‘ಹನಿ ಟ್ರ್ಯಾಪ್’ – ಕೆ. ಸತ್ಯನಾರಾಯಣರಾಮ್‌ಸಿಂಗ್‌ ಮತ್ತು ಅವರ ಧರ್ಮಪತ್ನಿ ಕ್ಯಾಥರೀನ್‌ ರವರನ್ನು ನಾನು ಈಚೆಗೆ ಪ್ರತಿವರ್ಷ ಅಮೆರಿಕಕ್ಕೆ ಹೋದಾಗಲೆಲ್ಲ ದೂರದಿಂದ ನೋಡುತ್ತಿದ್ದೆ.ನನ್ನ ಮಗ ವಾಸವಾಗಿದ್ದ ಪಕ್ಕದ ಬ್ಲಾಕ್‌ನಲ್ಲಿ ಅವರು ವಾಸವಾಗಿದ್ದರು. ಈ ದಂಪತಿಗಳ ವಾಕಿಂಗ್‌ , ಜೂಟಾಟ, ಜಾಗಿಂಗ್‌ , ಕಣ್ಣು ಮುಚ್ಚಾಲೆ ಎಲ್ಲವನ್ನು ನಾನು, ನನ್ನಂಥವರು ಅವರನ್ನು ನೋಡುತ್ತಾ ನಿಲ್ಲುತ್ತಿದ್ದೆವು. ಮುಂದೇನಾಯಿತು ತಪ್ಪದೆ ಓದಿ ಲೇಖಕ ಕೆ. ಸತ್ಯನಾರಾಯಣ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕಲ್ಪನಾ ಕತೆ…

ರಾಮ್‌ಸಿಂಗ್‌ ಮತ್ತು ಅವರ ಧರ್ಮಪತ್ನಿ ಕ್ಯಾಥರೀನ್‌ ರವರನ್ನು ನಾನು ಈಚೆಗೆ ಪ್ರತಿವರ್ಷ ಅಮೆರಿಕಕ್ಕೆ ಹೋದಾಗಲೆಲ್ಲ ದೂರದಿಂದ ನೋಡುತ್ತಿದ್ದೆ. ವರ್ಷ ವರ್ಷವೂ ಈ ದಂಪತಿಗಳ ಬಗ್ಗೆ ಹೆಚ್ಚು ಹೆಚ್ಚು ಸಂಗತಿಗಳು ತಿಳಿದು ಬರುತ್ತಿದ್ದವು. ಗೌರವ, ಆದರ ಹೆಚ್ಚಾಗುತ್ತಿತ್ತು. ನನ್ನ ಲೋಕಜ್ಞಾನ ಮತ್ತು ಭಾವ ಶ್ರೀಮಂತಿಕೆ ಕೂಡ ವಿಸ್ತಾರಗೊಳ್ಳುತ್ತಿತ್ತು ಹಾಗೂ ನೈತಿಕವಾಗಿ ಶ್ರೀಮಂತವಾಗುತ್ತಿತ್ತು. ಇಷ್ಟಾಗಿ ಅವರನ್ನು ಭೇಟಿ ಮಾಡುತ್ತಿದ್ದೆ ಎಂದು ಅರ್ಥವಲ್ಲ. ನನ್ನ ಮಗ ವಾಸವಾಗಿದ್ದ ಪಕ್ಕದ ಬ್ಲಾಕ್‌ನಲ್ಲಿ ಅವರು ವಾಸವಾಗಿದ್ದರು. ನನ್ನ ಮಗನದು ಮೂರೂವರೆ ಕೋಣೆಗಳ ಬ್ಲಾಕ್‌ ಆದರೆ, ಸಿಂಗ್‌ರ ಬ್ಲಾಕ್‌ನಲ್ಲಿ ಇದ್ದುದೆಲ್ಲಾ ವಿಲ್ಲಾಗಳು. ಹೊರಗಿನವರಿಗೆ ಪ್ರವೇಶವಿಲ್ಲ. ಸೆಕ್ಯೂರಿಟಿ ವ್ಯವಸ್ಥೆ ತುಂಬಾ ಇತ್ತು. ಆದರೆ ಗೇಟುಗಳಿರಲಿಲ್ಲ. ವಿಲ್ಲಾಗಳು ಇದ್ದ ಸುತ್ತ ಎತ್ತರದ ಮರಗಳು ಒತ್ತೊತ್ತಾಗಿ ಬೆಳೆದಿದ್ದವು. ಆ ಬೃಹತ್‌ ಮರಗಳೇ ಭದ್ರತೆಯನ್ನು ಒದಗಿಸುವುದರ ಜೊತೆಗೆ ನೋಡುವವರಿಗೆಲ್ಲ ಒಂದು ರೀತಿಯ ನಿಗೂಢತೆ ಮತ್ತು ಅಚ್ಚರಿಯ ಭಾವನೆಯನ್ನು ಕೂಡ ಮೂಡಿಸುತ್ತಿದ್ದವು. ಎರಡು ಬ್ಲಾಕ್‌ಗಳ ನಡುವೆ ವಿಶಾಲವಾದ ಪಾರ್ಕ್‌. ಪಾರ್ಕ್‌ನ ಆ ಬದಿಯಲ್ಲಿ ಕಾಲುವೆ. ಕಾಲುವೆಯಿಂದ ಆಚೆಗೆ ಕಾಡು. ಬಾತುಕೋಳಿ, ಜಿಂಕೆ, ಮೊಲ, ನವಿಲು ಎಲ್ಲೆಂದರಲ್ಲಿ. ಈ ಪಾರ್ಕಿಗೆ ಸಿಂಗ್‌ ದಂಪತಿಗಳು ವಾಕಿಂಗ್‌ ಗೆ, ಜೂಟಾಟಕ್ಕೆ, ಜಾಗಿಂಗ್‌ ಗೆ, ಕಣ್ಣು ಮುಚ್ಚಾಲೆ ಆಟ ಆಡುವುದಕ್ಕೆ ಬಂದೇ ಬರುತ್ತಿದ್ದರು. ನಾನು, ನನ್ನಂಥವರು ಅವರನ್ನು ನೋಡುತ್ತಾ ನಿಲ್ಲುತ್ತಿದ್ದೆವು. ಯಾರಾದರೂ ದಂಪತಿಗಳನ್ನು ಒಂದು ನಾಲ್ಕು ದಿನ ಹೆಚ್ಚು ಗಮನಿಸಿದರೆ, ಅವರಿಬ್ಬರ ಸಂಬಂಧದ ಸ್ವರೂಪ ಅವರು ಹೇಳದೆಯೇ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಓ, ಇವರೂ ನಮ್ಮಂತೆಯೇ ಅನಿಸುತ್ತದೆ. ಆಣೆ ಮಾಡಿ ಹೇಳುತ್ತೇನೆ, ಸಿಂಗ್‌ ದಂಪತಿಗಳ ಬಗ್ಗೆ ನನಗೆ ಈವರೆಗೆ ಒಂದೇ ಒಂದು ಸಲ ಕೂಡ ಅಂಥ ಭಾವನೆ ಬಂದಿಲ್ಲ.

ಸಿಂಗ್‌ ಎತ್ತರದ ಆಳು. ಯಾವಾಗಲೂ ನಗುವ ಕಣ್ಣುಗಳು. ಯಾರೊಬ್ಬರನ್ನೂ ಅವರು ಹೆಚ್ಚು ಹೊತ್ತು ದೃಷ್ಟಿಸಿ ನೋಡುತ್ತಿರಲಿಲ್ಲ. ಆದರೆ ನಮಗೇ ಅವರನ್ನು ಇನ್ನೂ ಇನ್ನೂ ನೋಡಬೇಕೆನಿಸುತ್ತಿತ್ತು. ಹಾಗೆ ನೋಡುತ್ತಲೇ ಇದ್ದಾಗಲೂ ಅವರ ಮುಖದಲ್ಲಿ ಯಾವ ರೀತಿಯ ಪ್ರತಿರೋಧದ ಭಾವನೆಯೂ ಕಂಡುಬರುತ್ತಿರಲಿಲ್ಲ. ಕಳಕಳೆಯಾದ ಮುಖ, ವಿಶಾಲವಾದ ಭುಜ, ಹಣೆ, ಕೆನ್ನೆ, ಮೂಗು ಎಲ್ಲವೂ ಒಂದಕ್ಕೊಂದು ಅನುರೂಪ ಎನಿಸಿದರೂ ಮೂಗಿನ ಆಕಾರ ಮುಂಭಾಗದಲ್ಲಿ ಸ್ವಲ್ಪ ಮುಂದೆ ಬಂದಿದೆ ಅನಿಸುವುದು. ಎರಡು ಕಿವಿಯ ಮೇಲೂ ಪೊದೆ ಕೂದಲು. ಮಧ್ಯಕ್ಕೆ ಬೈತಲೆ ತೆಗೆದಿದ್ದರು. ಕಪ್ಪು-ಬಿಳಿ ಮಿಶ್ರಿತ ಕೂದಲು. ಎರಡು ಬಣ್ಣದ ಪ್ರಮಾಣವೂ ಸಮನಾಗಿತ್ತು, ಸಹಜವಾಗಿತ್ತು. ಕೂದಲಿಗೆ ಬಣ್ಣ ಹಚ್ಚುತ್ತಿರಲಿಲ್ಲ ಎನ್ನುವುದು ತಿಳಿಯುತ್ತಿತ್ತು. ಆದರೂ ಕೂದಲು ಮಿರ ಮಿರನೆ ಮಿಂಚುತ್ತಿತ್ತು. ಎಳೆ ಬಿಸಿಲು ವ್ಯಾಪಕವಾಗಿದ್ದಾಗ ಕೂದಲು ಮಿರ ಮಿರನೆ ಮಿಂಚುವುದನ್ನು ನೋಡುವುದೇ ಒಂದು ಸೊಗಸು. ವಾಕಿಂಗ್‌, ಜಾಗಿಂಗ್‌ಗೆ ಬಂದಾಗ ಒಂದೇ ಒಂದು ದಿನ ಕೂಡ ಹಿಂದಿನ ದಿನ ಹಾಕಿಕೊಂಡಿದ್ದ ಬಣ್ಣ ಪ್ಯಾಂಟ್‌, ಟೀ ಷರ್ಟ್‌, ಬೂಟುಗಳನ್ನು ಹಾಕಿಕೊಂಡು ಬರುತ್ತಿರಲಿಲ್ಲ. ಅವರು ಹೆಜ್ಜೆ ಹಾಕುತ್ತಿದ್ದ ದಾಪುಗಾಲಿನ ವೇಗಕ್ಕೂ, ಎರಡೂ ಕೈಗಳನ್ನು ಜೋರಾಗಿ ಬೀಸುವ ರೀತಿಗೂ ಸಂಪೂರ್ಣವಾಗಿ ತಾಳೆಯಾಗುತ್ತಿತ್ತು.

ಫೋಟೋ ಕೃಪೆ : travelandleisure

ಕ್ಯಾಥರೀನ್‌ ಪಕ್ಕದಲ್ಲೇ ಇರುವರು. ಏನೋ ಮಾತು, ಯಾವುದೋ ಸರಸ, ಕುಲಕುಲ ನಗು. ಒಂದೊಂದು ಸಲ ಪರಸ್ಪರ ಬೆನ್ನಿನ ಮೇಲೆ ಮೃದುವಾಗಿ ಗುದ್ದುವರು. ಗುದ್ದಿದ ನಂತರ ಜೋರಾಗಿ ಚಪ್ಪಾಳೆ ತಟ್ಟಿ ಗಹಗಹಿಸಿ ನಗುವರು. ಇನ್ನೊಮ್ಮೆ ಇಬ್ಬರೂ ತಟಕ್ಕನೆ ನಿಂತು ಬಿಡುವರು. ಏನೋ ಸಣ್ಣ ಜಗಳ. ಸಲಿಗೆಯಿಂದ ಕೆಣಕಿದಂತೆ ಕಾಣುವುದು. ನಂತರ ಒಬ್ಬರ ಹಿಂದೆ ಒಬ್ಬರು ಓಡುವರು. ಮರಗಳ ಹಿಂದೆ ಬಚ್ಚಿಟ್ಟುಕೊಳ್ಳುವರು. ಒಂದು ದಿನವಂತೂ ಸುಮಾರು ಒಂದೊಂದೂವರೆ ಫರ್ಲಾಂಗ್‌ ಒಬ್ಬರನ್ನೊಬ್ಬರು ಹಿಂಬಾಲಿಸಿ, ಹುಡುಕಾಡುತ್ತಲೇ ಇದ್ದರು. ಮತ್ತೆ ಇಬ್ಬರೂ ಸಮೀಪ ಬಂದಾಗ ಸಾರ್ವಜನಿಕ ಉದ್ಯಾನವನ ಅನ್ನುವುದನ್ನು ಮರೆತು ತಬ್ಬಿಕೊಂಡರು. ರಾಮ್‌ಸಿಂಗ್‌ ಕ್ಯಾಥರೀನ್‌ ಹಣೆ, ಮುಖದ ಮೇಲಿದ್ದ ಕೂದಲನ್ನೆಲ್ಲ ಹಿಂದಕ್ಕೆ ಸವರಿದರು. ಕ್ಯಾಥರೀನ್‌ ಸಿಂಗ್‌ರ ಕೈ ಗಡಿಯಾರ ಬಿಚ್ಚಿ, ಕೈನ ಆ ಭಾಗದಲ್ಲಿದ್ದ ಬೆವರನ್ನೆಲ್ಲ ತಮ್ಮ ಟೀ ಷರ್ಟ್‌ನಿಂದ ಒರೆಸಿದರು. ಮತ್ತೆ ಕೈ ಗಡಿಯಾರ ಕಟ್ಟಿದರು. ನಂತರ ಪರಸ್ಪರ ಕೈ ಹಿಡಿದು ನಿಧಾನವಾಗಿ ವಿಲ್ಲಾ ಕಡೆಗೆ ನಡೆದುಕೊಂಡು ಹೋದರು. ದೂರದಲ್ಲೆಲ್ಲೋ ಸೂರ್ಯಾಸ್ತ. ಸೂರ್ಯ ಕೂಡ ಇದನ್ನೆಲ್ಲ ನೋಡುತ್ತಾ ಒಂದು ಕ್ಷಣ ಮೈ ಮರೆತು ಆವತ್ತು ಸೂರ್ಯಾಸ್ತ ಸಕಾರಣವಾಗಿ ಕೊಂಚ ತಡವಾಯಿತು. ಈ ಕತೆ ಓದುತ್ತಿರುವ ಯಾರೇ ಆದರೂ ಅದೊಂದು, ಅಂತಹದೊಂದು ದೃಶ್ಯವನ್ನು ನೋಡಲಿಕ್ಕಾದರೂ ಅಮೆರಿಕಕ್ಕೆ ಹೋಗಬೇಕೆಂದು ನಾನು ಕೋರುತ್ತೇನೆ.

ಫೋಟೋ ಕೃಪೆ : google

 

ರಾಮ್‌ಸಿಂಗ್‌ ನನ್ನ ಮಗನ ಬ್ಲಾಕಿನಲ್ಲಿದ್ದ ಭಾರತೀಯರಿಗೆಲ್ಲ ಪರಿಚಿತರೇನಲ್ಲ. ಒಬ್ಬ ಪ್ರಸಿದ್ಧ ಭಾರತೀಯ ಎಲ್ಲ ಭಾರತೀಯರಿಗೂ ಸಾರ್ವಜನಿಕವಾಗಿ ಗೊತ್ತಿರುವ ಹಾಗೆ ಇವರೂ ಗೊತ್ತು ಅಷ್ಟೆ. ಭಾರತ ಸರ್ಕಾರದ ಬೇಹುಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಉನ್ನತ ಹುದ್ದೆಯಲ್ಲಿದ್ದರು. ಬಹು ಮುಖ್ಯ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿದ್ದರು. ದಕ್ಷರು, ದೇಶ ಪ್ರೇಮಿಗಳು, ಪ್ರಾಮಾಣಿಕರು. ಕೊನೇ ಪಕ್ಷ ಇಬ್ಬರು ಪ್ರಧಾನಿಗಳಿಗೆ ಆಪ್ತರಾಗಿದ್ದವರು. ಇದ್ದಕ್ಕಿದ್ದಂತೆ ಅವರ ಮೇಲೆ ಅಪಾದನೆಯ ಪ್ರವಾಹ. ಮಾಧ್ಯಮದ ತುಂಬಾ ಅದರದೇ ಪ್ರಚಾರ, ಚರ್ಚೆ. ಸಂಸತ್ತಿನಲ್ಲೂ ನಕ್ಷತ್ರಮಯ ಪ್ರಶ್ನೆ ಕೇಳಲ್ಪಟ್ಟಿತು. ದೇಶದ ಭದ್ರತೆಯ ಹಿತದೃಷ್ಟಿಯಿಂದ ಚರ್ಚೆಯಾಗಬಾರದೆಂದು ಎಲ್ಲರೂ ಒಪ್ಪಿದ್ದರಿಂದ ಚರ್ಚೆಯನ್ನು ಕೈ ಬಿಡಲಾಯಿತು. ರಾಮಸಿಂಗ್‌ರ ರಾಜಮನೆತನದ ಹಿನ್ನೆಲೆ ಬಲ್ಲ ಯಾರೂ ಕೂಡ ಅವರ ಮೇಲೆ ಹಣಕಾಸಿನ ಭ್ರಷ್ಟಾಚಾರದ ಆಪಾದನೆ ಮಾಡುವ ಹಾಗೇ ಇಲ್ಲ. ಈ ಮನುಷ್ಯನಿಗೆ ಏನಾಯಿತು? ಈ ವಯಸ್ಸಿನಲ್ಲಿ ಹೆಣ್ಣಿನ ವ್ಯಾಮೋಹವೇ? ಒಂದು ಹೆಣ್ಣಿನ ದೇಹ ಕೆಲವು ದಿನ ಮಾತ್ರ ನೀಡಬಹುದಾದ ಸುಖ-ಸಂಭ್ರಮಕ್ಕಾಗಿ ಮಾತೃಭೂಮಿಯ ಗುಟ್ಟುಗಳನ್ನು, ಹಿತಾಸಕ್ತಿಗಳನ್ನು ಮಾರುವಷ್ಟು ನೀಚತನವೇ? ಇಲ್ಲ, ಇಲ್ಲ, ಏನೂ ಇಲ್ಲ. ಬೇಹುಗಾರಿಕೆ ಇಲಾಖೆಯಲ್ಲಿ, ವಿದೇಶಾಂಗ ಸೇವಾ ಕ್ಷೇತ್ರದಲ್ಲಿ ಯಾರೋ ಆಗದವರು ವೃತ್ತಿ ಮಾತ್ಸರ್ಯದಿಂದ ಬಳಲುವವರು ಏನೋ ಕಿತಾಪತಿ ಮಾಡಿದ್ದಾರೆ ಎಂದು ಕೂಡ ಕೇಳಿಬಂತು. ಆದರೆ ವಿವಾದದ ಸಮಯದಲ್ಲಿ ಮಾಧ್ಯಮದಲ್ಲಿ ನಿರಂತರವಾಗಿ ಕಾಣಬರುತ್ತಿದ್ದ ಕ್ಯಾಥರೀನ್‌ ಫೋಟೋ ನೋಡಿದವರಿಗೆಲ್ಲ, ಇಲ್ಲ, ಇಲ್ಲ, ಈಕೆ ತುಂಬಾ ಸುಂದರಿ. ಅದರಿಂದ ರಾಮ್‌ಸಿಂಗ್‌ ಮರುಳಾಗಿರಬೇಕು ಎಂದೂ ಕೂಡ ಅನಿಸುವುದು. ಉದ್ದನೆಯ ಕತ್ತು, ತೆರೆದ ಎದೆ, ಟೀ ಷರ್ಟ್‌ ಮೇಲಿನ ಗುಂಡಿ ಎಲ್ಲ ಫೋಟದಲ್ಲೂ ತೆಗೆದೇ ಇತ್ತು. ಎಲ್ಲ ಚಿತ್ರಗಳಲ್ಲೂ ಕಂಡ ಟೀ ಷರ್ಟ್‌ ಕೂಡ ಪಟ್ಟೆ ವಿನ್ಯಾಸದ್ದೇ. ಆಹ್ವಾನಿಸುವಂತಹ ಮಾದಕ ನಗು.

ಒಂದು ಫೋಟೋದಿಂದ ಇನ್ನೊಂದು ಫೋಟೋಗೆ ಮಾದಕ ನಗು ನೋಡಿದಷ್ಟು ನೋಡಿದಷ್ಟೂ ಇನ್ನೂ ಹೆಚ್ಚಾಗುತ್ತಿತ್ತು. ಕಣ್ಣುಗಳಲ್ಲಿ ಆತ್ಮೀಯ ಭಾವ. ಉದ್ದನೆಯ ಉಗುರು. ಹಚ್ಚಿಕೊಂಡ ನೀಲಿ ಬಣ್ಣ ಕೂಡ ಫೋಟೋದಲ್ಲೂ ಗೊತ್ತಾಗುತ್ತಿತ್ತು. ಹೊಂಬಣ್ಣದ ಕೂದಲು. ಗಂಡಸರ ತರಹ ಕ್ರಾಪ್‌ ಮಾಡಿಸಿಕೊಂಡಿದ್ದಳು. ಮುಖ್ಯವಾಗಿ ರಾಮ್‌ಸಿಂಗ್‌ಗಿಂತ ತುಂಬಾ ಚಿಕ್ಕವಳು. ಮಾಧ್ಯಮದಲ್ಲಿ ರಾಮ್‌ಸಿಂಗ್‌-ಕ್ಯಾಥರೀನ್‌ ವಯಸ್ಸಿನ ಅಂತರವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ದಪ್ಪ ಅಕ್ಷರಗಳಲ್ಲಿ ಪ್ರಕಟಿಸಿದ್ದರು. ಕೆಲವು ಪತ್ರಿಕೆಗಳು ಈ ಅಂಶವನ್ನು ಪ್ರಸ್ತಾಪಿಸುವಾಗ ಆಶ್ಚರ್ಯ ಸೂಚಕ ಚಿಹ್ನೆಯನ್ನು ಕೂಡ ವಾಕ್ಯಗಳ ಕೊನೆಯಲ್ಲಿ ಸೂಚಿಸಿದ್ದವು. ರಾಮ್‌ಸಿಂಗ್‌ ಸರ್ಕಾರಿ ಸೇವೆಗೆ ಸೇರುವ ಮುನ್ನ ರಜಪೂತರೊಳಗೇ ಒಂದು ಮದುವೆ ಆಗಿತ್ತೆಂದೂ ಅದು ಸರಿಗೂಡದೆ ವಿಚ್ಛೇದನದಲ್ಲಿ ಕೊನೆಗೊಂಡು ಸಿಂಗ್‌ರ ಮೊದಲ ಪತ್ನಿ ಈಗ ಸ್ಕೂಲಿನಲ್ಲಿ ಹೆಡ್‌ ಮೇಡಂ ಆಗಿರುವುದನ್ನು ತನಿಖಾ ವರದಿಗಾರ ವಿಘ್ನ ಸಂತೋಷದಿಂದ ನಮೂದಿಸಿದ್ದ.ಕ್ಯಾಥರೀನ್‌ ಏನು ರಾಮ್‌ಸಿಂಗ್‌ ತರಹ ಅಮೆರಿಕ ಸರ್ಕಾರದ ಬೇಹುಗಾರಿಕಾ ಇಲಾಖೆಯವಳಲ್ಲ. ವಿದೇಶಾಂಗ ಸೇವಾ ಇಲಾಖೆಯಲ್ಲಿ ಅಧಿಕಾರಿಯಲ್ಲ. ಸಂಪರ್ಕದ ಏಜೆಂಟ್‌ ಕೂಡ ಆಗಿರಲಿಲ್ಲ. ಪತ್ರಕರ್ತೆ. ವೃತ್ತಿಯ ಭಾಗವಾಗಿ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಯ ಸ್ವಾರಸ್ಯಗಳನ್ನು, ಸೂಕ್ಷ್ಮ ಹಿನ್ನೆಲೆಯನ್ನು ಅವರ ಸರ್ಕಾರದ ಜೊತೆ ಹಂಚಿಕೊಂಡಿರಬಹುದು. ಸಿರಿಯಾ ಹಾಗೂ ಫಾಕ್‌ಲ್ಯಾಂಡ್‌ ನಡುವಿನ ಬಿಕ್ಕಟ್ಟಿನ ಸಮಯದಲ್ಲಿ ಆಕೆಯ ವರದಿ-ಸಮೀಕ್ಷೆಗಳು ಜಗತ್‌ಪ್ರಸಿದ್ಧವಾಗಿದ್ದವು. ಆಕೆಗೇನು ಕೆಲಸ ಹೋಗಲಿಲ್ಲ. ಭಾರತ ಸರ್ಕಾರ ತನಿಖೆ ಮಾಡಿ ರಾಮ್‌ಸಿಂಗ್‌ರನ್ನು ದೇಶಭ್ರಷ್ಟರೆಂದು ಘೋಷಿಸಿದ ಮೇಲೆ ಮುಂದಿನ ಹಂತವಾಗಿ ಅಮೆರಿಕ ಸರ್ಕಾರ ರಾಜಾಶ್ರಯ ಕೊಟ್ಟಿತು. ನಂತರ ಪೌರತ್ವವನ್ನು ಕೂಡ ಬೇಗ ನೀಡಿತು. ಇದೆಲ್ಲ ಎಷ್ಟು ಬೇಗ ಬೇಗ ನಡೆದುಹೋಯಿತೆಂದರೆ, ರಾಮ್‌ಸಿಂಗ್‌ ಖಂಡಿತವಾಗಿ ಅಮೆರಿಕ ಸರ್ಕಾರಕ್ಕೆ ನೆರವು ನೀಡಿದ್ದಾರೆ, ಹಾಗಾಗಿಯೇ ಮೆಹರ್‌ಬಾನಿ ಎಂದು ಯಾರಿಗಾದರೂ ಅನುಮಾನ ಮೂಡುವಷ್ಟು. ಇರಲಿ, ರಾಜಾಶ್ರಯ ನೀಡಿದ ಮೇಲೆ ಸಿಂಗ್‌ ಅಮೆರಿಕದಲ್ಲೇ ನೆಲಸುವುದು ಅನಿವಾರ್ಯವಾಯಿತು. ಇದೆಲ್ಲ ಆದ ಮೇಲೆ, ಕ್ಯಾಥೆರೀನ್‌ರನ್ನು ಅಧಿಕೃತವಾಗಿ ಮದುವೆ ಮಾಡಿಕೊಂಡು ನೋಂದಾಯಿಸಿಕೊಂಡರು. ಆದರೆ ಇದಕ್ಕೆ ಮುಂಚೆ ಕ್ಯಾಥರೀನ್‌ ಇಷ್ಟಪಟ್ಟಂತೆ ಕರಾಚಿಯ ಲಾರೆನ್ಸ್‌ ಸ್ಕೂಲಿನ ಬೀದಿಯ ಕೊನೆಯಲ್ಲಿರುವ ಕೋಟೇಶ್ವರ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಕೂಡ ಮದುವೆ ಆಗಿತ್ತು. ಮುಂದಿನ ದಿನಗಳಲ್ಲಿ ಸಿಂಗ್‌ ಹಲವಾರು ವಿಶ್ವವಿದ್ಯಾಲಯಗಳಲ್ಲಿ, ಯುದ್ಧ, ಅಧಿಕಾರ ರಾಜಕೀಯ, ಮಿತಿಮೀರಿದ ದೇಶಪ್ರೇಮದ ನಿರರ್ಥಕತೆ, ರಾಜತಂತ್ರ, ಅಮೆರಿಕ ಮೂರನೇ ಜಗತ್ತಿನ ದೇಶಗಳನ್ನು ಕಾಣುವ ರೀತಿ, ಇದೆಲ್ಲದರ ಬಗ್ಗೆ ಭಾಷಣ ಮಾಡುತ್ತಾ, ಲೇಖನ-ಪುಸ್ತಕಗಳನ್ನು ಬರೆಯುತ್ತಾ, ಪ್ರವಾಸ ಮಾಡುತ್ತಾ ಜೀವನ ಕಳೆದರು. ಜೊತೆಗೆ ಅವರ ಮತ್ತು ಕ್ಯಾಥರೀನ್‌ ಮೇಲೆ ಬಂದ ಆಪಾದನೆ, ಪರಿಚಯ ಪ್ರೇಮವಾದ ರೀತಿಯನ್ನು ಕೂಡ ಬರೆದರು. ಪಾರ್ಕ್‌ ಗ್ರಂಥಾಲಯದಲ್ಲಿ ಪಾರ್ಕಿಗೆ ಬರುವವರು ಓದಿದ್ದು, ಬರೆದದ್ದು, ಅವರ ಸ್ನೇಹಿತರ ಪುಸ್ತಕಗಳು, ಹಸ್ತಪ್ರತಿ, ದಿನಚರಿ ಎಲ್ಲವನ್ನೂ ಪ್ರದರ್ಶನಕ್ಕೆ, ಓದಿಗೆ ಇಡಬಹುದಿತ್ತು. ನಾಗರಿಕರು ಇಷ್ಟಪಟ್ಟರೆ, ಪುಸ್ತಕಗಳ ಲೇಖಕರು, ಉದ್ಯಾನವನದ ಸುತ್ತಮುತ್ತ ವಾಸವಾಗಿದ್ದರೆ, ಭೇಟಿ ಮಾಡಿಸುವ ವ್ಯವಸ್ಥೆ ಕೂಡ ಇತ್ತು. ನನ್ನಂತೆ ಮಕ್ಕಳನ್ನು ನೋಡಲು ಅಮೆರಿಕಕ್ಕೆ ಬಂದಿದ್ದ ವಿನಾಯಕ್‌, ವಿಜಯಕುಮಾರರ ಜೊತೆ ಸೇರಿ ನಾನು ಸಿಂಗ್‌ರವರ ಬರಹಗಳನ್ನೆಲ್ಲ ಓದಿ ಟಿಪ್ಪಣಿ ಮಾಡಿಕೊಂಡು, ಭೇಟಿ ವಿನಂತಿ ಪತ್ರ ಬರೆದು ಪಾರ್ಕಿನ ಸಮನ್ವಯ ಸಮಿತಿಯವರಿಗೆ ಕೊಟ್ಟೆ. ಸಿಂಗ್‌ ನಮ್ಮನ್ನು ಭೇಟಿ ಮಾಡಲು ನಿರಾಕರಿಸಿದರು. ನಯವಾದ ಮಾತುಗಳಲ್ಲಿ. ಆದರೆ ಒಂದು ಆತ್ಮೀಯ ಪತ್ರ ಕೂಡ ಬರೆದರು.

ಪ್ರಿಯ ಭಾರತೀಯ ಬಂಧುಗಳೇ :

ನಮ್ಮ ಬರವಣಿಗೆಯನ್ನು ಓದಿ ನಮ್ಮ ಬಗ್ಗೆ ತಿಳಿದುಕೊಂಡು ನಮ್ಮನ್ನು ಭೇಟಿ ಮಾಡುವ ಕುತೂಹಲವನ್ನು ತೋರಿದ್ದೀರಿ. ಇದಕ್ಕಾಗಿ ವಂದನೆಗಳು.

ನಾವು ಬರೆದಾಯಿತು, ಇನ್ನೊಬ್ಬರು ಓದಬೇಕು ಎಂದು ಮಾತ್ರವೇ ನಾವು ಬರೆಯಲಿಲ್ಲ. ಬರೆದವರೇ ಬರವಣಿಗೆಯ ಬಗ್ಗೆ ಸಾರ್ವಜನಿಕರಿಗೆ ವಿವರಿಸಲು ಹೋಗಬಾರದು. ಹಾಗೆ ನಾವು ಇನ್ನೊಬ್ಬರಿಗೆ ವಿವರಿಸಬೇಕಾದಷ್ಟು ಸಂಕೀರ್ಣತೆ, ಮಹತ್ವ ಎರಡೂ ನಮ್ಮ ಬದುಕಿನಲ್ಲೂ ಇಲ್ಲ, ಬರವಣಿಗೆಯಲ್ಲೂ ಇಲ್ಲ.

ಒಂದೇ ಬರವಣಿಗೆ ಬರೆದವರಿಗೂ ಸೇರಿದಂತೆ ಸಕಲರಿಗೂ ಬೇರೆ ಬೇರೆಯಾಗಿ ಕಾಣುತ್ತದೆ. ನಮ್ಮ ಬರವಣಿಗೆ ಹೀಗೇ ಕಾಣುತ್ತಿರಬೇಕು ಎಂದು ನಮ್ಮ ಆಸೆ.

ನೀವು ಓದಿದಿರಿ, ಸಂತೋಷ. ಏನಾದರೂ ಮುಖ್ಯವೆನಿಸಿದರೆ, ಬೆಲೆಬಾಳುವಂತದ್ದು ಇದೆ ಅನಿಸಿದರೆ, ನಿಮ್ಮ ಸ್ನೇಹಿತರೊಡನೆ ಇದರ ಬಗ್ಗೆ ಮಾತನಾಡಿ. ಅಷ್ಟೇ ಸಾಕೆನಿಸುತ್ತದೆ.

ನಿಮ್ಮವರು

ರಾಮ್‌ಸಿಂಗ್‌

ಕ್ಯಾಥರೀನ್‌

*****

ನನಗೆ, ಗೆಳೆಯರಿಗೆ ಪೆಚ್ಚಾದದ್ದು ನಿಜ. ಆದರೆ ರಾಮ್‌ಸಿಂಗ್‌ ವೈವಾಹಿಕ ಜೀವನದ ಬಗ್ಗೆ ಮಾತ್ರ ಬರೆದುಕೊಂಡಿರುವುದಲ್ಲ, ದೇಶದ, ಸಮಾಜದ ಹಿತದೃಷ್ಟಿಯಿಂದಲೂ ಮುಖ್ಯವಾದ ಮಾತುಗಳನ್ನು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳು, ರಾಜತಾಂತ್ರಿಕರು, ಚಿಂತಕರು, ಅಂಕಣಕಾರರು ಈ ರೀತಿಯ ಮಾತುಗಳನ್ನು ಹೇಳುವುದಿಲ್ಲ. ನನಗೆ ವಿನಾಯಕ್‌-ವಿಜಯಕುಮಾರರಿಗೆ ಮುಖ್ಯವೆನಿಸಿದ ಭಾಗಗಳನ್ನು ಓದುಗರಾದ ನೀವೂ ಕೂಡ ಗಮನಿಸಬಹುದೆಂದು ತೋರುತ್ತದೆ.

*****

ಸರ್ಕಾರದ, ಅಧಿಕಾರದ ಬಹು ಭಾಗದ ಕೆಲಸವೆಲ್ಲ ಖoಟe Pಟಚಿಥಿ ಮಾದರಿಯದು. ನಿಮಗೊಂದು ಪಾತ್ರ ಇರುತ್ತದೆ. ಅದನ್ನು ಆಕರ್ಷಣೀಯವಾಗಿ ನಿರ್ವಹಿಸಬೇಕು ಅಷ್ಟೇ. ಆದರೂ ನನಗೆ ಮೊದಮೊದಲು ಅದರ ಬಗ್ಗೆ ತುಂಬಾ ಆಕರ್ಷಣೆಯಿದ್ದುದು ನಿಜ. ನಮ್ಮ ಮನೆತನದ ಬಂಧುಗಳೇ ಆದ ರಾಮೇಶ್ವರ್‌ ಠಾಕೂರ್‌ ವಿದೇಶಾಂಗ ಇಲಾಖೆಯ ರಾಜ್ಯ ಮಂತ್ರಿಗಳಾಗಿದ್ದಾಗ ನನ್ನನ್ನು ಈ ಜವಾಬ್ದಾರಿಗೆ ನೇಮಿಸಲು ನೆರವಾದರು. ಬಂಧುಗಳು, ಸಮಾಜದವರೆಲ್ಲ ಬೇಡವೆಂದರು. ರಾಜತ್ವ ಹೋಗಿರಬಹುದು, ರಾಜಧನ ರದ್ದಾಗಿರಬಹುದು, ಆದರೆ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಇದೆ, ವ್ಯವಹಾರವಿದೆ, ಹೋಟೆಲುಗಳಿವೆ, ಕೈಗಾರಿಕೆಗಳಿವೆ, ಕೋಟೆ ಒಳಗೆ ದೇವಾಲಯಗಳಿವೆ. ಅದನ್ನೇ ನಾವು ರಾಜರ ತರಹ ನಿರ್ವಹಿಸಿದರೆ ಸಾಕು. ಸರ್ಕಾರಿ ಕೆಲಸ ಅಂದರೆ ಎಷ್ಟೇ ದೊಡ್ಡ ಸ್ಥಾನವಾದರೂ ಕೊನೆಗೂ ತಾಪೇದಾರಿಯೇ, ಗುಮಾಸ್ತಗಿರಿಯೇ!

ಆದರೂ ಒಂದು ದೊಡ್ಡ ದೇಶವನ್ನು ಪ್ರತಿನಿಧಿಸುವುದು, ಗುಟ್ಟಾಗಿ ಕೆಲಸ ಮಾಡುವುದು, ನಾಯಕರ ಕಣ್ಣಳತೆ, ಕೂಗಳತೆಯಲ್ಲೇ ಇರುವುದು, ಇದರಿಂದೆಲ್ಲ ನಾವೇ ಸರ್ಕಾರ ಎಂಬ ಭ್ರಮೆ ಬಂದೇ ಬರುತ್ತೆ. ನನಗೂ ಹೀಗೇ ಆಯಿತು.

ಬರ‍್ತಾ ಬರ‍್ತಾ, ಇದೆಲ್ಲ ಯಾಂತ್ರಿಕವಾದದ್ದು, ನಮ್ಮ ವ್ಯಕ್ತಿತ್ವವನ್ನು ಎಂದೂ, ಎಲ್ಲೂ ಪ್ರಕಟಿಸದ ಸ್ಥಿತಿ, ವೇಷಾಂತರದಲ್ಲಿರಬೇಕು, ನಿಜವಾದ ವೇಷವೂ ಯಾರಿಗೂ ಗೊತ್ತಾಗುವಂತಿಲ್ಲ, ವೇಷಾಂತರದ ವೇಷವೂ ಗೊತ್ತಾಗುವಂತಿಲ್ಲ, ಯಾರನ್ನೂ ನಂಬುವ ಹಾಗಿಲ್ಲ, ಯಾರೂ ನಮ್ಮನ್ನು ನಂಬುವುದಿಲ್ಲ, ನಾವು ಯಾವ ಒಳಸುಳಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ, ಯಾರು ಸಿಕ್ಕಿ ಹಾಕಿಸಿದ್ದಾರೆ, ಯಾವುದೂ ಗೊತ್ತಾಗುವುದಿಲ್ಲ ಎಂಬ ಅರಿವಾಯಿತು.

ನಾವು ಸಂಗ್ರಹಿಸುವ ಮಾಹಿತಿ, ನೀಡುವ ಸಲಹೆಗಳು, ಎಷ್ಟೇ ಯುಕ್ತವಾದರೂ ಎಲ್ಲ ಸಂದರ್ಭದಲ್ಲೂ ಅದನ್ನು ಸರ್ಕಾರ ಒಪ್ಪುವುದಿಲ್ಲ. ಹಾಗೆಂದು ತಿರಸ್ಕರಿಸುತ್ತಲೂ ಇರಲಿಲ್ಲ. ಎಲ್ಲವೂ ನೆನೆಗುದಿಗೇ, ಯಾವಾಗಲೂ ನೆನೆಗುದಿಗೇ. ಈ ನೆನೆಗುದಿಯಿಂದಲೇ ಕ್ಷಣ ಕ್ಷಣವೂ ಹಿಂಸೆ.

(ಖ್ಯಾತ ಸಣ್ಣಕತೆಗಾರ ಕೆ. ಸತ್ಯನಾರಾಯಣ ಅವರ ‘ಮನುಷ್ಯರು ಬದಲಾಗುವರೇ?’ ಪುಸ್ತಕ ಸದ್ಯದಲ್ಲೇ ಓದುಗರ ಕೈ ಸೇರಲಿದೆ.)

ಪಾಕಿಸ್ಥಾನ, ಇರಾನ್‌ನಲ್ಲಿದ್ದಾಗ ಪರಿಚಯವಾದ ವಿದೇಶಾಂಗ ಪತ್ರಕರ್ತೆಯಾದ ಕ್ಯಾಥರೀನ್‌ಗೂ ಇದೇ ವಿಷಾದ, ಇದೇ ನಿರ್ವಿಣ್ಣತೆ. ಓದುತ್ತಿದ್ದಾಗ ಆಕೆ ಒಳ್ಳೆಯ ಃಚಿsಞeಣ ಃಚಿಟಟ ಪಟು. ಎರಡು ವರ್ಷ ನ್ಯೂಯಾರ್ಕ್‌ ವಾರ್ಸಿಟಿ ಟೀಮ್‌ಗೆ ಕ್ಯಾಪ್ಟನ್‌ ಆಗಿದ್ದಳಂತೆ. ಇಷ್ಟು ವರ್ಷವಾದ ಮೇಲೂ ಈಗಲೂ ಅವಳ ದೇಹ ಯಾವಾಗಲೂ ಪುಟಿಯುತ್ತಿರುವಂತೆ ಕಾಣುತ್ತದೆ. ಪ್ರಪಂಚದ ಹದಿನಾರು ಮುಖ್ಯ ನಗರಗಳಿಂದ ಪ್ರಕಟವಾಗುವ ಪತ್ರಿಕೆಯ ವಿದೇಶಿ ಬಾತ್ಮಿದಾರೆ. ಆದರೇನು, ಅವಳೇ ಯಾವಾಗಲೂ ಪ್ರಲಾಪಿಸುತ್ತಿದ್ದಳಲ್ಲ.

ಸಮುದ್ರದ ಅಲೆಗಳನ್ನು ನೋಡುತ್ತಿದ್ದರೆ, ನಮ್ಮ ಚರ್ಮದ ನುಣುಪು, ಬೆಳೆಯುತ್ತಿರುವ ಉಗುರು, ನಾಯಿಗಳ ಆಟಗಳನ್ನು ಗಮನಿಸುತ್ತಿದ್ದರೆ, ಮರದ ತುದಿಯಲ್ಲಿರುವ ಎಲೆಗಳ ಸರಸರ ಶಬ್ದ ಕೇಳಿಸಿಕೊಳ್ಳುತ್ತಿದ್ದರೆ, ಒಂದು ದಿನ ವಿಪರೀತ ಹಸಿವಾದಾಗ ಗಬಗಬನೆ ತಿಂದರೆ, ಸಿಗುವ ಸುಖವನ್ನು ತಿಳಿದುಕೊಂಡರೆ ಗೊತ್ತಾಗುತ್ತೆ, ನಾವು ಮಾಡುತ್ತಿರುವ ಕೆಲಸವಾಗಲಿ, ಬದುಕಾಗಲಿ, ಯಾವ ರೀತಿಯಲ್ಲೂ ನಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದಲ್ಲ ಎಂದು. ನಮ್ಮ ಉಸಿರಾಟಕ್ಕೂ ಅದಕ್ಕೂ ಸಂಬಂಧವಿರುವುದಿಲ್ಲ. ನಾವು ನೀಡುವ ಮಾಹಿತಿ, ನೋಟಗಳು ಸರ್ಕಾರಕ್ಕೆ ಬೇಕಾಗಿರುವುದಿಲ್ಲ. ಅಬ್ಬಬ್ಬ ಅಂದರೆ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ನೆರವಾಗಬಹುದು. ಯಾವುದೂ ಹೊರಗಡೆಯಿಂದ ಕಾಣುವಷ್ಟು ಆಕರ್ಷಕವಾಗಿರುವುದಿಲ್ಲ, ಮಹತ್ವದ್ದಾಗಿರುವುದಿಲ್ಲ.

ಇಂತಹ ಕ್ಯಾಥರೀನ್‌ ಪರಿಚಯವಾದಾಗ, ಸಮೀಪವಾದಾಗ ಇಬ್ಬರಿಗೂ ಗೊತ್ತಾದದ್ದು ನಾವು ಸುಖವಾಗಿಲ್ಲವೆಂದು. ಇನ್ನೊಬ್ಬರಿಂದ ಸುಖ ಪಡೆದಿಲ್ಲ, ಇನ್ನೊಬ್ಬರಿಗೆ ಸುಖ ಕೊಟ್ಟಿಲ್ಲ. ನಮಗೆ ನಾವು ಕೊಡಬಹುದಾದ ಸುಖ, ಸಂತೋಷವನ್ನು ಕೂಡ ಕೊಟ್ಟುಕೊಂಡಿಲ್ಲ. ನಮ್ಮೊಳಗೆ ಎಷ್ಟೊಂದು ರಾಗಗಳ, ಎಂತಹ ಆಳವಾದ, ಆಕ್ರಂದನವಿದೆ. ಇನ್ನೂ ಆಳದಿಂದ ಮತ್ತಷ್ಟು ಆಳದಿಂದ ಚಿಮ್ಮುತ್ತಿದ್ದ ಸುಖದ ಬುಗ್ಗೆ, ಬಯಕೆಯ ಜೊತೆಗೇ ಸಾರ್ಥಕ ಭಾವ. ಕೂಡುವುದು ಮುಗಿದ ಮೇಲೂ ಒಟ್ಟಿಗೇ ಇರಬೇಕೆಂಬ ಹಂಬಲ, ದಣಿವಿಲ್ಲದ ತೀವ್ರವಾದ ಹಂಬಲ. ಸದಾ ಜಾಗೃತವಾಗುತ್ತಿದ್ದ ಪರಸ್ಪರ ಸಮರ್ಪಣಾ ಭಾವದ ಹಸಿವು.

ಕರಾಚಿ ಬಳಿಯ ಮದ್ರಸಾವೊಂದರಲ್ಲಿ ನೂರಾರು ಮಕ್ಕಳನ್ನು ಆತಂಕವಾದಿಗಳು ಒಂದೇ ಒಂದು ಬಾಂಬ್‌ ಸ್ಫೋಟದಿಂದ ಹಾಡುಹಗಲೇ ಕೊಲೆ ಮಾಡಿದಾಗ, ಸರ್ಕಾರ ಅದಕ್ಕೆ ತುಂಬಾ ಪ್ರಚಾರ ಕೊಡಬಾರದೆಂದು ರಾಜತಾಂತ್ರಿಕವಾಗಿ ಕೋರಿಕೊಂಡಾಗ, ನನ್ನ ಮತ್ತು ಕ್ಯಾಥರೀನ್‌ ಇಬ್ಬರ ದೇಶಗಳ ಸರ್ಕಾರಗಳೂ ಒಪ್ಪಿಕೊಂಡವು. ಬೇರೆ ಬೇರೆ ದೇಶಗಳಿಂದ ಮಕ್ಕಳ ಪೋಷಕರಿಗೆ ಬರುವ ನೆರವು ಕೂಡ ನಿಂತುಹೋಯಿತು. ಬಲೂಚಿಸ್ಥಾನದ ಕಾಡುಗುಡ್ಡಗಳಲ್ಲಿ ನಮ್ಮ ಸರ್ಕಾರ ಕೊಟ್ಟ ಕುಮ್ಮಕ್ಕಿನಿಂದ ನೂರಾರು ಕುಟುಂಬಗಳು ದಂಗೆಯೆದ್ದವು. ನಮ್ಮ ಕುಮ್ಮಕ್ಕನ್ನೇ ನಿಜವಾದ ಪ್ರೀತಿಯೆಂದು ನಂಬಿದ್ದವು. ದೇಶಗಳ ನಡುವೆ ಉತ್ತಮ ಸಂಬಂಧವಿರಬೇಕೆಂದು ಹೊಸದಾಗಿ ಅಧಿಕಾರಕ್ಕೆ ಬಂದ ನಾಯಕರು ಬಯಸಿದಾಗ, ಇಷ್ಟೂ ಕುಟುಂಬಗಳೂ ಬೀದಿ ಪಾಲಾದವು.

ಫೋಟೋ ಕೃಪೆ : google

ಯುದ್ಧದ, ದೇಶಪ್ರೇಮದ, ಸರ್ಕಾರದ ನಿರರ್ಥಕತೆಯನ್ನು ಜನರಿಗೆ ಮತ್ತೆ ಮತ್ತೆ ಹೇಳುತ್ತಾ ಬದುಕನ್ನು ಕಳೆಯಬೇಕು. ಜೊತೆಗೇ ನಮ್ಮ ವ್ಯಕ್ತಿತ್ವ, ಸುಖ-ಸಂತೋಷಗಳನ್ನು ಹುಡುಕಿಕೊಳ್ಳಬೇಕು ಎಂಬುದು ಇಬ್ಬರೂ ಚರ್ಚಿಸದೇ ಮಾಡಿಕೊಂಡ ನಿರ್ಧಾರವಾಗಿತ್ತು.

ಮಕ್ಕಳನ್ನು ಪಡೆಯುವ ಚೈತನ್ಯವೇ ಈಗ ನಮ್ಮ ದೇಹದಲ್ಲಿ ಇಲ್ಲ. ಇದೂ ಕೂಡ ನಾವು ಮದುವೆ ಆಗಲು ಒಂದು ಪ್ರೇರಣೆ. ನಾವು ಬದುಕಿದ ರೀತಿಯ ನಿರರ್ಥಕತೆಯ ಬಗ್ಗೆ ಬರೆಯುವುದು, ಮಾತನಾಡುವುದು, ಪರಸ್ಪರ ಪ್ರೀತಿಸಿಕೊಂಡು ಹಾಯಾಗಿದ್ದುಬಿಡುವುದು.

ನಾನು ದೇಶಭ್ರಷ್ಟನೆಂದು ಸರ್ಕಾರ ನಿರ್ಧರಿಸಿದಾಗ, ನನ್ನ ಭಾರತೀಯ ಪೌರತ್ವ ಹೊರಟುಹೋದಾಗ, ಕ್ಯಾಥರೀನ್‌ ಪಾಪಪ್ರಜ್ಞೆಯಿಂದ ನರಳಿದಳು. ಈಗಲೂ ಒಮ್ಮೊಮ್ಮೆ ನರಳುತ್ತಾಳೆ. ಆದರೆ ನಾನು ಅವಳಿಂದ ದೇಶಪ್ರೇಮ ಮತ್ತು ಒಂದು ದೇಶದ ಪೌರತ್ವ ಕೊಡುವುದಕ್ಕಿಂತ ಹೆಚ್ಚಿನ ಸುಖ, ಸಂತೋಷ, ಸಾರ್ಥಕತೆಯನ್ನು ಪಡೆದಿದ್ದೇನೆ, ಪಡೆಯುತ್ತಲೇ ಇದ್ದೇನೆ, ಹೊರ ಜಗತ್ತಿಗೆ ಅರ್ಥವಾಗದ ರೀತಿಯಲ್ಲಿ, ಪದಗಳಲ್ಲಿ ವ್ಯಕ್ತಪಡಿಸಲಾಗದ ರೀತಿಯಲ್ಲಿ.

*****

ಈಚಿನ ದಿನಗಳಲ್ಲಿ ರಾಮ್‌ಸಿಂಗ್‌-ಕ್ಯಾಥರೀನ್‌ ಬದುಕು, ಕತೆ ಹೆಚ್ಚು ಪ್ರಚಾರಕ್ಕೆ ಬಂದಿದೆ. ಭಾರತೀಯರಿರಬಹುದು, ಅಮೆರಿಕನ್ನರೇ ಇರಬಹುದು, ಬಹುಪಾಲು ಜನ ಇದನ್ನೆಲ್ಲ ಹಸಿ ಪ್ರೇಮದ ಕಥೆಯೆಂದು, ವಿಷಯ ಲಂಪಟರ ಜೀವನವೆಂದೂ ತಿಳಿಯುತ್ತಾರೆ.

ಈ ಜೋಡಿಯಲ್ಲಿ ಒಂದು ರೊಮ್ಯಾಂಟಿಕ್‌ ಆಕರ್ಷಣೆಯಿದೆ ಎಂಬುದನ್ನು ನಾನೂ ಪೂರ್ತಿಯಾಗಿ ಅಲ್ಲಗೆಳೆಯುವುದಿಲ್ಲ. ಆದರೆ ಸರ್ಕಾರಗಳು ಬದಲಾದಾಗ, ಪ್ರತಿದಿನವೂ ಅಂತರ್‌ರಾಷ್ಟ್ರೀಯ ಸಮ್ಮೇಳನಗಳು ಪ್ರಾರಂಭವಾಗುವಾಗ, ಹೊಸ ಹೊಸ ವಿದೇಶಾಂಗ ಸಚಿವರು ಅಧಿಕಾರ ವಹಿಸಿಕೊಂಡಾಗ, ದಿನದ ಕೊನೆಯಲ್ಲಿ ಎಲ್ಲವೂ ಭಣ ಭಣ ಎನಿಸುವಾಗ, ಮತ್ತೆ ಜೀವನದಲ್ಲಿ ನನ್ನ ಬಗ್ಗೆ ನನ್ನಲ್ಲೇ ಭರವಸೆ ತುಂಬಿಕೊಳ್ಳಲು ಕೂಡ ಈ ಕತೆ ಪ್ರೇರಣೆಯಾಗಿಯೂ, ಮಾನದಂಡವಾಗಿಯೂ ನನ್ನ ಮಟ್ಟಿಗೆ ಕಾಢುತ್ತಲೇ ಇರುತ್ತದೆ.

ನಿಮಗೆ ….


  • ಕೆ. ಸತ್ಯನಾರಾಯಣ : (ಕಿರುಪರಿಚಯ : ಸಣ್ಣಕಥೆ, ಕಿರುಗತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರಹ, ವಿಮರ್ಶೆ, ಪ್ರವಾಸ ಕಥನ – ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಹಲವಾರು ಕೃತಿಗಳ ಪ್ರಕಟಣೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ (೧೯೮೮, ೧೯೯೨, ೨೦೧೨) ಪ್ರಬಂಧ, ಕಾದಂಬರಿ ಹಾಗೂ ಸಣ್ಣಕಥೆಗಳಿಗೆ ಪುರಸ್ಕಾರ; ಮಾಸ್ತಿ ಕಥಾ ಪುರಸ್ಕಾರ (ನಕ್ಸಲ್‌ ವರಸೆ ೨೦೧೦) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ (೨೦೧೪); ಆರ್ಯಭಟ ಪ್ರಶಸ್ತಿ (ಗೌರಿ ಕಾದಂಬರಿಗೆ); ಒಟ್ಟು ಸಾಹಿತ್ಯ ಸಾಧನೆಗೆ ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಪ್ರಶಸ್ತಿ (೨೦೧೨), ಬೆಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್‌ (೨೦೧೩); ರಾ.ಗೌ. ಪ್ರಶಸ್ತಿ (೨೦೧೪); ಬಿ.ಚ್‌. ಶ್ರೀಧರ ಪ್ರಶಸ್ತಿ (೨೦೧೬); ವಿಶ್ವಚೇತನ ಪ್ರಶಸ್ತಿ (೨೦೧೮); ಸೂರ್ಯನಾರಾಯಣ ಚಡಗ ಪ್ರಶಸ್ತಿ (೨೦೧೮ – ಸಾವಿನ ದಶಾವತಾರ ಕಾದಂಬರಿಗೆ); ಭಾರತೀಸುತ ದತ್ತಿ ನಿಧಿ ಪ್ರಶಸ್ತಿ (೨೦೧೯ ಲೈಂಗಿಕ ಜಾತಕ ಕಾದಂಬರಿಗೆ). ವಿ.ಎಂ. ಇನಾಂದಾರ್‌ ಪ್ರಶಸ್ತಿ – ಚಿನ್ನಮ್ಮನ ಲಗ್ನ ವಿಮರ್ಶಾ ಕೃತಿಗೆ (೨೦೨೦). )

 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW