ಬಾಲ್ಯದಲ್ಲಿ ನನ್ನ ಗಣೇಶನ ಹಬ್ಬ- ರಘುರಾಂ



ಬಾಲ್ಯದಲ್ಲಿ ಮಕ್ಕಳ ತಂಡ ಕಟ್ಟಿಕೊಂಡು ಗಣೇಶ ನೋಡಲು ಹೋಗುತ್ತಿದ್ದೆವು, ಪ್ರಸಾದ ಕೊಡದ ಮನೆಗಳ ಮೇಲೆ ಮುನಿಸಿತ್ತು, ಅದೇ ಕಾರಣಕ್ಕೆ ಮುಂದಿನ ಗಣೇಶ ಹಬ್ಬಕ್ಕೆ ಆ ಮನೆ ಹೋಗುತ್ತಿರಲಿಲ್ಲ. ಹೀಗೆ ಒಂದಷ್ಟು ಹುಸಿ ಮುನಿಸು, ಸಂತೋಷ, ಸಂಭ್ರಮದ ನಡುವೆ ನಡೆಯುತ್ತಿದ್ದ ಗಣೇಶ ಹಬ್ಬದ ನೆನಪನ್ನು ಲೇಖಕರು ರಘುರಾಂ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಎಲ್ಲರು ಇಷ್ಟ ಪಡುವ ಹಬ್ಬವೇ ಗಣೇಶನ ಹಬ್ಬ. ನಮ್ಮ ಮನೆಯಲ್ಲೂ ಗಣೇಶನ ಹಬ್ಬ ವಿಶೇಷವೇ. ಅದರಲ್ಲೂ ಗಣೇಶನ ಮಂಟಪ ಹಾಕುವ ಸಂಭ್ರಮ ಎರಡು ದಿನ ಮೊದಲೇ ಪ್ರಾರಂಭ. ಗೌರಿ ಹಬ್ಬದ ಹಿಂದಿನ ದಿನ ಹಳ್ಳಿಯಿಂದ ಗಾಡಿಯಲ್ಲಿ ಹಬ್ಬಕ್ಕೆ ಬಾಳೆ ಎಲೆ, ಬಾಳೆ ಹಣ್ಣು, ಅಡಿಕೆ ಗೊನೆ, ಸೌತೆಕಾಯಿ ಬರುತ್ತಿತ್ತು. ಮನೆಯ ಮಹಡಿಯಲ್ಲಿ ಹಳೇ ಗೋಣಿಚೀಲದಲ್ಲಿ ಸುತ್ತಿ ಇಟ್ಟಿರುವ ಮಂಟಪದ ಸಾಮಾನುಗಳು ಕೆಳಗೆ ಇಳಿಸುತ್ತಿದ್ದೆವು. ಬೆಳಿಗ್ಗೆ ಮಂಟಪದ ಸಾಮಾನುಗಳನ್ನು ಕೆಳಗಡೆ ಇಳಿಸಿ ಹಾಲನಲ್ಲಿ ಮಂಟಪ ಕಟ್ಟಲು ಪ್ರಾರಂಭ ಆಗುತ್ತಿತ್ತು.

ಮೊದಲು ಗೋಡೆಗೆ ಕಟ್ಟಿದ ದೇವರ ಫೋಟೋಗಳನ್ನು ಕೆಳಗಡೆ ಇಳಿಸಬೇಕು. ಈ ಮಂಟಪ ಕಟ್ಟಬೇಕು. ಕಟ್ಟಿದ ಮೇಲೆ ಸುಮಾರು 6 ಅಡಿ ಉದ್ದ, 8 ಅಡಿ ಎತ್ತರ ಆಗುತ್ತಿತ್ತು. ಇದು ಮರದ ಮಂಟಪ. ಸಣ್ಣ ರೀಪುಗಳನ್ನು ಜೋಡಿಸಿ ಅದಕ್ಕೆ ಬೋಲ್ಟ ಮತ್ತು ನಟ್ಟು ಹಾಕಿ ಫಿಕ್ಸ್ ಮಾಡಬೇಕು. ಅಮೇಲೆ ಅದಕ್ಕೆ ಬಣ್ಣದ ಪೇಪರ್ ಕತ್ತರಿಸಿ ಅಂಟಿಸಬೇಕು. ಇದನ್ನು ಹೇಳಿ ವರ್ಣನೆ ಮಾಡುವುದು ಬಹಳ ಕಷ್ಟದ ಕೆಲಸ. ಮಂಟಪ ಕಟ್ಟಿ ಮುಗಿದ ಮೇಲೆ ನಿಂತು ನೋಡಿದರೆ ಹೇಗಿರುತ್ತಿತ್ತು ಗೊತ್ತಾ? ಯಾವುದಾದರೂ ಹಳೇ ತೆಲಗು ದೇವರ ಸಿನಿಮಾ ನೋಡಿದ್ದೀರಾ? ಅದರಲ್ಲಿ ಇಂದ್ರನ ಆಸ್ಥಾನಕ್ಕೆ ಬಾಗಿಲು ತೆಗೆಯುವುದನ್ನು ತೋರಿಸುತ್ತಾರಲ್ಲ! ಆ ತರಹ ಸಿನಿಮಾ ಸೆಟ್ ನ ತರಹ ಆಗಿರುತ್ತಿತ್ತು. ಮನೆ ಮಂದಿಯೆಲ್ಲಾ ಮಂಟಪ ಕಟ್ಟಲು ನಿಲ್ಲುತ್ತಿದ್ದರು. ಒಬ್ಬರು ಹಿಡಿಯುವುದು, ಇನ್ನೊಬ್ಬರು ಬೋಲ್ಟ್ ಹಾಕುವುದು, ಒಬ್ಬರು ಬಣ್ಣದ ಪೇಪರ್ ಕತ್ತರಿಸುವುದು, ಇನ್ನೊಬ್ಬರು ಬಂಗಾರದ ಕಲರ್ ನ ಪೇಪರ್ ಬಾರ್ಡರ್ ಗೆ ಅಂಟಿಸುವುದು, ಮೇಲಗಡೆ ಸಾಲಿನಲ್ಲಿ ದೊಡ್ಡ ಫೋಟೊಗಳು, ಪಕ್ಕದಲ್ಲಿ ಬಾಳೆ ಕಂಬ, ಮಾವಿನ ಸೊಪ್ಪಿನ ತೋರಣ, …. ಒಂದೇ, ಎರಡೇ! ಕಲರ್ ಪೇಪರ್ ನಲ್ಲಿ ಮಾಡಿದ ಹಾರಗಳು, ತೆಂಗಿನಕಾಯಿ, ಬಾಳೆ ಹಣ್ಣು, ತರಕಾರಿ, ಎಲ್ಲಾ ಕತ್ತದ ಹಗ್ಗದಲ್ಲಿ ಕಟ್ಟಿ ಮೇಲಗಡೆ ನೇತು ಹಾಕಬೇಕು! ಅಕ್ಕಂದಿರು ಮತ್ತು ಅಮ್ಮ ಹತ್ತಿಯನ್ನು ಹೊಸೆದು ಅದರಲ್ಲಿ ವಿವಿಧ ರೀತಿಯ ನೆಕ್ಲೇಸ್ ಗಳು, ಹಾರಗಳು, ಗೆಜ್ಜೆ ವಸ್ತ್ರ ತಯಾರಿ ಮಾಡುತ್ತಿದ್ದರು. ಬೇರೆ, ಬೇರೆ ಕಲರ್ ವರ್ತಿ ಪೇಪರ್ ನಿಂದ ಅದಕ್ಕೆ ಅಲಂಕಾರ. ಸಿದ್ದೆ ಯಲ್ಲಿ ಬಿಳಿ ಕಲರ್ ರಂಗೋಲಿ ಹತ್ತಿಯ ಕೆಲಸ ಹಬ್ಬದ 15 ದಿವಸದ ಮೊದಲೇ ಪ್ರಾರಂಭ ಆಗಿರುತ್ತಿತ್ತು. ಎಲ್ಲಾ ಮುಗಿದು ಮಂಟಪ ರೆಡಿ ಆಗುವಾಗ ಸಂಜೆ ಆಗಿರುತ್ತಿತ್ತು! ಹಳ್ಳಿಯ ಹಳಬರು ನಾಲ್ಕಾರು ಬಣ್ಣದ ಸೌತೆಕಾಯಿ, ನಾಲ್ಕೈದು ಚಿಪ್ಪು ಬಾಳೆ ಹಣ್ಣು ತೆಗೆದುಕೊಂಡು ಬಂದು ” ದೊಡ್ಡಯ್ಯನವರ” ಮನೆ ಎಂದು ಹೇಳಿ ಅಪ್ಪನಿಗೆ ಗೌರವ ಸಲ್ಲಿಸಿ, ಮಕ್ಕಳ ಬಗ್ಗೆ ವಿಚಾರಿಸಿ ಅಮ್ಮ ಕೊಟ್ಟ ತಿಂಡಿ ಕಟ್ಟಿಸಿಕೊಂಡು ಹೋಗುತ್ತಿದ್ದರು. ಇದು ಯಾವ ವರುಷನೂ ತಪ್ಪಿದ್ದಿಲ್ಲ!

ಫೋಟೋ ಕೃಪೆ : ritualsmart

ನಮ್ಮ ಮನೆಯ ಹತ್ತಿರ ಒಂದು ಮನೆಯಲ್ಲಿ ಗಣೇಶ ಮಾಡುತ್ತಿದ್ದರು. ಅಲ್ಲಿಂದ ಗಣೇಶ ತರುತ್ತಿತ್ತು. #ಗೌರಿ_ಹಬ್ಬಕ್ಕೆ ಚಿಕ್ಕಪ್ಪನ ಮನೆಯಿಂದ(ಅಪ್ಪನ ತಮ್ಮ) , ಚಿಕ್ಕಮ್ಮ (ಅಮ್ಮನ ತಂಗಿ) ಮನೆಯಿಂದ ಪೂಜೆ ಮಾಡಲು ಬರುತ್ತಿದ್ದರು. ಎಲ್ಲ ದೀಪಗಳಿಗೆ ಎಣ್ಣೆ, ಬತ್ತಿ ಮಾಡುವುದಕ್ಕೆ ಒಂದು ಗಂಟೆ ಆದರೂ ಬೇಕು. ಮಂಟಪ ಹಿಂದುಗಡೆ ಸುಮಾರು 4ಅಡಿ ಎತ್ತರದ ಹಿತ್ತಾಳೆ ದೀಪಗಳು. ಮಂಟಪದ ಮುಂದೆ ಸುಮಾರು 2ಅಡಿ ದೀಪಗಳು. ವಿವಿಧ ರೀತಿಯ ಹಿತ್ತಾಳೆ ಮಂಗಳಾರತಿಗಳು. ತಟ್ಟೆಗೆ ಹತ್ತಿಯನ್ನು ಹಾಲಿನಲ್ಲಿ ಅದ್ದಿಕೊಂಡು ಚಿತ್ರ ಬರೆದು, ಅದರ ಮೇಲೆ ಅರಿಶಿನ, ಕುಂಕುಮ ಹಾಕಿ ಅಲ್ಲಾಡಿಸಿದರೆ ಅದು ಹಾಲಿರುವ ಜಾಗದಲ್ಲಿ ಅಂಟಿಕೊಂಡು ಒಳ್ಳೆಯ ಚಿತ್ರ ಮೂಡುತ್ತೆ. ಅದೂ ಕೂಡ ಮಂಗಳಾರತಿ!. ಬೆಳ್ಳಿ ಪೂಜೆ ಸಾಮಾನುಗಳು ಹೊರಗೆ ಬಂದಿರುತ್ತಿತ್ತು. ಹಿತ್ತಲಲ್ಲಿ ಇರುವ ಡೇರೆ ಹೂ, ದಾಸವಾಳದ ಹೂಗಳು, ಗೊರಟೆ ಹೂ… ಪತ್ರೆಗಳು… ಎಲ್ಲಾ ಬೇಕಾದಷ್ಟು ಇರುತ್ತಿತ್ತು. ದೀಕ್ಷಿತರು ಬಂದು ಪೂಜೆ ಮಾಡಿಸುವುದೇ ಜಾಸ್ತಿ. ಮನೆ ಎದುರುಗಡೆ ಇದ್ದ ಭಾವಿಗೆ ಹೋಗಿ ಗಂಗೆ ಪೂಜೆ ಮಾಡಿ, ಕಳಸದಲ್ಲಿ ನೀರು ತಂದು, ಹೊಸ್ತಿಲ ಬಳಿ ನಿಂತು ತೆಂಗಿನಕಾಯಿ ನಿವಾಳಿಸಿ ಒಡೆದು ಒಳಗೆ ಬಂದರೆ, ಗೌರಿ ಪೂಜೆ ಪ್ರಾರಂಭ ಆಯಿತು ಎಂದರ್ಥ.



ನಾನಂತೂ ಎಲ್ಲರ ಮನೆಯವರು ಮಾಡಿಕೊಂಡು ಬಂದ ಕೋಸಂಬರಿ ಕೊಡುವುದನ್ನು ಕಾಯುತ್ತಿದ್ದೆ! ಎಲ್ಲರ ಮನೆದೂ ಒಂದಕ್ಕಿಂಥ ಒಂದು ರುಚಿ. ಜೊತೆಗೆ ಅವರು ಅಮ್ಮನಿಗೆ ಕೊಡುತ್ತಿಧ್ದ ಬಾಗಿಣದಲ್ಲಿ ಇರುವ ಕನ್ನಡಿ ಮತ್ತು ಬಾಚಣಿಗೆ ತೆಗೆದುಕೊಂಡು ಇಟ್ಟುಕೊಳ್ಳತ್ತಿದ್ದೆ! ಉಳಿದವರೆಲ್ಲ ಎರಡು ಬಾಗಿಣ ಕೊಟ್ಟರೆ, ಅಮ್ಮ ಮಾತ್ರ ಐದು ಜನಕ್ಕೆ ಕೊಡುತ್ತಿದ್ದರು. ಅಮೇಲೆ ಹೋಳಿಗೆ ಊಟ! ಸಂಜೆ ಮತ್ತೆ ಪೂಜೆ. ಮಾರನೆಯ ದಿನ ಗಣೇಶ ಪೂಜೆ. ಅಪ್ಪ ಮೊದಲು, ನಂತರ ಇತರರು ಸೀನಿಯಾರಿಟಿ ಪ್ರಕಾರ ಕೂರ ಬೇಕಿತ್ತು. ದೊಡ್ಡವರು ಇರಲಿ, ಸಣ್ಣವರು ಇರಲಿ, ಎಲ್ಲರೂ ರೇಷ್ಮೆ ಮುಗುಟ ಉಟ್ಕೊಂಡು ಪಂಚಪಾತ್ರೆ, ಉದ್ದರಣೆ, ತಟ್ಟೆ, ಮಂಗಳಾರತಿ ಎದುರುಗಡೆ ಇಟ್ಟುಕೊಂಡು ಕೂರುತ್ತಿದ್ದೆವು. ಬರೀ ಅಷ್ಟೇ ಅಲ್ಲ! ಉಪಾಯನ ದಾನ ಅಪ್ಪ, ಅಮ್ಮ ಎರಡು ತೆಂಗಿನಕಾಯಿ ಇಟ್ಟು ಕೊಟ್ಟ ಮೇಲೆ ಮನೆಯಲ್ಲಿ ಇರುವ ಎಲ್ಲರೂ ಒಂದೊಂದು ತೆಂಗಿನಕಾಯಿ ಇಟ್ಟು ಉಪಾಯನ ದಾನ ಕೊಡುತ್ತಿತ್ತು. ಹಬ್ಬಕ್ಕೆ ನಾಲ್ಕು ದಿನ ಮುಂಚಿತವಾಗಿ ಒಂದು ದೊಡ್ಡ ಮೂಟೆ ತೆಂಗಿನಕಾಯಿ ತೆಗೆದುಕೊಂಡು ಬರುತ್ತಿದ್ದರು. ಮಹಾ ನೈವೇದ್ಯದ ಹೊತ್ತಿಗೆ ಮತ್ತೆ ಎಲ್ಲರ ಕೈಲಿ ಒಂದೊಂದು ಕಾಯಿ ಮುಟ್ಟಿಸಿ ಒಡೆಯುತ್ತಿದ್ದರು. ಯಾರಾದರೂ ಮಕ್ಕಳು ಊರಿಗೆ ಬಂದಿಲ್ಲದಿದ್ದರೆ ಅವರ ಹೆಸರಿನಲ್ಲಿ ಇನ್ನೊಂದು!

ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಊರ ಹುಡುಗರು ಗಣೇಶ ನೋಡಲು ಹಾಜರ್ ! ಸಣ್ಣವರಿಗೆ ಕಡ್ಲೆಹಿಟ್ಟು, ದೊಡ್ಡವರಿಗೆಲ್ಲಾ ಕಾಯಿ. ಒಂದು ಸಾರಿ ಸುಧಾ ವಾರ ಪತ್ರಿಕೆಯಲ್ಲಿ ಚುಕ್ಕಿ ರಂಗೋಲಿ ಯಲ್ಲಿ ಗಣೇಶ ಬಿಡಿಸುವ ಚಿತ್ರ ಬಂದಿತ್ತು. ಅಕ್ಕ ದೇವರ ಮುಂದೆ ಸುಮಾರು ನಾಲ್ಕು ಅಡಿ ಅಸ್ಟು ದೊಡ್ಡ ಆ ರಂಗೋಲಿ ಹಾಕುತ್ತಿದ್ದಳು. ಆ ರಂಗೋಲಿ ಊರೆಲ್ಲ ಫೇಮಸ್ ಆಗಿತ್ತು!

ನಾವು ಮಕ್ಕಳ ತಂಡ ಕಟ್ಟಿಕೊಂಡು ಗಣೇಶ ನೋಡಲು ಹೊರಡುತ್ತಿದ್ದವು. ಕಳೆದ ವರ್ಷ ಗಣಪತಿ ನೋಡಲು ಹೋದಾಗ ಏನೂ ಪ್ರಸಾದ ಕೊಡದ ಮನೆಗೆ ಈ ಸಾರಿ ಹೋಗುತ್ತಿರಲಿಲ್ಲ! 108 ಗಣಪತಿ ನೋಡಲು ಗುರಿ. ಗುರಿ ಮುಟ್ಟಲು ಸಾಧ್ಯವಾಗದಿದ್ದರೆ, ರಾಮೇಶ್ವರ ದೇವಸ್ಥಾನದ ಕಂಬದ ಗಣಪತಿ ನೋಡಿದರೆ 108 ಅಯಿತು ಎಂದು ಸಮಾಧಾನ!

ಫೋಟೋ ಕೃಪೆ : new18

ಮತ್ತೆ ರಾತ್ರಿ ಪೂಜೆ. ತುಂಗಾ ನದಿಯ ಮರಳುಗಂಗೆ ಯಲ್ಲಿ ವಿಸರ್ಜನೆ. ಆಗ ತಾನೆ ಮಳೆಗಾಲ ಮುಗಿಯುತ್ತಾ ಬಂದಿರುತ್ತೆ. ಹಾಗಾಗಿ ನೀರು ಜಾಸ್ತಿಯೇ ಇರುತ್ತದೆ. ಹಾಗಾಗಿ ನೀರಿಗೆ ಇಳಿಯಲು ಸಣ್ಣವರಿಗೆ ಬಿಡುತ್ತಿರಲಿಲ್ಲ. ದೊಡ್ಡವರಿಗೆ ಮಾತ್ರ ಗಣೇಶ ಬಿಡಲು ನೀರಿಗೆ ಇಳಿಯುತ್ತಿದ್ದರು. ಆಗಲೂ ವಿಳೇದೆಲೆ ಮೇಲೆ ಕರ್ಫೂರ ಹಚ್ಚಿ ನೀರಿನಲ್ಲಿ ಬಿಟ್ಟರೆ ಅದು ತೇಲಿ ಹೋಗುವುದು ನೋಡಲು ಚೆನ್ನ!
ರಾತ್ರಿಗೆ ಊಟವಿಲ್ಲ! ಕಾವಲಿ ಮೇಲೆ ಸುಟ್ಟ ತರಹಾವರಿ ಬೆಳಿಗ್ಗೆ ಮಾಡಿದ ಇಡ್ಲಿಗಳು.ತಟ್ಟೆ ಇಡ್ಲಿ, ಹಾಳೆ ಕಡಬು, ಸಿಹಿ ಕಡುಬು, ಕಟ್ಟಿಗೆ ಹೊರೆ, ಓ… ಜೊತೆಗೆ ಕಾಯಿ ಚಟ್ನಿ, ಮೊಸರು! ಈಗ ಹೇಳಿ ಊಟ ಯಾರಿಗೆ ಬೇಕು? ಮಧ್ಯಾಹ್ನ ಕ್ಕಿಂತ ರಾತ್ರಿಯೇ ಇವುಗಳು ರುಚಿ ಜಾಸ್ತಿ! ಆದರೂ ಗಣಪತಿ ಹಬ್ಬದ ಮಧ್ಯಾಹ್ನದ ಊಟಕ್ಕೆ ಮಾಡುವ ತುಪ್ಪದ ಅನ್ನ ಮಾತ್ರ ಪಲ್ಯಗಳು, ಕೋಸಂಬರಿಗಳ ಮಧ್ಯೆ ತನ್ನ ಬೇಡಿಕೆ ಉಳಿಸಿಕೊಂಡಿತ್ತು! ಮೊದಲು ಮೂರು ದಿನ #ಗಣೇಶ ಇಡುತ್ತಿತ್ತು. ಒಂದು ಸಾರಿ ಪೂಜೆ ಮುಗಿಯುವ ಹೊತ್ತಿಗೆ ಊರಿಂದ ಚಿಕ್ಕಪ್ಪನ ಮಗನಿಗೆ ಮಗ ಹುಟ್ಟಿದ್ದಾನೆ ಎಂದು ಕಾಗದ ಬಂತು. ಕೊನೆಗೆ ಅಮ್ಮನ ತಂಗಿ ಅವರ ಮನೆಯಲ್ಲಿ ಅಡಿಗೆ ಮಾಡಿಕೊಂಡು ಬಂದು, ಅವರು ಪೂಜೆ ಮಾಡಿ ಗಣೇಶ ಬಿಟ್ಟರು! ಆಮೇಲೆ ಗಣೇಶನ ಪೂಜೆ ದಿನವೇ ಗಣಪತಿ ಬಿಡುವ ಪದ್ದತಿ ಬಂತು. ಅದರ ಜೊತೆಗೆ ಹಬ್ಬದ ಸಮಯದಲ್ಲಿ ಯಾವುದೇ ಕಾಗದ ಬಂದರೂ ತೆಗೆದು ಅಪ್ಪನ ರೂಮ್ ನ ಗೋಡೆ ಬೀರಿನಲ್ಲಿ ಇಟ್ಟು, ಹಬ್ಬ ಮುಗಿದ ಮಾರನೇಯ ದಿನ ಆ ಕಾಗದ ಒದುತ್ತಿದ್ದರು!

ಫೋಟೋ ಕೃಪೆ : cookingwithsiddhi

ಹಬ್ಬ ಮುಗಿಯಿತಲ್ಲ! ಈಗ ಮಂಟಪದ ಸಾಮಾನು ಮೇಲೆ ಸಾಗಿಸಬೇಕು! ಒಂದು ಬೆಟ್ಟು ತೂರಿಸಿ ಎಳೆದರೆ ಪರ್ ಎಂದು ಒಂದು ಸೆಕೆಂಡ್ಗೆ ಹರಿದು ಹೋಗುತ್ತದೆ ದಿನವಿಡೀ ಅಂಟಿಸಿದ ಬಣ್ಣದ ಪೇಪರ್. ಎಲ್ಲಾ ಬೆಲೆ ಜಾಸ್ತಿ, ತೆಗೆದು ಇಡಿ ಜೋಪಾನ ಎಂದು ಹೇಳುತ್ತಿದ್ದರು. ಪೇಪರ್ ಹೂ, ಪಟ್ಟಿಗೆ ಹಚ್ಚುವ ಬಂಗಾರದ ಕಲರ್ ಪೇಪರ್, ಎಲ್ಲಾ ತೆಗೆದು ಇಡುತ್ತಿದ್ದೆವು. ಆದರೆ ಮುಂದಿನ ವರ್ಷ ಅದರಲ್ಲಿ ಸ್ವಲ್ಪ ಮಾತ್ರ ಉಪಯೋಗ ಆಗುತ್ತಿತ್ತು. ಯಾಕೆಂದರೆ ಅಸ್ಟು ಹೊತ್ತಿಗೆ ಹೊಸ ವಿನ್ಯಾಸ ಮಾಡುವುದನ್ನು ಕಲಿತಿರುತ್ತಿದ್ದರು. ಎಲ್ಲಾ ಬಿಚ್ಚಿ ಮಹಡಿಗೆ ಸೇರಿಸಿದರೆ ಮತ್ತೆ ಅದಕ್ಕೆ ಒಂದು ವರ್ಷ ವಿಶ್ರಾಂತಿ!
ಗೌರಿ, ಗಣೇಶ ಹಬ್ಬದ ಬಗ್ಗೆ ಎಸ್ಟು ಹೇಳಿದರೂ ಕಡಿಮೆಯೇ. ಕಡಬು ಮುಗಿಸಿ, ಹೋಳಿಗೆಗೆ ತುಪ್ಪ, ಹಾಲು ಹಾಕಿ ತಿನ್ನುತಿರ ಬೇಕಾದರೆ ತಯಾರು ಆಗುತ್ತಿದ್ದುದೇ ಒಡೆದಿರುವ ತೆಂಗಿನಕಾಯಿ ಕಾಲಿ ಮಾಡಲು ಮಾಡುವ ಕೋಡುಬಳೆ! ಹಬ್ಬಕ್ಕೆ ಎಂದು ಚಕ್ಕುಲಿ ಮಾಡಿ ದೇವರಿಗೆ ಇಡುತ್ತಿದ್ದರು. ಈ ನೈವೇದ್ಯ ಪ್ರಸಾದವಾಗಿ ಚಕ್ಕುಲಿ ಸೇವನೆ! ದೇವರಿಗೆ ಒಡೆದ ತೆಂಗಿನಕಾಯಿ ಕೋಡುಬಳೆ ಆಗಿ ರೂಪಾಂತರ! ಒಟ್ಟಿನಲ್ಲಿ ಎಲ್ಲಾ ಪ್ರಸಾದ!

ತಮ್ಮಗೆಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳೊಂದಿಗೆ.


  • ಎನ್.ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ, ಲೇಖಕರು)

4.7 3 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW