ಕಳೆದ ವರ್ಷ ನೀರಿಲ್ಲದಂತೆ ಬತ್ತಿ ಹೋಗಿದ್ದ ಜಕ್ಕಲಮಡುಗು ಜಲಾಶಯ ಈ ವರುಷ ಕೋಡಿ ತುಂಬಿ ಬಿದ್ದಿದೆ. ಪ್ರತಿಯೊಂದು ಕ್ಷಣವು ಮನಸ್ಸಿಗೆ ಆನಂದ ನೀಡುವ ಶಕ್ತಿ ಪ್ರಕೃತಿ ಮಾತೆಗಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಚಿದಾನಂದ ಅವರು, ಅವರ ಅನುಭವದ ಲೇಖನ ಇಲ್ಲಿದೆ ಓದಿ…
ನೋಡುತ್ತಾ ನಿಂತರೆ ಸಮಯ ಕಳೆಯುವುದು ತಿಳಿಯುವುದಿಲ್ಲ. ಹೌದು, ಈ ಕೋಡಿ ಬಳಿ ನಾವು ಬಹುಶಃ ಮೂವತ್ತರಿಂದ ನಲವತ್ತು ನಿಮಿಷ ಸಮಯ ಕಳೆದಿರಬಹುದು ಅಷ್ಟು ಸಮಯವೂ ಸಹ ನಕ್ಕು ನಕ್ಕು ಸಾಕಾಗಿ ಹೋಯಿತು, ಕಾರಣ ಇಷ್ಟೇ ಒಂದೂವರೆಯಿಂದ ಎರಡು ಅಡಿಗಳು ನಿಂತಿರುವ ನೀರನ್ನು ದಾಟಲು ಜನರು ಮಾಡಿದ ವಿಚಿತ್ರ ಪ್ರಯತ್ನಗಳು.

ಈ ಕೋಡಿಯನ್ನು ದಾಟಲು ಹೋದ ಗಾಡಿಗಳು ಅರ್ಧದಲ್ಲೇ ಸೈಲೆನ್ಸರ್ ಗೆ ನೀರು ನುಗ್ಗಿ ನಿಂತು ಹೋಗುತ್ತಿದ್ದವು. ನಿಧಾನವಾಗಿ ಹೋದರೆ ಸೈಲೆನ್ಸರ್ ಗೆ ನೀರು ನುಗ್ಗುತ್ತದೆ ಜೋರಾಗಿ ಹೋದರೆ ಗಾಡಿಗೆ ಹಿಡಿತ ಸಿಗದೆ ಬೀಳುವ ಸಾಧ್ಯತೆ ಹೆಚ್ಚು. ಒಳ್ಳೆಯ ಪಜೀತಿ ಬಂತಲ್ಲ ಎಂದು ಕೆಲವರು ಗಾಡಿ ಇಳಿದು ತಳ್ಳುತ್ತಾ ಹೋದರೆ ಕೆಲವರು ಗಾಡಿಯ ಮೇಲೆ ಕುಂತು ಭಯದಿಂದ ದಾಟಿ ಮೈಯೆಲ್ಲಾ ಒದ್ದೆ ಮಾಡಿಕೊಂಡು ನಾವು ಸಹ ಇಳಿದು ನಡೆದುಕೊಂಡೆ ಬರಬೇಕಿತ್ತು ಅಂದುಕೊಂಡವರು ಉಂಟು. ಕುರಿಗಳಂತೆ ಯಾರಾದರೂ ಮುಂದೆ ಹೋಗಲಿ ಎಂದು ನಿಂತು ಕಾಯುತ್ತಾ ಹೋದವರನ್ನೇ ಹಿಂಬಾಲಿಸುತ್ತಾ ಹೋದವರು ಉಂಟು. ಒಬ್ಬ ಹುಡುಗ ತನ್ನ ಡಿಯೋ ಗಾಡಿಯ ಸೈಲೆನ್ಸರ್ ಗೆ ಕವರನ್ನು ಸಹ ಕಟ್ಟಿ ಪ್ರಯತ್ನಿಸಿ ನೋಡಿದ ಕವರ್ ಅರ್ಧದಲ್ಲಿ ನೀರು ತುಂಬಿ ಕಿತ್ತು ಹೋಯಿತು ಗಾಡಿ ತಳ್ಳುತ್ತಾ ದಡ ಸೇರಿದ . ಗೇರ್ ಗಾಡಿಗಳು ಇದ್ದವರು ಆರಾಮಾಗಿ ಸೇರುತ್ತಿದ್ದರು ಎಕ್ಸಲೇಟರ್ ಗಾಡಿಗಳ ಕಥೆಯನ್ನು ಬೇಡವೇ ಬೇಡ ನೀರಿಗೆ ಇಳಿಯುತ್ತಿದ್ದಂತೆ ತನ್ನ ಸ್ವಾಧೀನವನ್ನು ಕಳೆದುಕೊಂಡು ಅರ್ಧದಲ್ಲೇ ನಿಂತು ಬಿಡುತ್ತಿತ್ತು. ಅದನ್ನು ಓಡಿಸುತ್ತಿದ್ದ ಮಹಾರಾಯರು ಕಾಲನ್ನು ನೀರಿಗೆ ಮುಟ್ಟಿಸಲು ಮಾಡುತ್ತಿದ್ದ ಸಾಹಸವಂತು ಬಲು ಮಜ ನೀಡುತ್ತಿತ್ತು.

ಗಾಡಿ ನಿಲ್ಲಿಸದಂತೆ ದಡ ಸೇರುವುದು ಒಂದು ಸವಾಲಾದರೆ ಮೈಮೇಲೆ ನೀರು ಬೀಳದಂತೆ ಸೇರುವುದು ಇನ್ನೊಂದು ಸವಾಲು. ಹತ್ತಿರದ ಊರಿನ ಸಣ್ಣ ಹುಡುಗರಂತೂ ಈ ಮಜವನ್ನು ನೋಡಲು ಬೆಳಗಿನಿಂದ ನೀರಿಗೆ ಸಣ್ಣ ಮೀನಿನ ಗಾಳ ಹಾಕಿ ನೋಡುತ್ತಾ ಆನಂದಿಸುತ್ತಾ ಆಗಾಗ ಹೋಗುವವರಿಗೆ ಬಿಟ್ಟಿ ಉಪದೇಶವನ್ನು ನೀಡುತ್ತಾ ಮನಸ್ಸನ್ನು ಆನಂದ ಪಡಿಸಿಕೊಳ್ಳುತ್ತಿದ್ದರು. ನಿಂತುಹೋದ ಗಾಡಿಯನ್ನು ಪುನಃ ಸ್ಟಾರ್ಟ್ ಮಾಡುವ ಪ್ರಯತ್ನದಲ್ಲಿ ಸೈಲೆನ್ಸರ್ ಗಳಲ್ಲಿ ಹೊಗೆ ಬರುವ ಬದಲು ನೀರು ಚಿಮ್ಮುತ್ತಿತ್ತು. ವಯಸ್ಸಾದ ಅಜ್ಜಿ-ತಾತಂದಿರು ಸಂತೋಷದಿಂದ ಪ್ರತಿಯೊಬ್ಬರಿಗೂ ತಮಗೆ ತಿಳಿದ ಮಾರ್ಗದರ್ಶನವನ್ನು ನೀಡುತ್ತಾ ಜನರು ಮಾಡುವ ಚೇಷ್ಟೆಗಳನ್ನು ನೋಡುತ್ತಾ ಸ್ವಲ್ಪ ಸಮಯ ಕುಳಿತು ಸುಧಾರಿಸಿಕೊಳ್ಳುತ್ತಾ ಮನಸ್ಸಿಗೆ ಕೋಡಿ ಬಿದ್ದ ಆನಂದದ ಜೊತೆಗೆ ತಮ್ಮ ಕಣ್ಣ ಮುಂದೆ ನಡೆದ ಘಟನೆಗಳನ್ನು ಮೆಲುಕುಹಾಕುತ್ತಾ ಮನದೊಳಗೆ ಆನಂದಿಸಿದರು. ನನಗಂತೂ ಅಲ್ಲಿಂದ ಹೊರಡಲು ಮನಸ್ಸೇ ಆಗಲಿಲ್ಲ. ಪ್ರಕೃತಿಯ ಪ್ರತಿಯೊಂದು ಚಟುವಟಿಕೆಯಲ್ಲೂ ಮನಸ್ಸಿಗೆ ಆನಂದ ನೀಡುವ ಶಕ್ತಿ ಇದೆ ಅದನ್ನು ಆ ಸಮಯಕ್ಕೆ ಗಮನಿಸುವುದು ಹಾಗೂ ಆ ಸಮಯಕ್ಕೆ ಆ ಗಳಿಗೆಯಲ್ಲಿ ನಾವು ಸಾಕ್ಷಿಯಾಗುವುದು ತುಂಬಾ ಮುಖ್ಯ.

ಕಳೆದ ವರ್ಷ ನೀರಿಲ್ಲದಂತೆ ಬತ್ತಿ ಹೋಗಿದ್ದ ಜಲಾಶಯ ಈ ವರುಷ ತುಂಬಿ ಕೋಡಿ ಬಿದ್ದಿದೆ, ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರಕ್ಕೆ ಒಪ್ಪಂದದ ಮೇರೆಗೆ ನೀರನ್ನು ಹಂಚಿಕೊಳ್ಳಲಾಗುತ್ತಿದೆ, ಈ ಜಲಾಶಯದ ನೀರು ಖಾಲಿಯಾದರೆ ಬೇರೆ ಗತಿಯಿಲ್ಲ ಎಂಬಂತೆ ಅವಲಂಬಿತವಾಗಿರುವ ಜನಗಳಿಗೆ ನೀರಿನ ಮಿತ ಬಳಕೆ ಬಗ್ಗೆ ಅರಿವು ಇನ್ನೂ ಬಂದಿಲ್ಲ. ಟ್ಯಾಂಕರ್ ಗಳ ಹಾರನ್ ಸುದ್ದಿಗಾಗಿ ಬಿಂದಿಗೆ ಹಿಡಿದು ನಿಲ್ಲುತ್ತಿದ್ದ ಕೈಗಳು ಶುದ್ಧೀಕರಣ ಘಟಕಗಳ ಮುಂದೆ ಕ್ಯಾನುಗಳು ಹಿಡಿದು ಸಾಲು ನಿಲ್ಲುವಂತೆ ಆಗಿದೆ. ಸಾವಿರ ಅಡಿಗಳಿಂದ ಸಾವಿರದ ಐನೂರು ಅಡಿಗಳ ವರೆಗೂ ಅಂತರ್ಜಾಲ ಇಳಿದು ಹೋಗಿದೆ, ಬೋರ್ವೆಲ್ ಗಳು ಬತ್ತಿ ಹೋಗುತ್ತಿವೆ, ಎತ್ತಿನಹೊಳೆ ವರ್ಷಾನುವರ್ಷಗಳಿಂದ ಚುನಾವಣೆಯ ಸಮಯದ ವೋಟುಗಳಾಗಿ ಬದಲಾಗಿದೆ.

(ಜಕ್ಕಲಮಡುಗು ಜಲಾಶಯ )
ಈಗ ಬೆಂಗಳೂರಿನ ಕೊಳಚೆ ನೀರು ಸಹ ಬರಲು ಸಿದ್ಧವಾಗಿದೆ ಈ ಎಲ್ಲಾ ಯೋಜನೆಗಳು ಸಹ ನೀರಿನದೇ ಆದರೆ ಕೋಡಿ ಬಿದ್ದ ಸಂಧರ್ಭದಲ್ಲಿ ಯಾವ ಯೋಚನೆಗಳು ಸಹ ನನ್ನನ್ನು ಕಾಡಲಿಲ್ಲ. ಸಮಯಕ್ಕೆ ಕಂಡಂತಹ ಸುಂದರ ಹಾಗೂ ಅದ್ಭುತವಾದ ದೃಶ್ಯವನ್ನು ನನ್ನ ಕಣ್ಣುಗಳು ಸೆರೆಹಿಡಿದವು.
- ಚಿದು ಯುವ ಸಂಚಲನ (ಪರಿಸರವಾದಿ, ಲೇಖಕರು)
