‘ನಾನು ಹಾಕುವ ಬಳೆಯ ಬಣ್ಣ ಹಾಗು ಡಿಸೈನ್ ನನ್ನ ಅಕ್ಕ ಪಕ್ಕ ಇರುವ ಹುಡುಗಿಯರ ಕೈಯಲ್ಲಿಯಿರಬಾರದು ಅನ್ನುವ ಸ್ವಾರ್ಥ, ಹಠವಿತ್ತು. ಹೀಗೆ ಹೊಸ ಬಳೆ ತೊಟ್ಟು ಇಡಿ ಮನೆ ಸುತ್ತುತ್ತಿದೆ. ಜೊತೆಗೆ ಗೆಳತಿಯರ ಕೈಯನ್ನು ಒಮ್ಮೆ ಒರೆಗಣ್ಣಿನಿಂದ ನೋಡಿಬರುತ್ತಿದ್ದೆ’ ತಮ್ಮ ಬಾಲ್ಯದಲ್ಲಿ ಗಣೇಶನ ಹಬ್ಬವನ್ನು ನೆನೆದು ಬರಹಗಾರ್ತಿ ಪವಿತ್ರ ಅವರು ಬರೆದಂತಹ ಲೇಖನವಿದು. ಮುಂದೆ ಓದಿ…
ಶ್ರಾವಣ ಮಾಸವೇ ಹಾಗೆ ಸೋನೆ ಮಳೆಯ ಜೊತೆಗೆ ಹಬ್ಬಗಳ ಸಾಲನ್ನು ಹೊತ್ತು ತರುತ್ತದೆ ವಿಶೇಷವಾಗಿ ಶ್ರಾವಣವೆಂದರೆ ಹಿಗ್ಗು ,ರೈತಾಪಿ ವರ್ಗಕ್ಕಂತ್ತೂ ಸ್ವರ್ಗದಂತೆ . ವರುಣನ ದಯೆಯಿಂದ ಭೂರಮೆಯು ಸದಾ ಮಿಂದು ಮಕ್ಮಲ್ಲಿನಂತ ಹಸಿರಿನ ಚಿಗರನ್ನು ಹೊದ್ದು ,ಜಲಧಾರೆ ಧರಿಸಿ, ಹಸಿರು ಗಿರಿಗಳ ಮುಕುಟವಿಟ್ಟುಕೊಂಡು ಕಂಗೊಳಿಸಿತ್ತಿರುತ್ತಾಳೆ ಇಂತಹ ನವ ಉಲ್ಲಾಸ ಹೊತ್ತು ತರುವ ಶ್ರಾವಣದಲಿ ರೈತರು ಸಹ ಕೃಷಿ ಚಟುವಟಿಕೆಗೆ ಬಿಡುವು ಕೊಟ್ಟು . ಒಂದು ತಿಂಗಳು ಶ್ರಾವಣವನ್ನು ಸಂಭ್ರಮಿಸಿ ಬಿಡುತ್ತಾರೆ ಶ್ರಾವಣದ ಸಂಭ್ರಮಗಳು ಇಂದಿಗಿಂತ ಅಂದಿನ ದಿನಗಳಲ್ಲಿ ಹೆಚ್ಚು ಕಳೆಗಟ್ಟಿದವು ಎಂದರೆ ಅತಿಶಯೋಕ್ತಿಯಲ್ಲ.!
ಸಾಮಾನ್ಯವಾಗಿ ನಾವು ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ…ಆದರೆ ನಮ್ಮಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸುವ ಹಬ್ಬವೆಂದರೆ #ಗೌರಿ_ಗಣೇಶ, ಸಂಕ್ರಾಂತಿ, ದೀಪಾವಳಿ, ಹಾಗೆ ಊರಹಬ್ಬವಾದ ಸುಗ್ಗಿ. ಇವಿಷ್ಟು ಹಬ್ಬ ಗಳು ಬಂದರೆ ಸಾಕು ನಮ್ಮ ಸಡಗರ ಮುಗಿಲುಮುಟ್ಟುತ್ತಿತ್ತು ಅಂದು ,ಬಾಲ್ಯವೆ ಹಾಗಲ್ಲವೇ ಅದೊಂದು ಸುಂದರ ಮುಗಿಯದ ನೆನಪಿನ ಪಯಣದ ಮಧುರತೆಯಿಂದ ಕೂಡಿದ ಹಬ್ಬ, ಅದರಲ್ಲೂ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಬರುವ ಹಬ್ಬಗಳು ನೋಡಲು ಕಣ್ಮನಕ್ಕೆ ಸೊಗಸು ತರುತ್ತವೆ. ಹೆಚ್ಚಾಗಿ ಹೆಣ್ಣು ಮಕ್ಕಳಿಂದಲೆ ಹಬ್ಬಗಳಿಗೂ ಒಂದು ಕಳೆ,ಹಬ್ಬದ ಸಂಭ್ರಮವೂ ಇಮ್ಮಡಿಯಾಗುತ್ತದೆ.

ಫೋಟೋ ಕೃಪೆ : karnataka
ಪ್ರತಿ ಹಬ್ಬಕ್ಕೂ ಒಂದೊಂದು ವಿಶೇಷತೆ ಇದೆ. ಅದು ನಮ್ಮ ಮಲೆನಾಡಿನ ಜನರಿಗೆ ಗೌರಿ ಗಣೇಶಹಬ್ಬವೆಂದರೆ ಅದೆನೋ ಹರ್ಷ, ಈಗಿನ ಹಬ್ಬದ ಆಚರಣೆಗಳ ಜೊತೆಗೆ ನನ್ನ ಬಾಲ್ಯವನ್ನು ಒಮ್ಮೆ ಸಿಂಹಾವಲೋಕನ ಮಾಡಿದಾಗ ಕಳೆದು ಹೋದ ಕಾಲಘಟ್ಟದಲ್ಲಿ ಎಂದಿಗೂ ಮಾಸದ ಅತಿ ಮಧುರವಾದ ಅನುಭೂತಿಗಳನ್ನು ಕಟ್ಟಿಕೊಟ್ಟ ಹಬ್ಬವೆಂದರೆ ಅದು ಗೌರಿ ಗಣೇಶ,
ನಮ್ಮ ಊರು ಸಕಲೇಶಪುರ ತಾಲ್ಲೋಕಿನ ಒಂದು ಹೋಬಳಿ ಎನ್ನಬಹುದಾದ ಪೂರ್ಣ ಪ್ರಮಾಣದ ಸಾಕ್ಷರತೆ ಮತ್ತು ಹೆಚ್ಚು ಜನ ಸಂಖ್ಯೆಯಿರುವ ದೊಡ್ಡ ಊರು, ಇಲ್ಲಿ ನನ್ನನ್ನು ಸೇರಿದಂತೆ ಒಕ್ಕಲಿಗರ ಪ್ರಾಬಲ್ಯ ಜಾಸ್ತಿ, ಉಳಿದಂತೆ ಇರುವ ಲಿಂಗಾಯತರು,ದಲಿತರು, ಕುಂಬಾರ, ಕಮ್ಮಾರ, ಮಡಿವಾಳ, ಭೋವಿ, ಈಡಿಗರು, ವಿಶ್ವಕರ್ಮ, ಶೆಟ್ಟರು,ಬ್ರಾಹ್ಮಣರ ಒಂದೆರಡು ಕುಟುಂಬಗಳು ಇವೆ ಅಷ್ಟೆ,ನಾವೆಲ್ಲರೂ ಒಂದೆ ಕುಲದವರು ಎಂಬ ಭಾವನೆಯಿಂದ ಪ್ರತಿಯೂಬ್ಬರು ಶಿವನ ಆರಾಧಕರು ಆಗಿರುವುದರಿಂದ ಪ್ರತಿಯೊಂದು ಸಭೆ, ಸಮಾರಂಭವನ್ನು ಒಂದಾಗಿ ಒಗ್ಗಟ್ಟಿನಿಂದ ಆಚರಿಸುತ್ತಾ ಬದುಕುತ್ತಿದ್ದಾರೆ. ಹೆಚ್ಚಾಗಿ ವ್ಯವಸಾಯವನ್ನೆ ಮೂಲ ಕಸುಬಾಗೀಸಿರುವುದರಿಂದ ,ಯಾವ ಜಾತಿಗಳ ನಡುವೆ ಬೇಧವಿಲ್ಲದೆ ಎಲ್ಲರೂ ಒಂದೆ ತಾಯಿ ಮಕ್ಕಳಂತೆ ಸೌಹಾರ್ದತೆಯಿಂದ ಬಾಳುತ್ತಿರುವ ಊರು ನನ್ನೂರು,ಹಾಗಾಗಿ ಹಿಂದೆ ಒಂದು ಗಾದೆ ಮಾತು ಇದೆ ನನ್ನೂರಿನ ಬಗ್ಗೆ ಹತ್ತೂರು ನೋಡವ ಬದಲು ಹೆತ್ತೂರು ನೋಡು ಎಂದು.

ಫೋಟೋ ಕೃಪೆ : pinterest
ಇಂತಹ ಊರಿನಲ್ಲಿ ಹುಟ್ಟಿದ ನನ್ನ ಬಾಲ್ಯವು ತುಂಬಾ ಸುಂದರವಾಗಿತ್ತು. ಹಬ್ಬಗಳನ್ನು ಅತಿವಿಜ್ರೆಂಭಣೆಯಿಂದ ಆಚರಿಸದೆ ಇದ್ದರೂ ಸರಳವಾಗಿ ಸಂಭ್ರಮದಿಂದ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದೆವು.ನಮ್ಮಲ್ಲಿ ಗೌರಿ ಗಣೇಶನ ವಿಗ್ರಹವನ್ನು ಮನೆಯಲ್ಲಿ ಕೂರಿಸಿ ಆಚರಿಸುವ ಪದ್ಧತಿ ಇಲ್ಲ.. ಹಾಗಾಗಿ ಊರಿನ ಪ್ರಮುಖರು ನಿತ್ಯ ಪೂಜಿಸಲ್ಪಡುವ ಸತ್ಯಮಲ್ಲೇಶ್ವರ ಸ್ವಾಮಿ ದೇವಸ್ಥಾನದಲಿ ಗೌರಿ ಗಣೇಶ ಕೂರಿಸಿ ಪೂಜಿಸುವ ಪದ್ಧತಿರೂಢಿಯಲಿದೆ,ಊರಿನ ಎಲ್ಲ ಮಂದಿಗೂ ನಿತ್ಯಪೂಜೆ ಸಲ್ಲಿಸುವ ಅವಕಾಶವಿರುತ್ತದೆ. ನಮ್ಮಲ್ಲಿ ಭೀಮನ ಅಮಾವಾಸ್ಯೆ, ನಾಗರ ಪಂಚಮಿ ಹಬ್ಬದ ಆಚರಣೆ ಇಲ್ಲ..ಶ್ರಾವಣ ಮಾಸದ ಪ್ರತಿ ಸೋಮವಾರವು ಮನೆಯಲ್ಲಿ ಸಿಹಿ ಮಾಡಿ ಶಿವನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿ ಶ್ರಾವಣ ಸೋಮವಾರ ಒಂದು ಪುಟ್ಟ ಹಬ್ದದಂತೆ ಆಚರಿಸುತ್ತಾರೆ ಇದೊಂದು ರೀತಿಯಲ್ಲಿ ಚೌತಿಗೆ ಪೂರ್ವ ತಯಾರಿ ಮಾಡಿಕೊಂಡಂತೆ ಅನ್ನಬಹುದು.. ಶ್ರಾವಣದ ಎರಡನೇ ವಾರ ವರಮಹಾಲಕ್ಷ್ಮೀ ವ್ರತವನ್ನು ಇಚ್ಚೆ ಉಳ್ಳುವ ಮುತ್ತೈದೆಯರು ವೃತ ಮಾಡಿದ್ರೆ..ಊರಿನ ಮಂದಿಯಲ್ಲಾ ಸೇರಿದಂತೆ ಸಂಭ್ರಮದಿಂದ ಆಚರಿಸುವ ಮೊದಲ ಹಬ್ಬವೆ ಗೌರಿಗಣೇಶ ಹಬ್ಬ.
ಇಷ್ಟೆಲ್ಲಾ ಹಿನ್ನೆಲೆಯಿರುವ ನನ್ನೂರಿನಲಿ ನಮ್ಮ ಬಾಲ್ಯದ ದಿನಗಳ ಹಬ್ಬದ ಸಂಭ್ರಮಾಚರಣೆಯು ಅಷ್ಟೇ ಮಧುರವಾಗಿತ್ತು ಹಬ್ಬಗಳು ಬಂದಾಗೆಲ್ಲಾ ಬಾಲ್ಯದ ಸವಿನೆನಪುಗಳ ಸುರಳಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ…..
ಗೌರಿಗಣೇಶ ಹಬ್ಬ ಬಂದರೆ ಸಾಕು…
ನಮಗೆ ಎಲ್ಲಿಲ್ಲದ ಸಂಭ್ರಮ, ಅಣ್ಣ(ಅಪ್ಪ) ನನಗೆ ಹಾಗೂ ನನ್ನ ತಂಗಿಗೆ ಒಂದೇ ತರಹದ ಉದ್ದಲಂಗ ಬ್ಲೌಸ್ ಹೊಲೆಸುತ್ತಿದ್ರು ಅದು ಎಷ್ಟು ಚಂದದ ಬಣ್ಣದ ಕಾಬಿನೇಷನ್ನಲ್ಲಿ ಅಂತೀರಾ… ಈಗ ನಮಗೆ ಆ ತರಹದ ಬಟ್ಟೆಯ ಕ್ವಾಲಿಟಿ ಮಾಸದ ಬಣ್ಣ, ಎಷ್ಟು ಸಾವಿರ ಕೊಟ್ಟರು ಸಿಗಾಲಾರದು ಬಿಡಿ. ಇನ್ನು ತಮ್ಮನಿಗೆ ಚಂದದ ಶರ್ಟು ಮತ್ತು ಚಡ್ಡಿ, ಹೊಲಿಯಲು ಹಾಕಿದ್ದರೇ.. ಅಮ್ಮ ಹಬ್ಬಕ್ಕೆಂದು ಶ್ರಾವಣದ ಮೂರನೇ ವಾರದಿಂದಲೇ ತಯಾರಿ ನಡೆಸುತ್ತಿದ್ದಳು ಮನೆಯನ್ನೂ ಸ್ವಚ್ಛ, ಮಾಡಿ ಅಲಂಕರಿಸುವುದು ಒಂದು ವಾರ ಮೊದಲೆ ತಿಂಡಿ ಮತ್ತು ಅರಳು (ಭತ್ತದಿಂದ ಮಾಡುವ ಪದರ್ಥಾ) ಹುರಿಯಲು ಶುರುಮಾಡುತ್ತಿದ್ದಳು. ನಾವು ಶಾಲೆ ಬಿಟ್ಟಕೂಡಲೆ ಮನೆಗೆ ಬಂದು ಅಮ್ಮ ಹುರಿದಿಟ್ಟ ರಾಶಿ ರಾಶಿ ಅರಳಿನಲ್ಲಿ ಉಳಿದ ಬತ್ತ ಆರಿಸುವ ಕೆಲಸ ನಮ್ಮದಾಗಿತ್ತು. ಅಮ್ಮ ಮನೆಯಲ್ಲ ಸ್ವಚ್ಛಗೊಳಿಸುವುದನ್ನು ನೋಡಲು ನಮಗೂ ಒಂಥರಾ ಬೆರಗು.. ಇನ್ನೇನು ಹಬ್ಬಕ್ಕೆ ಎರಡು ಮೂರು ದಿನ ಬಾಕಿ ಇದೆ ಎನ್ನುವಾಗ ಬಳೆಗಾರ ಮನೆಬಾಗಿಲಿಗೆ ಬರುತ್ತಿದ್ದ ಅಮ್ಮನಿಗೆ ಕೆಂಪು ಗಾಜಿನ ಬಳೆಗಳಲ್ಲಿ ಬಂಗಾರದಚುಕ್ಕೆಯಿರುವ ಬಳೆ ಕೊಟ್ಟರೆ.. ನನಗೂ ನನ್ನ ತಂಗಿಗೂ ತುಂಬಾ ಒಳ್ಳೆಯ ಗಾಢ ಬಣ್ಣದ ಅದ್ರಲ್ಲೂ ಹೊಸ ನಮೂನೆಯ ಬಳೆಗಳನ್ನೆ ತೊಡಿಸುತ್ತಿದ್ದ. ಇಲ್ಲದಿದ್ದರೆ ನಾನು ಜಗಳಕಾಯ್ತಿದ್ದೆ, (ಈಗಲೂ ಅವರು ಸಂಕ್ರಾಂತಿ ಜಾತ್ರೆಗೆ ಬಳೆ ಅಂಗಡಿ ಹಾಕುತ್ತಾರೆ. ನಾನು ಹೋದರೆ ನನ್ನ….ನೋಡಿ ಆ ಹಠದ ಪವಿನೇ ಕಣ್ಣ ಮುಂದೆ ಬರುತ್ತಾಳೆ. ಕೈ ಹಿಡಿ..ತಾಯಿ ನಿನಗೆ ಯಾವ ಬಳೆ ಬೇಕು ಹೇಳು ಅಂತ ಪ್ರೀತಿಯಿಂದ ತೊಡಿಸುತ್ತಾರೆ). ನಾನು ಹಾಕುವ ಬಳೆಯ ಬಣ್ಣ ಹಾಗು ಡಿಸೈನ್ದು ನನ್ನ ಅಕ್ಕ ಪಕ್ಕ ಇರುವ ಹುಡುಗಿಯರ ಕೈಯಲ್ಲಿಯಿರಬಾರದು ಅನ್ನುವ ಸ್ವಾರ್ಥ ಇತ್ತು. ಆಗ ಅದಕ್ಕೆ ಹಠ ಮಾಡುತ್ತಿದೆ…ಅವರು ಹಾಗೆ ನನಗೆ ತೋಡಿಸುತ್ತಿದ್ದ ಬಳೆ ಬೇರೆಯವರಿಗೆ ಕೊಡುತ್ತಿರಲಿಲ್ಲ. ಹೀಗೆ ಹೊಸ ಬಳೆ ತೊಟ್ಟು ಇಡಿ ಮನೆ ಸುತ್ತುತ್ತಿದೆ. ಜೊತೆಗೆ ಗೆಳತಿಯರ ಕೈಯನ್ನು ಒಮ್ಮೆ ಒರೆಗಣ್ಣಿನಿಂದ ನೋಡಿಬರುತ್ತಿದ್ದೆ. ಇಷ್ಟೆಲ್ಲಾ ಮಾಡುವಷ್ಟು ಹೊತ್ತಿಗೆ ಹಬ್ಬ ಬಂದಿರೊದು.

ಫೋಟೋ ಕೃಪೆ : you tube
ಹಬ್ಬದ ಹಿಂದಿನ ದಿನ ಗೌರಿ ಹೂ, ( ಅಗ್ನಿಶಿಖೆ) ಗಾಜಲು ಹೂ, ಮಹಾದೇವನಿಗೆ ಪ್ರಿಯವಾದ ಮಾದರೀಶಿನ ಕಾಯಿ, ಪೆಟ್ಲುಕಾಯಿ ಇವುಗಳ ಸಂಗ್ರಹ ನಮ್ಮದೆ ಆಗಿರುತ್ತಿತ್ತು, ಅಮ್ಮ ಹಿತ್ತಲಲ್ಲಿ ಬೆಳೆದ ಕೆಸುವಿನ ಎಲೆ ದಂಟು, ( ಗೌರಿಗೆ ಕೇಸುವಿನ ದಂಟು ಮತ್ತು ಎಲೆಯಿಂದ ತಯಾರಿಸಿದ ಖಾದ್ಯಗಳ ಪ್ರಿಯಾವಾದವು ) ಅರಿಶಿನದ ಎಲೆ ಎಲ್ಲಾ ಕೊಯ್ದು ತಂದಿರುತ್ತಿದ್ದಳು. ಗೌರಿ ಹಬ್ಬದ ಬೆಳಿಗ್ಗೆ ನಾವು ಏಳುವ ಮೊದಲೇ ಅಮ್ಮ ಮನೆ ಸ್ವಚ್ಛ ಮಾಡಿ ರಂಗೋಲಿ ಹಾಕಿ ದೇವರಿಗೆ ಹಿಂದಿನ ಮೊಗ್ಗು ಕೊಯ್ದು ಕಟ್ಟಿದ ಸ್ಪಟಿಕದ ಹೂವಿನ ಮಾಲೆ ಅಲಂಕಾರ ಮಾಡಿ ಹಬ್ಬದ ಅಡುಗೆಗೆ ಅಣಿಮಾಡಿರೋಳು , ಅಣ್ಣ ಬಾಗಿಲಿಗೆ ತೋರಣ ಕಟ್ಟಿರುತ್ತಿದ್ದಿರು. ನಾವು ಎದ್ದು ಚಳಿಗೆ ಹೆಚ್ಚು ಕಮ್ಮಿ ಮಿನಿ ಸ್ವಿಮ್ಮಿಂಗ್ ಪೂಲನಷ್ಟೆ ದೊಡ್ಡಾದ ಬಚ್ಚಲ ಮನೆಗೆ ಹೋಗಿ ಅಲ್ಲಿ ದೊಡ್ಡ ಹಂಡೆಯಲಿದ್ದ ನೀರನ್ನು ಕಾಯಿಸುತ್ತಿದ ಜಿಗಿ ಜಿಗಿ ಮಿನುಗುವ ಕೆಂಪು ಕೆಂಡ , ಹೊಂಬಣ್ಣದ ಬೆಂಕಿಯ ಶಾಖಕೆ ಮೈ ಚಳಿಯನ್ನು ಕಾಯುಸುತ್ತಿದ್ದರೆ ಅಲ್ಲಿಗೆ ಅಮ್ಮ ಎಣ್ಣೆ ಬಟ್ಟಲು ಹಿಡಿದು ಬರ್ತಿದ್ದಳು, ಮೂವರಿಗೂ ಬೆಚ್ಚಗೆ ಮಾಡಿದ ಹರಳೆಣ್ಣೆಯನ್ನು ಮೈಗೆ ಹಚ್ಚಿ ಸ್ವಲ್ಪ ಹೊತ್ತು ಬೆಂಕಿ ಮುಂದೆ ಕೂರಿಸಿ ಒಬ್ಬೂರಿಗೂ ಬೇರೆ ಬೇರೆ ಬಟಲಿನಲಿ ಸೀಗೆಯ ಪುಡಿ, ಅರಿಶಿಣಮಿಶ್ರ ಮಾಡಿ ಕಲೆಸಿಟ್ಟ ಕಡಲೆಹಿಟ್ಟನು ಹಚ್ಚಿ ಸ್ನಾನ ಮಾಡಿಸುತ್ತಿದ್ದರೆ.. ಆಹಾ… ಆಹ್… ಮೂಗಿಗೆ ಅಡಿರಿಕೊಳ್ಳುತ್ತಿದ್ದ ಪರಿಮಳ ಈಗಿನ 500 -1000 ರೂ ಕೊಟ್ಟು ತಂದು ಮಾಡುವ ಶಾಂಪೂ, ಸೋಪಿನಿಂದ ಬರಲು ಸಾಧ್ಯವೇ…!? ಸ್ನಾನ ಮುಗಿಸಿ ಅಣ್ಣ ಹೊಲಿಸಿ ತಂದ ಬಟ್ಟೆಗಳನ್ನು ಹಾಕಿಕೊಂಡು ದೇವರಿಗೆ ಕೈ ಮುಗಿದು ಒಂದು ಕೈಯಲ್ಲಿ ಪುಟ್ಟ ಕೊಡೆ ಹಿಡಿದು ನಾನು, ನನ್ನ ತಂಗಿ ಇನ್ನೊಂದು ಕೈಯಲ್ಲಿ ಹೂವಿನ ಬುಟ್ಟಿ ಹಿಡಿದು ಜಿಟಿ ಜಿಟಿ ಮಳೆಯಲ್ಲಿ ಜಾರುವ ಅಂಗಳದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಣ್ಣಬಣ್ಣದ ಡೆಲೀಯಾ, ಸ್ಪಟಿಕ,ಮಂದಾರ, ಪತ್ರೆ, ಹೂಗಳನ್ನು ಕಿತ್ತು ತರುತ್ತಿದ್ದೇವು. ನಂತರ ಅಮ್ಮ ತಲೆ ಬಾಚಿ ಚಂದದ ಬಣ್ಣ ಬಣ್ಣದ ರಿಬ್ಬನಿಂದ ಜಡೆಹೆಣೆದು ಕಟ್ಟಿ, ಪುಟ್ಟ ಜಡೆಗೆ ಒಂದಷ್ಟು ಉದ್ದದ ಸ್ಪಟಿಕದ ಇಲ್ಲ ಮಲ್ಲಿಗೆ ಹೂವಿನ ಮಾಲೆ ಮುಡಿಸಿ, ಮುಖಕ್ಕೆ ಪೌಡರ್ ಹಚ್ಚಿ ಸಿಗಾಂರದಿಂದ ಹಣೆಗೆ ಒಂದು ಬೂಟ್ಟೂ,,ಗಲ್ಲಕ್ಕೆ ಒಂದು ದೃಷ್ಟಿ ಬೊಟ್ಟಿಟ್ಟು , ಡೇಲಿಯಾ ಹೂಗಳು, ಮತ್ತು ಹಿಂದಿನ ದಿನ ತಂದಿಟ್ಟ ಗೌರಿಪೂಜೆಯ ಹೂ ಕಾಯಿ (ಮನೆಯ ಹೊರಗೆ ಇಟ್ಟಿರುತ್ತಿದ್ದೆವು ಪೂಜೆ ಆಗುವವರೆಗೆ ಮನೆಯ ಒಳಗೆ ತರುವಂತಿಲ್ಲ) ಬಾಳೆಹಣ್ಣು, ಅಕ್ಕಿ,ಬೆಲ್ಲ ತೆಂಗಿನಕಾಯಿ, ಒಂದು ಖಾಲಿ ಇರುವ ಕಳಸ ಗೌರಿಯ ಬಾಗಿನ ಮತ್ತು ಪೂಜೆ ಸಾಮಾನುಗಳನ್ನು ಹರಿವಾಣದಲ್ಲಿಟ್ಟು ಗೌರಿ ಪೂಜಿಸಿ ಕೊಂಡು ಬರಲು ಕಳುಹಿಸುತ್ತಿದ್ದಳು. ನಾವು ಸಡಗರದಿಂದ ಬಾವಿಬಳಿ ಪೂಜೆ ಸಾಮಾನು ಇದ್ದ ಹರಿವಾಣ ಹಿಡಿದು ಹೆಜ್ಜೆ ಹಾಕುತ್ತಿದ್ದರೇ…ಎಲ್ಲ ಹೆಂಗಳೆಯರು ನಮ್ಮನ್ನೆ ನೋಡ್ತಿದ್ರು…ಆಗ ನಮಗೆ ಸಮಾಧಾನ ಅಣ್ಣ ಹೊಲಿಸಿರುವ ಬಟ್ಟೆ ಚೆನ್ನಾಗಿದೆ ಅಂತ ಅಮ್ಮ ಮಾಡಿರುವ ಅಲಂಕಾರವೂ ಚೆನ್ನಾಗಿದೆ ಅಂತ, ಬಾವಿ ಬಳಿ ಸಿಕ್ಕಾಪಟ್ಟೆ ಹೆಂಗಳೆಯರು, ಮದುವೆ ಪ್ರಾಯದ ಕನ್ಯೆಯರು, ಪಡ್ಡೆ ಹುಡುಗಿಯರು… ಅವರ ಜೊತೆಗೆ ನಮ್ಮಂತಹ ಚಿಲ್ಟಾರಿಗಳು ಇರುತ್ತಿದ್ದೆವು.

ಫೋಟೋ ಕೃಪೆ : NCpedia
ಅದು ಊರಿನ ಮುಖ್ಯ ಬಾವಿ ಆಗಿದ್ದು, ಎಲ್ಲರೂ ಅದನ್ನು ಊರ ದೊಡ್ಡ ಬಾವಿ ಅಂತಾನೆ ಕರಿತಾಯಿದ್ದಿದ್ದು ಹಾಗಾಗಿ ಹೆಂಗಳೆಯರು ಗೌರಿ ಪೂಜೆಗೆ ಬಂದು ಸೇರುವ ಸಂಖ್ಯೆ ದೊಡ್ಡದಿರುತ್ತಿತ್ತು… ನಾನು ಮುಂದೆ ಹೋಗಿ ಯಾರು ಪೂಜೆ ಶುರು ಮಾಡುವರೊ ಮೊದಲು(ಹತ್ತಿಪ್ಪತ್ತು ಜನ ಒಟ್ಟಿಗೆ ಸೇರಿ ಪೂಜಿಸಿ ಕಳಸದಲ್ಲಿ ಗೌರಿ ಆಹ್ವಾನೆ ಮಾಡುವುದು ಪದ್ದತಿ, ಅಲ್ಲಿಗೆ ಮದ್ಯದಲ್ಲಿ ನನ್ನ ತಟ್ಟೆ ಇಟ್ಟು ಸುಮ್ಮನೆ ನಿಂತು ಬಿಡುತ್ತಿದೆ ಎಲ್ಲರೂ ನನ್ನ ಮುಖ ನೋಡವರು ಆದ್ರೆ ಯಾರು ಏನು ಹೇಳ್ತಾ ಇರ್ಲಿಲ್ಲ ಏಕೆಂದರೆ ಎಲ್ಲರಿಗೂ ಮುದ್ದಿನ ಹುಡುಗಿ ನಾನು ಹಾಗಾಗಿ ಕಳಸದಲ್ಲಿ ಪೂಜೆ ಹೂಗಳನ್ನು ಇಟ್ಟು ತೆಂಗಿನಕಾಯಿ ಒಡೆದು,ಗಂಧದ ಕಡ್ಡಿಯಿಂದ ದೂಪ, ಮಾಡಿ ,ಕಳಸದಲಿ ಆಹ್ವಾನಿಸಿದ ಗೌರಿಗೆ ತೆಂಗಿನಕಾಯಿ , ಅಕ್ಕಿ, ಬೆಲ್ಲ, ಬಾಳೆಹಣ್ಣಿನಿಂದ ಅಲ್ಲೆ ಪ್ರಸಾದ ಮಾಡಿ ಅದನ್ನು ಪೂಜಿಸಲ್ಪಡುವ ಎಲ್ಲ ಕಳಸಗಳ ಮುಂದೆ ವೀಳ್ಯದೆಲೆ ಇಟ್ಟು ಅದರಲ್ಲಿ ನೈವೇದ್ಯ ಸಮರ್ಪಿಸುತ್ತಿದ್ದರು ನಂತರ ಆರತಿ ,ಮಂಗಳಾರತಿ ಪೂಜೆ ಮಾಡಿ ಹರಿವಾಣದಲಿ ಗೌರಿಯನ್ನಿಟ್ಟು ಕೊಡೊರು ಅದನ್ನು ಜೋಪಾನವಾಗಿ ಹಿಡಿದು ತಂದು ಮುಂಬಾಗಿಲಿ ಬಂದಾಗ ಅಮ್ಮ ಆರತಿ ಮಾಡಿ ಗೌರಿ ಜೊತೆಗೆ ನಮ್ಮನ್ನು ಒಳಗೆ ಕರೆದುಕೊಳ್ಳುತ್ತಿದ್ದಳು ನಂತರ ದೇವರ ಮನೆಯಲ್ಲಿ ಕುಡಿ ಬಾಳೆಎಲೆಯನ್ನು ಇಟ್ಟು ಅದರ ಮೇಲೆ ಅಕ್ಕಿ ಹಾಕಿ ಒಂದು ಮಂಡಲ ಬರೆದು ಅದರ ಮೇಲೆ ಪೂಜಿಸಿಕೊಂಡು ಬಂದ ಗೌರಿ ಕಳಸವನ್ನು ಪ್ರತಿಷ್ಠಾಪಿಸುತ್ತಿದ್ದೆವು. ಅಮ್ಮ ಗೌರಿಗಾಗಿ ತಯಾರಿಸಿದ ಅಕ್ಕಿ ಒತ್ತು ಶ್ಯಾವಿಗೆ ಕಾಯ್ಹಾಲು,ಕಿಚಡಿ, ಮೊಸರಿನಲ್ಲಿ ಮಾಡಿದ ಕೆಸುವಿನ ದಂಟ್ಟಿನ ತಂಬುಳಿ, ಕೇಸುವಿನ ಕರ್ಕೆ, ಅಕ್ಕಿಪಾಯಸವನ್ನು ನೈವೇದ್ಯ ಮಾಡಿ ಮಹಮಂಗಳಾರತಿ ಮಾಡಿದ ನಂತರ ನಾವು ಪ್ರಸಾದವನ್ನು ಸೇವಿಸುತ್ತಿದ್ದೆವು. ಪೂಜೆ ಮುಗಿದ ಮೇಲೆ ಒಂದು ರೌಂಡ್ ಎಲ್ಲರ ಮನೆ ಸುತ್ತಿ ಬರುತ್ತಿದ್ದೇವು…ಅಷ್ಟರಲ್ಲಿ ಅಮ್ಮನಿಗೆ ಐದಾರು ಜನ ಆದ್ರೂ ಮಕ್ಕಳಿಗೆ ಗಾಡ ಬಣ್ಣದ ಬಟ್ಟೆ ಹಾಕಬೇಡ ಚೆನ್ನಾಗಿ ಅಲಂಕಾರ ಮಾಡಬೇಡ ಅಂದ್ರೂ ಕೇಳಲ್ಲ ನೀವು ಮಕ್ಕಳು ಮನೆಗೆ ಬಂದ ಮೇಲೆ ದೃಷ್ಠಿ ತೆಗಿಯಿರಿ ಅಂತ ಹೇಳಿರೋರು….ಅದನ್ನು ಕೇಳಿ ನಮಗೆ ಒಳಗೊಳಗೆ…ಅದೇನು ಹಿಗ್ಗು, ಇನ್ನೂ ಗಣೇಶ ಹಬ್ಬದ ದಿನ ಕೇಳೋದೆ ಬೇಡ ದೇವಸ್ಥಾನಕ್ಕೆ ತರುವ ಗಣೇಶನ ವಿಗ್ರಹ ಎಷ್ಟು ದೊಡ್ಡದು ಹೇಗಿದೆ ಎಂದು ನೋಡೋವ ಕಾತುರ ಜೊತೆಗೆ ಎಳ್ಳು ,ಬೆಲ್ಲ ಕಾಯಿತುರಿ ಅರಳು ಸೇರಿಸಿ ಮಾಡಿದ ಚಿಗಳಿ, ಕರ್ಜಿಕಾಯಿ, ಚಿಗಳಿಉಂಡೆ,ಚಿಗಳಿ ತುಂಬಿದ ಕಾಯಿಹಿಟ್ಟು,ಅರಿಶಿನದ ಎಲೆಹಿಟ್ಟು , ಮೋದಕ ತಿನ್ನುವ ಆತುರವೆ ಒಂದು ಸಂತೋಷ ನೀಡುತ್ತಿತ್ತು,ಬೆಳಿಗ್ಗೆ ದೇವಸ್ಥಾನದಲಿ ಗಣೇಶನನ್ನು ಪ್ರತಿಸ್ಠಾಪಿಸಿ ಪೂಜಿಸಿದ ನಂತರ ಸಂಜೆ ಮನೆಯಲ್ಲಿ ಅಮ್ಮ ಮಣ್ಣಿನ ಸಣ್ಣ ಗಣಪತಿ ಮಾಡಿ, ಇಲ್ಲದಿದ್ದರೆ ಸಗಣಿಯಿಂದ ಒಂದು ಸಣ್ಣ ಉಂಡೆ ತರಹ ಮಾಡಿ ಅದರ ಮೇಲೆ ಇಪ್ಪತ್ತೊಂದು ಗರಿಕೆ ಇಟ್ಟು ಅದನ್ನು ದೇವರ ಪಟದ ಮುಂದೆ ಕುಡಿ ಬಾಳೆಎಲೆ ಹಾಸಿ ಒಂದಷ್ಟು ಆಕ್ಕಿಯನ್ನು ಹಾಕಿ ಅದರಲ್ಲಿ ತಯಾರಿಸಿದ ಗಣೇಶನ್ನು ಇಟ್ಟು ಅದರ ಮುಂದೆ ನಾವು ಓದುತ್ತಿದ್ದ ಪುಸ್ತಕಗಳನ್ನು ಇಟ್ಟು ಪೂಜಿಸಿ ,ಕರ್ಜಿಕಾಯಿ, ಕರಿಗಡಬು,ಪಾಯಸ, ಸುಸಲು ( ಅರಿಶಿನದ ಎಲೆ ಮೇಲೆ ಬೇಯಿಸಿದ ಅಕ್ಕಿಹಿಟ್ಟನ್ನು ಸವರಿ ಅದಕೆ ಚಿಗಳಿ ತುಂಬಿ ಎಲೆಯ ಎರಡು ಬದಿಗಳನ್ನು ಮಡಚಿ ಹಬ್ಬೆಯಲ್ಲಿ ಬೇಯಿಸಿ ಮಾಡುವ ಸಿಹಿ ತಿನಿಸು ) ಅನ್ನ, ಮಡಹಾಗಲಕಾಯಿ ಮತ್ತು ವಿವಿಧ ಕಾಳುಗಳನ್ನು ಸೇರಿಸಿ ಮಾಡಿದ ತರಕಾರಿ ಸಾರಿನೊಂದಿಗೆ ಸಂಪೂರ್ಣ ಆಹಾರವನ್ನು ನೈವೇದ್ಯ ಮಾಡುತ್ತಿದ್ದಳು, ಹೀಗೆ ಪೂಜೆ ಮಾಡಿ ನಾವೆಲ್ಲರೂ ಒಂದು ಹತ್ತು ನಿಮಿಷ ಮನೆಯಿಂದ ಹೊರಗೆ ಬಂದು ನಿಲ್ಲುತ್ತಿದ್ದೆವು..ಆ ಸಮಯದಲ್ಲಿ ಗಣೇಶ ಬಂದು ನೈವೇದ್ಯ ಸ್ವೀಕರಿಸಿ ಹೋಗುತ್ತಾನೆ ಎಂಬ ನಂಬಿಕೆಯಲ್ಲಿ, ನಿಜಕ್ಕೂ ಗಣೇಶನ ಮುಂದಿಟ್ಟ ನೈವೇದ್ಯದ ಪ್ರಸಾದ ತಿನ್ನಲು ಅಷ್ಟೆ ರುಚಿಯಾಗಿರುತ್ತಿತ್ತು.

ಫೋಟೋ ಕೃಪೆ : newsd.in
ಹಬ್ಬದ ಮರುದಿನ ಗೌರಿ ಗಣೇಶರನ್ನು ನೀರಿನಲ್ಲಿ ವಿಸರ್ಜಿಸಲು ನಾವು ಮೂವರು ಮತ್ತು ಅಕ್ಕ ಪಕ್ಕದ ಮನೆಯಲ್ಲಿರುವ ಗೆಳೆಯ ಗೆಳತಿಯರ ಗುಂಪು ಸೇರಿಕೊಂಡು ಜೋರಾಗಿ ಕೂಗಿಕೊಳ್ಳುತ್ತಾ ಗೌರಿ ಗಣೇಶರನ್ನು ಹಿಡಿದು ಕೊಂಡು ಊರಗದ್ದೆಯ ಬಯಲಿನಲ್ಲಿ ಹರಿಯುವ ನೀರಿನಲ್ಲಿ ವಿಸರ್ಜಿಸಿ ಬರುವಾಗ ನಾವು ನೀರಿನಲ್ಲಿ ಆಟವಾಡಿ ಮೈಯೆಲ್ಲಾ ಒದ್ದೆ ಮಾಡಿಕೊಂಡು ಬಂದು ಅಮ್ಮನೊಟ್ಟಿಗೆ ಬೈಗುಳ ತಿನ್ನುತ್ತಿದ್ದೇವು. ನಂತರ ನಮ್ಮ ಗಮನವೆಲ್ಲಾ ತಿಂಗಳು ಪೂರ್ತಿ ಇರೋದು ದೇವಸ್ಥಾನದಲ್ಲಿ ಕೊರಿಸಿದ ಗೌರಿ ಗಣೇಶನ ಕಡೆಗೆ, ಗೌರಿ ಗಣೇಶರನ್ನು ವಿಸರ್ಜಿಸುವ ದಿನದವರೆಗೂ ಬೇರೆ ಕಡೆ ಹರಿಯುತ್ತಿರಲಿಲ್ಲಾ ನಮ್ಮ ಚಿತ್ತ.
ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಮನೆ ಮುಂದೆ ಇರುವ ಹೂಗಳನ್ನು ಕಿತ್ತು ಕೊಂಡು..ಒಂದು ವೇಳೆ ನಮ್ಮ ಮನೆ ಮುಂದೆ ಹೂಗಳು ಇಲ್ಲದಿದ್ದರೆ ಅಕ್ಕಪಕ್ಕದ ಮನೆಯವರ ಕೈ ತೋಟದಲ್ಲಿ ಇರುವ ಹೂಗಳನ್ನು ಕದ್ದು ಕೊಯ್ದುದಾರು ಗೌರಿ ಗಣೇಶರಿಗೆ ನಿತ್ಯ ಅರ್ಪಿಸುತ್ತಿದೆವು, ಸಂಜೆ ಜಗಮಗಿಸುವ ವಿದ್ಯುತ್ ಬೆಳಕಿನಲ್ಲಿ ದೇವಸ್ಥಾನದಲ್ಲಿ ಪ್ರತಿದಿನ ಒಂದು, ಮೂರು, ನಾಲ್ಕು ಕೆಲವೊಮ್ಮೆ ಒಟ್ಟಿಗೆ ಐದಾರು ಮಂದಿ ಸೇರಿ ಗೌರಿಗಣೇಶನಿಗೆ ಪೂಜೆ ಸಲ್ಲಿಸುತ್ತಿದ್ದರು.. ಆಗ ಸಿಗುತ್ತಿದ್ದ ಪ್ರಸಾದದ ಪ್ರಮಾಣವು ಜಾಸ್ತಿ ಇರೋದು.. ಕಡ್ಲೆಕಾಳು ಉಸುಲಿ, ಅವಲಕ್ಕಿ ಚರ್ಪು, ಮೋದಕ,ಹುರಿಗಡಲೆಯಿಂದ ಮಾಡಿದ ಪ್ರಸಾದಗಳೆ ಹೆಚ್ಚು.. ಈ ಪ್ರಸಾದಕ್ಕಾಗಿಯೆ ಹೆಚ್ಚು ದೇವಸ್ಥಾನಕ್ಕೆ ಹೋಗುತ್ತೀದ್ದುಂಟು ಆ ರುಚಿ ಮನೆಯಲ್ಲಿ ಮಾಡುವ ಅದೆ ರೀತಿಯ ತಿನಿಸುಗಳಲಿ ಸಿಗುತ್ತಿರಲಿಲ್ಲ. ಗಣೇಶನ ಪೂಜೆ, ಭಜನೆಗಳಲ್ಲಿ ಮುಳುಗಿ ಹೋಗುತ್ತಿದ್ದ ನಮಗೆ ಸಮಯದ ಪರಿವೇ ಇರುತ್ತಿರಲಿಲ್ಲ ಸರಿ ರಾತ್ರಿ ಹನ್ನೆರಡಾದರು ಮನೆ ಸೇರುತ್ತಿರಲಿಲ್ಲಾ, ಗೌರಿ ಗಣೇಶ್ರನ್ನು ವಿಸರ್ಜನೆ ಮಾಡುವ ದಿನವಂತು ಸಂಭ್ರಮ ಕಿಂತ ಅಳುನೇ ಬಂದು ಬಿಡೋದು.. ಅದೇಷ್ಟು ವಿವಿಧ ಗೌರಿ ಗಣಪತಿ ವಿಗ್ರಹಗಳನ್ನು ನಮ್ಮ ದೇವಸ್ಥಾನದಲಿ ಇಟ್ಟು ಪೂಜಿಸಿದ್ದಾರೆ ನಮ್ಮೂರಿನ ಹಿರಿಯರು ಅಬ್ಬಾ ಈಗಲೂ ನೆನದರೆ ಅಷ್ಟು ಮೂರ್ತಿ ಗಳು ಕಣ್ಣ್ಮುಂದೆ ದರ್ಶನ ಕೊಟ್ಟು ಹೋಗುತ್ತವೆ. ಆದರೆ ಧಾವಂತ ಬದುಕಿನಲಿ ಈಗ ಅರ್ಧ ಗಂಟೆ ದೇವಸ್ಥಾನಕ್ಕೆ ಹೋಗಿ ಬರೋಕೆ ಹತ್ತು ಸಾರಿ ಯೋಚಿಸುತ್ತಿದ್ದೆವೆ !!
ಬಾಲ್ಯದಲಿ ಹೊಸ ಬಟ್ಟೆ ಬರುತ್ತಿತ್ತು. ಸಿಹಿತಿಂಡಿ ಮಾಡುತ್ತಿದ್ದರು. ಮುಖ್ಯವಾಗಿ ಎಲ್ಲರೂ ಕುಟುಂಬಗಳ ಸಮೇತ ಒಟ್ಟಾಗಿ ಸೇರುತ್ತಿದ್ದೆವು. ಎರಡು ಮೂರು ದಿನಗಳಿಗೆ ಮುಂಚೆಯೇ ಹಬ್ಬದ ವಾತಾವರಣ ಊರ ತುಂಬ ಇರುತ್ತಿತ್ತು. ಹಳ್ಳಿ ಜೀವನ ಎಂದರೆ ಏನೋ ಒಂದು ರೀತಿಯಲ್ಲಿ ಸೊಗಸು. ಆದರೆ ಈಗ ಯಾಂತ್ರಿಕ, ಒತ್ತಡದ ಜೀವನದಲ್ಲಿ ಅವೆಲ್ಲವನ್ನು ಕಳೆದುಕೊಂಡಿದ್ದೇವೆ ಎನ್ನುವಂತಹ ಭಾವನೆ ನಮ್ಮ ಮನದಲ್ಲಿ ಮೂಡದೇ ಇರದು.ನಮ್ಮ ಮಕ್ಕಳು ಸಹ ತಮ್ಮ ಬಾಲ್ಯದ ದಿನಗಳನ್ನು ನಾವು ಕಳೆದ ರೀತಿಯಲ್ಲಿ ಕಳೆಯುತ್ತಿಲ್ಲ ಎನ್ನುವುದೇ ಒಂದು ದೊಡ್ಡ ಬೇಸರ.ನಮ್ಮ ಬಾಲ್ಯದಲ್ಲಿ ಇರದ ಅನೇಕ ಅನುಕೂಲ, ಸವಲತ್ತುಗಳನ್ನು ನಮ್ಮ ಮಕ್ಕಳಿಗೆ ಸಿಕ್ಕಿವೆ ಆದರೂ ಸಹ ಅವರಿಗೆ ನಮ್ಮ ಬಾಲ್ಯದಲ್ಲಿ ಆಚರಿಸುತ್ತಿದ್ದ ಹಬ್ಬದ ಸಂಭ್ರಮ,ಸೊಗಸು ಇರುವುದೇ ಇಲ್ಲಾ..ಇರಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ.
ಆದುನಿಕತೆ ಹೊಂದಿಕೊಳ್ಳುವ ಬರದಲಿ ತಂತ್ರಜ್ಞಾನ, ನಾಗರಿಕತೆ ಬೆಳೆದಂತೆ ಸಂಸ್ಕೃತಿ, ಸಂಸ್ಕಾರದ ಆಚರಣೆ ದ್ಯೋತಕವಾಗಿದ್ದ ಹಬ್ಬಗಳು ಕಣ್ಮುಂದೆ ಮರೆಯಾಗುತ್ತಿವೆ. ಜೊತೆಗೆ ತನ್ನತನವನ್ನು ಸಹ ಕಳೆದುಕೊಳ್ಳುತ್ತಿವೆ, ಕೊರೋನ ಎಂಬ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ಇದ್ದ ಅಲ್ಪ ಸ್ವಲ್ಪ ಸಡಗರ ಸಂಭ್ರಮಕ್ಕೂ ಕಲ್ಲು ಬಿದ್ದಿದೆ,ಇದು ಗೌರಿ ಗಣೇಶ ಹಬ್ಬಕ್ಕೆ ಮಾತ್ರ ಎನ್ನುವಂತಿಲ್ಲ. ಎಲ್ಲ ಹಬ್ಬಗಳು ಸಹ ತನ್ನ ಆಚರಣೆಯ ಮಹತ್ವವನ್ನು, ಪ್ರಾಮುಖ್ಯತೆಯನ್ನು ಒಂದಲ್ಲ ಒಂದು ರೀತಿಯಲ್ಲಿ, ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತಾ ಹೋಗುತ್ತಿರುವುದು ವಿಪರ್ಯಾಸಕರ ಸಂಗತಿ.
ಆದರೆ ಈಗ ನಮಗೆ ಕೈತುಂಬಾ ಹಣವಿದೆ ..ಏನು ಬೇಕಾದರೂ ಕೊಳ್ಳುವ ಮನಸ್ಸಿದೆ….. ವಯಸ್ಸಿದೆ , ಮೊದಲಿನ ಹಾಗೆ ಊರೂರು ಅಲೆದು ಬಟ್ಟೆ ಬರಿ ಸಾಮಾನು ತರ್ಬೇಕತ್ತಿಂಲ್ಲ ಕೂತ್ತಲ್ಲಿಗೆ ಎಲ್ಲವೂ ಬರುತ್ತದೆ, ಹಬ್ಬಕ್ಕೆ ತಯಾರಿಸಿದ ಸಾಕಷ್ಟು ತರವಾರಿ ತಿಂಡಿ ತಿನಿಸುಗಳು ಸಿಗುತ್ತವೆ ..ಆದರೂ ಮೊದಲಿನ ಸಂಭ್ರಮ ಇಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ನೆಮ್ಮದಿ ಅನ್ನೋದೆ ಇಲ್ಲವಾಗಿದೆ ಎಲ್ಲ ಸಂಪ್ರದಾಯ, ಆಚರಣೆಗಳು ಒಂದು ನೆಪವಾಗಿ ಯಾಂತ್ರಿಕವಾಗುತ್ತಿರುವ ಜೀವನ ಶೈಲಿಯನ್ನು ನೋಡಿದರೆ ನಮ್ಮ ಬಾಲ್ಯ ಒಂದು ಅದ್ಭುತವಾದ ಸ್ವರ್ಗವೆ ಆಗಿತ್ತು ಅಂತಹ ದಿನಗಳು ಮತ್ತೆ ಮತ್ತೆ ಬರಬಾರದೇ ಅನಿಸುವುದಂತು ಸುಳ್ಳಲ್ಲ.
- ಪವಿತ್ರ. ಹೆಚ್.ಆರ್ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )
