ಕವಿ ರವೀಂದ್ರ ಬೆಂಗಳೂರು ಶ್ರೀನಿವಾಸ್ ರಾವ್ ಅವರ ‘ನಮ್ಮೂರಿಗೆ ಮುಂದಿನ ಬಸ್ಸು ಯಾವುದು’ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಓದಿ…ನಿಮ್ಮ ಅಭಿಪ್ರಾಯ ತಿಳಿಸಿ…
ಅವನೂರು ಬಿಟ್ಟು ಬಂದವನಲ್ಲ
ಅಪ್ಪನ ತಾತನೋ ತಾತ ತಾತನೋ
ಬಿಟ್ಟವರಂತೆ ; ಕಟ್ಟಿಕೊಂಡಿದ್ದು
ಇವ ಬಿಟ್ಟು ಬಂದೂರಿನ ಹೆಸರು
ಇವನ ಮಗ ಮಗನ ಮಗ ಹೀಗೆ
ಎಲ್ಲರೂ ಕಾಣದೂರಿನ ಕೊಂಡಿ
ಜೊತೆಗೆ ಜೋಡಿಸಿಕೊಂಡವರೇ
ಅಲ್ಲೆಲ್ಲೋ ಇದೆಯಂತೆ ನಮ್ಮೂರು
ಮನೆ ಜಮೀನು ಸಂಬಂಧಿಕರು
ಇಲ್ಲವಲ್ಲಿ ಎಂದು ಹಲುಬಿದವಳು
ಅಜ್ಜಿ ಎಳವಿನಲಿ ಕನಸಿಗೆ ಬಣ್ಣಕಟ್ಟಿ
ಊರ ನಡುವಿನ ಸೀನೀರ ಭಾವಿ
ಪಕ್ಕದಲಿ ಭವ್ಯ ನರಸಿಂಹನ ಗುಡಿ
ಹದವಾದ ಮಳೆ ಊರಾಚೆ ಗದ್ದೆ
ಕಾವೇರಿಯ ಬಯಲು ಕಣ್ಣ್ಮನಕೆ
ಆನಂದದ ಮುಗಿಲು ತಪ್ಪದ ಸೆಳೆತ
ಹೋಗೊಣವೊಮ್ಮೆ ನಮ್ಮೂರಿಗೆ
ಹೆಸರಾದಬೇರು ಭಾಗ್ಯದ ಸನಿಹ
ಗಿಜಿಬಿಜಿ ಬಜಾರನಲಿ ನರಸಿಂಹ
ಬತ್ತಿದ ಭಾವಿ ಹಚ್ಚೆಪಚ್ಚೆ ಮಚ್ಚೆ
ಇಲ್ಲದ ಕೊಚ್ಚೆ ಕದಡಿದ ನೀರು
ಕರುಳು ಬಳ್ಳಿಗಳಿಲ್ಲದ ಅನಾಥ
ಮಗ ಹೇಳಿದ
“ನಮ್ಮೂರಿಗೆ ಮುಂದಿನ ಬಸ್ಸು ಯಾವುದು”
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು.