ಫ಼್ರೀಯಾದಾಗ ‘ ಮನೆಗೆ ಬನ್ನಿ’ ಎಂದು ಫ಼ಾರ್ಮಲ್ಲಾಗಿ ಹೇಳುವುದಕ್ಕೂ “ಈ ಭಾನುವಾರ ಬೆಳಿಗ್ಗೆ ಮನೆಗೆ ತಪ್ಪದೇ ತಿಂಡಿಗೆ ಬರಲೇ ಬೇಕು”… ಎನ್ನುವುದಕ್ಕೂ ಸಾಕಷ್ಟು ಅಂತರವಿದೆ. ಫ಼ಾರ್ಮಲ್ ಮಾತಿಗೆ ಕಟ್ಟುಬಿದ್ದು ಊಟ ಆಯ್ತಾ, ತಿಂಡಿ ಆಯ್ತಾ, ಕಾಫ಼ೀ ಆಯ್ತಾ ಎಂದು ಬಾಯಿಮಾತಿಗೆ ಕೇಳುತ್ತೇವೆ. ಈ ಫಾರ್ಮಲ್ ಮಾತಿನ ಸುತ್ತ ಲೇಖಕ ಹಿರಿಯೂರು ಪ್ರಕಾಶ್ ಅವರು ಬರೆದ ಸುಂದರ ವಿಮರ್ಶಾ ಲೇಖನ ತಪ್ಪದೆ ಓದಿ….
” ಏನ್ ಪ್ರಕಾಶ್, ಇಲ್ಲೇ ಓಡಾಡ್ತೀರಾ, ಮನೆ ಕಡೆ ಬರೋದೇ ಇಲ್ಲ. ಒಮ್ಮೆ ಬಡವರ ಮನೆಗೆ ಬನ್ರೀ ಪರವಾಗಿಲ್ಲ….
ಎದುರಿಗೆ ಸಿಕ್ಕಾಗಲೆಲ್ಲಾ ಹೀಗೆ ಕೇಳುತ್ತಿದ್ದ ಪರಿಚಿತರೊಬ್ಬರ ಮನಸಿಗೆ ಬೇಸರ ಯಾಕೆಂದು ಇತ್ತೀಚೆಗೆ ಅವರ ಮನೆಗೆ ಹೋಗಿದ್ದೆ. ನಾನು ಅವರ ಮನೆಗೆ ಹೋಗುವುದರಿಂದ ಅವರ ಮೊಗದಲ್ಲಿ ಸಂತಸವಾಗಬಹುದೆಂದು ಹೋಗುವ ಮುನ್ನ ನಾ ಅಂದುಕೊಂಡಿದ್ದು ಸುಳ್ಳಾಗುವಂತಿತ್ತು ಅಂದಿನ ಅವರ ವರ್ತನೆ ! ಹೊರಗೆ ಸಿಕ್ಕಾಗ ಅಷ್ಟು ಜೋಷ್ ನಿಂದ ಆತ್ಮೀಯ ದನಿಯಲ್ಲಿ ಮನೆಗೆ ಬರಲು ಕೇಳುತ್ತಿದ್ದ ಆ ವ್ಯಕ್ತಿ ಅವರ ಮನೆಗೆ ಹೋದಾಗ ಏನೇನೋ ಸಬೂಬು ಹೇಳಿ ಅವಾಯ್ಡ್ ಮಾಡುವಂತೆ ಅಥವಾ ಆದಷ್ಟು ಬೇಗ ನನ್ನನ್ನು ಅಲ್ಲಿಂದ ಸಾಗಿ ಹಾಕುವಂತಿತ್ತು ಅವರ ನಡೆ ನುಡಿ.!
ಇಂತಹಾ ಸೂಕ್ಷ್ಮಗಳು ನಾನು ಬೇಡವೆಂದರೂ ನನ್ನ ಮನಸ್ಸಿಗೆ ನಾಟಿಬಿಡುತ್ವೆ. ಹೀಗಾಗಿ ಅವರು ಕಾಫ಼ೀ ಟೀ ಎಂದು ಬಾಯಿಬಿಡುವ ಮುನ್ನವೇ ಅಲ್ಲಿಂದ ಏನೋ ಕಾರಣ ಹೇಳಿ ಕಾಲ್ಕಿತ್ತಿದ್ದೆ.
ನಾವು ಅವರ ಮನೆಗೆ ಹೋಗೋದು ಇಷ್ಟವಿಲ್ಲವೆಂದ ಮೇಲೆ ಅವರೇಕೆ ಬಲವಂತದಿಂದ ಒತ್ತಾಯ ಮಾಡಿ ಕರೀಬೇಕು? … ಅಥವಾ ಅವರು ಕರೆದದ್ದು ಕೇವಲ ಬಾಯಿಮಾತಿಗೆ ಎಂಬ ಕಾಮನ್ ಸೆನ್ಸ್ ನನ್ನಲ್ಲಿ ಇಲ್ಲವಾಗಿತ್ತೇ…?? ಹೀಗೆ ಬಂದು ಹಾಗೆ ಹೋಗುವ ಕಿರಿಕ್ ಪ್ರಶ್ನೆಗಳಿವು !

ಫೋಟೋ ಕೃಪೆ : google
ಈ ಫ಼ಾರ್ಮಲ್ ಆಹ್ವಾನಗಳು, ಶುಭಾಶಯಗಳು, ಸಂದೇಶಗಳು ನಮ್ಮನ್ನು ಎಷ್ಟೊಂದು ಆವರಿಸಿ ಬಿಟ್ಟಿವೆಯಲ್ಲವೇ? ಈ ಬಗ್ಗೆ ಇನ್ ಫ಼ಾರ್ಮಲ್ ಆಗಿ ನಿಮ್ಮೊಂದಿಗೆ ಒಂದಷ್ಟು ಟೈಮ್‌ಪಾಸ್ ಕೊರೆತ ……
ನಿತ್ಯ ಜೀವನದಲ್ಲಿ ಎದುರಾಗುವ ಅನೇಕ ಸಂಧರ್ಭಗಳಲ್ಲಿ ನಾವಾಡುವ ಮಾತುಗಳೇ ನಮ್ಮೊಳಗಿನ ಭಾವನೆಗಳನ್ನು, ನೈಜ ಮನಸ್ಥಿತಿಯನ್ನು ಅನಾವರಣ ಮಾಡುಬಿಡುತ್ತದೆ. ಅದರಲ್ಲೂ ಆ ಮಾತುಗಳ ಧ್ವನಿಯಲ್ಲಿನ ಏರಿಳಿತ , ಶಬ್ಧಗಳು, ಪಂಚಿಂಗ್ ಇತ್ಯಾದಿಗಳ ಸಂಜ್ಞೆ ಮೂಲಕವೇ ಅದರ ಭಾವಾರ್ಥ ಹುಡುಕಿ ಬಿಡಬಹುದು. ಅವು ಫ಼ಾರ್ಮಲ್ಲೋ…ಇನ್ ಫ಼ಾರ್ಮಲ್ಲೋ ಅಥವಾ ಅದರಲ್ಲಡಗಿರ ಬಹುದಾದ ಸಂತೋಷ , ಸಿಟ್ಟು, ಅಸಹನೆ, ಬಲವಂತ, ಕಾಟಾಚಾರ, ಪ್ರೀತಿ, ಕಾಳಜಿ ,ಕಕ್ಕುಲತೆ, ದ್ವೇಷ ಸಿನಿಕತನ ವ್ಯಂಗ್ಯ…ಎಲ್ಲವನ್ನೂ ಸುಮಾರಾಗಿ ಅಂದಾಜಿಸಬಹುದು.
ಫ಼ಾರ್ಮಲ್ ಆದ ಮಾತುಗಳು ಸವೆದು ತುಕ್ಕು ಹಿಡಿದರೂ, ಅವು ಕೇವಲ ಫ಼ಾರ್ಮಲ್ ಅಂತ ಗೊತ್ತಿದ್ದರೂ ಅವನ್ನು ಈಗಲೂ ಬಿಡದೇ ಫ಼ಾಲೋ ಮಾಡುತ್ತೇವೆ. ಊಟ ತಿಂಡಿಯ ಸಮಯದಲ್ಲಿ ಯಾರಾದರೂ ಎದುರಿಗೆ ಸಿಕ್ಕಾಗ ” ಊಟ ಆಯ್ತಾ, ತಿಂಡಿ ಆಯ್ತಾ, ಕಾಫ಼ೀ ಆಯ್ತಾ ಅಂತೀವಿ. ತಮಾಷೆ ಅಂದ್ರೆ ಅವರ ಊಟವಿನ್ನೂ ಆಗಲಿಲ್ಲವೆಂದರೆ ಅವರಿಗೆ ಕೊಡಿಸೋಣ ಎಂಬ ನೈಜ ಭಾವದಲ್ಲಿ ಯಾರೂ ಕೇಳಿರೋಲ್ಲ ಅಥವಾ ಅವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿದರೋ ಬಿಟ್ಟರೋ ಎಂದು ಕಟ್ಕೊಂಡು ಇವರಿಗೆ ಆಗಬೇಕಾದದ್ದೇನೂ ಇರೋಲ್ಲ . ಆದ್ರೂ…. ಇವೆಲ್ಲವನ್ನೂ ಕೇಳುತ್ತೇವೆ. ಇದು ಬಾಯಿಮಾತಿನ ಸೌಜನ್ಯಕ್ಕೆ ಎಂದೆನಿಸಿದರೂ ತೀರಾ ಪರಿಚಿತರು, ಆತ್ಮೀಯರು ಸಿಕ್ಕಾಗ ಅವರೊಟ್ಟಿಗೆ ತಿಂಡಿ ತಿನ್ನೋಣ ಎಂಬ ಭಾವ ಮನದಲ್ಲಿ ಎಷ್ಟು ಜನಕ್ಕಿರುತ್ತೋ ಗೊತ್ತಿಲ್ಲಾರೀ…. !
ಈ ಫ಼ಾರ್ಮಾಲಿಟಿ ಕೆಲವೊಮ್ಮೆ ಅತೀವ ಕಿರಿಕಿರಿಯನ್ನುಂಟು ಮಾಡೋದು ಸುಳ್ಳಲ್ಲ. ಸಿನಿಮಾ ಮಂದಿರದಲ್ಲಿ ಪರಿಚಯದವರು ಸಿಕ್ಕಾಗ ” ಸಿನಿಮಾ ನೋಡಲು ಬಂದ್ರಾ ” ಎನ್ನುವುದು. ದೇವಸ್ಥಾನಕ್ಕೆ ಬಂದವರನ್ನು ” ಓಹ್ ನೀವೂ ಗುಡಿಗೆ ಬಂದ್ರಾ ” ಎಂದು ಹಲ್ಲು ಕಿರಿಯುವುದು. ಬಸ್ಸಲ್ಲಿ ಕೂತಿರುವವನನ್ನು ” ಏನ್ ಸಮಾಚಾರ ಊರಿಗಾ…? ಎನ್ನುವುದು. ಪಾರ್ಕಿನಲ್ಲಿ ಬೆಳಗಿನ ವಾಯುಬಿಹಾರಕ್ಕೆ ಬಂದವರನ್ನು ” ವಾಕಿಂಗ್ ಗೆ ಬಂದಿರಾ ? ಎಂದು ಪ್ರಶ್ನಿಸುವುದು….. ಇತ್ಯಾದಿ ಸವಕಲು ಫ಼ಾರ್ಮಾಲಿಟಿಗಿಂತ ಸುಮ್ಮನಿರುವುದು ಅಥವಾ ಅದನ್ನು ಬಿಟ್ಟು ಬೇರೆ ಮಾತನಾಡೋದು ಬೆಟರ್ ಅಲ್ಲವೇ..? ಸಧ್ಯ , ತಾಳಿ ಕಟ್ಟುವ ಸಮಯದಲ್ಲಿ ಗಂಡಿನ ಬಳಿ ಹೋಗಿ ” ಏನ್ ಮದುವೆ ಆಗ್ತಾ ಇದೀರಾ…? ಅನ್ನೋರು ಇನ್ನೂ ಕಣ್ಣಿಗೆ ಬಿದ್ದಿಲ್ಲ .!
ಇನ್ನೂ ಕೆಲ ಮಹಾಶಯರು ಸುಖಾಸುಮ್ಮನೇ ” ಏನು ನಮ್ಮ ಮನೆಕಡೆ ಬರಲೇ ಇಲ್ಲವಲ್ಲ ! ಬನ್ನಿಯಪ್ಪಾ ಬಡವರ ಮನೆಗೆ . ಎಂದರೆ, ಮತ್ತೇ ಕೆಲವರು ಎಲ್ಲಿ ಸಿಕ್ಕರೂ ಎದ್ದು ಹೋಗುವ ಮಾತು ಬಿದ್ದೋಗ್ಲೀ ಅಂತ ” ಬನ್ನೀ ಮನೆಗೆ ” ಎಂದು ಹಾಫ಼್ ಹಾರ್ಟೆಡ್ ಆಗಿ ಬಾಯಿಮಾತಲ್ಲಿ ಮಾತ್ರ ಕರೆಯುತ್ತಾರೆ. ಒಂದೊಮ್ಮೆ ಅವರ ಮಾತು ನಂಬಿ ನೀವು ಹೋದಿರೋ…” ಬಡ್ಡೀಮಗ ಏನೋ ಮಾತಿಗೆ ಕರೆದ್ರೆ ಬಂದೇ ಬಿಡೋದಾ” …! ಒಳ್ಳೆ ಟೀವಿ ಕಾರ್ಯಕ್ರಮ ನೋಡೋ ಟೈಮಲ್ಲಿ ಇಲ್ಲವೇ ಊಟ ಮಾಡೋ ಟೈಮಲ್ಲಿ “ಒಳ್ಳೆ ತಿಳಿಸಾರಿಗೆ ಜಿರಲೆ ಬಿದ್ದಂತೆ ಬಂದು ವಕ್ಕರಿಸಿಬಿಟ್ಟ” … ಎಂದು ಹೊರಗೆ ಹೇಳದಿದ್ದರೂ ಒಳಗೆ ಮಂಥಿಸುತ್ತಿರುತ್ತಾರೆ. ಹಾಗೆ ಆಹ್ವಾನಿಸಿದವರಲ್ಲಿ ಕೆಲವರಂತೂ ಅವರ ಮನೆಗೆ ಹೋದರೆ ಗುರ್ತು ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ. ಹೀಗಾಗಿ ಅವರ ಆಹ್ವಾನದ ಹಿಂದಿನ ಆಶಯವನ್ನು ಅರ್ಥಮಾಡಿಕೊಂಡು ಹೋಗೋ ನಿರ್ಧಾರ ಮಾಡೋದು ಬೆಟರ್ರು . ನನಗಾಗಿದ್ದೂ ಇದೇ ಸುಂದರ ಅನುಭವ ! ಹೀಗಾಗಿ ಯಾರನ್ನಾದರೂ ಮನೆಗೆ ಆಹ್ವಾನಿಸಬೇಕೆಂದಿದ್ದರೆ ಮನಸಾರೆ ಕರೆಯಿರಿ. ಅವರು ಬರಲೇ ಬೇಕೆಂಬ ಇಂಗಿತ ನಿಮ್ಮ ಮಾತುಗಳಲ್ಲಿದ್ದರೆ ಒಳ್ಳೆಯದು.

ಫೋಟೋ ಕೃಪೆ : google
ಇನ್ನು ನಿಮಗೆ ಗೊತ್ತಿರುವವರು ಬೆಳಿಗ್ಗೆ ಸಿಕ್ಕಾಗ ಅಥವಾ ಫೋನಿನಲ್ಲಿ ಮಾತನಾಡುವಾಗ ಗುಡ್ ಮಾರ್ನಿಂಗ್ ಹೇಳೋದು ಕಾಮನ್. ಈ ಪ್ರಪಂಚದಲ್ಲಿ ಎಲ್ಲರಿಗೂ ಒಂದೇ ಮಾರ್ನಿಂಗ್ ಇರುತ್ತೆ. ಆದರೆ ಅದು ಗುಡ್ಡೋ ಬ್ಯಾಡೋ ಎಂಬುದು ಅವರವರ ಗುಡ್ ಲಕ್ಕು- ಬ್ಯಾಡ್ ಲಕ್ ಮೇಲೆ ಅವಲಂಬಿತವಾಗಿರುತ್ತೆ. ಹಾಗೆಯೇ ಗುಡ್ ನೈಟ್ , ಸ್ವೀಟ್ ಡ್ರೀಮ್ ಅನ್ನೋದು ಕೂಡಾ. ಅದು ಹೇಳಿದ ಮಾತ್ರಕ್ಕೇ ಕೇಳಿಸಿಕೊಂಡವನಿಗೆ ಕಣ್ಣು ತುಂಬಾ ನಿದ್ದೆ ಬಂದು ಕನಸಲ್ಲಿ ರಚಿತಾ, ರಶ್ಮಿಕಾ ಅಥವಾ ದರ್ಶನ್ನು , ಯಶು, ಸುದೀಪ ಬರೋಲ್ಲ. ಅಥವಾ ಸವಿಯಾದ ಮೈಸೂರು ಪಾಕು- ಜಾಮೂನು ಸಿಗೋಲ್ಲ. ಆದ್ರೂ ಸ್ವೀಟ್ ಡ್ರೀಮ್ಸ್ ಅಂತೀವಿ.
ಪರಿಚಿತರು ಪ್ರಯಾಣ ಮಾಡುವ ಮುನ್ನ ” ಹ್ಯಾಪ್ಪಿ ಜರ್ನೀ ” ಎಂದು ವಿಶ್ ಮಾಡುತ್ತೇವೆ. ಅದೇ ಪ್ರಯಾಣದ ಸಮಯದಲ್ಲೇ ನಿಮ್ಮ ಸೀಟಿನ ಪಕ್ಕ ನಿಮ್ಮ ಸೀರಿನ ಅರ್ಧ ಜಾಗವನ್ನೂ ಒತ್ತುವರೀ ಮಾಡಿಕೊಳ್ಳುವ ಒಬ್ಬ ಧಡೂತಿ ಆಸಾಮಿಯೋ, ಮೊಬೈಲ್ ಹಿಡ್ಕೊಂಡು ಜೋರಾಗಿ ಕಿರುಚುವವನೋ, ಕೆಟ್ಟ ಅಭಿರುಚಿಯವನೋ ಸಿಕ್ಕಿ ಪ್ರಯಾಣವನ್ನು ನರಕ ಮಾಡಿರುತ್ತಾನೆ ಇಲ್ಲವೇ ಬಸ್ಸು, ರೈಲು, ವಿಮಾನ ತಡವಾಗಿ ನೀವು ಸೇರಬೇಕಾದ ಜಾಗ ತಲುಪುತ್ತದೆ. ನೀವು ವಿಶ್ ಮಾಡಿಸಿಕೊಂಡಿದ್ದರ ಉಲ್ಟಾನೇ ಸಂಭವಿಸಿರುತ್ತೆ.
ಇನ್ನು ಹೊಸ ವರ್ಷದ ದಿನವಂತೂ ಎಲ್ಲರ ಬಾಯಲ್ಲೂ ಹ್ಯಾಪ್ಪಿ ನ್ಯೂ ಇಯರ್ ಕೇಳಿ ಕೇಳಿ ಸಾಕಾಗಿಬಿಟ್ಟಿರುತ್ತೆ .! ಏನೇ ಹ್ಯಾಪ್ಪಿ ಹೇಳಿದರೂ ಆ ಇಯರ್ರು ಬಹುತೇಕರ ಪಾಲಿಗೆ ಪಾಪರ್ರೇ ! ಅಂದರೆ ಹ್ಯಾಪ್ಪಿಗಿಂತ ಅನ್‌ಹ್ಯಾಪ್ಪಿ, ಸಂತಸಕ್ಕಿಂತ ದುರಂತವೇ ಹೆಚ್ಚಾಗಿರುತ್ತದೆ. ಆದರೂ ಪ್ರತೀ ಡಿಸೆಂಬರ್ 31 ರ ರಾತ್ರಿ ಶುರುವಾದ ಶುಭಾಶಯ ಜನವರಿ ಒಂದರ ರಾತ್ರಿವರೆಗೂ ಇದ್ದರೂ ಜನವರಿ ಕಳೆದರೂ ವರ್ಷವಿಡೀ ಜನರ “ವರೀ” ಮಾತ್ರ ಮುಂದುವರೆಯುತ್ತಲೇ ಇರುತ್ತದೆ.
ಇವೆಲ್ಲಾ ಒಂಥರಾ ಆದ್ರೆ , ಇನ್ನು ಕೆಲವು ಡೈಲಾಗುಗಳಲ್ಲಿನ ಅಸಹನೆಯ ಏರಿಳಿತವನ್ನು ಗಮನಿಸಬಹುದು.

ಫೋಟೋ ಕೃಪೆ : google
ನಿತ್ಯವೂ ಅಡಿಗೆ ರೆಡಿಯಾದ ತಕ್ಷಣ ” ಊಟಕ್ಕೆ ಬನ್ನಿ ” ಎಂದು ಪ್ರೀತಿಯಿಂದ ಕರೆಯುತ್ತಿದ್ದ ಹೆಂಡತಿ, ಕೋಪ ದಲ್ಲಿದ್ದಾಗ ” ಅಡಿಗೆ ಆಗಿದೆ ಬೇಕಾದ್ರೆ ಹೋಗಿ ಬಡಿಸ್ಕೊಳ್ಳಿ ಅಂತಾನೋ ಅಥವಾ ” ಊಟ ಮಾಡೋ ಆಗಿದ್ರೆ ಡೈನಿಂಗ್ ಹಾಲ್ ಗೆ ಹೋಗಿ ” ಎಂತಲೋ ಇಲ್ಲವೇ ಪರೋಕ್ಷವಾಗಿ ಮಕ್ಕಳಿಗೆ ” ನಿಮ್ಮಪ್ಪನಿಗೆ ಊಟ ಬೇಕಾದ್ರೆ ಮಾಡಲು ಹೇಳು..ಎನ್ನುತ್ತಾ ತಿವಿಯುತ್ತಾಳೆ. ಒಂದು ಪ್ಲಸ್ ಪಾಯಿಂಟ್ ಅಂದ್ರೆ ಆಕೆಗೆ ಏನೇ ಕೋಪ ಇದ್ರೂವೇ, ಗಂಡ ಊಟ ಮಾಡಲಿ ಎಂಬ ಅಂತಃಕರಣ ಅಂತೂ ಇದ್ದೇ ಇರುತ್ತೇ ಕಣ್ರೀ..!
ಇದೊಂದೇ ಅಲ್ಲ. ಗಂಡ ಹೆಂಡತಿ ಮುನಿಸಿನಲ್ಲಿದ್ದಾಗ ಅವರ ಸಂಜ್ಞೆಗಳ ಸಕಲ ಕಲಾವತಾರ ಸಕತ್ ಮಜಾಕೊಡುತ್ತೆ. ಒಬ್ಬರಿಗೊಬ್ಬರು ನೇರವಾಗಿ ಹೇಳದೇ ಎಲ್ಲದಕ್ಕೂ ಮಕ್ಕಳನ್ನೇ ರಾಯಭಾರಿಗಳನ್ನಾಗಿ ಮಾಡುವ ರೀತಿ ಕೊನೆಗೆ ಮಕ್ಕಳಿಗೆ ಕಿರಿಕಿರಿಯಾಗಿ ಅವರೂ ಸಹನೆ ಕಳೆದುಕೊಂಡು ” ಬೇಕಾದ್ರೆ ನಿನ್ ಗಂಡನ್ನ/ ನಿಮ್ ಹೆಂಡತೀನಾ ನೀವೇ ಕೇಳಿ ಅನ್ನೋ ಲೆವೆಲ್ಲಿಗೆ ಗಂಡ ಹೆಂಡಿರ ಮೌನ ಯುದ್ಧದ ಸಂಭಾಷಣೆ ಮುಂದುವರೆದಿರುತ್ತೆ.
ನನಗೂ ಗೊತ್ತು…ನಮ್ಮಲ್ಲಿ ಬಹಳಷ್ಟು ಜನರ ಆಹ್ವಾನಗಳು, ಮಾತುಗಳು, ಸಂದೇಶಗಳು ಆಯಾ ಸಂಧರ್ಭಕ್ಕನುಗುಣವಾಗಿ ಕೇವಲ ಸೌಜನ್ಯಕ್ಕೆ ಅಥವಾ ಬಾಯಿಮಾತಿಗೆ ಆಡುವ ಮಾತುಗಳೆಂದು ! ಅದರಲ್ಲೂ ನಗರ ಮಹಾನಗರ ಪ್ರದೇಶಗಳಲ್ಲಿ ಈ ಫ಼ಾರ್ಮಲ್ ಮಾತುಗಳ ವರಸೆಗಳು ಹೆಚ್ಚು. ಆದರೆ ಸೌಜನ್ಯಕ್ಕೆ ಕರೆದದ್ದನ್ನೇ ನಿಜವೆಂದು ನಂಬಿಕೊಂಡು ನಡೆಯುವ ಅಮಾಯಕರಿಗಾಗಿಯೇ ಈ ನಾಲ್ಕು ಸಮಾಧಾನದ ಮಾತುಗಳ ಫ಼ಾರ್ಮಲ್ ನುಡಿನಮನ !
** ಮರೆಯುವ ಮುನ್ನ **
ಕುಳಿತುಕೊಳ್ಳಿ .. ಕುಕ್ಕರ್ ಬಡೀರಿ ಎನ್ನುವ ಈ ಎರಡೂ ಶಬ್ಧಗಳು ಕೊಡೋದು ಒಂದೇ ಮೀನಿಂಗು . ಆದರೆ ಹೇಳುವ ರೀತಿಯಲ್ಲಿ ತುಂಬಾ ವ್ಯತ್ಯಾಸವಿದೆ. ಹಾಗೆಯೇ ಫ಼್ರೀಯಾದಾಗ ‘ ಮನೆಗೆ ಬನ್ನಿ’ ಎಂದು ಫ಼ಾರ್ಮಲ್ಲಾಗಿ ಹೇಳುವುದಕ್ಕೂ “ಈ ಭಾನುವಾರ ಬೆಳಿಗ್ಗೆ ಮನೆಗೆ ತಪ್ಪದೇ ತಿಂಡಿಗೆ ಬರಲೇ ಬೇಕು”… ಎನ್ನುವುದಕ್ಕೂ ಸಾಕಷ್ಟು ಅಂತರವಿದೆ. “ಊಟಕ್ಕೆ ಬನ್ನಿ” ಎಂದು ಕರೆಯುವುದರ ಹಿಂದಿನ ಹೆಂಡತಿಯ ಪ್ರೀತಿಗೂ, “ಅಡಿಗೆ ಆಗಿದೆ, ಊಟ ಮಾಡೋ ಆಗಿದ್ರೆ ಹೋಗಿ….. ಎನ್ನುವುದರ ಹಿಂದಿನ ಅವಳ ಅಸಹನೆಗೂ ವ್ಯತ್ಯಾಸವಿದೆ. ಪಯಣಿಸುವ ಮುನ್ನ ಹ್ಯಾಪ್ಪಿ ಜರ್ನೀ ಎನ್ನುವ ಫ಼ಾರ್ಮಾಲಿಟಿಗೂ ” ಊರು ಸೇರಿದ ತಕ್ಷಣವೇ ಫೋನ್ ಮಾಡಿ ತಿಳಿಸಿ ” ಎನ್ನುವುದರ ಹಿಂದಿನ ಕಾಳಜಿಯ ಕಳಕಳಿಗೂ ಅಂತರವಿದೆ. ಸಿನಿಮಾ ಮಂದಿರದಲ್ಲಿ ಸಿಕ್ಕ ಪರಿಚಿತರನ್ನು ಏನ್ ಸಿನಿಮಾ ನೋಡಲು ಬಂದಿರಾ…. ಎನ್ನುವ ಬದಲು ” ಸಿನಿಮಾ ಹೇಗಿದೆ ” ಎಂತಲೋ , ‘ಸಿನಿಮಾ ಚೆನ್ನಾಗಿದೆಯಂತೆ’ ಎನ್ನುವ ಪ್ರಾಮಾಣಿಕ ಮಾತುಗಳಿದ್ದರೆ ಚೆನ್ನ ಅಲ್ಲವೇ..? ಆತ್ಮೀಯರಿಗೆ ಸುಖಾಸುಮ್ಮನೇ ಹ್ಯಾಪ್ಪಿ ನ್ಯೂ ಇಯರ್ ಎನ್ನುವ ಬದಲು ಈ ವರ್ಷ ಅವರ ಯೋಚನೆಗಳ, ಯೋಜನೆಗಳ ಯಶಸ್ಸಿಗೆ ಮನದುಂಬಿ ಹಾರೈಸಬಹುದಲ್ಲವೇ…?
ಯಾರೇನೇ ಅಂದರೂ ಮೀನಿಂಗೇ ಇರದ, ಉದ್ದೇಶವೇ ಸ್ಪಷ್ಟವಾಗಿರದ ಒಣಸೇಬಿನಂತಿರುವ ಈ ಫ಼ಾರ್ಮಲ್ ಮಾತುಗಳು ಸವಕಲಾಗಲು ಸಾಧ್ಯವೇ…??
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
