‘ನನ್ನನ್ನು ಸಾಯದೇ ಬದುಕಿಸಿದ್ದೇ ಈ ಹಾಳು “ಪ್ರೀತಿ”‘… ಲೇಖಕ, ಕವಿ ರಂಜಿತ್ ಕವಲಪಾರ ಅವರ ಲೇಖನಿಯಲ್ಲಿ ಅರಳಿದ ಪ್ರೇಮ ಕವನ , ತಪ್ಪದೆ ಓದಿ…
ಇಲ್ಲಿ ಎಲ್ಲವೂ ನಗ್ನ.
ನಿನ್ನ ಒಳಗುದಿಯ ಕಾಳ ಸರ್ಪಕ್ಕೂ ಪೊರೆ ಇರುವುದಿಲ್ಲ.
ಈ ಜನವರಿಯ ಕೊರೆಯುವ ಚಳಿಯಲ್ಲೂ ನಿನಗೆ ತುಂಡುಡುಗೆ ಅವಶ್ಯವಿಲ್ಲಾ.
ನನ್ನ ನಗ್ನಕ್ಕೆ ಅಂಟಿಕೊಂಡಿರುವೆ.
ದೇಹಗಳೆರಡಕ್ಕೂ ಕಿಡಿ ಹುಟ್ಟಿಸುವ ಶಕ್ತಿ ಇರುವಾಗ ಬೆಂಕಿಪೊಟ್ಟಣವೇಕೆ?
ಸುರುವಿಕೊಳ್ಳಲು ಸರಾಯಿ ಇರೇ
ಹಾಳು ವಿಸ್ಕಿ ಬೇಕೆ?
ನಿನ್ನ ಕಿಬ್ಬೊಟ್ಟೆಗೂ, ಕುತ್ತುಗೆಗೂ ಅಷ್ಟೇನೂ ವ್ಯತ್ಯಾಸವಿಲ್ಲದ ಅದೇ ಗಂಧ.
ನಿನ್ನ ಕಾಲಿಗೆ ನಾ ಕಟ್ಟಿದ
ಕಾಲು ಗೆಜ್ಜೆಗೂ, ನಿನ್ನ ಹೆಬ್ಬೆರಳಿಗೂ ಅಷ್ಟೇ.
ನನ್ನ ನಾಲಿಗೆಯಡಿಯ ರುಚಿ,
ನಿನ್ನ ನಾಲಿಗೆಯಡಿಯ ಸವಿಗೂ
ವಿಶೇಷ ವೇನಿದೆ ಎರಡೂ ನಿನಗೆ ಚಿರಪರಿಚಿತ.
ಬೆಸೆದುಕೊಂಡ ಬಳ್ಳಿಗೂ ಮರಕ್ಕೂ ಮರುಕ ಹುಟ್ಟುವುದೇ ಹೇಳು ನಾ ನಿನಗಲ್ಲಾ ಅಪರಿಚಿತಾ.
ನಿನ್ನ ಸಿಡುಕು, ಅಸಹಾಯಕತೆ, ಪ್ರೀತಿ, ಹಪಹಪಿ
ನನ್ನ ಶಕ್ತಿ.
ನನ್ನ ಆಕ್ರಮಣ, ಆವರಿಸುವಿಕೆ ನಿನ್ನ ಬಲಹೀನತೆ.
ಇಲ್ಲಿ ಬಲಹೀನತೆಗೆ ಸೋಲು, ಹಪಹಪಿಗೆ ಗೆಲುವು.
ಪ್ರೀತಿಯಲಿ ಎಲ್ಲವೂ ವಿರುದ್ಧಾಭಾಸ.
ಪ್ರೀತಿ ಏನೆಂದು ನೀನು ಬುಸುಗುಡುತ್ತಾ ಕೇಳಿದಾಗ.
ನನಗೆ ಅಲ್ಲೇ ಮರಗಟ್ಟಿ ಸಾಯಬೇಕು ಅನ್ನಿಸಿತ್ತು.
ನನ್ನನ್ನು ಸಾಯದೇ ಬದುಕಿಸಿದ್ದೇ ಈ ಹಾಳು “ಪ್ರೀತಿ”
ನಾ ಬೆಳಗುವ ದೀಪ, ನೀ ಚಡಪಡಿಸುವ ಪತಂಗ ಮುತ್ತಿಕ್ಕಿ ಬಿಡು, ಎಣ್ಣೆ ಮುಗಿಯುತ್ತಾ ಬಂದಿದೆ.
ಒಟ್ಟಿಗೆ ಸತ್ತು ಬಿಡೋಣ.
ಚಿಂತೆ ಬಿಡು. ಚಿತೆಗೆ ಮುತ್ತಿಡು.
ಮರುಹುಟ್ಟಲು ಅನುವು ಮಾಡಿಕೊಡುತ್ತದೆ ಈ ಹಾಳು ಪ್ರೀತಿ”..
ಕೊನೆಗೂ ಹೇಳುವೆ ಕೇಳು.
ಪ್ರೀತಿ ಎಂದರೇ ನಾನೆಂಬ ಬೆಂಕಿ, ಸಾಯಲು ಸಿದ್ದಳಾಗಿರುವ ನೀನೆಂಬ ಪತಂಗ ಹಾಗು ಕೊಲ್ಲಲೆಂಬಂತೆ ಆವರಿಸುವ ಹಿತಗಾಳಿ
- ರಂಜಿತ್ ಕವಲಪಾರ – ಪತ್ರಕರ್ತರು, ಲೇಖಕರು, ಮಡಿಕೇರಿ.