ಕೃಷಿ ಸೇವೆಯನ್ನು ದೇಶಸೇವೆ ಎಂದು ಕಾಯಕ ಮಾಡುವ ರೈತನ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಬರೆದಿರುವ ಕವಿತೆ ಓದುಗರ ಮುಂದೆ, ತಪ್ಪದೆ ಓದಿ…
ಒಳ್ಳೆ ಮನಗಳು ಹಳ್ಳಿ ಜನಗಳು
ನೇಸರನೊಟ್ಟಿಗೆ ಏಳುವರು
ಬೆಳ್ಳಿ ಬೆಳಕಲು ಎಳ್ಳು ಬೆಳೆವರು
ಚಂದಿರನಿದ್ದರು ದುಡಿಯುವರು
ಹೊತ್ತಿಗೇಳುತ ಹಿಟ್ಟಬೇಸುತ
ಮನೆಯಲಿ ಒಡತಿಯು ದುಡಿಯುವಳು
ಬುತ್ತಿ ಕಟ್ಟುತ ಹೊತ್ತು ನಡೆಯುತ
ಹೊಲದಲಿ ಹಾಡುತ ಸಾಗುವಳು
ಉತ್ತಿ ಊಳುತ ಬಿತ್ತಿ ಬೆಳೆಯಲು
ಕೃಷಿಯನು ಮಾಡುತ ಸಾಗುವರು
ನೆತ್ತಿ ಸೂರ್ಯನು ಹೊತ್ತಿ ಉರಿಯಲು
ಎತ್ತಿನ ನೊಗವನು ತೆಗೆಯುವರು
ಬಿರಿದ ಭೂಮಿಗೆ ಹಸಿರನರಿಸಲು
ಮಳೆಯಾ ಧ್ಯಾನವ ಮಾಡುವರು
ವರುಣ ದೇವನು ಕರುಣೆ ತೋರಲು
ಕುಣಿಯುತ ಕೃಷಿಕರು ಬಿತ್ತುವರು
ಉಳುಮೆ ಬೀಜವ ಒಲುಮೆಯಿಂದಲಿ
ನಮಿಸೀ ಪೂಜಿಸೀ ತೆಗೆಯುವರು
ಉಳುವ ಹೊಲದಲಿ ಉಣಿಸಿ ಹದದಲಿ
ಮೊಳಕೆಯು ಮೂಡಲು ನಲಿಯುವರು
ಸಣ್ಣ ಸೋನೆಯು ಮಣ್ಣಲಿಳಿದರು
ಕುಡಿಯೂ ಒಡೆಯುತ ಬೀಜಗಳು
ಮಣ್ಣಿನೊಳಗಡೆ ಕಣ್ಣು ಆಗಲು
ದುಡಿಯುವ ಯೋಗಿಗೆ ಪದಕಗಳು
ಬೆನ್ನೆಲುಬಿವನು ಅನ್ನದಾತನು
ಹಸಿವನು ನೀಗುವ ನಾಯಕನು
ಕೃಷಿಯ ಸೇವೆಯೆ ದೇಶಸೇವೆಯು
ಕಾಯಕ ಮಾಡುವ ಸೇವಕನು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು