ಎದೆಹಾಲಿನ ಸಂಗ್ರಹಣೆ ಮತ್ತು ಹಂಚಿಕೆ – ಸುದರ್ಶನ್ ಪ್ರಸಾದ್

ಕರ್ನಾಟಕ ಸರ್ಕಾರ 2022 ರಲ್ಲಿ “ಅಮೃತಧಾರೆ” ಎಂಬ ಹೆಸರಿನ ರಾಜ್ಯದ ಮೊಟ್ಟ ಮೊದಲ ‘ಬ್ರೆಸ್ಟ್ ಮಿಲ್ಕ್ ಬ್ಯಾಂಕ್’ ಅನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದು, ಅದರ ಕುರಿತು ಅನೇಕರಿಗೆ ತಿಳಿದಿಲ್ಲ ಮತ್ತು ಸಂಬಂಧ ಪಟ್ಟವರು ಈ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿಲ್ಲ.- ಸುದರ್ಶನ್ ಪ್ರಸಾದ್, ತಪ್ಪದೆ ಮುಂದೆ ಓದಿ…

ಈ ಜಗತ್ತಿನಲ್ಲಿ ಬೆಲೆ ಕಟ್ಟಲಾಗದ ವಸ್ತುಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಬರುವ ಪ್ರಮುಖ ವಸ್ತು ತಾಯಿಯ ಎದೆಹಾಲು. ಒಂದು ಮಗುವಿನ ಬೆಳವಣಿಗೆಗೆ ಇದಕ್ಕಿಂತ ಉತ್ತಮ ಆಹಾರ ಮತ್ತೊಂದಿಲ್ಲ. ಮನುಷ್ಯನ ರಕ್ತದಷ್ಟೇ ಬೆಲೆ ಬಾಳುವ ಈ ವಸ್ತುವಿಗೆ ದ್ರವ ರೂಪದ ಬೆಳ್ಳಿ ಅಂತಲೂ ಹೇಳಬಹುದು. ಆದರೆ ನಾನಾ ಕಾರಣಗಳಿಂದ ಎದೆಹಾಲು ಸಿಗದೇ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಲಕ್ಷ ಲಕ್ಷ. ಅಂತಹ ಮಕ್ಕಳಿಗೆ ಫಾರ್ಮುಲಾ ಫೀಡಿಂಗ್ ಒಂದು ದಾರಿಯಾದರೂ ಎದೆಹಾಲಿನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಮರ್ಥ್ಯ ‘ಎದೆಹಾಲಿನ ಬ್ಯಾಂಕ್’ ಗಳಿಗೆ ಇದೆ. ಆದರೆ ಅನೇಕ ಕಾರಣಗಳಿಂದ ಅವುಗಳ ನಿರ್ವಹಣೆಯೇ ಸರಿಯಾಗಿ ನಡೆಯುತ್ತಿಲ್ಲ.

ಆಧುನಿಕತೆ ಬೆಳೆದಂತೆ ಅಪೌಷ್ಟಿಕತೆ ಸಹಾ ಬೆಳೆಯುತ್ತಲೇ ಇದೆ. ಆದರೂ ಈ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸವಾಲಾಗಿ ಉಳಿದಿರುವುದು ಎದೆಹಾಲಿನ ಉತ್ಪಾದನೆ. ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗದ ವಸ್ತುಗಳ ಪಟ್ಟಿಯಲ್ಲಿ ವಿಜ್ಞಾನಿಗಳು ಇದನ್ನೂ ಸೇರಿಸಿದ್ದಾರೆ. ಹೀಗಿರುವಾಗ ಅದರ ಸಮತೋಲಿತ ಹಂಚಿಕೆಗೆ ಇರುವ ದಾರಿ ಸಂಗ್ರಹಣೆ ಮತ್ತು ವಿತರಣೆ. ಆದರೆ ಅದಕ್ಕೂ ಕೆಲವು ಸವಾಲುಗಳಿವೆ :

*ಅತಿಯಾದ ದರ
*ಸಮರ್ಪಕ ದಾನಿಗಳ ಅಲಭ್ಯತೆ
*ಸಾಗಣೆ ಮತ್ತು ಸಂರಕ್ಷಣೆಯ ಅಡೆತಡೆಗಳು
*ವೈದ್ಯಕೀಯ ಸಿಬ್ಬಂದಿಯ ನಿರಾಸಕ್ತಿ
*ಕೆಲವೊಂದು ರೋಗಗಳು
ಮುಂತಾದವು ಕಾರಣಗಳಿಂದ ಇಂದು ಎದೆಹಾಲಿನ ಸಂಗ್ರಹಣೆ ಮತ್ತು ಹಂಚಿಕೆ ಸಾಧ್ಯವಾಗುತ್ತಿಲ್ಲ.

ಫೋಟೋ ಕೃಪೆ : google

ಅನೇಕ ಖಾಸಗಿ ಸಂಸ್ಥೆಗಳು ಮುಂದೆ ಬಂದು ಈ ಕಾರ್ಯವನ್ನು ನಿರ್ವಹಿಸುತ್ತಿವೆಯಾದರೂ ಅವು ಸಹಾ ಸರಿಯಾಗಿ ಬಳಕೆಯಾಗುತ್ತಿಲ್ಲ. ಸಂಗ್ರಹಣೆಯ ತೊಡಕುಗಳು, ಕೆಲವು ಸಂಸ್ಥೆಗಳ ಹಣದ ವ್ಯಾಮೋಹ ಜನರನ್ನು ಈ ಉತ್ತಮ ಯೋಚನೆಗಳಿಂದ ದೂರ ಉಳಿಯುವಂತೆ ಮಾಡಿದೆ. ಕರ್ನಾಟಕ ಸರ್ಕಾರ 2022 ರಲ್ಲಿ “ಅಮೃತಧಾರೆ” ಎಂಬ ಹೆಸರಿನ ರಾಜ್ಯದ ಮೊಟ್ಟ ಮೊದಲ ‘ಬ್ರೆಸ್ಟ್ ಮಿಲ್ಕ್ ಬ್ಯಾಂಕ್’ ಅನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಥಾಪಿಸಿದೆಯಾದರೂ ಈ ಕುರಿತು ಅನೇಕರಿಗೆ ತಿಳಿದಿಲ್ಲ ಮತ್ತು ಸಂಬಂಧ ಪಟ್ಟವರು ಈ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿಲ್ಲ.

ಒಂದುವೇಳೆ ರಾಜ್ಯದ ಪ್ರತೀ ಪಟ್ಟಣಗಳಲ್ಲಿ ಈ ರೀತಿಯ ಬ್ಯಾಂಕ್ ಗಳು ಸ್ಥಾಪನೆಯಾದರೆ ತಕ್ಕಮಟ್ಟಿಗೆ ಸಮಸ್ಯೆ ನಿವಾರಣೆಯಾಗಲು ಸಾಧ್ಯ. ಈ ಬ್ಯಾಂಕ್ ಗೆ ಎದೆಹಾಲು ನೀಡಲು ಬಯಸುವವರು.

*ಆರೋಗ್ಯವಾಗಿರಬೇಕು.
*ಎದೆಹಾಲು ನೀಡುವ ತಾಯಿಗೆ ನಿರ್ಬಂಧವಿರುವ ಯಾವುದೇ ಔಷಧಿ ಸೇವಿಸಬಾರದು.
*ಸಾಕಷ್ಟು ಎದೆಹಾಲು ಉತ್ಪಾದಿಸುವ ಸಾಮರ್ಥ್ಯ ಹೊಂದಿರಬೇಕು.(ಮಗು ಇದ್ದಲ್ಲಿ, ಆ ಮಗುವಿಗೆ ಕೊರತೆ ಉಂಟಾಗಬಾರದು.)
*ಯಾವುದೇ ವೈರಲ್ ಇನ್ಫೆಕ್ಷನ್ ಹೊಂದಿರಬಾರದು.
*ಕ್ಯಾನ್ಸರ್ ಅಥವಾ ಯಾವುದೇ ಇತರ ಅನುವಂಶೀಯ ಖಾಯಿಲೆ ಹೊಂದಿರಬಾರದು.
*ಅಗತ್ಯವಾಗಿ ಸ್ತನಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು.
*ಹಾಲು ಹೆಚ್ಚಿಸಲು ಯಾವುದೇ ಔಷಧಿ ಅಥವಾ ಮೂಲಿಕೆಗಳನ್ನು ಸೇವಿಸಬಾರದು.
*ಎದೆಯಿಂದ ತೆಗೆದ ಹಾಲನ್ನು ತಕ್ಷಣವೇ ರೆಫ್ರಿಜರೇಟರ್ ನಲ್ಲಿ ಇರಿಸಿ 24 ರಿಂದ 48 ಗಂಟೆಗಳ ಒಳಗಾಗಿ ಮಿಲ್ಕ್ ಬ್ಯಾಂಕ್ ಗೆ ತಲುಪಿಸಬೇಕು. ಎಂಬ ಒಂದಿಷ್ಟು ಷರತ್ತುಗಳಿಗೆ ಬದ್ಧರಾಗಿದ್ದರೆ ಸಾಕು.

ಫೋಟೋ ಕೃಪೆ : google

ಆರೋಗ್ಯವಂತ ತಾಯಿಯಿಂದ ಸಂಗ್ರಹಿಸುವ ಹಾಲನ್ನು

*ತಾಯಿಯನ್ನು ಕಳೆದುಕೊಂಡ ನವಜಾತ ಶಿಶುಗಳಿಗೆ,
*ತಾಯಿ ಇದ್ದರೂ ಎದೆಹಾಲಿನ ಕೊರತೆ ಎದುರಿಸುವ ಮಕ್ಕಳಿಗೆ,
*ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ,
*ಎದೆಹಾಲಿನಿಂದ ವಂಚಿತರಾದ ಅನಾಥ ಶಿಶುಗಳಿಗೆ ನೀಡಬಹುದು.
ಬ್ಯಾಂಕ್ ಗಳಿಂದ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲು ಯಾವುದೇ ಆಸಕ್ತ ಸ್ವಯಂಸೇವಕರು ಪ್ರಯತ್ನಿಸಬಹುದು.

ಎದೆಹಾಲನ್ನು ದಾನ ಮಾಡಲು ಇಚ್ಚಿಸುವವರಿಗೆ ಸ್ತನಗಳ ಸ್ವಚ್ಚತೆ, ಪಂಪ್ ನ ಬಳಕೆ ಮತ್ತು ಹಾಲಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವುದು ಸಹಾ ಈ ಯೋಜನೆಯ ಒಂದು ಭಾಗ. ಅದಲ್ಲದೇ ದಾನಿಗಳಿಗೆ ಸೂಕ್ತ ವೈದ್ಯಕೀಯ ಸಹಾಯ, ಆರೋಗ್ಯ ಪರೀಕ್ಷೆ ಮತ್ತು ಎದುರಾಗುವ ಸವಾಲುಗಳಿಗೆ ಸೂಕ್ತ ಸಲಹೆ ಮತ್ತು ಸಮಾಧಾನ ನೀಡುವುದು ಪ್ರತಿಯೊಬ್ಬ ಆರೋಗ್ಯ ಸಿಬ್ಬಂದಿಯ ಕರ್ತವ್ಯವಾಗಿದ್ದು, ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಿದರೆ ಪ್ರಗತಿ ಹೊಂದಬಹುದು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮಕ್ಕಳ ಆರೋಗ್ಯ ಉತ್ತಮವಾಗಿರಬೇಕು. ಮಕ್ಕಳ ಆರೋಗ್ಯ ವೃದ್ಧಿಸಲು ಎದೆಹಾಲು ಅತ್ಯುತ್ತಮ ಆಹಾರ ಮತ್ತು ಔಷಧ. ಆದ್ದರಿಂದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತವಾಗುವುದು ಉತ್ತಮ. ಎದೆಹಾಲು ನೀಡುವ ಸಾಮರ್ಥ್ಯವಿದ್ದವರು ದಾನಿಗಳಾಗಿ ನೋಂದಾಯಿಸಿಕೊಂಡು ಈ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತರೆ ಇತರರು ಸಂಗ್ರಹಣೆ ಮತ್ತು ಹಂಚಿಕೆಯಲ್ಲಿ ಸಹಕರಿಸಿ ಅಗತ್ಯವಿರುವ ಮಕ್ಕಳಿಗೆ ತಲುಪಿಸುವ ಮುಖಾಂತರ ಸಹಾಯ ಮಾಡಬಹುದು. ಸರ್ಕಾರದ ಜೊತೆ ಸಾಮಾನ್ಯರೂ ಕೈಜೋಡಿಸಿದಾಗ ಸ್ವಾಸ್ಥ್ಯ ಸಮಾಜ ನಮ್ಮದಾಗುತ್ತದೆ.


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW