ಕಣ್ಣಾಮುಚ್ಚಾಲೆ…!ಕವನ – ಎ.ಎನ್.ರಮೇಶ್.ಗುಬ್ಬಿ

“ಇದು ಕವಿತೆಯಲ್ಲ ಒಲವಿನ ಕಥನ ಕಾವ್ಯ. ಪ್ರೇಮದ ತುಂಟಾಟ ಒಡನಾಟಗಳ ಭಾವನೈವೇದ್ಯ. ಇದರ ಸ್ವಾದ. ಆಮೋದ ನೋಡಿದವರಿಗೆ, ಆಸ್ವಾಧಿಸಿದವರಿಗೆ, ಅನುಭವಿಸಿದವರಿಗೆ ಚೆನ್ನಾಗಿ ಗೊತ್ತು. ಇಂದಿಗಿಂತ 2-3 ದಶಕಗಳ ಹಿಂದೆ ಈ ದೃಶ್ಯ ನೋಡಲು ನಿತ್ಯವೂ ಸಿಗುತ್ತಿತ್ತು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಅವಳದು ಸ್ವಲ್ಪವೂ ಅತ್ತಿತ್ತ ಕತ್ತು ತಿರುಗಿಸದೆ
ರಸ್ತೆಯುದ್ದಕ್ಕೂ ತಲೆತಗ್ಗಿಸಿ ನಡೆವ ಪರಿಪಾಠ
ಇವನದು ಒಂದು ಕ್ಷಣಕೂ ಕಣ್ರೆಪ್ಪೆ ಅಲುಗಿಸದೆ
ಆ ದಾರಿಯನೇ ದಿಟ್ಟಿಸಿ ನೋಡುವ ನೋಟ..!

ಕಡೆಗೆ ರಸ್ತೆಯಂಚ ತಿರುವಿನಲಿ ಮೆಲ್ಲನೊಮ್ಮೆ
ಹೊರಳಿ ಕಣ್ಣರಳಿಸಿ ನೋಡುತ ನಸುನಕ್ಕಳು
ಕೂಡಲೇ ರೆಪ್ಪೆಯಲುಗಿಸಿ ಇವನು ಮುಗುಳ್ನಕ್ಕ
ಕಾ..ರ..ಣ…
ಅವಳು ನೋಡುತ್ತಾಳೆಂದು ಇವನಿಗೂ ಗೊತ್ತು
ಇವನದಕೇ ಕಾದಿಹನೆಂದು ಅವಳಿಗೂ ಗೊತ್ತು.!
ಅದುವೆ ಒಲವಿನ ತುಂಟಾಟದ ಗತ್ತು ಗಮ್ಮತ್ತು.!

ಅವಳು ಸಿನಿಮಾ ಮಂದಿರದಲ್ಲಿ ಬೆಳ್ಳಿತೆರೆಯನ್ನೇ
ನೋಡುತ್ತಾ ಚಲನಚಿತ್ರದಲ್ಲಿ ಪೂರ್ಣ ಲೀನ
ಅದೇ ಸಾಲಿನಲ್ಲಿ ಕುಳಿತ ಇವನು ಅವಳನ್ನೇ
ಕತ್ತಲಲ್ಲೂ ಎಡಬಿಡದೆ ನೋಡುವುದರಲ್ಲಿ ಮಗ್ನ.!

ಮಧ್ಯೆ ಅವಳು ಪಟ್ಟನೆ ಇವನೆಡೆ ದಿಟ್ಟಿಸಿದಳು
ಇವನು ಥಟ್ಟನೆ ಪರದೆಯೆಡೆ ಮುಖ ತಿರುಗಿಸಿದ
ಮೊಗದೊಳು ಬಿಗುವಿದ್ದರು ಇಬ್ಬರೊಳಗು ನಗು
ಕಾ..ರ..ಣ…
ತನ್ನ ಕದ್ದು ನೋಡುತಿಹನೆಂದು ಅವಳಿಗೆ ಗೊತ್ತು
ಅವಳಿಗದು ಗೊತ್ತಿಹುದೆಂದು ಅವನಿಗೂ ಗೊತ್ತು.!
ಅದುವೆ ಪ್ರೇಮದ ಕಣ್ಣಾಮುಚ್ಚಾಲೆ ಕರಾಮತ್ತು.!

ಸಂಜೆ ಆರಕ್ಕೆ ಅವಳು ಗುಡಿಗೆ ಬರುವ ಪ್ರತೀತಿ
ಆ ಸಮಯಕ್ಕೆ ಹಾಜರಾಗುವುದು ಅವನ ನೀತಿ
ಅವಳದು ಕೈಮುಗಿದು ಪ್ರದಕ್ಷಿಣೆ ಸುತ್ತುವ ಧ್ಯಾನ
ಅವನದು ಕಣ್ಮುಚ್ಚಿ ಹಿಂಬಾಲಿಸುವ ಮೌನಗಾನ.!

ಅವಳು ಬರುವುದನೆ ಇವನ ಕಂಗಳು ಕಾಯುತ್ತಿತ್ತು
ಇವನ ಇರುವನು ಅವಳ ನಯನ ಹುಡುಕುತ್ತಿತ್ತು
ನೋಟ ವಿನಿಮಯದಲಿತ್ತು ಸಂಭ್ರಮದ ಹೊತ್ತು.!
ಕಾ..ರ..ಣ…
ತನ್ನ ದರ್ಶನಕೇ ಬಂದಿಹನೆಂದು ಅವಳಿಗೆ ಗೊತ್ತು
ದರ್ಶನ ಕೊಡಲೇ ಬಂದಿಹಳೆಂದು ಅವನಿಗು ಗೊತ್ತು.!
ಅದುವೆ ಅನುರಾಗದ ರಿಂಗಣಗಳ ಮತ್ತು ಮಸಲತ್ತು.!


  • ಎ.ಎನ್.ರಮೇಶ್.ಗುಬ್ಬಿ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW