್ಣು ಹೆಚ್ಚೇನೂ ಬಯಸುವುದಿಲ್ಲ. ನಾಲ್ಕು ಪ್ರೀತಿ ಮಾತು, ಅವಳ ಆಲೋಚನೆ, ನಿರ್ಧಾರ ಗೌರವಿಸುವ ಗುಣ, ಇನ್ನೂ ಮುಂದುವರೆದು ನಗುಮುಖದ ಮಾತು, ನಾನಿದ್ದೀನಿ ಅನ್ನುವ ಧೈರ್ಯ, ತನ್ನನ್ನು ಪ್ರಶಂಸೆ ಪಡಿಸುವರು ಎಂಬ ಉಮೇದು ಇದಿಷ್ಟೇ ಸಾಕು, ಮೊಗೆ ಮೊಗೆದು ಬದುಕ ಜೋಳಿಗೆಯನ್ನು ಒಲವಿನಲ್ಲೆ ತುಂಬಿ ಬಿಡುವಳು.
ನ್ಯಾಯ ಅನ್ಯಾಯ ಪಥ ಚಾಲನೆ ಮಾಡಲು, ಚಲಿಸುವ ದಾರಿ ಒಂದೆ ಆಗಿರುವಾಗ ದೂರುಗಳ ಅವಶ್ಯಕತೆ ಇಲ್ಲ. ಸ್ತ್ರೀವಾದಿ, ಸಮಾಜವಾದಿ, ಮುಂತಾದ ನಾಮ ಫಲಕಕ್ಕೆ ಮಿಗಿಲಾಗಿ ಮಾನವವಾದಿಯಾಗಿ, ಧೋರಣೆ, ಸಂಕುಚಿತ, ವಿಚಿತ್ರ ಮನೋಭಾವ ತೊರೆದು, ಕಣ್ಣಿಗೆ ಪೊರೆದ ಪೊರೆಗಳ ಕಳಚಿ ಆಲೋಚನೆಗಳಿಗೆ ಮರುಹುಟ್ಟು ನೀಡಿ, ಎಲ್ಲ ಆಲೋಚನೆಗಳು ಮರುಹುಟ್ಟು ಪಡೆದ ದಿನ ನಾವುಗಳು ಸೃಷ್ಟಿಸಿಕೊಂಡ ಮೂಢತೆ ಇಂದ ಹೊರಗೆ ಬರಲು ಒಂದು ಹೊಳಹು ದಕ್ಕಬಹುದು.
ಎಲ್ಲ ಕಟ್ಟಲೆಗಳ ತೊರೆದು ನೋಡಿ ಬದುಕು ಅಲ್ಲಿಂದ ಸುಂದರ ಆಗಬಹುದು ಎಂದು ಹೇಳುತ್ತ, ಸ್ವರೂಪದಲ್ಲಿ ಗಂಡಾದ್ರು ಹೆಣ್ಮನ ಉಳ್ಳ, ಸದ ಕಾಲ ಹೆಣ್ಣಿನ ಹಿಂದೆ ಧೈರ್ಯವಾಗಿ ಉಳಿದ ಎಲ್ಲಾ ಪುರುಷರಿಗೂ ಧನ್ಯವಾದ ಹೇಳುತ್ತ
ಮತ್ತೆ ಮತ್ತೆ ಬರುವೆ
ಎದೆಯ ಕದ ತಟ್ಟಿ ಪ್ರೀತಿ ಬಡಿಸಲು
ಪದೆ ಪದೆ ಹೇಳುವೆ
ನನ್ನವರ ವಿಚ್ಛಿನ್ನಗೊಳಿಸಬೇಡಿ
ಮತ್ತೆ ಮತ್ತೆ ಬರುವೆ
ಒಗ್ಗೂಡಿ ನಲಿಯಲು
ಪದೆ ಪದೆ ಹೇಳುವೆ
ನನ್ನವರ ನಿರಪೇಕ್ಷಗೊಳಿಸಬೇಡಿ
ಮತ್ತೆ ಮತ್ತೆ ಬರುವೆ
ಸಮಾನತೆ ಬೆಸೆಯಲು
ಪದೆ ಪದೆ ಹೇಳುವೆ
ಒಗ್ಗಟ್ಟನ್ನು ಛಿದ್ರಗೊಳಿಸಬೇಡಿ
ಮತ್ತೆ ಮತ್ತೆ ಬರುವೆ
ದರ್ಪಣ ಆಗಿ ನಲಿಯುವೆ
ಪದೆ ಪದೆ ಹೇಳುವೆ
ಪಾರದರ್ಶಕತೆಯ ಶಮನಗೊಳಿಸಬೇಡಿ
ಮತ್ತೆ ಮತ್ತೆ ಬರುವೆ
ದಿಟ್ಟತನ ಗಟ್ಟಿತನ ಪರಿಚಯಿಸಲು
ಪದೆ ಪದೆ ಹೇಳುವೆ
ಅಸಮಾನತೆಯ ಮೆರೆಸಬೇಡಿ
ಮತ್ತೆ ಮತ್ತೆ ಬರುವೆ
ಪಾತಾಳಕ್ಕಿಳಿಸಿದರು ಫೀನಿಕ್ಸ್ ಪಕ್ಷಿ ಆಗುವೆ
ಪದೆ ಪದೆ ಹೇಳುವೆ
ನಾ ವಿಶ್ವ ಕುಟುಂಬ ಕಟ್ಟಲು ಬಂದವಳು
ನಾ ಎಲ್ಲರನ್ನೂ ಬಾಚಿ ತಬ್ಬಿ ನಿಲ್ಲಲು
ಸೂರು ಕಟ್ಟುವಲ್ಲಿ ನಿರತವಾದವಳು.
- ಅಮೃತ ಎಂ ಡಿ – ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, ‘ಭಾವನೆಗಳಿಲ್ಲದವಳ ತೀರ ಯಾನ’ ಗಜಲ್ ಸಂಕಲವನ್ನು ಹೊರಗೆ ತಂದಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅವರಿಂದ ಧನ ಸಹಾಯ ಪಡೆದ ಕೃತಿಯಾಗಿದೆ, ಶಿಕ್ಷಕಿಯಾಗಿದ್ದಾರೆ. ಮಂಡ್ಯ