ಸುರೇಶ್ ಸಿದ್ದಿ ಎನ್ನುವ ಒಬ್ಬ “ಚೋಮ”

ಸುರೇಶ್ ಸಿದ್ದಿ ಮಾತಾನಾಡುವಾಗ ಅವನಲ್ಲಿ ನಾಳೆಯ ಆಸೆಗಳಿಲ್ಲ, ಜೀವನೋತ್ಸಾಹ ಕಂಡು ಇವನ ಹಾಗೇ ಕನಿಷ್ಠ ಸೌಲಭ್ಯಗಳಲ್ಲಿ ನಮಗೆ ಯಾಕೆ ಬದುಕಲು ಸಾಧ್ಯವಾಗುತ್ತಿಲ್ಲ ? ಎನ್ನುವುದು ಸೋಜಿಗ. ಈ ಕಾಡು ಹೂವು, ಚೋಮನ ಕುರಿತು ಪರಿಸರವಾದಿ ಗಿರಿವಾಲ್ಮೀಕಿ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಓದಿ…

ಸುರೇಶ್ ಸಿದ್ದಿಯನ್ನು ನೋಡಿದಾಗಲೆಲ್ಲಾ ನನಗೆ ಕಾರಂತರ “ಚೋಮ” ನೆನಪಾಗುತ್ತಾನೆ.ಇವನು ಸದಾ ನನ್ನ ಅಂತಃಸಾಕ್ಷಿಯನ್ನು ಕೆಣಕುವ ಗುಂಗಿ ಹುಳ. ಮೊದಲ ಬಾರಿಗೆ ಸುರೇಶನನ್ನು ಬೇಡ್ತಿ ಕಾನುವಿನಲ್ಲಿ ನೋಡಿದಾಗ ಆತಂಕ ವಿಷಾದದಿಂದಲೇ ಸಿದ್ದಿ ಸೀಮೆಯೊಳಗೆ ಭೇಟಿಯಾಗಿದ್ದೆ. ಕುತೂಹಲಕ್ಕೆ ಅವನನ್ನು ತಿಳಿಯಲೋಸಗ ಮಾತಿಗೆಳೆದರೆ ವಿನಮ್ರನಾಗಿ ಮಾತಾನಾಡಲು ಹಿಂದೆ ಸರಿಯುತ್ತಿದ್ದ. ಅದೇ ದಿನೇಶ್ ಹೊಳ್ಳರವರು ಅವನನ್ನು ಮಾತಿಗೆಳೆದರೆ ಸಾಕು’
‘ಅರೇ ಇಸ್ಕಿ’…ಅವರ ಜೊತೆ ಮಾತ್ರ ಖುಷಿಯಿಂದ ಕವಳ ಮೆಲ್ಲುತ್ತಾ ಉಭಯ ಕುಶಲೋಪರಿಯಲ್ಲಿ ತೊಡಗುತ್ತಿದ್ದ.

ದಟ್ಟ ಅರಣ್ಯವನ್ನ ಅಂತರಂಗದಲ್ಲೂ ಕಣ್ಣಲ್ಲೂ ತುಂಬಿಕೊಂಡು ನಮ್ಮ ಕನಸುಗಳನ್ನೆ ಭಗ್ನಗೊಳಿಸುವಂತೆ ಗೆಲುವಾಗಿ ಸುರೇಶ್ ಮಾತಾನಾಡುತ್ತಿದ್ದರೆ,ಅವನಲ್ಲಿ ನಾಳೆಯ ಬಗ್ಗೆ ಯಾವ ಆಸೆ, ನಿರೀಕ್ಷೆಗಳಿಲ್ಲದ ಸಹಜವಾದ ಕೃತ್ರಿಮತೆಯಿಲ್ಲದ ಜೀವನೋತ್ಸಾಹ ಕಂಡು ಇವನ ಹಾಗೇ ಇಷ್ಟು ಸಹಜವಾಗಿ ಕನಿಷ್ಠ ಸೌಲಭ್ಯಗಳಲ್ಲಿ ನಮಗೆ ಬದುಕಲು ಯಾಕೆ ಸಾಧ್ಯವಿಲ್ಲ.? ಎಂದೆನಿಸಿ ಸೋಜಿಗವೆನಿಸುತ್ತಿತ್ತು.!

ಸುರೇಶನನ್ನು ಕಂಡ ದಿನದಿಂದಲೂ ಆತ್ಮಗೌರವವಿರುವ ಯಾವ ಕೆಲಸ ಮಾಡಿದರೂ ತಪ್ಪಿಲ್ಲ ಎಂದೆನಿಸಲೂ ಶುರುವಾಗಿದೆ, ಉನ್ನತ ಹುದ್ದೆಯ ಆಸೆ ತಾತ್ಕಾಲಿಕವಷ್ಟೇ, ದೇಶ-ವಿದೇಶಗಳ ಕನಸು ಕರಗಿ ಕಾಡಲ್ಲೇ ಜೀವಮಾನವೀಡಿ ಬದುಕು ಸವೆಸಿಬಿಡಬೇಕೆಂದಿನಿಸಿದೆ. ಎಲ್ಲಕ್ಕಿಂತ ಜೀವನ ಪ್ರೀತಿ ದೊಡ್ಡದು ಎಂದೂ ಬತ್ತದ ಜೀವನೋತ್ಸಾಹವೇ ಚಲನಾಶೀಲಾ ಶಕ್ತಿಯ ಬದುಕಿನ ಇಂಧನ. ಎಲ್ಲವೂ ಈ ಕ್ಷಣಿಕ ಬದುಕಿನ ಕೊನೆಯ ನಿಲ್ದಾಣ ಬರುವವರೆಗೂ ಬದುಕು ಬಂದಂತೆ ಸ್ವೀಕರಿಸಬೇಕೆಂದು ಇವನನ್ನು ನೋಡಿದ ಮೇಲೆ ತೀವ್ರವಾಗಿ ಅನ್ನಿಸಿದ್ದಂತೂ ಸತ್ಯ.

ವಿವೇಕವುಳ್ಳವರಾದ ನಾವು ನಮ್ಮ ಶೋಕಿಯ Life style ಗಳ ಬಗ್ಗೆ ಬೇರೊಬ್ಬರನ್ನು ಅನುಕರಣೆ ಮಾಡುವ ಹುಕಿಗೆ ಬಿದ್ದು ಇನ್ನೊಬ್ಬರನ್ನು ಅನುಕರಿಸುವ ಅಂಧ ಗ್ರಹಿಕೆಗೆ ಒಳಗಾಗುತ್ತೇವೆ. ನಾವುಗಳು ಸಹಜವಾಗಿ ಜೀವಿಸದೇ ನಮ್ಮ ಪ್ರಧಾನವಾದ ಬದುಕನ್ನು ಜಾತಿ-ಧರ್ಮವೆಂಬ ಅಪಸವ್ಯಗಳ ಚೌಕಟ್ಟಿಗೆ ಹಾಕಿ ಪೈಪೋಟಿಗೆ ಬಿದ್ದು ರಾಡಿ ಮಾಡಿಕೊಳ್ಳುತ್ತೇವೆ. ಆದರೆ ಸುರೇಶನೆಂಬ ಚೋಮನ ಬದುಕಿನ ಮುಂದೆ ನಾವು ನಂಬಿಕೊಂಡ ಬದುಕಿನೆಲ್ಲಾ ಆದರ್ಶ,ನಂಬುಗೆ,ಸತ್ಯ,ಧರ್ಮಗಳೆಲ್ಲವೂ ಬೇಡ್ತಿಯ ದಿಂಬಗಾಡುವಿನಲ್ಲಿ ಎಷ್ಟು ಕ್ಷುಲ್ಲಕ ಎಂದೆನಿಸಿಬಿಡುತ್ತಿತ್ತು.

ಬದುಕಿನಲ್ಲಿ ಬೆಳಕಿಗೆ ಬಾರದ ಆಸೆಗಳನ್ನು ಈಡೇರಿಸಿಕೊಳ್ಳದ ನಮ್ಮೆಲ್ಲೆರೊಳಗೊಬ್ಬ ಚೋಮನಿದ್ದಾನೆ.ಬದುಕಿನಲ್ಲಿ ಕಂಡ ಆಸೆ-ಕನಸುಗಳೆಲ್ಲವೂ ಈಡೇರುವ ಮುಂಚಿತವಾಗಿಯೇ ಎಲ್ಲಿ ಚೋಮನಂತಾಗಿ ಬಿಡುವೆನೋ ಎಂದು ನನ್ನೊಳಗಿನ ಅನವರತ ಪ್ರಜ್ಞೆ ಸುರೇಶ ಸಿದ್ದಿಯ ಮೂಲಕ ಸದಾ ನನ್ನನ್ನು ತಿವಿಯುತ್ತಿರುತ್ತದೆ.

ಪ್ರಕೃತಿಯ ನಡುವೆ ಏಕಾಂಗಿಯಾಗಿ ಬದುಕುವ ಸುರೇಶಾ ನನಗಿಂತ ವಯಸ್ಸಿನಲ್ಲಿ,ಬದುಕಿನ ಅನುಭವದಲ್ಲಿ ದೊಡ್ಡವ. ಮನರಂಜನೆಗಾಗಿ ಯಕ್ಷಗಾನವನ್ನು ನೋಡುತ್ತೇನೆ ಎನ್ನುತ್ತಾನೆ. ಪ್ರಾಪಂಚಿಕ ಸುಖದ ಯಾವ ಭಾವವಿಕಾರಗಳಿಲ್ಲದ ಅಪ್ಪಟ ಮನುಷ್ಯ. ಬದುಕಿನಲ್ಲಿ ನಾಳೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೇ ದುಡಿಮೆಯನ್ನು ಕೂಡಿಡದೇ ಧರ್ಮದೈವಗಳ ಗೊಡವೆಯಿಲ್ಲದೇ ನಿರುಮ್ಮಳವಾಗಿ ಜೀವನ ನಡೆಸುತ್ತಿದ್ದಾನೆ.ಇಂಥ ಚೋಮನಂಥವನ ಸಂತನ ಮುಂದೆ ಜಗತ್ತಿನ ಎಲ್ಲಾ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ಗಳು,ಪುಸ್ತಕಗಳು ಆಧ್ಯಾತ್ಮಿಕ ಪ್ರವಚನಗಳು ಮಕಾಡೆ ಮಲಗಿ ಬಿಡುತ್ತವೆ.


  • ಗಿರಿವಾಲ್ಮೀಕಿ – ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರವಾದಿ. 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW