ಕೆಂಪು ಗುಲಾಬಿ ಪ್ರೇಮದ ಸಂಕೇತ. ಆ ಗುಲಾಬಿ ಆ ಹುಡುಗ ಕೊಟ್ಟಾಗ ಕಾರಣ ನಾನು ಕೇಳಲಿಲ್ಲ, ಅವನು ಹೇಳಲಿಲ್ಲ. ಈಗ ಅದು ನನ್ನ ಪುಸ್ತಕದಲ್ಲಿ ಜೋಪಾನವಾಗಿ ಹಾಗೆ ಉಳಿದಿದೆ – ಶಶಿರೇಖಾ ವಿಜಯಪುರ ತಪ್ಪದೆ ಮುಂದೆ ಓದಿ ಭಾವನಾತ್ಮಕ ಒಂದು ಬರಹ.
ಅಂದು ನೀನು ಕೊಟ್ಟ ಗುಲಾಬಿ ಇನ್ನೂ ನನ್ನ ದಿನಚರಿಯ ಪುಟದ ಮಧ್ಯ ಇದೆ. ಯಾರಿಗೆ ಗೊತ್ತಿತ್ತು ಆಗ ಅಂದು ರೋಸ್ ಡೇ ಅಂತ. ನೀನು ಕೊಟ್ಟೆ ನಸುನಗುತ್ತ ನಾ ಇಸಿದುಕೊಂಡೆ. ಮುಡಿದರೆ ಎಲ್ಲಾದರೂ ಬೀಳಬಹುದು ಅಂತ ಡೈರಿಯ ಪುಟದ ಮಧ್ಯ ಇಟ್ಟುಬಿಟ್ಟೆ ನೋಡು ಅದು ನಾ ಮಾಡಿದ ಮೊದಲ ತಪ್ಪು ಮತ್ತು ಕೊನೆಯದ್ದು ಕೂಡಾ. ಗುಲಾಬಿ ಕೊಡುವಾಗ ನೀನೇನೂ ಹೇಳ್ಲಿಲ್ಲ ನಾನೂ ಕೇಳ್ಲಿಲ್ಲ. ಆದ್ರೆ ಆ ಗುಲಾಬಿಯನ್ನ ಪಡೆಯುವಾಗ ನಾನಿನ್ನೂ ಮೊಗ್ಗು,ಅರಳದಿರುವ ಕುಸುಮ ಬಾಲೆ. ಮೈ ಅರಳಿ ಮನಸೂ ಅರಳಿದ ನಂತರ ಆ ಗುಲಾಬಿಯನ್ನ ನೋಡಿದಾಗಲೆಲ್ಲ ನಿನ್ನ ನೆನಪು. ಈಗ ನಾನು ತೀರಾ ಅದೆಲ್ಲ ವಯಸ್ಸು ಮೀರಿ ನಿಂತ ಮಹಿಳೆ. ನೀನು ನನ್ನ ಜೊತೆಗಾರ. ಹೇಳು ನಿನಗೆ ಏನನ್ನಿಸುತ್ತೆ? ಈಗೀಗ ಮೌನವಾಗ್ತೀಯ,ಸುಮ್ನೆ ಮುಖ ನೋಡ್ಕೊಂಡು ಕೂರ್ತೀಯ. ಕಣ್ಣುಗಳಲ್ಲಿ ಯಾವ ಭಾವವಿದೆ ಅಂತ ಗುರುತಿಸೋಕೆ ಆಗಲ್ಲ. ಆದ್ರೆ ಪ್ರತಿ ನಡೆಯಲ್ಲೂ ನನ್ನೆಡೆಗೆ ನಿನ್ನ ಕಾಳಜಿ ಇದೆ. ನೀ ದೂರ ಇದೀಯ ಆದ್ರೆ ತುಂಬಾ ಸನಿಹದ ಅತೀ ಆಪ್ತ ಜೀವ ನೀನು. ಬದುಕಲ್ಲಿ ನೀ ಸಿಕ್ಕಿರ್ಲಿಲ್ಲ ಅಂತಾಗಿದ್ರೆ ಮತ್ಯಾರದೋ ಕೈ ಹಿಡಿದಿರ್ತಿದ್ದೆ, ಆದ್ರೆ ನೀನೇ ನನ್ನ ಬಾಳ ಪಯಣಕೆ ಜೊತೆಗಾರ ಆಗೋದಂತ ಆ ಬ್ರಹ್ಮ ಬರೆದಿದ್ರೆ ಯಾರೂ ತಪ್ಪಿಸೋಕಾಗಲ್ಲ ಅಲ್ವಾ.
ಫೋಟೋ ಕೃಪೆ : pinterest
ಸಾಕಷ್ಟು ಬೈದಿದ್ದೀನಿ, ಕೋಪ ಮುನಿಸು,ಕಾಲ್ ಮಾಡಿದಾಗ ಮಾತಾಡದೇ ಸತಾಯಿಸಿದ್ದೀನಿ. ಜಗಳಗಳು ತಾರಕಕ್ಕೇರಿದಾಗ ಸಾಯುವ ಮಾತು. ಮತ್ತದೇ ಪ್ರೀತಿ ಸುರಿವ ನಿನ್ನ ಮಾತುಗಳು. ಈಗ ನಿಂಜೊತೆ ಕಾಲ್ ಲಿ ಮಾತಾಡ್ತೀನಿ ಅಂದ್ರೂ ಮಾತಾಡೋಕಾಗಲ್ಲ. ಇದು ನನಗೆ ಶಿಕ್ಷೆ ಅನ್ಕೋತೀನಿ. ಜೀವನ ಪೂರ್ತಿ ಅನುಭವಿಸ್ತೀನಿ. ಕಣ್ಣಿಗೆ ಬೀಳ್ತಿಯಲ್ಲ ಅಷ್ಟೆ ಸಾಕು ಕಣೋ ದೊರೆ.
- ಶಶಿರೇಖಾ ವಿಜಯಪುರ