‘ಕೆರೆಕಟ್ಟೆಗಳು ಒಣಗಿ ಎಲ್ಲೆಂದರಲ್ಲಿ ಬಣಬಣ… ಹಸಿರೇಯಿಲ್ಲದೆ ವಸುಂಧರೆ ಬೀಸಿದ ಬಿಸಿಗಾಳಿಗೆ ಜನ ತತ್ತರ !’…ಪ್ರೊ. ಸಿದ್ದು ಸಾವಳಸಂಗ, ಲೇಖನಿಯಲ್ಲಿ ಬರಗಾಲದ ಚಿತ್ರಣವನ್ನು ತಪ್ಪದೆ ಮುಂದೆ ಓದಿ…
ಇದೆಂಥ ಘೋರ ಬರ
ಜನಮನ ಮರಮರ !
ತುತ್ತು ಅನ್ನಕ್ಕೂ ತತ್ವಾರ
ಕುಡಿವ ನೀರಿಲ್ಲದೆ ಹಾಹಾಕಾರ !
ಖಗ ಮೃಗಗಳಿಂದ ಹರಿಯಿತು ಮೂಕ ಕಣ್ಣೀರ
ದೇವ-ಮಹಾದೇವನೂ ನೀಡಲಿಲ್ಲ ವರ !
ಬದುಕುಳಿಯುವ ಮಾತು ದೂರ ದೂರ
ಎಲ್ಲೆಡೆ ಮೌನವೇ ನಮಗಾಧಾರ !
ಮನುಜನ ಜೀವಕ್ಕಿಲ್ಲ ಯಾವುದೇ ಆಸರ
ಹೀಗಾಗಿ ಎಲ್ಲೆಡೆ ತುಂಬಿದೆ ಬೇಸರ !
ನಾವು ಮಾಡಿದ ಪಾಪಕ್ಕಿಲ್ಲ ಪರಿಹಾರ
ಕೇಳಲಿಲ್ಲ ಗಿಡಮರಗಳ ಮೂಕರೋಧನ !
ಕೆರೆಕಟ್ಟೆಗಳು ಒಣಗಿ ಎಲ್ಲೆಂದರಲ್ಲಿ ಬಣಬಣ
ಹಸಿರೇಯಿಲ್ಲದೆ ವಸುಂಧರೆ ಬೀಸಿದ
ಬಿಸಿಗಾಳಿಗೆ ಜನ ತತ್ತರ !
ಸತ್ತೇ ಹೋಯಿತು ಮನುಜಕುಲ ಹೌಹಾರಿ
ತಲೆಯೆತ್ತಿ ನೋಡುತ್ತಿದ್ದಾರೆ ಜನರೆಲ್ಲ ಆಗಸ !
ಮೋಡವೇನಾದರೂ ಕಟ್ಟಿದೆಯಾ ನೇಸರನ ಪಕ್ಕ !
ಒಳ್ಳೆಯ ಕಾಲವು ಹೋಯಿತು ನಮ್ಮಿಂದ ದೂರದೂರ !
ದಿನನಿತ್ಯ ನರಕ ದರ್ಶನದ ನೋಟ ಚಿತ್ರವಿಚಿತ್ರ
ಸದ್ದಿಲ್ಲದೆ ಯಮಕಿಂಕರ ಹಾಕುತ್ತಿದ್ದಾನೆ ಮನುಜನ ಕೊರಳಿಗೆ ಹಗ್ಗ !
ನರಮನುಜನ ಜೀವನ ಆಯಿತೇ ಇಷ್ಟೊಂದು ಅಗ್ಗ !!
- ಪ್ರೊ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ
