ಯಾವುದೇ ಒಂದು ಟ್ರೆಂಡ್ ಗೆ ನಾವು ಕೊಡುವ ಡೆಫ಼ಿನೇಷನ್‌ಗಳು ಆಯಾ ಕಾಲದವರ ಮನೋಭಾವವನ್ನು ಸೂಚಿಸುತ್ತದೆ. ಮೊದಲೆಲ್ಲಾ ಜೀವನದಲ್ಲಿ ಬೇಸರವಾದಾಗ ಅಥವಾ ಜುಗುಪ್ಸೆ ಯಾದಾಗ ಗಡ್ಡ ಬಿಟ್ಟು ಬಾರ್ ನಲ್ಲಿ ಕೂತು ಎಣ್ಣೆ ಹಾಕುತ್ತಿದ್ದ ಆಸಾಮಿಗಳಿದ್ದರು. ಆದರೆ ಇಂದು ಅದೇ ಗಡ್ಡ ಟ್ರೆಂಡ್ ಆಗಿದೆ.ಗಡ್ಡದ ಕುರಿತು ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಬರೆದ ಗಡ್ಡದ ವಿಷಯ…
” ನೀನು ಹಿಂಗೆಲ್ಲಾ ಗಡ್ಡ ಬಿಟ್ಕೊಂಡು ಓಡಾಡ್ತಾ ಇದ್ರೆ ನೋಡ್ದೋರು ಏನ್ ಅಂದ್ಕೋ ಬೇಕೋ, ಬೇಕೂಫ಼ಾ…. ? ಒಳ್ಳೆ ಸನ್ಯಾಸಿ ಥರ ಗಡ್ಡ ಬಿಟ್ಕೊಂಡಿದ್ರೆ ನಿನಗೆ ಮುಂದೆ ಯಾವನೋ ಹೆಣ್ಣು ಕೊಡ್ತಾನೆ..?? ಮೊದಲು ನೀಟಾಗಿ ಕ್ರಾಪ್ ಮಾಡಿಸಿ ಆ ಮೇಕೆ ಗಡ್ಡ ಬೋಳಿಸಿ ಲಕ್ಷಣವಾಗಿರೋದನ್ನ ಕಲಿಯೋ ಅಯೋಗ್ಯ ! ದೇವ್ರೇ ಒಂದು ರೂಪ ಕೊಟ್ರೆ ಈ ಮುಂಡೇದೇ ಒಂದು ಅವತಾರ ! ……. …..
ಎಂಭತ್ತರ ದಶಕದಲ್ಲಿ ಹೀಗೆ ಸೋನೆ ಮಳೆಯಂತೆ ಒಂದೇ ಸಮನೆ ಎಡಬಿಡದೇ ನನ್ನನ್ನು ಎಲೆ ಅಡಿಕೆ ಹಾಕಿಕೊಳ್ಳದೇ ಉಗಿಯುತ್ತಲೇ ಇದ್ದ ನಮ್ಮಜ್ಜಿಗೆ ಮುಂದೊಂದು ದಿನ ಈ ಗಡ್ಡದವರೇ ದೇಶ ಆಳೋದು ಎಂಬ ಕಲ್ಪನೆಯೇ ಇರಲಿಲ್ಲ ಅನ್ಸುತ್ತೆ ! ಇದ್ದಿದ್ರೆ..ಕೊನೇವರೆಗೂ ಗಡ್ಡ ತೆಗೀಬೇಡಾ ಮಗಾ ಅಂತ ಆದೇಶಿಸುತ್ತಿದ್ದರೇನೋ…. ! ಮೇಲಾಗಿ ಗಡ್ಡಕ್ಕೂ ಒಂದು ಇಂಟರ್ ನ್ಯಾಶನಲ್ ಡೇ ಅಂತ ಇರುತ್ತೆ ಎನ್ನುವ ಯೋಚನೆಗಳೂ ಆಗೆಲ್ಲಾ ಇರ್ಲಿಲ್ಲ ಬಿಡಿ..!

ಫೋಟೋ ಕೃಪೆ : Reddit
ಅಜ್ಜಿ ಬಯ್ಯುವಾಗ ಖದರ್ ಫ಼ುಲ್ಲಾಗಿದ್ದು, ಸಿಟ್ಟು ಬಂದಾಗ ಅಥವಾ ಸಿಕ್ಕಾಪಟ್ಟೆ ಉಗಿಯುವಾಗ ಮಾತ್ರ ಎಲೆ ಅಡಿಕೆ ಅವರ ಬಯ್ಗಳಿಗೆ ಸಾಥ್ ನೀಡುತ್ತಾ ರಂಗೇರಿಸುತ್ತಿತ್ತು ! ಆಗೆಲ್ಲಾ ಸದಾ ಗಡ್ಡ ಬಿಟ್ಟು ಕೊಂಡು ಇರುತ್ತಿದ್ದ ನಾನು ಅವರ ಕಣ್ಣಿಗೆ ಮಾತ್ರ ಏನೋ ದೊಡ್ಡ ಅಪರಾಧ ಮಾಡಿದ ಪರಪ್ಪನ ಅಗ್ರಹಾರದ ಖೈದಿಯಂತೆ ಅಥವಾ ತಾಲಿಬಾನಿನ ಕೇಡಿಯಂತೆ ಗೋಚರಿಸಿದ್ದೆ ಅನ್ಸುತ್ತೆ !
ಕೇವಲ ಅಜ್ಜಿ ಮಾತ್ರವಲ್ಲ , ಮತ್ತೇ ನನಗೆ ಗೊತ್ತಿರೋರಲ್ಲಿ ಸಹಾ ಕೆಲವರು ” ಶೇವ್ ಮಾಡಿ ಕೊಳ್ಳಲು ಕಾಸಿಲ್ಲಾ ಅಂದ್ರೆ ಕೇಳೋ.. ಕೊಡ್ತೀವಿ ಅದನ್ನು ಬಿಟ್ಟು ಹೆಂಡತಿ ಸತ್ತಿರೋರ್ ಥರಾ ಹಿಂಗ್ಯಾಕೋ ಇದ್ದೀಯಾ ? ಅಂತ ಇನ್ನೂ ಮದುವೆ ಯಾಗದಿದ್ದ ದಿನಗಳಲ್ಲಿ ಪ್ರಶ್ನಿಸುತ್ತಿದ್ದದ್ದೂ ನೆನಪಲ್ಲಿದೆ. ಅಂದಿನ ದಿನಗಳಲ್ಲಿ, ಸನ್ಯಾಸಿಗಳು, ಸಂತರು, ಎಲ್ಲವನ್ನೂ ಕಳೆದುಕೊಂಡವರು, ವಿಧುರರು, ನಿರ್ಗತಿಕರು, ದುರ್ದೈವಿಗಳು ಮಾತ್ರ ಗಡ್ಡ ಬಿಡುವರೆಂಬ ಥಿಯರಿಯನ್ನು ತೇಲಿ ಬಿಟ್ಟಿದ್ದೂ ಸಹಾ ನಮ್ಮಂಥ ಗಡ್ಡಧಾರಿಗಳಿಗೆ ಬೆಂಬಲ ಕಡಿಮೆಯಾಗಲು ಕಾರಣವಾಗಿತ್ತು.
ನನಗೆ ಗಡ್ಡ ಮೀಸೆ ಚಿಗುರಲು ಆರಂಭವಾದಾ ಗಿನಿಂದಲೂ ವಿಶೇಷವಾಗಿ ನನ್ನ ಕಾಲೇಜು ದಿನಗಳಲ್ಲಿ ಸದಾ ಗಡ್ಡಧಾರಿಯಾಗಿಯೇ ಇರುತ್ತಿದ್ದೆ. ಅದಕ್ಕೆ ವಿಶೇಷ ಕಾರಣ ಅಂತ ಇರಲಿಲ್ಲ. ಜಸ್ಟ್….ಹಾಗೇ ಸುಮ್ಮನೇ..ಅಷ್ಟೇ ! ಆಗಿನ ಜ಼ಮಾನಾದ ಸಿನಿಮಾ ರಂಗದಲ್ಲೂ ಯಾವ ಪ್ರಮುಖ ಹೀರೋಗಳು ಗಡ್ಡಬಿಟ್ಟವರಾಗಿರಲಿಲ್ಲ. ತುಂಬಾ ದುಃಖಕರ ಸನ್ನಿವೇಶಗಳಲ್ಲಿ ಮಾತ್ರ ಅಣ್ಣಾವ್ರು ಸೇರಿದಂತೆ ಎಲ್ಲಾ ಹೀರೋಗಳು ಗಡ್ಡ ಬಿಟ್ಟಿರುತ್ರಿದ್ರು . ಆದರೆ ಶಂಕರ್ ನಾಗ್ ಎಂಬ ಡೈನಾಮಿಕ್ ಹೀರೋ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ನನ್ನಂಥವನ ಗಡ್ಡದ ಬಯಕೆಗೆ ಆನೆಬಲ ಸಿಕ್ಕಂತಾಗಿತ್ತು. ನಾನೂ ಥೇಟ್ ಅವರಂತೆಯೇ ಸ್ಟೈಲ್ ಆಗಿ ಗಡ್ಡ ಬಿಟ್ಟು ಅವರ ಅಭಿಮಾನಿಯೇ ಆಗಿಹೋಗಿದ್ದೆ. ಈ ಮಧ್ಯೆ ಅಜ್ಜಿ ಬಜ್ಜಿ ಗಳ ಮಾತುಗಳನ್ನು ಜಸ್ಟ್ ಗಾಳಿಗೆ ತೂರಿ ಬಿಡುತ್ತಿದ್ದೆ. ಬಹುಶಃ ಗಡ್ಡಧಾರಿಯಾಗಿಯೂ ಸ್ಟೈಲಾಗಿ ಕಾಣಬಹುದೆಂದು ಮೊದಲ ಬಾರಿಗೆ ತೋರಿಸಿದ್ದು ಶಂಕ್ರಣ್ಣನೇ ಇರ್ಬೇಕು !

ಫೋಟೋ ಕೃಪೆ : Twitter
ನಂತರದ ದಿನಗಳಲ್ಲಿ ಗಡ್ಡಬಿಟ್ಟವರನ್ನು ಬುದ್ದಿಜೀವಿಗಳೆಂದು ಪರಿಗಣಿಸುತ್ತಿದ್ದ ಕಾಲವೂ ಇತ್ತು. ಆದರೆ ನನಗೆ ವಿದ್ಯೆ ಹಾಗೂ ಬುದ್ದಿ ಎರಡರ ಕೊರತೆ ಅಗಾಧವಾಗಿದ್ದಿದ್ದರಿಂದ ಇಂತಹಾ ಗುಂಪಿನಿಂದ ನಾನ್ಯಾವತ್ತೂ ದೂರವೇ ! ಇಂದು ಬುದ್ದಿಜೀವಿಯೆಂದರೆ ಸಾಕು ಕೆಕ್ಕರಿಸಿ ನೋಡುವ ಟ್ರೆಂಡ್ ಬೆಳೆದಿದೆಯೆನ್ನಿ ! ಆದರೆ ಆಗೆಲ್ಲಾ ಸಾಹಿತಿಗಳು, ಕಲಾವಿದರು, ಬರಹಗಾರರು, ಸಂಗೀತಗಾರರು, ಪತ್ರಕರ್ತರು, ವರದಿಗಾರರು, ಸಾಂಸ್ಕೃತಿಕ ರಾಯಭಾರಿಗಳು , ಸಂತರು , ಸ್ವಾಮೀಜಿಗಳು, ಮಠಾಧೀಶರು… ಮತ್ತಿತರರ ಐಡೆಂಟಿಟಿ ಗಡ್ಡದ ಮೇಲೆಯೇ ಆಧಾರವಾಗಿರುತ್ತಿತ್ತು. ಕಾಲ ಬದಲಾದಂತೆ ನಿಧಾನವಾಗಿ ಕೆಲವು ಸೆಲೆಬ್ರಿಟಿಗಳೂ ಸಹಾ ಗಡ್ಡಧಾರಿಗಳಾಗಿಯೇ ಮಿಂಚಿದ್ದೂ ಗಡ್ಡಕ್ಕೆ ಮಹತ್ವ ಬರಲು ಶುರುವಾಯ್ತು.
ಆದರೆ ನಿಜವಾಗಿಯೂ ಗಡ್ಡಕ್ಕೆ ಸ್ಟಾರ್ ವ್ಯಾಲ್ಯೂ ಸಿಕ್ಕಿರುವುದು ಈಚಿನ ದಿನಗಳಲ್ಲಷ್ಟೇ .! ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್, ಉಪೇಂದ್ರ, ಯಶ್, ಸುದೀಪ್, ದರ್ಶನ್, ಗಣೇಶ್, ಧ್ರುವ, ವಿಜಯ್ ರಾಘವೇಂದ್ರ, ಶ್ರೀಮುರಳಿಯಿಂದ ಹಿಡಿದು ಯಾವ ನಾಯಕ ನಟನನ್ನೇ ತೆಗೆದುಕೊಳ್ಳಿ. ಎಲ್ಲರೂ ಗಡ್ಡಧಾರಿಗಳೇ ! ಅಷ್ಟೇ ಅಲ್ಲ ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ವುಡ್ ಗಳ ಹೀರೋಗಳಷ್ಟೇ ಅಲ್ಲದೇ ನಮ್ಮ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಯಿಂದ ಹಿಡಿದು ತಂಡದ ಹೆಚ್ಚು ಕಡಿಮೆ ಎಲ್ಲರೂ ಗಡ್ಡಧಾರಿಗಳೇ ! ಭಾರತವಷ್ಟೇ ಅಲ್ಲ ಇತರೆ ದೇಶದ ತಂಡದ ಸ್ಟಾರ್ ಪ್ಲೇಯರ್ಸ್ ಕೂಡಾ ಹೆಚ್ಚಾಗಿ ಗಡ್ಡಧಾರಿಗಳೇ ! ಇನ್ನು ರಾಜಕೀಯ ಕ್ಷೇತ್ರದಲ್ಲಿಯೂ ಗಡ್ಡಧಾರಿಗಳಿಗೆ ವಿಶೇಷವಾದ ಮೋಡಿಯಿದೆ . ಪ್ರಧಾನಿಯವರ ಗಡ್ಡದ ಗೆಟಪ್ ಕಾಲಕಾಲಕ್ಕೆ ಬದಲಾಗುತ್ತಲೇ ಇರೋದನ್ನು ಗಮನಿಸಿರಬೇಕು !
ರಾಜಕಾರಣದಲ್ಲಿ ಅಂದು ಗಡ್ಡದಿಂದ ಗಮನ ಸೆಳೆದವರೆಂದರೆ ಶ್ರೀ ಸಿದ್ದರಾಮಯ್ಯ , ರಾಮಕೃಷ್ಣ ಹೆಗಡೆ, ರಾಂ ವಿಲಾಸ್ ಪಾಸ್ವಾನ್, ಶರದ್ ಪವಾರ್, ಮತ್ತಿತರರು. ಇಂದು ಬಿಡಿ… ಜೈಲಿಗೆ ಹೋಗೋದು, ಗಡ್ಡ ಬಿಡೋದು ರಾಜಕೀಯದಲ್ಲಿ ಪಾಸಿಟೀವ್ ಟ್ರೆಂಡ್ !
ಅಂದರೆ ಯಾವುದೇ ಒಂದು ಟ್ರೆಂಡ್ ಗೆ ನಾವು ಕೊಡುವ ಡೆಫ಼ಿನೇಷನ್‌ಗಳು ಆಯಾ ಕಾಲದವರ ಮನೋಭಾವವನ್ನು ಸೂಚಿಸುತ್ತದೆ ಎನ್ನಬಹುದು. ಮೊದಲೆಲ್ಲಾ ಜೀವನದಲ್ಲಿ ಬೇಸರವಾದಾಗ ಅಥವಾ ಜುಗುಪ್ಸೆ ಯಾದಾಗ ಗಡ್ಡ ಬಿಟ್ಟು ಬಾರ್ ನಲ್ಲಿ ಕೂತು ಎಣ್ಣೆ ಹಾಕುತ್ತಿದ್ದ ಆಸಾಮಿಗಳ ಟ್ರೆಂಡ್ ನೋಡುತ್ತಿದ್ದೆವು. ಈಗ ಅದು ಬೇರೆಯದೇ ಸ್ವರೂಪ ಪಡೆದಿದೆ. ಗಡ್ಡದ ಶೈಲಿಗಾಗಿ ಸರ್ಕಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಆಗತಾನೇ ಯವ್ವನಕ್ಕೆ ಕಾಲಿಡುವ ಹುಡುಗರಿ ಗಂತೂ ಗಡ್ಡವೆನ್ನುವುದು ಟ್ರೇಡ್ ಮಾರ್ಕ್ ಆಗಿದೆ. ಗಡ್ಡ ಬಿಡದವನನ್ನೇ ಓಲ್ಡ್ ಮಾಡೆಲ್ ಎಂದು ಕರೆಯುವ ಹಂತಕ್ಕೆ ಇದು ಗಡ್ಡ ಬಿಡುವುದು ಸಾರ್ವತ್ರಿಕವಾಗಿದೆ. ಈ ಗಡ್ಡ ಅನ್ನೋದು ಎಲ್ಲರ ಮುಖಕ್ಕೂ ಅಷ್ಟು ಚೆನ್ನಾಗಿ ಒಪ್ಪಲಾರದಾದರೂ ಕೆಲವರಿಗೆ ಗಡ್ಡ ತೆಗೆಸಿದರೆ ನೋಡಲಿಕ್ಕಾಗುವುದಿಲ್ಲ. ಅಷ್ಟರಮಟ್ಟಿಗೆ ಗಡ್ಡವನ್ನು ಮುಖಲಕ್ಷಣದ ಮಾನದಂಡವಾಗಿ ಬಳಸಲಾಗಿದೆ.
ಗಡ್ಡಗಳಲ್ಲಿ ಎಷ್ಟೊಂದು ವೈವಿಧ್ಯತೆ ಯಿದೆಯಲ್ಲವೇ…. ? ಫ಼್ರೆಂಚ್ ಗಡ್ಡ, ಸಿಖ್ ಗಡ್ಡ, #ಲಾಡೆನ್ ಗಡ್ಡ, ಉಲೇಮಾಗಳ ಗಡ್ಡ, ತಾಲಿಬಾನ್ ಗಡ್ಡ, ಗಡ್ಡಪ್ಪನ ಗಡ್ಡ, ಹೋತದ ಗಡ್ಡ, ಪತಂಜಲಿ ಗಡ್ಡ, ಸದ್ಗುರು ಗಡ್ಡ, ಆಶ್ರಮದ ಗಡ್ಡ, ಸಾಧುಗಳ ಗಡ್ಡ, ಕೆಜಿಎಫ಼್ ಗಡ್ಡ, ಅಘೋರಿಗಳ ಗಡ್ಡ ಇತ್ಯಾದಿ. ಇದರ ಜೊತೆಗೆ ಕೆಲವರ “ಸೆನ್ಸಿಟೀವ್” ಗಡ್ಡಗಳೂ ಉಂಟು ! ಅಂದರೆ ಅಂತಹಾ ಗಡ್ಡದ ಹಿಂದಿನ ಉದ್ದೇಶ ಮಾತ್ರ ನಿಗೂಢ .! ಹೀಗಾಗಿ ಅವುಗಳನ್ನು ಕೆದಕಲಿಕ್ಕೆ ಹೋಗಿಲ್ಲ. ಯಾಕೆಂದರೆ ಅವು ಕೆದಕಲಾರದಷ್ಟು ಆಳಕ್ಕಿಳಿದಿರುವುದು ಹಾಗೂ ಅವುಗಳ ಹಿಂದಿನ ಕಾರಣದ ಬಗ್ಗೆ ಇದ್ದದ್ದನ್ನು ಇದ್ದ ಹಾಗೆ ಬರೆದ್ರೂ, ಹೇಳಿದ್ರೂ ನಮ್ಮ ದೇಶದಲ್ಲಿ ಅದೇ ಒಂದು ವಿವಾದ ಆಗಿಬಿಡುತ್ತೆ ! ಅದು ಅವರವರ ಬ್ರಾಂಡ್ ಮತ್ತು ಸ್ಟೈಲ್ ಇದ್ಕೊಳ್ಲೀ ಬಿಡಿ ! ಭಾರತದಲ್ಲಿ ಪ್ರತೀ ಧರ್ಮದವರ ಗಡ್ಡಗಳಿಗೂ ಅವರದೇ ಆದ ಒಂದು ಲುಕ್ ಅಂತೂ ಇದೆ ಅಷ್ಟು ಸಾಕಲ್ಲವೇ..! ಸುಖಾಸುಮ್ಮನೆ ಆ ಗಡ್ಡಗಳ ಜೇನುಗೂಡಿಗೆ ಕಲ್ಲು ಹೊಡೆಯೋದು ಯಾಕೆ ?

ಮರೆಯುವ ಮುನ್ನ
ದಿನ ಈ #ಗಡ್ಡದ ದಿನವಂತೆ ! ಎಲ್ಲಾ ಪತ್ರಿಕೆಗಳಲ್ಲೂ ಗಡ್ಡ ಬಿಟ್ಟು ಪೋಸು ಕೊಟ್ಟ ಸ್ಟೈಲ್ ಕಿಂಗುಗಳೇ ರಾರಾಜಿಸುತ್ತಿದ್ದಾರೆ ! ಈ ಸೀನ್ ಗಳೆಲ್ಲಾ ನಮ್ಮ ಕಾಲದಲ್ಲಿರಲಿಲ್ಲ . ಹಾಗಂತ ಸುಮ್ನೆ ಇರೋಕಾಗುತ್ತಾ ? ಹಾಗೇ ಸುಮ್ಮನೆ ನನ್ನ ಕೆಲವು ಗಡ್ಡಧಾರಿಯಾಗಿರುವ ಹಳೆಯ ಫೋಟೋಗಳತ್ತ ಕಣ್ಣಾಡಿಸಿದಾಗ ನನ್ನ ಅಜ್ಜಿ ಹತ್ತಿರ ಬೈಸಿಕೊಂಡಿದ್ದು, ಶಂಕರ್ ನಾಗ್ ರನ್ನು ಫ಼ಾಲೋ ಮಾಡಿದ್ದು, ಕೇಂದ್ರ ಅಬಕಾರಿ ಇಲಾಖೆಗೆ ಸೇರಿದಾಗ ಅಲ್ಲಿನ ನಿಯಮಾವಳಿಗಳ ಪ್ರಕಾರ ಅನಿವಾರ್ಯವಾಗಿ ನನ್ನ ಗಡ್ಡಕ್ಕೆ ಶಾಶ್ವತ ಮುಕ್ತಿ ಕೊಡಬೇಕಾಗಿ ಬಂದದ್ದು, ಹಾಗೂ ಅಂದು ನಮ್ಮ ಜ಼ಮಾನದಲ್ಲಿ ಅಪರೂಪವಾಗಿದ್ದ ಟ್ರೆಂಡ್ ಈಗ ದೇಶವ್ಯಾಪಿ ಹರಡಿರುವುದು…… ಎಷ್ಟೊಂದು ವಿಷಯವಿದೆ ಯೆನಿಸುವುಲ್ಲವೇ ???
ಹಿಂದೆಲ್ಲಾ ಒಬ್ಬೊಬ್ಬರ ಗಡ್ಡದ ಹಿಂದೆಯೂ ಒಂದೊಂದು ನೋವಿನ, ತ್ಯಾಗದ , ನಷ್ಟದ ಕಥೆಯಿರುತ್ತಿತ್ತು ! ಈಗ ಅಂತಹಾ ಯಾವುದೇ ವಿಶೇಷವೇನೂ ಇರದೆ ಗಡ್ಡ ಬಿಡೋದು ಟ್ರೆಂಡ್ ಆಗಿಹೋಗಿರುವುದೇ ಒಂದು ಮಹಾ ಜನರೇಷನ್ ಗ್ಯಾಪ್……!!
ಸೋ…. ನಿಮ್ಮ ಗಡ್ಡದ ಕೌತುಕ ಕಹಾನಿ ಗಳೇನಾದ್ರೂ ಅಂತರಂಗದಲ್ಲಿ ಅಲುಗಾಡುತ್ತಿದ್ದರೆ ಅದರ ಇತಿಹಾಸದ ಸೋಬಾನೆಯನ್ನೋ ಸುವ್ವಿ ಸುವ್ವಲಾಲಿಯನ್ನೋ ಇಂದಿನ ಗಡ್ಡದ ದಿನಕ್ಕಾಗಿ ಹಾಗೇ ಹಾಡಿ ಧನ್ಯರಾಗಿ ಮತ್ತೆ !!!
- ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)
