ಈ ಪಯಣದೊಳು – ದೀಪಿಕಾ ಬಾಬು

ಇಲ್ಲಿ ಹುಟ್ಟಿರುವ ನಾವುಗಳು ಚಂದದ ಬದುಕ್ಕೊಂದ ಕಟ್ಟಿಕೊಳ್ಳಲು ಅವಶ್ಯಕತೆ ಇರುವ ಮತ್ತು ಅಗತ್ಯಕ್ಕೂ ಮಿಗಿಲಾದ ವಸ್ತುಗಳನ್ನು/ಜೀವಿಗಳನ್ನೋ ಗುಡ್ಡೆ ಹಾಕಿಕೊಂಡು ತನ್ನದೇ ಇಡೀ ‌ಸಾಮ್ರಾಜ್ಯವೆಂಬಂತೆ ಬೀಗುವುದಿದೆಯಲ್ಲ ಉಫ್ ಎಂತಹ ಭ್ರಮೆಯಲ್ಲಿ‌ ನಾವಿದ್ದೇವೆ?. – ದೀಪಿಕಾ ಬಾಬು ತಪ್ಪದೆ ಮುಂದೆ ಓದಿ …

ಎಷ್ಟೆಲ್ಲಾ ಆಸೆ ಕನಸುಗಳ ಕಟ್ಟಿಕೊಂಡು ಜೀವಿಸುವ ನಾವುಗಳು ಯಾರ ಮುಂದೂ ಸೋಲುವ ಸೊಲ್ಲೇತ್ತದೆ, ಗೆಲುವಿನ ನಗಾರಿಯಲ್ಲಿ ಕೊಲ್ಮಿಂಚಿನ ನಗೆಯೊಂದ ಹಾದುಕೊಂಡು ಸಿರಿತನದ/ಸಾಧನೆಯ ವೈಭೋಗಕ್ಕೆ ಸಂಭ್ರಮಿಸಿ ನಾವೇ ಶ್ರೇಷ್ಠರೆಂದು ಬೀಗುತ್ತೇವೆ ಅಲ್ಲವೇ?.

ನಮ್ಮ ಬದುಕು ಭವಿಷ್ಯಕ್ಕಾಗಿ ಎಂದರೆ ಈ ದಿನವೆಲ್ಲಾ ನಾಳೆಗಾಗಿ ಚಿಂತನೆಯಲ್ಲಿಯೇ ಮುಳುಗಿಯೋಯ್ತ? ಎಂತಹ ತಲೆ ಪ್ರತಿಷ್ಠೆ ಪ್ರಶ್ನೆ ನನ್ನದೆಂದು ಕಣ್ಣು ಕೆಂಪಾಗಿಸಿ ಉಬ್ಬು ಗಂಟಿಕ್ಕಿಸುವ ಮುನ್ನ ಒಮ್ಮೆ ಆತ್ಮವಲೋಕಿಸಿ ಬಿಡಿ.

ಹೌದೌದು, ನಾವಿಲ್ಲಿ ಉಸಿರು ನಿಂತ ಮೇಲೂ ನಮ್ಮೆಸರುಳಿಸಲು ಪರದಾಡುವ ಕಳ್ಳ ಬೆಕ್ಕಿನ ಕುಲದವರೇ ಇರಬೇಕು! ಸ್ವಲ್ಪ ಸಾವಕಾಶ ಮಾಡಿಕೊಳ್ಳಿ ಕಾಗೆಯ ಬಳಗಕ್ಕೊಲಿಸಲು ಇಲ್ಯಾರು ಅಂತಹ ಶ್ರೇಷ್ಠರಿಲ್ಲ ಬಿಡಿ, ಕದ್ದು ಮೆಕ್ಕುವ ಹಾಲು ಯಾರಿಗೂ ಕಾಣಬಾರದೆಂಬಂತೆ ಕಣ್ಣು ಮುಚ್ಚಿಯೇ ಅಪರಾಧ ಗೈವ ಆ ಬೆಕ್ಕಿನ ಚಹರೆಯ ಜಾಣ್ಮೆತನ ಈ ಮಾನವನದು ಮತ್ತು ಸಿಕ್ಕ ಎರಡೇ ಎರಡು ಅನ್ನದ ಅಗುಳನ್ನು ತನ್ನೆಲ್ಲಾ ಪರಿಹಾರವನ್ನು ಕಾಕಾ ಎಂದು ಕರೆದು ಹಂಚುಣ್ಣುವ ಮನಸ್ಸು ಕಾಗೆಯದು ಅಂತಹ ಕಾಗೆಯ ಬಳಗ ನಮ್ಮದೆಂದು ಎದೆ ಏರಿಸಿ ಗಾಢವಾದ ದನಿಯಲ್ಲಿ ಉಸುರಿಸುವ ಒಂದು ಪ್ರಾಣಿಯಾದರೂ ನಮ್ಮಲ್ಲಿದೇಯಾ? ಅನುಮಾನದ ರೋಗವೆನಲ್ಲಾ ಬಿಡಿ ಒಂದಿಷ್ಟು ಕುತೂಹಲ ಭರಿತ ಪ್ರಶ್ನೆ ಅಷ್ಟೇ.

ಅಧಿಕಾರ, ನಗ- ನಾಣ್ಯ, ಅರಮನೆ-ವೈಭೋಗ, ವಿಧ್ಯೆ, ಮಂತ್ರ_ತಂತ್ರ, ಹೀಗೆ ಎಷ್ಟೆಲ್ಲಾ ಸಾಧಿಸಿ/ಗಳಿಸಿದ ನಾವುಗಳಿಲ್ಲಿ ಎಷ್ಟು ಕಾಲ ಜೀವಿಸುತ್ತೇವೆ? ಮರಣ ಹೊಂದಿದ ಒಂದು ಜೀವಿಯನ್ನಾದರೂ ಮರಳಿ ತರಲಾಗುತ್ತದೆಯಾ?.

ಬುದ್ಧನ ಬಗ್ಗೆ ಓದಿದವರಿಗೆಲ್ಲ ಸಾವಿಲ್ಲದ ಮನೆಯ ಸಾಸಿವೆಯ ಕತೆಯೂ ತಿಳಿದೇ ಇದೆ. ಸಾವು ಯಾರಿಗೂ ಹೊರತಾಗಿಲ್ಲ ಎಂಬ ಸತ್ಯವನ್ನು ಅರ್ಥಮಾಡಿಸುವ ಈ ಕತೆಯಲ್ಲಿ ಕಿಸಾಗೌತಮಿ ಸಾಸಿವೆಗಾಗಿ ಅಲೆಯದ ಮನೆಯಿಲ್ಲ! ಎಲ್ಲಿಯೂ ಸಿಗದ ಆ ಸಾಸಿವೆ ಅನಿವಾರ್ಯ ಸಾವನ್ನು ದೈವೇಚ್ಛೆ ಎಂದೇ ಸ್ವೀಕರಿಸುವ ಸಂದೇಶ ನೀಡಿದೆ. ಇವೆಲ್ಲ ಬುದ್ಧ ಹೇಳಿದ ಸಾವಿಲ್ಲದ ಮನೆಯ ಸಾಸಿವೆಯ ಕತೆಯಾಯ್ತು. ಆದರೆ ಪ್ರತಿಯೊಬ್ಬರ ಮನೆಯ ಅಡುಗೆ ಮನೆಯ ಸಾಂಬಾರು ಬಟ್ಟಲಿನಲ್ಲೂ ಚಿಕ್ಕ ಗಾತ್ರವೇ ಆದರೂ ಒಗ್ಗರಣೆಯ ಪ್ರಮುಖ ಸರಕಾಗಿ ರಾರಾಜಿಸುವ ಸಾಸಿವೆಯು ಅಂದಿನ ಕಾಲಕ್ಕೆ ಬುದ್ದನ ಕತೆಯ ಪ್ರಮುಖ ಸರಕಾಯ್ತು.

ಇಲ್ಲಿ ಸಾಕಷ್ಟು ಜ್ಞಾನಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು, ಪಂಡಿತರು, ಶ್ರೇಷ್ಠರು, ಸಿದ್ದಿಪುರುಷರು, ಕಾಲಜ್ಞಾನಿಗಳಿದ್ದಾರೆ ಅವರಿಗೂ ಈ ಸಾವಿನ ಬಗೆಗೆ ಭಾವನಾತ್ಮಕ ಸೆಳೆತವೊಂದು ತಾರ್ಕಿಕವಾಗಿ ತನ್ಮೊಡಲ ಬೇಗೆಗೆ ಬಿಸಿತುಪ್ಪವನ್ನೆನ್ನೋ ಸವರಿದಂತೆ ಆಗಲಾರದೆ ಇರಲಾರದು.

ಫೋಟೋ ಕೃಪೆ :google

ಸಾವು ನೋವು ರೋಗಗಳಂಥ ಸಂದರ್ಭದಲ್ಲಿಯಂತೂ ಕರ್ಮಸಿದ್ಧಾಂತವು ಭಾವುಕ ನೆಲೆಯೊಳಗೆ ಹಾಸು-ಹೊಕ್ಕಾಗಿ ಬೆರೆತು ಜನತೆಯನ್ನು ದಿಕ್ಕು ತಪ್ಪಿಸುತ್ತಿರುತ್ತದೆ. ಆದರೆ ಭಾವುಕ ವಿಚಾರಧಾರೆಯೊಂದಿಗೆ ಭೌತವಾದಿ ಚಿಂತನಾ ವಿಧಾನಗಳೂ ನಿರಂತರ ಸಂಘರ್ಷ ನಡೆಸಿವೆ. ಹಲವು ತತ್ವಜ್ಞಾನಗಳು ಪರ್ಯಾಯ ವಿಚಾರಗಳನ್ನು ದಾಖಲಿಸುತ ಬಂದಿವೆ. ವಿಭಿನ್ನ ನೆಲೆಯ ತಾರ್ಕಿಕ ವಿಚಾರಧಾರೆಗಳು ಹರಿದು ಬಂದಿವೆ. ಅವುಗಳು ಜನತೆಯ ಬದುಕಿನ ನಡೆಯ ಸಾಂಸ್ಕೃತಿಕ ಪಲಕುಗಳಾವೆ. ಅವೆಲ್ಲವೂ ಶ್ರಮ ಸಂಸ್ಕೃತಿಯ ನಂಬಿಕೆಗಳಾಗಿವೆ. ಏಕೆಂದರೆ ಶ್ರಮಿಕರು ತಮ್ಮ ಉತ್ಪಾದನಾ ಸಾಧನಗಳು ಮತ್ತು ಸಂಬಂಧಗಳೊಂದಿಗೆ ಸಾಂಸ್ಕೃತಿಕ ರೀತಿರಿವಾಜುಗಳನ್ನು ರೂಪಿಸಿ-ರೂಢಿಸಿಕೊಂಡಿರುವರು. ಆದ್ದರಿಂದಲೇ ವೈದಿಕ-ಸನಾತನ ಮೌಢ್ಯಕ್ಕೆ ಪರ್ಯಾಯವಾದ ನಂಬಿಕೆಗಳು ಆಚರಣೆಗಳು ಇದ್ದೇ ಇವೆ. ಯಾರಿಗಾದರೂ ಬೇನೆ ಬಂದರೆ ಇರಲಿ ಬಿಡು, ರೋಗ ಮನುಷ್ಯರಿಗೆ ಬಾರದೆ ಮರಕ್ಕೆ ಬರುವುದೇ? ಎಂದು ಸಂತೈಸುವರು. ಮರಕ್ಕೂ ಬರಬಹುದು. ಆದರೆ ಮನುಷ್ಯರಿಗೆ ಬಂದ ರೋಗವನ್ನು ಎದುರಿಸಲು ಧೈರ್ಯ ತುಂಬುವ ಸಂತೈಸುವ ರೀತಿ ಮೌಢ್ಯವನ್ನು ಧಿಕ್ಕರಿಸುವ ನೆಲೆಯದ್ದು ಎಂಬುದು ಪ್ರಮುಖವಾದದ್ದು. ಹೀಗೆ ಅನೇಕ ಪರ್ಯಾಯ ನಂಬಿಕೆಗಳು ಸಿಕ್ಕೇ ಸಿಗುವವು.

ವಚನಕಾರರು, ಸೂಫಿಗಳು, ತತ್ವಪದಕಾರರು ಕರ್ಮಸಿದ್ಧಾಂತದ ತಾತ್ವಿಕ ನಿಲುವುನ್ನು ಅಮೂಲಾಗ್ರವಾಗಿ ಖಂಡಿಸಿದವರು. ಮಾತ್ರವಲ್ಲ. ಇದೇ ಹೊತ್ತಿನಲ್ಲಿ ಪರ್ಯಾಯವನ್ನು ಕಟ್ಟಿಕೊಟ್ಟವರು. ಮನುಷ್ಯರು ಜೀವನದಲ್ಲಿ ಹೆದರುವುದು ಮುಪ್ಪು ರೋಗ ಮತ್ತು ಬೇನೆಗೆ. ಇಷ್ಟಕ್ಕೂ ಮೀರಿ ಸಾವಿಗೆ. ಸಾವೆಂಬುದು ಬದುಕಿನ ಸತ್ಯವೇ ಆದರೂ ಅದನ್ನು ಸ್ವೀಕರಿಸುವ ಮನಸ್ಥಿತಿ ಕಷ್ಟ ಸಾಧ್ಯ. ನೋವಿನ ಚುಂಗು ಹಿಡಿದು ಇದ್ದಕ್ಕಿದ್ದಂತೆ ಕಳ್ಳನಂತೆ ಕ್ರೌರ್ಯವಾಗಿ ಎರಗುವ ಕೆಲವು ಸಾವುಗಳು ಮನುಷ್ಯರನ್ನು ಧತಿಗೆಡಿಸುತ್ತವೆ. ಆಪ್ತರ ಸಾವು-ನೋವು ಯಾರಿಗೆ ಕಂಗೆಡಿಸುವುದಿಲ್ಲ ಹೇಳಿ? ಅಪಾರ ದು:ಖವನ್ನು ತಂದುಕೊಡುವ ಸಾವು ಭಯವನ್ನು ಹುಟ್ಟು ಹಾಕುತ್ತದೆ. ಭಯದಿಂದ ಬಿಡುಗಡೆ ಪಡೆಯಲು ಅಸಹಾಯಕತೆಯಿಂದ ಕಾಣದ ದೈವಕ್ಕೆ ಮೊರೆ ಹೋಗುವರು. ಅಂಥ ಹೊತ್ತಿನಲ್ಲಿ ಕಡಕೋಳ ಮಡಿವಾಳಪ್ಪನಂಥ ತತ್ವಪದಕಾರರು “ಮರಣ ಬಂದರೇನೂ ಸಿಟ್ಟಿಲ್ಲ, ಮಹಾ ತಿಳಿದ ಮಹಾತ್ಮರಿಗೆ ಬಿಟ್ಟಿಲ್ಲ” ಎಂದು ಹೇಳಿ ಮರಣದ ಬಗ್ಗೆ ಇರುವ ಭಯವನ್ನು ತಳ್ಳಿ ಹಾಕುವನು. ವಚನಕಾರರು ಮರಣವನ್ನು ಮಹಾನವಮಿಯೆಂದು ಆಹ್ವಾನಿಸುತ್ತಾರೆ. ಸಾವು ಮತ್ತು ಬೇನೆಯ ಹೊತ್ತಿನಲ್ಲಿ ಇನ್ನಷ್ಟು ಭಾವುಕಗೊಳಿಸಿ ಸನಾತನ ನಂಬಿಕೆಗೆ ಶರಣಾಗಿಸುವಂತೆ ಮಾಡುವ ಪ್ರಕ್ರಿಯೆಗಳನ್ನು ಅತ್ಯಂತ ನಿಜದ ನೆಲೆಯಲ್ಲಿ ನಿಷ್ಠುರವಾಗಿಯೇ ಒಡೆಯುವ ವಚನಕಾರ ಲದ್ದೆಯ ಸೋಮಣ್ಣ ಸಾವು-ಬೇನೆ ಬಂದರೆ ಅದಕ್ಕೆ ಅಷ್ಟೆ ಸಹಜವಾಗಿ ಪ್ರತಿಕ್ರಿಯಿಸು ಅದಕ್ಕೆ ದೇವರ ಹಂಗೇಕೆ ಎಂದು ಪ್ರಶ್ನಿಸುತ್ತಾನೆ.

ಫೋಟೋ ಕೃಪೆ :google

ಮನುಷ್ಯರನ್ನು ತಲ್ಲಣಕ್ಕೆ ಒಡ್ಡುವ, ಇಚ್ಛಾಶಕ್ತಿ ಕುಗ್ಗಿಸುವ, ಭಯದಿಂದ ತತ್ತರಿಸುವಂತೆ ಮಾಡುವ ಸಾವು ಮತ್ತು ಬೇನೆಯನ್ನು ಎದುರಿಸಲಿಕ್ಕಾಗಿ ವಚನಕಾರರು ವೈಚಾರಿಕ ತಿಳುವಳಿಕೆಯ ಜರೂರಿಯನ್ನು ಮನದಟ್ಟು ಮಾಡುವರು. ದೇವರು-ದೈವದ ಹಂಗನ್ನೇ ಧಿಕ್ಕರಿಸಿ ನಿಸರ್ಗ ಸಹಜವಾಗಿ ಬದುಕುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಗಟ್ಟಿಯಾದ ಭೌತಿಕ ನೆಲೆಯನ್ನು ಒದಗಿಸುವರು. ಆವ ಭಯವು ಇನ್ನೇನವಗ ಮರಣವೇ ಮಹಾನವಮಿ ಆದವಗ ಎನ್ನುವ ತತ್ವಪದಕಾರರು ಬದುಕನ್ನು ಮೌಢ್ಯದ ಗುಲಾಮಗಿರಿಯಿಂದ ಬಿಡಿಸಿ ಸ್ವಾಭಿಮಾನಿ ಜೀವನದ ಮಹತಿಯನ್ನು ಎತ್ತಿ ಹಿಡಿಯುವರು. ಇದೇ ಹೊತ್ತಿನಲ್ಲಿ ಬಸವಣ್ಣನ ವಚನವು ನಮ್ಮನ್ನು ತೀವ್ರ ವಿಚಾರವಾದದತ್ತ ಸೆಳೆದು ಪ್ರಖರ ಮಾನವೀಯ ಮಿಡಿತದ ಭಾವಸಹಿತ ಭೌತವಾದಿಗಳನ್ನಾಗಿ ರೂಪಿಸುವುದು. ಬರುವ ಸಮಸ್ಯೆಗಳನ್ನು ಎದುರಿಸಲು ಮನಸನ್ನು ಸಜ್ಜುಗೊಳಿಸುವುದು.

ಸುಖ ಬಂದಡೆ ಪುಣ್ಯದ ಫಲವೆನ್ನೆನು
ದು:ಖ ಬಂದಡೆ ಪಾಪದ ಫಲವೆನ್ನೆನು
ನೀ ಮಾಡಿದಡಾಯಿತೆಂದೆನ್ನೆನು. ಕರ್ಮಕ್ಕೆ ಕರ್ತವೇ ಕಡೆಯೆಂದೆನ್ನೆನು
ಉದಾಸೀನವಿಡಿದು ಶರಣೆನ್ನೆನು ಕೂಡಲ ಸಂಗಮದೇವ
ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ ಸಂಸಾರ ಸವೆಯೇ ಬಳಸುವೆನು.

ಸಾವು-ನೋವನ್ನು ನಿಗೂಢೀಕರಿಸಿ ಮನುಷ್ಯರ ಸಹಜ ದು:ಖದ ಹೊತ್ತನ್ನೂ ವಂಚಿಸುವ ಸಂಚು ಹೊಂದಿದ ಕರ್ಮಸಿದ್ಧಾಂತದ ಬೇರನ್ನು ಅಲುಗಾಡಿಸಿದವರು ವಚನಕಾರರು. ಹಾಗೆ ನೋಡಿದರೆ ಕಿಸಾಗೌತಮಿಗೆ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ದ ಸಹ ಧೀರ ಬದುಕಿಗೆ ಬೆಳಕಾಗಿದ್ದ.

ವೈಜ್ಞಾನಿಕ ಚಿಂತನೆಯ ಅರಿವೆಂಬ ಉಪದೇಶ ಪಡೆದವರು ಸುಖ ದು:ಖದ ಮೂಲ ಚೂಲವನ್ನು ಬಗೆದು ಕಾರಣಗಳನ್ನು ಗುರುತಿಸಿ ಮುನ್ನಡೆದಲ್ಲಿ ಸಾವನ್ನೂ ನೋವನ್ನೂ ಜೈಸಲು ಮನಸು ಸಿದ್ದವಾಗುವುದು-ಸಾಧ್ಯವಾಗುವುದು. ಸಾವಿನ ತಲೆ ಸವರುತ್ತಲೇ ನಿಸರ್ಗದ ಕುತೂಹಲವನ್ನು ಬಗೆಯುವ ಮಾನವರ ಪ್ರಜ್ಞೆಯು ನಿರಂತರ ಅನ್ವೇಷಣೆಯ ಗುಣ ಹೊಂದಿದೆ. ಸಾಹಸಮಯ ಮಾನವ ಪ್ರವತ್ತಿಯನ್ನು ಹಿಮ್ಮೆಟ್ಟಿಸುವ ಕರ್ಮಸಿದ್ಧಾಂತವು ಬದುಕಿನ ಎಲ್ಲ ಹಂತದಲ್ಲಿಯೂ ನಿಷೇಧಕ್ಕೆ ಅರ್ಹವಾದದ್ದಾಗಿದೆ.

ಕೋಟಿ ಕೋಟಿ ಕ್ಷಣಗಳ ಹೂಡಿಕೆಗಳನ್ನೆಲ್ಲಾ ಒಂದು ಕ್ಷಣಾರ್ಧದಲ್ಲಿ ಇಲ್ಲವಾಗಿಸಿ ಬಿಡುವುದಕ್ಕೆ ಸಾವು ಎಂದೆನೋ ಹೆಸರೆಂಬ ನನ್ನ ಕವಿತೆಯ ಸಾಲು ಸಹ ಅರ್ಥಪೂರ್ಣವೇ ಇನಿಸುವುದು .


  • ದೀಪಿಕಾ ಬಾಬು

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW