ಈ ಲೇಖನ ಕಪ್ಪೆಗಳ ಜೊತೆಗೆ ನಮ್ಮ ಬಾಲ್ಯದ ನೆನಪನ್ನು ಮಾಡಿಕೊಡುತ್ತದೆ, ಮತ್ತೊಂದು ಕಡೆ ಇಂದು ಕಪ್ಪೆಗಳು ಮಾಯವಾಗುತ್ತಿರುವುದು ಚಿಂತನೆಗೆ ಎಡೆ ಮಾಡಿಕೊಡುತ್ತದೆ. ಖ್ಯಾತ ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರು ಬರೆದಿರುವ ಈ ಲೇಖನವನೊಮ್ಮೆ ಓದಿ ಮತ್ತೆ ಬಾಲ್ಯಕ್ಕೆ ತಿರುಗಿ…
ಆ ಕೆಲವು ಘಟನೆಗಳನ್ನು ನೆನಪಿಸಿಕೊಂಡರೆ ನೋವು ವಿಷಾದಗಳೆರಡೂ ಉಂಟಾಗುತ್ತವೆ ಈಗ . ನಮ್ಮ ಚಿಕ್ಕಂದಿನ ಹಳ್ಳಿಗಾಡಿನ ಬದುಕಿನಲ್ಲಿ #ಕಪ್ಪೆ ಉರೂಫ್ ಕಪ್ಪಲಕ್ಕಗಳನ್ನು ಗೋಳು ಹೊಯ್ದುಕೊಂಡಂತೆ ಬೇರ್ಯಾವ ಪ್ರಾಣಿ ಪಕ್ಷಿಗಳನ್ನೂ ಗೋಳು ಹೊಯ್ದುಕೊಂಡಿಲ್ಲವೆನಿಸುತ್ತದೆ ನನಗೆ . ಮಳೆಗಾಲ ಮತ್ತು ಬೇಸಿಗೆ ಕಾಲಗಳಲ್ಲಿ ಪ್ರತಿನಿತ್ಯವೂ ಕಪ್ಪೆಗಳು ಕಣ್ಣಿಗೆ ಬೀಳುತ್ತಿದ್ದವು . ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಎಲ್ಲಂದರಲ್ಲೆ ನಾನಾ ಬಗೆಯ , ವಿವಿಧ ಗಾತ್ರದ ಕಪ್ಪೆಗಳು ಪ್ರತ್ಯೇಕವಾಗಿಬಿಡುತ್ತಿದ್ದವು . ಹೊಸ್ತಿಲು ದಾಟಿ ಮನೆಗಳೊಳಕ್ಕೂ ಪುಟ ಪುಟ ಎಗರಿಕೊಂಡು ಬರುತ್ತಿದ್ದವು . ಅಂಥ ಕಪ್ಪೆಗಳನ್ನು ಕೈಯಿಂದ ಎತ್ತಿ ಹೊರಕ್ಕೆ ಬೀಸಿ ಎಸೆಯುತ್ತಿದ್ದೆವು . ನಮ್ಮ ಪ್ರೈಮರಿ ,ಮಿಡ್ಲಿಸ್ಕೂಲುಗಳಿಗೂ ಕಪ್ಪೆಗಳು ಎಗರಿ ಬಂದದ್ದು ನನಗಿನ್ನೂ ಚನ್ನಾಗಿ ನೆನಪಿದೆ . ಸ್ಕೂಲಿನಲ್ಲಿ ನಾವು ಗಲಾಟೆ ಮಾಡುತ್ತಿದ್ದರೆ ” ಒಳ್ಳೆ ಕಪ್ಪೆಗಳು ವಟರ್ ಗುಟ್ಟಿದಂಗೆ ವಟರ್ ಗುಡ್ತಿರಲ್ವಲೇ ..” ಎಂದು ಮೇಷ್ಟ್ರುಗಳು ನಮ್ಮನ್ನು ಕಪ್ಪೆಗಳಿಗೆ ಹೋಲಿಸುತ್ತಿದ್ದರು. ಹಟ್ಟಿಯ ಮುಂದೆ ಓಡಾಡುತ್ತಿದ್ದ ಕಪ್ಪೆಗಳನ್ನು ಸೌದೆ, ಬರಲು, ಕಲ್ಲುಗಳಿಂದ ಹೊಡೆದು ಸಾಯಿಸುತ್ತಿದ್ದೆವು . ದೊಡ್ಡವರು ” ಲೇ ಸುಮ್ಕಿರ್ರೊ ಪಾಪ , ಅವ್ವೇನು ಕಚ್ಚಲ್ಲ , ಕಡಿಯಲ್ಲ ..” “ಅಪ್ಪಯ್ಯ ಕಪ್ಪೆ ಸಾಯಿಸಿದ್ರ ಬೆನ್ನು ಒಣ್ಗ್ತೈತೆ ..ಮುಂದಿನ ಜನ್ಮದಾಗೆ ನಡ ಇಲ್ದೆ ಹುಟ್ತೀರ…” ಇತ್ಯಾದಿಯಾಗಿ ಹೇಳುತ್ತಿದ್ದರು .

ಗದ್ದೆ ,ಕೆರೆ ,ಕಾಲುವೆಗಳಲ್ಲಿ ಇರುತ್ತಿದ್ದ ಕಪ್ಪೆಗಳು ಕತ್ತಲಾಗುತ್ತಿದ್ದಂತೆ ಒಂದೇ ಸಮನೆ ವಟರಗುಟ್ಟುತ್ತಿದ್ದ ಶಬ್ದ ಏರಿಳಿತಗಳೊಂದಿಗೆ ಅಬ್ಬರದ ಸಂಗೀತದಂತೆ ಕೇಳಿಬರುತ್ತಿತ್ತು . ಮಧ್ಯಾಹ್ನದ ಹೊತ್ತು ಕಪ್ಪೆಗಳು ವಟರುಗುಟ್ಟುವ ಸದ್ದು ಕೇಳಿದರೆ ದೊಡ್ಡವರು ” ಓಹೊ ಮಧ್ಯಾಹ್ನಕ್ಕೆ ಶುರು ಮಾಡ್ಕಂಡ್ವಲ್ಲಪ್ಪ ಕಪ್ಪೆಗಳು , ಇವೊತ್ ನಾಳೇಲಿ ಮಳೆ ಗ್ಯಾರಂಟಿ ಬತ್ತದೆ..” ಎನ್ನುತ್ತಿದ್ದರು .ಒಮ್ಮೊಮ್ಮೆ ಅದೇ ರೀತಿ ಮಳೆ ಬಂದುಬಿಡುತ್ತಿತ್ತು . ರಾತ್ರಿಯ ಹೊತ್ತು ಭತ್ತದ ಗದ್ದೆ , ಕಬ್ಬಿನ ತೋಟಗಳಿಗೆ ನೀರು ಕಟ್ಟಲು ಹೋದಾಗಲಂತೂ ವಟರ್… ವಟರ್… ಎನ್ನುವ ಶಬ್ದದ ಕಾಡಲ್ಲಿ ಸುತ್ತಾಡುತ್ತಿರುವವೇನೋ ಅನ್ನಿಸುತ್ತಿತ್ತು.

ಕಪ್ಪೆಗಳ ವಟರುಗುಟ್ಟುವಿಕೆಗೆ ಕಾರಣ ನನಗೆ ಮೊನ್ನೆಯವರೆಗೂ ತಿಳಿದಿರಲಿಲ್ಲ . ಮೊನ್ನೆ ಮದನಪಲ್ಲಿ ಹತ್ತಿರದ ನನ್ನ ಆತ್ಮೀಯ ಗೆಳೆಯ ಮತ್ತು ಕ್ಲಾಸ್ ಮೇಟ್ ಸಿ . ಜಿ . ಶ್ರೀನಿವಾಸನ್ ತೋಟಕ್ಕೆ ನಾನೂ ಪರಿಸರವಾದಿ ಡಾ .ಹೆಚ್ .ಆರ್ .ಸ್ವಾಮಿ ,ಹಾಡುಗಾರ ಮುನಿರೆಡ್ಡಿ ಶ್ರೀನಿವಾಸನ್ ಜೊತೆ ಹೋಗಿ ರಾತ್ರಿಯ ಬೆಳದಿಂಗಳಿನಲ್ಲಿ ವಿದೇಶಿ ದ್ರವರಾಕ್ಷಸಿಯೊಂದಿಗೆ ಆಕಾಶದ ವೈಚಿತ್ರಗಳನ್ನು ಕಣ್ಣು ತುಂಬಿಕೊಳ್ಳುತ್ತಾ , ಮುನಿರೆಡ್ಡಿಯ ಜನಪದ ಹಾಡುಗಳನ್ನು ಕಿವಿತುಂಬಿಕೊಳ್ಳುತ್ತಾ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಿರುವಾಗ ಗೆಳೆಯ ಸ್ವಾಮಿಯವರು ” ಬಾಸ್ ಕಪ್ಪೆಗಳು ವಟರಗುಟ್ಟೋದು ಪರಸ್ಪರ ಗಂಡು ಹೆಣ್ಣುಗಳನ್ನು ಆಕರ್ಷೀಸೋದುಕ್ಕೆ. ನಗರ, ಪಟ್ಟಣಗಳ ಕೆರೆಗಳಲ್ಲಿ ಇವೊತ್ತು ಕಪ್ಪೆಗಳ ಸಂಖ್ಯೆ ಕಡಿಮೆಯಾಗಲು ಶಬ್ದ ಮಾಲಿನ್ಯ ಕಾರಣ . ಗಂಡು ಹೆಣ್ಣು ಕಪ್ಪೆಗಳು ಶಬ್ದಕ್ಕೆ ಆಕರ್ಷಣೆಗೊಂಡು ಒಂದನ್ನೊಂದು ಸೇರಲು ಹೊರಟಾಗ ವಾಹನಗಳ ವಿಪರೀತ ಶಬ್ದದಿಂದ ಕನ್ಫ್ಯೂಸ್ ಆಗಿ ಒಂದನ್ನೊಂದು ಸೇರೋದೇ ಇಲ್ಲ. ಎಂಥ ಜೈವಿಕ ಅನ್ಯಾಯ ಬಾಸ್..” ಎಂದು ನಮ್ಮನ್ನು ಚಕಿತಗೊಳಿಸಿದ್ದರು.

ಫೋಟೋ ಕೃಪೆ : toadcambridge
ನಾನು ಹೈಸ್ಕೂಲು ಓದುವಾಗ ಕೆಂಪಾಂಬುದಿ ಕೆರೆಯಲ್ಲಿ ( ಮೆಜೆಸ್ಟಿಕ್ ಬಸ್ಟ್ಯಾಂಡ್ ಇರುವ ಸ್ಥಳ ) #ಕಪ್ಪೆಗಳು ವಟರಗುಟ್ಟುತ್ತಿದ್ದದ್ದು ನೆನಪಿಗೆ ಬಂದಿತ್ತು. ಹದಿನಾಲ್ಕು ವರ್ಷಗಳ ಹಿಂದೆ ನಾನು ನಾಗರಬಾವಿಯಲ್ಲಿ ಮನೆ ಕಟ್ಟಿದಾಗ ಮಸ್ತಾಗಿ ಕಾಣಿಸುತ್ತಿದ್ದ ಕಪ್ಪೆಗಳು ಈ ಐದಾರು ವರ್ಷಗಳಿಂದ ಕಣ್ಣಿಗೆ ಕಾಣದಂತಾಗಿವೆ .ರಾಜಕಾರಣಿಗಳ ಪಕ್ಷಾಂತರವನ್ನು ಕಪ್ಪೆಗಳ ನೆಗೆತಕ್ಕೆ ಹೋಲಿಸುವುದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಮಳೆ ಸುರಿಯುತ್ತಿದೆ ನಮ್ಮ ಮನೆ ಕಡೆ. ಕಪ್ಪೆಯೊಂದು ಕಣ್ಣಿಗೆ ಬೀಳಬಹುದೆ…
- ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)
