ಅನೇಕರು ಎಂ ಆರ್ ಕಮಲಾ ಅವರಿಗೆ ತಮ್ಮ ಹೊಸ ಪುಸ್ತಕಕ್ಕೆ`ಹೊಂಬಳ್ಳಿ’ ಎಂದು ಹೆಸರಿಟ್ಟಿದ್ದಾರೆ, `ಹೊಂಬಳ್ಳಿ’ ಎಂದರೆ ಯಾವುದು,ಯಾಕೆ ಆ ಹೆಸರಿಟ್ಟರು ಎನ್ನುವುದಕ್ಕೆ ವಿಶೇಷವಾದ ಹಿನ್ನೆಲೆ ಇದೆ ಎಂದು ಸ್ವತಃ ಎಂ ಆರ್ ಕಮಲಾ ಅವರೇ ಹೇಳಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಹೊಂಬಳ್ಳಿ ಹಗುರ ಪ್ರಬಂಧಗಳು
ಲೇಖಕಿ : ಎಂ ಆರ್ ಕಮಲಾ
ಬೆಲೆ : 150.00
ಪ್ರಕಾಶನ : ಅಮೂಲ್ಯ ಪುಸ್ತಕ
ಪ್ರಕಾರ : ಹಗುರ ಪ್ರಬಂಧಗಳು
ಖರೀದಿಗಾಗಿ : 9448676770
ನಮ್ಮೂರಿನಲ್ಲಿ ಮುಂಗಾರು ಆರಂಭಕ್ಕೆ ಮುನ್ನ `ಕಾರಹಬ್ಬ’ ಆಚರಿಸುತ್ತಾರೆ. ಆ ದಿನ ದುಡಿಯುವ ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿ. ಎತ್ತುಗಳ ಮೈ ತೊಳೆದು ಚಂದವಾಗಿ ಅಲಂಕರಿಸಿ ಪೂಜೆ ಮಾಡುತ್ತಾರೆ.
ಮುಸ್ಸಂಜೆ ಎಲ್ಲರು ಗುಡಿಯ ಬಳಿಗೆ ತೆರಳಿ ಗ್ರಾಮದ ಕುಳವಾಡಿ ತಯಾರಿಸಿಕೊಂಡು ಬಂದ ಹಗ್ಗವನ್ನು ಮತ್ತು ಮಡಕೆಯಲ್ಲಿ ಬೆಳೆಯುವ ಧಾನ್ಯಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಈ ಹಗ್ಗವನ್ನು ಹೊಂಬಳ್ಳಿಯಿಂದ ತಯಾರಿಸುತ್ತಾರೆ. ಬಹಳ ಗಟ್ಟಿಯಾಗಿರುತ್ತದೆ. (ಇದನ್ನು ಕೆಲವರು ಹಂಬಳ್ಳಿ ಎನ್ನುತ್ತಾರೆ.) ಇದಕ್ಕೆ ಬೇಟೆ ಸೊಪ್ಪು, ಬೇವಿನ ಸೊಪ್ಪನ್ನು ಸೇರಿಸಿ ಹೊಸೆಯುತ್ತಾರೆ ಎಂದು ಕೇಳಿದ್ದೇನೆ. ಪೂಜೆಯ ನಂತರ ಮೊದಲು ಧಾನ್ಯ ತುಂಬಿದ ಮಡಕೆಯನ್ನು ಉರುಳಿ ಬಿಡುತ್ತಾರೆ. ಯಾವ ಧಾನ್ಯ ಮುಂದೆ ಹೋಗುತ್ತದೋ ಅದು ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆಯಿರುವುದರಿಂದ ಅದನ್ನೇ ಹೊಲದಲ್ಲಿ ಬಿತ್ತಿ ಬೆಳೆಯುತ್ತಾರೆ.

ನಂತರ ಹೊಂಬಳ್ಳಿಯ ಹಗ್ಗವನ್ನು ಎರಡು ಕಡೆಯಿಂದ ಒಂದಿಷ್ಟು ಜನರು ಎಳೆಯ ತೊಡಗುತ್ತಾರೆ. ಅದು ಹರಿದ ಕೂಡಲೇ ಸಿಕ್ಕಷ್ಟು ಬಳ್ಳಿಯನ್ನು ಎತ್ತಿಕೊಂಡು ಮನೆಗೆ ಓಡುತ್ತಾರೆ. ಯಾರು ಮೊದಲು ಮನೆ ತಲುಪುತ್ತಾರೋ ಅವರು ಹೆಚ್ಚು ಬೆಳೆಯನ್ನು ಬೆಳೆಯುತ್ತಾರೆ ಎನ್ನುವ ನಂಬಿಕೆಯಿದೆ. ನಾವು ಚಿಕ್ಕವರಿದ್ದಾಗ ಹೀಗೆ ಹೊಂಬಳ್ಳಿಯನ್ನು ಕಿತ್ತುಕೊಂಡು ಮನೆಗೆ ಓಡುತ್ತಿದ್ದುದನ್ನು, ಈ ಆಚರಣೆಯನ್ನು ನನ್ನ ತಮ್ಮ ನನಗೆ ಊರಿಗೆ ಹೋಗಿದ್ದಾಗ ನೆನಪಿಸಿದ.
ಇದಾದ ಮೇಲೆ ಊರಿನ ಹಿರಿಯ ಅಥವಾ ಆ ಊರಿನ ಸೃಷ್ಟಿಗೆ ಕಾರಣವಾದ ವ್ಯಕ್ತಿ ತಲೆಯನ್ನು ಬೋಳಿಸಿಕೊಳ್ಳುತ್ತಾನೆ. `ನೀನೇನು ಊರಿಗಾಗಿ ತಲೆ ಬೋಳಿಸಿಕೊಂಡಿದ್ದೀಯ’ ಎನ್ನುವ ಮಾತನ್ನು ನೀವೆಲ್ಲ ಕೇಳಿರಬಹುದು! ನಮ್ಮೂರಿನಲ್ಲಿ `ಕೊನೆ ಮನೆ ರಾಮಣ್ಣ ‘ ಅವರ ಮನೆಯವರಲ್ಲೊಬ್ಬರು ಹೀಗೆ ತಲೆ ಬೋಳಿಸಿಕೊಳ್ಳುತ್ತಿದ್ದರು.
ನನ್ನ ಗಂಡನ ಊರಿನಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಮರಕ್ಕೆ ಬಳ್ಳಿಯನ್ನು ಎರಡು ಕಡೆ ಕಟ್ಟಿ ನಡುವೆ ಕುಳಿತುಕೊಳ್ಳಲು ಏಣಿ ಕಟ್ಟಿ ಜೋಕಾಲೆಯಾಡುತ್ತಾರಂತೆ.
ಇಷ್ಟಾದರೂ `ಹೊಂಬಳ್ಳಿಯ’ ಬಗ್ಗೆ ಎಲ್ಲವು ಹೇಳಿದಂತಾಗಲಿಲ್ಲ. ಈ ಗಟ್ಟಿ ಬಳ್ಳಿಯನ್ನು ತೋಟದಲ್ಲಿ ಹೊರೆ ಕಟ್ಟಲು ಉಪಯೋಗಿಸುತ್ತಾರೆ. ಹೆಡೆಮಟ್ಟೆ, ಕುರುಂಬಾಳೆ, ಸೀಬಿ, ಸೋಗೆ ಇತ್ಯಾದಿಗಳನ್ನು ಹೊರೆ ಕಟ್ಟುವುದಕ್ಕೆ ಈ ಬಳ್ಳಿಯೇ ಸರಿ! ತೋಟದಲ್ಲಿ ಎಲ್ಲೆಂದರಲ್ಲಿ ಈ ಬಳ್ಳಿ ಹಬ್ಬಿರುತ್ತದೆ. ನನ್ನ ಪುಸ್ತಕಕ್ಕೆ ಈ ಹೆಸರಿಡಲು ಮುಖ್ಯ ಕಾರಣ ಅಲ್ಲಿರುವ ವೈವಿಧ್ಯಮಯ ವಿಷಯಗಳನ್ನು ಒಂದು ಹೊಂಬಳ್ಳಿಯಲ್ಲಿ ಕಟ್ಟಿದ್ದೇನೆ. ಬಿಚ್ಚಿ ಓದಬೇಕಾದವರು ನೀವು.
- ಎಂ ಆರ್ ಕಮಲಾ
