ಕೈಯಲ್ಲಿ ದುಡ್ಡಿರಲಿಲ್ಲ, ಹೊಟ್ಟೆ ಬೇರೆ ಹಸಿದಿತ್ತು…ಅದೇ ಸಮಯದಲ್ಲಿ ಸಿಕ್ಕಿದ್ದು ಹಿತ್ತಲಲ್ಲಿ ಶಾಮಿಯಾನ ಹಾಕಿದ್ದ ಒಂದು ಮನೆ…ಕಳ್ಳ ಬೆಕ್ಕಿನಂತೆ ಅಲ್ಲಿ ಹೋದೆವು…ಮುಂದೇನಾಯಿತು ವಿಕಾಸ್. ಫ್. ಮಡಿವಾಳರ ಅವರ ಕತೆ ತಪ್ಪದೆ ಓದಿ…
ಧಾರವಾಡದಲ್ಲಿ ಪಿ.ಯು.ಸಿ ಓದುವಾಗ ನಡೆದ ಘಟನೆ ಇದು. ನಾನು ಓದುತ್ತಿದ್ದ ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಅಷ್ಟೇನು ಚೆನ್ನಾಗಿ ಇರಲಿಲ್ಲ. ಚೆನ್ನಾಗಿರಲಿಲ್ಲ ಅಂತ ಹೇಳುವುದಕ್ಕಿಂತ ನಮ್ಮ ಗಲಾಟೆ ಚೇಷ್ಟೆಗಳನ್ನ ತಡೆಯಲಾಗದೆ ನಮ್ಮ ವಾರ್ಡನ್ ಹಾಸ್ಟೆಲ್ ಗೇಟಿನಿಂದ ಆಚೆ ದಬ್ಬಿದ್ದ. ಹೀಗಾಗಿ ನಾವು ಕಾಲೇಜಿಗೆ ಹೋಗುವ ದಾರಿಯಲ್ಲಿ ಒಂದು ರೂಮ್ ಮಾಡಿಕೊಂಡು ಮೆಸ್ಸ್ ನಲ್ಲಿ ಊಟ ಮಾಡುತ್ತಿದ್ದೆವು. ಊಟದ ಬಗ್ಗೆ ಎರಡು ಮಾತಿರಲಿಲ್ಲ. ರೇವಣಸಿದ್ದೇಶ್ವರ ಲಿಂಗಾಯತ ಖಾನಾವಳಿ ಸಸ್ಯಾಹಾರಿ ಊಟ ಅಂತ ಹೆಸರಿತ್ತು. ಆದರೆ ರಾತ್ರಿ ಊಟದಲ್ಲಿ ಸಣ್ಣ ಸಣ್ಣ ಹುಳುಗಳು, ಇರುವೆಗಳು ಸೈಡ್ಸ್ ಇಲ್ಲ ಸ್ನಾಕ್ಸ್ ತರ ನಮ್ಮ ಹೊಟ್ಟೆಯೊಳಗೆ ಸೇರುತ್ತಿದ್ದವು. ಹೊಟ್ಟೆ ಹಸಿದಾಗ ಪಿಜ್ಜಾ ಬರ್ಗರ್ ಬೇಕು ಅಂತ ಕಾಯೋಕೆ ಆಗುತ್ತಾ? ಪಾಲಿಗೆ ಬಂದಿದ್ದೆ ಪಂಚಾಮೃತ ಅಂತ ಕಣ್ಣು ಮುಚ್ಚಿ ಊಟ ಮಾಡ್ತಾ ಇದ್ವಿ.
ತಿಂಗಳ ಮೊದಲ ವಾರದಲ್ಲಿ ನಮ್ಮಪ್ಪ ಖರ್ಚಿಗೆ ಇರಲಿ ಅಂತ ಅಷ್ಟೊ ಇಷ್ಟೊ ದುಡ್ಡು ಕೊಡ್ತಾ ಇದ್ದ. ಹೆಚ್ಚು ಕಡಿಮೆ ಅಂತ ಖರ್ಚು ಮಾಡಿದರೂ ತಿಂಗಳ ಕೊನೆಯಲ್ಲಿ ಎಲ್ಲ ದುಡ್ಡು ಖಾಲಿಯಾಗಿ ಬರಗಾಲ ಬಂದ ಪರಿಸ್ಥಿತಿಯಲ್ಲಿ ಇರುತ್ತಿದ್ದೆ. ಅದರಲ್ಲೂ ಭಾನುವಾರ ನನ್ನ ಮೆಸ್ಸ್ ಮುಚ್ಚುತ್ತಿತ್ತು. ಹೋಟೆಲುಗಳಲ್ಲಿ ಊಟ ಮಾಡೋಣವೆಂದರೆ ಜೇಬಲ್ಲಿ ಹತ್ತು ಇಪ್ಪತ್ತು ರೂಪಾಯಿ ಬಿಟ್ಟರೆ ಒಂದು ಪೈಸೆ ಹೆಚ್ಚು ಇರುತ್ತಿರಲಿಲ್ಲ. ಇಂತ ಸಂದೀಗ್ದ ಪರಿಸ್ಥಿತಿ ನನಗೆ ತುಂಬಾ ಸಾರಿ ಕಾಡಿದೆ.
ಹೀಗೆ ಒಂದು ದಿನ ಜೇಬಲ್ಲಿ ದುಡ್ಡು ಇರಲಿಲ್ಲ. ಮೆಸ್ಸ್ ಕೂಡ ಮುಚ್ಚಿದ ಕಾರಣ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕಾಗಿತ್ತು. ಆಗಲೆ ನನ್ನ ಮಿತ್ರ ಶಿವಣ್ಣ ಹಾಗೆ ಸುತ್ತಾಡಿ ಬರೋಣ ಬಾ ಎಲ್ಲಿಯಾದ್ರೂ ಏನಾದ್ರು ಸಿಗಬಹುದು ಅಂತ ಹೇಳಿದ. ಕೊನೆಗೂ ಕಾಲಿಗೆ ಹರೆದ ಚಪ್ಪಲಿ ಹಾಕಿ ಊಟಕ್ಕಾಗಿ ಹುಡುಕುತ್ತ ಹೊರೆಟೆವು. ಒಂದೆರಡು ಮೈಲಿ ನಡೆದ ಮೇಲೆ ದೂರದಲ್ಲಿ ಒಂದು ಶಾಮಿಯಾನ ಕಂಡಿತು. ಬಾಡಿದ ಮುಖದಲ್ಲಿ ನಗುವು ಚಿಗುರಿತು. ನಾವು ಯಾವುದೊ ಮದುವೆ ಕಾರ್ಯಕ್ರಮ ಇರ್ಬೇಕು ಅಂತ ತಿಳಿದು ನುಗ್ಗಿದೆವು.
ಫೋಟೋ ಕೃಪೆ :google
ಹೇಳಿಕೊಳ್ಳುವಷ್ಟು ದೊಡ್ಡದಾದ ಮನೆಯೇನು ಇರಲಿಲ್ಲ. ಹಿತ್ತಿಲಲ್ಲಿ ಶಾಮಿಯಾನ ಹಾಕಿ ಊಟದ ವ್ಯವಸ್ಥೆ ಮಾಡಿಸಿದ್ದರು. ಧಾರವಾಡ, ಬೆಂಗಳೂರು ಮತ್ತು ಇನ್ನಿತರ ದೊಡ್ಡ ದೊಡ್ಡ ಊರುಗಳಲ್ಲಿ ಒಂದು ಪದ್ಧತಿ ಇದೆ. ಅವರು ಕರೆದವರು ಅಷ್ಟೆ ಬರಬೇಕು. ಬೇರೆಯವರು ಬರಲು ಅವಕಾಶವಿರುವುದಿಲ್ಲ. ನಾನು ಶಿವಣ್ಣ ಗಟ್ಟಿ ಮನಸ್ಸು ಮಾಡಿ ಊಟಕ್ಕೆ ಹೋದೆವು.
ಮುಳುಗಾಯಿ ಪಲ್ಲೆ, ರೊಟ್ಟಿ, ಚಟ್ನಿ ಉಪ್ಪಿನಕಾಯಿ, ಅನ್ನ ಸಾರು ಎಲ್ಲಾನು ನೋಡಿ ಬಾಯಲ್ಲಿ ನೀರು ಬರ್ತಾ ಇತ್ತು. ತಟ್ಟೆ ಹತ್ತಿರ ಬರುತ್ತಾ ಇದ್ದಂತೆ ಬಕಾಸುರ ತಿಂದ ಹಾಗೆ ತಿನ್ನಲು ಶುರುಮಾಡಿದೆವು. ಯಾರಾದರು ಏನಾದರು ಕೇಳಿದರೆ ಗಂಡಿನ ಕಡೆಯವರು ಅಂತ ಹೇಳ್ಬೇಕು ಅಂತ ನಿರ್ಧರಿಸಿದ್ವಿ. ಆಗಲೆ ಒಬ್ಬ ಎತ್ತರದ ಯುವಕ ನಮ್ಮ ಹತ್ತಿರ ಬಂದ. “ಯಾವ ಊರಿನವರು? ಇಲ್ಲಿ ಎಲ್ಲು ನಿಮ್ಮನ್ನ ನೋಡಿಲ್ವಲ್ಲ ” ಅಂತ ಕೇಳಿದ. ನನಗಂತೂ ಭಯವಾಗಿ ಬೆವರು ಬರಲು ಶುರುವಾಯಿತು. ಬಾಯಲ್ಲಿದ್ದ ತುತ್ತು ಒಳಗೆ ಹೋಗಲಿಲ್ಲ. ಆಗ ಶಿವಣ್ಣ “ನಾವು ಇಲ್ಲೆ ಸಾಧನಕೆರೆಯವರು. ಮದುವೆಗೆ ಕರೆದಿದ್ರು, ಬಂದಿದ್ವಿ. ನಿಮ್ಮದು ಯಾವೂರು” ಅಂತ ಕೇಳಿದ. ಆ ಹುಡುಗ ನಮ್ಮಿಬ್ಬರನ್ನ ಅಪರಾಧಿಗಳಂತೆ ನೋಡುತ್ತಾ “ಹೌದು ನೀವು ಯಾರ ಕಡೆಯವರು” ಅಂತ ಕೇಳಿದ. ಶಿವಣ್ಣ “ನಾವು ಗಂಡಿನ ಕಡೆಯವರು” ಅಂತ ಹೇಳಿದ. ಕೂಡಲೆ ಆ ವ್ಯಕ್ತಿ “ಏ ಮಬ್ಬ ಹುಸೇನಿಗಳ ಇದು ಮದ್ವೆ ಊಟ ಅಲ್ರೋ ತಿಥಿ ಊಟ. ಈ ಮನೆ ಹಿರಿಮನುಷ್ಯ ತೀರಿಕೊಂಡ್ರು. ಇವತ್ತು ಅವರ ತಿಥಿ ಇದೆ” ಅಂತ ಹೇಳಿದ. ನಮ್ಮ ಪಿಕ್ಚರ್ ಬಿಟ್ಟಿತ್ತು. ಚಳಿಗಾಲದಲ್ಲೂ ಬೆವರು ಬರತೊಡಗಿತು. ಸುಳ್ಳು ಹೇಳಿ ಏನು ಪ್ರಯೋಜನವಿರಲಿಲ್ಲ. ಕೂಡಲೆ ಆ ಯುವಕನ ಕೈ ಹಿಡಿದು ನಮ್ಮ ಪರಿಸ್ಥಿತಿನ ವಿವರಿಸಿದ್ವಿ. ನಮ್ಮ ಉದ್ದೂದ್ದ ಭಾಷಣ ಮುಗಿದ ಮೇಲೆ ಆತ ಹೇಳಿದ. ” ಟೆನ್ಶನ್ ತಗೋಬ್ಯಾಡ್ರೋ ನಾನು ಕೂಡ ನಿಮ್ಮಂತೆ ಊಟ ಹುಡ್ಕೊಂಡು ಬಂದವನು. ನಮ್ಮ ಮೆಸ್ಸ್ ಮುಚ್ಚಿತ್ತು. ಜೇಬಲ್ಲಿ ದುಡ್ಡು ಇರಲಿಲ್ಲ. ಅದ್ಕೆ ಇಲ್ಲಿಗೆ ನಿಮ್ಮ ಹಾಗೆ ಬಂದೆ. ನಾನು ಕೂಡ ನಿಮ್ಮವನೆ “. ಅವನ ಮಾತು ಕೇಳಿ ನಗು ಬಂತು. ಬೇಗ ಊಟ ಮಾಡಿ ಕಳ್ಳ ಬೆಕ್ಕಿನಂತೆ ಹೊರಗೆ ಬಂದು ಒಬ್ಬರ ಮುಖ ಒಬ್ಬರು ನೋಡಿ ನಗತೊಡಗಿದೆವು. ಹುಚ್ಚನ ಮನೆಯಲ್ಲಿ ಉಂಡವರೆ ಜಾಣರಂತೆ. ಹಾಗಾಯಿತು ನಮ್ಮ ಕತೆ.
ಇಂತಿ ನಿಮ್ಮ ಪ್ರೀತಿಯ….
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ