“ಎಂಡೋಮೆಟ್ರಿಯಾಸಿಸ್” – ಸುದರ್ಶನ್ ಪ್ರಸಾದ್

ಎಂಡೋಮೆಟ್ರಿಯಾಸಿಸ್ ಗಳು ಕ್ಯಾನ್ಸರ್ ಗೆ ತಿರುಗುವುದಿಲ್ಲ.ಕುಟುಂಬದಲ್ಲಿ ಕ್ಯಾನ್ಸರ್ ನ ಹಿನ್ನೆಲೆ ಉಳ್ಳವರಲ್ಲಿ, ಕ್ಯಾನ್ಸರ್ ಕಾರಕ ಅಂಶಗಳಿಗೆ ತೆರೆದುಕೊಂಡವರಲ್ಲಿ ಮಾತ್ರವೇ ಇದು ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಇರುತ್ತದೆ. ಇನ್ನಷ್ಟು ಎಂಡೋಮೆಟ್ರಿಯಾಸಿಸ್ ಕುರಿತು ಲೇಖಕ ಸುದರ್ಶನ್ ಪ್ರಸಾದ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ….

ಸ್ತ್ರೀರೋಗ ಶಾಸ್ತ್ರ ವಿಷಯದಲ್ಲಿ ಲೇಖನ ಬರಯದೇ ಬಹಳ ದಿನಗಳಾಗಿತ್ತು. ಮೊನ್ನೆ ಒಬ್ಬರು ಈ ಬಗ್ಗೆ ಕೇಳಿದಾಗ ತಟ್ಟನೆ ನೆನಪಾದ ವಿಷಯವೇ ಈ ಎಂಡೋಮೆಟ್ರಿಯಾಸಿಸ್. ಪ್ರಪಂಚದಲ್ಲಿ ಶೇಕಡಾ ಹತ್ತರಷ್ಟು ಮಧ್ಯ ವಯಸ್ಸಿನ ಮಹಿಳೆಯರನ್ನು ಬಾಧಿಸುವ ಈ ಸಮಸ್ಯೆಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಈ ಕುರಿತಾಗಿ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವಿದು.

“ಎಂಡೋಮೆಟ್ರಿಯಾಸಿಸ್” ಎನ್ನುವುದು ಋತುಮತಿಯಾಗುವ ಮಹಿಳೆಯರನ್ನು ಕಾಡುವ ಒಂದು ಸಮಸ್ಯೆ. ಈ‌ ಸಮಸ್ಯೆಯ ಮೂಲ ಗರ್ಭಕೋಶ. ಸ್ತ್ರೀಯರ ಗರ್ಭಕೋಶ Perimetrium, Myometrium, ಮತ್ತು Endometrium ಎಂಬ ಮೂರು ಪದರಗಳ ರಚನೆ. ಇದರಲ್ಲಿ ಮೊದಲೆರಡು ಪದರಗಳು ಶಾಶ್ವತವಾಗಿದ್ದರೆ ಒಳಗಿನ ಈ ಎಂಡೋಮೆಟ್ರಿಯಮ್ ಪ್ರತೀ ಋತುಚಕ್ರಕ್ಕೊಮ್ಮೆ ಕಳಚಿಕೊಂಡು ಪುನಃ ಬೆಳವಣಿಗೆ ಹೊಂದುವ ಸಾಮರ್ಥ್ಯ ಹೊಂದಿರುವ ಪದರ. ಋತುಚಕ್ರದ ಐದನೇ ದಿನದಿಂದ ಬೆಳವಣಿಗೆ ಪ್ರಾರಂಭಿಸಿ ಅಂಡಾಣು ಬಿಡುಗಡೆಯಾಗುವ ದಿನದವರೆಗೂ ಬೆಳೆದು, ಭ್ರೂಣ ಗರ್ಭಕ್ಕೆ ಅಂಟಿಕೊಳ್ಳಲು ಅನುಕೂಲವಾಗುವಂತೆ ಹಾಸನ್ನು ನಿರ್ಮಿಸುವ ಇದು, ಗರ್ಭ ನಿಲ್ಲದೇ ಇದ್ದಾಗ ಹದಿನಾಲ್ಕು ದಿನಗಳ ನಂತರ ಛಿದ್ರಗೊಂಡು ಯೋನಿದ್ವಾರದ ಮುಖಾಂತರ ದೇಹದಿಂದ ಹೊರಬರುತ್ತದೆ. ಇದೇ ಪ್ರತೀ ತಿಂಗಳು ನಡೆಯುವ ಋತುಸ್ರಾವ.

ಫೋಟೋ ಕೃಪೆ : melakafertility

ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಈ ಎಂಡೋಮೆಟ್ರಿಯಮ್ ವಿಶೇಷ ರೀತಿಯ ಜೀವಕೋಶಗಳಿಂದ ಮಾಡಲ್ಪಟ್ಟಿದ್ದು ಈ ಜೀವಕೋಶಗಳು ವೇಗವಾಗಿ ದ್ವಿಗುಣಗೊಳ್ಳುವ ಮತ್ತು ಅದಕ್ಕೆ ತಕ್ಕಂತೆ ರಕ್ತನಾಳಗಳ ವ್ಯೂಹವನ್ನು ರಚಿಸಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿವೆ. ಭ್ರೂಣದ ಇರುವಿಕೆಗೆ ಗರ್ಭಕೋಶದ ಈ ವಿಧವಾದ ಬೆಳವಣಿಗೆ ಅತ್ಯಗತ್ಯ. ಆದರೆ ಕೆಲವರಲ್ಲಿ ಈ ಪ್ರಕ್ರಿಯೆ ವ್ಯತ್ಯಯವಾಗಿ ಎಂಡೋಮೆಟ್ರಿಯಲ್ ಜೀವಕೋಶಗಳು ಗರ್ಭಕೋಶದಿಂದ ಹೊರಗೆ ಬೆಳೆಯಲಾರಂಭಿಸುತ್ತವೆ, ಅದೇ “ಎಂಡೋಮೆಟ್ರಿಯಾಸಿಸ್”. ಈ ಸಮಸ್ಯೆಯಲ್ಲಿ ಎಂಡೋಮೆಟ್ರಿಯಮ್ ಗರ್ಭಕೋಶದ ಮೇಲ್ಮೈ, ಅಂಡಾಶಯ, ಡಿಂಬನಾಳ, ಗರ್ಭಕಂಠ, ಯೋನಿನಾಳ, ಮೂತ್ರಕೋಶ, ದೊಡ್ಡಕರುಳು ಅಥವಾ ಡಯಾಫ್ರಮ್ ಭಾಗಗಳಲ್ಲಿ ಬೆಳೆದು ತೊಂದರೆ ಉಂಟುಮಾಡುತ್ತದೆ. ಈ ಜೀವಕೋಶಗಳು ಹಾರ್ಮೋನುಗಳಿಗೆ ಸಂವೇದನಾಶೀಲವಾಗಿದ್ದು ಋತುಚಕ್ರದ ಏರಿಳಿತಗಳಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿರುತ್ತವೆ.

ಈ ರೀತಿಯ ವಿಚಿತ್ರ ಬೆಳವಣಿಗೆ ಉಂಟಾಗಲು ವೈದ್ಯಕೀಯ ಲೋಕ ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದು, ಅವುಗಳು ಮುಖ್ಯವಾಗಿ : 

1) Retrograde menstruation: ಪ್ರತೀ ತಿಂಗಳ ಋತುಸ್ರಾವದ ಸಮಯದಲ್ಲಿ ಗರ್ಭಕೋಶದಿಂದ ಹೊರಬರಬೇಕಾದ ರಕ್ತ ಹಿಮ್ಮುಖವಾಗಿ ಚಲಿಸಿ ಪೆಲ್ವಿಕ್ ಭಾಗದಲ್ಲಿ ಹೆಪ್ಪುಗಟ್ಟುವುದರಿಂದ ಪದರಗಳು ರಚನೆಯಾಗುವುದು.

2) Transformation of peritoneal cells: ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿನ ಅಂಗಾಂಗಳನ್ನು ಸುತ್ತುವರೆದಿರುವ ಜೀವಕೋಶಗಳನ್ನು ಪೆರಿಟೋನಿಯಲ್ ಸೆಲ್ಸ್ ಎಂದು ಕರೆಯುತ್ತಾರೆ. ಈ ಜೀವಕೋಶಗಳು ಹಾರ್ಮೋನುಗಳ ಪ್ರಭಾವಕ್ಕೆ ಒಳಪಟ್ಟು ಎಂಡೋಮೆಟ್ರಿಯಲ್ ಜೀವಕೋಶಗಳಂತೆ ಬದಲಾಗುವುದು.

3) Embryonic cell transformation: ಬೆಳವಣಿಗೆ ಹಂತದಲ್ಲಿರುವ ಜೀವಕೋಶಗಳು ಈಸ್ಟ್ರೋಜನ್ ಹಾರ್ಮೋನ್ ನ ಅತೀವ ಪ್ರಭಾವಕ್ಕೆ ಒಳಪಟ್ಟು ಎಂಡೋಮೆಟ್ರಿಯಲ್ ಜೀವಕೋಶಗಳಂತೆ ಮಾರ್ಪಡುವುದು.

4) Surgical scar: ಗರ್ಭಕೋಶದ ಸರ್ಜರಿ, ಸಿಸೇರಿಯನ್ ಹೆರಿಗೆ, ಗರ್ಭಪಾತ ಮುಂತಾದ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರಲ್ಲಿ ಶಸ್ತ್ರ ಚಿಕಿತ್ಸೆಯ ಗಾಯದ ಮುಖಾಂತರ ಇತರ ಭಾಗಗಳಿಗೆ ಎಂಡೋಮೆಟ್ರಿಯಮ್ ಹಬ್ಬುವುದು.

6) Endometrial cell transport: ರಕ್ತ ಪರಿಚಲನಾ ವ್ಯೂಹವೇ ಎಂಡೋಮೆಟ್ರಿಯಲ್ ಜೀವಕೋಶಗಳನ್ನು ಗರ್ಭಕೋಶದಿಂದ ಹೊರಗೆ ಕೊಂಡೊಯ್ಯುವುದರಿಂದ ಪೆಲ್ವಿಕ್ ಭಾಗದಲ್ಲಿ ಎಂಡೋಮೆಟ್ರಿಯಮ್ ಬೆಳೆಯುವುದು.

7) Immune system disorder: ಎಂಡೋಮೆಟ್ರಿಯಮ್ ಜೀವಕೋಶಗಳು ಗರ್ಭಕೋಶದಿಂದ ಹೊರಗೆ ಕಾಣಿಸಿಕೊಂಡಾಗ ದೇಹವೇ ಅದನ್ನು ನಾಶಪಡಿಸಬೇಕು. ಆದರೆ ಕೆಲವರಲ್ಲಿ ಆ ಪ್ರಕ್ರಿಯೆ ಸ್ಥಗಿತಗೊಳ್ಳುವುದು. ಮುಂತಾದವು ಸೇರಿವೆ. ಇವುಗಳಲ್ಲದೇ ಗಡ್ಡೆ, ಸಿಸ್ಟ್ ಅಥವಾ ಇತರ ಅನುವಂಶೀಯ ಕಾರಣಗಳಿಂದ ಸಹಾ ಎಂಡೋಮೆಟ್ರಿಯಾಸಿಸ್ ಉಂಟಾಗುವ ಸಾಧ್ಯತೆಗಳಿವೆ.

ಯಾರಲ್ಲಿ ಈ ಎಂಡೋಮೆಟ್ರಿಯಾಸಿಸ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನೋಡುವುದಾದರೆ :

*ಮಗುವಿಗೆ ಜನ್ಮ ನೀಡದೇ ಇರುವವರಲ್ಲಿ.
*ಅವಧಿಪೂರ್ವವಾಗಿ ಋತುಚಕ್ರ ಆರಂಭಿಸಿದವರಲ್ಲಿ.
*ವಯಸ್ಸು ಮೀರಿದರೂ ಋತುಬಂಧಕ್ಕೆ ಒಳಗಾಗದೇ ಇರುವವರಲ್ಲಿ.
*ಋತುಚಕ್ರದ ನಡುವೆ ಕಡಿಮೆ ಅಂತರ ಹೊಂದಿರುವವರಲ್ಲಿ (24 ದಿನಕ್ಕಿಂತ ಕಡಿಮೆ).
*ಋತುಚಕ್ರದಲ್ಲಿ ಅತಿಯಾಗಿ ರಕ್ತಸ್ರಾವ ಆಗುವವರಲ್ಲಿ.
*ಋತುಸ್ರಾವ ಏಳು ದಿನಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವವರಲ್ಲಿ.
*ಅತೀ ಕಡಿಮೆ ದೇಹದ ತೂಕ ಹೊಂದಿರುವವರಲ್ಲಿ.
*ಗರ್ಭ ಸಂಬಂಧಿ ಖಾಯಿಲೆ ಹೊಂದಿರುವವರಲ್ಲಿ.
*ಸಹೋದರಿ,ತಾಯಿ ಅಥವಾ ತಾಯಿಯ ರಕ್ತ ಸಂಬಂಧಿಗಳು ಎಂಡೋಮೆಟ್ರಿಯಾಸಿಸ್ ಹೊಂದಿದ್ದಲ್ಲಿ.
*ದೇಹದಲ್ಲಿ ಈಸ್ಟ್ರೋಜನ್ ಅಂಶ ಅಗತ್ಯಕ್ಕಿಂತ ಹೆಚ್ಚಿದ್ದಲ್ಲಿ.
*ಮುಚ್ಚಿದ ಗರ್ಭಕಂಠ ಅಥವಾ ಯೋನಿದ್ವಾರದ ಸಮಸ್ಯೆ ಹೊಂದಿದ್ದಲ್ಲಿ.
ಎಂಡೋಮೆಟ್ರಿಯಾಸಿಸ್ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

 

ಎಂಡೋಮೆಟ್ರಿಯಾಸಿಸ್ ನ ಲಕ್ಷಣಗಳು ಮುಖ್ಯವಾಗಿ :

*ನೋವಿನಿಂದ ಕೂಡಿದ ಋತುಸ್ರಾವ.
*ಋತುಸ್ರಾವದ ದಿನಗಳಿಗೂ ಮೊದಲು ಕಾಡುವ ಕೆಳಹೊಟ್ಟೆಯ ನೋವು.
*ಆಹಾರ ಜೀರ್ಣವಾಗುವಾಗ ಮತ್ತು ಮಲ ವಿಸರ್ಜನೆಯ ಸಂದರ್ಭದಲ್ಲಿ ನೋವು.
*ಮೂತ್ರ ವಿಸರ್ಜನೆಗೆ ತೊಡಕು, ಮೂತ್ರದ ಬಣ್ಣ ಕೆಂಪಾಗುವುದು.
*ಲೈಂಗಿಕ ಕ್ರಿಯೆ ವೇಳೆ ನೋವು.
*ಋತುಚಕ್ರದಲ್ಲಿ ಅತಿಯಾದ ರಕ್ತಸ್ರಾವ.
*ಋತುಚಕ್ರದ ನಡುವೆ ರಕ್ತಸ್ರಾವ.
*ಬಂಜೆತನ.
*ಋತುಸ್ರಾವದ ದಿನಗಳಲ್ಲಿ ವಾಕರಿಕೆ, ವಾಂತಿ, ಸುಸ್ತು, ಡಯೇರಿಯಾ, ಮಲಬದ್ಧತೆ ಇತ್ಯಾದಿ…

ಇದೊಂದು ನಿಧಾನವಾಗಿ ಬೆಳವಣಿಗೆ ಹೊಂದುವ ಕಾಯಿಲೆಯಾಗಿದ್ದು ಒಮ್ಮೆಲೇ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಬೇಕೆಂದಿಲ್ಲ. ಆದರೆ ಮೇಲಿನ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯಿಸದೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಪೆಲ್ವಿಕ್ ಭಾಗದ ಪರೀಕ್ಷೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಲ್ಯಾಪ್ರೋಸ್ಕೋಪಿ ಅಥವಾ ಅಗತ್ಯಬಿದ್ದಾಗ Abdomen MRI ಮುಖಾಂತರ ಎಂಡೋಮೆಟ್ರಿಯಾಸಿಸ್ ಅನ್ನು ಪತ್ತೆಹಚ್ಚಬಹುದು. ಕೆಲವೊಮ್ಮೆ ಈ ಜೀವಕೋಶಗಳ ಸ್ಯಾಂಪಲ್ ಪಡೆದು ಸಹಾ ಪರೀಕ್ಷಿಸಬೇಕಾಗಬಹುದು. ತೀರಾ ಕೆಲವರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು ಆಗ ನಿಯಮಿತ ವೈದ್ಯಕೀಯ ಪರೀಕ್ಷೆಗಳು ಮಹತ್ವ ಪಡೆಯುತ್ತವೆ.

ಇದೊಂದು ಗುಣಪಡಿಸಬಹುದಾದ ಸಮಸ್ಯೆಯಾಗಿದ್ದು ಎಂಡೋಮೆಟ್ರಿಯಾಸಿಸ್ ನ ತೀವ್ರತೆ, ವಯಸ್ಸು, ಮಗು ಹೊಂದುವ ನಿರ್ಧಾರ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಗರ್ಭನಿರೋಧಕಗಳು, ಹಾರ್ಮೋನುಗಳು, ಮತ್ತು ನೋವು ನಿವಾರಕ ಔಷಧಿಗಳನ್ನು ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ತೀರಾ ಅಗತ್ಯ ಸಂದರ್ಭಗಳಲ್ಲಿ ಲ್ಯಾಪ್ರೋಸ್ಕೋಪಿ ಸರ್ಜರಿ ಅಥವಾ ಕ್ಲಿಷ್ಟಕರ ಸನ್ನಿವೇಶದಲ್ಲಿ ಹಿಸ್ಟರೊಕ್ಟಮಿ ಸರ್ಜರಿ ಅಗತ್ಯವಿದೆ. ಆಯುರ್ವೇದ, ಹೋಮಿಯೋಪತಿ ಮತ್ತು ಯೋಗದ ಮುಖೇನ ಸಹಾ ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿದ್ದು, ಔಷಧಗಳಿಲ್ಲದೇ ಗುಣವಾದ ಉದಾಹರಣೆಗಳೂ ಇರುವುದರಿಂದ ಅತಿಯಾದ ಆತಂಕ ಬೇಕಿಲ್ಲ. ಆದರೆ ವೈದ್ಯರ ಮುಖೇನ ಧೃಡಪಡಿಸಿಕೊಳ್ಳುವುದು ಮುಖ್ಯ.

ಎಲ್ಲಾ ಎಂಡೋಮೆಟ್ರಿಯಾಸಿಸ್ ಗಳು ಕ್ಯಾನ್ಸರ್ ಗೆ ತಿರುಗುವುದಿಲ್ಲ. ಕುಟುಂಬದಲ್ಲಿ ಕ್ಯಾನ್ಸರ್ ನ ಹಿನ್ನೆಲೆ ಉಳ್ಳವರಲ್ಲಿ, ಕ್ಯಾನ್ಸರ್ ಕಾರಕ ಅಂಶಗಳಿಗೆ ತೆರೆದುಕೊಂಡವರಲ್ಲಿ ಮಾತ್ರವೇ ಇದು ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯೂ ತೀರಾ ಕಡಿಮೆಯಾದ್ದು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇನ್ನು ಈ ಸಮಸ್ಯೆ ಇದ್ದವರೂ ಮಗುವಿಗೆ ಜನ್ಮ ನೀಡಬಹುದಾಗಿದ್ದು, ಕೆಲವರಿಗೆ ವೈದ್ಯಕೀಯ ಸಹಾಯ ಬೇಕಾಗಬಹುದು. ಮೆನೋಪಾಸ್ ನಂತರದಲ್ಲಿ ಎಂಡೋಮೆಟ್ರಿಯಾಸಿಸ್ ಸಾಧ್ಯತೆ ಇಲ್ಲವಾದರೂ ಗರ್ಭಕೋಶ ಸೂಕ್ಷ್ಮವಾಗಿರುವುದರಿಂದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದು ಸೂಕ್ತ.

ಎಂಡೋಮೆಟ್ರಿಯಾಸಿಸ್ ಬಾರದಂತೆ ತಡೆಯಲು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಕಾಫಿ, ಟೀ ನಂತಹಾ ಕೆಫಿನ್ ಅಂಶ ಹೊಂದಿರುವ ಪಾನೀಯಗಳನ್ನು ಕಡಿಮೆ ಮಾಡಿಕೊಳ್ಳುವುದು, ಪೌಲ್ಟ್ರಿ ಆಹಾರಗಳನ್ನು ಮಿತಿಗೊಳಿಸುವುದು, ಕೋಸು ಜಾತಿಗೆ ಸೇರಿದ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ನಿಯಮಿತ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟು ಗರ್ಭಕೋಶದ ಆರೋಗ್ಯ ಮತ್ತು ದೇಹದ ಈಸ್ಟ್ರೋಜನ್ ಪ್ರಮಾಣವನ್ನು ಸಮತೋಲನದಲ್ಲಿರಿಸಿಕೊಂಡರೆ ಈ ಸಮಸ್ಯೆ ಕಾಡಲಾರದು. ಗರ್ಭನಿರೋಧಕಗಳನ್ನು ನಿಯಂತ್ರಿಸಿ, ಸರಿಯಾದ ವಯಸ್ಸಿನಲ್ಲಿ ಗರ್ಭ ಧರಿಸಿ, ಮಗುವಿಗೆ ಯತೇಚ್ಛವಾಗಿ ಹಾಲುಣಿಸುವವರು ಈ ಸಮಸ್ಯೆಯಿಂದ ದೂರ ಉಳಿದ ಉದಾಹರಣೆಗಳು ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW